Wednesday, July 29, 2026
Wednesday, July 29, 2026

ಟೆಕ್ಸ್ಟ್‌ ಬುಕ್ಕಲ್ಲಿ ಎಷ್ಟೇ ಓದಿದ್ದರೂ ಗೈಡ್‌ ಬೇಕೇ ಬೇಕು ಸ್ವಾಮಿ!

ಹಂಪಿಯ ಕಲ್ಲಿನ ರಥ, ವಿರೂಪಾಕ್ಷ ದೇವಾಲಯ, ವಿಜಯ ವಿಠ್ಠಲ ದೇವಸ್ಥಾನ, ಸಂಗೀತ ಸ್ತಂಭಗಳು, ಅವಶೇಷಗಳು - ಇವೆಲ್ಲವೂ ಕಣ್ಣಿಗೆ ಸುಂದರವಾಗಿ ಕಾಣುತ್ತವೆ. ಗೈಡ್ ಇಲ್ಲದೆ ನೋಡಿದರೆ ಅದು ‘ಕಲ್ಲುಗಳ ನಗರ’ ಎಂಬ ಭಾವನೆಯಲ್ಲೇ ಮುಗಿದುಬಿಡುತ್ತದೆ. ಆದರೆ ಒಬ್ಬ ಅನುಭವಿ ಗೈಡ್, ‘ಇದು ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತ, ಈ ಕಲ್ಲುಗಳು 500 ವರ್ಷಗಳ ಹಿಂದಿನ ನಾಗರೀಕತೆಯ ಸಾಕ್ಷಿಗಳು’ ಎಂದು ವಿವರಿಸಿದಾಗ, ಪ್ರತಿಯೊಂದು ಕಲ್ಲಿಗೂ ಜೀವ ಬಂದಂತೆ ಅನಿಸುತ್ತದೆ.

  • ಲೀನಾ ಜೋಶಿ

ಗುರು ಇಲ್ಲದ ವಿದ್ಯೆ ಅಪೂರ್ಣ ಎಂಬ ಮಾತು ಎಲ್ಲರಿಗೂ ಪರಿಚಿತ. ಇದೇ ಮಾತು ಪ್ರವಾಸಕ್ಕೂ ಅನ್ವಯಿಸುತ್ತದೆ. ಪ್ರವಾಸ ಎಂದರೆ ಕೇವಲ ಒಂದು ಸ್ಥಳಕ್ಕೆ ಹೋಗಿ, ಕೆಲವು ಫೊಟೋಗಳನ್ನು ತೆಗೆದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಅಲ್ಲ. ಆ ಸ್ಥಳದ ಇತಿಹಾಸ, ಸಂಸ್ಕೃತಿ, ವಾಸ್ತುಶಿಲ್ಪ, ಅಲ್ಲಿನ ಜನರ ಜೀವನಶೈಲಿ ಮತ್ತು ಅದರ ಹಿಂದಿನ ಕಥೆಗಳನ್ನು ತಿಳಿದುಕೊಂಡಾಗ ಮಾತ್ರ ಪ್ರವಾಸಕ್ಕೆ ನಿಜವಾದ ಅರ್ಥ ಸಿಗುತ್ತದೆ. ಅದಕ್ಕಾಗಿಯೇ ಉತ್ತಮ ಪ್ರವಾಸಿ ಮಾರ್ಗದರ್ಶಿ (Tour Guide) ಪ್ರವಾಸದ ಆತ್ಮ.

