Sunday, September 13, 2026
Sunday, September 13, 2026

ಚೀನಾ-ಅಲಾಸ್ಕ ಪ್ರವಾಸ ಕಥನಗಳು

ಚೀನಾದ ಪ್ರವಾಸದ ಜತೆಗೆ ಅಲ್ಲಿಯ ಜನರ ವ್ಯಾಪಾರದ ಬಗ್ಗೆ ಲೇಖಕಿ ತಿಳಿಸುತ್ತಾರೆ. ಅಲ್ಲಿ ಶಾಪಿಂಗ್‌ನಲ್ಲಿ ಮೋಸಹೋಗಬಹುದಾದ ಪ್ರಸಂಗಗಳಿಂದ ಪ್ರವಾಸಿಗರನ್ನು ಎಚ್ಚರಿಸುತ್ತಾರೆ. ಚೀನಿಯರ ಆಹಾರಪದ್ಧತಿಯನ್ನು ವಿವರಿಸುವಾಗ ಓದುಗನಿಗೆ ಹೊಟ್ಟೆ ತೊಳೆಸಿದಂತಾಗುವುದಂತೂ ಖಚಿತ.

  • ಶೋಭಾ ಮೂರ್ತಿ

ಕನ್ನಡದ ಪರಿಚಿತ ಲೇಖಕಿ ಎಸ್.ಪಿ. ವಿಜಯಲಕ್ಷ್ಮಿ ಅವರ ʼಸಾಗರದಾಚೆಯ ನಾಡಿನಲ್ಲಿʼ ಕೃತಿಯನ್ನು ಓದಿದಮೇಲೆ ʼನಕ್ಷತ್ರಗಳ ನೆಲದಲ್ಲಿʼಯನ್ನೂ ಓದಬೇಕೆಂಬ ಕಾತುರ ನನಗಿತ್ತು. ಕಾರಣ, ಓದಿನ ಜತೆಯಲ್ಲಿ ಓದುಗರನ್ನು ಸಹ ಪ್ರವಾಸಿಯನ್ನಾಗಿ ಮಾಡುವ ಶಕ್ತಿ ಇವರ ಲೇಖನಿಗಿದೆ.

ಎಲ್ಲಾ ಹೆಣ್ಣುಮಕ್ಕಳಂತೆ ತಮ್ಮ ಕೌಟುಂಬಿಕ ಬದುಕಿನಲ್ಲಿ ವ್ಯಸ್ತರಾಗಿ, ನಡುವಯಸ್ಸಿಗೆ ಬಂದಾಗ ಬರವಣಿಗೆಯನ್ನು ಮತ್ತೆ ಆರಂಭಿಸಿ ಅನೇಕ ಪತ್ರಿಕೆಗಳಲ್ಲಿ ಲೇಖನಗಳು, ಪ್ರವಾಸದ ಅನುಭವಗಳನ್ನು, ಪ್ರವಾಸಿ ತಾಣಗಳನ್ನು ಲೇಖಕಿ ಪರಿಚಯಿಸಿದ್ದಾರೆ. ಇವರ ಯಾವುದೇ ಪುಸ್ತಕವನ್ನು ಕೈಗೆತ್ತಿಕೊಂಡರೂ ಅದರ ಸರಳವಾದ ಭಾಷೆ, ಅದ್ಭುತ ಶೈಲಿಯಿಂದ ಓದಿಸಿಕೊಂಡು ಹೋಗುತ್ತದೆ. ಆಡಂಬರ, ಅಲಂಕಾರಗಳಿಲ್ಲದ ಆಡುಭಾಷೆಯ ಪದಗಳ ಬಳಕೆಯಿಂದ ಇವರ ಬರಹಗಳು ಹೆಚ್ಚು ಆಪ್ತವೆನಿಸುತ್ತವೆ. ಇವರ 'ನಕ್ಷತ್ರದ ನೆಲದಲ್ಲಿ' ಪ್ರವಾಸಕಥನಕ್ಕೆ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ ಲಭಿಸಿದೆ.

