Monday, July 6, 2026
Monday, July 6, 2026

ಚಿಟಪಟ ಹನಿಯಲಿ, ಮಳೆಯಲಿ ಜೊತೆಯಲಿ

ಮಳೆಗಾಲದಲ್ಲಿ ಡ್ರೈವ್‌ ಮಾಡುವುದು ಒಂದು ರೀತಿಯ ಮಜ ಕೊಡುವ ಸಂಗತಿ. ಅಷ್ಟೇ ಅಪಾಯಕಾರಿ ಸಂಗತಿಯೂ ಹೌದು. ಹಾಗಾಗಿ, ನೀವು ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ನಿಮ್ಮ ಗಮನ ಕೇವಲ ರೋಡಿನ ಮೇಲಷ್ಟೇ ಅಲ್ಲ; ಬೆಟ್ಟದ ಮೇಲಿಂದ ಬರುವ ಅಪಾಯಗಳ ಮೇಲೂ ಇರಬೇಕಾಗುತ್ತದೆ. ಯಾವ ಕ್ಷಣದಲ್ಲಿಯೂ ಮೇಲಿಂದ ಗುಡ್ಡ ಕುಸಿದು ಬೀಳುವ ಅಪಾಯ ಇರುತ್ತದೆ.

  • ಬಡೆಕ್ಕಿಲ ಪ್ರದೀಪ

ಮಳೆಗಾಲ ಬಂದಾಗ ನಾವೆಲ್ಲಾ ಟ್ರಾವೆಲ್‌ ಮಾಡೋದನ್ನು ಮರೆತು, ಮನೆಯೊಳಗೋ ಕೆಲಸದಲ್ಲೋ ಕಳೆದುಹೋಗುವುದನ್ನೇ ನೋಡುತ್ತಿರುತ್ತೇವೆ. ಮಳೆಯೂ ಹಾಗೇ ನಮ್ಮನ್ನು ಕಮರಿಸಿಬಿಡುತ್ತದೆ. ಆದರೆ, ಇನ್ನೂ ಹಲವರಿಗೆ ಈ ಮಳೆಗಾಲದ ಪ್ರವಾಸದ ಮಜ ಬೇರೆಯೇ. ಕಾರಣ, ಬೇಸಗೆಯ ಬೇಗೆಗೆ ಒಣಗಿದ್ದ ಭೂಮಿ ಮತ್ತೆ ಚಿಗುರೊಡೆಯತೊಡಗುತ್ತದೆ. ಹೊಸ ರೂಪ ಪಡೆಯುತ್ತದೆ, ಹೊಸ ಜೀವ ತುಂಬಿಕೊಳ್ಳುತ್ತದೆ. ಇದನ್ನು ನೇರವಾಗಿ ನೋಡುವ, ಅನುಭವಿಸುವ ದೊಡ್ಡದೊಂದು ಗುಂಪೇ ಇದೆ. ಅದರಲ್ಲಿ ನೀವೂ ಒಬ್ಬರಾಗಿದ್ದರೆ, ಬನ್ನಿ ಈ ಬಾರಿಯ ಮಾನ್ಸೂನ್‌ ಪ್ರವಾಸಕ್ಕೆ ರೆಡಿಯಾಗೋಣ!

ಇದನ್ನೂ ಓದಿ:ಪ್ರವಾಸಿಗಳಿಗೆ ಮಳೆಯನ್ನೇ ಮಾರುವ ದೇಶಗಳ ಬಗ್ಗೆ ಗೊತ್ತಾ?

ಮಳೆಗಾಲದ ಪ್ರವಾಸ ಒಂದು ರೀತಿಯ ಮಜ ಕೊಡುತ್ತದೆ. ಆದರೆ, ಅದಕ್ಕೆ ತಯಾರಾಗಿ ಹೋಗದಿದ್ದರೆ ಮಾತ್ರ ಅದು ಪ್ರವಾಸದ ಬದಲಿಗೆ ಪ್ರಯಾಸ ಆಗೋದಂತೂ ಗ್ಯಾರಂಟಿ. ಹಾಗಾಗಿ ಮಾನ್ಸೂನ್‌ ಪ್ರವಾಸಕ್ಕೆ ತಯಾರಾಗೋದು ಹೇಗೆ ಎಂದು ತಿಳಿಯಬೇಕು.

