Tuesday, July 7, 2026
Tuesday, July 7, 2026

ಸದಾ ಖುಷಿಯಾಗಿರುವ ಕಾಲ – ಅದುವೇ ಭೂತಾನ್‌ಕಾಲ!

ಒಂದು ದೇಶದ ಪ್ರಗತಿಯನ್ನು GDP (Gross Domestic Product) ಇಂದ ಅಳೆಯಲಾಗುತ್ತಿರುವ ಜಗತ್ತಿನಲ್ಲಿ ತನ್ನ ಪ್ರಗತಿಯನ್ನು GNH (Gross National Happiness) ನಿಂದ ಅಳೆಯಲಾಗುವುದು ಎಂದು ಘೋಷಿಸಿಕೊಂಡಿರುವ ಈ ಪುಟ್ಟ ದೇಶದಲ್ಲಿ ಎಲ್ಲರೂ ಸಂತೋಷಿಗಳಲ್ಲದಿರಬಹುದು ಆದರೆ ಭೂತಾನ್ ಪರಿಪೂರ್ಣವಾಗಿ ʻಸಂತೋಷದ ನಾಡುʼ ಆಗಿದೆ. ಅಲ್ಲಿಗೆ ಪ್ರವಾಸ ಹೋಗುವ ಮೊದಲು ನನ್ನ ಗ್ರಹಿಕೆಯಲ್ಲಿ ಸಂತೋಷ ಯಾವತ್ತೂ ವ್ಯಕ್ತಿಗತವೇ ಇರುತ್ತದೆ ಎನ್ನುವುದಾಗಿತ್ತು. ಆದರೆ ಈ ದೇಶ ಸಂತೋಷವನ್ನು ಹೊಂದುವುದು ಹೇಗೆ ಎನ್ನುವುದನ್ನು ಹಂತಹಂತವಾಗಿ ಪ್ರಜೆಗಳಿಗೆ ಹೇಳಿಕೊಟ್ಟು ಇಡೀ ದೇಶವನ್ನು ಸಂತೋಷದ ನೆಲೆವೀಡನ್ನಾಗಿ ಮಾಡುವುದರಲ್ಲಿ ಯಶಸ್ವಿಯಾಗಿದೆ.

- ಅಂಜಲಿ ರಾಮಣ್ಣ

ಭೂತಾನ್ ದೇಶಕ್ಕೆ ಹೋಗುತ್ತಿದ್ದೇನೆ ಎಂದ ಕೂಡಲೇ ಎದುರಿನವರು ತೆಗೆಯುತ್ತಿದ್ದ ಉದ್ಗಾರ “ಓಹ್ ಅತ್ಯಂತ ಸಂತೋಷದಿಂದ ಇರುವ ದೇಶ” ಅಥವಾ “ಓಹ್ ಸಂತೋಷದ ನಾಡು” ಎಂದೇ ಆಗಿತ್ತು. ಪಾಶ್ಚಿಮಾತ್ಯ ದೃಷ್ಟಿಕೋನದಲ್ಲಿ ಸಂತೋಷವನ್ನು ಹೆಚ್ಚಾಗಿ ವೈಯಕ್ತಿಕವಾದ ಸಕಾರಾತ್ಮಕ ಭಾವನೆಗಳು, ಜೀವನ ತೃಪ್ತಿ ಮತ್ತು ಪೂರ್ಣತೆಯೊಂದಿಗೆ ಗುರುತಿಸಲಾಗುತ್ತದೆ. ಇದರಲ್ಲಿ ವ್ಯಕ್ತಿಕೇಂದ್ರಿತ ಭಾವನೆಗೆ ಗಮನ ಹೆಚ್ಚು. ಪಾಶ್ಚಿಮಾತ್ಯ ಮನೋವಿಜ್ಞಾನವು ಸಂತೋಷದಿಂದ ಇರುವ ಜನರನ್ನು ವಿವರಿಸುವ ರೀತಿಯಲ್ಲಿ ಕೆಲವೊಮ್ಮೆ ಪರಸ್ಪರ ವಿರೋಧಾಭಾಸವನ್ನೂ ತೋರುತ್ತದೆ. ಭಾರತೀಯ ತತ್ವಶಾಸ್ತ್ರದಲ್ಲೂ ಸಂತೋಷ ಎನ್ನುವುದು ವೈಯಕ್ತಿಕ ಜಿಜ್ಞಾಸೆಯ ಮಟ್ಟದಲ್ಲಿಯೇ ಗಿರಕಿ ಹೊಡೆಯುತ್ತಿರುವಾಗ ಸಂತೋಷ ಎನ್ನುವುದಕ್ಕೆ ವಾಸ್ತವಿಕ ನೆಲೆಗಟ್ಟಿನಲ್ಲಿ ಹೊಸ ಭಾಷ್ಯ ಬರೆದಿರುವ ಏಕೈಕ ದೇಶ ಭೂತಾನ್.