ಇದನ್ನು ಓದಿ : ಕಡಲ ತೀರದ ಭಾರ್ಗವ ಬರೆದ ಪ್ರವಾಸ ಕಥನ

ನಕ್ಷತ್ರಗಳ ನೆಲದಲ್ಲಿ

ಚೀನಾ ಹಾಗೂ ಅಲಾಸ್ಕ ದೇಶಗಳ ಪ್ರವಾಸ ಅನುಭವಗಳ ಈ ಹೊತ್ತಿಗೆಯ ಶೀರ್ಷಿಕೆಯ ಬಗ್ಗೆ ಲೇಖಕಿಗೆ ಗೊಂದಲವಿತ್ತಂತೆ. ಸ್ವಲ್ಪ ಯೋಚಿಸಿದಾಗ ಎರಡೂ ದೇಶಗಳ ರಾಷ್ಟ್ರಧ್ವಜಗಳಲ್ಲಿಯೂ ನಕ್ಷತ್ರಗಳಿರುವ ಸಾಮ್ಯತೆಯನ್ನು ಮನಗಂಡು ಈ ಪುಸ್ತಕಕ್ಕೆ 'ನಕ್ಷತ್ರಗಳ ನೆಲದಲ್ಲಿ' ಎಂದು ಶೀರ್ಷಿಕೆಯನ್ನು ಇಡಲು ನಿರ್ಧರಿಸಿದರು.

ಇದನ್ನು ಓದುವಾಗ ಪ್ರವಾಸಕಥನವನ್ನು ಇಷ್ಟು ಸುಂದರವಾಗಿ ಬರೆಯಲು ಸಾಧ್ಯವೇ ಎನ್ನುವಂತಾಗುತ್ತದೆ. ಕೆಲವೊಮ್ಮೆ ಓದುಗರನ್ನು ತಾವು ಅನುಭವಿಸಿದ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿಸಿದರೆ, ಮತ್ತೊಮ್ಮೆ ಇತಿಹಾಸದ ಪುಟಗಳಲ್ಲಿ ಕಳೆದುಹೋಗುವಂತೆ ಮಾಡುತ್ತಾರೆ. ಭೂರಮೆಯ ಒಡಲಲ್ಲಿ ಅಡಗಿರುವ ಅಪಾರ ಸೌಂದರ್ಯರಾಶಿಯಲ್ಲಿ ಕೊಂಚವಾದರೂ ಕಣ್ಣಾರೆ ಕಂಡು ಧನ್ಯರಾಗಬೇಕೆಂಬ ಸಹಜ ಅಭಿಲಾಶೆ ಎಲ್ಲರದು. ಆದರೆ ಎಲ್ಲರಿಂದ ಅದು ಸಾಧ್ಯವಾಗದು. ಪ್ರವಾಸಿಗರು ನೋಡುವ ನೋಟವೊಂದೇ ಆದರೂ ಭಾವ ಹಲವು. ಅವರವರ ಭಾವಕ್ಕೆ ತಕ್ಕಂತೆ ಪ್ರವಾಸಿ ತಾಣಗಳನ್ನು ಹತ್ತು ಹಲವು ಆಯಾಮಗಳಿಂದ ನೋಡುತ್ತಾರೆ. ಇಲ್ಲಿ ಲೇಖಕಿ ತಮ್ಮ ನೋಟದ ಮೂಲಕ ತಾಣವನ್ನು ವಿವರಿಸುತ್ತಾ, ಓದುಗರು ಬಿಟ್ಟ ಕಣ್ಣಿಂದ ಆ ನೆಲದ ರಮಣೀಯತೆಯನ್ನು ಅಸ್ವಾದಿಸುವಂತೆ ಮಾಡುತ್ತಾರೆ.

