Monday, July 21, 2025
Monday, July 21, 2025

ಅಂಡಮಾನ್ ನಲ್ಲೊಬ್ಬ ಹ್ಯೂಮನ್ ಜಿಪಿಎಸ್- ಗೂಗಲ್ ಗೋಪಾಲ್ !

'ಸದೈ' ಎಂಬ ಪುಟ್ಟ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಯನ್ನು ಹೊಂದಿರುವ ಈ ಅಂಡಮಾನಿನ ನಿವಾಸಿ, ನಮ್ಮ ಆರು ದಿನಗಳ ಪ್ರಯಾಣದ ಮೊದಲ ದಿನದಲ್ಲೇ, ಅಂಡಮಾನಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾದ ಪೋರ್ಟ್ ಬ್ಲೇರ್ ನ ʼಸೆಲ್ಯುಲರ್ ಜೇಲ್ʼ ಸಮೀಪದಲ್ಲಿ ಸಿಕ್ಕರು!

  • ಆಕಾಂಕ್ಷಾ ಬಿ.ಎಸ್.

ಮಳೆಗಾಲದ ಇಳಿ ಸಂಜೆಯಲ್ಲಿ ಕೈಯಲ್ಲಿ ಒಂದು ಕಾಫಿ ಕಪ್ ಹಿಡಿದು, ಚೆಂದದ ಪುಸ್ತಕವೊಂದನ್ನು ಓದುತ್ತಾ ಕುಳಿತರೆ ಎಷ್ಟು ಆಹ್ಲಾದಕರವಾಗಿರುತ್ತದೆಯೋ, ಹಾಗೆಯೇ ದೂರದ ಊರುಗಳಿಗೆ ತಿರುಗಾಟಕ್ಕೆ ಹೊರಟಾಗ ಅಲ್ಲಿ ಎದುರಾಗುವ ಅಪರಿಚಿತರು ನಕ್ಕು ಮಾತಿಗೆ ಸಿಕ್ಕಿ ಸಹಾಯಕ್ಕೆ ನಿಂತಾಗಲೂ ಅದೇ ಮಟ್ಟಗಿನ ಅರಾಮದಾಯಕ ಅನುಭವ ನಮ್ಮದಾಗುತ್ತದೆ!

ಈ ನಿಟ್ಟಿನಲ್ಲಿ, ನಮ್ಮ ಕನಸಿನ ಸ್ಥಳವಾಗಿರುವ ಅಂಡಮಾನ್ ನ ರಮಣೀಯ ಸೌಂದರ್ಯವನ್ನು ಕಣ್ಣಾರೆ ಅನುಭವಿಸಿ‌ ಮನಸಾರೆ ಆಸ್ವಾದಿಸುತ್ತಿದ್ದಾಗ, ಅಚಾನಕ್ ಆಗಿ ಸಿಕ್ಕಿದ್ದು 'ಗೂಗಲ್ ಗೋಪಾಲ್ʼ ಎಂಬ ಆಟೋ ಚಾಲಕ!

'ಸದೈ' ಎಂಬ ಪುಟ್ಟ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಯನ್ನು ಹೊಂದಿರುವ ಈ ಅಂಡಮಾನಿನ ನಿವಾಸಿ, ನಮ್ಮ ಆರು ದಿನಗಳ ಪ್ರಯಾಣದ ಮೊದಲ ದಿನದಲ್ಲೇ, ಅಂಡಮಾನಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾದ ಪೋರ್ಟ್ ಬ್ಲೇರ್ ನ ʼಸೆಲ್ಯುಲರ್ ಜೇಲ್ʼ ಸಮೀಪದಲ್ಲಿ ಸಿಕ್ಕರು! “ನೀವ್ಯಾರು? ಎಲ್ಲಿಂದ ಬಂದಿದ್ದೀರಿ?” ಎಂಬ ಆತ್ಮೀಯ ಪ್ರಶ್ನೆಯಿಂದ ಆರಂಭವಾದ ನಮ್ಮ ಸಂಭಾಷಣೆ, ಕೊನೆಗೆ ಸೊಗಸಾಗಿ ಒಂದು ಸಂಪೂರ್ಣ ಪ್ರವಾಸ ಯೋಜನೆಯ ರೂಪುಗೊಳ್ಳುವ ತನಕ ಮುಂದುವರೆಯಿತು!