ಪ್ರತಿ ಸೀಸನ್‌ಗೂ ಒಂದೊಂದು ರೀತಿಯ ಗುಣ ಇದ್ರೆ, ಮಳೆಗಾಲಕ್ಕೆ ಒಂದು ಗುಣದ ಜತೆ ಇನ್ನಷ್ಟು ವಿಚಾರಗಳು ಒಡಮೂಡಿ ಬರುತ್ತವೆ. ಅವುಗಳನ್ನು ನಾವು ನೆನಪಿಟ್ಟುಕೊಳ್ಳುವುದು ಮುಖ್ಯ. ಮಳೆಗಾಲದಲ್ಲಿ ಮಳೆಯೇ ನಮಗೆ ವರ. ಆದರೆ, ಮನೆಯಿಂದ ಹೊರಗೆ ಹೋಗುವಾಗ ಅದುವೇ ದೊಡ್ಡ ಶತ್ರು ಅನ್ನೋದನ್ನು ಒಪ್ಪಿಕೊಳ್ಳಲೇಬೇಕು.

Untitled design (12)

ಮೊದಲಿಗೆ ನಿಮ್ಮ ಬ್ಯಾಗ್‌ನಿಂದ ಹಿಡಿದು ಬಟ್ಟೆ, ಬೂಟು ಹೀಗೆ ಎಲ್ಲವೂ ಮಳೆಗೆ ಹೇಗೆ ಸುರಕ್ಷಿತವಾಗಿರುತ್ತವೆ ಅನ್ನೋದು ಮುಖ್ಯ. ಅದರಲ್ಲೂ ನೀವು ಯಾವ ಊರಿಗೆ ಹೋಗುತ್ತೀರಿ ಅನ್ನೋದು ತುಂಬಾ ಮುಖ್ಯ. ನೀವು ಪಶ್ಚಿಮ ಘಟ್ಟಗಳ ಹತ್ತಿರ ಹೋಗುವ ಪ್ಲ್ಯಾನ್‌ ಮಾಡಿದರೆ, ಮಳೆ ನಿರಂತರವಾಗಿ ಸುರಿಯುತ್ತಾ ಇರೋದರಿಂದ, ನಿಮ್ಮ ಬ್ಯಾಗ್‌ಗಳು ಪೂರ್ತಿ ವಾಟರ್‌ ಪ್ರೂಫ್‌ ಆಗಿರಲೇಬೇಕು. ಕೊಡೆ ಮಾತ್ರ ಇದ್ರೆ ಸಾಲದು. ರೇನ್‌ಕೋಟನ್ನೂ ಜತೆಗೆ ಒಯ್ಯಬೇಕು.

ದೊಡ್ಡ ದೊಡ್ಡ ಬೂಟುಗಳನ್ನು ಹಾಕಿಕೊಂಡು ಹೋದರೆ, ಅವು ವಾಟರ್‌ ಪ್ರೂಫ್‌ ಆಗಿದ್ದರೂ, ಅದರೊಳಗೆ ಹೇಗಾದರೂ ನೀರು ಸೇರಿಕೊಳ್ಳುತ್ತದೆ. ಅದರಿಂದ ನೀವು ಎರಡೂ ಕಾಲಲ್ಲಿ ಪುಟ್ಟ ಬಕೆಟ್‌ ತುಂಬಾ ನೀರು ತುಂಬಿ ಕಾಲಿಗೆ ಕಟ್ಟಿಕೊಂಡು ನಡೆಯುವ ಅನುಭವ ಆಗುವ ಸಾಧ್ಯತೆ ಹೆಚ್ಚು.

ಎಸ್ಟೇಟ್‌ನಲ್ಲಿ ಕೆಲಸ ಮಾಡುವವರು ಹಾಕಿಕೊಳ್ಳುವ ರೀತಿಯ ರಬ್ಬರ್‌ನಿಂದ ತಯಾರಿಸಿದ ಗಮ್‌ ಬೂಟ್‌ಗಳನ್ನು ಹಾಕಿಕೊಳ್ಳಬಹುದು. ನೀವು ಟ್ರೆಕಿಂಗ್‌ ಮಾಡುವ ಪ್ಲ್ಯಾನ್‌ನಲ್ಲಿದ್ದರೆ ಮೆಶ್‌ ರೀತಿಯ, ಸಿಂಥೆಟಿಕ್‌ ಮೆಟೀರಿಯಲ್‌ನ ಶೂಗಳನ್ನು ಹಾಕಿ. ಇದರಿಂದ ನಿಮ್ಮ ಪಾದಗಳೂ ಸುರಕ್ಷಿತವಾಗಿರುತ್ತವೆ. ನೀರೂ ಒಳಗೆ ತುಂಬಿಕೊಳ್ಳುವುದಿಲ್ಲ.

