Monday, April 6, 2026
Monday, April 6, 2026

ಇಲ್ಲಿ ಉಗಿಯುವುದು ಮತ್ತು ಉಗಿಸಿಕೊಳ್ಳುವುದು ಗೌರವ, ಅಭಿಮಾನದ ಸಂಗತಿ!

ಯಾವುದೇ ಹೊಸ ವಸ್ತುವನ್ನು ಅಥವಾ ಉಡುಗೊರೆಯನ್ನು ಇನ್ನೊಬ್ಬರಿಗೆ ನೀಡುವ ಮುನ್ನ ಅದರ ಮೇಲೆ ಉಗುಳುವುದು ಅವರ ಪದ್ಧತಿ. ನಮ್ಮಲ್ಲಿ ಎಲ್ಲೆಡೆ 'ಇಲ್ಲಿ ಉಗುಳಬಾರದು' ಎಂದು ಬೋರ್ಡ್ ಹಾಕಿರುತ್ತೇವೆ. ಆದರೂ ಉಗುಳುತ್ತೇವೆ. ನಮ್ಮಲ್ಲಿ ಉಗುಳುವುದು ನಿಷಿದ್ಧ. ಹಾಗೆಯೇ ಯಾರೂ ಉಗಿಸಿಕೊಳ್ಳಲು (ಬೈಯಿಸಿಕೊಳ್ಳುವುದು) ಬಯಸುವುದಿಲ್ಲ. 'ಅವನಿಗೆ ಚೆನ್ನಾಗಿ ಉಗಿದೆ' ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ.

ವನ್ಯಜೀವಿ ಛಾಯಾಗ್ರಾಹಕರು ಒಮ್ಮೆಯಾದರೂ ಕೀನ್ಯಾದಲ್ಲಿರುವ ಮಸೈ ಮಾರಾಕ್ಕೆ ಹೋಗಬೇಕೆಂದು ಕನಸು ಕಾಣುತ್ತಾರೆ. ಇಬ್ಬರು ವನ್ಯಜೀವಿ ಛಾಯಾಗ್ರಾಹಕರು ಭೇಟಿಯಾದರೆ, ಮಸೈ ಮಾರಾ ಹಾದು ಹೋಗುತ್ತದೆ. ನಾನು ಅನೇಕ ಸಲ ಮಸೈ ಮಾರಾ ಹೆಸರನ್ನು ಕೇಳಿದ್ದೆ. ಒಮ್ಮೆಯಾದರೂ ಅಲ್ಲಿಗೆ ಹೋಗಬೇಕೆಂದು ನಾನೂ ಅಂದುಕೊಳ್ಳಲಾರಂಭಿಸಿದೆ, ಫೊಟೋ ತೆಗೆಯಲು ಅಲ್ಲ, ಫೊಟೋ ತೆಗೆಯುವವರನ್ನು ನೋಡಲು. ಫೊಟೋ ತೆಗೆಯುವುದಕ್ಕಿಂತಲೂ, ಫೊಟೋ ತೆಗೆಯುವವರ ಆ ಒಂದು 'ಹುಚ್ಚು' ಅಥವಾ 'ತಪಸ್ಸನ್ನು' ನೋಡುವುದೇ ಒಂದು ಅದ್ಭುತ ಅನುಭವ.

ಲಕ್ಷಾಂತರ ವೈಲ್ಡ್‌ಬೀಸ್ಟ್‌ಗಳು ಮತ್ತು ಜೀಬ್ರಾಗಳು ಮಾರಾ ನದಿಯನ್ನು ದಾಟುವ ದೃಶ್ಯವನ್ನು ಸೆರೆಹಿಡಿಯಲು ಸಾವಿರಾರು ಫೊಟೋಗ್ರಾಫರ್‌ಗಳು ಜಮಾಯಿಸುತ್ತಾರೆ. ಅಲ್ಲಿ ಪ್ರಾಣಿಗಳ ಆರ್ಭಟಕ್ಕಿಂತಲೂ ಹೆಚ್ಚಾಗಿ, ಕ್ಯಾಮೆರಾಗಳ 'ಕ್ಲಿಕ್-ಕ್ಲಿಕ್' ಸದ್ದು ಜೋರಾಗಿರುತ್ತದೆ. ಒಂದೊಂದು ದೊಡ್ಡ ಲೆನ್ಸ್ ಹೊಂದಿರುವ ಕ್ಯಾಮೆರಾ ಸೆಟಪ್ ನೋಡಿದರೆ ಅದು ಯಾವುದೋ ಯುದ್ಧಭೂಮಿಯಂತೆ ಕಾಣುತ್ತದೆ!

