Friday, August 21, 2026
Friday, August 21, 2026

ಲೆಸ್‌ ಲಗೇಜ್‌... ಈ ಪುಸ್ತಕ ಜತೆಗಿದ್ದರೆ ವಿದೇಶ ಪ್ರವಾಸ ಸುಲಭ

ಕಳೆದ 25 ವರ್ಷಗಳಲ್ಲಿ 50ಕ್ಕೂ ಹೆಚ್ಚು ದೇಶಗಳನ್ನು ಸುತ್ತಿರುವ ಡಾ. ಗುರುಪ್ರಸಾದ್ ಅವರ ಸರ್ವ ಅನುಭವಗಳು ಈ ಪುಸ್ತಕದ 20 ಅಧ್ಯಾಯಗಳಲ್ಲಿ ಮೂಡಿಬಂದಿವೆ. ವಿದೇಶ ಪ್ರಯಾಣ ಮಾಡಲು ಯೋಜನೆ ಹಾಕಿದ ದಿನದಿಂದ ವಿದೇಶ ಪ್ರಯಾಣ ಮುಗಿಯುವವರೆಗೆ ನಾವು ಏನೆಲ್ಲಾ ತಯಾರಿ ಮಾಡಬೇಕು ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ.

  • ಸುಜೀತ್‌ ಕಾಮತ್‌

ಅನಾದಿ ಕಾಲದಿಂದಲೂ ಮಾನವ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಮಾಡುತ್ತಲೇ ಇದ್ದಾನೆ. ಅದು ಜೀವನೋಪಾಯ ಅಥವಾ ತೀರ್ಥ ಯಾತ್ರೆಗೇ ಆಗಿರಬಹುದು. ಇತ್ತೀಚಿನ ದಿನಗಳಲ್ಲಿ ತನ್ನ ಬಂಧು ಬಾಂಧವರ ಜತೆಗೆ ಇರಲಿಕ್ಕೂ ಆಗಿರಬಹುದು. ಒಂದು ಕಾಲದಲ್ಲಿ ಒಂದು ಪ್ರಾಂತ್ಯದ, ಒಂದು ದೇಶದ ಒಳಗೆ ಇರುತ್ತಿದ್ದ ಈ ಪ್ರಯಾಣ ಇತ್ತೀಚಿನ ದಿನಗಳಲ್ಲಿ ಜಗತ್ತಿನ ಹೆಚ್ಚೂಕಮ್ಮಿ ಎಲ್ಲಾ ದೇಶಗಳಿಗೂ ವಿಸ್ತರಿಸಿದೆ. ಪ್ರಯಾಣ ಅಂದರೆ ಸುಲಭ ಅಲ್ಲ. ಅದಕ್ಕೆ ತಕ್ಕ ತಯಾರಿ ಬೇಕಾಗುತ್ತದೆ. ಹಿಂದೆ ವಸತಿ ಸೌಕರ್ಯಗಳೂ ಇಲ್ಲದ ಕಾಲದಲ್ಲಿ ಪ್ರಯಾಣ ಅಂದರೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಹೊತ್ತುಕೊಂಡು ಆಳು- ಕಾಳುಗಳ ಜತೆ ಹೋಗುವುದಾಗಿತ್ತು. ಇಂದು ಅಂಥ ಸ್ಥಿತಿ ಇಲ್ಲದಿದ್ದರೂ, ತಯಾರಿಯಂತೂ ಆಗಲೇಬೇಕು.

ಇದನ್ನೂ ಓದಿ: ಎ ರಿಯಲ್ ಪೇನ್

ಡಾ.ಡಿ.ವಿ. ಗುರುಪ್ರಸಾದ್ ಅವರು ಸದಾ ಚಲನಶೀಲರು. ವೃತ್ತಿಯಲ್ಲಿದ್ದಾಗ ವೃತ್ತಿ ಪ್ರಯುಕ್ತ ದೇಶ- ವಿದೇಶಗಳನ್ನು ಸಂದರ್ಶಿಸಿದ್ದಾರೆ. ನಿವೃತ್ತಿಯ ಬಳಿಕವೂ ಅದನ್ನೇ ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ವಿವಿಧ ದೇಶಗಳನ್ನು ಸಂದರ್ಶಿಸಿದ ತಮ್ಮ ಅನುಭವಗಳನ್ನು ಈಗಾಗಲೇ ಅನೇಕ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಇಂಥ ದೇಶಗಳನ್ನು ಸಂದರ್ಶಿಸುವಾಗ ತಾವು ಮಾಡಿಕೊಂಡ ಸಿದ್ಧತೆ, ಪ್ರವಾಸದಲ್ಲಿ ತಮಗಾದ ಸಿಹಿ- ಕಹಿ ಅನುಭವಗಳು, ತಮ್ಮಂತೆಯೇ ಪ್ರಯಾಣ ಮಾಡುವವರಿಗೆ ಸದಾ ಸಿಹಿ ಅನುಭವವೇ ಆಗಲಿ ಎನ್ನುವ ಅವರ ಕಳಕಳಿಯ ಪರಿಣಾಮವೇ ಅವರ ಈ ʻಲೆಸ್ ಲಗೇಜ್ʼ ಪುಸ್ತಕ. ಸಪ್ನಾ ಬುಕ್‌ ಹೌಸ್ ಅವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.

