Thursday, September 10, 2026
Thursday, September 10, 2026

ಕಡಲ ತೀರದ ಭಾರ್ಗವ ಬರೆದ ಪ್ರವಾಸ ಕಥನ

ಹಳೆಯ ಕಾಲದ ದಿಲ್ಲಿಯ ವಿವರಣೆಯನ್ನು ಲೇಖಕರು ಚೆನ್ನಾಗಿಯೇ ಕಟ್ಟಿಕೊಟ್ಟಿದ್ದಾರೆ. ಕೆಂಪು ಕೋಟೆ, ಮೊಘಲರ ಅರಮನೆ, ಮೋತಿ ಮಸೀದಿ, ಬಿರ್ಲಾ ಮಂದಿರ, ಇಬ್ರಾಹಿಂ ಲೋದಿಯ ಸಮಾಧಿ, ಕುತುಬ್ ಮಿನಾರ್ ಹೀಗೆ ಐತಿಹಾಸಿಕ ಸ್ಥಳಗಳ ವೀಕ್ಷಣೆ ಮತ್ತು ಜತೆಗಿನ ಸ್ವಾರಸ್ಯಗಳನ್ನು ಬಣ್ಣಿಸಿದ್ದಾರೆ.

  • ರವಿಶಂಕರ ಶಾಸ್ತ್ರಿ, ದಂಬೆ

ಪುಸ್ತಕದ ಹೆಸರು: ಆಬೂವಿಂದ ಬರಾಮಕ್ಕೆ

ಲೇಖಕರು: ಡಾ. ಕೆ. ಶಿವರಾಮ ಕಾರಂತ

ವಿತರಕರು: ಸಪ್ನ ಬುಕ್ ಹೌಸ್

ಪ್ರಥಮ ಮುದ್ರಣ: 1950

ಬೆಲೆ: ₹140

'ಕಡಲ ತಡಿಯ ಭಾರ್ಗವ' ಡಾ. ಶಿವರಾಮ ಕಾರಂತರು, ಉತ್ತರ ಭಾರತದ ತಮ್ಮ ಪ್ರವಾಸದ ಅನುಭವವನ್ನು 1950ರಷ್ಟು ಹಿಂದೆಯೇ ಬರೆದ ಪುಸ್ತಕ 'ಆಬೂವಿಂದ ಬರಾಮಕ್ಕೆ. ' ವಿವಿಧ ತಾಣಗಳ ಬಗ್ಗೆ ವಿವರಿಸುವ ಹತ್ತು ವೈಧ್ಯಮಯ ಅಧ್ಯಾಯಗಳು ಇದರಲ್ಲಿವೆ. ಜತೆಗೆ, ಅವರೇ ತೆಗೆದಂಥ ಛಾಯಾಚಿತ್ರಗಳು ಪ್ರವಾಸಕಥನದ ಅಂದವನ್ನು ಹೆಚ್ಚಿಸಿವೆ. ಈ ಪ್ರವಾಸವು ಸುಮಾರು 75 ವರ್ಷಕ್ಕೂ ಹಿಂದಿನದ್ದಾಗಿದ್ದು, ಆ ಕಾಲದ ರೈಲು, ಬಸ್ಸು ಪ್ರಯಾಣದ ಅನುಭವ, ಊಟ-ತಿಂಡಿಯ ವಿವರಗಳೂ ಅಲ್ಲಲ್ಲಿ ಬಂದು ಹೋಗಿವೆ. ಇಂದು ಇವುಗಳಲ್ಲೆಲ್ಲ ಬಹಳಷ್ಟು ಬದಲಾವಣೆ ಆಗಿರಬಹುದಾದರೂ, ಹಿಂದಿನ ಕಾಲದ ವಿವರಗಳನ್ನು ತಿಳಿದುಕೊಳ್ಳಲು ಮತ್ತು ಒಬ್ಬ ಶ್ರೇಷ್ಠ ಬರಹಗಾರನ ದೃಷ್ಟಿಯಿಂದ ನೋಡಲು ಈ ಪುಸ್ತಕವು ನೆರವಾಗುತ್ತದೆ.

