ಗುಳಿಗುಳಿ ಶಂಕರನ ಮಹಿಮೆ
ಇದೊಂದು ಅಚ್ಚರಿಯ ಕ್ಷೇತ್ರ ಎನ್ನಲು ಇನ್ನೊಂದು ಕಾರಣವಿದೆ. ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆಯನ್ನು ಹೊರತುಪಡಿಸಿ ಬೇರೆ ಯಾವುದೇ ಎಲೆಯನ್ನು ಜಟಾ ತೀರ್ಥದೊಳಗೆ ಮುಳುಗಿಸಿಯೇ ಹಾಕಿದರೂ ಅದು ಮುಳುಗದೆ ಮೇಲೆಯೇ ತೇಲುತ್ತದೆ. ಭಕ್ತರು ದೇವಸ್ಥಾನದಲ್ಲಿ ಖರೀದಿಸಿದ ಬಿಲ್ವಪತ್ರೆಯನ್ನು ತಮ್ಮ ಮನಸ್ಸಿನಲ್ಲಿರುವ ಇಷ್ಟಾರ್ಥಗಳನ್ನು ಬೇಡಿಕೊಂಡು ಕೊಳದ ಒಳಗಡೆ ಹಾಕಿದರೆ ಅದು ಮುಳುಗುತ್ತದೆ.
- ಪೂಜಾ ತೀರ್ಥಹಳ್ಳಿ
ಹಸಿರು ಚಾದರವನ್ನೇ ಹೊದ್ದು ಹಾಸಿ ಮಲಗಿರುವ ಮಲೆನಾಡಿನ ಹೆಬ್ಬಾಗಿಲು, ತುಂಗಭದ್ರೆ ಶರಾವತಿಯ ಪಾವನ ಭೂಮಿ. ವಿಸ್ಮಯಗಳನ್ನು ತನ್ನ ಗರ್ಭದಲ್ಲಿರಿಸಿಕೊಂಡಿರುವ ಜಾಗ. ಅನಂತ ಕಾಡುಗಳ ಆಗರ. ಪ್ರವಾಸಿಗರನ್ನು ಸದಾ ಕೈ ಬೀಸಿ ಕರೆಯುವ ಮಲೆನಾಡಿನಲ್ಲೊಂದು ವಿಶೇಷವಾದ ಅಧ್ಯಾತ್ಮಿಕ ಮತ್ತು ಪ್ರಕೃತಿ ಸೌಂದರ್ಯದ ತಾಣವಿದೆ. ಕೊಡಚಾದ್ರಿ ತಪ್ಪಲಿನಲ್ಲಿ ಬಾನೆತ್ತರ ಬೆಳೆದ ಅಡಿಕೆಯ ಮರಗಳು, ವಿಶಾಲ ಗದ್ದೆ ಬಯಲುಗಳ ಅನಂತತೆಯ ನಡುವೆ ಒಂದು ಚಮತ್ಕಾರಿ ಕೊಳವಿದೆ. ಶಂಕರೇಶ್ವರ ಮತ್ತು ಚೌಡೇಶ್ವರಿಯ ಸನ್ನಿಧಾನವೂ ಇದೆ. ಶಿವಮೊಗ್ಗದಿಂದ 34 ಕಿ ಮೀ. ದೂರದಲ್ಲಿರುವ ಪುಟ್ಟ ದೇವಾಲಯ. ಇಲ್ಲಿನ ಶಂಕರೇಶ್ವರ ತನ್ನ ಜಟಾ ತೀರ್ಥದಿಂದಲೇ ಹಲವು ಅಚ್ಚರಿಗಳ ಬೀಡಾಗಿ ಸುತ್ತಲಿರುವವರ ಕೌತುಕಕ್ಕೆ ಕಾರಣವಾಗಿದೆ.

ಸುತ್ತ ಗದ್ದೆ ತೋಟಗಳ ನಡುವೆ ರಸ್ತೆಯಿಂದ ಕೂಗಳತೆ ದೂರದಲ್ಲಿರುವ ಪುಟ್ಟದೊಂದು ಗುಡಿ ಅದಕ್ಕೊಂದು ಪೌರಾಣಿಕ ಹಿನ್ನೆಲೆಯುಳ್ಳ ಕೊಳ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬೆಳ್ಳೂರು ಸಮೀಪದ ಗುಬ್ಬಿಗ ಗ್ರಾಮದಲ್ಲಿರುವ ಗುಳುಗುಳಿ ಶಂಕರ ಇತ್ತೀಚಿನ ದಿನಗಳಲ್ಲಿ ಅನೇಕ ಭಕ್ತರನ್ನು ಮತ್ತು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ನಂಬಿ ಬಂದವರಿಗೆ ಅಧ್ಯಾತ್ಮಿಕ ಕೇಂದ್ರವಾಗಿಯೂ ನಂಬದೆ ಬಂದವರಿಗೆ ನಿಸರ್ಗದ ವಿಸ್ಮಯಯೂ ಆಗಿ ಸೆಳೆಯುತ್ತಿರುವ ವೈಜ್ಞಾನಿಕ ಅಚ್ಚರಿ ಈ ಕ್ಷೇತ್ರ.
ದೇವಸ್ಥಾನದ ಒಳಗಡೆ ಶಂಕರೇಶ್ವರ ಮತ್ತು ಪಕ್ಕದಲ್ಲಿ ಚೌಡೇಶ್ವರಿಯು ಪ್ರತ್ಯೇಕವಾಗಿ ನೆಲೆಸಿದ್ದು. ದೇವಸ್ಥಾನದ ಕೆಳಭಾಗದಲ್ಲಿ ಗದ್ದೆ ತೋಟಗಳ ನಡುವೆ ಒಂದು ಮಾಂತ್ರಿಕ ಕೊಳವಿದೆ. ಜಟಾ ತೀರ್ಥ, ಗೌರಿ ತೀರ್ಥ, ಗುಳಿಗುಳಿ ಕೊಳ, ಚಪ್ಪಾಳೆ ಕೊಳ, ಚಿನ್ನದಕೊಳ ಎಂದೆಲ್ಲಾ ಕರೆಸಿಕೊಳ್ಳುವ ಚಿಲುಮೆ ಭಕ್ತರಪಾಲಿನ ಪವಾಡವಾಗಿದೆ.
ಈ ಭಾಗದಲ್ಲಿ ಒಮ್ಮೆ ಪಾರ್ವತಿ ಪರಮೇಶ್ವರರಿಬ್ಬರೂ ಲೋಕಸಂಚಾರ ಮಾಡುತ್ತಿರುವಾಗ ವಿಶ್ರಾಂತಿ ಸಮಯದಲ್ಲಿ ನೀರಾಡಿಕೆಯಾದಾಗ, ಪರಮೇಶ್ವರನು ತನ್ನ ಜಟೆಯಲ್ಲಿದ್ದ ಗಂಗೆಯನ್ನು ಆಹ್ವಾನಿಸಿದನು. ಗಂಗೆಯು ಪ್ರತ್ಯಕ್ಷವಾಗಿ ಬಾಯಾರಿಕೆಯನ್ನು ನೀಗಿಸಿ, ಬಳಿಕ ಹೊರಡಲು ಸಿದ್ಧವಾದಾಗ, ಪರಮೇಶ್ವರನು ಇಲ್ಲಿಯೇ ನೆಲೆಸಿ ಈ ಭಾಗದಲ್ಲಿ ನೀರಿನ ಅಭಾವ ಬರದಂತೆ ಸಕಲ ಜೀವಿಗಳನ್ನು ಪೊರೆಯುವಂತೆ ಆದೇಶಿಸುತ್ತಾನೆ. ಗಂಗೆಯು ಶಂಕರನಿಗೆ ನೀನೂ ಇದೇ ಜಾಗದಲ್ಲಿ ನೆಲೆಸು ಎಂದು ಬೇಡಿಕೊಳ್ಳುತ್ತಾಳೆ. ಶಿವನ ಮಾತಿಗಾಗಿ ಗಂಗೆಯು ಜಟಾ ತೀರ್ಥದಲ್ಲಿ (ಕೊಳದಲ್ಲಿ) ನೆಲೆಗೊಂಡರೆ, ಗಂಗೆಯ ಮಾತಿಗಾಗಿ ಶಿವನು ಶಂಕರೇಶ್ವರನಾಗಿ ನೆಲೆಗೊಳ್ಳುತ್ತಾನೆ. ಅಲ್ಲಿಯೇ ಚೌಡೇಶ್ವರಿಯು ಸಹ ನೆಲೆಸಿದ್ದಾಳೆ.