ಇದನ್ನೂ ಓದಿ: ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕು, ‘ಒಂದು ದೇಶ, ಒಂದು ಟೂರಿಸಂ ನೀತಿ’

ಮೈ ಕೊರೆಯುವ ಚಳಿಯಲ್ಲಿ, ಸರಿಯಾದ ಬೆಳಕಿಗಾಗಿ ಗಂಟೆಗಟ್ಟಲೆ ಕಾಯುವ ಅವರ ತಾಳ್ಮೆ ಅದ್ಭುತ. ಚಿರತೆಯೊಂದು ಮರದ ಮೇಲಿಂದ ಜಿಗಿಯುವ ಆ ಒಂದು ಕ್ಷಣಕ್ಕಾಗಿ (Action shot), ಇಡೀ ದಿನ ಊಟ-ನಿದ್ದೆ ಬಿಟ್ಟು ಕಾಯುವ ಅವರ ಶ್ರದ್ಧೆ ನೋಡಲು ಚೆಂದ. ಒಂದು ಪರ್ಫೆಕ್ಟ್ ಆಂಗಲ್‌ಗಾಗಿ ಜೀಪ್‌ನೊಳಗೆ ಹರಸಾಹಸ ಪಡುವ, ಕೆಳಗೆ ಮಲಗುವ ಅಥವಾ ಬಾಗಿ ನಿಲ್ಲುವ ಛಾಯಾಗ್ರಾಹಕರೇ ಸ್ವತಃ ಒಂದು 'ಫೊಟೋಜೆನಿಕ್' ವಿಷಯವಾಗಿರುತ್ತಾರೆ.

ಅದಿರಲಿ. ನಾನು ಅಲ್ಲಿಗೆ ಹೋದಾಗ, ನಮ್ಮ ಗೈಡ್ ಕಂ ಡ್ರೈವರ್ ಮಸೈ ಬುಡಕಟ್ಟು ಜನಾಂಗದವ. ಯಾಕೋ ಆತ ನನಗೆ ಬಹಳ ಹತ್ತಿರನಾದ. ಬೆಳಗಿನ ಸಫಾರಿ ಮುಗಿಸಿ ನನ್ನನ್ನು ಮಸೈ ಬುಡಕಟ್ಟು ಜನಾಂಗದವರಿರುವ ಒಂದು ಹಳ್ಳಿಗೆ ಕರೆದುಕೊಂಡ ಹೋದ. ಆ ಊರಿನಲ್ಲಿ ಹಿಂದಿನ ದಿನ ಹುಟ್ಟಿದ ಮಗುವನ್ನು ನೋಡಲು ನೂರಾರು ಜನ ಸೇರಿದ್ದರು. ಮಗುವನ್ನು ನೋಡಲು ಬಂದವರೆಲ್ಲ ಅದಕ್ಕೆ ಉಗುಳಿ ಹೋಗುತ್ತಿದ್ದರು. ಇದು ನನಗೆ ಅತಿ ವಿಚಿತ್ರ ಮತ್ತು ಅಸಹ್ಯವಾಗಿ ಕಂಡಿತು. ಹುಟ್ಟಿದ ಮಗುವಿಗೆ ಉಗುಳುವುದಾ, ಇದೆಂಥ ಸಂಸ್ಕೃತಿ ಎಂದೆನಿಸಿತು.

Untitled design (72)

ಆದರೆ ಆ ಜನಾಂಗದಲ್ಲಿ ಇದು ಗೌರವ ಸೂಚಕ ಮತ್ತು ಶುಭ ಕೋರುವ ಸಂಕೇತವಂತೆ. ಮಗುವಿಗೆ ಕೆಟ್ಟ ದೃಷ್ಟಿ ಬೀಳದಿರಲಿ ಮತ್ತು ಸುದೀರ್ಘ ಆಯಸ್ಸು ಪ್ರಾಪ್ತವಾಗಲಿ ಎಂದು ಮಗುವಿನ ಮೇಲೆ ಉಗುಳುತ್ತಾರಂತೆ.

ಅಲ್ಲಿನ ಜನರಿಗೆ ಎಂಜಲು ಎಂಬುದು ಹೊಲಸಲ್ಲ. ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಅಥವಾ ಹಿರಿಯರಿಗೆ ಗೌರವ ಸಲ್ಲಿಸುವಾಗ, ಅವರು ತಮ್ಮ ಕೈಗೆ ಉಗುಳಿಕೊಂಡು ನಂತರ ಹಸ್ತಲಾಘವ ಮಾಡುತ್ತಾರೆ. ಇದು ಎದುರಿಗಿರುವ ವ್ಯಕ್ತಿಯ ಬಗ್ಗೆ ತಮಗಿರುವ ಗೌರವ ಮತ್ತು ಶುಭ ಹಾರೈಕೆಯನ್ನು ತೋರಿಸುತ್ತದೆ. ಮಗಳ ಮದುವೆಯಾಗಿ ಆಕೆ ಗಂಡನ ಮನೆಗೆ ಹೊರಡುವಾಗ, ತಂದೆಯು ಮಗಳ ತಲೆಯ ಮೇಲೆ ಅಥವಾ ಎದೆಯ ಮೇಲೆ ಉಗುಳಿ ಆಶೀರ್ವದಿಸುತ್ತಾನೆ. ಇದು ಆಕೆಗೆ ಹೊಸ ಜೀವನದಲ್ಲಿ ಅದೃಷ್ಟ ತರಲಿ ಎಂಬ ಹಾರೈಕೆಯ ಸಂಕೇತವಂತೆ.

