Sunday, September 13, 2026
Sunday, September 13, 2026

ಮುಳುಗುವ ಮತ್ತೆ ಮೇಲೇಳುವ ಶೆಟ್ಟಿಹಳ್ಳಿಯ ರೋಸರಿ ಚರ್ಚ್

ಸ್ನೇಹಿತರು ಸಕಲೇಶಪುರಕ್ಕೆ ರೋಡ್ ಟ್ರಿಪ್ ಹೋಗೋಣ ಎಂದ ತಕ್ಷಣ ನೋಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಶೆಟ್ಟಿಹಳ್ಳಿ ಚರ್ಚನ್ನು ಹಾಕಿದ್ದಾಯಿತು. ಮಧ್ಯಾಹ್ನದ ವೇಳೆ ಸುಮಾರು ಒಂದು ಗಂಟೆ ಕಾಲ ಚರ್ಚಿನ ಬಳಿ ಕಳೆದಿದ್ದು ಹೊಸ ಅನುಭವವನ್ನು ನೀಡಿ ಮರೆಯದ ನೆನಪಾಗಿ ಉಳಿಯಿತು

  • ಡಾ. ಸುಮಾ ರಮೇಶ್

ಸ್ನೇಹಿತರು ಸಕಲೇಶಪುರಕ್ಕೆ ರೋಡ್ ಟ್ರಿಪ್ ಹೋಗೋಣ ಎಂದ ತಕ್ಷಣ ನೋಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಶೆಟ್ಟಿಹಳ್ಳಿ ಚರ್ಚನ್ನು ಹಾಕಿದ್ದಾಯಿತು. ಮಧ್ಯಾಹ್ನದ ವೇಳೆ ಸುಮಾರು ಒಂದು ಗಂಟೆ ಕಾಲ ಚರ್ಚಿನ ಬಳಿ ಕಳೆದಿದ್ದು ಹೊಸ ಅನುಭವವನ್ನು ನೀಡಿ ಮರೆಯದ ನೆನಪಾಗಿ ಉಳಿಯಿತು. ಮತ್ತೆ ಬೇಸಗೆಯಲ್ಲಿ ಭೇಟಿಕೊಟ್ಟು ಚರ್ಚಿನ ಅವಶೇಷಗಳ ನಡುವೆ ಓಡಾಡಬೇಕೆಂಬ ಆಸೆಯೂ ಉಂಟಾಯಿತು. ಚರಿತ್ರೆಯ ಪಳೆಯುಳಿಕೆಯನ್ನು ನೋಡುತ್ತಾ ಅದರ ವ್ಯಥೆಯ ಕಥೆಯನ್ನು ಕಲ್ಪಿಸಿಕೊಂಡಾಗ ವಿಷಾದದ ಜತೆಗೆ ನಿರ್ಲಿಪ್ತತೆಯೂ ಮೂಡಿತು.

Untitled design - 2026-09-11T175348.323

ʻಸೌಂದರ್ಯ ನೋಡುಗರ ಕಣ್ಣಲ್ಲಿದೆʻ ಎಂಬ ಮಾತು ನಿಜವೇ ಆದರೂ, ಪ್ರಪಂಚದ ಸೌಂದರ್ಯಪ್ರಜ್ಞೆ ರೂಪುಗೊಂಡಿರುವುದು ಹಲವಾರು ರೂಢಿಗತ ಮಾನದಂಡಗಳ ಮೂಲಕವೇ! ಹಲವು ಬಾರಿ ಈ ಸೌಂದರ್ಯ ಮೀಮಾಂಸೆ ನಮ್ಮನ್ನು ಸಂದಿಗ್ಧ ಹಾಗೂ ಅಚ್ಚರಿಗೂ ದೂಡುವುದುಂಟು! ನಾವು ಕಟ್ಟಿಕೊಂಡಿರುವ ಈ ಪ್ರಪಂಚದಲ್ಲಿ ಮಾತ್ರ ಮಾನದಂಡಗಳಿಗೆ ಅನುಗನುಗುಣವಾಗಿ ಸೌಂದರ್ಯದ ವ್ಯಾಖ್ಯಾನವಾಗುವುದು, ಆದರೆ ಪ್ರಕೃತಿಯಲ್ಲಿ ಅಂಥ ಯಾವುದೇ ಮಾನದಂಡಗಳ ಗೊಡವೆಯಿಲ್ಲ. ಹಸಿರೆಲೆ ತುಂಬಿದ ಮರವು ಚೆಂದದಿಂದ ಕಂಗೊಳಿಸಿದರೆ ಬೋಳುಮರವು ತನ್ನ ಸ್ಥಿರತೆ ಹಾಗೂ ಮತ್ತೆ ಚಿಗುರುವ ಭರವಸೆಯಲ್ಲಿ ಸುಂದರವಾಗಿ ಕಾಣುವುದು. ಹಾಗೆಯೇ ಯೌವನದಿಂದ ಹೊಳೆಯುವ ಚರ್ಮದ ಸೌಂದರ್ಯ ನಂತರ ಮಾಗಿದ ಮುಪ್ಪಿನ ಸುಕ್ಕಿನಲ್ಲೂ ಒಂದು ಬಗೆಯ ಚೆಂದವನ್ನು ತೋರುವಂತೆ! ನನಗೆ ಇಷ್ಟೆಲ್ಲಾ ಆಲೋಚನೆ ಬಂದಿದ್ದು ಕಾಲದ ನಿರ್ದಯತೆಗೆ ಬಲಿಯಾಗಿ, ವೃದ್ಧಾಪ್ಯದಲ್ಲಿ ತನ್ನ ಚರಿತ್ರೆಯನ್ನು ಹೆಮ್ಮೆಯಿಂದ ಹೇಳಲು ಕಾತುರವಾಗಿ ನಿಂತಂತೆ ಕಾಣುವ ಶೆಟ್ಟಿಹಳ್ಳಿಯ ಪಾಳು ಬಿದ್ದ ರೋಸರಿ ಚರ್ಚ್ ಮುಂದೆ ನಿಂತಾಗ!

