ಎ ರಿಯಲ್ ಪೇನ್
ಪೋಲೆಂಡ್ ತನ್ನ ಮಧ್ಯಯುಗದ ನಗರಗಳು, ವರ್ಣರಂಜಿತ ಚೌಕಗಳು, ಕಲ್ಲುಗಳನ್ನು ಹಾಸಿದ ಬೀದಿಗಳಿಗೆ ಮತ್ತು ಐತಿಹಾಸಿಕ ವಾಸ್ತುಶಿಲ್ಪಕ್ಕೆ ಜಗತ್ಪ್ರಸಿದ್ಧ. ರಾಜಧಾನಿ ವಾರ್ಸಾ ಇಂದು ಗಗನಚುಂಬಿ ಕಟ್ಟಡಗಳಿಂದ ಕೂಡಿದ ಆಧುನಿಕ ನಗರವಾಗಿರಬಹುದು, ಆದರೆ, ಎರಡನೆಯ ಮಹಾಯುದ್ಧದಲ್ಲಿ ಸಂಪೂರ್ಣವಾಗಿ ನಾಶವಾಗಿದ್ದ ಈ ನಗರವನ್ನು ಪೋಲಿಷ್ ಜನರು ತಮ್ಮ ರಕ್ತ- ಬೆವರಿನಿಂದ ಮತ್ತೆ ಕಟ್ಟಿದ್ದಾರೆ.
- ಎಂ. ಆರ್. ಸಚಿನ್
‘ಕೆಲವು ದೇಶಗಳು ತಮ್ಮ ಪ್ರಾಕೃತಿಕ ಸೌಂದರ್ಯದಿಂದ ನಮ್ಮನ್ನು ಸೆಳೆಯುತ್ತವೆ. ಇನ್ನೂ ಕೆಲವು ತಮ್ಮ ಇತಿಹಾಸದಿಂದ ನಮ್ಮನ್ನು ಮೌನವಾಗಿಸುತ್ತವೆ. ಪೋಲೆಂಡ್ ಈ ಎರಡೂ ಅನುಭವಗಳ ಅಪರೂಪದ ಸಂಗಮʼ.
ಪ್ರವಾಸ ಎಂದರೆ ಕೇವಲ ಭೌಗೋಳಿಕ ಗಡಿಗಳನ್ನು ದಾಟುವುದಲ್ಲ, ಹೊಸ ಜಾಗಗಳ ಮುಂದೆ ನಿಂತು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದಲ್ಲ; ಅದು ಒಂದು ಪ್ರದೇಶದ ಆತ್ಮವನ್ನು ಅರ್ಥಮಾಡಿಕೊಳ್ಳುವ, ಅಲ್ಲಿನ ಜನರ ಬದುಕು, ಸಂಸ್ಕೃತಿ, ನೋವು ಮತ್ತು ನೆನಪುಗಳನ್ನು ನಮ್ಮದಾಗಿಸಿಕೊಳ್ಳುವ ಆಳವಾದ ಪ್ರಯತ್ನ. 2024ರಲ್ಲಿ ಬಿಡುಗಡೆಯಾದ 'ಎ ರಿಯಲ್ ಪೇನ್' ಸಿನಿಮಾ ಪ್ರೇಕ್ಷಕರಿಗೆ ನೀಡುವ ಅದ್ಭುತ ಅನುಭವವೇ ಇದು. ಇದು ಕೇವಲ ಇಬ್ಬರು ಸಹೋದರ ಸಂಬಂಧಿಗಳ ಪ್ರವಾಸದ ಕಥೆಯಲ್ಲ; ಒಂದು ಕುಟುಂಬದ ಬೇರುಗಳನ್ನು ಹುಡುಕುತ್ತಾ, ಇಡೀ ದೇಶದ ಇತಿಹಾಸವನ್ನು ಸ್ಪರ್ಶಿಸುವ ಭಾವನಾತ್ಮಕ ಪಯಣ.