ಯಾವುದೇ ಹೊಸ ವಸ್ತುವನ್ನು ಅಥವಾ ಉಡುಗೊರೆಯನ್ನು ಇನ್ನೊಬ್ಬರಿಗೆ ನೀಡುವ ಮುನ್ನ ಅದರ ಮೇಲೆ ಉಗುಳುವುದು ಅವರ ಪದ್ಧತಿ. ನಮ್ಮಲ್ಲಿ ಎಲ್ಲೆಡೆ 'ಇಲ್ಲಿ ಉಗುಳಬಾರದು' ಎಂದು ಬೋರ್ಡ್ ಹಾಕಿರುತ್ತೇವೆ. ಆದರೂ ಉಗುಳುತ್ತೇವೆ. ನಮ್ಮಲ್ಲಿ ಉಗುಳುವುದು ನಿಷಿದ್ಧ. ಹಾಗೆಯೇ ಯಾರೂ ಉಗಿಸಿಕೊಳ್ಳಲು (ಬೈಯಿಸಿಕೊಳ್ಳುವುದು) ಬಯಸುವುದಿಲ್ಲ. 'ಅವನಿಗೆ ಚೆನ್ನಾಗಿ ಉಗಿದೆ' ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ನೋಟು ಎಣಿಸುವಾಗ ಎಂಜಲು ಹಚ್ಚುವುದನ್ನು ಉತ್ತರ ಪ್ರದೇಶ ಸರಕಾರವು ಅಧಿಕೃತವಾಗಿ ನಿಷೇಧಿಸಿದೆ. ನೋಟು ಎಣಿಸುವಾಗ ಎಂಜಲು ಹಚ್ಚುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತವೆ ಎಂಬ ಕಾರಣಕ್ಕೆ ಅಲ್ಲಿನ ಸರಕಾರ ಈ ಕ್ರಮ ಕೈಗೊಂಡಿದೆ.

ಆದರೆ ಮಸೈ ಜನಾಂಗದಲ್ಲಿ ಉಗಿಯುವುದು ಮತ್ತು ಉಗಿಸಿಕೊಳ್ಳುವುದು ಅಭಿಮಾನದ ಸಂಗತಿ. ನಮ್ಮ ಗೈಡ್ ನನ್ನನ್ನು ನೋಡಿ, 'ಯಾಕೆ ಸುಮ್ಮನೆ ನಿಂತಿದ್ದೀರಿ?' ಎಂದು ಕೇಳಿದ.

ನಾನು ಆ ಮಗುವಿಗೆ ಕ್ಯಾಕರಿಸಿ ಉಗಿದೆ. ಮನೆ ಮಂದಿಯೆಲ್ಲ ಖುಷಿಪಟ್ಟರು! ನಾನು ಮನಸಿನೊಳಗೆ ನನಗೆ ಉಗಿದುಕೊಂಡೆ.

**

ರವಾಂಡ ಮತ್ತು ಪ್ಲಾಸ್ಟಿಕ್

ನಾನು ರವಾಂಡ ರಾಜಧಾನಿ ಕಿಗಾಲಿಯಲ್ಲಿರುವ 'ಸೆರೆನಾ' ಹೊಟೇಲಿನ ಪ್ರವೇಶದ್ವಾರದಲ್ಲಿಟ್ಟ ಎಕ್ಸ್ ರೇ ಮಷಿನ್ ಗೆ ನನ್ನ ಸೂಟ್ ಕೇಸ್ ಕೊಟ್ಟೆ. ಅದನ್ನು ಪರೀಕ್ಷಿಸಿದ ಮಹಿಳೆ, 'ದಯವಿಟ್ಟು ನಿಮ್ಮ ಸೂಟ್ ಕೇಸ್ ಓಪನ್ ಮಾಡ್ತೀರಾ?' ಎಂದು ಕೇಳಿದಳು. ನನಗೆ ತುಸು ಆಶ್ಚರ್ಯವಾಯಿತು. ವಿಮಾನ ನಿಲ್ದಾಣದ ಸೆಕ್ಯೂರಿಟಿ ಚೆಕ್ ನಲ್ಲಿ ಯಾರೂ ನನ್ನನ್ನು ಪ್ರಶ್ನಿಸಲಿಲ್ಲ. ಹೀಗಿರುವಾಗ ನನ್ನ ಸೂಟ್ ಕೇಸಿನಲ್ಲಿ ಆಕ್ಷೇಪಾರ್ಹವಾದ ಯಾವ ವಸ್ತು ಇರಬಹುದು?

