Sunday, July 12, 2026
Sunday, July 12, 2026

ಆಲಯ....ಮೇಘಾಲಯ

ಸ್ಥಳೀಯರು ʻನಾನ್-ಪೋಲ್ಕ್’ ಎಂದು ಕರೆಯುವ ಈ ನೂರು ವರ್ಷಗಳ ಹಳೆಯ ಮಾನವ ನಿರ್ಮಿತ ಸರೋವರ, ಬ್ರಿಟಿಷ್ ಅಧಿಕಾರಿ ಸರ್ ವಿಲಿಯಂ ವಾರ್ಡ್ಸ್ ಅವರ ಹೆಸರು ಹೊತ್ತಿದೆ. ಹಸಿರು ಲಾನ್, ಪೈನ್ ಮರಗಳು, ಬಣ್ಣ ಬಣ್ಣದ ಹೂಗಿಡಗಳು, ಸರೋವರದಲ್ಲಿ ಈಜುವ ಬಾತುಕೋಳಿಗಳು, ಮಧ್ಯದ ಹಳೆಯ ಮರದ ಸೇತುವೆ — ಗ್ರೀಟಿಂಗ್ ಕಾರ್ಡ್ ಪೋಸ್ಟರ್‌ನಂತೆ ಭಾಸವಾಯಿತು.

  • ರೂಪಾ ಗುರುರಾಜ್

ಪ್ರವಾಸ ಅಂದ್ರೆ ಏನು? ಕೆಲವರಿಗೆ ದೇವಸ್ಥಾನ ದರ್ಶನ, ಮತ್ತೆ ಕೆಲವರಿಗೆ ರೆಸಾರ್ಟ್‌ನಲ್ಲಿ ಮೈಮರೆಯುವುದು, ಇನ್ನು ಕೆಲವರಿಗೆ ಜಾಗಗಳ ಪಟ್ಟಿ ಟಿಕ್ ಮಾಡ್ತಾ ಹೋಗೋದು ಅಥವಾ ಟ್ರೆಕ್ಕಿಂಗ್‌ನ ದೈಹಿಕ ಸವಾಲು. ಪ್ರವಾಸದಲ್ಲೇ ಎಷ್ಟೊಂದು ವಿಧಗಳು!

ನನಗೆ ಮಾತ್ರ ಪ್ರವಾಸ ಅಂದ್ರೆ ಯಾರ ಜತೆ ಹೋಗ್ತಿದೀನಿ ಅನ್ನೋದು ಮುಖ್ಯ. ಫೋನ್‌ನಲ್ಲಿ ಮಾತಾಡಿ, ಟೆಕ್ಸ್ಟ್ ಮಾಡಿ ತಣಿಯದ ಖುಷಿ ಪ್ರವಾಸದ ಒಡನಾಟದಲ್ಲಿ ಸಿಗುತ್ತದೆ. ಇಡೀ ದಿನ ಜತೆಯಲ್ಲಿದ್ದು,ರಾತ್ರಿ ಹರಟೆ ಹೊಡೆಯೋ ಆ ಸಮಯ ಬೇರೆಲ್ಲೂ ಸಿಗೋದಿಲ್ಲ. ಹೀಗಾಗಿ ಎಲ್ಲಿಗೆ ಹೋಗ್ತಿದ್ದೇನೆ ಅನ್ನೋದಕ್ಕಿಂತ, ಎಷ್ಟು ದಿನ, ಯಾರ ಜತೆ-ಇದೇ ನನ್ನ ಸಂಭ್ರಮ.

