Saturday, July 11, 2026
Saturday, July 11, 2026

ಕೊಲಾಬಾದಲ್ಲಿ ಸಿಕ್ಕಿದ್ದು ಕಿತಾಬ್‌ ಖಾನಾ

ಕೊಲಾಬಾದಲ್ಲಿ ಅರ್ಧ ದಿನವಿಡೀ ಸುತ್ತಾಡಿದ ನಂತರ ನನಗೆ ಸಿಕ್ಕಿದ್ದು ಕಿತಾಬ್‌ ಖಾನಾ ಎಂಬ ಅಪರೂಪದ ಪುಸ್ತಕದ ಅಂಗಡಿ. ಒಳಗೆ, ಹೊರಗೆ ಹೆಚ್ಚೂಕಮ್ಮಿ ಮರದಿಂದಲೇ ನಿರ್ಮಾಣವಾಗಿರುವ ಈ ಅಂಗಡಿ ಭಾರತದ ಅತ್ಯಂತ ಸುಂದರ ಪುಸ್ತಕದ ಅಂಗಡಿಗಳಲ್ಲಿ ಒಂದು. ಇಲ್ಲಿ ಹೋಗಿ ಕೊಂಡುಕೊಂಡ ಕ್ಲಾಸಿಕ್‌ ಪುಸ್ತಕಗಳಿಗಿಂತ ಇಲ್ಲಿನ ಕ್ಲಾಸಿಕ್‌ ಅನುಭವವೇ ಹೆಚ್ಚು ನೆನಪಿನಲ್ಲುಳಿದಿದೆ!

  • ಸಿರಿ ಮೈಸೂರು

ಮೈಸೂರಿನ ರಾಜವೈಭವ, ವಿಶಾಲವಾದ ರಸ್ತೆಗಳು, ನಿಧಾನಗತಿಯ ಜೀವನಶೈಲಿಯಲ್ಲೇ ಹುಟ್ಟಿ ಬೆಳೆದ ನನಗೆ ಮಹಾನಗರಗಳು ಎಂದರೆ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಇದು ಕೈಗೆಟುಕದ ದ್ರಾಕ್ಷಿ ಹುಳಿ ಎಂಬ ಧೋರಣೆಯಾ? ಗೊತ್ತಿಲ್ಲ. ಆದರೂ ಬಹಳ ವರ್ಷಗಳಿಂದಲೂ ನನಗೆ ಮುಂಬಯಿ ಮಹಾನಗರಿ ಎಂದರೆ ಅದೇನೋ ಸೆಳೆತ. ಯಾರ ಬಾಯಿಂದಲಾದರೂ ಮುಂಬಯಿ ಎಂದು ಕೇಳಿದರೆ ಖುಷಿಯೋ ಖುಷಿ! ಇದಕ್ಕೆ ಬಹುಪಾಲು ಕಾರಣ ನನ್ನ ಪ್ರಕಾರ ಕಡಲತೀರದ ಭಾರ್ಗವ ಶಿವರಾಮ ಕಾರಂತರ ಕಾದಂಬರಿಗಳು ಇರಬಹುದು. ಒಮ್ಮೆಯಾದರೂ ಮುಂಬಯಿಗೆ ಹೋಗಬೇಕು, ನಾರಿಮನ್‌ ಪಾಯಿಂಟ್‌ನಲ್ಲಿ ಕಡಲತೀರದಲ್ಲಿ ಕುಳಿತು ಸೂರ್ಯಾಸ್ತ ಸವಿಯಬೇಕು ಎಂದು ಬಹಳ ವರ್ಷಗಳಿಂದ ಅಂದುಕೊಳ್ಳುತ್ತಿದ್ದೆ. ಆ ಕನಸು ಇತ್ತೀಚೆಗೆ ನನಸಾಗಿತ್ತು.

ಇದನ್ನೂ ಓದಿ:ಕನಸಿನ ನಗರಿ ಮುಂಬೈನಲ್ಲಿ ಅದ್ಭುತ ಬೀಚ್‌ಗಳು!

