Tuesday, June 16, 2026
Tuesday, June 16, 2026

ಅದ್ಭುತ ಶಿಲ್ಪಕಲೆಯ ಮೋಧೇರಾ ಸೂರ್ಯ ಮಂದಿರ

ಕೊನಾರ್ಕ್‌ ಸೂರ್ಯ ಮಂದಿರದಲ್ಲಿರುವಂತೆ ಇಲ್ಲಿಯೂ ಗರ್ಭಗೃಹದ ಮುಂಭಾಗದಲ್ಲಿ ರಂಗ ಮಂಟಪವಿದೆ. ಇದಕ್ಕೆ 52 ಕಂಬಗಳಿದ್ದು, ವರ್ಷದ 52 ವಾರಗಳನ್ನು ಪ್ರತಿನಿಧಿಸುತ್ತವೆ. ಈ ಕಂಬಗಳಲ್ಲಿ ಹಾಗೂ ಮೇಲ್ಛಾವಣಿಯಲ್ಲಿ ಸುಂದರ ಕೆತ್ತನೆಗಳಿವೆ. ರಂಗ ಮಂಟಪದ ಎದುರು ಭಾಗದಲ್ಲಿ ಎರಡು ದೊಡ್ಡ ಕಂಬಗಳಿವೆ. ಇವನ್ನು ಕೀರ್ತಿ ತೋರಣವೆಂದು ಗುರುತಿಸಲಾಗಿದೆ. ಹಿಂದೆ ರಾಜರು ಯುದ್ಧ ಗೆದ್ದು ಬಂದಾಗ ಇಂಥ ಕೀರ್ತಿ ತೋರಣವನ್ನು ಕಟ್ಟಿಸುತ್ತಿದ್ದರು ಎನ್ನಲಾಗಿದೆ.

  • ಗೀತಾ ಕುಂದಾಪುರ

ಭಾರತದ ಶಿಲ್ಪಕಲೆಗೆ ಮರುಳಾಗದವರು ಅಪರೂಪ. ಇಲ್ಲಿರುವ ಸ್ಮಾರಕಗಳು, ಮಂದಿರಗಳು ನಮ್ಮ ಶಿಲ್ಪಕಲೆಯನ್ನು ಪ್ರದರ್ಶಿಸುತ್ತಿವೆ. ಕಟ್ಟಿ ಸಾವಿರ ವರ್ಷಗಳಾದರೂ ಕಿಂಚಿತ್ತೂ ಕಮ್ಮಿಯಾಗದ ಅವುಗಳ ಸೌಂದರ್ಯ ಸಹಸ್ರಾರು ಪ್ರವಾಸಿಗರನ್ನು ಸೆಳೆಯುತ್ತಿವೆ. ನಮ್ಮ ಶಿಲ್ಪಕಲೆ ಸಾಮಾನ್ಯರಿಗೆ ಸೋಜಿಗವಾದರೆ ವಾಸ್ತುಶಿಲ್ಪದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದಂತಿದೆ. ಇಂಥ ಮಂದಿರಗಳನ್ನು ಕಟ್ಟುವಲ್ಲಿ ವಿಜ್ಞಾನ, ಖಗೋಳ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರಗಳನ್ನೂ ಪರಿಗಣಿಸಲಾಗಿದೆ. ಸಹಸ್ರಾರು ವರ್ಷಗಳ ಹಿಂದೆಯೇ ತಂತ್ರಜ್ಞಾನದಲ್ಲಿ ನಾವೆಷ್ಟು ಮುಂದಿದ್ದೆವು ಎಂದು ಸಾರುತ್ತಿವೆ.

ಭಾರತದಲ್ಲಿ ಸೂರ್ಯ ಮಂದಿರಗಳು ಕಡಿಮೆ. ಆದರೆ ಬೆರಳೆಣಿಕೆಯಷ್ಟಿರುವ ಸೂರ್ಯ ಮಂದಿರಗಳು ಅದ್ಭುತ ಶಿಲ್ಪಕಲೆಗೆ ವಿಶ್ವ ಪ್ರಸಿದ್ಧಿ ಪಡೆದಿವೆ. ಅವುಗಳಲ್ಲಿ ಒರಿಸ್ಸಾದ ಕೋನಾರ್ಕ್‌ ಸೂರ್ಯ ಮಂದಿರ, ಜಮ್ಮು-ಕಾಶ್ಮೀರದ ಮಾರ್ತಂಡ ಮಂದಿರ, ಗುಜರಾತಿನ ಮೋಧೇರಾ ಸೂರ್ಯ ಮಂದಿರ ಈ ಮೂರು ಭಾರತದ ಮೂರು ದಿಕ್ಕಿನಲ್ಲಿದ್ದು, ವಿಭಿನ್ನ ಶೈಲಿಯಲ್ಲಿವೆ. ವಿಭಿನ್ನ ಶಿಲೆಯನ್ನು ಉಪಯೋಗಿಸಲಾಗದೆ. ಇತ್ತೀಚೆಗೆ ಮೋಧೇರಾ ಸೂರ್ಯ ಮಂದಿರವನ್ನು ನೋಡುವ ಅವಕಾಶ ಸಿಕ್ಕಿತು.

