ಪ್ರವಾಸಿಗಳಿಗೆ ಮಳೆಯನ್ನೇ ಮಾರುವ ದೇಶಗಳ ಬಗ್ಗೆ ಗೊತ್ತಾ?
ಶ್ರೀಲಂಕಾ ದೇಶಕ್ಕೆ ಎರಡೆರಡು ಮುಂಗಾರುಗಳ ಸಿಂಚನದ ಲಾಭವಿದೆ. ವರ್ಷವಿಡೀ ದೇಶದ ಒಂದು ಭಾಗಕ್ಕೆ ಒಣಹವೆ ಮತ್ತೊಂದಕ್ಕೆ ಮಳೆ. ಯಾವಾಗ ಹೋದರೂ ದ್ವೀಪದ ಅರ್ಧಭಾಗದಲ್ಲಿ ಮಳೆಯ ಸೌಂದರ್ಯವನ್ನು ತೊರ್ಗೊಡುವ ಏಕೈಕ ದೇಶ ಶ್ರೀಲಂಕಾ.
- ಅಂಜಲಿ ರಾಮಣ್ಣ
ಹೆಚ್ಚಿನ ಪ್ರವಾಸದ ಕೈಪಿಡಿಗಳು ಮತ್ತು ಆಯೋಜಕರು ಪ್ರವಾಸಿಗಳಿಗೆ ಬಿಸಿಲನ್ನೇ ಮಾರುತ್ತವೆ. ನೀಲಿ ಆಕಾಶ, ಒಣ ರಸ್ತೆಗಳು, ಬೀಚ್ ಹವಾಮಾನ ಇವುಗಳದ್ದೇ ಸೌಂದರ್ಯ ವರ್ಣನೆಯ ವ್ಯಾಪಾರ ಕುದುರುತ್ತದೆ. ಆದರೆ ಮೋಡಗಳು ಢಿಕ್ಕಿ ಹೊಡೆದಾಗ ಭೂಮಿಯ ಮೇಲೆ ಕೆಲವು ಅತ್ಯಂತ ಜೀವಂತ, ರಮಣೀಯ ಮತ್ತು ಮರೆಯಲು ಆಗದ ಪ್ರವಾಸಗಳು ಘಟಿಸಿ ಬಿಡುತ್ತವೆ.
ಮಳೆಗಾಲದ ಪ್ರವಾಸ ಎಂದರೆ ಒಂದು ಕಿರಿಕಿರಿ ಹವಾಮಾನದ ವೀಕ್ಷಣೆ ಅಲ್ಲ. ಮಳೆಗಾಲದ ಪ್ರವಾಸ ಎಂದರೆ ಒಂದು ದೇಶವು ಅತ್ಯಂತ ಆಳವಾಗಿ ಉಸಿರಾಡುವಾಗ ಅದರ ಜೀವ ಮೇಲು ಕೆಳಗಾಡುವುದನ್ನು ಸ್ಪರ್ಶಿಸುವುದು ಎಂದು.
ಆಕಾಶ ಹುಚ್ಚೆದ್ದು ಕುಣಿವಾಗ ಮಳೆಯಲ್ಲಿ ಮಿಂದ ಹೂವಿನ ಹಾಗೆ ಅರಳುವ ಕೆಲವು ಸ್ಥಳಗಳಿವೆ. ಅವುಗಳನ್ನು ಮಳೆಯಲ್ಲಿಯೇ ಕಾಣಬೇಕು. ಆಗ ಅಲ್ಲಿ ಆ ಹನಿಯೊಂದಿಗೆ ಕುಣಿಯಬೇಕು ಪ್ರವಾಸ ತನ್ನ ವೃತ್ತವನ್ನು ಪೂರ್ತಿಗೊಳಿಸಲು.
ಇದನ್ನೂ ಓದಿ: ಕರ ಮುಗಿದು ಕರೆಯುತ್ತೇವೆ.. ಕರ ಕೊಟ್ಟು ಒಳಗೆ ಬಾ!