ಇದನ್ನು ಓದಿ : ಭಗವಂತನಿಲ್ಲದ ಊರಿನಲ್ಲಿ ಸುತ್ತಾಟ

ಪ್ರವಾಸದ ಆರಂಭ

ಮೊದಲಿಗೆ ಇವರು ಜಪಾನಿನ ಟೋಕಿಯೋ ನಗರದಿಂದ ಹೊರಟು ಚೀನಾದ ಬೀಜಿಂಗ್ ತಲುಪುವುದರಿಂದ ಆರಂಭವಾಗುವ ಪ್ರವಾಸದಲ್ಲಿ ತಮ್ಮ ಎಲ್ಲ ಪ್ರವಾಸಕಥನಗಳಲ್ಲಿ ಬರೆಯುವಂತೆ, ಅಲ್ಲಿಯ ಇತಿಹಾಸ, ಯುದ್ಧ, ರಾಜ್ಯಾಡಳಿತ, ಅಧಿಪತ್ಯ, ಆಗಿನ ರಾಜಕೀಯ ಸ್ಥಿತ್ಯಂತರಗಳು, ಭೌಗೋಳಿಕ ಪರಿಸರದ ವಿವರಣೆ, ಹವಾಮಾನ ಅಬ್ಬಾ, ಯಾವುದೇ ದೇಶಕ್ಕೆ ಹೋದರೂ ಅಲ್ಲಿಯ ಸಂಗತಿಗಳೆಲ್ಲವನ್ನೂ ಓದುಗರ ಎದುರಿಗೆ ಬಿಚ್ಚಿಟ್ಟುಬಿಡುತ್ತಾರೆ!

ಚೀನಾದ ಮಹಾಗೋಡೆ

ತಮ್ಮ ಬಹುದಿನಗಳ ನಿರೀಕ್ಷೆಯಾದ ಚೀನಾ ಗೋಡೆಯನ್ನು ಪ್ರತ್ಯಕ್ಷವಾಗಿ ಕಂಡಾಗ ಲೇಖಕಿಯವರಲ್ಲಾದ ಅನುಭೂತಿ ಅನನ್ಯ. ಎಂಟು ಸಾವಿರ ಕಿಮೀ ಉದ್ದದ ಚೀನಾದ ಗೋಡೆಯ ಪರಿಕಲ್ಪನೆಯ ಮೂಲಪುರುಷ ಚಿನ್-ಷಿ-ಹುವಾಂಗ್-ದೀ. ಕೊರೆಯುವ ಚಳಿ, ಬೀಸುವ ಬಿರುಗಾಳಿಯನ್ನು ಎದುರಿಸಿ ನಿಂತ ನಿರ್ಭೀತ ಗೋಡೆಯನ್ನು ಇಂದಿಗೂ ನಾವು ನೋಡಬಹುದು. ಚೀನಾ ಪ್ರವಾಸದಲ್ಲಿ ಸಂದರ್ಶಿಸಿದ ಬೀಜಿಂಗ್ ನಗರ, ಚೀನಾದ ಗೋಡೆ ಸುಮಾರು 500 ವರ್ಷಗಳ ಕಾಲ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದ ಫಾರ್‌ಬಿಡನ್ ಸಿಟಿಯ ಅರಮನೆ, ಪಾರಂಪರಿಕ ಷಿಯಾನ್ ನಗರದ ಪೂರ್ವೇತಿಹಾಸವನ್ನು ಬರೆದಿದ್ದಾರೆ. ಮಿಲಿಯನ್‌ಗಟ್ಟಲೆ ವರ್ಷಗಳಿಂದ ಲೈಮ್ ಸ್ಟೋನ್‌ನಿಂದ ರಚಿತವಾದ ರೀಡ್ ಫ್ಲೂಟ್ ಕ್ಲೇವ್ಸ್‌ನ ಅದ್ಭುತ ಸೌಂದರ್ಯವನ್ನು ಓದುಗರೆದುರು ತಮ್ಮ ಮಾಂತ್ರಿಕ ಶಕ್ತಿಯ ಅಕ್ಷರಗಳಲ್ಲಿ ಹಿಡಿದು ನಿಲ್ಲಿಸುತ್ತಾರೆ. ಆಧುನಿಕ ನಗರ ಶಾಂಘೈ, ಜೇಡ್ ಬುದ್ಧ ಟೆಂಪಲ್‌ಗಳಲ್ಲಿ ನಾವೂ ಸುತ್ತಾಡಿದ ಅನುಭವವಾಗುತ್ತದೆ.