ಇಂದು ಹೆಚ್ಚಿನವರು ಪ್ರವಾಸ ಎಂದರೆ ಫೊಟೋ, ಸೆಲ್ಫೀ, ರೀಲ್ಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆ. ಆದರೆ ನಿಜವಾದ ಪ್ರವಾಸಿಗನು ಒಂದು ಸ್ಥಳವನ್ನು ಕೇವಲ ನೋಡುವುದಿಲ್ಲ; ಅದನ್ನು ಅರ್ಥಮಾಡಿಕೊಳ್ಳುತ್ತಾನೆ, ಅನುಭವಿಸುತ್ತಾನೆ ಮತ್ತು ಅದರ ಹಿಂದಿರುವ ಇತಿಹಾಸವನ್ನು ಮನಸಿನಲ್ಲಿ ಉಳಿಸಿಕೊಳ್ಳುತ್ತಾನೆ. ಆ ಅನುಭವವನ್ನು ನೀಡುವವರು ಗೈಡ್‌ಗಳು. ಕುಟುಂಬಗಳು, ಸ್ನೇಹಿತರ ತಂಡಗಳು ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡಿ, ಸಾವಿರಾರು ರುಪಾಯಿ ಖರ್ಚು ಮಾಡಿ ಒಂದು ಐತಿಹಾಸಿಕ ಸ್ಥಳಕ್ಕೆ ಹೋಗುತ್ತಾರೆ. ಆದರೆ ಅಲ್ಲಿ ಒಂದು ಗಂಟೆಯೂ ಕಳೆಯದೆ, ಎರಡು-ಮೂರು ಫೊಟೋ ತೆಗೆದು, ‘ನೋಡಿದೆವು, ಬನ್ನಿ ಹೋಗೋಣ’ ಎಂದು ಹಿಂದಿರುಗುತ್ತಾರೆ. ಇದರಿಂದ ಪ್ರವಾಸದ ನಿಜವಾದ ಉದ್ದೇಶವೇ ಕಳೆದುಹೋಗುತ್ತದೆ. ಒಬ್ಬ ಉತ್ತಮ ಗೈಡ್‌ನೊಂದಿಗೆ ಅದೇ ಸ್ಥಳವನ್ನು ಸುತ್ತಿದರೆ ಅನುಭವವೇ ಬದಲಾಗುತ್ತದೆ. ಅವರು ಪ್ರತಿಯೊಂದು ಗೋಡೆಯನ್ನೂ ಮಾತನಾಡಿಸುತ್ತಾರೆ. ಪ್ರತಿಯೊಂದು ಕಲ್ಲಿನ ಹಿಂದಿರುವ ಕಥೆಯನ್ನು ಹೇಳುತ್ತಾರೆ. ಪ್ರತಿಯೊಂದು ಶಿಲ್ಪಕ್ಕೆ ಜೀವ ತುಂಬುತ್ತಾರೆ, ಆಗ ನಾವು ಪ್ರವಾಸಿಗರಾಗಿ ಅಲ್ಲ, ಇತಿಹಾಸದ ಸಾಕ್ಷಿಗಳಾಗಿ ಆ ಸ್ಥಳವನ್ನು ಅನುಭವಿಸುತ್ತೇವೆ.

ಇದನ್ನೂ ಓದಿ: 'ನೀವು ಹುಲಿಯನ್ನು ನೋಡದೇ ಇರಬಹುದು... ಆದರೆ, ಹುಲಿ ನಿಮ್ಮನ್ನು ಖಂಡಿತ ನೋಡಿರುತ್ತದೆ!'