ಒಂದು ದೇಶದ ಪ್ರಗತಿಯನ್ನು GDP (Gross Domestic Product) ಇಂದ ಅಳೆಯಲಾಗುತ್ತಿರುವ ಜಗತ್ತಿನಲ್ಲಿ ತನ್ನ ಪ್ರಗತಿಯನ್ನು GNH (Gross National Happiness) ನಿಂದ ಅಳೆಯಲಾಗುವುದು ಎಂದು ಘೋಷಿಸಿಕೊಂಡಿರುವ ಈ ಪುಟ್ಟ ದೇಶದಲ್ಲಿ ಎಲ್ಲರೂ ಸಂತೋಷಿಗಳಲ್ಲದಿರಬಹುದು ಆದರೆ ಭೂತಾನ್ ಪರಿಪೂರ್ಣವಾಗಿ ʻಸಂತೋಷದ ನಾಡುʼ ಆಗಿದೆ. ಅಲ್ಲಿಗೆ ಪ್ರವಾಸ ಹೋಗುವ ಮೊದಲು ನನ್ನ ಗ್ರಹಿಕೆಯಲ್ಲಿ ಸಂತೋಷ ಯಾವತ್ತೂ ವ್ಯಕ್ತಿಗತವೇ ಇರುತ್ತದೆ ಎನ್ನುವುದಾಗಿತ್ತು. ಆದರೆ ಈ ದೇಶ ಸಂತೋಷವನ್ನು ಹೊಂದುವುದು ಹೇಗೆ ಎನ್ನುವುದನ್ನು ಹಂತಹಂತವಾಗಿ ಪ್ರಜೆಗಳಿಗೆ ಹೇಳಿಕೊಟ್ಟು ಇಡೀ ದೇಶವನ್ನು ಸಂತೋಷದ ನೆಲೆವೀಡನ್ನಾಗಿ ಮಾಡುವುದರಲ್ಲಿ ಯಶಸ್ವಿಯಾಗಿದೆ. ಇಲ್ಲಿ ಸಂತೋಷ ಎಂದರೆ ಯಾವುದೋ ಅಮೂರ್ತ ಕಲ್ಪನೆಯಲ್ಲ ಅದೊಂದು ತಾರ್ಕಿಕವಾದ ಪ್ರಕ್ರಿಯೆ, ಪ್ರತೀ ಪ್ರಜೆಯೂ ಸಂತೋಷವಾಗಿರಲೇ ಬೇಕು ಎನ್ನುವ ಕಡ್ಡಾಯ ನಿಯಮವಿದೆ.

ಇದನ್ನೂ ಓದಿ: ಎರಡು ಎಲೆ ಒಂದು ಮೊಗ್ಗು .. ಟೀ, ಕಾಫಿಯ ಘಮ ಗಮ್ಯದೆಡೆಗೆ!

