ಅಮರ ಪ್ರೇಮದ ಕುರುಹು ಈ ರೂಪಮತಿ ಮಂಟಪ
ಮೊಘಲ್ ಚಕ್ರವರ್ತಿ ಅಕ್ಬರ್ ಮಾಂಡುವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿ ಯುದ್ಧಕ್ಕೆ ಅಧಾಮ್ ಖಾನ್‌ನನ್ನು ಕಳುಹಿಸುತ್ತಾನೆ. ರೂಪಮತಿಯ ಸೌಂದರ್ಯದ ಕುರಿತು ತಿಳಿದಿದ್ದ ಖಾನ್ ಮಾಂಡುವಿನೊಂದಿಗೆ ರೂಪಮತಿಯನ್ನೂ ವಶಪಡಿಸಿಕೊಳ್ಳಲು ನಿರ್ಧರಿಸುತ್ತಾನೆ. ಅಪಾರ ಸೈನ್ಯ ಪುಟ್ಟ ರಾಜ್ಯ ಮಾಂಡುವಿನ ಮೇಲೆ ದಾಳಿ ಮಾಡುತ್ತದೆ. ಸಾರಂಗಪುರದ ಬಳಿ ನಡೆದ ಯುದ್ಧದಲ್ಲಿ ಪ್ರಾಣ ಉಳಿಸಿಕೊಳ್ಳಲು ಬಹದ್ದೂರ್ ಓಡಿ ಹೋಗುತ್ತಾನೆ. ಮಾಂಡು ಮತ್ತು ರಾಣಿ ರೂಪಮತಿಯನ್ನೂ ಮೊಘಲ್ ಸೈನ್ಯ ಗೆಲ್ಲುತ್ತದೆ. ಆದರೆ ರೂಪಮತಿ ತನ್ನ ಪತಿಯ ಮೇಲಿನ ನಿಷ್ಠೆಯಿಂದ ಅಕ್ಬರ್‌ನ ವಶವಾಗದೆ ವಿಷ ಕುಡಿದು ಸಾಯುತ್ತಾಳೆ.
- ಡಾ. ಪದ್ಮಿನಿ ನಾಗರಾಜು
ನಾವು ಮಧ್ಯಪ್ರದೇಶಕ್ಕೆ ಪ್ರವಾಸ ಹೋಗಲು ನಿರ್ಧರಿಸಿದಾಗ ಮಾಂಡುವನ್ನು ನೋಡಲು ಕೆಲವರು ಸಲಹೆ ನೀಡಿದರು. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ನಾವು ಮಧ್ಯಪ್ರದೇಶದ ಇಂದೂರಿನಲ್ಲಿ ಇಳಿದಾಗ ಬೇಸಗೆ ಜೋರಾಗಿತ್ತು. ಪತಿ ಡಾ.ನಾಗರಾಜು ಟ್ಯಾಕ್ಸಿ ಡ್ರೈವರ್‌ಗೆ ಮಾಂಡುವಿಗೆ ಹೋಗಬೇಕು ಎಂದಾಗ ಅವನು ಮೊದಲು ಆ ರೀತಿ ಯಾವುದೂ ಜಾಗ ಇಲ್ಲ ಎಂದ. ನಂತರ ಅವನೇ ಅರ್ಥೈಸಿಕೊಂಡಂತೆ ರೂಪಮತಿ ಕಾ ಮಾಂಡವಘಡ್ ಎಂದು ಹೇಳಿ, ಕರೆದುಕೊಂಡು ಹೋದ.
ಅನೇಕ ಕೆರೆಗಳಿಂದ ಆವೃತವಾಗಿರುವ ಪುಟ್ಟ ಊರಿದು. ದಾರಿಯುದ್ದಕ್ಕೂ ಸಾಸಿವೆ ಕಟಾವಿಗೆ ಬಂದ ಹೊಲಗಳು ಹಾಗೂ ಗೋಧಿಯ ಹೊಲಗಳು ಸಮೃದ್ಧವಾಗಿವೆ. ಸ್ವಂತ ವಾಹನದ ಮೂಲಕ ನಾವು ಎರಡು ಗಂಟೆ ಪ್ರಯಾಣ ಮಾಡಿ ಮಾಂಡುವಿಗೆ ತಲುಪಿದೆವು. ಟಿಕೇಟ್ ಪಡೆದು ಮೊದಲು ನಾವು ಹೋದದ್ದೇ ಅಮರ ಪ್ರೇಮಕತೆಯ ನಾಯಕಿ ರೂಪಮತಿ ಮಂಟಪಕ್ಕೆ. ಒಂದಷ್ಟು ಮೆಟ್ಟಿಲುಗಳನ್ನು ಹತ್ತಿದ ಮೇಲೆ ರೂಪಮತಿ ಮಂಟಪಕ್ಕೆ ಪ್ರವೇಶ ಮಾಡಬಹುದು. ಪ್ರಸಿದ್ಧ ಜನಪದ ಕತೆಯನ್ನು ತಿಳಿದು ಈ ಮಂಟಪ ನೋಡಿದಾಗ ನಮ್ಮ ಮನಸು ತುಂಬಿ ಬರುತ್ತದೆ. ಇದೊಂದು ಅಮರ ಪ್ರೇಮಕತೆಯಂತೆ ಸಾಮರಸ್ಯದ ಕತೆಯೂ ಹೌದು.