ಮುಂಬಯಿಯಿಂದ ರೈಲಿನಲ್ಲಿ ಆಬೂ ತನಕ ಪ್ರಯಾಣ ಮಾಡುವುದರೊಂದಿಗೆ ಕಥನವು ಆರಂಭವಾಗುತ್ತದೆ. ರೈಲಿನಲ್ಲಿನ (ಅ)ವ್ಯವಸ್ಥೆ, ಸಹಪ್ರಯಾಣಿಕರು, ದಾರಿಯಲ್ಲಿನ ದೃಶ್ಯ ವೈಭವ - ಹೀಗೆ ಪುಸ್ತಕವು ನಮ್ಮನ್ನು ಪ್ರವಾಸದ ಮನಸ್ಥಿತಿಗೆ ಅಣಿಗೊಳಿಸುತ್ತಾ ಹೋಗುತ್ತದೆ. ಆಬೂ ಬೆಟ್ಟದ ಮೇಲಿನ ಹವಾಮಾನದಿಂದ ತೊಡಗಿ, ವಿವಿಧ ಜೈನ ದೇವಾಲಯಗಳು ಮತ್ತು ಅವುಗಳ ಐತಿಹಾಸಿಕ ವಿವರಗಳು, ಪ್ರವಾಸಿಗರು ಮಾಡಿದ ಅವಾಂತರಗಳು ಇತ್ಯಾದಿಗಳನ್ನು ಕಾರಂತರು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.

ಇದನ್ನೂ ಓದಿ: ಓದುಗರ ನಾಲಗೆಗೆ ರುಚಿ ಹತ್ತಿಸುವ, ಹೊಟ್ಟೆ ತುಂಬಿಸುವ 'ಬುಕ್ಸ್ ಫಾರ್ ಕುಕ್ಸ್'!

ಮುಂದಿನ ಪ್ರವಾಸಿ ಸ್ಥಳ- ಅಜ್ಮೀರ. ಅಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ 'ಕೊಪ್ಪರ' ಎಂಬ ಕುಟುಂಬವನ್ನು ಕೃತಜ್ಞತೆಯಿಂದ ನೆನೆಸಿಕೊಂಡಿದ್ದಾರೆ. ರಾಜರ ಕಾಲದ ಕಾಲೇಜು- ಹಾಸ್ಟೆಲ್, ಸ್ವಚ್ಛತೆಯಿಲ್ಲದ ನಗರದ ಗಲ್ಲಿಗಳು, ಜೈನ ಮಂದಿರ, ದರ್ಗಾ ಇವೆಲ್ಲವನ್ನು ತಮ್ಮದೇ ಶೈಲಿಯಿಂದ ವರ್ಣಿಸಿದ್ದಾರೆ. ಪುಷ್ಕರವನ್ನು ನೋಡಲು ಹೋಗಿ ಬರುವಾಗ, ಸರಿಯಾಗಿ ಬಸ್ಸು ಸಿಗದೆ ಬಹಳಷ್ಟು ದೂರ ನಡೆಯಬೇಕಾಗಿದ್ದನ್ನು ರಸವತ್ತಾಗಿ ಬಣ್ಣಿಸಿದ್ದಾರೆ.