ಇದನ್ನೂ ಓದಿ: ರಾಮನಿಗಾಗಿ ಶಬರಿ ಕಾಯುತ್ತಿದ್ದ ಸ್ಥಳ

ಸೋಲಂಕಿಗಳು ಕಟ್ಟಿದ ಸೂರ್ಯ ದೇವಾಲಯ

ಭಾರತದ ಶಿಲ್ಪಕಲೆ ಮತ್ತು ಸಂಸ್ಕೃತಿಯ ವೈಭವಕ್ಕೆ ಉದಾಹರಣೆಯಂತಿರುವ ಈ ಮಂದಿರ, ಗುಜರಾತಿನ ರಾಜಧಾನಿ ಅಹಮದಾಬಾದ್‌ನಿಂದ ಸುಮಾರು 140ಕಿಮೀ ದೂರದಲ್ಲಿ, ಮೆಹಸಾನ ಜಿಲ್ಲೆಯಲ್ಲಿದೆ. ಅತ್ಯದ್ಭುತ ಶಿಲ್ಪಕಲೆಯ ಮೋಧೇರಾ ಸೂರ್ಯ ಮಂದಿರವನ್ನು 11ನೆಯ ಶತಮಾನದಲ್ಲಿ ಪ್ರವರ್ಧಮಾನದಲ್ಲಿದ್ದ ಸೋಲಂಕಿ ರಾಜವಂಶದವರು ಕಟ್ಟಿಸಿದರು. ಇವರು ಸೂರ್ಯ ಭಕ್ತರು. ವಿಶೇಷವೆಂದರೆ ಇದನ್ನು ಕೊನಾರ್ಕ್‌ ಸೂರ್ಯ ಮಂದಿರಕ್ಕೂ ಮೊದಲೇ ಕಟ್ಟಲಾಗಿದೆ.

Untitled design - 2026-06-16T105112.065

ಆವರಣದೊಳಗೆ ಆಯತಾಕಾರದ ಕೊಳ

ಮಂದಿರದ ಆವರಣದೊಳಗೆ ಕಾಲಿಡುತ್ತದ್ದಂತೆ ಮೊದಲು ಎದುರಾಗುವುದೇ ಆಯಾತಾಕರದಲ್ಲಿರುವ ದೊಡ್ಡ ಕಲ್ಯಾಣಿ. ಕಲ್ಯಾಣಿಯಲ್ಲಿ ಮೆಟ್ಟಿಲುಗಳ ನಾಲ್ಕು ಅಂತಸ್ತುಗಳಿವೆ. ಪ್ರತಿ ಅಂತಸ್ತಿನಲ್ಲೂ ಕೆಳಗಿಳಿಯಲು ಮೆಟ್ಟಿಲುಗಳು ಹಾಗೂ ಪುಟ್ಟ ಪುಟ್ಟ ಮಂಟಪಗಳಿವೆ. ಮಂಟಪಗಳಲ್ಲಿ ದೇವ-ದೇವತೆಯರ ಮೂರ್ತಿಗಳಿವೆ. ಇಂಥ ಒಟ್ಟು 108 ಮಂಟಪಗಳಿದ್ದು, ಕಲ್ಯಾಣಿಗೆ ವಿಶಿಷ್ಟ ಸೌಂದರ್ಯ ನೀಡಿವೆ. ಈ ಮಂಟಪಗಳಲ್ಲಿ ಮೂರು ದೊಡ್ಡವು. ಇವು ಮೂರು ದಿಕ್ಕಿನಲ್ಲಿದ್ದು, ಗೋಪುರದಂತಿವೆ. ಆಕರ್ಷಕ ಕೆತ್ತನೆಗಳೂ ಇವೆ. ಇವುಗಳಲ್ಲಿ ಗಣೇಶ, ನರ್ತಿಸುತ್ತಿರುವ ಶಿವ, ವಿಷ್ಣುವಿನ ಮೂರ್ತಿಗಳಿವೆ. ಈ ಸುಂದರ ಕಲ್ಯಾಣಿಯನ್ನು ʻಸೂರ್ಯಕುಂಡʼ, ʻರಾಮಕುಂಡʼವೆನ್ನುವ ಹೆಸರಿನಿಂದ ಕರೆಯುತ್ತಾರೆ. ಕಲ್ಯಾಣಿಯ ಒಂದು ಪಕ್ಕದಲ್ಲಿ ಪ್ರತ್ಯೇಕವಾಗಿ ಸ್ವಾಗತ ದ್ವಾರದಂತೆ ಎರಡು ದೊಡ್ಡ ಕಂಬಗಳಿವೆ. ವುಗಳನ್ನು ನೋಡಲು ಅಪೂರ್ಣ ಅಥವಾ ಭಗ್ನವಾದಂತೆ ಕಾಣಿಸುತ್ತವೆ.