ಇದನ್ನೂ ಓದಿ: ಬುದ್ಧನಿಲ್ಲದ ಸಾಂಚಿಯ ಸ್ತೂಪ
ಬಯಾಜಿದ್ ಬಾಜ್ ಬಹದ್ದೂರ್ ಖಾನ್ ಮಾಲ್ವಾ ಸುಲ್ತಾನರ ಕೊನೆಯ ದೊರೆ. ಆತ ಮತ್ತು ಕುರಿಗಾಹಿ ರೂಪಮತಿಯ ಪ್ರೇಮ ಯಾವ ಪ್ರೇಮಕತೆಗೂ ಕಮ್ಮಿಯಿಲ್ಲ. ಧಾರ್ಮಿಕ ಸಾಮಾರಸ್ಯಕ್ಕೂ ಇದು ಅಪೂರ್ವವಾದ ಕತೆ.

ಜನಪದ ಕತೆಯಂತೆ
1555- 1562 ರವರೆಗೆ ಬಾಜ್ ಬಹದ್ದೂರ್ ಖಾನ್ ಮಧ್ಯಪ್ರದೇಶದ ಮಾಂಡು ಅಥವಾ ಮಾಂಡವಘಡ ಪ್ರದೇಶದ ಸುಲ್ತಾನನಾಗಿದ್ದ. ಕಲಾವಿದನಾಗಿದ್ದ. ಇವನು ಒಮ್ಮೆ ಕಾಡಿನಲ್ಲಿ ಬೇಟೆಗೆ ಹೋಗಿದ್ದ. ಆಗ ಕವಯತ್ರಿ ಹಾಗೂ ಗಾಯಕಿ ರೂಪಮತಿ ಎಂಬ ಕುರಿಗಾಹಿ ಮಹಿಳೆಯ ಗಾಯನಕ್ಕೆ ಮನಸೋಲುತ್ತಾನೆ. ಅವಳನ್ನು ಮದುವೆಯಾಗುವುದಾಗಿ ಸುಲ್ತಾನ ಕೇಳುತ್ತಾನೆ. ಅವಳು ಈ ಮದುವೆ ಹಿಂದೂ-ಮುಸ್ಲಿಂ ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಹೇಳಿ ನಿರಾಕರಿಸುತ್ತಾಳೆ. ಆದರೆ ಸುಲ್ತಾನ ಹಠ ಹಿಡಿಯುತ್ತಾನೆ. ಆಕೆಯ ಗಾಯನ ಹಾಗೂ ಕವಿತ್ವಕ್ಕೆ ಸೋತು ತನ್ನ ಧಾರ್ಮಿಕ ಗುರುಗಳ ಮಾತನ್ನು ವಿರೋಧಿಸಿ ಮದುವೆಯಾಗಲು ಬರುತ್ತಾನೆ. ಆಗ ರೂಪಮತಿ ರಾಜನಿಗೆ ತಾನು ಪ್ರತಿನಿತ್ಯ ನರ್ಮದಾ ನದಿಯನ್ನು ಪೂಜಿಸುತ್ತಿದ್ದು, ಅದರ ದರ್ಶನದ ನಂತರವೇ ನೀರು ಕುಡಿಯುವ ವ್ರತವನ್ನು ಪಾಲಿಸುತ್ತಿದ್ದೇನೆ. ಹಾಗಾಗಿ ನರ್ಮದೆಯ ದರ್ಶನಕ್ಕೆ ವ್ಯವಸ್ಥೆ ಮಾಡುವುದಾದಲ್ಲಿ ತಾನು ಮದುವೆಯಾಗುವುದಾಗಿ ಷರತ್ತನ್ನು ವಿಧಿಸುತ್ತಾಳೆ. ಅದಕ್ಕೊಪ್ಪಿದ ಸುಲ್ತಾನ ಮಾಂಡುವಿನಲ್ಲಿರುವ ಬೆಟ್ಟದ ಮೇಲೆ ಭವ್ಯವಾಗಿ ತನ್ನ ಹಿಂದೂ ಪತ್ನಿ ರೂಪಮತಿಗಾಗಿ ಮಂಟಪವನ್ನು ನಿರ್ಮಿಸುತ್ತಾನೆ. ಆ ಎತ್ತರದ ಮಂಟಪದಿಂದ ದೂರದ ನರ್ಮದಾ ನದಿಯನ್ನು ಆಕೆ ಪ್ರತಿನಿತ್ಯ ದರ್ಶನ ಮಾಡಿಯೇ ಮುಂದಿನ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಇದರೊಂದಿಗೆ ಬಾಜ್ ಬಹದ್ದೂರ್ ರೇವಾ ಕುಂಡ್ ಎನ್ನುವ ಜಲಾಶಯವನ್ನೂ ನಿರ್ಮಿಸುತ್ತಾನೆ. ಇಂದಿಗೂ ಅದನ್ನು ಸ್ಥಳೀಯರು ಪವಿತ್ರ ಸ್ಥಳವೆಂದು ಪೂಜಿಸುತ್ತಾರೆ.
