Saturday, May 23, 2026
Saturday, May 23, 2026

ಕಾಡಿನ ದಾರಿಯ ಬೆಡಗಿನ ಮೋತಿಗುಡ್ಡ

ಶಿರಸಿಗರ ಚಾರಣ ತಂಡ ಮೋತಿಗುಡ್ಡದ ಚಾರಣದ ದಿನಾಂಕವನ್ನು ಗೊತ್ತುಮಾಡಿದಾಗ, ಗೆಳತಿ ಪೂರ್ಣಿಮಾ ಉತ್ಸಾಹ ತೋರಿಸಿದಳು. ಏಪ್ರಿಲ್ ತಿಂಗಳಲ್ಲಿ ಅಂಕೋಲಾ ತಾಲ್ಲೂಕಿನ ಸುಡುವ ಬಿಸಿ ಹೇಗಿರಬಹುದೆಂಬ ಕಲ್ಪನೆಯೇ ನನ್ನನ್ನು ಬೆಚ್ಚಿಬೀಳಿಸಿತ್ತು. ಹೋಗಲೋ ಬೇಡವೋ ಎಂದು ಯೋಚಿಸುತ್ತ ಕೊನೆಯಲ್ಲಿ ಮೋತಿಗುಡ್ಡಕ್ಕೆ ಹೋಗುವ ದಾರಿಯಲ್ಲಿ ಹೆಜ್ಜೆ ಮೂಡಿಸಲು ತಯಾರಾಗಿಬಿಟ್ಟೆ.

  • ಸಿಂಧುಚಂದ್ರ

ಮೋತಿ ಶಬ್ದಕ್ಕೆ ಮುತ್ತು ಎನ್ನುವ ಅರ್ಥವಿದೆ. ಮುತ್ತಿನಗುಡ್ಡ ಎಂದೇ ಕರೆಯಬಹುದಿತ್ತು ಅನಿಸಿತು. 16 ವರ್ಷದ ಹುಡುಗನಿಂದ ಹಿಡಿದು 70 ವರ್ಷದ ಹಿರಿಯರನ್ನು ಒಳಗೊಂಡಿದ್ದ 18 ಜನರ ಶಿರಸಿಗರ ಚಾರಣ ತಂಡದಲ್ಲೊಬ್ಬಳಾಗಿ ಚಾರಣಕ್ಕೆ ಹೊರಟೆ.

ಇದನ್ನೂ ಓದಿ: ಜೋಳಿಗೆ ತುಂಬ ತಂದ ಚಾರಣದ ಕಥೆಗಳು

ದೇವನಳ್ಳಿಯ ಡ್ರೈ ಮಿಸಳ್, ಕಟ್ ಮಿರ್ಚಿ ಇಡೀ ಶಿರಸಿಯಲ್ಲಿ ಫೇಮಸ್. ಊರಪದ್ಧತಿಯಂತೆ ನಾವೂ ಬಾಯನ್ನು ಈರುಳ್ಳಿಯ ವಾಸನೆ ಮಾಡಿಕೊಂಡು ಹಸಿರು ತೋರಣದ ಕಾಡಿನ ದಾರಿಯಲ್ಲಿ ವಡ್ಡಿಘಟ್ಟವನ್ನು ಇಳಿಯತೊಡಗಿದೆವು. ಸೂರ್ಯೋದಯ ಹೋಂಸ್ಟೇ ತಲುಪಿದಾಗ ಸೂರ್ಯಾಸ್ತದ ಸಮಯವಾಗಿತ್ತು. 16 ಜನ‌ ವಾಹನದಲ್ಲಿ ಮೋತಿಗುಡ್ಡವನ್ಬು ತಲುಪಿದರೆ, ಡಾ.ದಿನೇಶ್ ಹೆಗಡೆ ಮತ್ತು ವಿನಾಯಕ ಜೋಶಿ ಸೈಕಲ್‌ನಲ್ಲಿ ಬಂದಿದ್ದರು.