ಇದನ್ನು ಓದಿ : 2027ರಲ್ಲಿ ಡೆನ್ಮಾರ್ಕ್‌ನ ಉದ್ಯೋಗ ವಲಸೆ ಅವಕಾಶ ವಿಸ್ತರಣೆ

ಜಿಪಿಎಸ್ ತೋರಿದ ಹಾದಿ ಹಿಡಿದು

1860ರಲ್ಲಿ ಫ್ರೆಂಚ್ ಮಿಷನರಿಗಳಿಂದ ಕಟ್ಟಲ್ಪಟ್ಟ ಗೋಥಿಕ್ ಶೈಲಿಯ ಚರ್ಚ್ ಇದು. ಯುರೋಪಿಯನ್ ಎಸ್ಟೇಟ್ ಮಾಲೀಕರು ಹಾಗೂ ಸ್ಥಳೀಯ ಕ್ರೈಸ್ತ ಸಮುದಾಯಕ್ಕಾಗಿ ಕಟ್ಟಲ್ಪಟ್ಟಿತ್ತು. 1823ರ ಬರಗಾಲದ ಸಮಯದಲ್ಲಿ ನಿರಾಶ್ರಿತರಿಗೆ ನೀಡಿದ ಆಸರೆಗಾಗಿ ಹೆಸರುವಾಸಿಯಾಗಿತ್ತು. ಕಟ್ಟಿದ ಸುಮಾರು ನೂರು ವರ್ಷಗಳ ನಂತರ ಪಾಳುಬಿದ್ದ ಈ ಚರ್ಚು ಗೊರೂರು ಅಣೆಕಟ್ಟು ನಿರ್ಮಾಣದ ನಂತರ ಹೇಮಾವತಿಯ ಹಿನ್ನೀರಿನಲ್ಲಿ ಮುಳುಗಿಹೋಯಿತು. ಮುಂಗಾರಿನ ಸಮಯದಲ್ಲಿ ನೀರಿನಲ್ಲಿ ಮುಳುಗಿ ಹೋಗುವ ಈ ಪಾಳು ಬಿದ್ದ ಚರ್ಚು, ಬೇಸಗೆಯಲ್ಲಿ ಬರಡಾದ ನೆಲದ ಮೇಲೆ ಸಂಪೂರ್ಣವಾಗಿ ಕಾಣಿಸಿಕೊಳ್ಳುವುದು. ಅದರಿಂದಲೇ ಶೆಟ್ಟಿಹಳ್ಳಿ ಚರ್ಚಿನ ಸೌಂದರ್ಯ ಸವಿಯಲು ಎರಡು ಬಾರಿ ಹೋಗಿಬರಬೇಕು!