ಆದರೂ ಸೆಕ್ಯೂರಿಟಿ ಅವರ ಜತೆ ವಾಗ್ವಾದ ಮಾಡಬಾರದು ಎಂದು ಸೂಟ್ ಕೇಸ್ ಓಪನ್ ಮಾಡಿದೆ. ನಾನು ಪ್ಲಾಸ್ಟಿಕ್ ಕ್ಯಾರಿಬ್ಯಾಗಿನಲ್ಲಿ ರೂಮಿನಲ್ಲಿ ಧರಿಸಲೆಂದು ಹವಾಯಿ ಚಪ್ಪಲಿಗಳನ್ನು ಅದರಲ್ಲಿ ಇಟ್ಟಿದ್ದೆ. ಆಕೆ ಅದನ್ನು ಎತ್ತಿ, 'ನೋಡಿ, ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ಬಳಸುವಂತಿಲ್ಲ. ಹೀಗಾಗಿ ಈ ಪ್ಲಾಸ್ಟಿಕ್ ಬ್ಯಾಗನ್ನು ಇಲ್ಲಿಯೇ ಕಸದಬುಟ್ಟಿಗೆ ಎಸೆಯುತ್ತೇನೆ. ಚಪ್ಪಲಿ ಸುತ್ತಿಕೊಳ್ಳಲು ಕಾಗದದ ಬ್ಯಾಗ್ ಕೊಡುತ್ತೇನೆ' ಎಂದಳು.

ನಂತರ ಅವಳೇ ಚಪ್ಪಲಿಗಳನ್ನು ಹಾಕಿಕೊಳ್ಳಲು ಕಾಗದದ ಬ್ಯಾಗ್ ಕೊಟ್ಟಳು.

ಇದು ಕೇವಲ ಒಂದು ಭದ್ರತಾ ತಪಾಸಣೆಯಲ್ಲ, ಅದು ಆ ದೇಶದ ಪರಿಸರ ಸಂರಕ್ಷಣೆಯ ಕಟ್ಟುನಿಟ್ಟಾದ ಬದ್ಧತೆಯ ಪ್ರತಿಬಿಂಬ. ರವಾಂಡ ವಿಶ್ವದಲ್ಲೇ ಅತ್ಯಂತ ಸ್ವಚ್ಛ ದೇಶಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಾತ್ರವಾಗಲು ಅಲ್ಲಿನ ಪ್ಲಾಸ್ಟಿಕ್ ನಿಷೇಧ ಕಾಯ್ದೆ (2008) ಪ್ರಮುಖ ಕಾರಣ. ಅಲ್ಲಿ ಕೇವಲ ವಾಣಿಜ್ಯ ಬಳಕೆಯಷ್ಟೇ ಅಲ್ಲದೆ, ವೈಯಕ್ತಿಕವಾಗಿ ಪ್ಲಾಸ್ಟಿಕ್ ಚೀಲಗಳನ್ನು ಹೊತ್ತೊಯ್ಯುವುದು ಕೂಡ ಕಾನೂನುಬಾಹಿರ.

Untitled design (73)

ಒಮ್ಮೆಯಷ್ಟೇ ಬಳಸಿ ಎಸೆಯುವ ಪ್ಲಾಸ್ಟಿಕ್ (Single-use plastics) ವಸ್ತುಗಳಾದ ಸ್ಟ್ರಾಗಳು, ಬಾಟಲಿಗಳು, ಕಪ್‌ಗಳು, ಪ್ಲೇಟ್‌ಗಳು ಮತ್ತು ಪ್ಲಾಸ್ಟಿಕ್ ಫೋಲ್ಡರ್‌ಗಳನ್ನು ಕೂಡ ಇಡೀ ದೇಶದಲ್ಲಿ ನಿಷೇಧಿಸಲಾಗಿದೆ. ವಿಮಾನ ನಿಲ್ದಾಣ ಅಥವಾ ಭೂಗಡಿಗಳ ಮೂಲಕ ದೇಶ ಪ್ರವೇಶಿಸುವ ಪ್ರವಾಸಿಗರ ಲಗೇಜ್‌ಗಳನ್ನು ತಪಾಸಣೆ ಮಾಡಿ, ಪ್ಲಾಸ್ಟಿಕ್ ಬ್ಯಾಗ್‌ಗಳಿದ್ದರೆ ಅಲ್ಲಿಯೇ ವಶಪಡಿಸಿಕೊಳ್ಳಲಾಗುತ್ತದೆ. ಮಾರುಕಟ್ಟೆ ಮತ್ತು ಹೊಟೇಲ್‌ಗಳಲ್ಲಿ ಅಧಿಕಾರಿಗಳು ಆಗಾಗ ಅನಿರೀಕ್ಷಿತ ದಾಳಿ ನಡೆಸಿ ಪ್ಲಾಸ್ಟಿಕ್ ಬಳಕೆ ಆಗುತ್ತಿಲ್ಲವೆಂದು ಖಚಿತಪಡಿಸಿಕೊಳ್ಳುತ್ತಾರೆ. ಪ್ಲಾಸ್ಟಿಕ್ ತಯಾರಿಸುವ ಕಂಪನಿಗಳ ಮಾಲೀಕರಿಗೆ 10 ಮಿಲಿಯನ್ ಫ್ರಾಂಕ್‌ಗಳವರೆಗೆ ದಂಡ ಅಥವಾ 6 ರಿಂದ 12 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ವಿಮಾನ ನಿಲ್ದಾಣದಲ್ಲಿ ನನ್ನನ್ನು ಬಿಟ್ಟಿದ್ದೇ ಹೆಚ್ಚು. ಆದರೆ ರವಾಂಡದ ನಗರಗಳಲ್ಲಿ ಮತ್ತು ಪ್ರೀಮಿಯಂ ಹೊಟೇಲ್‌ಗಳಲ್ಲಿ ಸ್ಥಳೀಯ ಕಾನೂನು ಜಾರಿ ಹೆಚ್ಚು ತೀಕ್ಷ್ಣ. ರವಾಂಡದಲ್ಲಿ ಪ್ರತಿ ತಿಂಗಳ ಕೊನೆಯ ಶನಿವಾರ 'ಉಮುಗಂಡ' ಎಂಬ ಕಡ್ಡಾಯ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತದೆ. ಪರಿಸರದ ಬಗ್ಗೆ ಅಲ್ಲಿನ ಜನರಿಗೆ ಅತೀವ ಗೌರವ. ಸೆಕ್ಯೂರಿಟಿ ಮಹಿಳೆ ನನಗೆ ಕಾಗದದ ಚೀಲ ನೀಡಿ ಸಹಕರಿಸಿದ್ದು, ಶಿಕ್ಷೆಗಿಂತ ಹೆಚ್ಚಾಗಿ ಪರಿಹಾರ ಒದಗಿಸುವ ಅವಳ ಸೌಜನ್ಯಯುತ ಕಟ್ಟುನಿಟ್ಟನ್ನು ಎತ್ತಿ ತೋರಿಸುತ್ತದೆ.