In India Monsoon is a Mood. ಭಾರತದಲ್ಲಿ ಮುಂಗಾರು ಎಂದರೆ ಅದೊಂದು ಹವಾಮಾನ ಮಾತ್ರವಲ್ಲ. ಅದು ತನ್ನದೇ ಆದ ವ್ಯಕ್ತಿತ್ವ ಹೊಂದಿರುವ ಋತು. ಕೇರಳದಲ್ಲಿ ಉಕ್ಕುವ ಹಿನ್ನೀರು, Edit ಮಾಡಿದ್ದಾರೇನೋ ಎನ್ನುವ ಹಾಗೆ ಕಾಣುವ ಗಾಢ ಹಸಿರು ಬಣ್ಣದ ಮುನ್ನಾರ್‌ನ ಚಹಾ ತೋಟಗಳು, ಅಲಪಿಯ ಸಂದುಗೊಂದುಗಳಲ್ಲಿ ’ಭಾರತದ ನಯಾಗರಾ’ ಎಂಬ ಅಡ್ಡಹೆಸರು ಪಡೆಯುವಷ್ಟು ಶಕ್ತಿಯಿಂದ ಘರ್ಜಿಸುವ ಜಲಪಾತಗಳು ತಮ್ಮ ಯೌವ್ವನದಲ್ಲಿ ನಲಿಯುವಾಗ ಆಯುರ್ವೇದದ ಸಾಂಪ್ರದಾಯಿಕ ಚಿಕಿತ್ಸೆಗೆ ಅತ್ಯುತ್ತಮ ಸಮಯ ಎನ್ನುವ ಆಯುರ್ವೇದ ವೈದ್ಯರುಗಳ ಮಾತಿಗೆ ಮನ್ನಣೆ ಕೊಡಲು ಕೇರಳಕ್ಕೆ ಪ್ರವಾಸ ಮಾಡಬೇಕಿರುತ್ತದೆ ಮಳೆಗಾಲದಲ್ಲಿ.
Monsoon a localite of Goa. ಯಾಕೆಂದರೆ ಆಗ ಪಾರ್ಟಿ ಮಾಡುವ ಜನಸಂದಣಿ ಇರುವುದಿಲ್ಲ. ಮಾರುಕಟ್ಟೆಯಲ್ಲಿ ಸರಕುಗಳ ಬೆಲೆ ಇಳಿದಿರುತ್ತದೆ. ಸಮುದ್ರದ ಅಲೆಗಳು ಶ್ವೇತದೇವತೆಗಳಂತೆ ಕಾಣುವ ಹೊತ್ತು ಗೋವಾದ ಮಳೆಗಾಲ.

ಮೀನುಗಾರರನ್ನು ಹೊರತುಪಡಿಸಿ ಬೀಚ್‌ಗಳು ಖಾಲಿಖಾಲಿ. ಭೂದೃಶ್ಯವು ಪುನರ್ಜನ್ಮ ಪಡೆಯುವುದನ್ನು ನೋಡಬೇಕೆಂದರೆ ಅಲ್ಲಿಗೆ ಹೋಗಲೇ ಬೇಕು ಮಳೆ ಹನಿಯುವಾಗ.
