ವಯನಾಡಿನ ಮಡಿಲಲ್ಲಿ ಲವಕುಶರ ಜತೆಗಿರುವ ಸೀತೆ
ಈ ಸ್ಥಳದ ಒಂದು ಸ್ವಾರಸ್ಯವೆಂದರೆ ವಯನಾಡಿನಲ್ಲಿ ಸಾಮಾನ್ಯವಾದ ಜಿಗಣೆಗಳು ಇಲ್ಲಿ ಮಾತ್ರ ಇಲ್ಲ! ಇದಕ್ಕೆ ಒಂದು ಸ್ಥಳೀಯ ಕಥೆ ಹೇಳುತ್ತಾರೆ. ಒಮ್ಮೆ ಜಿಗಣೆಗಳು ಲವ, ಕುಶರನ್ನು ಕಚ್ಚಲು ಬಂದಾಗ ಕೋಪಗೊಂಡ ಸೀತಾದೇವಿ ಪುಳ್‌ಪಲ್ಲಿಯಲ್ಲೆಲ್ಲೂ ಜಿಗಣೆಗಳಿರಬಾರದೆಂದು ಶಪಿಸಿದಳಂತೆ! ಹಾಗಾಗಿ ಇಲ್ಲೆಲ್ಲೂ ಜಿಗಣೆಗಳಿಲ್ಲ.
- ಡಾ.ಬಿ.ಆರ್.ಸುಹಾಸ್
ದೇವರ ಸ್ವಂತ ನಾಡು ಎಂದು ಕರೆಸಿಕೊಳ್ಳುವ ಕೇರಳ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಇಲ್ಲಿರುವ ಕೆಲವು ಸುಂದರ ಗಿರಿಧಾಮಗಳಲ್ಲಿ ವಯನಾಡು ಸುಪ್ರಸಿದ್ಧ. ಆದರೆ ವಯನಾಡು ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧವಾಗಿರುವುದಷ್ಟೆ ಅಲ್ಲದೇ ಕೆಲವು ಅಪರೂಪದ ದೇವಾಲಯಗಳನ್ನೂ ಹೊಂದಿದೆ. ಅಂಥ ಒಂದು ದೇವಾಲಯ, ಸೀತಾದೇವಿ ಲವಕುಶ ದೇವಾಲಯ. ಮಕ್ಕಳಾದ ಲವ, ಕುಶರೊಂದಿಗೆ ಪೂಜೆಗೊಳ್ಳುವ ಸೀತೆಯ ಈ ಮಂದಿರ ಬಹಳ ವಿಶಿಷ್ಟವೂ ಅಪರೂಪವೂ ಆಗಿದೆ. ಈ ದೇವಾಲಯ ಪುಳ್‌ಪಲ್ಲಿ ಎಂಬ ಸ್ಥಳದಲ್ಲಿದೆ. ಪುಳ್‌ಪಲ್ಲಿ ಎಂದರೆ ದರ್ಭೆಯ ಹಾಸಿಗೆ. ಲವನನ್ನು ಈ ದರ್ಬೆ ಹಾಸಿಗೆಯ ಮೇಲೆ ಮಲಗಿಸಿದ್ದರಿಂದ ಈ ಸ್ಥಳಕ್ಕೆ ಪುಳ್‌ಪಲ್ಲಿ ಎಂಬ ಹೆಸರು ಬಂದಿತೆಂದು ಇಲ್ಲಿನ ಸ್ಥಳೀಯ ಕಥೆ ಹೇಳುತ್ತದೆ.
ಇದನ್ನೂ ಓದಿ: ಇಲ್ಲಿ ಉಗಿಯುವುದು ಮತ್ತು ಉಗಿಸಿಕೊಳ್ಳುವುದು ಗೌರವ, ಅಭಿಮಾನದ ಸಂಗತಿ!