ಪ್ಲಾಸ್ಟಿಕ್ ಬ್ಯಾಗ್‌ಗಳ ಬದಲಿಗೆ ಅಲ್ಲಿ ಬಟ್ಟೆ ಅಥವಾ ಮರುಬಳಕೆಯ ಕಾಗದದ ಚೀಲಗಳನ್ನೇ ಬಳಸಲಾಗುತ್ತದೆ. ಕಿಗಾಲಿಯು ಆಫ್ರಿಕಾದಲ್ಲೇ ಅತಿ ಸುಂದರ ಮತ್ತು ವ್ಯವಸ್ಥಿತ ನಗರವಾಗಿ ಹೊರಹೊಮ್ಮಲು ಇಂಥ ಸಣ್ಣ ನಿರ್ಧಾರಗಳೇ ಕಾರಣ.

ನಂತರ ನಾನು ಒಂದು ವಾರ ಕಾಲ ಆ ರವಾಂಡದ ಉದ್ದಗಲಕ್ಕೂ ಓಡಾಡಿದೆ. ಆದರೆ ಒಂದೇ ಒಂದು ಪ್ಲಾಸ್ಟಿಕ್ ಬಾಟಲಿ, ಕ್ಯಾರಿಬ್ಯಾಗ್, ಚಿಪ್ಸ್ ಪ್ಯಾಕೆಟ್... ಹೀಗೆ ಏನೂ ಕಾಣಲಿಲ್ಲ.

**

ಪ್ಯಾರಿಸಿನ ತಮಾಷೆ ಫಲಕಗಳು

'ರು ಡು ಬಾಕ್' (Rue du Bac) ಪ್ಯಾರಿಸ್‌ನ ಅತ್ಯಂತ ಸುಂದರ ಮತ್ತು ಐತಿಹಾಸಿಕ ಬೀದಿಗಳಲ್ಲಿ ಒಂದು. ಇಲ್ಲಿ ಬಹಳ ಪ್ರಸಿದ್ಧವಾದ ರೆಸ್ಟೋರೆಂಟ್ ಗಳಿವೆ. ಇಲ್ಲಿನ ವಿಶೇಷ ಅಂದ್ರೆ ಬೆಳಗ್ಗೆ ಉಪಾಹಾರ ಮುಗಿಸಿ, ಮಧ್ಯಾಹ್ನ ಊಟ ಮಾಡಿ, ಸಂಜೆಯ ಚಹಾ ಹೀರಿ, ರಾತ್ರಿಯಾಗುತ್ತಿದ್ದಂತೆ ವೈನ್ ಅಥವಾ ಬಿಯರ್ ಕುಡಿದು, ರಾತ್ರಿ ಊಟ ಮಾಡಿ ಮನೆಗೆ ಹೋಗುವುದು. ಇಲ್ಲಿನ ಕೆಲವು ರೆಸ್ಟೋರೆಂಟ್ ಗಳ ಮುಂದೆ ನಿಲ್ಲಿಸಿರುವ 'ಗೌರವಯುತ ಬೆಲೆ ಪಟ್ಟಿ' (The Polite Pricing Board) ತಮಾಷೆಯಾಗಿರುತ್ತದೆ.