ಬಹುಶಃ ಪ್ರಪಂಚದ ಯಾವುದೇ ದೇಶವು ಸಂತೋಷವನ್ನು ಭೂತಾನ್‌ನಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಭೂತಾನ್‍ಗೆ ಹೋದ ಯಾವುದೇ ಪ್ರವಾಸವೂ ಸಂತೋಷದ ವಿಷಯ ಪ್ರಸ್ತಾಪವಾಗದೇ ಪೂರ್ಣವಾಗುವುದಿಲ್ಲ. ನಾಲ್ಕನೇ ಮಹಾರಾಜ ದ್ರುಕ್ ಗ್ಯಾಲ್ಪೋ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಮತ್ತು ಈಗಿನ ಐದನೇ ಮಹಾರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ಚುಕ್ ಅವರು ಸಂತೋಷವನ್ನು ತಮ್ಮ ದೇಶದ ಅಭಿವೃದ್ಧಿಯ ಸಂಕೇತ ಎಂದು ಜಗತ್ತಿಗೆ ಸಾರಿದ್ದಾರೆ. ಅದಕ್ಕಾಗಿ ಕೈಗೊಳ್ಳಬೇಕಾದ ಕೆಲಸಗಳನ್ನು ಭೂತಾನಿನ ರಾಷ್ಟ್ರೀಯ ರಚನೆಯಲ್ಲಿ ಪ್ರಜ್ಞಾಪೂರ್ವಕವಾಗಿ ಹೆಣೆದಿದ್ದಾರೆ. ನಮ್ಮ ಬದುಕಿನ ನಿಜವಾದ ಉದ್ದೇಶವೇ ಸಂತೋಷವನ್ನು ಅದರ ಆಳವಾದ ಮತ್ತು ಸ್ಥಿರ ರೂಪದಲ್ಲಿ ಕಾಣುವುದು. ಮನಸ್ಸು, ಆತ್ಮ, ಬುದ್ಧಿ, ಭಾವನೆ ಮತ್ತು ಕಲೆಗಳಿಗೆ ತರಬೇತಿ ನೀಡುವ ಮೂಲಕ ಈ ಆಳವಾದ, ಸ್ಥಿರ ಸಂತೋಷವನ್ನು ಸಾಧಿಸಬಹುದು. ಇದು ಸಾವಧಾನತೆ ಮತ್ತು ಆಂತರಿಕ ಶಿಸ್ತಿನ ಅಭ್ಯಾಸದಿಂದ ಸಾಧ್ಯವಾಗುತ್ತದೆ ಎನ್ನುವುದನ್ನು ಮನಗೊಂಡು ಈ ತತ್ವವನ್ನು ಆ ದೇಶದ ಸಂವಿಧಾನದ 9ನೆಯ ಪರಿಚ್ಚೇಧದಲ್ಲಿ ಸೇರಿಸಲಾಗಿದೆ.

190315132242-13-bhutan-happiest

ಪರ್ಯಾಯ ಅಭಿವೃದ್ಧಿಯ ಚೌಕಟ್ಟಾಗಿ GNH ಅನ್ನು ನಾಲ್ಕು ಸ್ತಂಭಗಳಿಂದ ವ್ಯಾಖ್ಯಾನಿಸಲಾಗಿದೆ. ಪರಿಸರ ಸಂರಕ್ಷಣೆ, ಸಂಸ್ಕೃತಿಯ ರಕ್ಷಣೆ, ಉತ್ತಮ ಆಡಳಿತ, ಮತ್ತು ಸುಸ್ಥಿರ ಹಾಗೂ ಸಮಾನ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಇವುಗಳನ್ನು ಸಾಧಿಸಲು ಪ್ರತಿಯೊಬ್ಬ ಪ್ರಜೆಯೂ ಕೈ ಜೋಡಿಸಬೇಕು ಎನ್ನುವ ಮೂಲಭೂತ ಜವಾಬ್ದಾರಿಯನ್ನು ವಹಿಸಲಾಗಿದೆ. ಇದು ನಿಜವಾದ ಸಂತೋಷವನ್ನು ಹೊಂದಲು ಭೂತಾನ್ ಕಂಡುಕೊಂಡಿರುವ ಮಾರ್ಗ. ತನ್ನ ಸಂಪೂರ್ಣ ಅಸ್ತಿತ್ವವನ್ನು ʻಸಹಬಾಳ್ವೆʼಯ ನಿಜಾರ್ಥದ ಮೇಲೆ ಅವಲಂಬಿತವಾಗಿ ಮಾಡಿಕೊಂಡಿದೆ.