ಅಂಡಮಾನಿನ ಪ್ರತಿಯೊಂದು ರಸ್ತೆ, ಗಲ್ಲಿಯನ್ನು ಚೆನ್ನಾಗಿ ಬಲ್ಲ ಗೋಪಾಲ್, ಪಟಪಟನೆ ಮಾತನಾಡುತ್ತ ಅಂಡಮಾನಿನ ಸಂಕ್ಷಿಪ್ತ ಪರಿಚಯವನನ್ನು ಕೇವಲ ಐದೇ ನಿಮಿಷಗಳಲ್ಲಿ ಮಾಡಿಕೊಟ್ಟರು. ಹಿಂದಿ, ತಮಿಳು ಹಾಗೂ ವ್ಯವಹರಿಸಲು ಬೇಕಾದಷ್ಟು ಆಂಗ್ಲ ಭಾಷೆಯನ್ನು ಬಲ್ಲ ಗೋಪಾಲ್‌ ತಮ್ಮ ಆಟೋದಲ್ಲಿ ನಮ್ಮನ್ನು ಕೂರಿಸಿಕೊಂಡು ಅಂಡಮಾನಿನ ವಿವಿಧ ಪ್ರೇಕ್ಷಣೀಯ ಸ್ಥಳಗಳ ಕುರಿತು ವಿವರಿಸುತ್ತ, ಎಲ್ಲಿ ಏನು ನೋಡಬೇಕು? ಸಮಯದ ಉತ್ತಮ ಬಳಕೆ ಹೇಗೆ? ಯಾವ ಸಾರಿಗೆ ವ್ಯವಸ್ಥೆ ಹೆಚ್ಚು ಉಪಯುಕ್ತ? ಆಫ್‌ಲೈನ್‌ನಲ್ಲಿ ಫೆರಿ ಬುಕ್ಕಿಂಗ್ ಹೇಗೆ ಮಾಡಬೇಕು? ಉತ್ತಮ ಊಟ ಎಲ್ಲ ಸಿಗುತ್ತದೆ ಎಂಬ ಮುಂತಾದ ಎಲ್ಲ ಮಾಹಿತಿಗಳನ್ನು ತಿಳಿಸಿಕೊಟ್ಟರು. ಶುದ್ಧ ಸಸ್ಯಾಹಾರಿಗಳಾದ ನಮಗೆ ʼಕಟ್ಟಾ ಬೊಮ್ಮನ್‌ ʼ ಎಂಬ ಹೊಟೇಲ್ ಕೂಡ ಪರಿಚಯಿಸಿದರು.

