Sunday, September 13, 2026
Sunday, September 13, 2026

ಕೆಳದಿ ನಾಡಿನ ಪ್ರೇಮ, ಪರಂಪರೆ ಮತ್ತು ಜಲಸಂಸ್ಕೃತಿಯ ಅಪೂರ್ವ ಸ್ಮಾರಕ

ಪ್ರೇಮದ ಸಂಕೇತವೆಂದರೆ ನಮಗೆ ಮೊದಲು ನೆನಪಾಗುವುದು ತಾಜ್ ಮಹಲ್. ಆದರೆ, ತಾಜ್ ಮಹಲ್‌ಗಿಂತ ಹಲವು ದಶಕಗಳ ಹಿಂದೆಯೇ ನಿರ್ಮಾಣಗೊಂಡಿರುವ ಚಂಪಕ ಸರಸಿ, ಪ್ರೇಮವನ್ನು ಜನೋಪಯೋಗಿ ಕಾರ್ಯದ ಮೂಲಕ ವ್ಯಕ್ತಪಡಿಸಿದ ವಿಶಿಷ್ಟ ಸ್ಮಾರಕವಾಗಿದೆ.

  • ಜಿ. ಆರ್. ಪಂಡಿತ್

‘ಒಂದು ದೇಶದ ನಾಗರಿಕತೆಯನ್ನು ಅರಿಯಬೇಕಾದರೆ ಅದರ ದೇವಾಲಯಗಳನ್ನು ನೋಡಿ, ಆ ಸಮಾಜದ ದೂರದೃಷ್ಟಿಯನ್ನು ಅರಿಯಬೇಕಾದರೆ ಅದರ ಜಲಾಶಯಗಳನ್ನು ನೋಡಿ.’ ಎಂಬ ಮಾತಿಗೆ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುವ ತಾಣವೆಂದರೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಮಲಂದೂರು ಗ್ರಾಮದ ‘ಚಂಪಕ ಸರಸಿ.’

ಇದು ಕೇವಲ ನೀರು ಸಂಗ್ರಹಿಸುವ ಕಲ್ಯಾಣಿಯಲ್ಲ! ಪ್ರೇಮ ಸ್ಮಾರಕ, ಜನೋಪಯೋಗಿ ಚಿಂತನೆ, ಜಲಸಂರಕ್ಷಣೆ, ವಾಸ್ತುಶಿಲ್ಪ ಮತ್ತು ಕೆಳದಿ ಸಾಮ್ರಾಜ್ಯದ ವೈಭವವನ್ನು ಒಟ್ಟಾಗಿ ಹೇಳುವ ಅಪರೂಪದ ಐತಿಹಾಸಿಕ ಸ್ಮಾರಕವಾಗಿದೆ. ಸುಮಾರು ನಾಲ್ಕೂವರೆ ಶತಮಾನಗಳಿಂದ ಕಾಲದ ಹೊಡೆತವನ್ನು ಎದುರಿಸಿಕೊಂಡು ಇಂದಿಗೂ ಹೆಮ್ಮೆಯಿಂದ ನಿಂತಿರುವ ಈ ಸರಸಿ ಕರ್ನಾಟಕದ ಜಲಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದೆ.