ನಾನು ಮೊದಲ ಬಾರಿ ಮುಂಬಯಿಗೆ ಹೋಗುವಾಗ ಅದೆಷ್ಟು ಉತ್ಸುಕಳಾಗಿದ್ದೆ ಎಂದು ಹೇಳತೀರದು. ಮುಂಬಯಿ ಮಹಾನಗರ ನೋಡಲು ಮನಸು ಕಾತುರವಾಗಿತ್ತು. ಏರ್‌ಪೋರ್ಟ್‌ನಿಂದ ಹೊರಬಂದಾಗ ಕಂಡಿದ್ದು ಕೊನೆಯಿಲ್ಲದ ಟ್ರಾಫಿಕ್.‌ ನಾನು ಉಳಿದುಕೊಂಡಿದ್ದು ಅಂಧೇರಿಯಲ್ಲಿ. ಹಾಗಾಗಿ ಇಲ್ಲಿ ಮುಂಬಯಿಯ ಸ್ವಾದಕ್ಕಿಂತ ಹೆಚ್ಚಾಗಿ ಅನುಭವಕ್ಕೆ ಬಂದಿದ್ದು ಶ್ರಮದ ಸ್ವಾದ. ನಾನು ಉಳಿದಿದ್ದ ಜಾಗದ ಸುತ್ತ ಫ್ಯಾಕ್ಟರಿಗಳು, ಕಾರ್ಮಿಕರು, ಸಣ್ಣಪುಟ್ಟ ಹೊಟೇಲ್‌ಗಳು ಮಾತ್ರ ಇದ್ದವು. ಮುಂಬಯಿಗೆ ಬರುವ ಮುನ್ನವೇ ಏನೇನು ಮಾಡಬೇಕೆಂದು ಯೋಚಿಸಿಕೊಂಡು ಬಂದಿದ್ದೆ. ಮೊದಲೆರಡು ದಿನ ಬೇರೆ ಕೆಲಸಗಳಲ್ಲಿ ಕಳೆದುಹೋಯಿತಾದರೂ ಮಧ್ಯೆ ಜುಹು ಬೀಚ್‌ನಲ್ಲಿ ಸೂರ್ಯಾಸ್ತ ನೋಡುವ ಖುಷಿ, ಜುಹುವಿನ ಕೆಫೆಗಳಲ್ಲಿನ ನವ ಮುಂಬಯಿಯ ಜೀವನಶೈಲಿಯನ್ನು ಆಸ್ವಾದಿಸುವ ಅವಕಾಶ, ಅರಬ್ಬೀ ಸಮುದ್ರ ವಿಹಂಗಮ ನೋಟ ಕಾಣಿಸುತ್ತಿದ್ದ ರೆಸ್ಟೋರೆಂಟ್‌ನಲ್ಲಿ ಚಂದ್ರನ ಬೆಳಕಿನಲ್ಲಿ ಊಟ ಮಾಡಿದ ವಿಶೇಷ ಅನುಭವವೂ ನನ್ನದಾಯಿತು. ಇದರ ಮಧ್ಯೆ ತಲೆನೋವು ಅನಿಸಿದ್ದು ಮಾತ್ರ ಅದೆಷ್ಟು ದೂರ ಹೋದರೂ ಮುಗಿಯದೆ ಉಳಿಯುತ್ತಿದ್ದ ಮುಂಬಯಿಯ ಟ್ರಾಫಿಕ್.‌

Q (9)