ಇದನ್ನೂ ಓದಿ:ಮೇಘಾಲಯದ ಈ ಸೇತುವೆ ಬೀಳೋದಲ್ಲ ಬೆಳೆಯೋದು

ಈ ಮೇಘಾಲಯ ಪ್ರವಾಸ ಯಾವುದೇ ದೊಡ್ಡ ಪ್ಲ್ಯಾನಿಂಗ್‌ನಿಂದ ಹುಟ್ಟಿದ್ದಲ್ಲ. ಕಚೇರಿ ಗಡುವು, ಕೊನೆ ಗಳಿಗೆ ಪ್ಯಾಕಿಂಗ್, ಹತ್ತು ದಿನದ ಕೆಲಸ ಮುಂಚಿತ ಮುಗಿಸಿ ಹೊರಡುವ ಧಾವಂತ. ಆದರೆ ಈ ಇಡೀ ಟ್ರಿಪ್ ಅದ್ಭುತವಾಗಿ ರೂಪುಗೊಂಡದ್ದು ನಮ್ಮ ಆತ್ಮೀಯ ಸ್ನೇಹಿತರ ಮಗಳು ನಿತ್ಯಳಿಂದ. ಹಲವಾರು ತಿಂಗಳು ವೆಬ್‌ಸೈಟ್ ತಡಕಾಡಿ, ಟ್ರಾವೆಲ್ ಏಜೆಂಟ್‌ಗಳ ಜತೆಗೆ ಮಾತಾಡಿ, ಬೆಸ್ಟ್ ಪ್ರೈಸ್ ಹುಡುಕಿ ಹತ್ತು ದಿನದ ಐಟಿನರಿ ರೆಡಿ ಮಾಡಿದ ಅವಳಿಗೇ ಈ ಪ್ರವಾಸದ ಸಂಪೂರ್ಣ ಶ್ರೇಯ.

ಇಲ್ಲೊಂದು ಎಡವಟ್ಟು ಹೇಳಲೇಬೇಕು. 15ರ ಬೆಳಗಿನ ಜಾವ ಐದೂವರೆಗೆ ಫ್ಲೈಟ್, ಅಂದ್ರೆ 14ರ ಮಧ್ಯರಾತ್ರಿಯೇ ಹೊರಡಬೇಕು. ಆದ್ರೆ ನಾನು 15ರ ರಾತ್ರಿ ತನಕ ಟೈಮ್ ಇದೆ ಅಂತ ಆರಾಮಾಗಿದ್ದೆ! ಸ್ನೇಹಿತೆ ಗೌರಿ ಎಚ್ಚರಿಸಿದಾಗ ಒಂದು ದಿನ ಕಳೆದುಕೊಂಡ ಅರಿವಾಗಿ ಭರಭರ ಸಿದ್ಧವಾದೆ. ಅಪರೂಪಕ್ಕೆ ಫ್ಲೈಟ್ ಜರ್ನಿ ಮಾಡುವವರು ಈ ಮಧ್ಯರಾತ್ರಿ ಟಿಕೆಟ್ ಲೆಕ್ಕಾಚಾರ ಸರಿಯಾಗಿ ಮಾಡ್ಕೋಬೇಕು. ಇಲ್ಲವಾದ್ರೆ ದೇವ್ರೇ ಗತಿ!

ಐದು ಜನ ಅಂತೂ ಏರ್‌ಪೋರ್ಟ್ ತಲುಪಿ ವಿಮಾನ ಹತ್ತಿದಾಗ ನಿರಾಳ. ಆಕಾಶಕ್ಕೆ ಹಾರಿದ ತಕ್ಷಣ ದಿನನಿತ್ಯದ ಆಯಾಸ ಆವಿಯಾಗಿ ನಿದ್ದೆ ಹತ್ತಿದ್ದೇ ಗೊತ್ತಾಗಲಿಲ್ಲ. ಕಣ್ಣು ಬಿಟ್ಟಾಗ ಬಿಳಿ ಬಿಳಿ ಮೋಡಗಳ ಸಾಲು. ಮೇಘಾಲಯ ಹತ್ತಿರವಾಗುತ್ತಿದೆ ಅನ್ನೋ ಹುರುಪು!