ಹಂಪಿಯ ಕಲ್ಲಿನ ರಥ, ವಿರೂಪಾಕ್ಷ ದೇವಾಲಯ, ವಿಜಯ ವಿಠ್ಠಲ ದೇವಸ್ಥಾನ, ಸಂಗೀತ ಸ್ತಂಭಗಳು, ಅವಶೇಷಗಳು - ಇವೆಲ್ಲವೂ ಕಣ್ಣಿಗೆ ಸುಂದರವಾಗಿ ಕಾಣುತ್ತವೆ. ಗೈಡ್ ಇಲ್ಲದೆ ನೋಡಿದರೆ ಅದು ‘ಕಲ್ಲುಗಳ ನಗರ’ ಎಂಬ ಭಾವನೆಯಲ್ಲೇ ಮುಗಿದುಬಿಡುತ್ತದೆ. ಆದರೆ ಒಬ್ಬ ಅನುಭವಿ ಗೈಡ್, ‘ಇದು ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತ, ಈ ಕಲ್ಲುಗಳು 500 ವರ್ಷಗಳ ಹಿಂದಿನ ನಾಗರೀಕತೆಯ ಸಾಕ್ಷಿಗಳು’ ಎಂದು ವಿವರಿಸಿದಾಗ, ಪ್ರತಿಯೊಂದು ಕಲ್ಲಿಗೂ ಜೀವ ಬಂದಂತೆ ಅನಿಸುತ್ತದೆ. ಶ್ರೀಕೃಷ್ಣದೇವರಾಯರ ಕಾಲದ ಸಮೃದ್ಧಿ, ವ್ಯಾಪಾರ, ಕಲೆ ಮತ್ತು ಸಂಸ್ಕೃತಿಯ ಕಥೆಗಳು ಕಣ್ಣೆದುರಿಗೆ ಮೂಡಿಬರುತ್ತವೆ. ಆಗ ಹಂಪಿ ಕೇವಲ ಪ್ರವಾಸಿ ತಾಣವಲ್ಲ, ಭಾರತದ ವೈಭವದ ಜೀವಂತ ಇತಿಹಾಸವಾಗುತ್ತದೆ.

Untitled design (64)

ಅದೇ ರೀತಿ ಬೇಲೂರು ಮತ್ತು ಹಳೇಬೀಡು ದೇವಾಲಯವನ್ನು ಒಂದು ಸುತ್ತು ಹೊಡೆದು 10-15 ನಿಮಿಷಗಳಲ್ಲಿ ಹೊರಬರಬಹುದು. ಆದರೆ ಒಬ್ಬ ಉತ್ತಮ ಗೈಡ್ ಪ್ರತಿಯೊಂದು ಕಂಬದ ಕೆತ್ತನೆ, ಪ್ರತಿಯೊಂದು ಶಿಲ್ಪದಲ್ಲಿರುವ ಕಥೆ, ನೃತ್ಯ ಭಂಗಿಗಳು, ರಾಮಾಯಣ-ಮಹಾಭಾರತದ ಪ್ರಸಂಗಗಳು, ಹೊಯ್ಸಳರ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ವಿವರಿಸಿದಾಗ, ಗಂಟೆಗಳ ಕಾಲವೂ ಅಲ್ಲಿಂದ ಹೊರಡಲು ಮನಸಾಗುವುದಿಲ್ಲ. ಕಣ್ಣಿಗೆ ಕಾಣದ ಅನೇಕ ಸೂಕ್ಷ್ಮ ಅಂಶಗಳನ್ನು ಅವರು ವಿವರಿಸುತ್ತಾರೆ, ಆಗ ಶಿಲ್ಪಗಳು ಮಾತನಾಡುತ್ತಿರುವಂತೆ ಅನುಭವವಾಗುತ್ತದೆ.