ಬೆಟ್ಟದ ತಪ್ಪಲಿನಲ್ಲಿ

ಮಾರನೆಯ ದಿನ‌ ಬೆಳಗ್ಗೆ ಚಾರಣಕ್ಕೆ ಕೈಗೊಳ್ಳುವುದು ನಮ್ಮ ಯೋಜನೆಯಾಗಿತ್ತು. ಕತ್ತಲು ಆವರಿಸುತ್ತಿದ್ದ ಸಮಯದಲ್ಲಿ ಸುತ್ತಲಿನ ಬೆಟ್ಟ ಕಪ್ಪಲ್ಲಿ ಅದ್ದಿಟ್ಟಂತೆ ತೋರುತ್ತಿತ್ತು. ನಾನು ಊಹಿಸಿದ್ದ ಘಟ್ಟದ ಕೆಳಗಿನ ಸೆಕೆ ಅಲ್ಲಿರಲಿಲ್ಲ. ಹಾಗೆಂದು ತಣ್ಣನೆಯ ಗಾಳಿಯೂ ಇರಲಿಲ್ಲ. ಎಲ್ಲವೂ ಸ್ತಬ್ದವಾಗಿ ನಿಂತ ನೀರವ ರಾತ್ರಿಯೆಂಬುದು ನಮ್ಮ‌ನಗೆ ಕೇಕೆಯಿಂದ ಸ್ವಲ್ಪ ಗೊಂದಲಕ್ಕೀಡಾದಂತೆ ಭಾಸವಾಯಿತು. ರಾತ್ರಿ ಸರಳ ಶೈಲಿಯ ಹವ್ಯಕ ಊಟವೆಂಬುದು ತಂಬುಳಿ, ಅಪ್ಪೆಹುಳಿಯೊಂದಿಗೆ ಸಂಪನ್ನಗೊಂಡಿತು.

Untitled design (6)

ಆರಂಭದಲ್ಲಿ ಹಸಿರು ಹಸಿರಾಗಿ, ನಂತರ ಬೂದು ಬಣ್ಣದಲ್ಲಿ, ಮತ್ತೂ ಆಚೆ ತಿಳಿನೀಲಾಕಾಶದ ದಿಗಂತದಲ್ಲಿ ಎಳೆಎಳೆಯಾಗಿ, ಬೆಳ್ಳನೆಯ ಮೋಡದೊಂದಿಗೆ ಸೇರಿ ಕರಗಿಹೋಗಿದ್ದ ಬೆಟ್ಟಗಳ ಹಿಂದೆ ಚೂರೇ ಚೂರು ಕೇಸರಿ ಬಣ್ಣ ಗೋಚರಿಸತೊಡಗಿತ್ತು. ಬೆಳಗ್ಗೆ 6.30ಯಿಂದ 7 ಘಂಟೆಯವರೆಗಿನ ನಡುವೆ ಏನೆಲ್ಲಾ ಚಮತ್ಕಾರ ಆಗಸದಲ್ಲಿ!

ತಿಳಿಕೇಸರಿಯ ಪೂಸಿಕೊಂಡ ಚಂದ್ರನಂತೆ ತಣ್ಣಗೆ ಕಾಣಿಸಿಕೊಂಡ ಸೂರ್ಯ, ಹೊಂಬಣ್ಣದ ಎಳೆಗಳಿಂದ ಇಡೀ ಬಾನನ್ನು ವರ್ಣಮಯವನ್ನಾಗಿಸಿತ್ತು. ಬಹುಶಃ ಇದೇ ಕಾರಣದಿಂದಲೇ ಈವರೆಗೂ ಸೂರ್ಯೋದಯದ ಕುರಿತು ಲಕ್ಷಗಟ್ಟಳೆ ಕವಿತೆಗಳು ಬರೆಯಲ್ಪಟ್ಟರೂ , ಪ್ರತಿ ಪದ್ಯವೂ ನವನವೀನ. ಅರುಣೋದಯ, ಕಿರಣೋದಯ, ಸೂರ್ಯೋದಯ ಎಂಬ ಹಂತಗಳನ್ನು ನೋಡಿದೆವು ಎಂದು ಡಾ. ರಾಯ್ಸದ್ ಚಂದದ ವಿಶ್ಲೇಷಣೆ ಮಾಡಿದರು. ಮಧ್ಯೆ ಮಧ್ಯೆ ಮೋಡಗಳ ಹಿಂದೆ ಅಡಗುತ್ತಾ, ಕೆಲವೊಮ್ಮೆ ಚುಕ್ಕಿಯಾಗಿ, ದೇಶವಿದೇಶಗಳ ನಕಾಶೆಯಾಗಿ , ಕೆಂಡದುಂಡೆಯ ತುಣುಕಾಗಿ ಹತ್ತಾರು ವೇಷ ತೋರಿಸಿದ ಸೂರ್ಯ ನೋಡನೋಡುತ್ತಿದ್ದಂತೆ ತೀಕ್ಷ್ಣವಾದ. ತೂಗುಯ್ಯಾಲೆಯಲ್ಲಿ ಒಬ್ಬಳೇ ಕುಳಿತು ಸೂರ್ಯ ಉದಯಿಸುವ ಅನನ್ಯ ಘಳಿಗೆಯ ಪ್ರತಿ ಹಂತವನ್ನು ಕಣ್ತುಂಬಿಕೊಂಡ ಅಪರೂಪದ ಕ್ಷಣವೊಂದು ನನ್ನ‌ಮನದಲ್ಲಿ ಶಾಶ್ವತವಾಗಿ ನೆಲೆಗೊಂಡಿತು.