ಗುವಾಹಟಿ ವಿಮಾನ ನಿಲ್ದಾಣ ಇಳಿಯುತ್ತಿದ್ದಂತೆ ಮಜುಲಿ ಕಲಾಕೃತಿಗಳು, ಬೆತ್ತದ ಕಲಾಕೃತಿಗಳು, ತೂಗುದೀಪಗಳು ಈಶಾನ್ಯ ಭಾರತದ ಸಂಸ್ಕೃತಿಗೆ ಮುನ್ನುಡಿ ಬರೆದಂತಿತ್ತು. ಚಾಲಕ ಅನಿಲ್ ಕಾಯುತ್ತಿದ್ದ. ಶಿಲ್ಲಾಂಗ್ ಕಡೆ ಪ್ರಯಾಣ ಶುರುವಾಯಿತು. ಹೆದ್ದಾರಿ ಅಗಲವಾಗಿದ್ದು, ಚೆನ್ನಾಗಿ ಮೇಂಟೇನ್ ಆಗಿದೆ. ಆದರೆ ಅದರ ಆಚೆ-ಈಚೆ ಹತ್ತಾರು ಕಿಲೋಮೀಟರ್ ತನಕ ಪ್ಲಾಸ್ಟರಿಂಗ್ ಹಂತದಲ್ಲಿ ನಿಂತ ಅಪೂರ್ಣ ಕಟ್ಟಡಗಳು ಕಾಣಿಸುತ್ತಿದ್ದವು. ಏನಿರಬಹುದು ಕಾರಣ ಎಂದು ಯೋಚಿಸುತ್ತಿರುವಾಗಲೇ ತಂಗಾಳಿ ಬೀಸಿ ಮಲೆನಾಡಿನಂಥ ವಾತಾವರಣ ಶುರುವಾಗಿ ಮನಸು ಅಲ್ಲೇ ನಿಂತುಬಿಟ್ಟಿತು.

Q (12)

ಉಮಿಯಂ ಸರೋವರ — ಕಣ್ಣಿಗೆ ಹಬ್ಬ

ಮೇಘಾಲಯದ ನಿಜವಾದ ದೃಶ್ಯ ವೈಭವ ಪರಿಚಯವಾದದ್ದು ಇಲ್ಲಿ. ಕಣ್ಣು ಹಾಯಿಸಿದಷ್ಟೂ ನೀಲಿ ನೀರು, ಸುತ್ತ ಹಸಿರು. ಮನಸು ತುಂಬಿ ಬಂತು. ಬೋಟಿಂಗ್‌ಗೆ ಒಂದು ಗಂಟೆ ಕಾಯಬೇಕಾಯ್ತು; ಬೆಂಗಳೂರಿನ ಆತುರದ ಬದುಕು ಮರೆತ ನಮಗೆ ಆ ಕಾಯುವಿಕೆ ವರದಂತಿತ್ತು. ಅಲ್ಲಿ ಒಂದು ಯುವ ಮ್ಯೂಸಿಕ್ ಬ್ಯಾಂಡ್ ನುಡಿಸುತ್ತಿತ್ತು. ಭಾಷೆ ಅರ್ಥವಾಗದಿದ್ದರೂ ಭಾವ ಮನಸು ತಟ್ಟಿತು. ಅವರಿಗೆ ಎರಡು ಕೈ ಚಾಚಿ ಗೌರವದಿಂದ ಹಣ ನೀಡಿ ಕೈ ಮುಗಿದಾಗ, ಆ ಗಾಯಕನ ಕಣ್ಣಲ್ಲಿ ಮಿಂಚು. ಆ ಕ್ಷಣ ಮನಸಿನಲ್ಲಿ ಅಚ್ಚಳಿಯದೆ ಉಳಿಯಿತು.

