ಫ್ರಾನ್ಸಿಗೊಂದು ಪಯಣ
90ರ ದಶಕದ ಆರಂಭದಲ್ಲಿ ನಮ್ಮಲ್ಲಿ ಇನ್ನೂ ಮೆಟ್ರೋ ಆರಂಭವಾಗಿರಲಿಲ್ಲ. ಪ್ಯಾರಿಸ್‌ನಲ್ಲಿ ಅದಾಗಲೇ ಬೃಹತ್ ಮೆಟ್ರೋ ಜಾಲ ಇತ್ತು. ಲೇಖಕರು ಅದರಲ್ಲಿ ಸಂಚಾರ ಮಾಡುತ್ತಾ, ನೋಡಿ, ಅನುಭವಿಸಿದ ಖುಷಿಯ ವಿಷಯಗಳು ಪುಸ್ತಕದಲ್ಲಿ ಸಹಜವಾಗಿ ಮೂಡಿಬಂದಿವೆ. ಕಡಿಮೆ ದರದಲ್ಲಿ ಸಾಮಾನ್ಯ ಜನರಿಗೆ ಸಂಚಾರ ವ್ಯವಸ್ಥೆ ಒದಗಿಸಿಕೊಡುವ ಫ್ರೆಂಚರ ಧ್ಯೇಯವನ್ನು ಲೇಖಕರು ಮೆಚ್ಚಿಕೊಳ್ಳುತ್ತಾ, ನಮ್ಮಲ್ಲಿ ಅದೇಕೆ ಸಾಧ್ಯವಿಲ್ಲ ಎಂದು ಈ ಪುಸ್ತಕ ಬರೆಯುವಾಗ ನೊಂದುಕೊಂಡಿದ್ದರು. ಈಗ ನಮ್ಮಲ್ಲೂ ಮೆಟ್ರೋ ಓಡಾಡುತ್ತಿದೆ. ಆದರೆ ರಿಯಾಯಿತಿ ದರದಲ್ಲಿ ಅಲ್ಲ ಅಷ್ಟೇ!
- ರವಿಶಂಕರ ಶಾಸ್ತ್ರಿ, ದಂಬೆ
ಇಂಡೋ-ಫ್ರೆಂಚ್ ಕಲ್ಚರಲ್ ಎಕ್ಸ್‌ಚೇಂಜ್ ಪ್ರೋಗ್ರಾಮ್ ಅಡಿಯಲ್ಲಿ, ಫ್ರಾನ್ಸ್ ದೇಶಕ್ಕೆ ಪ್ರವಾಸ ಮಾಡಿದ ಕನ್ನಡದ ಹೆಸರಾಂತ ನಿರ್ದೇಶಕರಲ್ಲಿ ಒಬ್ಬರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಅನುಭವಗಳನ್ನು ‘ಅಯನ - ಫ್ರಾನ್ಸಿಗೊಂದು ಪಯಣ’ ಪುಸ್ತಕದಲ್ಲಿ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ನಲವತ್ತಕ್ಕೂ ಹೆಚ್ಚು ದೇಶಗಳನ್ನು ನೋಡಿದ್ದರೂ, ಇದು ಅವರ ಮೊದಲ ವಿದೇಶ ಪ್ರವಾಸ. ಟಿಕೆಟ್ ಬುಕ್ ಮಾಡುವುದು, ವೀಸಾ ಮಾಡಿಸುವುದರಿಂದ ಹಿಡಿದು, ತಮ್ಮೊಂದಿಗೆ ಪ್ರವಾಸಕ್ಕೆ ಬಂದಿದ್ದ ವಿಭಿನ್ನ ಮನಸ್ಥಿತಿಯ ಜನರ ಕಿರು ಪರಿಚಯವನ್ನು ಅವರು ನೀಡಿದ್ದು, ಇಡೀ ಪುಸ್ತಕ ನಮ್ಮನ್ನು ಲೇಖಕರ ನೆನಪಿನ ಲೋಕಕ್ಕೆ ಕರೆದೊಯ್ಯುತ್ತದೆ.