ಯೂಟ್ಯೂಬ್, ಗೂಗಲ್ ಮತ್ತು ಅನೇಕ ಪ್ರವಾಸ ವೆಬ್‌ಸೈಟ್‌ಗಳಲ್ಲಿ ಯಾವುದೇ ಸ್ಥಳದ ಬಗ್ಗೆ ಸಾಕಷ್ಟು ಮಾಹಿತಿಗಳು ದೊರೆಯುತ್ತವೆ. ಅವುಗಳನ್ನು ಓದಿ, ವಿಡಿಯೋಗಳನ್ನು ನೋಡಿ ಅಲ್ಲಿಗೆ ಹೋದಾಗ, ಅಲ್ಲಿನ ಪ್ರತಿಯೊಂದು ಶಿಲೆ, ಪ್ರತಿಯೊಂದು ಕೆತ್ತನೆಯ ಹಿಂದೆ ಅಡಗಿರುವ ಕಥೆಯನ್ನು ನೆನಪಿಟ್ಟುಕೊಳ್ಳುವುದು ಸುಲಭವಲ್ಲ. ಆ ಸಂದರ್ಭದಲ್ಲಿ ನಮ್ಮೊಂದಿಗೆ ಇರುವ ಗೈಡ್ ಇತಿಹಾಸದ ಪುಸ್ತಕವಾಗುತ್ತಾನೆ. ಅಲ್ಲಿಯೇ ಅದನ್ನು ತೋರಿಸುತ್ತಾ, ಪ್ರಶ್ನೆಗಳಿಗೆ ಉತ್ತರಿಸುತ್ತಾ ವಿವರಿಸುವ ಅನುಭವವನ್ನು ಯಾವುದೇ ವಿಡಿಯೋ ನೀಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಎಷ್ಟೇ ತಂತ್ರಜ್ಞಾನ ಬೆಳೆದರೂ ಒಬ್ಬ ಉತ್ತಮ ಪ್ರವಾಸ ಗೈಡ್‌ನ ಸ್ಥಾನವನ್ನು ಯಾರೂ ತುಂಬಲಾರರು. ಕೆಲವರು ಗೈಡ್ ಸೇವೆಗೆ ಹಣ ಕೊಡಲು ಹಿಂಜರಿಯುತ್ತಾರೆ. ಇನ್ನೊಬ್ಬರು ಹಣ ಕೊಟ್ಟು ಗೈಡ್ ನೇಮಿಸಿಕೊಂಡಿದ್ದರೆ, ದೂರದಲ್ಲಿ ನಿಂತು ಉಚಿತವಾಗಿ ಕೇಳಲು ಪ್ರಯತ್ನಿಸುತ್ತಾರೆ. ಇದು ನೈತಿಕವಾಗಿ ಸರಿಯಲ್ಲ. ಗೈಡ್ ಜ್ಞಾನ, ಪರಿಶ್ರಮ ಮತ್ತು ಸಮಯಕ್ಕೆ ಗೌರವ ನೀಡುವುದು ನಮ್ಮ ಜವಾಬ್ದಾರಿ.

ಪ್ರವಾಸವೆಂದರೆ ಕೇವಲ ಮನೋರಂಜನೆ ಅಲ್ಲ; ಶಾಲೆಯಲ್ಲಿ ಓದಿದ ಇತಿಹಾಸವನ್ನು ಪುಸ್ತಕದ ಪುಟಗಳಲ್ಲಿ ಮಾತ್ರವಲ್ಲ, ನೈಜವಾಗಿ ಕಣ್ಣಾರೆ ನೋಡುವ ಅವಕಾಶ ಪ್ರವಾಸ ನೀಡುತ್ತದೆ. ಆ ಪಾಠವನ್ನು ಜೀವಂತವಾಗಿ ಮಾಡುವವರು ಗೈಡ್‌ಗಳು. ಅವರು ಕೇವಲ ಮಾಹಿತಿ ನೀಡುವವರು ಅಲ್ಲ; ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಸೇತುವೆಯಾಗಿದ್ದಾರೆ. ಮುಂದಿನ ಬಾರಿ ಯಾವುದೇ ಪ್ರವಾಸಿ ತಾಣಕ್ಕೆ ಹೋದಾಗ, ಒಂದು ನಿರ್ಧಾರ ಮಾಡಿ – ‘ನಾನು ಕೇವಲ ಫೊಟೋ ತೆಗೆದು ಬರುವುದಿಲ್ಲ; ಈ ಸ್ಥಳದ ಕಥೆಯನ್ನೂ ತಿಳಿದುಕೊಂಡು ಬರುತ್ತೇನೆ.’ ಪ್ರವಾಸವನ್ನು ಸ್ಮರಣೀಯವಾಗಿಸುವುದು ಸ್ಥಳವೊಂದೇ ಅಲ್ಲ, ಆ ಸ್ಥಳವನ್ನು ಪರಿಚಯಿಸುವ ಗೈಡ್ ಕೂಡ.