ಪಿಸುಗುಡುತ್ತಿರುವ ಗೋಡೆಗಳ ವ್ಯಥೆಯ ಕಥೆ

1982ರಲ್ಲಿ ಶಿಥಿಲಗೊಂಡಿದ್ದ ಚರ್ಚಿನ ಮೇಲ್ಚಾವಣಿ ಮುರಿದು ಬಿದ್ದ ನಂತರ ಕೇವಲ ಅಸ್ಥಿಪಂಜರದಂತಿರುವ ಅವಶೇಷಗಳಾದ ಗೋಡೆ ಮತ್ತು ಚೌಕಟ್ಟುಗಳು ಮಾತ್ರ ಉಳಿದಿರುವ ಹಾಳುಬಿದ್ದ ಕಟ್ಟಡವಾಗಿ ನಿಂತಿದೆ. ನೀರಿನಲ್ಲಿ ಮುಳುಗಿರುವಾಗ ಚರ್ಚಿನ ಮೇಲ್ಭಾಗ ಸ್ವಲ್ಪ ಮಾತ್ರ ಕಾಣುವುದರಿಂದ ಕಟ್ಟಡ ತೇಲುತ್ತಿರುವುದೇನೋ ಎಂಬ ಭ್ರಮೆಯನ್ನು ಮೂಡಿಸುತ್ತದೆ. ಅದರಿಂದಲೇ ʻತೇಲುವ ಚರ್ಚ್ʻ ಎಂಬ ಹೆಸರೂ ಇದಕ್ಕಿದೆ. ಬಿಳಿ ಹಾಗೂ ಪಾಚಿಯಿಂದ ಬೂದು ಬಣ್ಣಕ್ಕೆ ತಿರುಗುತ್ತಿರುವ ಉದ್ದನೆಯ ಕಮಾನುಗಳಿಂದ ಆಕರ್ಷಕವಾಗಿರುವ ಪಾಳುಬಿದ್ದ ಕಟ್ಟಡ ನೀಲಾಗಸದ ಕೆಳಗೆ ಹಾಗೂ ನೀಲಿ ನೀರಿನ ಹಿನ್ನೆಲೆಯಲ್ಲಿ ತನ್ನ ಶಿಥಿಲಾವಸ್ಥೆಯಲ್ಲೂ ಬಹಳ ಸುಂದರವಾಗಿ ಕಾಣುತ್ತದೆ. ತನ್ನ ನಲಿವು, ನೋವುಗಳನ್ನು ಗಾಳಿಯ ಬೀಸುವಿಕೆಯಲ್ಲಿ, ನೀರಿನ ಅಲೆಗಳ ಚಲನೆಯಲ್ಲಿ ಮೌನವಾಗಿಯೇ ಸಾರುವಂತೆ ಭಾಸವಾಗುತ್ತದೆ.

Untitled design - 2026-09-11T175912.541

ಶಿಥಿಲ ಆದರೂ ಸುಂದರ

ಸ್ನೇಹಿತರು ಸಕಲೇಶಪುರಕ್ಕೆ ರೋಡ್ ಟ್ರಿಪ್ ಹೋಗೋಣ ಎಂದ ತಕ್ಷಣ ನೋಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಶೆಟ್ಟಿಹಳ್ಳಿ ಚರ್ಚನ್ನು ಹಾಕಿದ್ದಾಯಿತು. ಮಧ್ಯಾಹ್ನದ ವೇಳೆ ಸುಮಾರು ಒಂದು ಗಂಟೆ ಕಾಲ ಚರ್ಚಿನ ಬಳಿ ಕಳೆದಿದ್ದು ಹೊಸ ಅನುಭವವನ್ನು ನೀಡಿ ಮರೆಯದ ನೆನಪಾಗಿ ಉಳಿಯಿತು. ಮತ್ತೆ ಬೇಸಗೆಯಲ್ಲಿ ಭೇಟಿಕೊಟ್ಟು ಚರ್ಚಿನ ಅವಶೇಷಗಳ ನಡುವೆ ಓಡಾಡಬೇಕೆಂಬ ಆಸೆಯೂ ಉಂಟಾಯಿತು. ಚರಿತ್ರೆಯ ಪಳೆಯುಳಿಕೆಯನ್ನು ನೋಡುತ್ತಾ ಅದರ ವ್ಯಥೆಯ ಕಥೆಯನ್ನು ಕಲ್ಪಿಸಿಕೊಂಡಾಗ ವಿಷಾದದ ಜತೆಗೆ ನಿರ್ಲಿಪ್ತತೆಯೂ ಮೂಡಿತು. ಸಮಾಜದ ಒಳಿತಿಗಾಗಿ ಮಾಡುವ ಕೆಲಸಗಳಲ್ಲಿ ಹಲವು ಬಾರಿ ಅಸಹಾಯಕರ ಕಣ್ಣೀರು ಸೇರಿರುವುದು ಸತ್ಯ! ಅಣೆಕಟ್ಟನ್ನು ಕಟ್ಟಿದ ಸಮಯದಲ್ಲಿ ಮುಳುಗಡೆಗೆ ಒಳಗಾದ ಹಳ್ಳಿಗಳ ಜನರ ವ್ಯಥೆಯ ಹಾಗೂ ತ್ಯಾಗದ ಸಂಕೇತವಾಗಿ ಈ ಚರ್ಚು ಉಳಿದುಕೊಂಡಿದೆ ಎನಿಸಿತು.