Q (11)

ಡಾನ್ ಬಾಸ್ಕೋ ಮ್ಯೂಸಿಯಂ — ಏಳು ಅಂತಸ್ತಿನ ಅದ್ಭುತ

ಶಿಲ್ಲಾಂಗ್‌ನ ಹಸಿರು ಬೆಟ್ಟದ ಮಡಿಲಲ್ಲಿ ಷಡ್ಭುಜಾಕೃತಿಯ ಗೋಪುರದಂತೆ ತಲೆ ಎತ್ತಿ ನಿಂತಿರುವ ಈ ಮ್ಯೂಸಿಯಂ ಕೇವಲ ವಸ್ತುಸಂಗ್ರಹಾಲಯವಲ್ಲ; ಈಶಾನ್ಯ ಭಾರತದ ಏಳು ರಾಜ್ಯಗಳ (ಸೆವೆನ್ ಸಿಸ್ಟರ್ಸ್) ಜೀವಂತ ಆತ್ಮ. ಪ್ರತಿ ಅಂತಸ್ತೂ ಬುಡಕಟ್ಟು ಜನಾಂಗದ ಉಡುಪು, ಆಭರಣ, ಆಯುಧ, ಕರಕುಶಲ ವಸ್ತುಗಳ ಮೂಲಕ ಆ ಜನರ ಪ್ರಕೃತಿಬದ್ಧ ಸರಳ ಜೀವನವನ್ನು ಕಣ್ಣಿಗೆ ಕಟ್ಟುತ್ತದೆ. 500 ವರ್ಷಗಳ ಬ್ರಿಟಿಷ್ ಮತ್ತು ಕ್ರೈಸ್ತ ಪ್ರಭಾವ ಇದ್ದರೂ, ಈ ಜನ ತಮ್ಮ ಮೂಲ ಪರಂಪರೆ ಕಾಪಾಡಿಕೊಂಡು ಬಂದಿರುವ ರೀತಿ ಮನ ಆರ್ದ್ರಗೊಳಿಸುತ್ತದೆ.

ಮೇಲ್ಚಾವಣಿಯ ಸ್ಕೈ ವಾಕ್‌ನಿಂದ ಶಿಲ್ಲಾಂಗ್ ನಗರ ಕಾಣುತ್ತದೆ. ಅಲ್ಲೇ ಪಕ್ಕದ ಹೋಂ ಥಿಯೇಟರ್‌ನಲ್ಲಿ ಈಶಾನ್ಯ ಭಾರತೀಯರ ಕಿರುಚಿತ್ರ ನೋಡಿದಾಗ ’ನಾವೆಷ್ಟು ವಿಭಿನ್ನವಾಗಿದ್ದರೂ ಸಾಂಸ್ಕೃತಿಕವಾಗಿ ಒಂದೇ’ ಅನ್ನೋ ಭಾವ ಎದೆಯಾಳದಲ್ಲಿ ಅಚ್ಚೊತ್ತುತ್ತದೆ. ಮ್ಯೂಸಿಯಂ ಹೊರಗೆ ಅರಳಿದ್ದ ಪೆರುವಿಯನ್ ಲಿಲಿ ಹೂವುಗಳ ಮಧ್ಯೆ ಫೊಟೋ ತೆಗೆಸಿಕೊಳ್ಳಲು ಪಟ್ಟ ಪಾಡು ಮತ್ತು ನಗು — ಆ ನೆನಪು ಇನ್ನೂ ಮನಸಲ್ಲಿ ಹಸಿಯಾಗಿದೆ.

Q (13)

ವಾರ್ಡ್ಸ್ ಸರೋವರ — ಸಂಜೆಯ ಸ್ವರ್ಗ

ಮ್ಯೂಸಿಯಂನ ಏಳು ಅಂತಸ್ತು ಹತ್ತಿ ಇಳಿದು ಆಯಾಸಗೊಂಡಿದ್ದ ನಮಗೆ ಡ್ರೈವರ್ ’ಇನ್ನೊಂದು ಜಾಗ ನೋಡೋಣ’ ಅಂದಾಗ ಅನ್ಯ ಮನಸ್ಕರಾಗಿಯೇ ಒಪ್ಪಿಕೊಂಡೆವು. ಆದರೆ ಅಲ್ಲಿ ಕಂಡ ದೃಶ್ಯ ಬೆಳಗಿನ ಆಯಾಸ ಮರೆಸಿಬಿಟ್ಟಿತು.