ಒಬ್ಬ ಉತ್ತಮ ಗೈಡ್, ಯಾವುದೇ ಪುಸ್ತಕದಲ್ಲಿ ಸುಲಭವಾಗಿ ಸಿಗದ ಮಾಹಿತಿಯನ್ನು ತಮ್ಮ ಅನುಭವದ ಮೂಲಕ ಹಂಚಿಕೊಳ್ಳುತ್ತಾರೆ. ಒಂದೇ ಸ್ಥಳಕ್ಕೆ ನೂರು ಬಾರಿ ಹೋದರೂ ಪ್ರತಿಬಾರಿಯೂ ಹೊಸ ವಿಷಯವನ್ನು ತಿಳಿಸುವ ಸಾಮರ್ಥ್ಯ ಅವರಲ್ಲಿರುತ್ತದೆ. ಯಾವ ರಾಜನು ಯಾವ ಕಟ್ಟಡವನ್ನು ನಿರ್ಮಿಸಿದನು, ಯಾವ ಶಿಲ್ಪವನ್ನು ಎಷ್ಟು ವರ್ಷಗಳಲ್ಲಿ ಕೆತ್ತಲಾಯಿತು, ಯಾವ ಯುದ್ಧದ ನಂತರ ಆ ಸ್ಥಳದ ಇತಿಹಾಸ ಬದಲಾಯಿತು, ಯಾವ ದೇವಾಲಯದ ಹಿಂದೆ ಯಾವ ಪುರಾಣ ಕಥೆಯಿದೆ - ಇಂಥ ಅನೇಕ ವಿಷಯಗಳನ್ನು ಅವರು ಅತ್ಯಂತ ಸರಳವಾಗಿ ವಿವರಿಸುತ್ತಾರೆ. ಅವರ ಮಾತುಗಳನ್ನು ಕೇಳುತ್ತಾ ಹೋದರೆ, ನಾವು ಇತಿಹಾಸದ ಕಾಲಘಟ್ಟದಲ್ಲೇ ಬದುಕುತ್ತಿರುವ ಅನುಭವವಾಗುತ್ತದೆ.

ಪ್ರವಾಸವೆಂದರೆ ಕೇವಲ ಕಣ್ಣಿನಿಂದ ನೋಡುವ ಅನುಭವವಲ್ಲ; ಅದು ಮನಸಿನಿಂದ ಅನುಭವಿಸುವ ಪ್ರಕ್ರಿಯೆ. ಮೈಸೂರಿನ ಅರಮನೆಯನ್ನು ಗೈಡ್ ಇಲ್ಲದೆ ನೋಡಿದರೆ ಅದು ಒಂದು ಸುಂದರ ಅರಮನೆಯಂತೆ ಮಾತ್ರ ಕಾಣುತ್ತದೆ. ಆದರೆ ಒಬ್ಬ ಗೈಡ್ ಅಲ್ಲಿನ ರಾಜವಂಶ, ದಸರಾ ವೈಭವ, ಚಿನ್ನದ ಸಿಂಹಾಸನ, ಅರಮನೆಯೊಳಗಿನ ಚಿತ್ರಕಲೆ ಮತ್ತು ವಾಸ್ತುಶಿಲ್ಪದ ವಿಶೇಷತೆಗಳನ್ನು ವಿವರಿಸಿದಾಗ, ಆ ಅರಮನೆಯ ಭವ್ಯತೆ ಇನ್ನಷ್ಟು ಮನಸನ್ನು ಸೆಳೆಯುತ್ತದೆ. ಅದೇ ರೀತಿ ಬಾದಾಮಿ ಗುಹೆಗಳು, ಐಹೊಳೆ, ಪಟ್ಟದಕಲ್ಲಿಗೆ ಭೇಟಿ ನೀಡಿದಾಗ, ಅಲ್ಲಿನ ಶಿಲ್ಪಗಳು ಮತ್ತು ಇತಿಹಾಸದ ಮಹತ್ವವನ್ನು ತಿಳಿಯದೆ ಹಿಂದಿರುಗಿದರೆ ನಮ್ಮ ಪ್ರವಾಸ ಅಪೂರ್ಣವಾಗುತ್ತದೆ.