ಈ ದೇವಾಲಯವನ್ನು ಕೇರಳಿಯ ಶೈಲಿಯಲ್ಲಿ ಮರ ಮತ್ತು ಹೆಂಚನ್ನು ಬಳಸಿ ನಿರ್ಮಿಸಲಾಗಿದೆ. ದೇವಾಲಯದ ಭಿತ್ತಿಯ ಮೇಲೆ ಗಜಮುಖ ಮತ್ತು ನಂದಿಮುಖಗಳ ಮರದ ಕೆತ್ತನೆಗಳಿವೆ. ನೋಡಲು ಆಶ್ರಮದಂತಿರುವ ಈ ದೇವಾಲಯದ ಸುತ್ತಲೂ ದೊಡ್ಡ ಮೈದಾನದಂಥ ಆವರಣವಿದ್ದು ಪ್ರಶಾಂತ ವಾತಾವರಣವಿದೆ. ಇದನ್ನು ಹದಿನೆಂಟನೆಯ ಶತಮಾನದಲ್ಲಿ ಪಜಸಿ ರಾಜನು ನಿರ್ಮಿಸಿದನೆಂದು ಹೇಳಲಾಗಿದೆ. ಅವನು ಈ ದೇವಾಲಯದ ಆವರಣದಲ್ಲಿ ಸೇನಾಧ್ಯಕ್ಷರೊಡನೆ ಚರ್ಚೆಗಳನ್ನು ನಡೆಸುತ್ತಿದ್ದನಂತೆ. ಅವನ ನಂತರ, ದೇವಾಲಯದ ಆಡಳಿತ, ಸುಪ್ರಸಿದ್ಧ ನಾಯರ್ ಕುಟುಂಬಗಳಲ್ಲಿ ಒಂದಾದ ಕುಪ್ಪತೋಡ್ ಕುಟುಂಬದ ಕೈಗೆ ವರ್ಗಾವಣೆಯಾಯಿತು. ಆಗಿನ ಕಾಲದಲ್ಲಿ ವಯನಾಡಿನ ಬಹುತೇಕ ದೇವಾಲಯಗಳು ವಿವಿಧ ನಾಯರ್ ಕುಟುಂಬಗಳ ಆಡಳಿತದಲ್ಲಿದ್ದವು. ಕುಪ್ಪತೋಡ್ ಕುಟುಂಬದ ಮುಖ್ಯಸ್ಥನಾದ ಮೂಪಿಲ್ ನಾಯರ್ ಆಗ ನೆಲ್ಲರಟ್ ಈಡೋಮ್ ಎಂಬಲ್ಲಿ ವಾಸಿಸುತ್ತಿದ್ದನು. ಇದು ಕುಪ್ಪತೋಡ್ ನಾಯರ್ ಕುಟುಂಬಗಳ ಕೇಂದ್ರ ಸ್ಥಾನವಾಗಿತ್ತು. ಈ ಕುಪ್ಪತೋಡ್ ನಾಯರ್ ಕುಟುಂಬದವರು, ಸೀತಾದೇವಿ ಪರಿತ್ಯಜಿಸಲ್ಪಟ್ಟಾಗ, ಅವಳೊಂದಿಗಿದ್ದವರ ವಂಶಜರೆಂದು ನಂಬುತ್ತಾರೆ. ಈಗಲೂ ಈ ಕುಟುಂಬದವರೊಬ್ಭರು ಈ ದೇವಾಲಯದ ಟ್ರಸ್ಟೀ ಆಗಿದ್ದಾರೆ.