ಮುಂದೆ ಜೈಪುರದ ನಗರದ ವರ್ಣನೆಯಿದೆ. ಅಲ್ಲಿನ ಬಿಸಿಲು, ಬಣ್ಣ- ಬಣ್ಣದ ಉಡುಗೆ- ತೊಡುಗೆಗಳು, ಅಂಬೇರವೆಂಬ ಪಟ್ಟಣದಲ್ಲಿನ ಅರಮನೆ, ಗುಡಿ ಇತ್ಯಾದಿಗಳ ವಿವರಗಳು ಚೆನ್ನಾಗಿವೆ. ಜಂತರ್ ಮಂತರದಲ್ಲಿರುವ ವಿವಿಧ ಸಲಕರಣೆಗಳನ್ನು ವಿವರಿಸುತ್ತಾ, ನಮ್ಮ ಪೂರ್ವಜರ ಜ್ಞಾನವನ್ನು ಮೆಚ್ಚಿಕೊಳ್ಳುತ್ತಾರೆ. ಕೊನೆಗೆ ಅಲ್ಲಿನ ಸಾಂಪ್ರದಾಯಿಕ ನೃತ್ಯವನ್ನು ನೋಡಿ ಜೈಪುರದ ಪ್ರವಾಸ ಮುಗಿಸಿ ದೆಹಲಿಗೆ ಹೊರಡುತ್ತಾರೆ.

ಹಳೆಯ ಕಾಲದ ದಿಲ್ಲಿಯ ವಿವರಣೆಯನ್ನು ಲೇಖಕರು ಚೆನ್ನಾಗಿಯೇ ಕಟ್ಟಿಕೊಟ್ಟಿದ್ದಾರೆ. ಕೆಂಪು ಕೋಟೆ, ಮೊಘಲರ ಅರಮನೆ, ಮೋತಿ ಮಸೀದಿ, ಬಿರ್ಲಾ ಮಂದಿರ, ಇಬ್ರಾಹಿಂ ಲೋದಿಯ ಸಮಾಧಿ, ಕುತುಬ್ ಮಿನಾರ್ ಹೀಗೆ ಐತಿಹಾಸಿಕ ಸ್ಥಳಗಳ ವೀಕ್ಷಣೆ ಮತ್ತು ಜತೆಗಿನ ಸ್ವಾರಸ್ಯಗಳನ್ನು ಬಣ್ಣಿಸಿದ್ದಾರೆ.

ಇದನ್ನೂ ಓದಿ: ಬುಲವಾಯೋದ ವಿಶಾಲ ಬೀದಿಗಳು ಮತ್ತು ಕಾಲದ ಹೆಜ್ಜೆಗುರುತುಗಳು

ಶಿಮ್ಲಾ ಒಂದು ಬೆಟ್ಟಗುಡ್ಡಗಳ ಪ್ರದೇಶ. ಅಲ್ಲಿನ ಅಂಕುಡೊಂಕಿನ ಹಾದಿ, ಜನಜೀವನ, ಕಡಿದಾದ ಬೆಟ್ಟಗಳ ನಡುವೆ ಅಲ್ಲಿನ ನಿವಾಸಿಗಳು ಶ್ರಮಪಟ್ಟು ಪುಟ್ಟ-ಪುಟ್ಟ ಹೊಲಗಳಲ್ಲಿ ಬೆಳೆಗಳನ್ನು ಬೆಳೆಯುವುದು, ರಮಣೀಯವಾದ ಪರಿಸರ, ಅಪಾರವಾದ ಚಳಿ, ನಡೆದೇ ಹೋಗಬೇಕಾದ ಇಳಿಜಾರು ಪ್ರದೇಶಗಳು ಹೀಗೆ ಎಲ್ಲವನ್ನೂ ರಸವತ್ತಾಗಿ ಬಣ್ಣಿಸಿದ್ದಾರೆ. ತಾವು ವಿಹರಿಸಿದ ಪ್ರದೇಶಗಳ ವಿವರಣೆಯನ್ನು ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದು, ಈಗಿನ ಕಾಲದಲ್ಲಿ ಅವುಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗಿರಬೇಕು!

ಆಗ್ರಾ ಮತ್ತು ಕಾಶಿಗಳ ಬಗ್ಗೆ ಕುತೂಹಲಕಾರಿಯಾಗಿ ಬರೆದಿದ್ದಾರೆ. ಕುತುಬ್ ಮಿನಾರಿನ ಭವ್ಯತೆಯ ಬಗ್ಗೆ ಅಚ್ಚರಿಪಡುತ್ತಾ, ಕಾಶಿಯ ವಿವಿಧ ಆಚರಣೆ, ಅಗಾಧತೆಗಳನ್ನು ಬೆರಗಿನಿಂದ ನೋಡುತ್ತಾರೆ. ದಾಲ್ಮಿಯಾ ನಗರದ ಸಿಮೆಂಟ್ ಮತ್ತು ಕಾಗದ ಕಾರ್ಖಾನೆಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿಯನ್ನು ಗಮನಿಸಿ, ಅದರ ವಿವರಗಳನ್ನು ನಮೂದಿಸಿದ್ದಾರೆ. ಜತೆಗೆ, ಸಿಮೆಂಟ್ ಮತ್ತು ಕಾಗದ ತಯಾರಿಯ ಕೆಲವೊಂದು ತಾಂತ್ರಿಕ ವಿವರಗಳೂ ಓದುಗರಿಗೆ ಲಭ್ಯ. ಜತೆಯಲ್ಲಿಯೇ, ಅಲ್ಲಿ ದುಡಿಯುವ ಕಾರ್ಮಿಕರ ಮನಸ್ಥಿತಿ ಮತ್ತು ಉದ್ದಿಮೆದಾರರ ಲಾಲಸೆಯನ್ನೂ ಟೀಕಿಸದೆ ಬಿಡುವುದಿಲ್ಲ.

ನಾಲ್ಕು ದಿನಗಳ ಕೊಲ್ಕತ್ತಾ ಪ್ರವಾಸದ ವಿವಿಧ ಅನುಭವಗಳು ರಸವತ್ತಾಗಿವೆ. ಅಲ್ಲಿ ತಮ್ಮನ್ನು ಬರಮಾಡಿಕೊಂಡ ಮಿತ್ರರ ವಿವರಣೆಯಿಂದ ತೊಡಗಿ, ಅಲ್ಲಿನ ಮೃಗಾಲಯದಲ್ಲಿರುವ ವಿವಿಧ ಪ್ರಕಾರಗಳ ಪ್ರಾಣಿ- ಪಕ್ಷಿಗಳ ವಿವರ, ನ್ಯಾಷನಲ್ ಲೈಬ್ರೆರಿಯ ಅಪಾರ ಪುಸ್ತಕಗಳ ಸಂಗ್ರಹ, ರಾಮಕೃಷ್ಣ ಮಿಷನ್, ಪಟ್ಟಣದ ಇತರ ಮುಖ್ಯಭಾಗಗಳ ಭೇಟಿ ಅಪಾರವಾದ ವಿವರಣೆಯನ್ನು ಹೊಂದಿದೆ. ಇವೆಲ್ಲವೂ ನಮಗೆ ಆ ಕಾಲದ ಕೊಲ್ಕತ್ತಾ ನಗರದ ಸುಂದರವಾದ ಪರಿಚಯವನ್ನು ಮಾಡಿಕೊಡುತ್ತದೆ.

ಇದನ್ನೂ ಓದಿ: ಲೆಸ್‌ ಲಗೇಜ್‌... ಈ ಪುಸ್ತಕ ಜತೆಗಿದ್ದರೆ ವಿದೇಶ ಪ್ರವಾಸ ಸುಲಭ

ಕೊಲ್ಕತ್ತಾದಿಂದ ವಿಮಾನ ಪ್ರಯಾಣದ ಮೂಲಕ ಅಸ್ಸಾಮಿಗೆ ಬರುತ್ತಾರೆ. ಮಿತ್ರರ ಮೂಲಕ ಬರಾಮ ಮತ್ತಿತರ ಪ್ರದೇಶಗಳ ಭೇಟಿಯಾಗುತ್ತದೆ. ಹಳ್ಳಿಯ ಜನಜೀವನ, ಸಂಪ್ರದಾಯಗಳು, ಕೃಷಿ, ಆಹಾರ- ವಿಹಾರ, ಗುಡ್ಡ- ಬೆಟ್ಟಗಳ ವಿವರಗಳು ಯಥೇಚ್ಛವಾಗಿ ಬರುತ್ತವೆ. ವಿಮಾನದ ಮರುಪ್ರಯಾಣದ ಮೂಲಕ ತಮ್ಮ ಊರನ್ನು ಸೇರಿಕೊಳ್ಳುತ್ತಾರೆ.