ಕೊಲಾಬದ ಸುತ್ತ

ಹೋದ ಕೆಲಸ ಮುಗಿದ ದಿನವೇ ನಾನು ಹೊರಟಿದ್ದು ಕೊಲಾಬಾಗೆ. ಕೊಲಾಬಾದಲ್ಲಿ ಬ್ರಿಟಿಷರ ಕಾಲದ ಬಹಳಷ್ಟು ಕಟ್ಟಡಗಳಿವೆ. ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ನಂತೆ ಇನ್ನೂ ಸಾಕಷ್ಟು ಅದ್ಭುತ ಪುರಾತನ ಕಟ್ಟಡಗಳನ್ನು ಕೊಲಾಬಾದಲ್ಲಿ ನೋಡಬಹುದು. ಉತ್ತರ ಮುಂಬಯಿಗೂ ದಕ್ಷಿಣ ಮುಂಬಯಿಗೂ ಅಜಗಜಾಂತರವಿದೆ ಎಂಬುದಂತೂ ಎಲ್ಲರಿಗೂ ತಿಳಿದ ಸಂಗತಿ. ಕೊಲಾಬಾದಲ್ಲಿ ಅರ್ಧ ದಿನವಿಡೀ ಸುತ್ತಾಡಿದ ನಂತರ ನನಗೆ ಸಿಕ್ಕಿದ್ದು ಕಿತಾಬ್‌ ಖಾನಾ ಎಂಬ ಅಪರೂಪದ ಪುಸ್ತಕದ ಅಂಗಡಿ. ಒಳಗೆ, ಹೊರಗೆ ಹೆಚ್ಚೂಕಮ್ಮಿ ಮರದಿಂದಲೇ ನಿರ್ಮಾಣವಾಗಿರುವ ಈ ಅಂಗಡಿ ಭಾರತದ ಅತ್ಯಂತ ಸುಂದರ ಪುಸ್ತಕದ ಅಂಗಡಿಗಳಲ್ಲಿ ಒಂದು. ಇಲ್ಲಿ ಹೋಗಿ ಕೊಂಡುಕೊಂಡ ಕ್ಲಾಸಿಕ್‌ ಪುಸ್ತಕಗಳಿಗಿಂತ ಇಲ್ಲಿನ ಕ್ಲಾಸಿಕ್‌ ಅನುಭವವೇ ಹೆಚ್ಚು ನೆನಪಿನಲ್ಲುಳಿದಿದೆ! ಇದರೊಂದಿಗೆ ಕೊಲಾಬಾದಲ್ಲಿರುವ ಪ್ರಸಿದ್ಧ ಥಿಯೋಬ್ರೋಮಾ ಕೆಫೆಯಲ್ಲಿ ಬ್ರೌನಿ ಸವಿದಿದ್ದೂ ಆಯಿತು. ಕೊಲಾಬಾ ಕಾಸ್‌ವೇನಲ್ಲಿ ಸ್ಟ್ರೀಟ್‌ ಶಾಪಿಂಗ್‌ ಮಾಡಿದ್ದೂ ಆಯಿತು. ಇಲ್ಲಿನ ಶಾಪಿಂಗ್‌ನಲ್ಲಿ ಸಿಕ್ಕ ಬಟ್ಟೆಗಳು, ಬ್ಯಾಗ್‌ಗಳು, ಚಪ್ಪಲಿಗಳು, ಓಲೆ-ಸರಗಳು ಅದೆಷ್ಟು ಚೆಂದವಾಗಿದ್ದವೆಂದರೆ, ಕೊಲಾಬಾ ಶಾಪಿಂಗ್‌ಗೆ ಏಕೆ ಪ್ರಸಿದ್ಧ ಎಂದು ನನಗೆ ತಿಳಿದಿದ್ದೇ ಆ ದಿನ.

ತಾಜ್‌ ಎಂಬ ಮಾಯಾಲೋಕ

ಹೊಟೇಲ್‌ ತಾಜ್‌ ಮಹಲ್‌ ಪ್ಯಾಲೇಸ್‌ ಭಾರತದ ಅತ್ಯಂತ ಐಷಾರಾಮಿ ಹೊಟೇಲ್‌ಗಳಲ್ಲಿ ಒಂದು. ಮುಂಬಯಿಯಲ್ಲಿ ನಡೆದ 26/11 ದುರಂತದ ಸ್ಥಳ ಇದೇ. ಗೇಟ್‌ವೇ ಆಫ್‌ ಇಂಡಿಯಾದ ಮುಂದೆಯೇ ಎದೆಯೊಡ್ಡಿ ನಿಂತಿರುವ ಈ ಅದ್ಭುತ ಪುರಾತನ ಕಟ್ಟಡದೊಳಗೆ ಹೋಗಿ ಟೀ ಸವಿದು ನಂತರ ಸಮುದ್ರ ತೀರದಲ್ಲಿ ನಡೆದಾಡುತ್ತಾ ಉಕ್ಕಿ ಬರುವ ಅಲೆಗಳನ್ನು ಕಣ್ತುಂಬಿಕೊಳ್ಳುತ್ತಾ ತಾಜ್‌ ಮಹಲ್‌ ಪ್ಯಾಲೆಸ್‌ನ ಫೊಟೋಗಳನ್ನು ತೆಗೆಯುವಾಗ ಅನಿಸಿದ್ದು, ಮುಂಬೈ ಮಹಾನಗರ ಯಾವ ಪ್ರವಾಸಿ ತಾಣಕ್ಕೂ ಕಡಿಮೆಯಿಲ್ಲ!