ಅಲ್ಲಿನ ರೆಸ್ಟೋರೆಂಟ್ ಒಂದರ ಮುಂದೆ ಕಂಡ ಫಲಕದಲ್ಲಿ ಹೀಗೆ ಬರೆಯಲಾಗಿತ್ತು.

* ಒಂದು ಕಾಫಿ - 7 ಯುರೋಗಳು (ಸುಮಾರು ₹630).

* ಒಂದು ಕಾಫಿ ಪ್ಲೀಸ್ - 4.25 ಯುರೋಗಳು (ಸುಮಾರು ₹380).

* ಬೊಂಜರ್ (ಹಲೋ), ಒಂದು ಕಾಫಿ ಪ್ಲೀಸ್ - 1.40 ಯುರೋಗಳು (ಸುಮಾರು ₹125)!

ಅಂದರೆ ನೀವು ಎಷ್ಟು ವಿನಯವಂತರಾಗಿರುತ್ತೀರೋ, ಅಷ್ಟು ಕಡಿಮೆ ಬೆಲೆಗೆ ಕಾಫಿ ಸಿಗುತ್ತದೆ. ಆರ್ಡರ್ ಮಾಡುವಾಗ ಕೇವಲ 'ಕಾಫಿ ಕೊಡು' ಎಂದು ಧಾರ್ಷ್ಟ್ಯ ತೋರಿದರೆ, ನೀವು ದುಬಾರಿ ಬೆಲೆ ತೆರಬೇಕಾಗುತ್ತದೆ!

ಪ್ಯಾರಿಸ್‌ನ ಕೆಫೆಗಳಲ್ಲಿ ಕೆಲಸ ಮಾಡುವವರು, ಪ್ರವಾಸಿಗರು ಅವಸರದಲ್ಲಿ ಬಂದು 'ಹಲೋ' ಅಥವಾ 'ಧನ್ಯವಾದ' ಹೇಳದೆ ಆರ್ಡರ್ ಮಾಡುವುದನ್ನು ಅವರು ಇಷ್ಟಪಡುವುದಿಲ್ಲ. ಅಲ್ಲಿನ ಸಂಸ್ಕೃತಿಯಲ್ಲಿ ಸಣ್ಣ ಸೌಜನ್ಯದ ಮಾತುಗಳಿಗೂ ದೊಡ್ಡ ಬೆಲೆಯಿದೆ. ಜನರಿಗೆ ಕೋಪ ಬರಿಸದೇ, ನಗುತ್ತಲೇ ಸಭ್ಯತೆಯನ್ನು ಕಲಿಸಲು ಈ ಫಲಕಗಳನ್ನು ಬಳಸಲಾಗುತ್ತದೆ.

ಕೆಲವು ಕಡೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೀಗೆ ಬರೆದಿರುತ್ತಾರೆ - 'ನಾವು ಗ್ರಾಹಕರನ್ನು ನೋಯಿಸುವುದಿಲ್ಲ, ಆದರೆ ನಮ್ಮ ವೇಟರ್‌ಗಳು ದಣಿದಿದ್ದಾರೆ, ದಯವಿಟ್ಟು ಅವರೊಂದಿಗೆ ವಿನಯದಿಂದ ವರ್ತಿಸಿ!'

ಇದೇ ಬೀದಿಯಲ್ಲಿ ನಡೆಯುವ ಒಂದು ರೆಸ್ಟೋರೆಂಟ್ ಮುಂದೆ ಹಾಕಿದ ಫಲಕ ನೋಡಿ ಅದನ್ನು ಬರೆದವನ ಸೃಜನಶೀಲತೆ ಕಂಡು ಖುಷಿಯಾಯಿತು. ಆತ ತನ್ನ ಬ್ರೆಡ್ ಎಷ್ಟು ಮೃದುವಾಗಿದೆ ಎಂಬುದನ್ನು ಹೀಗೆ ಬರೆದಿದ್ದ - 'ನಮ್ಮ ಬ್ರೆಡ್ ಎಷ್ಟು ಫ್ರೆಶ್ ಅಂದರೆ, ಅದು ಇನ್ನೂ ತನ್ನ ಕನಸಿನಿಂದ ಎದ್ದಿಲ್ಲ!'

ಕೆಲವು ರೆಸ್ಟೋರೆಂಟ್‌ಗಳಲ್ಲಿ 'ಗದ್ದಲ ತೆರಿಗೆ' (Noise Tax) ಬಗ್ಗೆ ಫಲಕಗಳಿರುತ್ತವೆ. 'ಮೆಲ್ಲಗೆ ಮಾತನಾಡಿದರೆ ಆರಾಮದಾಯಕ ಊಟ' ಅಥವಾ 'ಜೋರಾಗಿ ಕಿರುಚಿದರೆ ನಿಮ್ಮ ಬಿಲ್‌ಗೆ ಶೇ.10 ರಷ್ಟು 'ಧ್ವನಿ ಮಾಲಿನ್ಯ' ತೆರಿಗೆ ಸೇರಿಸಲಾಗುವುದು!' ಇಂದು ಬೋರ್ಡ್ ಹಾಕಿರುತ್ತಾರೆ. ಇದು ನಿಜವಾದ ತೆರಿಗೆಯಲ್ಲದಿದ್ದರೂ, ಗ್ರಾಹಕರು ಶಾಂತವಾಗಿರಲು ಮಾಡುವ ತಮಾಷೆಯ ಪ್ರಯತ್ನ.