Untitled design

ಗೋಪಾಲ್‌ ಅವರ ಬಳಿ ಅಂಡಮಾನಿನ ಬಗ್ಗೆ ಏನು ಕೇಳಿದರೂ ಉತ್ತರ ಸಿದ್ಧ. ಇದಕ್ಕಾಗಿಯೇ ಎಲ್ಲರೂ ಅವರನ್ನು ಹಾಸ್ಯಮಿಶ್ರಿತವಾಗಿ 'ಗೂಗಲ್ ಗೋಪಾಲ್' ಎಂದು ಕರೆಯುತ್ತಾರೆ! ನಾವು ಹ್ಯಾವ್ಲಾಕ್, ನೀಲ್ ಐಲ್ಯಾಂಡ್ ಗಳಿಗೆ ಅಥವಾ ಅಂಡಮಾನಿನ ಇತರ ಆಕರ್ಷಣೀಯ ಪ್ರೇಕ್ಷಣೀಯ ಸ್ಥಳಗಳಿಗೆ ಹೊರಟಾಗ, ನಾವು ತಂಗಿದ್ದ ಹೊಟೇಲ್ ಗೆ ಹತ್ತು ನಿಮಿಷಗಳ ಮುಂಚೆಯೇ ಧಾವಿಸಿ ಬರುತ್ತಿದ್ದ ಗೋಪಾಲ್‌ ನಮ್ಮನ್ನು ನಿರ್ಧರಿಸಿದ ಸಮಯಕ್ಕೆ ಸರಿಯಾಗಿ, ಕೇಳಿದ ಸ್ಥಳಕ್ಕೆ ನಿಖರವಾಗಿ ಡ್ರಾಪ್ ಮಾಡುತ್ತಿದ್ದರು. ಅಲ್ಲದೆ, ಸ್ಥಳೀಯವಾಗಿ ಓಡಾಡಲು ನಾವು ಸ್ಕೂಟರ್ ಬೇಕೆಂದಾಗ ಕೂಡಾ ಖುದ್ದಾಗಿ ಅವರಿಗೆ ಪರಿಚಿತವಿರುವ ‘ಬೈಕ್‌ ರೆಂಟಲ್‌ ಬುಕಿಂಗ್ ಶಾಪ್‌ ಗೆ’ ನಮ್ಮನ್ನು ಕರೆದುಕೊಂಡು ಹೋಗಿ, ಮೈಲೇಜ್ ಮತ್ತು ವಾಹನದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯಾವ ಮಾದರಿಯ ಬೈಕ್ ಉತ್ತಮವೆಂದು ಸೂಕ್ತ ಸಲಹೆ ನೀಡಿದರು. ಪೋರ್ಟ್ ಬ್ಲೇರ್ ನಿಂದ ಸುಮಾರು 18–20 ಕಿಮೀ ದೂರದಲ್ಲಿರುವ ಅದ್ಭುತ ಸೂರ್ಯಾಸ್ತಮಾನದ ಸ್ಥಳವಾದ 'ಚಿಡಿಯಾ ತಪು’ ವಿಗೆ ಸ್ಕೂಟರ್ ಮೂಲಕ ಹೋಗಿ ಬರಲು ಸಹ ಸೂಚಿಸಿದರು. ಗೌರ್ನಮೆಂಟ್ / ಪ್ರೈವೇಟ್ ಫೆರಿ‌ಯನ್ನು ಅವರೇ ಬುಕ್ ಮಾಡಿಸಿ ಕೊಟ್ಟರು. 'ಸ್ಕೂಬಾ ಡೈವಿಂಗ್' ಎಲ್ಲಿ ಮಾಡುವುದು ಸೂಕ್ತ ಎಂದು ತಿಳಿಸಿ ಅದಕ್ಕೂ ಪರೋಕ್ಷವಾಗಿ ವ್ಯವಸ್ಥೆ‌ ಮಾಡಿಕೊಟ್ಟರು. ಈ ಎಲ್ಲ ಮಾಹಿತಿಗಳು ನಮಗೆ ಗೂಗಲ್‌ ಮೂಲಕ ಸಿಗಬಹುದಾಗಿದ್ದರೂ ಅಥವಾ ಗೂಗಲ್‌ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದಾದ ವಿಷಯಗಳೆನಿಸಿದರೂ, ಗೊತ್ತಿರದ ಅಪರಿಚಿತ ಸ್ಥಳದಲ್ಲಿ ಗೋಪಾಲ್ ರಂಥ ಸಹೃದಯರ ಸಹಕಾರ ಸಿಗುವುದು ಮರುಭೂಮಿಯಲ್ಲಿ ಮಳೆಬಿದ್ದಂಥ ಅನುಭವ ನೀಡುತ್ತೆಂಬುದರಲ್ಲಿ ಎರಡು ಮಾತಿಲ್ಲ.

ನಾವು ಅಂಡಮಾನಿನಲ್ಲಿ ಕಳೆದ ಐದು-ಆರು ದಿನಗಳು ಸಂಪೂರ್ಣವಾಗಿ ಟೆನ್ಷನ್‌ ಫ್ರೀ ಹಾಗೂ ಆರಾಮದಾಯಕ ದಿನಗಳಾಗಿದ್ದವು. ಬಹುಪಾಲು ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾದ ರಾಸ್ ಐಲ್ಯಾಂಡ್, ನೀಲ್ ಐಲೆಂಡ್‌, ಕಾಲಾ ಪತ್ಥರ್‌, ಲಕ್ಷ್ಮಣ್ ಪುರ್‌ ಬೀಚ್‌, ಕಾರ್ಬಿನ್ಸ್‌ ಕೋವ್‌ ಬೀಚ್‌ ಹಾಗೂ ಇನ್ನಿತರ ಪ್ರಸಿದ್ಧ ಸ್ಥಳಗಳನ್ನು ನಾವು ಸುಲಭವಾಗಿ ಹಾಗೂ ಕಡಿಮೆ ಅವಧಿಯಲ್ಲಿ ನೋಡಲು ಸಾಧ್ಯವಾಯಿತು ಎಂದರೆ, ಅದಕ್ಕೆ ಪ್ರಮುಖ ಕಾರಣ ಗೋಪಾಲ್.