ಇದನ್ನೂ ಓದಿ: ಫ್ರಾನ್ಸಿಗೊಂದು ಪಯಣ
ಯಹೂದಿ ಪರಂಪರೆಯ ಪ್ರವಾಸ
ಡೇವಿಡ್ (ಜೆಸ್ಸಿ ಐಸೆನ್‌ಬರ್ಗ್) ಮತ್ತು ಬೆಂಜಿ (ಕಿಯೆರಾನ್ ಕಲ್ಕಿನ್) ಪರಸ್ಪರ ವಿರುದ್ಧ ಸ್ವಭಾವದ ಸಹೋದರ ಸಂಬಂಧಿಗಳು. ಡೇವಿಡ್ ಅತ್ಯಂತ ಶಾಂತ, ಪ್ರಾಯೋಗಿಕ ಹಾಗೂ ಲೆಕ್ಕಾಚಾರದ ಬದುಕು ನಡೆಸುವ ವ್ಯಕ್ತಿ. ಆದರೆ ಬೆಂಜಿ, ಬದುಕನ್ನು ಕೇವಲ ಭಾವನೆಗಳ ಮೂಲಕವೇ ನೋಡುವ ಅಲೆಮಾರಿ. ಇವರಿಬ್ಬರೂ ತಮ್ಮ ಅಗಲಿದ ಅಜ್ಜಿಯ ಬಾಲ್ಯದ ನೆನಪುಗಳನ್ನು ಅರಸುತ್ತಾ, ಪೋಲೆಂಡ್‌ನ ಯಹೂದಿ ಪರಂಪರೆಯ ಪ್ರವಾಸಕ್ಕೆ ಹೊರಡುತ್ತಾರೆ. ಆರಂಭದಲ್ಲಿ ಇದು ಸಾಮಾನ್ಯ ಗುಂಪು ಪ್ರವಾಸದಂತೆ ಭಾಸವಾಗುತ್ತದೆ. ಪ್ರವಾಸಿಗರಿಗೆ ಇರಬೇಕಾದ ಉತ್ಸಾಹ, ಕುತೂಹಲ ಎಲ್ಲವೂ ಇರುತ್ತದೆ. ಆದರೆ ಪಯಣ ಸಾಗುತ್ತಿದ್ದಂತೆ, ಕಥೆಯು ಪ್ರವಾಸದಿಂದ ಆತ್ಮಾವಲೋಕನದತ್ತ ಹೊರಳುತ್ತದೆ.

ರಕ್ತ- ಬೆವರಿನಿಂದ ಮತ್ತೆ ಕಟ್ಟಿದ ನಗರ
ಯುರೋಪಿನ ಹೃದಯಭಾಗದಲ್ಲಿರುವ ಪೋಲೆಂಡ್ ತನ್ನ ಮಧ್ಯಯುಗದ ನಗರಗಳು, ವರ್ಣರಂಜಿತ ಚೌಕಗಳು, ಕಲ್ಲುಗಳನ್ನು ಹಾಸಿದ ಬೀದಿಗಳಿಗೆ ಮತ್ತು ಐತಿಹಾಸಿಕ ವಾಸ್ತುಶಿಲ್ಪಕ್ಕೆ ಜಗತ್ಪ್ರಸಿದ್ಧ. ರಾಜಧಾನಿ ವಾರ್ಸಾ ಇಂದು ಗಗನಚುಂಬಿ ಕಟ್ಟಡಗಳಿಂದ ಕೂಡಿದ ಆಧುನಿಕ ನಗರವಾಗಿರಬಹುದು, ಆದರೆ, ಎರಡನೆಯ ಮಹಾಯುದ್ಧದಲ್ಲಿ ಸಂಪೂರ್ಣವಾಗಿ ನಾಶವಾಗಿದ್ದ ಈ ನಗರವನ್ನು ಪೋಲಿಷ್ ಜನರು ತಮ್ಮ ರಕ್ತ- ಬೆವರಿನಿಂದ ಮತ್ತೆ ಕಟ್ಟಿದ್ದಾರೆ. ಆ ಕಥೆಯೇ ರೋಚಕ. ಚಿತ್ರದಲ್ಲಿ ಕಾಣಿಸಿಕೊಳ್ಳುವ ಮತ್ತೊಂದು ಪ್ರಮುಖ ನಗರವೇ ಲುಬ್ಲಿನ್. ಹಳೆಯ ಪಟ್ಟಣದ ಸೊಬಗು, ಯಹೂದಿ ಪರಂಪರೆಯ ಕುರುಹುಗಳು ಮತ್ತು ಶತಮಾನಗಳ ಇತಿಹಾಸವಿರುವ ಇದು ಯುರೋಪಿನ ಪ್ರಮುಖ ಸಾಂಸ್ಕೃತಿಕ ನಗರ. ಈ ನಗರಗಳು ಸಿನಿಮಾದಲ್ಲಿ ಕೇವಲ ಹಿನ್ನೆಲೆಯಾಗಿ ಮೂಡಿಬಂದಿಲ್ಲ; ಬದಲಾಗಿ, ಪ್ರತಿಯೊಂದು ದೃಶ್ಯವೂ ಆ ನೆಲದ ಮೌನ ಇತಿಹಾಸವನ್ನು ಪ್ರೇಕ್ಷಕನಿಗೆ ಮನದಟ್ಟು ಮಾಡುವ ಪಾತ್ರವಾಗುತ್ತವೆ.
