ಬುದ್ಧನಿಲ್ಲದ ಸಾಂಚಿಯ ಸ್ತೂಪ
ಸಾಂಚಿಯ ಪ್ರಮುಖ ಆಕರ್ಷಣೆಯೆಂದರೆ ಮಹಾ ಸ್ತೂಪ, ಇದು ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿ ಸಾಂಚಿಯಲ್ಲಿ ನಿರ್ಮಿಸಲಾದ ಮೊದಲ ಸ್ಮಾರಕ ಎಂದು ನಂಬಲಾಗಿದೆ. ಇದು ಭಾರತದ ಅತ್ಯಂತ ಹಳೆಯ ಕಲ್ಲಿನ ರಚನೆಗಳಲ್ಲಿ ಒಂದಾಗಿದೆ. ಮೌರ್ಯ ಚಕ್ರವರ್ತಿ ಅಶೋಕನಿಂದ ನಿರ್ಮಿಸಲ್ಪಟ್ಟ ಬೌದ್ಧ ವಾಸ್ತುಶಿಲ್ಪ ಮತ್ತು ಕಲೆಯ ಅತ್ಯುತ್ತಮ ಉದಾಹರಣೆಯೂ ಹೌದು.
- ಡಾ.ಪದ್ಮಿನಿ ನಾಗರಾಜು
ನಾವು ಮಧ್ಯಪ್ರದೇಶಕ್ಕೆ ಭೇಟಿ ನೀಡಲು ಬಹಳ ದಿನಗಳಿಂದ ಪ್ಲಾನ್ ಮಾಡಿದ್ದೆವು. ಕುಟುಂಬದ ಗೆಳತಿ ಶ್ರೀಮತಿ ಭವಾನಿ ಬಾಲಕೃಷ್ಣ ಅಲ್ಲಿದ್ದುದರಿಂದ ಪ್ರವಾಸದಲ್ಲಿ ನೋಡಬೇಕಾದ ಸ್ಥಳಗಳು ಹಾಗೂ ಅದಕ್ಕೆ ಬೇಕಾದ ವಸತಿ, ಸಾರಿಗೆ ವ್ಯವಸ್ಥೆಯನ್ನು ಅವರು ಮಾಡಿದ್ದರು. ಭೂಪಾಲನಿಂದ ಕೇವಲ 49 ಕಿಲೋ ಮೀಟರ್ ದೂರದಲ್ಲಿರುವ ಸಾಂಚಿಯನ್ನು ನೋಡುವ ಕುತೂಹಲದಿಂದ ಕಾರಿನಲ್ಲಿ ಹೊರಟೆವು. ದಾರಿಯುದ್ದಕ್ಕೂ ತೆನೆಭರಿತ ಸಾಸಿವೆ ಹಾಗೂ ಗೋಧಿಯ ಹೊಲಗಳು ಕಂಡವು.
ಇದನ್ನೂ ಓದಿ: ಹನಿಮೂನ್‌ಗೂ ತಟ್ಟಿದ ಯುದ್ಧದ ಬಿಸಿ
ಸಾಂಚಿ ಮಧ್ಯಪ್ರದೇಶದ ಯುನೆಸ್ಕೋ ಮಾನ್ಯತೆ ಪಡೆದ ಸ್ಥಳ. ಸಾಂಚಿ ಸ್ತೂಪವನ್ನು ನೋಡಲು ಗೈಡ್ ಜತೆಯಾಗಿಟ್ಟುಕೊಳ್ಳುವುದು ಅತ್ಯಂತ ಅವಶ್ಯಕ. ಸಾಂಚಿಯ ಪ್ರಮುಖ ಆಕರ್ಷಣೆಯೆಂದರೆ ಮಹಾ ಸ್ತೂಪ, ಇದು ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿ ಸಾಂಚಿಯಲ್ಲಿ ನಿರ್ಮಿಸಲಾದ ಮೊದಲ ಸ್ಮಾರಕ ಎಂದು ನಂಬಲಾಗಿದೆ. ಇದು ಭಾರತದ ಅತ್ಯಂತ ಹಳೆಯ ಕಲ್ಲಿನ ರಚನೆಗಳಲ್ಲಿ ಒಂದಾಗಿದೆ. ಮೌರ್ಯ ಚಕ್ರವರ್ತಿ ಅಶೋಕನಿಂದ ನಿರ್ಮಿಸಲ್ಪಟ್ಟ ಬೌದ್ಧ ವಾಸ್ತುಶಿಲ್ಪ ಮತ್ತು ಕಲೆಯ ಅತ್ಯುತ್ತಮ ಉದಾಹರಣೆಯೂ ಹೌದು.