ಫ್ರೆಂಚ್ ಜನರಿಗೆ ವೈನ್ ಎಂದರೆ ಪ್ರಾಣ. ಬೇಕರಿ ಅಥವಾ ವೈನ್ ಶಾಪ್‌ಗಳ ಮುಂದೆ ಹೀಗೆ ಬರೆದಿರುವುದನ್ನು ನೋಡಬಹುದು - 'ನೀರನ್ನು ಉಳಿಸಿ, ವೈನ್ ಕುಡಿಯಿರಿ' ಅಥವಾ 'ನಮ್ಮಲ್ಲಿ ಹಾಲಿಲ್ಲ, ಹಸುಗಳು ರಜೆಯ ಮೇಲಿವೆ. ವೈನ್ ಮಾತ್ರ ಲಭ್ಯ!'

ಪ್ಯಾರಿಸಿನಲ್ಲಿ ಜೇಬುಗಳ್ಳರ ಹಾವಳಿ ವಿಪರೀತ. ಅಲ್ಲಿನ ಪ್ರಸಿದ್ಧ ಲೂವ್ರ್ ಮ್ಯೂಸಿಯಂ ಸನಿಹ ಒಂದು ಫಲಕ ನೋಡಿದ್ದೆ. ಅದರಲ್ಲಿ ಹೀಗೆ ಬರೆದಿದ್ದರು - 'ಇಲ್ಲಿರುವ ಜೇಬುಗಳ್ಳರು ನಿಮಗಿಂತ ಹೆಚ್ಚು ತರಬೇತಿ ಪಡೆದಿದ್ದಾರೆ. ಅವರಿಗೆ ಕೆಲಸ ಕೊಡಬೇಡಿ!'

**

ಕಿಡಿಗೇಡಿಗಳು ತಂದ ಪ್ರಖ್ಯಾತಿ

ಸ್ಕಾಟ್ ಲೆಂಡ್ ತನ್ನ ಐತಿಹಾಸಿಕ ಕೋಟೆಗಳು ಮತ್ತು ಸುಂದರ ಪ್ರಕೃತಿಗೆ ಎಷ್ಟು ಪ್ರಸಿದ್ಧವೋ, ಅಲ್ಲಿನ ಕೆಲವು ವಿಚಿತ್ರ ಮತ್ತು ಕುತೂಹಲಕಾರಿ ಪ್ರತಿಮೆಗಳಿಗೂ ಅಷ್ಟೇ ಹೆಸರುವಾಸಿ. ನಾನು ಗ್ಲ್ಯಾಸ್ಗೋ ನಗರಕ್ಕೆ ಹೋದಾಗ, 'ರಾಯಲ್ ಎಕ್ಸ್ಚೇಂಜ್' ಮುಂಭಾಗದಲ್ಲಿರುವ 'ಡ್ಯೂಕ್ ಆಫ್ ವೆಲ್ಲಿಂಗ್ಟನ್' ಪ್ರತಿಮೆಯನ್ನು ಕಂಡು 'ಇದೇನಪ್ಪ ವಿಚಿತ್ರ' ಎಂದು ಉದ್ಗಾರ ತೆಗೆದಿದ್ದೆ.

ಕಾರಣ ಈ ಪ್ರತಿಮೆಯು ಸ್ಕಾಟ್ ಲೆಂಡ್‌ನ ಜನರ ವಿಶಿಷ್ಟ ಹಾಸ್ಯಪ್ರಜ್ಞೆ ಮತ್ತು ಬಂಡಾಯದ ಸಂಕೇತ. 1844ರಲ್ಲಿ ಸ್ಥಾಪನೆಯಾದ ಈ ವೀರ ಸೇನಾ ನಾಯಕನ ಪ್ರತಿಮೆಯ ವಿಶೇಷ ಅಂದ್ರೆ, ಅದರ ತಲೆಯ ಮೇಲೆ ಯಾವಾಗಲೂ ಒಂದು ಕಿತ್ತಳೆ ಬಣ್ಣದ ಟ್ರಾಫಿಕ್ ಕೋನ್ (Traffic Cone) ಇರುತ್ತದೆ!