ಇತಿಹಾಸ ಅರಿಯಬೇಕು
ಪೋಲೆಂಡ್‌ನ ಇತಿಹಾಸವನ್ನು ಅರಿಯದೆ 'ಎ ರಿಯಲ್ ಪೇನ್' ಸಿನಿಮಾವನ್ನು ಸಂಪೂರ್ಣವಾಗಿ ಆಸ್ವಾದಿಸಲು ಸಾಧ್ಯವಿಲ್ಲ. 1939ರಲ್ಲಿ ನಾಜಿ ಜರ್ಮನಿ ಪೋಲೆಂಡ್ ಮೇಲೆ ದಾಳಿ ಮಾಡಿದ ನಂತರ, ಅಲ್ಲಿದ್ದ ಸುಮಾರು 35 ಲಕ್ಷ ಯಹೂದಿಗಳು ಭೀಕರ ದಬ್ಬಾಳಿಕೆಗೆ ಒಳಗಾದರು. ಅವರನ್ನು ಮನೆಗಳಿಂದ ಹೊರಹಾಕಿ, ಘೆಟ್ಟೊ (ಜೈಲು)ಗಳಲ್ಲಿ ಬಂಧಿಸಿ, ಕುಟುಂಬಗಳನ್ನು ಛಿದ್ರಗೊಳಿಸಲಾಯಿತು. ಆಶ್ವಿಟ್ಜ್, ಮೈಡಾನೆಕ್, ಟ್ರೆಬ್ಲಿಂಕಾ ಮುಂತಾದ ಮರಣ ಶಿಬಿರಗಳಲ್ಲಿ ಲಕ್ಷಾಂತರ ಮುಗ್ದರು ಅನಿಲ ಕೋಣೆಗಳಲ್ಲಿ, ಹಸಿವು ಮತ್ತು ಬಲವಂತದ ದುಡಿಮೆಯಿಂದ ಪ್ರಾಣ ಕಳೆದುಕೊಂಡರು. ಇಂದು ಈ ಸ್ಥಳಗಳು ಪ್ರವಾಸಿಗರಿಗೆ ತೆರೆದುಕೊಂಡಿದ್ದರೂ, ಅಲ್ಲಿಗೆ ಭೇಟಿನೀಡುವ ಪ್ರತಿಯೊಬ್ಬರಿಗೂ ಇತಿಹಾಸದ ಭಾರ ಎದೆಯ ಮೇಲೆ ಕುಳಿತಂತೆ ಭಾಸವಾಗುತ್ತದೆ. ದುಃಖದ ಇತಿಹಾಸವನ್ನು ಅರಿಯುವ ಈ ಪ್ರಯಾಣವನ್ನೇ ಇಂದು ʼಡಾರ್ಕ್ ಟೂರಿಸಂʼ ಎಂದು ಕರೆಯಲಾಗುತ್ತದೆ. ಇದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಬೆಂಜಿಯ ಮೌನವೇ ಕಥೆಯ ಆತ್ಮ
ನಾಜಿ ಶಿಬಿರಗಳ ಮೌನದ ನಡುವೆ ನಿಂತಾಗ ಬೆಂಜಿ ಏಕೆ ಅಷ್ಟು ಭಾವನಾತ್ಮಕನಾಗುತ್ತಾನೆ? ಎಂಬ ಪ್ರಶ್ನೆಗೆ ಉತ್ತರವೇ ಈ ಚಿತ್ರದ ಆತ್ಮ. ಬೆಂಜಿ ಅಲ್ಲಿ ಕೇವಲ ಹಳೆಯ ಕಟ್ಟಡಗಳನ್ನಾಗಲೀ ಇತಿಹಾಸದ ಸ್ಮಾರಕಗಳನ್ನಾಗಲೀ ನೋಡುತ್ತಿಲ್ಲ. ಅವನು ತನ್ನ ಅಜ್ಜಿಯ ಬದುಕಿನ ರಕ್ತಸಿಕ್ತ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದಾನೆ. ಈಗಾಗಲೇ ತನ್ನ ವೈಯಕ್ತಿಕ ಬದುಕಿನಲ್ಲಿ ಮಾನಸಿಕ ಹೋರಾಟ ನಡೆಸುತ್ತಿರುವ ಬೆಂಜಿಗೆ, ಆ ನೆಲದ ನೋವು ತನ್ನದೇ ನೋವಿನಂತೆ ಭಾಸವಾಗುತ್ತದೆ. ಅವನ ಕಣ್ಣೀರು ಮತ್ತು ಮೌನ, ಸಾವಿರಾರು ಸಂಭಾಷಣೆಗಳಿಗಿಂತ ಹೆಚ್ಚು ಅರ್ಥಗರ್ಭಿತವಾಗಿ ಮೂಡಿಬಂದಿದೆ. ಕಿಯೆರಾನ್ ಕಲ್ಕಿನ್ ತಮ್ಮ ಅಮೋಘ ಅಭಿನಯದ ಮೂಲಕ ಚಿತ್ರಕ್ಕೆ ಜೀವ ತುಂಬಿದ್ದರೆ, ಜೆಸ್ಸಿ ಐಸೆನ್‌ಬರ್ಗ್ ತಮ್ಮ ಸಂಯಮದ ನಟನೆಯಿಂದ ಕಥೆಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತಾರೆ.