ಒಂದು ಉತ್ತಮ ಪುಸ್ತಕವನ್ನು ಅದರ ಮುಖಪುಟ ಮಾತ್ರ ನೋಡಿ ಮುಚ್ಚಿಬಿಟ್ಟರೆ ಅದರ ಕಥೆ ತಿಳಿಯುವುದಿಲ್ಲ. ಅದೇ ರೀತಿ ಪ್ರವಾಸಿ ತಾಣವೊಂದನ್ನು ಕೇವಲ ಕಣ್ಣಾರೆ ನೋಡಿ ಹಿಂದಿರುಗಿದರೆ ಅದರ ನಿಜವಾದ ಮಹತ್ವ ತಿಳಿಯುವುದಿಲ್ಲ. ಗೈಡ್‌ನೊಂದಿಗೆ ಆ ಸ್ಥಳವನ್ನು ಸುತ್ತಿದರೆ ಮಾತ್ರ ಇತಿಹಾಸ ಮತ್ತು ವೈಭವ ನಮ್ಮ ಮನಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತದೆ. ಗೈಡ್ ಕೆಲಸ ಕೇವಲ ಇತಿಹಾಸ ಹೇಳುವುದಲ್ಲ. ಅವರು ಯಾವ ಸ್ಥಳವನ್ನು ಯಾವ ಕ್ರಮದಲ್ಲಿ ನೋಡಬೇಕು, ಎಷ್ಟು ಸಮಯ ಕಳೆಯಬೇಕು, ಯಾವ ಸಮಯದಲ್ಲಿ ಜನಸಂದಣಿ ಕಡಿಮೆ ಇರುತ್ತದೆ, ಯಾವ ಭಾಗಗಳನ್ನು ತಪ್ಪದೇ ನೋಡಬೇಕು, ಎಲ್ಲಿ ಉತ್ತಮ ಫೊಟೋಗಳನ್ನು ತೆಗೆದುಕೊಳ್ಳಬಹುದು ಎಂಬುದರ ಮಾಹಿತಿಯನ್ನೂ ನೀಡುತ್ತಾರೆ. ಇದರಿಂದ ಸಮಯವೂ ಉಳಿಯುತ್ತದೆ, ಪ್ರವಾಸವೂ ಹೆಚ್ಚು ಅರ್ಥಪೂರ್ಣವಾಗುತ್ತದೆ.

premium_photo-1718146018997-a105

ಮುಂದಿನ ಬಾರಿ ನೀವು ಯಾವುದೇ ಐತಿಹಾಸಿಕ ಸ್ಥಳ, ದೇವಾಲಯ, ಕೋಟೆ, ಪ್ರವಾಸಿ ತಾಣಕ್ಕೆ ಹೋದಾಗ, ಒಬ್ಬ ಉತ್ತಮ ಮಾರ್ಗದರ್ಶಿಯ ನೆರವು ಪಡೆಯಿರಿ. ಅದು ಖರ್ಚಲ್ಲ, ಜ್ಞಾನದ ಮೇಲಿನ ಹೂಡಿಕೆ. ಇಂದು ಬಹುತೇಕ ಜನರು ಪ್ರವಾಸಕ್ಕೆ ಹೋದರೆ ಮೊದಲು ಮೊಬೈಲ್ ಕ್ಯಾಮೆರಾವನ್ನು ತೆಗೆಯುತ್ತಾರೆ. ನೂರಾರು ಫೊಟೋಗಳು, ಸೆಲ್ಫೀಗಳು ಮತ್ತು ವಿಡಿಯೋಗಳನ್ನು ತೆಗೆದುಕೊಂಡು ಮನೆಗೆ ಹಿಂದಿರುಗುತ್ತಾರೆ. ಕೆಲವು ದಿನಗಳ ನಂತರ ಆ ಫೊಟೋಗಳು ಮೊಬೈಲ್ ಗ್ಯಾಲರಿಯಲ್ಲೇ ಉಳಿದುಬಿಡುತ್ತವೆ. ಆದರೆ ಆ ಸ್ಥಳದ ಇತಿಹಾಸ, ಅಲ್ಲಿನ ರಾಜರು, ಶಿಲ್ಪಿಗಳು, ಯುದ್ಧಗಳು, ಸಂಸ್ಕೃತಿ ಮತ್ತು ಜನಜೀವನದ ಬಗ್ಗೆ ಕೇಳಿದ ಕಥೆಗಳು ಮಾತ್ರ ಜೀವನಪೂರ್ತಿ ನೆನಪಿನಲ್ಲಿ ಉಳಿಯುತ್ತವೆ. ಪ್ರವಾಸದ ನಿಜವಾದ ನೆನಪು ಫೊಟೋಗಳಲ್ಲಷ್ಟೆ ಅಲ್ಲ, ನಾವು ಸಂಪಾದಿಸಿದ ಜ್ಞಾನದಲ್ಲಿದೆ.