ಇದೊಂದು ಅಚ್ಚರಿಯ ಕ್ಷೇತ್ರ ಎನ್ನಲು ಇನ್ನೊಂದು ಕಾರಣವಿದೆ. ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆಯನ್ನು ಹೊರತುಪಡಿಸಿ ಬೇರೆ ಯಾವುದೇ ಎಲೆಯನ್ನು ಜಟಾ ತೀರ್ಥದೊಳಗೆ ಮುಳುಗಿಸಿಯೇ ಹಾಕಿದರೂ ಅದು ಮುಳುಗದೆ ಮೇಲೆಯೇ ತೇಲುತ್ತದೆ. ಭಕ್ತರು ದೇವಸ್ಥಾನದಲ್ಲಿ ಖರೀದಿಸಿದ ಬಿಲ್ವಪತ್ರೆಯನ್ನು ತಮ್ಮ ಮನಸ್ಸಿನಲ್ಲಿರುವ ಇಷ್ಟಾರ್ಥಗಳನ್ನು ಬೇಡಿಕೊಂಡು ಕೊಳದ ಒಳಗಡೆ ಹಾಕಿದರೆ ಅದು ಮುಳುಗುತ್ತದೆ. 20 ನಿಮಿಷದೊಳಗಾಗಿ ಕೊಳದ ಆಳದಿಂದ ಮತ್ತೆ ಮೇಲಕ್ಕೆ ಬಂದರೆ ಅಂದುಕೊಂಡ ಕೆಲಸ ಆಗುತ್ತದೆ ಎಂಬ ನಂಬಿಕೆ. ಈ ಕೊಳದ ಮತ್ತೊಂದು ಅಚ್ಚರಿ ಏನೆಂದರೆ ಪ್ರತಿನಿತ್ಯ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಕೊಳದ ಒಳಗಡೆಯ ಪಾಚಿ ಚಿನ್ನದಂತೆ ಹೊಳೆಯುತ್ತದೆ. ನೀರು ಸ್ಪಟಿಕದಂತೆ ಪ್ರಕಾಶಿಸುತ್ತದೆ. ಹಾಗಾಗಿಯೇ ಈ ಕೊಳಕ್ಕೆ ಚಿನ್ನದ ಕೊಳ ಎಂಬ ಹೆಸರು ಕೂಡ ಇದೆ. ನಂಬಿಕೆಯ ಪ್ರಕಾರ ಈ ಕೊಳದ ನೀರಿನಿಂದ ಚರ್ಮರೋಗ ನಿವಾರಣೆಯಾಗುತ್ತದೆ. ಈ ನೀರನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ವೈಜ್ಞಾನಿಕವಾಗಿಯೂ ಸಾಮಾನ್ಯವಾಗಿ ಕುಡಿಯುವ ನೀರಿಗಿಂತ ಈ ಗೌರಿ ಕೊಳದ ನೀರು ಅತ್ಯಂತ ಖನಿಜಾಂಶಗಳಿಂದ ಕೂಡಿದೆ. ಅಚ್ಚರಿ ಏನೆಂದರೆ ಇಲ್ಲಿ ಯಾವ ಮೂಲದಿಂದಲೂ ಈ ಕೊಳಕ್ಕೆ ನೀರು ಹರಿದು ಬರುತ್ತಿಲ್ಲ. ಆದರೆ ಈ ಕೊಳದಿಂದ ನೀರು ಬೇಸಿಗೆ ಕಾಲದಲ್ಲಿಯೂ ಸುಮಾರು 3 ಇಂಚಿನಷ್ಟು ನಿರಂತರವಾಗಿ ಹೊರಹೊಮ್ಮುತ್ತದೆ. ಸುತ್ತಮುತ್ತಲಿನ ನಲವತ್ತು ಎಕರೆ ಜಾಗಕ್ಕೆ ಇದು ನೀರುಣಿಸುತ್ತಿದೆ. ಕೊಳದ ಸುತ್ತ ನಿಂತು ಚಪ್ಪಾಳೆ ತಟ್ಟಿದರೆ ಕೊಳದ ನೀರಿನಿಂದ ಗುಳ್ಳೆಗಳು ಮೇಲೆ ಮೂಡುತ್ತವೆ. ಹಾಗಾಗಿ ಈ ಜಾಗವನ್ನು ಗುಳುಗುಳಿ ಶಂಕರ ಎಂದೇ ಕರೆಯುತ್ತಾರೆ.
ಅಚ್ಚರಿಯೋ? ಪವಾಡವೋ? ವಿಜ್ಞಾನವೋ? ಆಧ್ಯಾತ್ಮವೋ? ಒಟ್ಟಿನಲ್ಲಿ ಗುಳುಗುಳಿ ಶಂಕರ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ವಿಸ್ಮಯದ ತಾಣ.