ಭಿತ್ತಿಯಲ್ಲಿ ಕಥೆ:
ಈ ಸ್ತೂಪವು ಅರ್ಧಗೋಲಾಕಾರದ ಗುಮ್ಮಟವನ್ನು ಹೊಂದಿದ್ದು, ಅದರ ಸುತ್ತಲೂ ರೇಲಿಂಗ್ ಮತ್ತು ನಾಲ್ಕು ದ್ವಾರಗಳಿವೆ, ಪ್ರತಿಯೊಂದೂ ಬುದ್ಧನ ಜೀವನದ ಕಥೆಗಳನ್ನು ಚಿತ್ರಿಸುವ ಸಂಕೀರ್ಣ ಕೆತ್ತನೆಗಳು ಮತ್ತು ಶಿಲ್ಪಗಳಿಂದ ಅಲಂಕರಿಸಲ್ಪಟ್ಟಿದೆ. ಇದರೊಂದಿಗೆ ಸಾಮ್ರಾಟ ಅಶೋಕನ ಜೀವನದ ಕತೆಯನ್ನೂ ಇಲ್ಲಿ ನೋಡಬಹುದು. ಇಲ್ಲಿರುವ ಅಶೋಕನ ಜೀವನಕ್ಕೆ ಸಂಬಂಧಿಸಿದ ಹಾಗೂ ಬುದ್ಧನ ಜೀವನಕ್ಕೆ ಸಂಬಂಧಿಸಿದ ಶಿಲ್ಪಗಳು ಗುಲ್ಬರ್ಗ ಜಿಲ್ಲೆಯ ಸನ್ನತಿಯಲ್ಲಿಯೂ ನಾವು ನೋಡಬಹುದು.
ಅಶೋಕ ಮೌರ್ಯ ವಂಶದ ಅತ್ಯಂತ ಪ್ರಭಾವಿ ರಾಜನಾಗಿದ್ದನು. ಯುದ್ಧದಾಹಿ ಅಶೋಕ ಧರ್ಮದಾಹಿ ಅಶೋಕನಾಗಿ ಪರಿವರ್ತನೆ ಹೊಂದಿದ ಬಳಿಕ ಆತ ಸಾಂಚಿಯಲ್ಲಿ ಸ್ತೂಪವನ್ನು ಸ್ಥಾಪಿಸಿದ. ಕಳಿಂಗ ಮಹಾಯುದ್ಧದ ನಂತರ ಅಶೋಕನ ಮನಪರಿವರ್ತನೆಯಾಗಲು ಆತನ ಮೊದಲ ಪತ್ನಿಯೂ ಕಾರಣ. ವಿಧಿಶಾ ಪಟ್ಟಣದವಳಾದ ದೇವಿಯನ್ನು ವಿಧಿಶಾ ಮಹಾದೇವಿಯೆಂದೂ ಕರೆಯಲಾಗುತ್ತಿತ್ತು. ಆಕೆ ಮೊದಲಿನಿಂದಲೂ ಬೌದ್ಧ ಧರ್ಮದ ಅನುಯಾಯಿಯಾಗಿದ್ದಳು. ಅಶೋಕನ ಮನಪರಿವರ್ತನೆಯ ಕಾಲದಲ್ಲಿ ಬೌದ್ಧ ಭಿಕ್ಷು ಉಪಗುಪ್ತನೊಂದಿಗೆ ಆಕೆಯ ಪ್ರಭಾವವು ಅಶೋಕನ ಮೇಲಾಯಿತು. ಆ ಕಾಲಕ್ಕೆ ವಿಧಿಶಾ ಪಟ್ಟಣ ವಾಣಿಜ್ಯಕೇಂದ್ರವಾಗಿದ್ದು ಬಹಳಷ್ಟು ಜನ ಅಲ್ಲಿಗೆ ವ್ಯಾಪಾರ ವ್ಯವಹಾರಕ್ಕಾಗಿ ಬರುತ್ತಿದ್ದರಿಂದ ಅವರಿಗೆ ಬೌದ್ಧ ಧರ್ಮದ ಸಿದ್ದಾಂತಗಳು ಅರ್ಥವಾಗಲಿ ಎಂಬ ಕಾರಣಕ್ಕಾಗಿ ಸಾಂಚಿಯಲ್ಲಿ ಈ ಸ್ತೂಪವನ್ನು ಅಶೋಕನು ನಿರ್ಮಿಸಿದ.