ಕೆಳದಿ ಸಾಮ್ರಾಜ್ಯದ ಸುವರ್ಣಯುಗ

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮಲೆನಾಡಿನಲ್ಲಿ ಉದಯಿಸಿದ ಪ್ರಮುಖ ಆಡಳಿತಗಳಲ್ಲಿ ಕೆಳದಿ ನಾಯಕರ ಸಾಮ್ರಾಜ್ಯವೂ ಒಂದು. ಕೆಳದಿ, ಇಕ್ಕೇರಿ ಮತ್ತು ನಂತರ ಬಿದನೂರು (ನಗರ) ಇವರ ರಾಜಧಾನಿಗಳಾಗಿದ್ದವು. ಈ ಅರಸರು ಕೇವಲ ಯುದ್ಧವೀರರಲ್ಲ; ದೇವಾಲಯಗಳು, ಕೋಟೆಗಳು, ಅರಮನೆಗಳು, ರಸ್ತೆಗಳು ಮತ್ತು ಜಲಾಶಯಗಳನ್ನು ನಿರ್ಮಿಸಿ ಜನೋಪಯೋಗಿ ಆಡಳಿತ ನಡೆಸಿದ ದೂರದರ್ಶಿಗಳಾಗಿದ್ದರು. ಈ ಸಾಮ್ರಾಜ್ಯದ ಪ್ರಸಿದ್ಧ ಅರಸರಲ್ಲಿ ಒಬ್ಬರಾದ ವೆಂಕಟಪ್ಪ ನಾಯಕ (ಕ್ರಿಶ 1586–1629) ತಮ್ಮ ಆಡಳಿತದಲ್ಲಿ ಕೃಷಿ, ನೀರಾವರಿ, ಧರ್ಮ ಮತ್ತು ಕಲೆಗೆ ವಿಶೇಷ ಉತ್ತೇಜನ ನೀಡಿದರು. ಅವರ ಕಾಲದಲ್ಲಿ ನಿರ್ಮಾಣವಾದ ಅನೇಕ ಜಲಾಶಯಗಳು ಇಂದಿಗೂ ಅವರ ದೂರದೃಷ್ಟಿಗೆ ಸಾಕ್ಷಿಯಾಗಿವೆ.

ಇದನ್ನು ಓದಿ : ಶ್ರವಣ ಬೆಳಗೊಳಕ್ಕೆ ಒಮ್ಮೆ ಹೋಗಿ ಬನ್ನಿ...

ಪ್ರೇಮದ ಸ್ಮಾರಕ – ಚಂಪಕ ಸರಸಿ

ಸ್ಥಳೀಯ ಇತಿಹಾಸ ಮತ್ತು ಜನಪದ ಪರಂಪರೆಯ ಪ್ರಕಾರ, ಕೆಳದಿ ರಾಜ್ಯ ವೆಂಕಟಪ್ಪ ನಾಯಕ ಬೆಸ್ತರ ಕುಲದ ಸುಂದರಿ ಚಂಪಕಾಳಿಗೆ ಮನಸೋತು ವಿವಾಹವಾದರು. ಈ ಅಂತರ್‌ಜಾತಿ ವಿವಾಹ ವಿರೋಧಿಸಿದ ಪಟ್ಟದ ರಾಣಿ ಭದ್ರಮ್ಮಾಜಿ ಅನ್ನ, ಆಹಾರ ತ್ಯಜಿಸಿ ಜೀವ ತ್ಯಾಗ ಮಾಡಿಕೊಳ್ಳುತ್ತಾಳೆ. ಚಂಪಕಾ ಅನ್ಯಾಹಾರ ಮತ್ತು ಮದ್ಯ ಸೇವನೆ ಮಾಡುತ್ತಾಳೆ ಎಂದು ಸುದ್ದಿ ಹರಡಿ ಪ್ರಜೆಗಳು, ರಾಜಾ ವೆಂಕಟಪ್ಪ ನಾಯಕರನ್ನು ಖಳನಾಯಕರಂತೆ ಭಾವಿಸಿದ್ದರಿಂದ ಮನ ನೊಂದ ಚಂಪಕ ಹಾಲಿನಲ್ಲಿ ವಜ್ರದ ಪುಡಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ನಂತರದಲ್ಲಿ ವೆಂಕಟಪ್ಪ ನಾಯಕ ಅವಳ ನೆನಪಿಗಾಗಿ ಈ ಸರಸಿ ನಿರ್ಮಾಣ ಮಾಡಿ ಅವಳ ಹೆಸರನ್ನೇ ಇಡುತ್ತಾನೆ. ಈ ಕಾರಣದಿಂದಲೇ ಈ ಜಲಾಶಯಕ್ಕೆ ‘ಚಂಪಕ ಸರಸಿ’ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.