ರಂಗ ಮಂಟಪ

ಕೊನಾರ್ಕ್‌ ಸೂರ್ಯ ಮಂದಿರದಲ್ಲಿರುವಂತೆ ಇಲ್ಲಿಯೂ ಗರ್ಭಗೃಹದ ಮುಂಭಾಗದಲ್ಲಿ ರಂಗ ಮಂಟಪವಿದೆ. ಇದಕ್ಕೆ 52 ಕಂಬಗಳಿದ್ದು, ವರ್ಷದ 52 ವಾರಗಳನ್ನು ಪ್ರತಿನಿಧಿಸುತ್ತವೆ. ಈ ಕಂಬಗಳಲ್ಲಿ ಹಾಗೂ ಮೇಲ್ಛಾವಣಿಯಲ್ಲಿ ಸುಂದರ ಕೆತ್ತನೆಗಳಿವೆ. ರಂಗ ಮಂಟಪದ ಎದುರು ಭಾಗದಲ್ಲಿ ಎರಡು ದೊಡ್ಡ ಕಂಬಗಳಿವೆ. ಇವನ್ನು ಕೀರ್ತಿ ತೋರಣವೆಂದು ಗುರುತಿಸಲಾಗಿದೆ. ಹಿಂದೆ ರಾಜರು ಯುದ್ಧ ಗೆದ್ದು ಬಂದಾಗ ಇಂಥ ಕೀರ್ತಿ ತೋರಣವನ್ನು ಕಟ್ಟಿಸುತ್ತಿದ್ದರು ಎನ್ನಲಾಗಿದೆ. ರಂಗ ಮಂಟಪದಲ್ಲಿ ನೃತ್ಯ, ಸಂಗೀತ, ಗೋಷ್ಠಿಗಳು ನಡೆಯುತ್ತಿದ್ದವು. ಒಂದು ಕಾಲದಲ್ಲಿ ಮಂದಿರಗಳು ಕಲೆಯ ತಾಣವಾಗಿದ್ದು, ಕಲೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿತ್ತು. ರಂಗ ಮಂಟಪವನ್ನು ನಾಲ್ಕೂ ದಿಕ್ಕುಗಳಿಂದಲೂ ಪ್ರವೇಶಿಸಬಹುದು. ಪ್ರವೇಶದ್ವಾರದಲ್ಲಿ ಅರ್ಧ ಗೋಳಾಕಾರದ ಕಲ್ಲಿನ ತೋರಣವಿದೆ. ಕಂಬಗಳ ಕೆಳಭಾಗ ಅಷ್ಟ ಭುಜಾಕಾರದಲ್ಲಿದ್ದು, ಮೇಲ್ಭಾಗದಲ್ಲಿ ಗೋಲಾಕಾರದಲ್ಲಿವೆ. ಕಂಬಗಳ ಮೇಲೆ ದೇವತೆಗಳ, ನೃತ್ಯಗಾರ್ತಿಯರ ಸುಂದರ ಕೆತ್ತನೆಗಳಿವೆ. ರಾಮಾಯಣ, ಮಹಾಭಾರತದ ಘಟನೆಗಳನ್ನೂ ಕೆತ್ತಲಾಗಿದೆ.