ಚೀನಾದ ಪ್ರವಾಸದ ಜತೆಗೆ ಅಲ್ಲಿಯ ಜನರ ವ್ಯಾಪಾರದ ಬಗ್ಗೆ ಲೇಖಕಿ ತಿಳಿಸುತ್ತಾರೆ. ಅಲ್ಲಿ ಶಾಪಿಂಗ್‌ನಲ್ಲಿ ಮೋಸಹೋಗಬಹುದಾದ ಪ್ರಸಂಗಗಳಿಂದ ಪ್ರವಾಸಿಗರನ್ನು ಎಚ್ಚರಿಸುತ್ತಾರೆ. ಚೀನಿಯರ ಆಹಾರಪದ್ಧತಿಯನ್ನು ವಿವರಿಸುವಾಗ ಓದುಗನಿಗೆ ಹೊಟ್ಟೆ ತೊಳೆಸಿದಂತಾಗುವುದಂತೂ ಖಚಿತ.

ನಮ್ಮ ದೇಶದ ಜತೆಗಿನ ಚೀನಾದ ಗಡಿ ತಂಟೆ, ಅದರ ಕುಟಿಲೋಪಾಯಗಳ ಅರಿವಿರುವ ನಮಗೆ ಆ ದೇಶದ ಬಗ್ಗೆ ಇರುವ ಅಭಿಪ್ರಾಯಗಳನ್ನು ಬದಿಗೆ ಸರಿಸಿ ಸೌಂದರ್ಯೋಪಾಸನೆ, ಪ್ರವಾಸಿಯ ಮನೋಭಾವದಿಂದ ನೋಡುವಾಗ, ಚೀನಾ ಬೇರೆಯದಾಗಿಯೇ ತೆರೆದುಕೊಳ್ಳುವಂತೆ ಮಾಡುವ ತಾಕತ್ತು ಇವರ ಲೇಖನಿಯಲ್ಲಿದೆ.

ಇದನ್ನ ಓದಿ : ಫ್ರಾನ್ಸಿಗೊಂದು ಪಯಣ

ಅಲಾಸ್ಕ ಪ್ರವಾಸ

ಪುಸ್ತಕದ ಉಪ ಶೀರ್ಷಿಕೆಯಂತೆ ಪುಸ್ತಕದ ಮೊದಲ ಭಾಗ ಚೀನಾ ಆಕ್ರಮಿತ, ಇನ್ನರ್ಧ ಭಾಗ ಮನಮೋಹಕ ಅಲಾಸ್ಕ ರಾಜ್ಯ ಆವರಿಸಿಕೊಂಡಿದೆ. ಅಲಾಸ್ಕ, ಈ ಹೆಸರನ್ನು ಕೇಳಿ ಗೊತ್ತಿದೆ. ಎಂದಾದರೂ ಅನಿಮಲ್ ಪ್ಲಾನೆಟ್ ಅಥವಾ ಡಿಸ್ಕವರಿ ಚಾನಲ್‌ಗಳಲ್ಲಿ ಈ ಪ್ರದೇಶವು ಶುಭ್ರ ಶ್ವೇತಧಾರಿಯಾಗಿ ನಮಗೆ ಕಾಣಿಸಿಕೊಳ್ಳುತ್ತದೆ. ಆದರೆ ಲೇಖಕಿಯ ಅಲಾಸ್ಕ ಪ್ರವಾಸದ ಅನುಭವ ಕಥನವನ್ನು ಓದುವಾಗ, ಓದುಗರೂ ಅಕ್ಷರಶಃ ಭೂಮಂಡಲದ ಅದ್ಭುತ ಸೃಷ್ಟಿಯ ಎದುರಿಗೆ ನಿಂತಂತೆ ಭಾಸವಾಗುವುದರಲ್ಲಿ ಸಂಶಯವಿಲ್ಲ.