ಮುಖ್ಯವಾದ ವಿಷಯ ಅಂದ್ರೆ, ಈ ಕಾಲದಲ್ಲಿ ಟ್ರೆಕಿಂಗ್‌ ಮಾಡಲು ಎಲ್ಲಾ ಸ್ಥಳಗಳೂ ಸುರಕ್ಷಿತ ಅಲ್ಲ ಅನ್ನುವುದನ್ನು ಮಾತ್ರ ನೀವು ನೆನಪಿನಲ್ಲಿಟ್ಟುಕೊಳ್ಳಲೇಬೇಕು. ಕಾರಣ, ಮಳೆಗಾಲದಲ್ಲಿ ಇಡೀ ಕಾಡು ಬೇರೆಯದೇ ರೀತಿಯಲ್ಲಿ ಬಿಹೇವ್‌ ಮಾಡುತ್ತಿರುತ್ತದೆ. ಯಾವಾಗ ಜೋರಾದ ಗಾಳಿಗೆ ಮರಗಿಡಗಳು ಬೀಳುತ್ತವೆ ಅನ್ನುವುದು ಗೊತ್ತಾಗದು. ಈ ರೀತಿಯ ಅಪಾಯಗಳಿಗೆ ಆಹ್ವಾನ ನೀಡದಂಥ ಹಾಗೂ ಸರಕಾರ ಬ್ಯಾನ್‌ ಮಾಡಿರದಂಥ ಸ್ಥಳಗಳಿಗೆ ಮಾತ್ರ ತೆರಳುವುದು ಸೂಕ್ತ.

ಮಳೆಗಾಲದಲ್ಲಿ ಕಾಡೊಳಗೆ ಹೋಗುವಾಗ ಜಿಗಣೆಗಳನ್ನು ನೆನಪಿಟ್ಟುಕೊಳ್ಳಿ. ನೆನಪಿಡದಿದ್ದರೂ, ಅವು ನಿಮಗೇ ಗೊತ್ತಿಲ್ಲದ ಹಾಗೆ ಒಂದಿಷ್ಟು ರಕ್ತ ಹೀರಿ, ನಿಮಗೆ ನೆನಪು ಮಾಡಿಕೊಡುವುದು ಖಂಡಿತ. ಅದಕ್ಕೆ ಆ ಊರಿನ ಮಂದಿ ನೀಲಗಿರಿ ಎಣ್ಣೆಯಂಥ ಪರಿಹಾರಗಳನ್ನು ಕಂಡುಹಿಡಿದರೂ, ಅವು 100 ಶೇಕಡಾ ಪರಿಹಾರ ಅಲ್ಲ. ಅವುಗಳಿಂದ ಕಚ್ಚಿಸಿಕೊಳ್ಳುವುದನ್ನು ಪೂರ್ತಿಯಾಗಿ ತಪ್ಪಿಸಿಕೊಳ್ಳುವುದು ಅಸಾಧ್ಯ.

Untitled design (14)

ಮಾನ್ಸೂನ್‌ ಡ್ರೈವ್‌

ಮಳೆಗಾಲದಲ್ಲಿ ಡ್ರೈವ್‌ ಮಾಡುವುದು ಒಂದು ರೀತಿಯ ಮಜ ಕೊಡುವ ಸಂಗತಿ. ಅಷ್ಟೇ ಅಪಾಯಕಾರಿ ಸಂಗತಿಯೂ ಹೌದು. ಹಾಗಾಗಿ, ನೀವು ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ನಿಮ್ಮ ಗಮನ ಕೇವಲ ರೋಡಿನ ಮೇಲಷ್ಟೇ ಅಲ್ಲ; ಬೆಟ್ಟದ ಮೇಲಿಂದ ಬರುವ ಅಪಾಯಗಳ ಮೇಲೂ ಇರಬೇಕಾಗುತ್ತದೆ. ಯಾವ ಕ್ಷಣದಲ್ಲಿಯೂ ಮೇಲಿಂದ ಗುಡ್ಡ ಕುಸಿದು ಬೀಳುವ ಅಪಾಯ ಇರುತ್ತದೆ. ಹಾಗೇ ಮಳೆಗೆ ನಿಮ್ಮ ಕಾರ್‌ನ ಬ್ರೇಕ್‌ಗಳು ಸರಿಯಾಗಿ ಕೆಲಸ ಮಾಡದೇ ಇರುವ ಸಾಧ್ಯತೆ ಒಂದೆಡೆಯಾದರೆ, ಇನ್ನೊಂದೆಡೆ ನೀರಿನಿಂದ ತುಂಬಿದ ರೋಡ್‌ನಲ್ಲಿ ಗುಂಡಿಗಳು ಕಾಣದೇ ಇರುವ ರಿಸ್ಕ್‌ ಸಹ ಇರುತ್ತದೆ.