ವಿಶೇಷವಾಗಿ ನಾವು ಬೇರೆ-ಬೇರೆ ಐಲ್ಯಾಂಡ್‌ ಗಳಿಗೆ ಹೋದ ಸಂದರ್ಭಗಳಲ್ಲಿಯೂ, ಅಲ್ಲಿ ಅವರ ಪರಿಚಯದ ಟೂರಿಸ್ಟ್ ಕಾರು ಡ್ರೈವರ್‌ಗಳನ್ನು ಮುಂಚೆಯೇ ಗೊತ್ತು ಮಾಡಿ, ನಮಗೆ ʼಟೈಮ್‌ಲಿ ಡ್ರಾಪ್ ಮತ್ತು ಪಿಕಪ್ʼ ವ್ಯವಸ್ಥೆಯನ್ನು ಮಾಡಿದ್ದರು. ಸುಂದರ ಸ್ಥಳಗಳಲ್ಲಿ ನಮ್ಮ ಫೊಟೋಗಳನ್ನು ಸಹ ಕ್ಲಿಕ್ಕಿಸಿ ಕೊಟ್ಟರು. ಆಟೋದಲ್ಲಿ ನಮ್ಮನ್ನು ಸುತ್ತಿಸುವಾಗ ಅಂಡಮಾನಿನ ಕೆಲವಾರು ಬೀದಿಗಳ ಕಥೆಗಳು, ಪ್ರಮುಖ ಸ್ಥಳಗಳ ಮಾಹಿತಿ ಮತ್ತು ಅಲ್ಲಿನ ಜನರ ಇಷ್ಟ-ಕಷ್ಟ-ನಷ್ಟಗಳ ಕುರಿತು ತಿಳಿಸಿಕೊಟ್ಟರು. ಲಗೇಜ್‌ ಇಳಿಸಲು ಕೈ ಜೋಡಿಸುವಂಥ ಸಣ್ಣ ಸಹಾಯದಿಂದ ಹಿಡಿದು, ಅಂಡಮಾನಿನ ಸುಂದರ ಸ್ಥಳಗಳನ್ನು ನೋಡುವಂತೆ ಪ್ರೇರೇಪಿಸಿ, ಕೊನೆಗೆ ನಮ್ಮನ್ನು ಏರ್ ಪೋರ್ಟಿಗೆ ಸುರಕ್ಷಿತವಾಗಿ ಡ್ರಾಪ್‌ ಮಾಡುವ ತನಕ ಗೋಪಾಲ್‌ ತೋರಿಸಿದ ಕಾಳಜಿ, ನೀಡಿದ ಸಹಕಾರ ಮರೆಯಲಾರದಂಥದ್ದು. ಗೋಪಾಲ್ ಕೇವಲ ಆಟೋ ಡ್ರೈವರ್ ಆಗಿರದೆ, ನಮ್ಮ ಅಂಡಮಾನ್‌ ಪ್ರಯಾಣದ ಇಡೀ ಅನುಭವವನ್ನು ಸುಗಮಗೊಳಿಸಿದ ಅನ್ ಅಫಿಶಿಯಲ್ ಗೈಡಾಗಿ ರೂಪಾಂತರಗೊಂಡಿದ್ದರು!

ಅಸಲಿಗೆ ಅಂಡಮಾನಿನ ಅಪರಿಮಿತ ನೈಸರ್ಗಿಕ ಸೌಂದರ್ಯದ ಕುರಿತಾಗಿ ಬರೆಯಬೇಕೆಂದು ಪೆನ್ ಹಿಡಿದ ನಾನು ಬರೆದದ್ದು ಮಾತ್ರ ಗೂಗಲ್‌ ಗೋಪಾಲ್‌ ಬಗ್ಗೆ. ಗೋಪಾಲ್‌ ರ ಆಂತರಿಕ ಸೌಂದರ್ಯ, ಸೇವಾ ಮನೋಭಾವವೇ ಅವರ ಕುರಿತಂತೆ ಬರೆಯಲು ನನಗೆ ಪ್ರೇರಣೆ ನೀಡಿತು. ಕೆಲಸದ ಮೇಲಿನ ಅವರ ಶ್ರದ್ಧೆ, ಸಮಯಪಾಲನೆ , ತೋರಿದ ಯಾವುದೇ ಸಹಕಾರಕ್ಕೂ ನಮ್ಮಿಂದ ಹೆಚ್ಚಿನ ಹಣ ಅಪೇಕ್ಷಿಸದೆ, ಬೇಡದೆ, ತಮ್ಮ ಕೆಲಸಕ್ಕೆ ಎಷ್ಟು ನ್ಯಾಯಸಮ್ಮತವಾಗಿತ್ತೋ ಅಷ್ಟು ಹಣವನ್ನು ಮಾತ್ರ ಸ್ವೀಕರಿಸಿದ ಧರ್ಮನಿಷ್ಠೆ, ಅವರಲ್ಲಿದ್ದ ಪ್ರಾಮಾಣಿಕತೆ, ಮತ್ತು ಪಾರದರ್ಶಕತೆ ನನ್ನ ಬರಹದ ದಿಕ್ಕನೇ ಬದಲಿಸಿ ಬಿಟ್ಟಿತು. ಈ ಬರಹ ಗೋಪಾಲ್‌ ರಂಥ ಎಷ್ಟೋ ನಿಷ್ಠಾವಂತ ಶ್ರಮಜೀವಿಗಳಿಗೆ ಸರ್ಮಪಣೆಯೂ ಹೌದು. ಇದೀಗ ನಮ್ಮ ಅಂಡಮಾನಿನ ಪ್ರಯಾಣದ ಕತೆಯಲ್ಲಿ, ಗೋಪಾಲ್‌ ಒಬ್ಬ ಪ್ರಮುಖ ಪಾತ್ರಧಾರಿಯಾಗಿ ಹೋಗಿದ್ದಾರೆ! ಅಂಡಮಾನ್‌ ಎಂದರೆ ನೀಲಿ ಕಡಲತೀರ, ದಟ್ಟ ಕಾಡು, ಆದಿವಾಸಿ ಜನಾಂಗ, ಸೂರ್ಯಾಸ್ತಮಾನ ಇತ್ಯಾದಿ ನೆನಪಾಗುವುದರೊಟ್ಟಿಗೆ ಇದೀಗ ಲಾಫಿಂಗ್‌ ಬುದ್ಧನಂಥ ನಗುಮೊಗ ಹೊತ್ತ ಗೋಪಾಲ್‌ ರವರು ಕೂಡ ನೆನಪಾಗುತ್ತಾರೆ. ಒಂದು ಮುಗುಳ್ನಗೆ ತರಿಸುತ್ತಾರೆ!