ಬಾಜ್ ಬಹದ್ದೂರ್ ಖಾನ್ ಹಾಗೂ ರೂಪಮತಿ ಹಿಂದೂ ಹಾಗೂ ಮುಸ್ಲಿಂ ವಿಧಿಯಂತೆ ಎರಡು ಸಲ ಮದುವೆಯಾಗುತ್ತಾರೆ. ಅವರಿಬ್ಬರ ಮದುವೆಯ ನಂತರ ಅವಳ ಸಂಪ್ರದಾಯವನ್ನು ಪುರಸ್ಕರಿಸಿ ಅದಕ್ಕೆ ತಕ್ಕಂತೆ ಅವಳು ಗೌರವಯುತವಾಗಿ ಬದುಕುವಂತೆ ಖಾನ್ ನಡೆದುಕೊಳ್ಳುತ್ತಾನೆ. ಪ್ರತಿನಿತ್ಯ ತನ್ನ ಕವಿತ್ವ ಹಾಗೂ ಗಾಯನದ ಮೂಲಕ ರೂಪಮತಿ ತನ್ನ ಪತಿಯನ್ನು ಸಂತೃಪ್ತಿಗೊಳಿಸುತ್ತಿದ್ದಳು ಎಂಬ ಈ ಕತೆ ನಿಜಕ್ಕೂ ಯಾವ ಲೈಲಾ-ಮಜ್ನು, ಸಲೀಂ-ಅನಾರ್ಕಲಿ ಕತೆಗೂ ಕಡೆಮೆಯಿಲ್ಲ.
ಓಡಿಹೋದ ಬಹದ್ದೂರ್, ವಿಷ ಕುಡಿದ ರೂಪಮತಿ
ಮೊಘಲ್ ಚಕ್ರವರ್ತಿ ಅಕ್ಬರ್ ಮಾಂಡುವನ್ನು ವಶಪಡಿಸಿಕೊಳ್ಳಲು ನಿರ್ಧರಿಸುತ್ತಾನೆ. ಅದನ್ನು ವಶಪಡಿಸಿಕೊಳ್ಳಲು ಅಧಾಮ್ ಖಾನ್‌ನನ್ನು ಕಳುಹಿಸುತ್ತಾನೆ. ಈಗಾಗಲೇ ರೂಪಮತಿಯ ಸೌಂದರ್ಯದ ವಿಷಯ ಅರಿತಿದ್ದ ಖಾನ್ ಮಾಂಡುವಿನೊಂದಿಗೆ ರೂಪಮತಿಯನ್ನೂ ವಶಪಡಿಸಿಕೊಳ್ಳಲು ನಿರ್ಧರಿಸುತ್ತಾನೆ. 1561ರಲ್ಲಿ ಅಪಾರ ಸಂಖ್ಯೆಯ ಸೈನ್ಯವು ಪುಟ್ಟ ರಾಜ್ಯ ಮಾಂಡುವಿನ ಮೇಲೆ ದಾಳಿ ಮಾಡಿತು. ಸಾರಂಗಪುರದ ಬಳಿ ನಡೆದ ಯುದ್ಧದಲ್ಲಿ ಬಹದ್ದೂರ್ ತನ್ನನ್ನು ಸಾವಿನಿಂದ ಉಳಿಸಿಕೊಳ್ಳಲು ಓಡಿ ಹೋಗುತ್ತಾನೆ. ಮಾಂಡು ಮತ್ತು ರಾಣಿ ರೂಪಮತಿಯನ್ನೂ ಮೊಘಲ್ ಸೈನ್ಯ ವಶಪಡಿಸಿಕೊಂಡಿತು. ಆದರೆ ಆಕೆ ಅವರ ವಶವಾಗದೆ ತನ್ನ ಪತಿಯ ಮೇಲಿನ ನಿಷ್ಠೆಯಿಂದ ವಿಷ ಕುಡಿದು ಸಾವನ್ನಪ್ಪುತ್ತಾಳೆ.
