ಜಾಡ್ಯರೋಗಕ್ಕೆ ಪ್ರವಾಸವೇ ಮದ್ದು!
ನೇರವಾಗಿ ವಿಷಯಕ್ಕೆ ಬರೋಣ. ಪ್ರವಾಸ ಮಾಡುವುದರಿಂದ ಎಷ್ಟೆಲ್ಲ ಆರೋಗ್ಯ ಪ್ರಯೋಜನಗಳಿವೆ? ಮನೋವೈದ್ಯರು ಹೇಳುವುದೇನು?
ಒತ್ತಡದ ಜೀವನಶೈಲಿಯಿಂದಾಗಿ ಮನೆಬಿಟ್ಟರೆ ಆಫೀಸಿಗೆ ಮತ್ತೆ ಅಲ್ಲಿಂದ ಸಂಜೆ ಮನೆಗೆ. ಈ ಜೀವನಶೈಲಿಯನ್ನು ನೀವೂ ಕೂಡ ನಡೆಸುತ್ತಿದ್ದರೆ ಆದಷ್ಟು ಬೇಗ ಅದಕ್ಕೊಂದು ಪೂರ್ಣ ವಿರಾಮವಿಡಿ. ಇಂಥ ಜೀವನಶೈಲಿ ನಿಮ್ಮ ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಮನೋವೈದ್ಯರು ಎಚ್ಚರಿಸುತ್ತಾರೆ. ಬದಲಿಗೆ ವಾರಾಂತ್ಯದಲ್ಲಿ ನಿಮ್ಮ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಒಂದು ಸಣ್ಣ ಟ್ರಿಪ್ ಹೋಗಿ ಬನ್ನಿ.
ಪ್ರಯಾಣವು ಕೇವಲ ಮೋಜು ಮತ್ತು ಮನರಂಜನೆಯಲ್ಲ ಬದಲಾಗಿ ಅದು ಆರೋಗ್ಯವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿಡುತ್ತದೆ. ಹೊಸ ಸ್ಥಳಗಳಿಗೆ ಪ್ರಯಾಣಿಸುವುದು ಮತ್ತು ಭೇಟಿ ನೀಡುವುದು ದೇಹಕ್ಕೆ ಮಾತ್ರವಲ್ಲದೆ ಮನಸ್ಸಿಗೂ ಪ್ರಯೋಜನವನ್ನು ನೀಡುತ್ತದೆ.
ಮಾನಸಿಕ ಒತ್ತಡ ಮಾಯ
ಕೆಲಸದ ಜಂಜಾಟವನ್ನು ಬಿಟ್ಟು ಹೊಸ ಹೊಸ ಹಚ್ಚಹಸಿರಿನ ಸ್ಥಳಗಳಿಗೆ ಹೋಗುವುದರಿಂದ ಮನಸ್ಸಿಗೆ ವಿಶ್ರಾಂತಿ ಮತ್ತು ಶಾಂತಿ ಸಿಗುತ್ತದೆ. ಇದು ಆತಂಕವನ್ನೂ ಕಡಿಮೆ ಮಾಡುತ್ತದೆ. ಪ್ರಯಾಣವು ಡೋಪಮೈನ್ ಮತ್ತು ಸಿರೊಟೋನಿನ್ ನಂಥ ಸಂತೋಷದ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸುತ್ತದೆ, ಇದು ವ್ಯಕ್ತಿಯನ್ನು ಹೆಚ್ಚು ಹರ್ಷಚಿತ್ತದಿಂದ ಮತ್ತು ಶಕ್ತಿಯುತವಾಗಿಸುತ್ತದೆ. ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯಕ್ಕೆ ಮೊದಲು ಆದ್ಯತೆ ನೀಡಿ.

ಬೊಜ್ಜು ಕರಗುತ್ತದೆ!
ಪ್ರವಾಸ ಕೈಗೊಳ್ಳುವುದರಿಂದ, ಅದರಲ್ಲೂ ಚಾರಣದಂಥ ಪ್ರವಾಸದಲ್ಲಿ ನಡಿಗೆಯಿಂದ ಸಾಕಷ್ಟು ಆರೋಗ್ಯಕ್ಕೆ ಪ್ರಯೋಜನಗಳಿವೆ. ಪರ್ವತಗಳಲ್ಲಿ ಚಾರಣ ಮಾಡುವುದು, ಕಡಲತೀರದಲ್ಲಿ ನಡೆಯುವುದು ಅಥವಾ ನಗರದ ಸುತ್ತಲೂ ತಿರುಗಾಡುವುದು ಹೃದಯ ಮತ್ತು ಶ್ವಾಸಕೋಶಗಳನ್ನು ಬಲಪಡಿಸುತ್ತದೆ. ಇದು ಹೃದ್ರೋಗ ಮತ್ತು ಬೊಜ್ಜಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಬೊಜ್ಜು ಎಲ್ಲ ರೋಗಗಳಿಗೂ ಮೂಲ ಕಾರಣ. ಇದು ನಿಮ್ಮ ಬಾಹ್ಯ ಸೌಂದರ್ಯವನ್ನು ಹಾಳು ಮಾಡುವುದಲ್ಲದೇ ಆಂತರಿಕವಾಗಿ ಅಪಾಯಕಾರಿಯಾಗಿದೆ. ಆದ್ದರಿಂದ ಬೊಜ್ಜು ಕರಗಿಸಲು ಪ್ರವಾಸ ಕೈಗೊಳ್ಳುವುದು ಉತ್ತಮ.