ಗರ್ಭಗುಡಿ ಮತ್ತು ಸಭಾಂಗಣ

ರಂಗ ಮಂಟಪದ ಹಿಂದೆ ಕೆಲವು ಅಡಿಗಳ ದೂರದಲ್ಲಿ ಆಯತಾಕಾರದ ಗರ್ಭಗುಡಿ ಮತ್ತು ಸಭಾಂಗಣಗಳಿವೆ. ಇವೆರೆಡರ ಒಟ್ಟು ಉದ್ದ ಸುಮಾರು 51 ಅಡಿ ಮತ್ತು ಅಗಲ 25 ಅಡಿ ಇದೆ. ತಳಭಾಗದಲ್ಲಿ ವೇದಿಕೆಗಳಿದ್ದು, ಗೋಡೆಗಳಲ್ಲಿ ಅತ್ಯಂತ ಸುಂದರ ಕೆತ್ತನೆಗಳಿವೆ. ಗರ್ಭಗುಡಿಯ ಶಿಖರ ಈಗ ಇಲ್ಲ. ಗರ್ಭಗುಡಿಯ ಹೊರ ಗೋಡೆಯ ಮೇಲೆ ಸೂರ್ಯ, ಗಣೇಶ, ಕುಬೇರ, ನೃತ್ಯಗಾರ್ತಿಯರ, ಪ್ರಣಯ ಜೋಡಿಗಳ ಮೂರ್ತಿಗಳನ್ನು ಕೆತ್ತಲಾಗಿದೆ. ಸಭಾಂಗಣದ ಹೊರಗೋಡೆಯ ಮೇಲೆ ವಿಶ್ವಕರ್ಮ, ಸರಸ್ವತಿ, ಗಣೇಶ ಮತ್ತು ಅಷ್ಟ ದಿಕ್ಪಾಲಕರ ಮೂರ್ತಿಗಳ ಕೆತ್ತನೆ ಇದೆ. ದೊಡ್ಡ ದೊಡ್ಡ ಕಿಟಕಿಗಳಿವೆ.‌ ಒಳಗೋಡೆಯ ಮೇಲೆ ಅಷ್ಟೇನೂ ಕೆತ್ತನೆಗಳಿಲ್ಲ. ಈಗ ಗರ್ಭಗುಡಿಯಲ್ಲಿ ಮೂರ್ತಿಯೂ ಇಲ್ಲ, ಪೂಜೆಯೂ ಇಲ್ಲ.

ಭೂಕಂಪಕ್ಕೂ ಹಾನಿಯಾಗದಂತೆ ನಿರ್ಮಾಣ

ಈ ಸೂರ್ಯ ಮಂದಿರವನ್ನು ಸೋಲಂಕಿ ರಾಜ ಮನೆತನದ ಒಂದನೆಯ ಭೀಮನು 1026-27ರಲ್ಲಿ ಕಟ್ಟಿಸಿದನು. ಸೂರ್ಯನ ಮೂರ್ತಿ ಚಿನ್ನದ್ದಾಗಿತ್ತು ಎನ್ನಲಾಗಿದೆ. ಆಗ ಸೂರ್ಯನ ಮೊದಲ ಕಿರಣ ಮಂದಿರದ ಮೂರ್ತಿಯ ಹಣೆಯಲ್ಲಿದ್ದ ವಜ್ರದ ಮೇಲೆ ಬಿದ್ದು, ಅಲ್ಲಿಂದ ಬೆಳಕು ಸುತ್ತಲೂ ಹರಡುವಂತೆ ಕಟ್ಟಿದ್ದರು ಎನ್ನಲಾಗಿದೆ. ದಂಗುಬಡಿಸುವ ವಿಷಯವೆಂದರೆ 11ನೆಯ ಶತಮಾನದಲ್ಲೇ ಭೂಕಂಪದ ಹಾನಿಗೆ ಒಳಗಾಗದಂತೆ ಈ ಮಂದಿರವನ್ನು ಕಟ್ಟಿದ್ದರು ಎನ್ನುವುದು.

ರಾಮ ಯಾಗ ಮಾಡಿದ ಸ್ಥಳ

ಈ ಮಂದಿರದ ಹಿಂದೆ ಒಂದು ಧಾರ್ಮಿಕ ಕತೆಯಿದೆ. ರಾವಣನ ವಧೆಯ ನಂತರ ಶ್ರೀರಾಮನು ಬ್ರಹ್ಮಹತ್ಯೆ ದೋಷದಿಂದ ಪಾರಾಗಲು ಹಾಗೂ ಆತ್ಮ ಶುದ್ಧಿಯ ಬಗ್ಗೆ ಗುರು ವಶಿಷ್ಠರಲ್ಲಿ ಕೇಳಿದಾಗ ಅವರು ʻಧರ್ಮಾರಣ್ಯʼಕ್ಕೆ ಹೋಗಲು ಹೇಳುತ್ತಾರೆ. ಹಿಂದೆ ಈ ಸ್ಥಳವೇ ಧರ್ಮಾರಣ್ಯವಾಗಿದ್ದು, ಇಲ್ಲೇ ಶ್ರೀರಾಮ ಯಾಗವನ್ನೂ ಮಾಡಿದ ಎಂಬುದು ಇಲ್ಲಿನ ಜನರ ನಂಬಿಕೆ.