ದೀರ್ಘವಾದ ವಿಮಾನ ಪ್ರಯಾಣದಲ್ಲಿನ ಅನುಭವ, ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರನ್ನು ಫ್ರೆಂಚರು ಸ್ವಾಗತಿಸಿದ ಪರಿ, ಅವರ ಮನೆಯ ಸ್ಥೂಲ ಪರಿಚಯ, ಮನೆಯವರ ಸ್ವಭಾವ ಹೀಗೆ ಲೇಖಕರ ವಿವರಣೆ ಸಾಗುತ್ತದೆ. ಪ್ರವಾಸದ ಅಂಗವಾಗಿ ಅಲ್ಲಿನ ವೃದ್ಧಾಶ್ರಮಕ್ಕೆ ಭೇಟಿ, ಮುನಿಸಿಪಾಲಿಟಿ ಕಚೇರಿಯ ಭೇಟಿ ಮತ್ತು ಅಲ್ಲಿನ ವ್ಯವಸ್ಥೆಯ ಬಗ್ಗೆ ಬೆರಗು, ಭಾರತದಂತೆ ಸಂಪ್ರದಾಯದ ಕಟ್ಟುಪಾಡಿಲ್ಲದ ಜನಜೀವನ ಹೀಗೆ ತಾವು ಕಂಡ ವೈವಿಧ್ಯಮಯ ಬದುಕನ್ನು ನಮ್ಮ ಮುಂದೆ ತೆರೆದಿಡುತ್ತಾರೆ. ಗ್ರಂಥಾಲಯವೊಂದಕ್ಕೆ ಭೇಟಿ ನೀಡಿದಾಗ, ಅಲ್ಲಿನ ಅಚ್ಚುಕಟ್ಟು ವ್ಯವಸ್ಥೆಯನ್ನು ನೋಡಿ ಬೆರಗಾಗುತ್ತಾರೆ. ಅಲ್ಲಿನ ಕೃಷಿಯ ಪದ್ಧತಿ, ಕೃಷಿಕರ ಮನಸ್ಥಿತಿಯನ್ನು ಹಾಗೂ ತಂತ್ರಜ್ಞಾನದ ಬಳಕೆ ಇತ್ಯಾದಿಗಳನ್ನು ಭಾರತದೊಂದಿಗೆ ಹೋಲಿಸಿ ವಿಷಾದಿಸುತ್ತಾರೆ.
ಇಂಡೋ-ಫ್ರೆಂಚ್ ಗೆಟ್ ಟುಗೆದರ್ ನೆಪದಲ್ಲಿ ಭಾರತದ ಬಗ್ಗೆ ಬಂದ ಪ್ರಶ್ನೆಗಳಿಗೆ ಲೇಖಕರು ತಮ್ಮ ಖಚಿತ ಅಭಿಪ್ರಾಯಗಳನ್ನು ಹೇಳುತ್ತಾರೆ. ಅದರಲ್ಲಿ ಕೆಲವು ವಿಚಾರಗಳು ಭಾರತೀಯ ಸಂಪ್ರದಾಯಗಳಿಗೆ ಸಂಬಂಧಪಟ್ಟಿದ್ದು, ಲೇಖಕರ ಉತ್ತರವು ಸ್ವಲ್ಪ ಕಠಿಣವಾಗಿತ್ತು. ಭಾರತಕ್ಕೆ ಒಮ್ಮೆ ಭೇಟಿ ನೀಡಿದ್ದ ಮಹಿಳೆಯ ಅನಿಸಿಕೆಗಳು ಭಾರತೀಯತೆಯನ್ನು ಸಹಜ ಕುತೂಹಲದಿಂದ ನೋಡಿ, ಮೆಚ್ಚಿಕೊಂಡಿದ್ದನ್ನು ಲೇಖಕರು ವಿವರಿಸಿದ್ದಾರೆ.
ಇದನ್ನೂ ಓದಿ: ಈ ಲೈಬ್ರರಿಯಲ್ಲಿ ಪುಸ್ತಕಗಳ ಬದಲಿಗೆ ‘ಮನುಷ್ಯರೇ ಪುಸ್ತಕ’ಗಳಾಗಿರುತ್ತಾರೆ!