ಪ್ರೇಮದ ಸಂಕೇತವೆಂದರೆ ನಮಗೆ ಮೊದಲು ನೆನಪಾಗುವುದು ತಾಜ್ ಮಹಲ್. ಆದರೆ, ತಾಜ್ ಮಹಲ್‌ಗಿಂತ ಹಲವು ದಶಕಗಳ ಹಿಂದೆಯೇ ನಿರ್ಮಾಣಗೊಂಡಿರುವ ಚಂಪಕ ಸರಸಿ, ಪ್ರೇಮವನ್ನು ಜನೋಪಯೋಗಿ ಕಾರ್ಯದ ಮೂಲಕ ವ್ಯಕ್ತಪಡಿಸಿದ ವಿಶಿಷ್ಟ ಸ್ಮಾರಕವಾಗಿದೆ. ಶಾಹಜಹಾನ್ ತನ್ನ ಪತ್ನಿಯ ನೆನಪಿಗಾಗಿ ಸಮಾಧಿ ಕಟ್ಟಿಸಿದರೆ, ವೆಂಕಟಪ್ಪ ನಾಯಕ ತನ್ನ ರಾಣಿಯ ಸ್ಮರಣಾರ್ಥ ಸಾವಿರಾರು ಜನರಿಗೆ ಉಪಯೋಗವಾಗುವ ಜಲಾಶಯವನ್ನು ನಿರ್ಮಿಸಿದನು. ಇದೇ ಚಂಪಕ ಸರಸಿಯ ಮಹತ್ವ.

ಜಲವಾಸ್ತುಶಿಲ್ಪದ ಅದ್ಭುತ

ಚಂಪಕ ಸರಸಿಯನ್ನು ಮೊದಲ ಬಾರಿ ನೋಡಿದಾಗ ಅದರ ವಿಶಾಲತೆ ಮತ್ತು ಸಮತೋಲನದ ವಿನ್ಯಾಸ ಗಮನ ಸೆಳೆಯುತ್ತದೆ. ಬೃಹತ್ ಕಲ್ಲಿನ ಮೆಟ್ಟಿಲುಗಳು ನಾಲ್ಕು ದಿಕ್ಕುಗಳಿಂದ ನೀರಿನತ್ತ ಇಳಿಯುತ್ತವೆ. ಪ್ರತಿಯೊಂದು ಮೆಟ್ಟಿಲು ಸಮಾನ ಪ್ರಮಾಣದಲ್ಲಿ ನಿರ್ಮಿಸಲ್ಪಟ್ಟಿದ್ದು, ನೀರಿನ ಮಟ್ಟ ಕಡಿಮೆಯಾದರೂ ಸುಲಭವಾಗಿ ನೀರು ಪಡೆಯುವಂತೆ ವಿನ್ಯಾಸಗೊಳಿಸಲಾಗಿದೆ.

Untitled design - 2026-09-11T161852.036

ಮಳೆನೀರನ್ನು ಸಂಗ್ರಹಿಸುವುದು, ಭೂಗರ್ಭ ಜಲವನ್ನು ಮರುಪೂರಣಗೊಳಿಸುವುದು ಮತ್ತು ನೀರಿನ ಸಂರಕ್ಷಣೆಯನ್ನು ಖಚಿತಪಡಿಸುವಂಥ ವೈಜ್ಞಾನಿಕ ಚಿಂತನೆ ಈ ನಿರ್ಮಾಣದಲ್ಲಿ ಅಡಕವಾಗಿದೆ. ಇದು ಆಧುನಿಕ ‘Rain Water Harvesting’ ಪರಿಕಲ್ಪನೆಯ ಶತಮಾನಗಳ ಹಿಂದಿನ ಜೀವಂತ ಉದಾಹರಣೆಯಾಗಿದೆ.