Costa Rica does not have a rainy time but a Green season. ಕೋಸ್ಟ ರಿಕದ ಸ್ಥಳೀಯರು ಇದನ್ನು ಮಳೆಗಾಲ ಎಂದು ಕರೆಯುವುದಿಲ್ಲ. ಅವರು ಇದನ್ನು ’ಹಸಿರು ಋತು’ ಎನ್ನುತ್ತಾರೆ. ಅಲ್ಲಿನ ಮಳೆಕಾಡುಗಳು ತಮ್ಮ ಹೆಸರಿಗೆ ತಕ್ಕಂತೆ ಬದುಕುತ್ತವೆ. ತುಂಬಿ ಹರಿಯುವ Pacuare ನದಿಯಲ್ಲಿ ವೈಟ್-ವಾಟರ್ ರಾಫ್ಟಿಂಗ್ ಮಾಡುವುದು ಎಂದರೆ ವೈಕುಂಠದ ಕ್ಷೀರಸಾಗರದಲ್ಲಿ ತೇಲಿದಂತೆಯೇ. ಆರ್ಕಿಡ್ ಹೂವುಗಳು ಆಕಾಶಕ್ಕೆ ಹೊದಿಕೆಯನ್ನು ಹಾಕಿರುತ್ತವೆ. ಎತ್ತರದ ಮರಗಳಲ್ಲಿ ಕಪ್ಪು ಕೋತಿಗಳು ಕೊರಕೊರ ದನಿಯಲ್ಲಿ ಹಾಡುತ್ತಿರುತ್ತವೆ. ಪ್ರಾಣಿ ಪಕ್ಷಿಗಳಿಗೆ ಇದು ಮರಿ ಹಾಕುವ ಋತು ಕೂಡ ಅರೆನಾಲ್ ಜ್ವಾಲಾಮುಖಿಯ ಮಂಜಿನಲ್ಲಿ ಮುಚ್ಚಿಹೋಗಿ, ನಂತರ ಕಾಡಿನ ಮೇಲೆ ಮಳೆ ಸುರಿಯುವಾಗ ತಬಾಕೋನ್ ಬಿಸಿನೀರಿನ ಬುಗ್ಗೆಯಲ್ಲಿ ಮುಳುಗೇಳುವುದು Costa Rica ಪ್ರವಾಸದ ಶಾಶ್ವತ ನೆನಪು.
In Bali rain is warm. ಇಂಡೋನೇಷ್ಯಾ ದೇಶದ ಬಾಲಿಯ ಮಳೆಗಾಲವು ಶೀತ ಮತ್ತು ಮುಗ್ಗಲು ವಾಸನೆಯದ್ದಲ್ಲ. ಅಲ್ಲಿಯದ್ದು ಬೆಚ್ಚಗಿನ ಮಳೆ. ತುಂಬಿ ಉಕ್ಕುವ ಉಬುದ್‌ನ ಭತ್ತದ ಗದ್ದೆಗಳು ಆ ಗದ್ದೆಗಳಲ್ಲಿ ತುಂಬಿಕೊಂಡ ನೀರು ಆಕಾಶಕ್ಕೆ ಹಿಡಿದ ಕನ್ನಡಿಯಂತೆ ಕಾಣುತ್ತವೆ. ಇಡೀ ದ್ವೀಪವು ಒಂದು ಅನೂಹ್ಯವಾದ ಮೌನವನ್ನು ಪ್ರತಿಫಲಿಸುತ್ತಿರುತ್ತದೆ. ಮಳೆಗಾಲದಲ್ಲಿ ಅಲ್ಲಿನ ಜನರ ಮುಖಭಾವದಲ್ಲಿ ಆಚರಣೆಯಲ್ಲಿ ಕಾಣ ಸಿಗುವ ಶ್ರುತಿಬದ್ಧ ನಿಶ್ಶಬ್ದವನ್ನು ಅನುಭವಿಸುವ ಅಪರೂಪದ ಕ್ಷಣಗಳಿಗಾಗಿ ಮಳೆಗಾಲದಲ್ಲಿ ಅಲ್ಲಿನ ಪ್ರವಾಸ ಮಾಡಲೇ ಬೇಕು.