Untitled design (7)

ಕಳೆದ 25 ವರ್ಷಗಳಲ್ಲಿ 50ಕ್ಕೂ ಹೆಚ್ಚು ದೇಶಗಳನ್ನು ಸುತ್ತಿರುವ ಡಾ. ಗುರುಪ್ರಸಾದ್ ಅವರ ಸರ್ವ ಅನುಭವಗಳು ಈ ಪುಸ್ತಕದ 20 ಅಧ್ಯಾಯಗಳಲ್ಲಿ ಮೂಡಿಬಂದಿವೆ. ಈ ಪುಸ್ತಕ ನನಗೆ ಆತ್ಮೀಯವಾಗಲು ಕಾರಣ ಅವರಿಗೆ ಆದ ಹೆಚ್ಚಿನ ಅನುಭವಗಳು ನನಗೂ ಆಗಿವೆ. ಕೆಲವು ಸ್ವಂತ ತಪ್ಪಿನಿಂದ, ಕೆಲವು ಬೇರೆಯವರ ಅಸಡ್ಡೆಯಿಂದ ಇನ್ನೂ ಕೆಲವು ವಿಧಿ ವಿಲಾಸದಿಂದ.

ವಿದೇಶ ಪ್ರಯಾಣ ಮಾಡಲು ಯೋಜನೆ ಹಾಕಿದ ದಿನದಿಂದ ವಿದೇಶ ಪ್ರಯಾಣ ಮುಗಿಯುವವರೆಗೆ ನಾವು ಏನೆಲ್ಲಾ ತಯಾರಿ ಮಾಡಬೇಕು ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ.

ಪುಸ್ತಕದಲ್ಲಿನ ವಿಷಯಗಳು:

  • ಪಾಸ್ ಪೋರ್ಟ್ ಯಾಕೆ ಬೇಕು
  • ವೀಸಾ ಅಂದರೆ ಏನು? ಅದರ ಉಗಮ ಹೇಗಾಯಿತು?
  • ಕಡಿಮೆ ಖರ್ಚಿನಲ್ಲಿ ವಿಮಾನದ ಟಿಕೆಟ್ ಹೇಗೆ ಖರೀದಿ ಮಾಡಬಹುದು
  • ವಿದೇಶಕ್ಕೆ ಹೋಗಲು ನಾವು ನಮ್ಮ ವಸ್ತುಗಳನ್ನು ಪ್ಯಾಕ್ ಮಾಡುವಾಗ ಯಾವುದರ ಕುರಿತು ಎಚ್ಚರಿಕೆ ವಹಿಸಬೇಕು? ಏನೆಲ್ಲ ತೆಗೆದುಕೊಂಡು ಹೋಗಬೇಕು , ಹೋಗಬಾರದು.
  • ಇಮ್ಮಿಗ್ರೇಷನ್ ಕ್ಲಿಯರೆನ್ಸ್ ಅಂದರೆ ಏನು?
  • ಬೋರ್ಡಿಂಗ್ ಪಾಸ್ ಅಂದರೆ ಏನು? ಬೋರ್ಡಿಂಗ್ ಪಾಸ್ ಇದ್ದರೂ ಕೆಲವೊಮ್ಮೆ ನಮಗೆ ಪ್ರಯಾಣ ಮಾಡಲು ಏಕೆ ಸಾಧ್ಯ ಆಗುವುದಿಲ್ಲ?
  • ತುಂಬಾ ದೂರ ಪ್ರಯಾಣ ಮಾಡುವಾಗ ವಿಮಾನದಲ್ಲಿ ಏನನ್ನು ಸೇವಿಸಬೇಕು? ಎಷ್ಟು ಸಮಯ ನಿದ್ದೆ ಮಾಡಬೇಕು? ನಮಗೆ ಬೇಕಾದ ಆಹಾರ ಸಿಗಲು ಏನು ಮಾಡಬೇಕು?
  • ವಿದೇಶದಲ್ಲಿ ವಾಸ್ತವ್ಯಕ್ಕೆ ಬಂಧು ಬಾಂಧವರ, ಸ್ನೇಹಿತರ ಮನೆ ಇಲ್ಲದಿದ್ದರೆ, ಹೊಟೇಲ್, ಸರ್ವಿಸ್ ವಸತಿ ಹೇಗೆ ಬುಕ್ ಮಾಡಬಹುದು? ಅದರಲ್ಲಿಯೂ ಹೇಗೆ ಉಳಿತಾಯ ಮಾಡಬಹುದು? ಏರ್‌ಬಿಎನಬಿ ಅಂದರೆ ಏನು? ವಸತಿ ಬುಕ್ ಮಾಡುವಾಗ ಯಾವುದೆಲ್ಲ ವಿಷಯ ಮನಸಿನಲ್ಲಿ ಇಟ್ಟು ಕೊಳ್ಳಬೇಕು.
  • ವಿದೇಶದಲ್ಲಿ ಪ್ರಯಾಣ ಮಾಡುವಾಗ ಅಲ್ಲಿನ ಸಾರ್ವಜನಿಕ ಸಾರಿಗೆ ಹೇಗೆ ಜಾಣ್ಮೆಯಿಂದ ಉಪಯೋಗಿಸಬಹುದು?
  • ಕಟ್ಟಾ ಸಸ್ಯಾಹಾರಿ ಆಗಿದ್ದರೆ ವಿದೇಶಗಳಲ್ಲಿ ಯಾವುದೆಲ್ಲಾ ಆಹಾರ ಸೇವಿಸಬಹುದು.
  • ಪ್ರಯಾಣ ಹಾಗೂ ಆರೋಗ್ಯ ವಿಮೆ ಯಾಕೆ ಬೇಕು?
  • ವಿದೇಶದಲ್ಲಿ ಏನಾದರೂ ಸಮಸ್ಯೆಗೆ ಸಿಲುಕಿದರೆ, ಉದಾಹರಣೆ ಪಾಸ್‌ಪೋರ್ಟ್ ಕಳೆದು ಹೋಗುವುದು, ದರೋಡೆ ಆಗುವುದು ಇತ್ಯಾದಿ ಆದಾಗ ಏನು ಮಾಡಬೇಕು ಇತ್ಯಾದಿ.