ಸುತ್ತ ಹುತ್ತಗಳು:
ಒಮ್ಮೆ ಟಿಪ್ಪು ಸುಲ್ತಾನ್ ಈ ದೇವಾಲಯವನ್ನು ನಾಶಮಾಡಲು ದಾಳಿ ಮಾಡಿದಾಗ, ಸೀತಾದೇವಿಯ ಪ್ರಭಾವದಿಂದ ಕತ್ತಲು ಕವಿದು ಅವನು ಹಿಮ್ಮೆಟ್ಟಬೇಕಾಯಿತೆಂದು ಒಂದು ಐತಿಹ್ಯವಿದೆ. ಈ ದೇವಾಲಯದ ಸನಿಹ ಒಂದು ದೊಡ್ಡ ಕೊಳವಿದ್ದು, ವಯನಾಡಿನ ಪ್ರದೇಶದ ದೊಡ್ಡ ಕೊಳಗಳಲ್ಲಿ ಇದು ಒಂದಾಗಿದೆ. ಈ ಸ್ಥಳದ ಒಂದು ಸ್ವಾರಸ್ಯವೆಂದರೆ ವಯನಾಡಿನಲ್ಲಿ ಸಾಮಾನ್ಯವಾದ ಜಿಗಣೆಗಳು ಇಲ್ಲಿ ಮಾತ್ರ ಇಲ್ಲ! ಇದಕ್ಕೆ ಒಂದು ಸ್ಥಳೀಯ ಕಥೆ ಹೇಳುತ್ತಾರೆ. ಒಮ್ಮೆ ಜಿಗಣೆಗಳು ಲವ, ಕುಶರನ್ನು ಕಚ್ಚಲು ಬಂದಾಗ ಕೋಪಗೊಂಡ ಸೀತಾದೇವಿ ಪುಳ್‌ಪಲ್ಲಿಯಲ್ಲೆಲ್ಲೂ ಜಿಗಣೆಗಳಿರಬಾರದೆಂದು ಶಪಿಸಿದಳಂತೆ! ಹಾಗಾಗಿ ಇಲ್ಲೆಲ್ಲೂ ಜಿಗಣೆಗಳಿಲ್ಲ. ಈ ಸ್ಥಳದ ಇನ್ನೊಂದು ಸ್ವಾರಸ್ಯವೆಂದರೆ ಅಲ್ಲಲ್ಲಿ ಹುತ್ತಗಳಿವೆ. ತಪಸ್ಸು ಮಾಡುತ್ತಿದ್ದ ವಾಲ್ಮೀಕಿ ಮುನಿಗಳ ಸುತ್ತಲೂ ಹುತ್ತ ಬೆಳೆದುಕೊಂಡು ಅದರಿಂದ ಅವರು ಹೊರಬಂದರಷ್ಟೇ? ವಲ್ಮೀಕ ಆಥವಾ ಹುತ್ತದಿಂದ ಹೊರಬಂದುದರಿಂದ ಅವರಿಗೆ ವಾಲ್ಮೀಕಿ ಎಂದು ಹೆಸರಾಯಿತು. ಅವರ ಆಶ್ರಮ ಇಲ್ಲೇ ಇತ್ತು ಎಂದು ಹುತ್ತಗಳು ಸೂಚಿಸುತ್ತವೆ ಎಂದು ಹೇಳುತ್ತಾರೆ.
ರಾಮನಿಲ್ಲದ ಗುಡಿ:
ದೇವಾಲಯದ ಗರ್ಭಗುಡಿಯಲ್ಲಿ ಸೀತಾದೇವಿ, ಹಾಗೂ ಲವ,ಕುಶರ ವಿಗ್ರಹಗಳಿವೆ. ಆದರೆ ರಾಮನ ವಿಗ್ರಹವಿಲ್ಲ. ಸೀತಾದೇವಿಯೊಂದಿಗೆ ಲವ, ಕುಶರೂ ಪೂಜೆಗೊಳ್ಳುವ ಈ ದೇವಾಲಯ ಅತ್ಯಂತ ಅಪರೂಪದ್ದು. ಇಲ್ಲಿ ಲವ, ಕುಶರಿಗೆ ಮುರಿಕಣ್ಮರ್ (ಬಾಲಮುನಿಗಳು) ಎನ್ನುತ್ತಾರೆ. ಇಲ್ಲಿನ ಇತರ ಉಪದೇವತಾ ವಿಗ್ರಹಗಳೆಂದರೆ, ಗಣಪತಿ, ವೇಟ್ಟಕೋರುಮಕನ್ (ಕಿರಾತ ರೂಪದ ಶಿವ, ಪಾರ್ವತಿಯರ ಒಬ್ಬ ಪುತ್ರ) ಮತ್ತು ಸುಬ್ರಮಣಿಯನ್ (ಷಣ್ಮುಖ). ಜನವರಿ ತಿಂಗಳ ಮೊದಲ ವಾರದಲ್ಲಿ ಇಲ್ಲಿ ದೇವಾಲಯದ ಉತ್ಸವ ಆಚರಿಸುತ್ತಾರೆ. ಎಲ್ಲ ಜಾತಿ, ವರ್ಗಗಳ ಜನರೂ ಇಲ್ಲಿ ಬಂದು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಸ್ಥಳೀಯ ಕಥೆಗಳ ಪ್ರಕಾರ, ಲೋಕಾಪವಾದವುಂಟಾಗಬಾರದೆಂದು ಶ್ರೀರಾಮನು ಸೀತಾದೇವಿಯನ್ನು ಪರಿತ್ಯಜಿಸಿದ ಬಳಿಕ, ಅವಳು ಈ ಸ್ಥಳಕ್ಕೆ ಬಂದಳು. ಇಲ್ಲಿ ವಾಲ್ಮೀಕಿ ಮುನಿಗಳ ಆಶ್ರಮವಿತ್ತೆಂದು ಹೇಳುತ್ತಾರೆ. ಹಾಗಾಗಿ ವಾಲ್ಮೀಕಿಗಳು ಅವಳಿಗೆ ಆಶ್ರಯ ಕೊಟ್ಟರು. ಗರ್ಭಿಣಿಯಾಗಿದ್ದ ಸೀತೆ ಇಲ್ಲಿಯೇ ಪುತ್ರರಾದ ಲವ, ಕುಶರಿಗೆ ಜನ್ಮ ಕೊಟ್ಟಳು. ಅನಂತರ ವಾಲ್ಮೀಕಿಗಳು ಅವರಿಗೆ ವಿದ್ಯಾಭ್ಯಾಸ ಮಾಡಿಸಿದರು. ಶ್ರೀರಾಮನು ಅಶ್ವಮೇಧ ಯಾಗ ಮಾಡಿದಾಗ ಯಜ್ಞಾಶ್ವವನ್ನು ಸಂಚಾರಕ್ಕೆ ಬಿಟ್ಟಾಗ ಲವ, ಕುಶರು ಇಲ್ಲಿ ಆ ಯಜ್ಞಾಶ್ವವನ್ನು ಹಿಡಿದು ಕಟ್ಟಿದರು ಹಾಗೂ ಅದನ್ನು ಬಿಡಿಸಲು ಶ್ರೀರಾಮನು ಬಂದಾಗ, ಸೀತೆಯನ್ನು ನೋಡಿದನು. ಆಗ ಸೀತೆಯು ಭೂಮಿಯೊಳಗೆ ಹೊರಟುಹೋದಳೆಂದು ಕಥೆ.
ಜಡಯಟ್ಟಕಾವು ದೇವಾಲಯ
ಈ ದೇವಾಲಯದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಚೆಡಟ್ಟಿನ್ಕಾವು ಅಥವಾ ಜಡೆಯಟ್ಟಕಾವು ಎಂಬ ಇನ್ನೊಂದು ದೇವಾಲಯವಿದೆ. ಇದು ಅರಣ್ಯಪ್ರದೇಶದಲ್ಲಿದೆ. ಇಲ್ಲಿನ ವಾತಾವರಣ ಪ್ರಶಾಂತವಾಗಿದೆ. ಇದೇ ಸೀತೆಯು ತನ್ನ ತಾಯಿ ಭೂಮಿಯೊಳಗೆ ಹೋದ ಸ್ಥಳ ಎಂದು ಇಲ್ಲಿಯವರು ಹೇಳುತ್ತಾರೆ. ಸೀತೆಯು ಭೂಮಿಯೊಳಗೆ ಹೋಗುತ್ತಿದ್ದಾಗ, ರಾಮನು ಅವಳನ್ನು ತಡೆಯಲು ಅವಳ ಜಟೆಯನ್ನು ಹಿಡಿದು ಎಳೆದನಂತೆ! ಆಗ ಅವಳ ಜಟೆ ಕತ್ತರಿಸಿ ಅವನ ಕೈಗೆ ಬಂತು! ಚೆಡ ಅಥವಾ ಜಡ ಎಂದರೆ ಜಟೆ ಹಾಗೂ ಅಟ್ಟ ಎಂದರೆ ಎಳೆದ, ಹಾಗೂ ಕಾವು ಎಂದರೆ ಪವಿತ್ರ ವನ. ಹಾಗಾಗಿ ಈ ಸ್ಥಳಕ್ಕೆ ಚೆಡಟ್ಟಿನ್ಕಾವು ಅಥವಾ ಜಡಯಟ್ಟಕಾವು ಎಂಬ ಹೆಸರು ಬಂದಿದೆ. ಇಲ್ಲಿ ಸೀತಾದೇವಿ ಪ್ರಧಾನ ದೇವತೆಯಾಗಿದ್ದು ಜತೆಗೆ ಸಪ್ತಮಾತೃಕೆಯರೂ, ಗಣಪತಿ, ವೀರಭದ್ರರೂ ಇದ್ದಾರೆ. ಇಲ್ಲಿ ಸೀತೆಯು ಪ್ರವೇಶಿಸಿದ ಭೂಮಿಯನ್ನೇ ಸೀತಾದೇವಿ ಎಂದು ಪೂಜಿಸುತ್ತಾರೆ. ಹಾಗಾಗಿ ಇಲ್ಲಿ ಸೀತೆಯ ವಿಗ್ರಹ ಹಾಗೂ ಒಂಭತ್ತು ವಿಗ್ರಹಗಳು ಮಾತ್ರ ಇವೆ. ಸೀತಾದೇವಿಯನ್ನು ಇಲ್ಲಿ ಚೆಡಟ್ಟಿಲಮ್ಮ ಅಥವಾ ಚೆಡಟ್ಟಿನ್ಕಾವಿಲಮ್ಮ ಎಂದು ಕರೆಯುತ್ತಾರೆ. ಇದು ಪುಳ್‌ಪಲ್ಲಿಯ ಮೂಲ ದೇವಾಲಯ ಅಥವಾ ಮೂಲಸ್ಥಾನ ಎಂದು ಹೇಳುತ್ತಾರೆ. ಇಲ್ಲಿ ನೆಯ್ ಅಥವಾ ತುಪ್ಪ ಪ್ರಧಾನ ನೈವೇದ್ಯ.

ಶ್ರೀರಾಮನು ಇದ್ದದ್ದು ಅಯೋಧ್ಯೆಯಲ್ಲಿ ಹಾಗೂ ಅವನು ಸೀತೆಯನ್ನು ಪರಿತ್ಯಾಗ ಮಾಡಿದಾಗ ಅವಳು ಅಲ್ಲಿಗೆ ಸನಿಹದಲ್ಲಿರುವ ವಾಲ್ಮೀಕಿ ಆಶ್ರಮಕ್ಕೆ ಹೋಗಿರಬೇಕೇ ಹೊರತು ಇಷ್ಟು ದೂರ ಕೇರಳದವರೆಗೆ ಬರಲು ಹೇಗೆ ಸಾಧ್ಯ ಎಂದು ತರ್ಕಿಸಬಹುದು. ರಾಮಾಯಣ ನಮ್ಮ ದೇಶದ ಎಲ್ಲಾ ರಾಜ್ಯಗಳ ಜನರಿಗೂ, ಅಷ್ಟೇಕೆ, ವಿದೇಶಗಳಲ್ಲೂ ಶ್ರದ್ಧೆಯ ವಸ್ತು. ಹಾಗಾಗಿ ನಮ್ಮ ದೇಶದ ಯಾವುದೇ ಜಾಗಕ್ಕೆ ಹೋದರೂ ರಾಮಾಯಣದ ಯಾವುದಾದರೂ ಘಟನೆ ಅಲ್ಲಿ ನಡೆದಿತ್ತೆಂದು ಬಹಳ ಶ್ರದ್ಧೆ, ಪ್ರೀತಿಯಿಂದ ಜನರು ಹೇಳುತ್ತಾರೆ. ಇದು ದೇಶವನ್ನೂ ಜನರನ್ನೂ ಬೆಸೆಯುವ ವಿಚಾರವೂ ಆಗಿದೆ. ಹಾಗಾಗಿ ಇಂಥ ದೇವಾಲಯಗಳನ್ನು ಹಾಗೂ ಸ್ಥಳಪುರಾಣಗಳನ್ನು ತರ್ಕಕ್ಕೂ ಮೀರಿ ಆಸ್ವಾದಿಸಿ ಆನಂದಿಸಬೇಕು.
ದಾರಿ ಹೇಗೆ?
ವಯನಾಡಿನ ಕೇಂದ್ರ ಸ್ಥಳವಾದ ಕಲ್ಪೆಟ್ಟದಿಂದ ಮೂವತ್ತೆರಡು ಕಿ.ಮೀ. ಹಾಗೂ ಸುಲ್ತಾನ್ ಬತೇರಿಯಿಂದ ಇಪ್ಪತ್ತೈದು ಕಿ.ಮೀ. ಗಳಷ್ಟು ದೂರದಲ್ಲಿರುವ ಈ ದೇವಾಲಯಕ್ಕೆ ರಸ್ತೆ ಸುಗಮವಾಗಿದೆ.