ಈ ಮಹಾಸ್ತೂಪವು 120 ಅಡಿ ಅಗಲ, 54 ಅಡಿ ಎತ್ತರವಿದೆ. ಮುಖ್ಯ ರಚನೆಯು ಅರ್ಧಗೋಳಾಕಾರವಾಗಿದ್ದು ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಒಳಗೆ ಆಳವಾದ ಕೋಣೆಯಿದೆ. ಅಲ್ಲಿ ಬುದ್ಧನ ಅಸ್ಥಿಯನ್ನು ಇಡಲಾಗಿದೆ. ಸ್ತೂಪಕ್ಕೆ ನಾಲ್ಕು ದ್ವಾರಗಳಿದ್ದು ಅವು ತೋರಣಗಳಿಂದ ಅಲಂಕೃತವಾಗಿವೆ. ಪ್ರತಿಯೊಂದು ದ್ವಾರವು ಎರಡು ಚೌಕಕಾರದ ಕಂಬಗಳಿಂದ ಕೂಡಿದ್ದು, ಅದರ ಮೇಲೆ ತೋರಣದಲ್ಲಿ ಪ್ರಾಣಿಗಳ, ಸವಾರರ, ಕುಬ್ಜ ವ್ಯಕ್ತಿಗಳ ಶಿಲ್ಪಕಲೆಯನ್ನು ನೋಡಬಹುದು. ಸ್ತೂಪದ ಮಧ್ಯದ ಕಂಬವು ತ್ರಿಛತ್ರವನ್ನು ಹೊಂದಿದ್ದು ಅವು ಬೌದ್ಧ ಧರ್ಮದ ಮೂರು ರತ್ನತ್ರಯಗಳಾದ ಬುದ್ಧ, ಧರ್ಮ ಹಾಗೂ ಸಂಘವನ್ನು ಪ್ರತಿನಿಧಿಸುತ್ತವೆ. ಎರಡು ಪ್ರದಕ್ಷಣಾ ಮಾರ್ಗಗಳಿದ್ದು ಒಂದು ಸ್ತೂಪದ ಮೇಲೆ ಹಾಗೂ ಕೆಳಗಿದೆ. ಕೆಳಗಿನ ಕಲ್ಲಿನ ಪ್ಯಾನಲ್‌ಗಳಲ್ಲಿ ದಾನಿಗಳ ಹೆಸರುಗಳನ್ನು ಕೆತ್ತಲಾಗಿದೆ. ಸಾಮಾನ್ಯ ಜನರಿಂದ, ಶ್ರೀಮಂತರು, ರಾಜರು ದಾನ ನೀಡಿರುವುದು ಇಲ್ಲಿ ದಾಖಲಾಗಿದೆ. ಈ ಸ್ತೂಪವು ಅನೇಕ ಬಾರಿ ದಾಳಿಗೆ ಒಳಗಾಗಿ ನಂತರ ಅದನ್ನು ಮತ್ತೆ ಮತ್ತೆ ನಿರ್ಮಿಸಿರುವುದನ್ನು ನಾವಿಲ್ಲಿ ನೋಡಬಹುದು.