Q (10)

ಮುಂಬೈನ ನಾರಿಮನ್‌ ಪಾಯಿಂಟ್‌ನಲ್ಲಿ ನದಿದಡದಲ್ಲಿ ಕುಳಿತು ಸೂರ್ಯಾಸ್ತ ನೋಡುವ ನನ್ನ ಪುಟ್ಟ ಕನಸು ಆಗಲೇ ಹೇಳಿದಂತೆ ಬಹಳ ಹಳೆಯದ್ದು. ಈವರೆಗೂ ಎರಡು ಬಾರಿ ಆ ರೀತಿಯ ಸೂರ್ಯಾಸ್ತವನ್ನು ಕಣ್ಣುಂಬಿಕೊಂಡಿದ್ದೇನೆ. ವಿಶಾಲವಾದ ಸಮುದ್ರ, ಸಮುದ್ರದಾಚೆಗೆ ಗಗನಚುಂಬಿ ಕಟ್ಟಡಗಳು, ಇತ್ತ ತಿರುಗಿ ನೋಡಿದರೆ ಮಹಾನಗರಿಯ ರಸ್ತೆಗಳ ನೋಟ. ಸಮುದ್ರದ ದಂಡೆಯುದ್ದಕ್ಕೂ ಜನವೋ ಜನ. ಏನೂ ಚಿಂತಿಯಿಲ್ಲದೆ ಆ ಕ್ಷಣವನ್ನು ಸವಿಯುತ್ತಾ ಆಟವಾಡುತ್ತಿರುವ ಮಕ್ಕಳು, ಬದುಕಿನ ಬವಣೆಗಳ ನಡುವೆಯೂ ಸೂರ್ಯಾಸ್ತ ನೋಡಲು ಬಂದಿರುವವರು, ಹೊಸ ಕನಸುಗಳನ್ನು ಕಟ್ಟುತ್ತಿರುವ ಯುವಕ-ಯುವತಿಯರು, ಸ್ನೇಹಿತರೊಂದಿಗೆ ಮೋಜು ಮಾಡುತ್ತಾ ಸಂಜೆಯನ್ನು ಸವಿಯುತ್ತಿರುವವರು, ಕಡಲತಡಿಯಲ್ಲಿ ಕುಳಿತು ನೋವು ಮರೆಯಲು ಬಂದಿರುವ ಒಂಟಿ ಜನರು, ಮೊದಲ ಬಾರಿಗೆ ಈ ನೋಟವನ್ನು ಬೆರಗುಗಣ್ಣಿನಿಂದ ನೋಡುತ್ತಿರುವ ನನ್ನಂಥ ಪ್ರವಾಸಿಗರು, ಈ ದೃಶ್ಯ ಅಷ್ಟೇನೂ ವಿಶೇಷವಲ್ಲ ಎಂಬಂತೆ ತಮ್ಮ ಪಾಡಿಗೆ ತಾವು ಕೆಲಸ ಮುಗಿಸಿ ಮನೆಗೆ ಹೊರಡುತ್ತಿರುವ ಸ್ಥಳೀಯರು, ಟೀ ಮತ್ತು ತಿನಿಸುಗಳನ್ನು ಮಾರುವವರು ಎಲ್ಲವೂ ಕಣ್ಣಿಗೆ ಬೀಳುತ್ತಿದ್ದವು. ಒಂದು ಕಡಲತೀರ ಅದೆಷ್ಟು ರೀತಿಗಳಲ್ಲಿ ಬದುಕಿನ ವಿವಿಧ ಮಜಲುಗಳನ್ನು ಕಟ್ಟಿಕೊಡುತ್ತದೆ ಎಂದು ನೆನಪಿಸಿಕೊಂಡು ಮನಸು ಸೋಜಿಗದೆಡೆಗೆ ಓಡುತ್ತದೆ. ಸೂರ್ಯ ಮುಖ ಕೆಂಪಗೆ ಮಾಡಿಕೊಂಡು ಮುಳುಗುತ್ತಿರುವಂತೆ ನಗರದ ಪ್ರತಿ ಕಟ್ಟಡವೂ ದೇದೀಪ್ಯಮಾನವಾಗಿ ಪ್ರಜ್ವಲಿಸುತ್ತದೆ. ಮುಂಬೈ ನಿಜಕ್ಕೂ ಮಾಯಾನಗರಿ!