ಸಂವಿಧಾನವು ಕನಿಷ್ಠ 60% ದೇಶವು ಶಾಶ್ವತವಾಗಿ ಅರಣ್ಯ ವ್ಯಾಪ್ತಿಯಾಗಿರಬೇಕು ಎನ್ನುವುದನ್ನು ಕಡ್ಡಾಯಗೊಳಿಸುತ್ತದೆ. ನದಿಗಳು, ಕಾಡುಗಳು ಮತ್ತು ವನ್ಯಜೀವಿಗಳ ಆವಾಸಸ್ಥಾನಗಳಿಗೆ ಬೆದರಿಕೆ ಹಾಕುವ ಅಭಿವೃದ್ಧಿಗಳನ್ನು ನ್ಯಾಯಾಲಯಗಳು ಪೂರ್ವಭಾವಿಯಾಗಿಯೇ ನಿರ್ಬಂಧಿಸಿವೆ. ಪರಿಸರವನ್ನು ಹಾನಿ ಮಾಡುವ ಎಲ್ಲಾ ವಸ್ತುಗಳನ್ನು, ಕೆಲಸಗಳನ್ನು ತೀವ್ರತೆರನಾಗಿ ನಿಷೇಧಿಸಲಾಗಿದೆ. ಅಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ. ಇದು ಸಂತೋಷಕ್ಕೆ ಆ ದೇಶ ಹಾಕಿಕೊಂಡಿರುವ ಅಡಿಪಾಯದ ಮೊದಲ ಸ್ಥಂಭ. ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಬೇಕು ಎನ್ನುವ ಎರಡನೆಯ ಸ್ಥಂಭದ ಮಾರ್ಗಸೂಚಿಯಂತೆ ಭೂಟಾನ್ ಆಧುನೀಕರಣ ಮತ್ತು ಆರ್ಥಿಕ ಬೆಳವಣಿಗೆಯನ್ನು ಒಪ್ಪಿಕೊಳ್ಳುತ್ತದೆ, ಆದರೆ ತನ್ನ ಭಾಷೆ, ಸಂಪ್ರದಾಯ, ಉಡುಗೆ, ಅಡುಗೆಯಲ್ಲಿ ತೀವ್ರ ಅಸಮಾನತೆ ಸೃಷ್ಟಿಸುವ ಅಥವಾ ಸಾಮಾಜಿಕ ಕಲ್ಯಾಣವನ್ನು ತ್ಯಾಗ ಮಾಡುವ ಮಾದರಿಗಳನ್ನು ತಿರಸ್ಕರಿಸುತ್ತದೆ. ಅಲ್ಲಿ ಮೆಕ್ ಡೊನಾಲ್ಡ್‌ನಂಥ ವಿದೇಶಿ ಆಹಾರಗಳನ್ನು ಮಾರಾಟ ಮಾಡುವುದಿಲ್ಲ. ಯಾವುದೇ ವ್ಯಾಪಾರ ವಹಿವಾಟಿನಲ್ಲಿ ವಿದೇಶಿಯರ ನೇರ ಹೂಡುವಿಕೆಗೆ ವಿರೋಧ ಹೇಳಿಬಿಟ್ಟಿದೆ ಭೂತಾನ್.