ದೇವಾಲಯ ಮತ್ತು ಮಠ

ಸರಸಿಯ ಸಮೀಪದಲ್ಲೇ ಪ್ರಾಚೀನ ಶಿವಾಲಯ ಹಾಗೂ ಮಠದ ಅವಶೇಷಗಳು ಕಂಡುಬರುತ್ತವೆ. ಹಿಂದಿನ ಕಾಲದಲ್ಲಿ ದೇವಾಲಯ, ಕಲ್ಯಾಣಿ ಮತ್ತು ಮಠಗಳು ಒಂದೇ ಸಮಗ್ರ ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. ಭಕ್ತರು ಪೂಜೆಗೆ ಮುನ್ನ ಕಲ್ಯಾಣಿಯಲ್ಲಿ ಸ್ನಾನ ಮಾಡುವುದು, ಉತ್ಸವಗಳ ಸಂದರ್ಭದಲ್ಲಿ ನೀರನ್ನು ಬಳಸುವುದು, ಯಾತ್ರಿಕರಿಗೆ ವಿಶ್ರಾಂತಿ ಸಿಗುವುದು – ಇವೆಲ್ಲವೂ ಈ ಸ್ಥಳದ ಸಾಮಾಜಿಕ ಮಹತ್ವವನ್ನು ಸಾರುತ್ತವೆ.

Untitled design - 2026-09-11T162311.889

ಪರಿಸರ ಮತ್ತು ಜೀವವೈವಿಧ್ಯ

ಇಂದು ಚಂಪಕ ಸರಸಿ ಹಸಿರು ಮರಗಳ ನಡುವೆ ಶಾಂತವಾಗಿ ನೆಲೆಗೊಂಡಿದೆ. ಮಳೆಗಾಲದಲ್ಲಿ ನೀರಿನಿಂದ ತುಂಬಿ ತುಳುಕುವ ಈ ಸರಸಿ ಕನ್ನಡಿಯಂತೆ ಆಕಾಶದ ಪ್ರತಿಬಿಂಬವನ್ನು ಹೊತ್ತುಕೊಳ್ಳುತ್ತದೆ. ಬೆಳಗಿನ ಮಂಜು, ಪಕ್ಷಿಗಳ ಕಲರವ, ಗಾಳಿಯಲ್ಲಿ ಅಲುಗಾಡುವ ಮರಗಳು, ನೀರಿನಲ್ಲಿ ಮೂಡುವ ಪ್ರತಿಬಿಂಬಗಳು ಪ್ರಕೃತಿಪ್ರಿಯರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ಜಲಸಂಸ್ಕೃತಿಯ ಪಾಠ

ಇಂದು ನೀರಿನ ಅಭಾವದ ಬಗ್ಗೆ ಚರ್ಚಿಸುತ್ತಿರುವ ನಾವು, ನಾಲ್ಕು ಶತಮಾನಗಳ ಹಿಂದೆಯೇ ನೀರನ್ನು ಹೇಗೆ ಸಂರಕ್ಷಿಸಬೇಕು ಎಂಬುದನ್ನು ನಮ್ಮ ಪೂರ್ವಜರು ಕಾರ್ಯರೂಪದಲ್ಲಿ ತೋರಿಸಿದ್ದರು.

ಚಂಪಕ ಸರಸಿಯಂಥ ಕಲ್ಯಾಣಿಗಳು:

  • ಮಳೆನೀರನ್ನು ಸಂಗ್ರಹಿಸುತ್ತಿದ್ದವು,
  • ಕೃಷಿಗೆ ಜೀವ ನೀಡುತ್ತಿದ್ದವು,
  • ಭೂಗರ್ಭ ಜಲವನ್ನು ಹೆಚ್ಚಿಸುತ್ತಿದ್ದವು,
  • ಜನರ ದೈನಂದಿನ ಬದುಕಿಗೆ ಆಸರೆಯಾಗಿದ್ದವು.

ಇಂಥ ಜಲಾಶಯಗಳು ಕೇವಲ ನಿರ್ಮಾಣಗಳಲ್ಲ, ಅವು ಪರಿಸರದ ಸಮತೋಲನದ ಜೀವನಾಡಿಗಳಾಗಿದ್ದವು.