ಮೊಟ್ಟಮೊದಲ ಬಾರಿಗೆ 1599ರಲ್ಲಿ ಅಹ್ಮದ್ ಉಮ್ರಿ ತುರ್ಕೋಮನ್ ಪರ್ಷಿಯನ್ ಭಾಷೆಯಲ್ಲಿ ರಾಣಿ ರೂಪಮತಿ ಕಥೆಯನ್ನು ಬರೆದರು. ಅವರು ಅಕೆಯ 26 ಕವಿತೆಗಳನ್ನು ಸಂಗ್ರಹಿಸಿ ತಮ್ಮ ಕೃತಿಯಲ್ಲಿ ಸೇರಿಸಿದರು. ಇದನ್ನು 1926ರಲ್ಲಿ ಸಿಇ ಲುವಾರ್ಡ ಮತ್ತು ಎಲ್.ಎಂ. ಕ್ರಂಪ್ ಅವರು ʻದಿ ಲೇಡಿ ಆಫ್ ದಿ ಲೋಟಸ್, ರೂಪಮತಿ ಕ್ವೀನ್ ಆಫ್ ಮಾಂಡು ಎ ಸ್ಟ್ರೇಂಜ್ ಟೇಲ್ ಆಫ್ ಫೇತ್‌ಫುಲ್‌ನೆಸ್ʼ ಎಂಬ ಶೀರ್ಷಿಕೆಯಡಿಯಲ್ಲಿ ಇಂಗ್ಲೀಷ್‌ಗೆ ಅನುವಾದಿಸಿದರು.

ರೂಪಮತಿ ಮಂಟಪವು ಮರಳುಗಲ್ಲಿನಲ್ಲಿ ರಚಿಸಲಾದ ಎರಡು ಅಂತಸ್ತಿನ ಕಟ್ಟಡ. ಕಮಾನಿನ ಹಾಲ್, ಗುಮ್ಮಟಾಕಾರದ ಕೋಟೆಗಳನ್ನು ಅಫಘಾನ್ ಹಾಗೂ ರಜಪೂತ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿಂದ ನಿಮಾರ್ ಕಣಿವೆ ಹಾಗೂ ನರ್ಮದಾ ನದಿಯ ವಿಹಂಗಮ ದೃಶ್ಯವನ್ನು ನೋಡಬಹುದು. ನಂತರದ ಕಾಲದಲ್ಲಿ ವೀಕ್ಷಣಾ ಗೋಪುರವಾಗಿ ಬಳಕೆಯಾದ ಮಂಟಪವನ್ನು ಮಧ್ಯಪ್ರದೇಶ ಸರಕಾರ ಅತ್ಯಂತ ಸುರಕ್ಷಿತವಾಗಿರಿಸಿದೆ.
ಮಾಹಿತಿ ಪೆಟ್ಟಿಗೆ
ವಿಂದ್ಯ ಪರ್ವತ ಶ್ರೇಣಿಯಲ್ಲಿರುವ ಪುರಾತನ ಕೋಟೆ ನಗರವಾದ ಮಾಂಡುವಿನಲ್ಲಿ ರಾಣಿ ರೂಪಮತಿ ಮಂಟಪ, ಜಹಾಜ್ ಮಹಲ್, ಹಿಂದೋಲಾ ಮಹಲ್, ಬಾಜ್ ಬಹದ್ದೂರ್ ಅರಮನೆ, ಹೋಶಾಂಗ್ ಷಾ ಸಮಾಧಿ, ಜೈನ ಬಸದಿ ಮುಂತಾದ ಸ್ಥಳಗಳನ್ನು ನೋಡಬಹುದು.
ದಾರಿ ಹೇಗೆ?
ಮಾಂಡು ಇಂದೂರಿನಿಂದ 100ಕಿಮೀ ದೂರದಲ್ಲಿದೆ. ಬಸ್, ಖಾಸಗಿ ವಾಹನ ಅಥವಾ ರೈಲಿನ ಮೂಲಕ ತಲುಪಬಹುದು.