GNH ಹೇಳುವ ಮೂರನೆಯ ಸ್ಥಂಭ ಜವಾಬ್ದಾರಿಯುತ, ಪಾರದರ್ಶಕ ಮತ್ತು ಪ್ರಜೆಗಳ ಭಾಗವಹಿಸುವಿಕೆಯ ಆಡಳಿತವನ್ನು ಕಡ್ಡಾಯಗೊಳಿಸಿರುವುದು. ಭೂತಾನ್ ಸಂಪೂರ್ಣವಾಗಿ ಭ್ರಷ್ಟಾಚಾರವೆನ್ನುವ ಪಿಡುಗಿನಿಂದ ಹೊರತಾಗಿದೆ. ಸ್ಥಳೀಯ ಸರಕಾರಗಳಿಗೆ ವಿಕೇಂದ್ರೀಕರಣ, ಭ್ರಷ್ಟಾಚಾರ ವಿರೋಧಿ ಕ್ರಮಗಳು, ಕಾನೂನಿನ ಆಡಳಿತ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆ ಮಾಡುವ ಹೊಣೆಯನ್ನು ನೀಡಲಾಗಿದೆ. ನಾಗರೀಕರು ಮತ ಚಲಾಯಿಸುವುದನ್ನು, ಸ್ಥಳೀಯ ಸಭೆಗಳಿಗೆ ಹಾಜರಾಗುವುದನ್ನು ಹಾಗೂ ಸಾರ್ವಜನಿಕ ಸೇವಾ ವಿತರಣೆಯಲ್ಲಿ ಪಾಲ್ಗೊಳ್ಳುವುದನ್ನು ಖಚಿತ ಪಡಿಸಿಕೊಳ್ಳಲಾಗುತ್ತದೆ.

ಪ್ರಜೆಗಳ ಆರೋಗ್ಯದ ಬಗ್ಗೆ ಖುದ್ದು ರಾಜವಂಶವೇ ನಿಗಾ ವಹಿಸುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಸಂತೋಷದ ಬಾಳ್ವೆಯ ನಾಲ್ಕನೆಯ ಸ್ಥಂಭ. ಆರೋಗ್ಯ ಮತ್ತು ಶಿಕ್ಷಣವನ್ನು ಎಲ್ಲಾ ಪ್ರಜೆಗಳಿಗೂ ಸರ್ಕಾರ ಉಚಿತವಾಗಿ ಒದಗಿಸಿಕೊಡುತ್ತಿದೆ. ಹೊರ ದೇಶಗಳಿಗೆ ಹೋಗಿ ಚಿಕಿತ್ಸೆ ಅಥವಾ ಶಿಕ್ಷಣವನ್ನು ಪಡೆಯುವವರ ಖರ್ಚನ್ನು ಸರಕಾರವೇ ಸಂಪೂರ್ಣವಾಗಿ ಭರಿಸುತ್ತದೆ. GNH ಭೂತಾನ್‍ನ ಪ್ರಗತಿಯ ಸಂಕೇತವಾದ್ದರಿಂದ ಅದನ್ನು ಸಾಧಿಸಲಾಗುತ್ತಿದೆ ಎಂದು ಕಂಡುಕೊಳ್ಳಲು ಸೆಂಟರ್ ಫಾರ್ ಭೂತಾನ್ ಸ್ಟಡೀಸ್ ಮತ್ತು GNH ರಿಸರ್ಚ್ (CBS)ಸೆಂಟರ್ ಪ್ರತಿ ಎರಡು ವರ್ಷಗಳಿಗೊಮ್ಮೆ ರಾಷ್ಟ್ರೀಯ GNH ಸಮೀಕ್ಷೆಯನ್ನು ನಡೆಸುತ್ತದೆ. ಜನರ ಆರೋಗ್ಯ, ಸಮಯದ ಸದ್ಬಳಕೆ, ಕ್ರಿಯಾಶೀಲತೆ, ಪರಿಸರದ ಕಡೆಗಿನ ಕೊಡುವಿಕೆ, ನೀತಿ ರೂಪಿಸುವಲ್ಲಿ ಭಾಗವಹಿಸುವಿಕೆ, ಶಿಕ್ಷಣ, ಸಾಂಸ್ಕೃತಿಕ ಭಾಗವಹಿಸುವಿಕೆ, ಆದಾಯ ಮತ್ತು ಜೀವನ ಗುಣಮಟ್ಟ, ಪ್ರವಾಸೋದ್ಯಮ ಮತ್ತು ಸಮುದಾಯದ ಚೈತನ್ಯ ಇವುಗಳನ್ನು 33 ಸೂಚ್ಯಂಕಗಳಲ್ಲಿ ಪರಿಶೀಲನೆ ನಡೆಸಲಾಗುತ್ತದೆ.