ಪ್ರತಿ ಫ್ರೇಮೂ ಒಂದು ಪೋಸ್ಟ್‌ಕಾರ್ಡ್
ಚಿತ್ರದ ಛಾಯಾಗ್ರಹಣ ಅದ್ಭುತವಾಗಿದೆ. ಕಲ್ಲು ಹಾಸಿನ ಬೀದಿಗಳು, ಶತಮಾನಗಳಷ್ಟು ಪುರಾತನ ಕಟ್ಟಡಗಳು, ಪುಟ್ಟ ಕಾಫಿ ಅಂಗಡಿಗಳು ಮತ್ತು ನಿಶ್ಶಬ್ದ ಸ್ಮಾರಕಗಳು ದೃಶ್ಯಕಾವ್ಯದಂತೆ ಮೂಡಿಬಂದಿವೆ. ಆದರೆ ಛಾಯೆಗಳಲ್ಲಿ ಆ ಸೌಂದರ್ಯದ ಹಿಂದಿರುವ ಜನಾಂಗವೊಂದರ ಅಳಿಸಲಾಗದ ನೆನಪುಗಳು ನಿರಂತರವಾಗಿ ಪ್ರೇಕ್ಷಕನಿಗೆ ಕಾಡುತ್ತವೆ. ಅದನ್ನು ಲೇಖನದಲ್ಲಿ ಹಿಡಿದಿಡುವುದು ಕಷ್ಟ. ಹಾಗಾಗಿ ಜಿಯೋ ಹಾಟ್‌ಸ್ಟಾರ್‌ನಂಥ ಓಟಿಟಿಯಲ್ಲಿಯೂ ಲಭ್ಯವಿರುವ ಈ ಸಿನಿಮಾವನ್ನು ನೋಡಿ ಅನುಭವಿಸಬೇಕು. ಸಿನಿಮಾ ಭಾವನಾತ್ಮಕವಾಗಿದ್ದು, ನಿಧಾನಗತಿಯಲ್ಲಿದ್ದರೂ ವಿಷಯವಸ್ತು ಇಷ್ಟಪಡುವವರಿಗೆ ಈ ಸಿನಿಮಾ ರುಚಿಸುತ್ತದೆ.
ʼಪ್ರವಾಸಗಳು ಕೇವಲ ದೇಶಗಳನ್ನು ಪರಿಚಯಿಸುವುದಿಲ್ಲ; ಅವು ನಮ್ಮೊಳಗಿನ ಬಿಡಿಸಲಾಗದ ಪ್ರಶ್ನೆಗಳಿಗೂ ಉತ್ತರ ಕೊಡುತ್ತವೆʼ. 'ಎ ರಿಯಲ್ ಪೇನ್' ಸಿನಿಮಾ ಪೋಲೆಂಡ್‌ಗೆ ಹೋಗುವ ಆಸೆಯನ್ನು ಹುಟ್ಟಿಸುವುದರ ಜತೆಗೆ, ಒಂದು ದೇಶವನ್ನು ಕೇವಲ ಪ್ರಕೃತಿ ಅಥವಾ ವಾಸ್ತುಶಿಲ್ಪದಿಂದ ಮಾತ್ರವಲ್ಲ, ಅದರ ನೆನಪುಗಳು ಮತ್ತು ಇತಿಹಾಸದ ಮೂಲಕವೂ ನೋಡಬೇಕು ಎಂಬುದನ್ನು ಕಲಿಸುತ್ತದೆ. ಕೆಲವು ರಸ್ತೆಗಳು ನಮ್ಮನ್ನು ಹೊಸ ನಗರಗಳಿಗೆ, ಇನ್ನೂ ಕೆಲವು ನಮ್ಮೊಳಗಿನ ಅಸಲಿ ಮನುಷ್ಯನತ್ತ ಕರೆದೊಯ್ಯುತ್ತವೆ. ಅಂಥ ಅಪರೂಪದ ಮತ್ತು ಅವಿಸ್ಮರಣೀಯ ಪ್ರಯಾಣದ ಅನುಭವ ನಿಮ್ಮದಾಗಬೇಕಾದರೆ, ಶಾಂತ ಪರಿಸರದಲ್ಲಿ ಕುಳಿತು ಈ ಸಿನಿಮಾವನ್ನು ಮಿಸ್ ಮಾಡದೆ ನೋಡಿ.