ಈ ಪುಸ್ತಕದುದ್ದಕ್ಕೂ ಗಮನಿಸಬಹುದಾದ ಅಂಶವೆಂದರೆ, ಹೋದ ಎಲ್ಲ ಊರಿನಲ್ಲೂ ಕಾರಂತರನ್ನು ಬರಮಾಡಿಕೊಳ್ಳಲು ಮಿತ್ರರು ಇದ್ದರು. ಆಯಾಯ ಊರಿನ ವಿಶೇಷಗಳನ್ನು ನೋಡಲು ಮತ್ತು ಜನಜೀವನವನ್ನು ಅರಿಯಲು ಅವರ ಮಿತ್ರರು ವ್ಯವಸ್ಥೆಯನ್ನು ಮಾಡುತ್ತಿದ್ದರು, ಇದು ಲೇಖಕರಿಗೆ ತಮ್ಮ ಮಿತ್ರರೊಂದಿಗೆ ಇದ್ದ ಅನೂಹ್ಯ ಸಂಬಂಧವನ್ನು ತೋರಿಸುತ್ತದೆ. ತಾವು ಹೋದೆಡೆಯೆಲ್ಲ ಲೇಖಕರು ಅಲ್ಲಿನ ಜನರ ಜತೆಗೆ ಬೆರೆಯಲು, ಅವರ ಜೀವನದ ರೀತಿನೀತಿಗಳನ್ನು ಅರಿಯಲು ಬಯಸುತ್ತಿದ್ದರು. ಅದರ ಮೂಲಕ ಆಯಾಯ ಪ್ರದೇಶಗಳ ಸಂಸ್ಕೃತಿಯ ಪರಿಚಯವು ಓದುಗರಿಗೆ ದೊರೆಯುವಂತೆ ಮಾಡಿದ್ದಾರೆ. ತಮ್ಮ ಜತೆಗಿನ ಕ್ಯಾಮೆರಾದಲ್ಲಿ ಉತ್ತಮವಾಗಿ ಚಿತ್ರಗಳನ್ನು ಸೆರೆಹಿಡಿದಿದ್ದಾರೆ, ಅವುಗಳಲ್ಲಿ ಪ್ರಮುಖವಾದುವುಗಳನ್ನು ಪುಸ್ತಕದ ಕೊನೆಯಲ್ಲಿ ಕೊಡಲಾಗಿದೆ. ಈ ಕೃತಿಯು ಸುಮಾರು 75 ವರ್ಷಗಳ ಹಿಂದಿನದ್ದಾಗಿದ್ದು, ಅಂದಿನ ಜನಜೀವನವನ್ನು ನಮಗೆ ಸ್ಥೂಲವಾಗಿ ಪರಿಚಯ ಮಾಡಿಕೊಡುತ್ತದೆ. ಒಟ್ಟಿನಲ್ಲಿ, ಬಹಳಷ್ಟು ವರ್ಷಗಳ ಮೊದಲು ಪ್ರಕಟವಾದ ಈ ಪುಸ್ತಕವು ನಮ್ಮನ್ನು ಅಂದಿನ ಕಾಲಕ್ಕೆ ಒಯ್ಯಲು ಶಕ್ತವಾಗಿದೆ ಎಂದೇ ಹೇಳಬಹುದು. ಅಲ್ಲದೇ, ಕಾರಂತರ ಬರವಣಿಗೆಯ ಶೈಲಿಯನ್ನು ಅರಿಯಲೂ ನೆರವಾಗುತ್ತದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?