ಯಾವತ್ತೂ ನೀವು ಪ್ರವಾಸ ಹೋಗುವ ಊರಿನ ರಿಯಲ್‌ ಟೈಮ್‌ ಹವಾಮಾನ ಮತ್ತು ಮಳೆಯ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ತಿಳಿಯಿರಿ. ನಂತರ ಪ್ರವಾಸ ಕೈಗೊಳ್ಳುವುದು ಉತ್ತಮ.

ಉಳಿದ ಸೀಸನ್‌ಗಳಿಗೆ ಹೋಲಿಸಿದರೆ, ಈ ಕಾಲದಲ್ಲಿ ಆಗುವ ವೈಪರೀತ್ಯಗಳು ಜಾಸ್ತಿ. ಹಾಗಾಗಿ ಸ್ಟ್ರಿಕ್ಟ್‌ ಆಗಿ ಇಷ್ಟೇ ಸಮಯಕ್ಕೆ ಹೋಗಿ, ಇಷ್ಟು ದಿನದಲ್ಲಿ ರಿಟರ್ನ್‌ ಬರ್ತೀನಿ ಅನ್ನುವ ಯೋಚನೆ ಇಟ್ಟುಕೊಳ್ಳೋದೇನೋ ಸರಿ, ಅದು ಹಾಗೇ ಆಗುತ್ತದೆ ಅನ್ನುವ ಭ್ರಮೆಯನ್ನು ದೂರ ಮಾಡಿಕೊಳ್ಳಿ.

ಘಾಟ್‌ ಸೆಕ್ಷನ್‌ನಲ್ಲಿನ ರಸ್ತೆಗಳನ್ನು ದಾಟಿ ಹೋಗುವವರು ಹಿಂದೆ ಹೇಳಿದ ಜಾಗರೂಕತೆಯನ್ನು ಮಾಡಿಕೊಳ್ಳುವುದು ತ್ತಮ. ಅದರ ಜತೆಗೆ ಆ ರಸ್ತೆಗಳು ಮುಚ್ಚಿದರೆ ನಿಮ್ಮ ಟ್ರಾವೆಲ್‌ ಪ್ಲ್ಯಾನ್‌ ಬದಲಿಸುವ ಅಥವಾ ಬದಲಿ ರಸ್ತೆಗಳನ್ನು ಆಯ್ದುಕೊಳ್ಳುವ ಅನಿವಾರ್ಯತೆಗೆ ಒಗ್ಗಿಕೊಳ್ಳಲು ಸಿದ್ಧರಾಗಿರಬೇಕು.

ಒಟ್ಟಾರೆ ಮಳೆಗಾಲದ ಪ್ರವಾಸದ ಮಜ ಬರೋದು ಪ್ಲಾನ್‌ ಮಾಡಿ ಹೊರಟಾಗ. ಆದರೆ, ಎಲ್ಲವೂ ಪ್ಲಾನ್‌ ಪ್ರಕಾರ ನಡೆಯೋದಿಲ್ಲ ಅನ್ನುವ ಸತ್ಯವನ್ನು ಅರಿತು ಪ್ರಯಾಣ ಬೆಳೆಸಿದಾಗ ಮಾತ್ರ ಅದು ಪರಿಪೂರ್ಣ ಅನಿಸೋದು.

ಪಂಚ್‌-ರ್‌ ಶಾಪ್‌

ಬೇಸಗೆಯಲ್ಲಿ ಹೈವೇ ಥರ ಕಾಣೋ ನದಿಗಳು ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿರುತ್ತವೆ. ಹಾಗ್‌ ನೋಡೋದಾದ್ರೆ, ಹೈವೇಗಳೂ ನೀರು ತುಂಬಿ ನದಿಗಳಾಗಿ ಕಾಣುತ್ತವೆ!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?