world-happiness-report-2019_8182

ಕಾನೂನುಗಳು, ನೀತಿಗಳು ಮತ್ತು ಬಜೆಟ್‌ಅನ್ನು ರೂಪಿಸಲು GNHಅನ್ನು ಭೂತಾನ್‌ ಮಾನದಂಡವಾಗಿ ಉಳಿಸಿಕೊಂಡಿದೆ. ಪ್ರಪಂಚದಾದ್ಯಂತದ ಶಿಕ್ಷಣತಜ್ಞರು, ಸಂಶೋಧಕರು ಮತ್ತು ನೀತಿ ನಿರೂಪಕರು GNHಅನ್ನು ಅಧ್ಯಯನ ಮಾಡಲು, ಕಲಿಯಲು ಭೂತಾನ್‌ಗೆ ಭೇಟಿ ನೀಡುತ್ತಾರೆ. ಪ್ರತಿ ಎರಡು ವರ್ಷಗಳಿಗೊಮ್ಮೆ ದೇಶದ ಸಂತೋಷವನ್ನು ಅಳೆಯಲಾಗುತ್ತದೆ ಎಂಬ ಸಂಗತಿ ಅವರಿಗೆ ಸ್ಫೂರ್ತಿ ನೀಡುತ್ತದೆ. ʻಸಂತೋಷವೇ ಪ್ರಗತಿʼ ಎನ್ನುವ ತತ್ವಶಾಸ್ತ್ರವು ಸ್ಪಷ್ಟ ಫಲಿತಾಂಶಗಳನ್ನು ನೀಡಿದೆ. GNHನ ಮೂಲ ಉದ್ದೇಶ ಅತಿಯಾದದ್ದಕ್ಕಿಂತ ಸಾಮರಸ್ಯ ಹೊಂದುವುದು, ವೇಗಕ್ಕಿಂತ ಸಮತೋಲನವನ್ನು ಸಾಧಿಸುವುದು ಮತ್ತು ಸಂಪತ್ತಿಗಿಂತ ಯೋಗಕ್ಷೇಮವನ್ನು ಮೌಲ್ಯೀಕರಿಸುವುದೇ ಆಗಿದೆ. ಬೆಳವಣಿಗೆ ಎಂದರೆ ಹಣಕಾಸಿನ ಮೇಲು-ಕೆಳಗು ಎನ್ನುವ ಗೀಳಿಗೆ ಒಳಗಾಗಿರುವ ಪ್ರಪಂಚದಲ್ಲಿ ಸಂತೋಷ ಎಂದರೆ ಕಲ್ಪನೆಯಲ್ಲಿ ಹುಟ್ಟುವ ಕಾವ್ಯವಲ್ಲ ಗಮನಪೂರ್ವಕವಾಗಿ ಗಳಿಸಿಕೊಳ್ಳಬೇಕಿರುವ ಮೋಕ್ಷಮಾರ್ಗ ಎನ್ನುವುದನ್ನು ಜಗತ್ತಿಗೇ ನೆನಪಿಸುತ್ತಿದೆ ಭೂತಾನ್. Happiness is a place ಎನ್ನುವ ಸ್ಲೋಗನ್‍ನನ್ನು ಹೊತ್ತು ಪ್ರವಾಸಿಗರನ್ನು ಸ್ವಾಗತಿಸುವ ಭೂತಾನ್ ದೇಶವು ಸಂತೋಷ ಎಂದರೆ ಮನುಷ್ಯನ ಮನಸ್ಸಿನಲ್ಲಿ ಹಾರ್ಮೋನುಗಳು ಉತ್ಪಾದಿಸುವ ಭಾವನೆ ಮಾತ್ರವಲ್ಲ ಮೂಲಭೂತ ಕರ್ತವ್ಯಪಾಲನೆಯ ಮೂಲಕ ಮನುಷ್ಯನು ಹೊಂದಬೇಕಾದ ಭಾವ ಎನ್ನುವ ಸೊಗಸನ್ನು ಸಾರುತ್ತಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?