ಮುಂಬೈನ ಎರಡು ಭೇಟಿಗಳಲ್ಲಿ ಇಲ್ಲಿನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನ, ಕಡಲತೀರದ ಸೂರ್ಯಾಸ್ತ, ಸ್ಟ್ರೀಟ್‌ ಶಾಪಿಂಗ್‌, ಜುಹು ಹಾಗೂ ಬಾಂದ್ರಾದ ಸಿನಿಮೀಯತೆ, ರುಚಿಕರ ವಡಾಪಾವ್‌, ಸ್ಥಳೀಯರ ಆತ್ಮೀಯತೆ ಹಾಗೂ ಸುರಕ್ಷತಾ ಭಾವವನ್ನು ನಾನು ಅನುಭವಿಸಿದ್ದೇನೆ. ಮುಂಬೈ ಎಂದಿಗೂ ಮಲಗುವುದಿಲ್ಲ. ಅಷ್ಟೊಂದು ಕೋಟಿ ಜನರ ಕನಸನ್ನು ನನಸು ಮಾಡಬೇಕಾದ ಈ ಸಿಟಿ ಆಫ್‌ ಡ್ರೀಮ್ಸ್‌ ಮಲಗಿಬಿಟ್ಟರೆ ಕಥೆಯೇನು! ಈ ಮಾಯಾನಗರಿ ನನ್ನನ್ನು ಮೊದಲ ಭೇಟಿಗೆ ಮುನ್ನ ಹೇಗೆ ಸೆಳೆಯುತ್ತಿತ್ತೋ ಈಗಲೂ ಹಾಗೆಯೇ ಸೆಳೆಯುತ್ತದೆ. ಮತ್ತೆ ಮತ್ತೆ ಮುಂಬೈಗೆ ಹೋಗಬೇಕೆನ್ನುತ್ತದೆ ಮನಸು. ʻಹಾಗೆಲ್ಲಾ ಅನಿಸೋಕೆ ಅದೇನು ಪ್ರವಾಸಿ ಸ್ಥಳವೇ?ʼ ಎನ್ನಬೇಡಿ. ಏಕೆಂದರೆ ಮತ್ತೆ ಮತ್ತೆ ಬೇಕೆನಿಸುವ ಅನುಭವವೇ ನನ್ನ ಪ್ರಕಾರ ನಿಜವಾದ ಪ್ರವಾಸ!

ದಾರಿ ಹೇಗೆ?

ಬೆಂಗಳೂರಿನಿಂದ ಮುಂಬಯಿಗೆ ನೇರ ಬಸ್‌ ಸಂಚಾರ ವ್ಯವಸ್ಥೆ ಇದೆ. ಮುಂಬಯಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ದೇಶ ವಿದೇಶಗಳಿಂದ ವಿಮಾನ ಸಂಚಾರ ಸೌಲಭ್ಯ ಹೊಂದಿದೆ. ಅಲ್ಲಿಂದ ಪ್ರವಾಸಿ ತಾಣಗಳಿಗೆ ತಲುಪಲು ಸ್ಥಳಿಯ ವಾಹನಗಳನ್ನು ಬಳಸಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