Japan's rain makes the temples misty. ಜಪಾನ್‌ನ ಮಳೆಗಾಲವಾದ ʻತ್ಸುಯು’ ಅಲ್ಲಿನ ದೇವಾಲಯಗಳಿಗೆ ನಿಗೂಢತೆಯನ್ನು ತುಂಬುತ್ತದೆ. ಬಹುಪಾಲು ಮರದಿಂದ ನಿರ್ಮಾಣವಾದ ದೇಗುಲಗಳು ಬಗೆಬಗೆಯ ಸ್ಫಟಿಕದ ಹೂವುಗಳ ರಾಶಿಯಿಂದ ಮುಚ್ಚಿ ಹೋಗಿರುತ್ತವೆ. ನೀಲಿ ಮತ್ತು ನೇರಳೆ ಬಣ್ಣದ ಹೂವುಗಳನ್ನು ಸರಿಸಿ ಹೋಗುವಾಗ ದೇವಾಲಯದ ರಸ್ತೆಗಳು ಅಧ್ಯಾತ್ಮದ ಶಾಂತಿಯಲ್ಲಿ ತೋಯಿಸುತ್ತವೆ. ವಿಶ್ವವಿಖ್ಯಾತ ಬಿದಿರಿನ ಮೆಳೆಗಳು ದಟ್ಟವಾದ ಮಂಜನ್ನು ಸಿಂಪಡಿಸಿಕೊಂಡು ಘಮಗುಡುತ್ತಾ ಆಕಾಶರಾಯನೊಡನೆ ಸರಸವಾಡುತ್ತಿರುತ್ತವೆ. ಮಳೆಗಾಲದ ಜಪಾನ್ ಪ್ರತೀ ಪ್ರವಾಸಿಯ ಕನಸು.
Vietnam one country in three monsoons. ವಿಯೆಟ್ನಾಂ ಮೂರು ಮಾನ್ಸೂನ್‌ಗಳ ದೇಶ. ವಿಯೆಟ್ನಾಂನ ಭೂಮಿಯ ಆಕಾರದಿಂದಾಗಿ ಅಲ್ಲಿ ಮಳೆಗಾಲವು ವಿವಿಧ ಪ್ರದೇಶಗಳನ್ನು ವಿವಿಧ ಸಮಯಗಳಲ್ಲಿ ಆವರಿಸುತ್ತದೆ.
ಉತ್ತರ ವಿಯೆಟ್ನಾಂನಲ್ಲಿ ʻಸಾಪಾ’ ಎಂದರೆ ಕೊಯ್ಲಿಗೆ ಮೊದಲಿನ ಸಮಯ. ಆಗ ಮಂಜಿನಿಂದ ಆವೃತವಾದ ಭತ್ತದ ಗದ್ದೆಗಳು ಮಳೆಹನಿಯ ಒಳಗಿನಿಂದ ಹೊಂಬಣ್ಣದಲ್ಲಿ ಪ್ರತಿಫಲಿಸುತ್ತವೆ.
ಮಧ್ಯ ವಿಯೆಟ್ನಾಂನಲ್ಲಿ ಸ್ಥಳೀಯರು ಪ್ರಾಚೀನ ಪಟ್ಟಣದ ಬೀದಿಗಳಲ್ಲಿ ದೋಣಿಗಳನ್ನು ಬಳಸುತೋರುತ್ತಾರೆ. ಲ್ಯಾಂಟರ್ನ್‌ಗಳು ನೀರಿನ ಮೇಲೆ ಪ್ರತಿಫಲಿಸುವುದು ಮಂತ್ರಮುಗ್ಧಗೊಳಿಸುವಷ್ಟು ಸುಂದರವಾಗಿರುತ್ತದೆ. ದಕ್ಷಿಣದಲ್ಲಿ ಪ್ರಸಿದ್ಧವಾದ ತೇಲುವ ಮಾರುಕಟ್ಟೆಗಳು ಹಸಿಹಸಿ ಜೀವನವನ್ನು ಅದರ ಶೈಲಿಯನ್ನು ತೋರಿಸಿಕೊಡುತ್ತದೆ. ಪ್ರತಿ ಮಳೆಯು ಒಂದೇ ವಿಯೆಟ್ನಾಂನಲ್ಲಿ ಮೂರು ದೇಶಗಳನ್ನು ಸೃಷ್ಟಿಸುತ್ತದೆ.