ಬದುಕಿನ ಪಾಠ

ಮೋತಿಗುಡ್ಡ 5 ಕಿಮೀ ನಡಿಗೆಯ ಚಾರಣ. ಒಟ್ಟು 10 ಕಿಮೀ ಹತ್ತಿ ಇಳಿಯಲು 5 ತಾಸು ಬೇಕು. ಮೂರು ಕಿಮೀ ಗುಡ್ಡದ ಹಾದಿ ದಟ್ಟ ಅರಣ್ಣದಲ್ಲಿದ್ದು, ಚಾರಣಿಗರಿಗೆ ಹೆಚ್ಚುವರಿ ಸಂತೋಷವನ್ನು ನೀಡುತ್ತದೆ. ಭೂತಾಕಾರದ ಮರವನ್ನು ತಬ್ಬಿದ ದೊಡ್ಡ ದೊಡ್ಡ ಬಳ್ಳಿಗಳು, ನಿತ್ಯ ಹರಿದ್ವರ್ಣದ ಕಾಡು, ರಸ್ತೆಗೆ ಅಡ್ಡಬಿದ್ದ ಬೃಹತ್ ಮರಗಳು, ಮಧ್ಯ ತಂಪನೆರೆವ ಪುಟ್ಟ ತೊರೆ, ಕಾಡಿನ ಅದ್ಭುತ ದೃಶ್ಯಕಾವ್ಯವೊಂದು ಇಡೀ ಹಾದಿಯುದ್ದಕ್ಕೂ ವಿಶಿಷ್ಟ ಪರಿಮಳದೊಂದಿಗೆ ನಮ್ಮನ್ನು ಬಂಧಿಸುತ್ತವೆ. ಕಾಡಿಗೆ ಶರಣಾದರೆ ನಮ್ಮನ್ನು ಬರಸೆಳೆದು ಅಪ್ಪಿಕೊಳ್ಳುತ್ತದೆ ಎಂಬ ಮಾತಿದೆ. ಬೆಟ್ಟ ಹತ್ತುವಾಗ ಆಗುವ ಶ್ರಮ, ಸುಸ್ತು, ನೋವು, ಎಲ್ಲವೂ ಚಾರಣ ಪೂರ್ತಿಯಾದ ಮರುಕ್ಷಣದಲ್ಲಿ ಆತ್ಮವಿಶ್ವಾಸವಾಗಿ ಬದಲಾಗುವ ಪರಿ ಅದ್ಭುತ. ನಿಸರ್ಗದೆದುರು ಹುಲುಮಾನವನ ಪದವಿ, ಅಂತಸ್ತು, ಹಮ್ಮು, ಬಿಮ್ಮು, ಸೊಕ್ಕು, ಅಹಂಕಾರ, ಪ್ರತಿಷ್ಠೆ, ಐಶ್ವರ್ಯ, ಹುದ್ದೆ , ಎಲ್ಲವೂ ನಗಣ್ಯ. ಅಸ್ತಿತ್ವವೇ ಶೂನ್ಯ ಎಂಬುದನ್ನು ಅರಿಯಲಾದರೂ ಆಗಾಗ ಚಾರಣ ಮಾಡಬೇಕು. ಆಗ ಬೆವರಿನೊಂದಿಗೆ ಅಹಂಕಾರವೂ ಹರಿಯುತ್ತದೆ. ಎಲ್ಲಾ ರೀತಿಯ ಗರ್ವವನ್ನು ಮೆಟ್ಟಿನಿಲ್ಲುವ ಚಾರಣ ಪ್ರತಿಬಾರಿ ಬದುಕಿನ ಪಾಠಕ್ಕೆ ಹೊಸ ಮುನ್ನುಡಿ ಬರೆಯುತ್ತದೆ.

