Thursday, May 28, 2026
Thursday, May 28, 2026

ರಾಮನಿಗಾಗಿ ಶಬರಿ ಕಾಯುತ್ತಿದ್ದ ಸ್ಥಳ

ಶಬರಿ ತನ್ನ ಇಳಿ ವಯಸ್ಸಿನಲ್ಲೂ ರಾಮನಿಗಾಗಿ ಹಲವಾರು ವರ್ಷಗಳ ಕಾಲ ಕಾಯುತ್ತಾಳೆ. ಪ್ರತಿದಿನ ಹೂಗಳಿಂದ ಅಂಗಳ ಸಿಂಗರಿಸಿ, ಕಾಡಿನಲ್ಲಿರುವ ಹಣ್ಣುಗಳನ್ನು ಆಯ್ದುಕೊಂಡು ರಾಮನ ಆತಿಥ್ಯಕ್ಕೆ ಕಾಯುತ್ತಿದ್ದಳು. ನಂತರ ರಾಮಲಕ್ಷ್ಮಣರು ಕಿಷ್ಕಿಂಧೆಯತ್ತ ಸಾಗುತ್ತಿರುವಾಗ ಶಬರಿಕೊಳ್ಳದಲ್ಲಿ ಶಬರಿಗೆ ದರ್ಶನವಿಟ್ಟು ಅವಳ ವಿಶೇಷ ಆತಿಥ್ಯಕ್ಕೆ ಸಂತೋಷಪಟ್ಟರು.

  • ಶಿವನಗೌಡ ಕಿಲಬನೂರ

ʻಶಬರಿ ಕಿ ಭಕ್ತಿ ರಾಮ ಸಾರಿ, ಜಗಮೇ ಅತೀ ಪಾವನ ಪ್ಯಾರಿʼ ಈ ಸಾಲಿನ ಅರ್ಥ ಗೊತ್ತಾ! ಈ ಜಗತ್ತಿನಲ್ಲಿ ಶಬರಿಯ ಭಕ್ತಿಯು ಬಹಳ ಪವಿತ್ರವಾದದ್ದು ಅಂತ. ರಾಮಾಯಣದ ಬಹು ಸುಂದರ ಭಾಗ ಶಬರಿ ರಾಮನಿಗಾಗಿ ಕಾದದ್ದು. ಶಬರಿ ರಾಮನಿಗಾಗಿ ಕಾಯುತ್ತಿದ್ದ ಆ ಜಾಗವೇ ಬೆಳಗಾವಿ ಜಿಲ್ಲೆಯ ರಾಮದುರ್ಗ ಸಮೀಪದ ಶಬರಿಕೊಳ್ಳ.

ಇದನ್ನೂ ಓದಿ: ವಿಶ್ವದ ಮೊದಲ ರಾಮಾಯಣ ವಿಷಯಾಧಾರಿತ ಮೇಣದ ವಸ್ತು ಸಂಗ್ರಹಾಲಯ

ಪುರಾಣ ಹೇಳುವುದೇನು?

ಮಾತಂಗ ಮಹರ್ಷಿಗಳ ಆಶ್ರಮದಲ್ಲಿದ್ದ ಶಬರಿ, ತನ್ನ ಗುರು ಮಾತಂಗರು ನಿಧನರಾಗುವ ಮೊದಲು ಶಬರಿಗೆ ʻರಾಮನು ನಿನ್ನನ್ನು ಭೇಟಿ ಆಗಿಯೇ ಆಗುತ್ತಾನೆ. ಹಾಗಾಗಿ ನೀನು ಇಲ್ಲೇ ಕಾದಿರುʼ ಎಂದು ಹೇಳಿರುತ್ತಾರೆ. ಗುರುವಿನ ಮಾತಿನಂತೆ ಶಬರಿ ತನ್ನ ಇಳಿ ವಯಸ್ಸಿನಲ್ಲೂ ರಾಮನಿಗಾಗಿ ಹಲವಾರು ವರ್ಷಗಳ ಕಾಲ ಕಾಯುತ್ತಾಳೆ. ಪ್ರತಿದಿನ ಹೂಗಳಿಂದ ಅಂಗಳ ಸಿಂಗರಿಸಿ, ಕಾಡಿನಲ್ಲಿರುವ ಹಣ್ಣುಗಳನ್ನು ಆಯ್ದುಕೊಂಡು ರಾಮನ ಆತಿಥ್ಯಕ್ಕೆ ಕಾಯುತ್ತಿದ್ದಳು. ನಂತರ ರಾಮಲಕ್ಷ್ಮಣರು ಕಿಷ್ಕಿಂಧೆಯತ್ತ ಸಾಗುತ್ತಿರುವಾಗ ಶಬರಿಕೊಳ್ಳದಲ್ಲಿ ಶಬರಿಗೆ ದರ್ಶನವಿಟ್ಟು ಅವಳ ವಿಶೇಷ ಆತಿಥ್ಯಕ್ಕೆ ಸಂತೋಷಪಟ್ಟರು. ನಂತರ ರಾಮನ ದರ್ಶನದಿಂದ ಸಂತೃಪ್ತಗೊಂಡ ಶಬರಿ ಜ್ಯೋತಿಯ ರೂಪದಲ್ಲಿ ದೇವಲೋಕದತ್ತ ತೆರಳಿದಳು ಎನ್ನುವುದಿದೆ.