ಸ್ತೂಪದ ನಾಲ್ಕು ದಿಕ್ಕುಗಳಲ್ಲಿರುವ ಅತ್ಯಂತ ಅಲಂಕೃತಗೊಂಡಿರುವ ತೋರಣಗಳು ಬುದ್ಧನ ಜೀವನ ಚರಿತ್ರೆಯನ್ನು, ಜಾತಕ ಕತೆಗಳನ್ನು ಬಿತ್ತರಿಸುತ್ತವೆ. ಅಲ್ಲಿನ ಶಿಲ್ಪಕಲೆಯಲ್ಲಿ ಬುದ್ಧನ ತಂದೆ-ತಾಯಿ ಹಾಗೂ ಬುದ್ಧನ ಪ್ರವಚನ ಕೇಳುತ್ತಿರುವ ಭಕ್ತರ ಚಿತ್ರಗಳು ಇಲ್ಲಿವೆ. ಬುದ್ಧನ ಹುಟ್ಟು, ಜ್ಞಾನೋದಯ, ಸಂನ್ಯಾಸಕ್ಕೆ ಸಂಬಂಧಿಸಿದ ಕತೆಗಳನ್ನು ಅತ್ಯಂತ ಸುಂದರವಾಗಿ ಚೌಕಕಾರದ ಕಂಬಗಳಲ್ಲಿ ಕೆತ್ತಲಾಗಿದೆ. ಇಲ್ಲಿ ಎಲ್ಲಿಯೂ ಬುದ್ಧನ ಮಾನವ ಶರೀರವಿಲ್ಲ ಎಂಬುದು ವಿಶೇಷ. ಬುದ್ಧನ ಮಾನವ ರೂಪದ ಬದಲು ಹೆಜ್ಜೆಗುರುತುಗಳು, ಧರ್ಮಚಕ್ರ, ಬೋಧಿವೃಕ್ಷ, ಖಾಲಿ ಸಿಂಹಾಸನ ಮೂಲಕ ಬುದ್ಧನನ್ನು ಪ್ರತಿನಿಧಿಸಿರುವಂತೆ ಚಿತ್ರಿಸಲಾಗಿದೆ. ಅಂದರೆ ಸಾಮ್ರಾಟ ಅಶೋಕನು ಈ ಸ್ತೂಪವನ್ನು ನಿರ್ಮಾಣ ಮಾಡುವ ಕಾಲಕ್ಕೆ ಬುದ್ಧನ ಮಾನವ ರೂಪವನ್ನು ಚಿತ್ರಿಸುವ ಪದ್ಧತಿ ಇರಲಿಲ್ಲ ಎಂಬುದು ಸ್ವಷ್ಟ.

ಭವ್ಯ ಇತಿಹಾಸ:
ಬೌದ್ಧ ಧರ್ಮವನ್ನು ಪ್ರಚಾರ ಮಾಡಲು ಅಶೋಕ ಸುಮಾರು 84,000 ಸ್ತೂಪಗಳನ್ನು ನಿರ್ಮಿಸಿದನು ಎಂಬ ಪ್ರತೀತಿಯಿದೆ. ಸಾಂಚಿಯಲ್ಲಿಯೇ ಅನೇಕ ಚಿಕ್ಕಪುಟ್ಟ ಸ್ತೂಪಗಳನ್ನು ಕಾಣಬಹುದು. ಇಲ್ಲಿ ಅಶೋಕ ನಿರ್ಮಿಸಿದ ಪ್ರಾರ್ಥನಾ ಸ್ಥಳವನ್ನೂ ನೋಡಬಹುದು. ಇವೆಲ್ಲದರ ಜತೆ ದಕ್ಷಿಣ ದ್ವಾರದ ಬಳಿ ಅಶೋಕನೇ ನಿರ್ಮಿಸಿದ ಸ್ತಂಭವಿದೆ. ನಾಲ್ಕು ಸಿಂಹಗಳಿರುವ ಅಶೋಕ ಸ್ತಂಭ ಮುಖ್ಯ ಆಕರ್ಷಣೆಯಾಗಿದೆ. ಸಾರನಾಥದಲ್ಲಿರುವ ಸ್ತಂಭದಂತೆಯೇ ಆಕರ್ಷಿಸುವ ಈ ಅಶೋಕ ಸ್ಥಂಭವನ್ನು 3 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.