Untitled design (5)

ಏಳುಬೀಳಿನ ನಡುವೆ

ಈ ಚಾರಣದಲ್ಲಿ ನಾವು ಮಾಡಿದ ತಪ್ಪೆಂದರೆ ಕೇವಲ ಒಂದೊಂದು ಬಾಟಲಿ ನೀರನ್ನು ಕೊಂಡೊಯ್ದಿದ್ದು. ನಾನಂತೂ ಬೆಟ್ಟ ಏರುವಾಗಲೇ ಅಷ್ಟೂ ನೀರನ್ನು ಖಾಲಿ ಮಾಡಿದ್ದೆ. ಮೂರು ಕಿಮೀನ ಕಾಡಿನ ಹಾದಿಯ ನಂತರ ಇರುವ ಎರಡು ಕಿಮೀ ಅಕ್ಷರಶಃ ಬೋಳು ಬೆಟ್ಟ. ಕಲ್ಲುದಾರಿ. ಬಿಳಿ ಮುಳ್ಳೆಹಣ್ಣಿನ ಪೊದೆಗಳಲ್ಲಿ ಪೊತ್ತೆ ಪೊತ್ತೆ ಹಣ್ಣು ಬೆಳೆದಿದ್ದನ್ನು ಎಷ್ಟೋ ವರ್ಷದ ನಂತರ ಕಣ್ತುಂಬಿಕೊಂಡೆ. ಆದರೆ ಅದನ್ನು ಕಿತ್ತು ತರುವಷ್ಟು ವ್ಯವಧಾನ ಮತ್ತು ಉತ್ಸಾಹ ಎರಡೂ ನನ್ನ ಬಳಿ ಇರಲಿಲ್ಲ. ಬಿಸಿಲಿನ ಝಳಕ್ಕೆ ಕುಡಿದಿದ್ದ ನೀರಿನ ಎರಡು ಪಟ್ಟು ಬೆವರು ಮೈಯಿಂದ ಹರಿದಿತ್ತು. ಮುಖ ಭಗಭಗ ಎನ್ನಲು ಆರಂಭಗೊಂಡಿತ್ತು. ಕಾಲುಗಳು ಮಾತನಾಡತೊಡಗಿದ್ದವು. ಆದರೆ ಗುಂಪಿನ ಉತ್ಸಾಹಕ್ಕೆ ಕೊರತೆಯಿರಲಿಲ್ಲ. ಅವರೆಲ್ಲರ ಸ್ಪೂರ್ತಿಯ ಮಾತುಗಳು, ಹುರಿದುಂಬಿಸುವಿಕೆ, ಅವರೇ ಕಿತ್ತು ತಂದ ಬೊಗಸೆ ಬಿಳಿ ಮುಳ್ಳೆಹಣ್ಣು ನನ್ನ ಆಯಾಸವನ್ನು ತಣಿಸಿತ್ತು. ಸವಾಲಿನ ಕೊನೆಯೆರಡು ಕಿಮೀನ ಗುಡ್ಡದ ನಡಿಗೆ ಮುಗಿದಾಗ ಎದುರಾಗುವುದು ಹನುಮಂತದೇವರ ಪುಟ್ಟ ಗುಡಿ. ಪ್ರತಿ ಹನುಮ ಜಯಂತಿಗೆ ಊರವರೆಲ್ಲರೂ ಅಲ್ಲಿ ಬಂದು ಪೂಜೆ ಮಾಡುತ್ತಾರೆ ಎಂದು ನಮ್ಮನ್ನು ಅಲ್ಲಿಗೆ ಕರೆತಂದಿದ್ದ ಮನು ಹೆಗಡೆ ವಿವರಿಸಿದರು. ಮೋಡವಿಲ್ಲದಿದ್ದರೆ ಸಮುದ್ರವನ್ನು ನದಿ ಸೇರುವದೃಶ್ಯ ಇಲ್ಲಿಂದ ಕಾಣುತ್ತದೆ ಎಂಬ ಮಾತನ್ನು ಹೇಳಿ ಮತ್ತೊಮ್ಮೆ ಬರಬೇಕಾಗಬಹುದು ಅದನ್ನು ನೋಡಲು ಎಂಬ ಯೋಚನೆಗೆ ಎಡೆ ಮಾಡಿಕೊಟ್ಟರು. ಉಳಿದಿದ್ದ ಅಲ್ಪಸ್ವಲ್ಪ ನೀರನ್ನೇ ತೀರ್ಥದಂತೆ ಸೇವಿಸಿ, ಕಿತ್ತಳೆ ಮತ್ತು ಗ್ಲೂಕೋಸ್ ನಿಂದ ಮರುಚೈತನ್ಯ ಪಡೆದುಕೊಂಡು ಮತ್ತೆ ತಿರುಗಿ ಹೊರಟಾಗ ಸಾಮಾನ್ಯವಾಗಿ ಚಾರಣಗಳಲ್ಲಿ ಇಳಿಯುವಾಗ ಎದುರಾಗುವ ಜಾರುವ ಸವಾಲು ಜೋರಾಗಿಯೇ ಇತ್ತು. ಕೈಯ್ಯಲ್ಲೊಂದು ಬಿದಿರಿನ ಕೋಲು ಹಿಡಿದು, ತರಗೆಲೆಗಳ ನಡುವೆ , ಕಾಲಿಗೆ ತೊಡರುವ ಬಳ್ಳಿಗಳು ಗಂಡೋ, ಹೆಣ್ಣೋ ಎಂಬ ಅನುಮಾನವನ್ನು ಬಗೆಹರಿಸಿಕೊಳ್ಳುತ್ತಾ, ಏಳುಬೀಳುಗಳಿಲ್ಲದೆ ನಡಿಗೆಯಿಲ್ಲ ಎಂಬ ನೀತಿಪಾಠ ಕಲಿಯುತ್ತಾ ರೈಲಿನ ಬೋಗಿಗಳಂತೆ ಒಬ್ಬರ ಹಿಂದೊಬ್ಬರು ಒಂದೇ ಹಳಿಯ ರಸ್ತೆಯಲ್ಲಿ ಸಾಗಿ ಬಂದಿದ್ದು ನೆನಪಿನ ಪುಟದಲ್ಲಿ ಅಚ್ಚೊತ್ತಿಕೊಂಡವು.