ಸ್ಥಳೀಯರು ’ನಾನ್-ಪೋಲ್ಕ್’ ಎಂದು ಕರೆಯುವ ಈ ನೂರು ವರ್ಷಗಳ ಹಳೆಯ ಮಾನವ ನಿರ್ಮಿತ ಸರೋವರ, ಬ್ರಿಟಿಷ್ ಅಧಿಕಾರಿ ಸರ್ ವಿಲಿಯಂ ವಾರ್ಡ್ಸ್ ಅವರ ಹೆಸರು ಹೊತ್ತಿದೆ. ಹಸಿರು ಲಾನ್, ಪೈನ್ ಮರಗಳು, ಬಣ್ಣ ಬಣ್ಣದ ಹೂಗಿಡಗಳು, ಸರೋವರದಲ್ಲಿ ಈಜುವ ಬಾತುಕೋಳಿಗಳು, ಮಧ್ಯದ ಹಳೆಯ ಮರದ ಸೇತುವೆ — ಗ್ರೀಟಿಂಗ್ ಕಾರ್ಡ್ ಪೋಸ್ಟರ್‌ನಂತೆ ಭಾಸವಾಯಿತು. ಪರ್ಪಲ್ ಜಕರಾಂಡ ಹೂಗಳು ಇಡೀ ಪರಿಸರವನ್ನು ನೇರಳೆ ಬಣ್ಣದಲ್ಲಿ ತೊಯ್ದಿದ್ದವು.

ಪಾರ್ಕ್ ಸುತ್ತುತ್ತಾ ಮನಸೂರೆಗೊಳ್ಳುವ ಪೇಂಟಿಂಗ್ ಮಾಡುತ್ತಿದ್ದ ಕಲಾವಿದನ ಬಳಿ ಒಂದಷ್ಟು ಬುಕ್‌ಮಾರ್ಕ್ ಕೊಂಡೆವು. ಅಷ್ಟರಲ್ಲಿ ಸಂಜೆಯ ತುಂತುರು ಮಳೆ ಶುರು. ಎತ್ತರದ ಕೆಫೆಟೀರಿಯಾದಲ್ಲಿ ಕುಳಿತು ಸರೋವರ ನೋಡುತ್ತ ಹಬೆಯಾಡುವ ಮಾಂಚಾವ್ ಸೂಪ್, ಮೊಮೊಸ್, ಫ್ರೈಡ್ ರೈಸ್ ತಿನ್ನುವಾಗ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ನೆನಪಾದ.

ಶಿಲ್ಲಾಂಗ್ ನಗರ ಕಣ್ತುಂಬಿಕೊಳ್ಳುತ್ತ ತಲುಪಿದ ’ಟ್ರೀ ಟಾಪ್’ ಹೊಟೇಲ್ — ಗುಡ್ಡದ ಮೇಲಿನ ಹೊಟೇಲ್, ಎರಡನೆಯ ಅಂತಸ್ತಿನ ರೂಮು, ಲಿಫ್ಟ್ ಇಲ್ಲ! ಕಾರಿನಿಂದ ಇಳಿದಾಗ ಲಗೇಜ್ ಹೊತ್ತು ನಡೆಯುವ ಚಿಂತೆ ಆಗುತ್ತಿರುವಾಗಲೇ, ಹೊಟೇಲ್ ಸಿಬ್ಬಂದಿ ಹುಡುಗರು ಲವಲವಿಕೆಯಿಂದ ಓಡಿ ಬಂದು ನಮ್ಮ ಲಗೇಜ್ ಹಿಡಿದು ಗುಡ್ಡ ಹತ್ತಿದರು. ಎಷ್ಟು ಚೂಟಿ ಹುಡುಗರು ಅಂತ ಮನಸಲ್ಲೇ ಅಂದುಕೊಳ್ಳುತ್ತ ನಿದ್ದೆಗೆ ಜಾರಿದ್ದೆ. ಮರುದಿನದ ಪ್ರವಾಸಕ್ಕೆ ರೆಡಿಯಾಗಬೇಕಿತ್ತಲ್ಲ!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