Untitled design (40)

ಏನಿದೆ ವಿಶೇಷ?

ಸುರೇಬಾನದ ಗುಡ್ಡ ಪ್ರಪಾತಗಳ ನಡುವೆ ಈ ಕೊಳ್ಳ ಇದೆ. ವರ್ಷಪೂರ್ತಿ ಹಸಿರಾಗಿರುವ ದಟ್ಟ ಕಾನನದ ನಡುವೆ ದೇವಾಲಯವಿದೆ. ಚಾಲುಕ್ಯರ ಶೈಲಿಯಲ್ಲಿ ನಿರ್ಮಿತವಾದ ಈ ದೇವಾಲಯ ನಿಜವಾಗಲೂ ಒಂದು ಭಕ್ತಿ ಪರಾಕಾಷ್ಠೆಯ ಪ್ರತೀಕವಾಗಿ ನಿಂತಿದೆ. ಆವರಣದಲ್ಲಿ ದೊಡ್ಡ ಬಾರೆ ಮರ, ಆಲದ ಮರಗಳಿದ್ದು, ಶಬರಿಯ ದೇವಾಲಯ ಮುಖ್ಯವಾದದ್ದು. ಗರ್ಭಗುಡಿಯಲ್ಲಿ 3 ಅಡಿ ಎತ್ತರದ ಶಬರಿಯ ಮೂರ್ತಿ ಇಡಲಾಗಿದೆ. ರಾಮನಿಗೂ ಒಂದು ಗರ್ಭಗುಡಿ ಕಟ್ಟಲಾಗಿದೆ.

ದೇವಾಲಯದ ಆವರಣದಲ್ಲೇ ಎರಡು ಹೊಂಡಗಳಿವೆ. ವರ್ಷದ ಎಲ್ಲ ದಿನದಲ್ಲಿಯೂ ಹೊಂಡದಲ್ಲಿ ಶುದ್ಧ ನೀರು ಲಭ್ಯವಿರುತ್ತದೆ. ಒಂದು ಹೊಂಡದಲ್ಲಿ ಮಾತ್ರ ಪ್ರವಾಸಿಗರಿಗೆ ಸ್ನಾನಕ್ಕೆ ಅವಕಾಶವಿದ್ದು, ಇನ್ನೊಂದು ಹೊಂಡದ ನೀರನ್ನು ಕುಡಿಯುವುದಕ್ಕೆ ಇರಿಸಲಾಗಿದೆ. ಎರಡೂ ಹೊಂಡಗಳ ವಿನ್ಯಾಸದಲ್ಲಿ ರಾಮಲಕ್ಷ್ಮಣರ ಆಕೃತಿಗಳನ್ನು ಮಾಡಲಾಗಿದೆ. ಅದೇ ಪರಿಸರದಲ್ಲಿ ಹಸಿರಿನ ನಡುವೆ ಒಂದು ಚಿಕ್ಕ ಜಲಪಾತ ಇದೆ. ಪ್ರವಾಸಿಗರು ಮಳೆಗಾಲದಲ್ಲಿ ಅಲ್ಲಿ ಮಿಂದೇಳುತ್ತಾರೆ. ಮಳೆಗಾಲದ ದಿನಗಳಲ್ಲಿ ಕೊಳ್ಳದಲ್ಲಿ ನೀರಿನ ಹರಿವಿನಿಂದ ಕಂಗೊಳಿಸುತ್ತದೆ.

ಶಬರಿಕೊಳ್ಳದ ವಿಶೇಷ ಆಚರಣೆ ಫೆಬ್ರವರಿಯಲ್ಲಿ ಬರುವ ಭಾರತ ಹುಣ್ಣಿಮೆ. ಆಗ ಅಲ್ಲಿ ಸಾಕಷ್ಟು ಜನರು ನೆರೆದಿರುತ್ತಾರೆ. ವಿಜೃಂಭಣೆಯಿಂದ ಭರತ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಆದರೆ ಸುತ್ತ ಪರಿಸರದೊಂದಿಗೆ ದೇವಾಲಯ ಕಣ್ತುಂಬಿಕೊಳ್ಳಲು ಮಳೆಗಾಲ ದಿ ಬೆಸ್ಟ್‌ ಟೈಮ್‌. ಹೂವಿನಕೊಳ್ಳ, ಮುಳ್ಳೂರು ಗುಡ್ಡ, ಅಶೋಕವನದ ಶಿವನ ಮೂರ್ತಿ ಸೇರಿದಂತೆ ರಾಮದುರ್ಗ ಸಮೀಪದಲ್ಲಿ ಇನ್ನೂ ವಿಶೇಷ ಸ್ಥಳಗಳನ್ನು ಕಾಣಬಹುದು.

ದಾರಿ ಹೇಗೆ?

ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ರಾಮದುರ್ಗ ತಲುಪಿದರೆ ಅಲ್ಲಿಂದ 18 ಕಿಮೀ ದೂರದಲ್ಲಿರುವ ಶಬರಿ ಕೊಳ್ಳ ಇದೆ. ಬಸ್ ಮೂಲಕ ಸುಲಭವಾಗಿ ತಲುಪಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