ಸಾಂಚಿಯಲ್ಲಿರುವ ಸ್ಮಾರಕಗಳು 2ನೇ ಶತಮಾನದಿಂದ 12 ನೇ ಶತಮಾನದವರೆಗೆ ಬೇರೆ ಬೇರೆ ರಾಜರ ಕಾಲದಲ್ಲಿ ನಿರ್ಮಾಣಗೊಂಡಿರುವುದನ್ನು ಕಾಣಬಹುದು. ಗುಪ್ತ, ಮೌರ್ಯ ಮತ್ತು ಸಾತವಾಹನರ ಕಾಲಘಟ್ಟದಲ್ಲಿ ಅನೇಕ ಕಟ್ಟಡಗಳು, ಮೂರ್ತಿಗಳು ನಿರ್ಮಾಣಗೊಂಡಿದೆ. ಮೊದಲು ಬುದ್ಧನ ಮಾನವ ಶರೀರದ ನಿರ್ಮಾಣದ ಕಲ್ಪನೆ ಇರದಿದ್ದದ್ದು ನಂತರ ಇಲ್ಲಿ ಅನೇಕ ಭಗ್ನ ಬುದ್ಧ ಮೂರ್ತಿಗಳನ್ನು ಅಲ್ಲಲ್ಲಿ ಇಟ್ಟಿರುವುದನ್ನು ಕಾಣಬಹುದು. ಅಲ್ಲಿ ಬೌದ್ಧ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಗುರುಕುಲವನ್ನು ನಡೆಸಲಾಗುತ್ತಿತ್ತು. ಅದನ್ನೂ ಕೂಡ ಇಂದಿಗೂ ಕಾಣಬಹುದು. ಜತೆಗೆ ಬೌದ್ಧ ವಿಹಾರವೂ ಇಲ್ಲಿದ್ದು, ಅದನ್ನು ಜವಹಾರಲಾಲ್ ನೆಹರು ಪ್ರಧಾನಿಯಾಗಿದ್ದ ಕಾಲದಲ್ಲಿ ಕಟ್ಟಲಾಗಿದೆ.
ಶತಮಾನಗಳ ಕಾಲ ಯಾರ ಕಣ್ಣಿಗೂ ಬೀಳದೆ ಅಜ್ಞಾತವಾಗಿದ್ದ ಈ ಸ್ಥಳವನ್ನು 1818 ರಲ್ಲಿ ಬ್ರಿಟಿಷ್ ಅಧಿಕಾರಿಯಾಗಿದ್ದ ಜನರಲ್ ಟೇಲರ್ ಮೊದಲು ಪತ್ತೆ ಹಚ್ಚಿದರು. ಹವ್ಯಾಸಿ ಪುರಾತತ್ತ್ವಜ್ಞರು ಹಾಗೂ ಇತಿಹಾಸಕಾರರು ಆಗಿದ್ದ ಅವರು ಕಾಡಿನಲ್ಲಿ ಮರೆಯಾಗಿದ್ದ ಸ್ಥಳವನ್ನು ಗುರುತಿಸಿದರು. ನಂತರ ಅಲ್ಲಿನ ಸ್ಥಳೀಯರು, ನಿಧಿ ಬೇಟೆಗಾರರು ಸಾಂಚಿಯ ಅನೇಕ ಸ್ಮಾರಕಗಳನ್ನು ಲೂಟಿ ಮಾಡಿದರು, ಹಾಳು ಮಾಡಿದರು. 1992-1919ರ ನಡುವೆ ಸರ್ ಜಾನ್ ಮಾರ್ಷಲ್ ಅವರ ಮೇಲ್ವಿಚಾರಣೆಯಲ್ಲಿ ಸಾಂಚಿಯನ್ನು ಕಾಪಾಡಲಾಯಿತು. ಇಂದು ಸಾಂಚಿಯಲ್ಲಿ ಐವತ್ತಕ್ಕೂ ಹೆಚ್ಚು ಸ್ಮಾರಕಗಳನ್ನು ರಕ್ಷಿಸಲಾಗಿದೆ. ಇದಕ್ಕೆ 1989ರಲ್ಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದು ಎಂದು ಮಾನ್ಯತೆ ನೀಡಿತು.