90ರ ದಶಕದ ಆರಂಭದಲ್ಲಿ ನಮ್ಮಲ್ಲಿ ಇನ್ನೂ ಮೆಟ್ರೋ ಆರಂಭವಾಗಿರಲಿಲ್ಲ. ಪ್ಯಾರಿಸ್‌ನಲ್ಲಿ ಅದಾಗಲೇ ಬೃಹತ್ ಮೆಟ್ರೋ ಜಾಲ ಇತ್ತು. ಲೇಖಕರು ಅದರಲ್ಲಿ ಸಂಚಾರ ಮಾಡುತ್ತಾ, ನೋಡಿ, ಅನುಭವಿಸಿದ ಖುಷಿಯ ವಿಷಯಗಳು ಪುಸ್ತಕದಲ್ಲಿ ಸಹಜವಾಗಿ ಮೂಡಿಬಂದಿವೆ. ಕಡಿಮೆ ದರದಲ್ಲಿ ಸಾಮಾನ್ಯ ಜನರಿಗೆ ಸಂಚಾರ ವ್ಯವಸ್ಥೆ ಒದಗಿಸಿಕೊಡುವ ಫ್ರೆಂಚರ ಧ್ಯೇಯವನ್ನು ಲೇಖಕರು ಮೆಚ್ಚಿಕೊಳ್ಳುತ್ತಾ, ನಮ್ಮಲ್ಲಿ ಅದೇಕೆ ಸಾಧ್ಯವಿಲ್ಲ ಎಂದು ಈ ಪುಸ್ತಕ ಬರೆಯುವಾಗ ನೊಂದುಕೊಂಡಿದ್ದರು. ಈಗ ನಮ್ಮಲ್ಲೂ ಮೆಟ್ರೋ ಓಡಾಡುತ್ತಿದೆ. ಆದರೆ ರಿಯಾಯಿತಿ ದರದಲ್ಲಿ ಅಲ್ಲ ಅಷ್ಟೇ!
ಪ್ಯಾರಿಸ್ ನಗರದ ಸಂಕೇತವೇ ಆಗಿರುವ ಐಫೆಲ್ ಟವರ್ ಬಗ್ಗೆ ನೀಡಿರುವ ವಿವರಣೆ ಮಜವಾಗಿದೆ. ಯಾಕೆ ಈ ಬೃಹತ್ ಟವರ್ ನಿರ್ಮಿಸಿರಬಹುದು ಎಂಬುದರಿಂದ ಆರಂಭಿಸಿ, ಅದರ ಎತ್ತರ ಮತ್ತಿತರ ವಿವರಗಳು, ಟವರ್ ಜತೆಗೆ ನಂಟು ಹಾಕಿದ ಇತರ ವಿಷಯಗಳು, ಜಗತ್ತಿನ ಅತಿ ಎತ್ತರದ ಇತರ ಟವರ್‌ಗಳ ಬಗ್ಗೆ ವಿವರಗಳನ್ನು ನೀಡಿದ್ದಾರೆ.
ಪ್ಯಾರಿಸ್ ನಗರದ ಇತಿಹಾಸದ ಬಗ್ಗೆ ಲೇಖಕರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಜತೆಗೆ ಹಳೆಯ ಪಾರಂಪರಿಕ ಕಟ್ಟಡಗಳನ್ನು ಇದ್ದಂತೆಯೇ ಉಳಿಸಿಕೊಳ್ಳುವ, ಮುಂದಿನ ಪೀಳಿಗೆಗೆ ಕಾಪಾಡಿಕೊಳ್ಳುವ ಫ್ರೆಂಚರ ಮನಸ್ಥಿತಿಯನ್ನು ಮೆಚ್ಚಿಕೊಂಡಿದ್ದಾರೆ.