Untitled design - 2026-06-16T105104.284

ಬಗೆಹರಿಯದ ವಿವಾದ

ಮೊಹಮ್ಮದ್‌ ಘಜನಿ ಈ ಮಂದಿರವನ್ನು ಲೂಟಿಮಾಡಿ ಇಲ್ಲಿದ್ದ ಅಪಾರ ಸಂಪತ್ತನ್ನು ವಶಪಡಿಸಿಕೊಂಡು ಮಂದಿರವನ್ನು ಭಗ್ನಗೊಳಿಸಿದನೆಂದು ಕೆಲವರು, ಸೋಲಂಕಿಗಳು ತಮ್ಮ 20 ಸಾವಿರ ಸೈನ್ಯದೊಂದಿಗೆ ಮೊಹಮ್ಮದ್‌ ಘಜನಿಯನ್ನು ಎದುರಿಸಿದರು, ಅವನ ಸೈನ್ಯವನ್ನು ಮಂದಿರದತ್ತ ಹೋಗಗೊಡಲಿಲ್ಲ, ಹಾಗಾಗಿ ಮಂದಿರವನ್ನು ಭಗ್ನಗೊಳಿಸಿದ್ದು ಮತ್ತಿನ್ಯಾರೋ ಎಂದು ಕೆಲವರು ಹೇಳುತ್ತಾರೆ. ಹಾಗೆಯೇ ಮಂದಿರದ ಕಲ್ಯಾಣಿ, ಗರ್ಭಗೃಹ ಮತ್ತು ಸಭಾಂಗಣವನ್ನು ಮೊದಲು ಕಟ್ಟಿಸಿದ್ದು, ಹಲವು ವರ್ಷಗಳ ನಂತರ ರಂಗ ಮಂಟಪವನ್ನು ಕಟ್ಟಿಸಿದರು ಎನ್ನುವವರೂ ಇದ್ದಾರೆ. ಏನೇ ಇರಲಿ, ಒಟ್ಟಾರೆ ಇಂದಿಗೂ ಈ ಸುಂದರ ದೇವಾಲಯ ಪ್ರವಾಸಿಗರ ಸ್ವರ್ಗದಂತಿದೆ ಎಂಬುದಂತೂ ನಿರ್ವಿವಾದ.

ಮಾಹಿತಿ ಪೆಟ್ಟಿಗೆ:

  • ಪುಷ್ಪಾವತಿ ನದಿಯ ದಡದಲ್ಲಿ ಈ ದೇವಾಲಯವಿದ್ದು, ಸುತ್ತ ಹಸಿರು ತುಂಬಿದ ಗದ್ದೆಗಳು, ಹೂ ಗಿಡಗಳು, ಕಾಯಿ-ಹಣ್ಣು ತುಂಬಿದ ಮರಗಳಿವೆ. ಮರಗಳಲ್ಲಿ ಕುಳಿತ ಹಕ್ಕಿಗಳ ಕಲರವ ಕೇಳುವುದೇ ಖುಷಿ.
  • ಇಲ್ಲಿಗೆ ಹೋಗುವ ಮೊದಲು ಆನ್‌ಲೈನ್‌ನಲ್ಲಿ ಟಿಕೆಟ್‌ ಪಡೆದುಕೊಳ್ಳಬೇಕು. ಮಂದಿರದ ಇತಿಹಾಸ, ಇಲ್ಲಿನ ಶಿಲ್ಪಕಲೆಯ ವಿವರಗಳನ್ನು ತಿಳಿಸುವ ಗೈಡ್‌ಗಳೂ ಇಲ್ಲಿದ್ದಾರೆ.
  • ಈಗ ದೇವಾಲಯ ಭಾರತೀಯ ಪುರತತ್ವ ಇಲಾಖೆಯ ಅಧೀನದಲ್ಲಿದೆ.
  • ಸಂಕ್ರಾಂತಿ ಕಳೆದು ಉತ್ತರಾಯಣ ಶುರುವಾಗುತ್ತಿದ್ದಂತೆ ಮೂರು ದಿನಗಳ ಕಾಲ ಇಲ್ಲಿ ʻಉತ್ತರಾರ್ಧ ಮಹೋತ್ಸವʼ ನಡೆಯುತ್ತದೆ. ಆ ಸಮಯದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯಗಳ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದು.
Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