ಸಂರಕ್ಷಣೆಯ ಹೊಸ ಅಧ್ಯಾಯ: ಯಶೋಮಾರ್ಗದ ಮಾದರಿ ಕಾರ್ಯ

ಕಾಲದ ಹೊಡೆತಕ್ಕೆ ಸಿಲುಕಿ, ನಿರ್ಲಕ್ಷ್ಯದಿಂದ ಕಳೆಗಿಡಗಳು, ಹೂಳು ಮತ್ತು ಪೊದೆಗಳಿಂದ ಆವೃತವಾಗಿದ್ದ ಚಂಪಕ ಸರಸಿಯು ತನ್ನ ಹಿಂದಿನ ವೈಭವವನ್ನು ಕಳೆದುಕೊಳ್ಳುವ ಹಂತ ತಲುಪಿತ್ತು. ಇಂಥ ಸಂದರ್ಭದಲ್ಲಿ ಸ್ಥಳೀಯರ ಸಹಭಾಗಿತ್ವದೊಂದಿಗೆ ‘ಯಶೋಮಾರ್ಗʼ ಸಂಸ್ಥೆಯು ಕೈಗೊಂಡ ಸ್ವಚ್ಛತಾ ಅಭಿಯಾನ ಈ ಐತಿಹಾಸಿಕ ಜಲಸ್ಮಾರಕಕ್ಕೆ ಹೊಸ ಜೀವ ತುಂಬಿತು. ಪರಿಸರ ತಜ್ಞ ಶ್ರೀ ಶಿವಾನಂದ ಕಳವೆ ಅವರ ನೇತೃತ್ವದಲ್ಲಿ ‘ರಾಕಿಂಗ್ ಸ್ಟಾರ್’ ಯಶ್‌ ಅವರ ಯಶೋಮಾರ್ಗ ಚಾರಿಟಿ ಟ್ರಸ್ಟ್‌ನಿಂದ ‘ಚಂಪಕ ಸರಸ್ಸು’ ಪುಷ್ಕರಣಿಯನ್ನು ಈಗ ಪುನಶ್ಚೇತನಗೊಳಿಸಲಾಗಿದೆ.

ಇದನ್ನು ಓದಿ : ತುಮಕೂರಿನಲ್ಲೂ ಉಂಟು ಅದ್ಭುತ ಪ್ರವಾಸಿ ತಾಣಗಳು!

ಸಂಸ್ಥೆಯ ಸದಸ್ಯರು, ಸ್ವಯಂಸೇವಕರು ಹಾಗೂ ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಸರಸಿಯ ಸುತ್ತಮುತ್ತ ಬೆಳೆದಿದ್ದ ಕಳೆಗಿಡಗಳನ್ನು ತೆರವುಗೊಳಿಸಲಾಯಿತು. ಮೆಟ್ಟಿಲುಗಳು ಮತ್ತು ಆವರಣವನ್ನು ಸ್ವಚ್ಛಗೊಳಿಸಿ, ಐತಿಹಾಸಿಕ ಕಲ್ಯಾಣಿಯ ಮೂಲ ಸೌಂದರ್ಯವನ್ನು ಮರುಕಾಣುವಂತೆ ಮಾಡಲಾಯಿತು. ಈ ಕಾರ್ಯವು ಕೇವಲ ಸ್ವಚ್ಛತಾ ಅಭಿಯಾನವಾಗಿರದೆ, ಪರಂಪರೆ ಸಂರಕ್ಷಣೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಿದ ಮಹತ್ವದ ಹೆಜ್ಜೆಯಾಯಿತು.

ಚಂಪಕ ಸರಸಿಯಂಥ ಐತಿಹಾಸಿಕ ಜಲಾಶಯಗಳು ನಮ್ಮ ಸಾಂಸ್ಕೃತಿಕ ಪರಂಪರೆಯಷ್ಟೇ ಅಲ್ಲ, ಪರಿಸರದ ಅಮೂಲ್ಯ ಸಂಪತ್ತೂ ಆಗಿವೆ. ಸರಕಾರದ ಜತೆಗೆ ಸ್ವಯಂಸೇವಾ ಸಂಘಟನೆಗಳು, ಸ್ಥಳೀಯ ನಿವಾಸಿಗಳು ಮತ್ತು ಯುವಜನತೆ ಕೈಜೋಡಿಸಿದಾಗ ಮಾತ್ರ ಇಂಥ ಪರಂಪರೆ ತಾಣಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂಬುದನ್ನು ಯಶೋಮಾರ್ಗದ ಈ ಕಾರ್ಯ ಸಾಬೀತುಪಡಿಸಿದೆ.