ಈ ಪುಸ್ತಕದಲ್ಲಿ ಯಾವುದೇ ಉಪದೇಶ ಇಲ್ಲ. ಸ್ನೇಹಪೂರ್ವಕವಾಗಿ ನೀಡಿರುವ ಸಲಹೆ ಇದೆ. ಸ್ವಂತ ಅನುಭವಗಳ ಸಾರ ಇದೆ. ಇದೇ ಪುಸ್ತಕ ನನಗೆ 25 ವರ್ಷಗಳ ಹಿಂದೆ ಸಿಕ್ಕಿದ್ದರೆ, ನನ್ನ ಪ್ರಯಾಣದಲ್ಲಿ ಆದ ಎಷ್ಟೋ ಕಹಿ ಅನುಭವಗಳು ಆಗುತ್ತಲೇ ಇರಲಿಲ್ಲವೇನೋ. ಲೆಸ್ ಲಗೇಜ್ ಪುಸ್ತಕ ಒಂದು ಅನುಭವ ಕಥನ ಜತೆಗೆ ಒಂದು ಅಮೂಲ್ಯ ಕೈಪಿಡಿಯೂ ಹೌದು. ವಿದೇಶ ಪ್ರಯಾಣದ ನಿಯಮಾವಳಿಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ. ಈ ಪುಸ್ತಕ ಅದನ್ನೇ ಹೇಳುತ್ತದೆ. ವಿದೇಶ ಪ್ರಯಾಣಕ್ಕೆ ಹೋಗುವ ಕನ್ನಡಿಗರು ಓದಲೇಬೇಕಾದ ಪುಸ್ತಕವಿದು. ಶೀಘ್ರವೇ ಬೇರೆ ಭಾಷೆಗಳಿಗೆ ಅನುವಾದ ಆಗಿ ಇದರ ಲಾಭ ಎಲ್ಲರಿಗೂ ಸಿಗಲಿ.

ಪುಸ್ತಕ ಮಾಹಿತಿ

ಪುಸ್ತಕ: ಲೆಸ್‌ ಲಗೇಜ್‌

ಲೇಖಕ: ಡಾ.ಡಿ.ವಿ.ಗುರುಪ್ರಸಾದ್‌

ಪ್ರಕಾಶಕರು: ಸಪ್ನ ಬುಕ್‌ ಹೌಸ್‌

ಪುಟಗಳು: 175

ಬೆಲೆ: 150

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?