ಗಮನಿಸಿ ನೋಡಿದರೆ, ಈ ಡಿಜಿಟಲ್‌ ಯುಗದಲ್ಲಿ ನಾವು ಊಟ, ಹೋಟೆಲ್ ರೂಮ್, ಕಾರ್, ಆಟೋ ಹೀಗೆ ಏನೂ ಬೇಕಾದರು ಒಂದೇ ಕ್ಲಿಕ್ಕಿನಲ್ಲಿ ಬುಕ್ ಮಾಡಿ ಪಡೆಯಬಹುದು. ‌ಆದರೆ ಸಹಾನುಭೂತಿ, ನಿಷ್ಠೆ, ಸೌಜನ್ಯ ಎಂಬ ಮಾನವೀಯ ಮೌಲ್ಯಗಳನ್ನು ಯಾವ ಅಪ್ಲೀಕೇಶನ್ ನಲ್ಲಿಯೂ ಬುಕ್ ಮಾಡಿ ಪಡೆಯಲು ಸಾಧ್ಯವಿಲ್ಲ ಅಲ್ಲವೇ? ಇವು ಬದುಕಿನ ಅನುಭವಗಳಲ್ಲಿ ಮಾತ್ರ ಲಭ್ಯ.

ಗೂಗಲ್ ಜಿ.ಪಿ.ಸ್‌ ಸಹಾಯದಿಂದ ದಾರಿ ಕಂಡು ಗುರಿ ತಲುಪಬಹುದು, ಆದರೆ ಗೋಪಾಲ್ ರಂಥ ಜೀವಗಳ ಒಡನಾಟದಿಂದ ನಮ್ಮ ಪ್ರಯಾಣದ ದಾರಿಯಲ್ಲಿ ಮತ್ತೋಂದಿಷ್ಟು ಖುಷಿ ಹಾಗೂ ನಿರಾಳತೆ ಸಿಗಬಹುದಲ್ಲವೇ?

ಒಟ್ಟಾರೆ ತಂತ್ರಜ್ಞಾನ ಎಷ್ಟೇ ಮುಂದವರೆದರು ಮನುಷ್ಯನ ಒಡನಾಟದ ಮೌಲ್ಯಕ್ಕೆ ಇರುವ ತೂಕವನ್ನು ಯಾವ ಡಿಜಿಟಲ್ ಸಾಧನೆಯೂ ಸರಿದೂಗಿಸಲಾರದು ಎಂಬುದನ್ನು ಗೋಪಾಲ್ ರವರಂಥ ವ್ಯಕ್ತಿಗಳು ಮತ್ತೆ-ಮತ್ತೆ ಸಾಬೀತುಪಡಿಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ!

ನಿಮ್ಮಲ್ಲಿ ಯಾರಾದರೂ ಅಂಡಮಾನಿಗೆ ಹೊರಟಿದ್ದರೆ ನೀವೂ ಈ ಹ್ಯೂಮನ್ ಜಿಪಿಎಸ್ - ಗೂಗಲ್‌ ಗೋಪಾಲ್‌ ರವರನ್ನು ಸಂಪರ್ಕಿಸಬಹುದು. ಅವರ ವಾಟ್ಸಪ್ ನಂಬರ್ : 95319 18600

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!