ಇಂದು ಚಂಪಕ ಸರಸಿಗೆ ಭೇಟಿ ನೀಡುವ ಪ್ರವಾಸಿಗರು ಅದರ ಸ್ವಚ್ಛ ಪರಿಸರ ಮತ್ತು ಐತಿಹಾಸಿಕ ಸೊಬಗನ್ನು ಆಸ್ವಾದಿಸುತ್ತಿರುವುದರ ಹಿಂದೆ ಇಂಥ ಸಮಾಜಮುಖಿ ಪ್ರಯತ್ನಗಳ ಕೊಡುಗೆ ಅಡಗಿದೆ. ಈ ಮಾದರಿಯ ಕಾರ್ಯಗಳು ರಾಜ್ಯದ ಇತರ ಐತಿಹಾಸಿಕ ಕಲ್ಯಾಣಿಗಳು ಮತ್ತು ಜಲಾಶಯಗಳ ಸಂರಕ್ಷಣೆಗೆ ಪ್ರೇರಣೆಯಾಗಲಿ ಎಂಬುದೇ ನಮ್ಮೆಲ್ಲರ ಆಶಯ. ಪ್ಲಾಸ್ಟಿಕ್ ತ್ಯಾಜ್ಯ ಎಸೆಯದೆ, ಐತಿಹಾಸಿಕ ಕಟ್ಟಡಗಳಿಗೆ ಹಾನಿ ಮಾಡದೆ, ಸ್ವಚ್ಛತೆಯನ್ನು ಕಾಪಾಡುವ ಮೂಲಕ ನಾವು ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಬಹುದು.

ಇದನ್ನು ಓದಿ : ಮಲೆಯ-ಮಳೆಯ ನಾಡಲ್ಲಿ ಅದ್ಭುತ ಪ್ರವಾಸಿ ತಾಣಗಳು!

ಚಂಪಕ ಸರಸಿ ನಮ್ಮ ಹೆಮ್ಮೆಯ ಪರಂಪರೆಯಾಗಿ ಸದಾ ಉಳಿಯುತ್ತದೆ. ಮಲೆನಾಡಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರೂ ಚಂಪಕ ಸರಸಿಯ ದಡದಲ್ಲಿ ಕೆಲ ಕ್ಷಣ ನಿಂತು ಅದರ ನೀರಿನಲ್ಲಿ ಪ್ರತಿಬಿಂಬಿಸುವ ಇತಿಹಾಸವನ್ನು ಒಮ್ಮೆ ಮನಸಾರೆ ನೋಡಬೇಕು.

---

ಮಾಹಿತಿ ಪೆಟ್ಟಿಗೆ

ಚಂಪಕ ಸರಸಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಮಲಂದೂರು ಗ್ರಾಮ. ಆನಂದಪುರದಿಂದ ಸುಮಾರು 3 ಕಿಮೀ., ಸಾಗರದಿಂದ ಸುಮಾರು 18 ಕಿಮೀ. ದೂರದಲ್ಲಿರುವ ಈ ತಾಣವನ್ನು ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಸಮೀಪದಲ್ಲೇ ಇಕ್ಕೇರಿ ಅಘೋರೇಶ್ವರ ದೇವಸ್ಥಾನ, ಕೆಳದಿಯ ದೇವಾಲಯ ಮತ್ತು ವಸ್ತು ಸಂಗ್ರಹಾಲಯ, ಜೋಗ ಜಲಪಾತ, ವರದಹಳ್ಳಿಯ ಶ್ರೀಧರಾಶ್ರಮ, ಸಿಗಂದೂರು ಮುಂತಾದ ಪ್ರಸಿದ್ಧ ಪ್ರವಾಸಿ ತಾಣಗಳಿರುವುದರಿಂದ ಒಂದೇ ದಿನದಲ್ಲಿ ಹಲವಾರು ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..