ರೋಗನಿರೋಧಕ ವ್ಯವಸ್ಥೆ ಸದೃಢ
ನೀವು ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸಿದಾಗ, ದೇಹವು ವಿಭಿನ್ನ ಪರಿಸರ ಮತ್ತು ಬ್ಯಾಕ್ಟೀರಿಯಾಗಳೊಂದಿಗೆ ಸಂಪರ್ಕಕ್ಕೆ ಬರುತ್ತದೆ. ಇದು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆ ಮೂಲಕ ರೋಗಗಳಿಂದ ರಕ್ಷಿಸುತ್ತದೆ. ಇದು ದೇಹವು ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯುತ್ತದೆ. ಸಾಮಾನ್ಯವಾಗಿ ಹವಾಮಾನ ಬದಲಾವಣೆಯಿಂದಾಗಿ ಸಾಕಷ್ಟು ಜನರಲ್ಲಿ ಶೀತ, ಜ್ವರದಂಥ ಸೋಂಕುಗಳು ಹರಡುವುದು ಹೆಚ್ಚು. ಆದ್ದರಿಂದ ನೀವು ಪ್ರವಾಸ ಮಾಡುತ್ತಾ ವಿಭಿನ್ನ ಪರಿಸರಕ್ಕೆ ಒಗ್ಗಿಕೊಳ್ಳುತ್ತಿದ್ದರೆ, ನಿಮ್ಮಲ್ಲಿ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಜೊತೆಗೆ ಶೀತ, ಜ್ವರದಂಥ ಸೋಂಕುಗಳು ಪದೇಪದೆ ನಿಮ್ಮ ಹತ್ತಿರ ಸುಳಿಯುವುದಿಲ್ಲ.
ನಿದ್ರಾಹೀನತೆಗೆ ರಾಮಬಾಣ
ಹಚ್ಚಹಸಿರಿನ ಪರಿಸರದೊಂದಿಗೆ ಕಾಲ ಕಳೆಯುತ್ತಿದ್ದಂತೆ, ಅಲ್ಲಿನ ನೈಸರ್ಗಿಕ ಸೌಂದರ್ಯ ನಿಮ್ಮನ್ನು ಒತ್ತಡದಿಂದ ಮುಕ್ತವಾಗಿಸುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಪ್ರಯಾಣವು ನಿದ್ರಾಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ನಿದ್ರಾಹೀನತೆ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನಿದ್ದೆ ಆರೋಗ್ಯಕ್ಕೆ ಬಹಳ ಮುಖ್ಯ. ಸಾಕಷ್ಟು ನಿದ್ದೆ ಮಾಡುವುದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅತ್ಯಗತ್ಯ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ, ನಿಮ್ಮ ಮೆದುಳಿನ ಕಾರ್ಯನಿರ್ವಹಣೆಯನ್ನು ಹೆಚ್ಚಿಸುತ್ತದೆ ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಪ್ರವಾಸಂ ಆತ್ಮವಿಶ್ವಾಸ ವರ್ಧಕಂ!
ಸಾಕಷ್ಟು ಜನರಿಗೆ ಒಂಟಿಯಾಗಿ ಪ್ರಯಾಣಿಸುವುದು(Solo Trip) ಎಂದರೆ ಎಲ್ಲಿಲ್ಲದ ಭಯ. ಹೊಸ ಜಾಗ ಏನಾದರೂ ಅಪಾಯವಾದರೆ ಯಾರು ಗತಿ ಎಂಬ ಭಯ ಹುಟ್ಟಿಕೊಂಡಿರುತ್ತದೆ. ಆದರೆ ಒಂದು ಸಲ ನೀವು ಒಂಟಿಯಾಗಿ ಪ್ರಯಾಣಿಸಲು ಪ್ರಯತ್ನಿಸಿದರೆ, ಮುಂದಿನ ಸಲ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನೀವು ಹೊಸ ಸ್ಥಳಗಳಿಗೆ ಭೇಟಿ ನೀಡಿದಾಗ, ಮೆದುಳಿನ ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಇದು ನಿಮಗೆ ವಿಭಿನ್ನ ಸಂಸ್ಕೃತಿಗಳು, ಭಾಷೆಗಳು ಮತ್ತು ಸಂಪ್ರದಾಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ, ನಿಮ್ಮನ್ನು ಹೆಚ್ಚು ಸೃಜನಶೀಲಗೊಳಿಸುತ್ತದೆ. ಪ್ರಯಾಣವು ಮೆದುಳಿನ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳು ಸಾಬೀತುಪಡಿಸಿವೆ. ಇದು ಹೊಸ ವಿಷಯಗಳನ್ನು ಕಲಿಯಲು ಅವಕಾಶವನ್ನು ನೀಡುತ್ತದೆ, ಸಂವಹನ ಕೌಶಲ್ಯಗಳನ್ನು ಸುಧಾರಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಇಷ್ಟೆಲ್ಲ ಹೇಳಿದಮೇಲೆ ಇನ್ನೇಕೆ ತಡ? ಸಿಟಿ ಜಂಜಾಟ ಬಿಟ್ಟು, ವಾರಾಂತ್ಯದಲ್ಲಿ ನಿಮ್ಮವರಿಗಾಗಿ ಸಮಯ ಕೊಡಿ. ಅವರೊಂದಿಗೆ ಪ್ರಯಾಣವನ್ನು ಬೆಳೆಸಿ. ನಿಮ್ಮರೊಂದಿಗೆ ಪ್ರಕೃತಿ ಜೊತೆ ಸಮಯ ಕಳೆಯಿರಿ. ಇದು ನಿಮ್ಮ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ನಿಮ್ಮ ಆರೋಗ್ಯವೂ ವೃದ್ಧಿಯಾಗುತ್ತದೆ. ಹಾಗಾದ್ರೆ ಬ್ಯಾಕ್ ಪ್ಯಾಕ್ ರೆಡಿ ಮಾಡ್ಕೋತೀರಿ ಅಲ್ವಾ?