ಅಲ್ಲಿನ ಕಾಡಿನ ತಂಪಿನ ಬಗ್ಗೆ ಹೇಳಬೇಕೆಂದರೆ, ಏಪ್ರಿಲ್ ತಿಂಗಳ ಸುಡುಬಿಸಿಲಿನ ಯಾವುದೇ ಕಿರಣಗಳು ಮೂರು ಕಿಮೀ ಕಾಡಿನ ನಡಿಗೆಯಲ್ಲಿ ನಮ್ಮನ್ನು ಸ್ಪರ್ಶಿಸಲಿಲ್ಲ. ಮಧ್ಯ ಹರಿಯುತ್ತಿದ್ದ ಸಣ್ಣ ತೊರೆಯಂಚಿಗೆ ಸುಡುಬೇಸಿಗೆಯಲ್ಲಿಯೂ ಉಂಬಳಗಳಿರುವುದು ಅಲ್ಲಿನ ತಂಪಿಗೆ ಮತ್ತೊಂದು ಸಾಕ್ಷಿ. ಅದೇ ತಂಪುನೀರನ್ನು ಬಾಟಲಿಗಳಲ್ಲಿ ಹಿಡಿದು ಕುಡಿದಾಗ ಅನಿಸಿದ್ದು ಅಮೃತವೆಂದರೆ ಇದೇ ಇರಬೇಕು ಎಂದು. ತರಗೆಲೆಗಳ ನಡುವೆ ನಮ್ಮ ಹೆಜ್ಜೆ ಗುರುತಿರಲಿ, ಇನ್ಯಾವುದೇ ವಿಷವಸ್ತುಗಳ ಕುರುಹನ್ನು ಮನುಜ ಇಂತಹ ತಾಣಗಳಲ್ಲಿ ಉಳಿಸದಿರಲಿ.

ದಾರಿ ಹೇಗೆ?

ಶಿರಸಿಯಿಂದ 51 ಕಿ‌ಮೀ ದೂರದಲ್ಲಿ ಉತ್ತರಕನ್ನಡಜಿಲ್ಲೆಯ ಅಂಕೋಲಾ ತಾಲ್ಲೂಕಿನ ಅಚವೆ ಗ್ರಾಮವಿದೆ. ಅಲ್ಲಿಂದ 5 ಕಿಮೀ ದೂರದಲ್ಲಿ ಮೋತಿಗುಡ್ಡವೆಂಬ ಪುಟ್ಟ ಊರು.

ಲೇಖಕರು: ಸಾಹಿತಿ

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..