ಯುರೋಪ್, ಜಪಾನ್, ಈಜಿಪ್ಟ್, ಟರ್ಕಿ ಮುಂತಾದ ದೇಶಗಳಿಗೆ ಪ್ರವಾಸ ಹೋಗುವವರು ಅಲ್ಲಿನ ಅಧಿಕೃತ ಗೈಡ್ ಗಳನ್ನು ಕಡ್ಡಾಯವಾಗಿ ಬಳಸುತ್ತಾರೆ. ಏಕೆಂದರೆ ಅವರಿಲ್ಲದೆ ಆ ಸ್ಥಳದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೆಂಬುದು ಎಲ್ಲರಿಗೂ ತಿಳಿದಿದೆ. ಭಾರತದಲ್ಲಿಯೂ ಅಂಥ ಸಂಸ್ಕೃತಿ ಬೆಳೆಯಬೇಕು. ನಮ್ಮ ದೇಶದ ಇತಿಹಾಸವು ಸಾವಿರಾರು ವರ್ಷಗಳಷ್ಟು ಶ್ರೀಮಂತವಾಗಿದೆ. ಅದನ್ನು ಸರಿಯಾದ ರೀತಿಯಲ್ಲಿ ಪರಿಚಯಿಸುವ ಗೈಡ್‌ಗಳಿಗೆ ನಾವು ಗೌರವ ನೀಡಬೇಕು. ಅವರು ನಮ್ಮ ಪರಂಪರೆಯ ರಾಯಭಾರಿಗಳು. ಪ್ರವಾಸೋದ್ಯಮದಿಂದ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಸ್ಥಳೀಯ ಮಾರ್ಗದರ್ಶಿಗಳು ವರ್ಷಗಳ ಕಾಲ ಅಧ್ಯಯನ ಮಾಡಿ ಅನೇಕ ಭಾಷೆಗಳನ್ನು ಕಲಿತು ಪ್ರವಾಸಿಗರಿಗೆ ಸೇವೆ ಸಲ್ಲಿಸುತ್ತಾರೆ. ಅವರಿಗೆ ನಾವು ನೀಡುವ ಸಂಭಾವನೆ ಅವರ ಜೀವನೋಪಾಯಕ್ಕೆ ಮಾತ್ರವಲ್ಲ, ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ನೀಡುವ ಬೆಂಬಲವೂ ಆಗುತ್ತದೆ. ‘ಪ್ರವಾಸದ ಸೌಂದರ್ಯ ಕಣ್ಣಿಗೆ ಕಾಣುವುದರಲ್ಲಿ ಇಲ್ಲ; ಅದರ ಹಿಂದೆ ಅಡಗಿರುವ ಕಥೆಯನ್ನು ತಿಳಿದುಕೊಳ್ಳುವುದರಲ್ಲಿ ಇದೆ. ಆ ಕಥೆಯನ್ನು ಹೇಳುವವನೇ ನಿಜವಾದ ಪ್ರವಾಸಿ ಮಾರ್ಗದರ್ಶಿ.’

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?