ಅವರು ಅಲಾಸ್ಕ ದರ್ಶನಕ್ಕಾಗಿ ಅಮೆರಿಕದ ಸಿಯಾಟಲ್ ನಗರದಿಂದ ಹೊರಡುವ ನಾರ್ವೇಜಿಯನ್ ಪರ್ಲ್ ಹಡಗಿನ ವೈಭವದ ವಿವರಣೆಗಳನ್ನು ನಮಗೂ ನೀಡುತ್ತಾ ಅವರ ಜತೆಯಲ್ಲಿ ನಮ್ಮನ್ನೂ ಕರೆದೊಯ್ಯುತ್ತಾರೆ. ಇಪ್ಪತ್ತೈದು ಪುಟಗಳ ಸಚಿತ್ರ ವಿವರಣೆಯೊಂದಿಗೆ ಅಲ್ಲಿಯ ಊಟೋಪಚಾರ, ಅತಿಥಿ ಸತ್ಕಾರ, ಹಡಗೊಳಗಿನ ಸ್ವಚ್ಛ ಸುಂದರ ಪರಿಸರದ ಅದ್ಭುತ ವರ್ಣನೆಯನ್ನು ಓದುತ್ತಾ ಓದುಗರೂ ಅವರ ಸಹಪ್ರಯಾಣಿಕರೇ ಆಗಿಬಿಡುತ್ತಾರೆ!

ಪ್ರತಿಯೊಂದು ಸ್ಥಳದಲ್ಲೂ ಪ್ರವಾಸಿಗಳು ಎದುರಿಸಬೇಕಾದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಬಗ್ಗೆ ಲೇಖಕಿ ಕೊಡುವ ವಿವರಣೆ ಮೊದಲಬಾರಿ ಪ್ರವಾಸ ಹೋಗುವವರಿಗೆ ಉತ್ತಮ ಕೈಪಿಡಿ.

ಅಲಾಸ್ಕದಲ್ಲಿ ಇನ್‌ಸೈಡ್ ಪ್ಯಾಸೇಜ್ ಎನ್ನುವ ರಮಣೀಯ ಸಮುದ್ರಯಾನವನ್ನು ಓದುವಾಗ ಮೈನವಿರೇಳುತ್ತದೆ! ಸ್ಕಾಗ್‌ವೇ ಟೌನ್‌ನಿಂದ ಗ್ಲೇಷಿಯರ್ ಹೆಲಿಕಾಪ್ಟರ್ ರೈಡ್‌ನಲ್ಲಿ ರೋಚಕ ಪ್ರಯಾಣದ ಅನುಭವ ಓದುಗರನ್ನು ಜತೆಗೇ ಹೊತ್ತೊಯ್ಯುವುದರಲ್ಲಿ ಅನುಮಾನವಿಲ್ಲ. ಅವರು ಕಂಡ ಗ್ಲೇಷಿಯರ್‌ನ ಅದ್ಭುತ ದೃಶ್ಯಗಳನ್ನು ಕಪ್ಪುಬಿಳುಪಿನ ಛಾಯಾಚಿತ್ರಗಳೊಂದಿಗೆ ವಿವರಿಸುತ್ತ ಹೋಗುತ್ತಾರೆ. ಆದರೆ ಓದುಗರು ಓದುತ್ತಾ, ಆ ಚಿತ್ರಗಳಿಗೆ ತಮ್ಮ ಕಲ್ಪನೆಯ ಬಣ್ಣ ತುಂಬಬಹುದು! ಅಲಾಸ್ಕಾದ ಇತಿಹಾಸ, ಅದನ್ನು ರಷ್ಯಾ ಅಮೆರಿಕಗೆ ಮಾರಾಟ ಮಾಡಿದ ವಿವರಣೆಗಳು, ಗೋಲ್ಡ್ ರಶ್‌ನ ಆ ದಿನಗಳು, ವೈಟ್ ಪಾಸ್ ಸಮಿಟ್ ರೈಲಿನ ಪ್ರಯಾಣದ ಅದ್ವಿತೀಯ ಕ್ಷಣಗಳು, ಕೆಚಿಕನ್ ನಗರದ ಹೂಗುಚ್ಛದ ರಾಶಿಯ ಉದ್ಯಾನಗಳು, ವಿಕ್ಟೋರಿಯಾ ನಗರ ಹೀಗೆ ಎಲ್ಲವನ್ನು ಬಣ್ಣಿಸುತ್ತಾ ಓದುಗರನ್ನು ಮಂತ್ರಮುಗ್ಧಗೊಳಿಸುತ್ತಾರೆ!