ಇದ್ದರೂ ಗಮನಕ್ಕೆ ಬಾರದೇ?

ಪಾರಂಪರಿಕ ತಾಣವನ್ನಾಗಿ ಅಭಿವೃದ್ಧಿ ಪಡಿಸಬಹುದಾದ ಈ ಸ್ಥಳ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದೆ. ಈ ಜಾಗಕ್ಕೆ ದಾರಿ ತೋರಿಸುವ ಬೋರ್ಡ್‌ಗಳು ಹಾದಿಯಲ್ಲಿ ಎಲ್ಲಿಯೂ ಕಂಡು ಬರುವುದಿಲ್ಲ. ದಡದಲ್ಲಿ ಪ್ರವಾಸಿಗರ ಸಲುವಾಗಿ ನಿಂತ ಅನೇಕ ತಳ್ಳುಗಾಡಿಗಳು ತಿನಿಸು, ಪೇಯಗಳನ್ನು ಮಾರುತ್ತಿವೆ. ಆದರೆ ಸ್ವಚ್ಛತೆಗೆ ಆಸ್ಪದವಿಲ್ಲದಂತೆ ಪ್ಲಾಸ್ಟಿಕ್ ಬಾಟಲುಗಳು, ಕವರ್, ಚಿಪ್ಸ್ ಪ್ಯಾಕೆಟ್‌ಗಳು ಸುತ್ತಲೂ ಆವರಿಸಿವೆ. ದಡದ ಹತ್ತಿರ ನೀರಿನಲ್ಲಿ ಹರಿದ ಚಪ್ಪಲಿ, ಸೋಪು, ಕೆಲವು ಒಳ ಉಡುಪುಗಳು ತೇಲಾಡುತ್ತಿದ್ದವು. ಹಲವರು ಗುಂಪುಗಳಲ್ಲಿ ಈಜಾಡುತ್ತಾ ಕೂಗಾಡುತ್ತಿದ್ದರು. ವಿಪರೀತ ಕೆಸರು ಸೇರಿ ನೀರಿನ ಬಳಿ ಹೋಗುವುದು ಬಹಳ ಪ್ರಯಾಸದಾಯಕವಾಗಿತ್ತು. ದೂರದಲ್ಲೇ ನಿಂತು, ನೋಡಿ ಆನಂದಿಸಿ ಹಿಂದಿರುಗಬೇಕಾಯಿತು. ಎಲ್ಲಿಯೂ ತಡೆಗೋಡೆಗಳೇ ಕಾಣಲಿಲ್ಲ!

ಥೇಟ್ ಅನಾದರಕ್ಕೆ ಒಳಗಾದ ಮನೆಯ ಹಿರಿಯನಂತೆ ಶೆಟ್ಟಿಹಳ್ಳಿ ಚರ್ಚು ನನ್ನ ಕಣ್ಣಿಗೆ ಕಂಡಿತು. ಇಂದು ಇದು ಪ್ರವಾಸಿಗರ ಫೊಟೋಶೂಟ್‌ಗಳಿಗೆ ಜನಪ್ರಿಯ ತಾಣವಾಗಿದ್ದರೂ, ಸೂಕ್ತ ಸಂರಕ್ಷಣೆಯ ಕೊರತೆಯಿಂದ ನಿಧಾನವಾಗಿ ವಿನಾಶದ ಅಂಚಿನತ್ತ ಸಾಗುತ್ತಿದೆ. ಭಗ್ನತೆಯಲ್ಲೂ ಭವ್ಯತೆ ಇರುತ್ತದೆ, ಕಾಲದ ಗಾಯಗಳಲ್ಲೂ ಸೌಂದರ್ಯ ಅಡಗಿರುತ್ತದೆ ಎಂಬುದಕ್ಕೆ ಮೌನ ಸಾಕ್ಷಿಯಾಗಿ ಶೆಟ್ಟಿಹಳ್ಳಿಯ ಈ ಚರ್ಚ್ ಇಂದಿಗೂ ನಿಂತಿದೆ.

ದಾರಿ ಹೇಗೆ?

ಬೆಂಗಳೂರಿನಿಂದ ಸುಮಾರು 200 ಕಿಮೀ ಹಾಗೂ ಹಾಸನದಿಂದ ಸುಮಾರು 22 ಕಿಮೀ ದೂರದಲ್ಲಿ ಈ ಚರ್ಚ್‌ ಇದೆ. ಹಾಸನದಿಂದ ಸ್ಥಳೀಯ ವಾಹನಗಳ ಮೂಲಕ ತಲುಪಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..