ಸುಮಾರು 40 ವರ್ಷಗಳ ಹಿಂದೆ, ಯಾವನೋ ಕಿಡಿಗೇಡಿ ತಮಾಷೆಗಾಗಿ ರಾತ್ರೋರಾತ್ರಿ ಪ್ರತಿಮೆಯ ತಲೆಯ ಮೇಲೆ ಟ್ರಾಫಿಕ್ ಕೋನ್ ಇಟ್ಟಿದ್ದ. ಪೊಲೀಸರು ಅದನ್ನು ತೆಗೆದರು. ಮರುದಿನವೇ ಮತ್ತ್ಯಾವನೋ ಮತ್ತೊಂದು ಕೋನ್ ತಂದಿಟ್ಟ. ಮರುದಿನ ಪೊಲೀಸರು ಅದನ್ನು ತೆಗೆದರು. ಆದರೆ ಜನ ಇನ್ನೊಂದು ಕೋನ್ ತಂದಿಟ್ಟರು.

ಪೊಲೀಸರು ಅದನ್ನು ತೆಗೆದಂತೆಲ್ಲ, ಅದನ್ನು ತಂದು ಹಾಕುತ್ತಿದ್ದರು. ಇದು ನಿರಂತರವಾಗಿ ನಡೆದು, ಕೊನೆಗೆ ಸರಕಾರವೇ ಕೈಚೆಲ್ಲಿತು. ಈ ಕೋನ್ ತೆಗೆಯುವುದನ್ನು ನಿಲ್ಲಿಸಿತು.

ಇಂದು ಇದು ಗ್ಲ್ಯಾಸ್ಗೋ ನಗರದ ಅಧಿಕೃತ ಗುರುತಾಗಿ ಬದಲಾಗಿದೆ. ಅಷ್ಟೇ ಅಲ್ಲದೆ, 'ಲೋನ್ಲಿ ಪ್ಲಾನೆಟ್' ಈ ಪ್ರತಿಮೆಯನ್ನು 'ವಿಶ್ವದ ಅತ್ಯಂತ ವಿಚಿತ್ರ ಸ್ಮಾರಕಗಳಲ್ಲಿ ಒಂದು' ಎಂದು ಗುರುತಿಸಿದೆ. ಆ ನಗರಕ್ಕೆ ಹೋದವರು ಆ ಪ್ರತಿಮೆ ಮುಂದೆ ನಿಂತು ಫೊಟೋ ತೆಗೆಸಿಕೊಳ್ಳದೇ ಬರುವುದಿಲ್ಲ. ಒಂದು ವೇಳೆ ಆ ಕೋನ್ ಇಲ್ಲದಿದ್ದರೆ, ಇದು ನೂರಾರು ಪ್ರತಿಮೆಗಳಲ್ಲಿ ಒಂದು ಆಗುತ್ತಿತ್ತು.

**

Untitled design (74)

ವಿಮಾನ ಪಯಣ ಭಾಗ್ಯವಿಲ್ಲ!

ಹಿಂದಿನ ವರ್ಷ ನಾನು ಸಿಂಗಾಪುರಕ್ಕೆ ಹೋದಾಗ ಅಲ್ಲಿನ ವಿಮಾನ ನಿಲ್ದಾಣದಲ್ಲಿ ನಮ್ಮಲ್ಲಿನ ಹಲಸಿನ ಹಣ್ಣಿಗೆ ಹೋಲುವ 'ದುರಿಯನ್' ಹಣ್ಣಿನ ಚಿತ್ರ ಹಾಕಿ ಅದರ ಮೇಲೆ ಕೆಂಪು ಬಣ್ಣದಲ್ಲಿ ಕಾಟು ಹಾಕಿದ್ದರು. ಅಂದರೆ ಆ ಹಣ್ಣನ್ನು ತರುವುದನ್ನು ನಿಷೇಧಿಸಲಾಗಿದೆ ಎಂಬುದನ್ನು ಆ ಫಲಕ ಹೇಳುತ್ತಿತ್ತು.

ಈ ಹಣ್ಣಿನ ಮೇಲ್ಮೈ ಮುಳ್ಳುಗಳಿಂದ ಕೂಡಿರುವುದರಿಂದ ಅಪಾಯಕಾರಿಯಿದ್ದಿರಬಹುದು ಎಂದು ನಾನು ಅಂದುಕೊಂಡೆ. ಆದರೂ ಅಲ್ಲಿಯೇ ಹತ್ತಿರದಲ್ಲಿರುವ ವಿಚಾರಣಾ ಡೆಸ್ಕಿಗೆ ಹೋಗಿ ಕೇಳಿದೆ.

'ಈ ಹಣ್ಣು ತುಂಬಾ ಕೆಟ್ಟ ವಾಸನೆ (ಕೊಳೆತ ಈರುಳ್ಳಿಯಂತೆ) ಹೊಂದಿರುತ್ತದೆ. ಹೀಗಾಗಿ ಇದನ್ನು ವಿಮಾನದ ಒಳಗೆ ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ' ಎಂದು ಅಲ್ಲಿ ಕುಳಿತಿರುವಾಕೆ ಹೇಳಿದಳು. ಪಾಪ, ಆ ಹಣ್ಣಿಗೆ ಎಂದೆಂದೂ ವಿಮಾನ ಪಯಣ ಭಾಗ್ಯವಿಲ್ಲ!

Vishweshwar Bhat

Vishweshwar Bhat

Editor in Chief

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!