ಇದನ್ನು ಓದಿ :ಫ್ರಾನ್ಸಿಗೊಂದು ಪಯಣ

ಕೆಚಿಕನ್ ನಗರದ ಬೆಳಕಿನ ಉತ್ಕರ್ಷದಿಂದ ಬಾನಿನಲ್ಲಿ ಮೂಡುವ ಬೆಳಕಿನ ಚಿತ್ತಾರ 'ಅರೋರಾ' ವನ್ನು ಕಣ್ಣಾರೆ ಕಾಣಲು ಅವರಿಗೆ ಸಮಯಾವಕಾಶವಿರಲಿಲ್ಲ. ಆದರೂ ಅದನ್ನು ಬಹಳ ಸುಂದರವಾಗಿ ವಿವರಿಸಿದ್ದಾರೆ. ಈ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದಲಾರಂಭಿಸಿದರೆ, ಓದುಗರು ವೈಭವೋಪೇತ ಚೀನಾ ಪ್ರವಾಸ ಮುಗಿಸಿ, ಅಲಾಸ್ಕಾದ ಸೌಂದರ್ಯಲಹರಿಯಲ್ಲಿ ಕಳೆದುಹೋಗುವುದು ಖಚಿತ!

ಎಸ್.ಪಿ.ವಿಜಯಲಕ್ಷ್ಮಿಯವರ ಈ ಪ್ರವಾಸಕಥನವನ್ನು ಎಷ್ಟು ಬಾರಿ ಓದಿದರೂ ಹೊಸ ಹೊಸ ಸಂಗತಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ನಿಧಾನವಾಗಿ ಅನುಭವಿಸಿ ಓದುವಂಥ ಕೃತಿಯಿದು ಎಂದು ಖಂಡಿತವಾಗಿ ಹೇಳಬಲ್ಲೆ. ಇಂಥ ಅಪೂರ್ವ ಪ್ರವಾಸಕಥನವನ್ನು ಕನ್ನಡ ಸಾಹಿತ್ಯಲೋಕಕ್ಕೆ ಕೊಟ್ಟ ಹೆಮ್ಮೆಯ ಲೇಖಕಿಗೆ ಧನ್ಯವಾದಗಳು.

ಪುಸ್ತಕ: ನಕ್ಷತ್ರಗಳ ನೆಲದಲ್ಲಿ

ಲೇಖಕಿ:ಎಸ್.ಪಿ.ವಿಜಯಲಕ್ಷ್ಮಿ

ಪ್ರಥಮ ಮುದ್ರಣ : 2022

ಪುಟಗಳು : 308

ಬೆಲೆ : 300

ಮುದ್ರಕರು : ರೀಗಲ್ ಪ್ರಿಂಟರ್ಸ್

ಪ್ರಕಾಶಕರು : ವರ್ಣ ಪಬ್ಲಿಕೇಶನ್

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?