Srilanka a country with two monsoons. ಶ್ರೀಲಂಕಾ ದೇಶಕ್ಕೆ ಎರಡೆರಡು ಮುಂಗಾರುಗಳ ಸಿಂಚನದ ಲಾಭವಿದೆ. ವರ್ಷವಿಡೀ ದೇಶದ ಒಂದು ಭಾಗಕ್ಕೆ ಒಣಹವೆ ಮತ್ತೊಂದಕ್ಕೆ ಮಳೆ. ಮಧ್ಯ ಶ್ರೀಲಂಕಾದ ಸಿಗಿರಿಯ ಪ್ರದೇಶದ ಕಲ್ಲಿನ ಕೋಟೆಯ ಮೇಲೆಲ್ಲಾ ಹಸಿರಿನ ಗಿಡಗಳು ಹಬ್ಬಿಕೊಳ್ಳುವಾಗ ಸದ್ದಿಲ್ಲದೆ ಅಡಗಿ ಹೋಗುವ ದಕ್ಷಿಣ ಶ್ರೀಲಂಕೆಯಲ್ಲಿ ಇರುವ ʻರಾವಣ ಜಲಪಾತ’ (Ravan water falls) ವು ಸಿಗಿರಿಯದ ಕೋಟೆಯು ಒಣಗಿ ಕಂದು ಬಣ್ಣಕ್ಕೆ ತಿರುಗಿದಾಗ ಥೇಟ್ ರಾವಣನಂತೆ ಘರ್ಜಿಸುತ್ತದೆ. ಯಾವಾಗ ಹೋದರೂ ದ್ವೀಪದ ಅರ್ಧಭಾಗದಲ್ಲಿ ಮಳೆಯ ಸೌಂದರ್ಯವನ್ನು ತೊರ್ಗೊಡುವ ಏಕೈಕ ದೇಶ ಶ್ರೀಲಂಕಾ.
ಮರಳಿದೆ.. ಮರಳಿದೆ.. ಗಡಿಯಲಿ ಮೆಟ್ಟಿದ ಮರಳಿದೆ!
Tanzania and Kenya where long rains reveal secrets of nature. ಜಗತ್ತಿನ ದೀರ್ಘಾವಧಿ ಮಳೆಗಾಲವನ್ನು ಹೊಂದಿರುವ ಟ್ಯಾಂಜೆನಿಯ ಮತ್ತು ಕೀನ್ಯಾ ದೇಶಗಳು ಮತ್ತೆಲ್ಲೂ ಕಾಣ ಸಿಗದ ಪ್ರಕೃತಿಯ ನಿಧಿಯನ್ನು ಮಳೆಗಾಲದಲ್ಲಿ ಪ್ರದರ್ಶಿಸುತ್ತವೆಯಂತೆ.
ಹಾಗೆಯೇ Rain in Iceland creates a season of waterfalls. ಐಸ್ ಲ್ಯಾಂಡ್ ದೇಶದ ಮಳೆಗಾಲವು ಸೃಷ್ಟಿಸುವ ಜಲಪಾತಗಳ ಋತುವನ್ನು ನೋಡದೆಯೇ ಮುಕ್ತಿ ಸಿಗದು ಎನ್ನುತ್ತಾರೆ ಪ್ರವಾಸ ಪ್ರಿಯರು. ವರ್ಷಕಾಲದಲ್ಲಿ ಬೆಳಕು ಆ ದೇಶದ ನೆತ್ತಿಯ ಮೇಲಿನ ಆಕಾಶದೊಡನೆ ರಂಗಿನಾಟವಾಡಿ ರಚಿಸುವ `Northern lights’ ನೋಡಲು ಆಕಾಶವೇ ಅವಕಾಶ ಮಾಡಿಕೊಡಬೇಕು.
ಒಣ ಋತು ನಮಗೆ ಪೋಸ್ಟ್‌ಕಾರ್ಡ್‌ಗಳಂಥ ಫೊಟೋಗಳನ್ನು ನೀಡುತ್ತದೆ ಆದರೆ ಮಳೆಗಾಲವು ಪ್ರವಾಸಿಗೆ ಉಸಿರಾಡುವ ದೇಶವನ್ನು ನೀಡುತ್ತದೆ. ಬಿಸಿಲಿಗಾಗಿ ಬಂದು ಬೆಳಕನ್ನು ತುಂಬಿಕೊಳ್ಳುವ ಪ್ರವಾಸಕಾಲ ಮಳೆಗಾಲ.
****