ವಿಶ್ವವಿಖ್ಯಾತ 'ಲೂವ್ರ್' ಮ್ಯೂಸಿಯಂ ಬಗ್ಗೆ ವಿವರಿಸುತ್ತಾ, ಮೊನಾಲಿಸಾ ಚಿತ್ರದ ಬಗ್ಗೆ ಇರುವ ಕ್ರೇಜ್ ಬಗ್ಗೆ ಅಚ್ಚರಿಪಡುತ್ತಾ, ಅದರ ಪಕ್ಕದಲ್ಲೇ ಇರುವ ಇತರ ಅತ್ಯುತ್ತಮ ಚಿತ್ರಗಳ ಜನರಿಗೆ ಅಷ್ಟಾಗಿ ಗಮನವಿರುವುದಿಲ್ಲ ಎಂಬುದನ್ನು ಹೇಳಲು ಮರೆತಿಲ್ಲ. ಜತೆಗೆ ಹೊಸ ತಲೆಮಾರಿನ ಚಿತ್ರಗಳ ಸಂಗ್ರಹವಿರುವ ಓರ್ಸಾಯ್ ಮ್ಯೂಸಿಯಂ ಬಗ್ಗೆಯೂ ವಿವರಗಳನ್ನು ನೀಡಿದ್ದಾರೆ. ಕೊನೆಗೆ ಪಿಕಾಸೋ, ಫ್ಯಾಶನ್ ಶೋ, ವಿಮಾನ ರಿಪೇರಿ ಮಾಡುವ ಗ್ಯಾರೇಜ್, ನಾಟ್ರೆಡ್ಯಾಮ್ ಮತ್ತಿತರ ಚರ್ಚುಗಳ ಬಗ್ಗೆ, ಅಪೇರಾ ಬಗ್ಗೆ ಸಣ್ಣ ವಿವರಣೆಗಳೊಂದಿಗೆ ಪುಸ್ತಕ ಕೊನೆಯಾಗುತ್ತದೆ.
ಒಟ್ಟಾರೆಯಾಗಿ, ಫ್ರಾನ್ಸ್ ದೇಶದ ಹಳ್ಳಿಯ ನಿಧಾನ ಜೀವನ ಮತ್ತು ನಗರದ ಓಟದ ಜೀವನದ ವಿವಿಧ ಮಜಲುಗಳನ್ನು ಲೇಖಕರು ನಮಗೆ ಪರಿಚಯಿಸುವುದರಲ್ಲಿ ಸಫಲರಾಗಿದ್ದಾರೆ. ಸಾಂಪ್ರದಾಯಿಕ ಭಾರತ ಮತ್ತು ಆ ದೇಶದ ಆಧುನಿಕ ಜೀವನವನ್ನು ಅಲ್ಲಲ್ಲಿ ಹೋಲಿಸುತ್ತಾ, ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಕುಳಿತಲ್ಲಿಂದಲೇ ಫ್ರಾನ್ಸ್ ದೇಶದ ವಿವಿಧ ಮಜಲುಗಳನ್ನು ಅನುಭವಿಸುವಂತೆ ಮಾಡುವಲ್ಲಿ ಈ ಪುಸ್ತಕ ಸಫಲವಾಗಿದೆ. ಲೇಖಕರ ಆ ಪ್ರವಾಸವು ಇಂದಿಗೆ ಮೂವತ್ತೈದು ವರ್ಷಗಳಿಗಿಂತಲೂ ಹಳೆದಾದ ಕಾರಣ, ಈಗಿನ ಮತ್ತು ಆಗಿನ ಫ್ರಾನ್ಸ್ ಒಂದೇ ರೀತಿ ಇದೆಯೇ ಎಂಬುದನ್ನು ಇತ್ತೀಚೆಗೆ ಆ ದೇಶಕ್ಕೆ ಹೋದವರಷ್ಟೇ ಹೇಳಬಲ್ಲರು!
--
ಪುಸ್ತಕ: ಅಯನ - ನನ್ನ ಗ್ರಹಿಕೆಯ ಫ್ರಾನ್ಸ್
ಲೇಖಕ: ನಾಗತಿಹಳ್ಳಿ ಚಂದ್ರಶೇಖರ
ಪ್ರಕಾಶಕರು: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ
ಪುಟಗಳು: 152
ಬೆಲೆ: 140 ರು.
ಮೊದಲನೆಯ ಮುದ್ರಣ: ಆಗಸ್ಟ್ 1991