Friday, April 17, 2026
Friday, April 17, 2026

ಆಟಿಸಂ ಕಾಯಿಲೆ ಎಂಬುದೇ ತಪ್ಪು ಕಲ್ಪನೆ

ಆಟಿಸಂ ಟೂರಿಸಂ ಅತ್ಯಂತ ಸವಾಲಿನ ವಿಷಯ. ಆಟಿಸಂ ಇರುವ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವುದೂ ಕಷ್ಟ ಸಾಧ್ಯ. ಗದ್ದಲ, ಗಲಾಟೆ ಎಂದರೆ ಖಿನ್ನರಾಗುವ ಮತ್ತು ಭಯಗೊಳ್ಳುವ ಆಟಿಸಂ ಮಕ್ಕಳನ್ನು ಪೋಷಕರು ಅತ್ಯಂತ ಕಾಳಜಿಯಿಂದ ನಿಭಾಯಿಸಬೇಕು. ಆಟಿಸಂ ಗುಣಲಕ್ಷಣಗಳು, ಆಟಿಸಂ ಟೂರಿಸಂನ ಸವಾಲು ಮತ್ತು ಭವಿಷ್ಯದ ಬಗ್ಗೆ ಖ್ಯಾತ ನರ ಮತ್ತು ಮನೋರೋಗ ತಜ್ಞರಾದ ಡಾ.ದಿವಾಕರ್‌ ಗೌತಮ್‌ ಮಾತನಾಡಿದ್ದಾರೆ.

- ಡಾ. ದಿವಾಕರ್‌ ಗೌತಮ್

ಸಾಮಾನ್ಯವಾಗಿ ಮಕ್ಕಳಲ್ಲಿ ಆಟಿಸಂ ಇದೆ ಎಂದು ಹೇಗೆ ತಿಳಿಯುತ್ತದೆ?

ಆಟಿಸಂ ಎಂಬುದು ಮುಖ್ಯವಾಗಿ ನರಗಳ ಬೆಳವಣಿಗೆಯ ಅಸ್ವಸ್ಥತೆ. ಇದು ಕಾಯಿಲೆಯಲ್ಲ, ಬದಲಾಗಿ ಮೆದುಳಿನ ಬೆಳವಣಿಗೆಯಲ್ಲಿ ಉಂಟಾದ ವ್ಯತ್ಯಾಸ. ಚಿಕ್ಕ ವಯಸ್ಸಿನಲ್ಲೇ ಇದರ ಲಕ್ಷಣಗಳು ಗೋಚರಿಸುತ್ತವೆ. ಮಕ್ಕಳು ಸಾಮಾಜಿಕ ಸಂವಹನ, ಮಾತು ಮತ್ತು ನಡವಳಿಕೆಯಲ್ಲಿ ತೊಂದರೆ ಅನುಭವಿಸಬಹುದು. ಇವರು ಹೊರಜಗತ್ತಿಗೆ ಸರಿಯಾಗಿ ಸ್ಪಂದಿಸದೆ, ಸೀಮಿತ ಆಸಕ್ತಿಗಳನ್ನು ಹೊಂದಿರುತ್ತಾರೆ. ಲಕ್ಷಣಗಳು ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಿರಬಹುದು; ಕೆಲವರು ಕೆಲಸಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರೆ, ಇನ್ನು ಕೆಲವರು ಕುಗ್ಗಿರುತ್ತಾರೆ. ದೊಡ್ಡವರಾದ ಮೇಲೂ ಇವರಿಗೆ ಸಾಮಾಜಿಕ ಸಂಬಂಧಗಳ ನಿರ್ವಹಣೆ ಸವಾಲಾಗಬಹುದು. ಆಟಿಸಂ ಕಾಯಿಲೆ ಎಂಬುದೇ ತಪ್ಪು ಕಲ್ಪನೆ. ಇವರನ್ನು ನಾವು 'ವಿಭಿನ್ನ ಸಾಮರ್ಥ್ಯವುಳ್ಳವರು' ಎಂದೇ ಗುರುತಿಸಬೇಕು.

ಇದನ್ನೂ ಓದಿ: ನಕಾಶೆಗಳಾಚೆಗಿನ ಪ್ರಯಾಣ: ಆಟಿಸಂ ಹಾಗೂ ಪ್ರವಾಸದ ನಿಜ ಅರ್ಥ

ಆಟಿಸಂ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋದಾಗ ಪೋಷಕರು ಎದುರಿಸಬೇಕಾದ ಸವಾಲುಗಳೇನು?

ಆಟಿಸಂ ಇರುವ ಮಕ್ಕಳನ್ನು ಕೇವಲ ಮನೆಯಲ್ಲೇ ನಿರ್ಬಂಧಿಸದೆ, ಅವರಿಗೆ ಪ್ರಪಂಚವನ್ನು ಪರಿಚಯಿಸುವುದು ಅಗತ್ಯ. ಪ್ರವಾಸದ ವೇಳೆ ದಿನಚರಿ ಬದಲಾವಣೆ ಮತ್ತು ಅಲ್ಲಿಯ ಗದ್ದಲ ಅವರಿಗೆ ಸವಾಲಾಗಬಹುದು, ಆದರೆ ಅವರಿಗೆ ಪೂರಕವಾದ ಪರಿಸರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಕೇವಲ ಪೋಷಕರು ಮಾತ್ರವಲ್ಲದೆ, ಸಮಾಜ ಮತ್ತು ವ್ಯವಸ್ಥೆಯೂ ಸಹಾನುಭೂತಿಯಿಂದ ಸಹಕರಿಸಬೇಕು. ಪೋಷಕರು ಮುಂಚೆಯೇ ಆ ಮಕ್ಕಳನ್ನು ಮಾನಸಿಕವಾಗಿ ತಯಾರಿಸಲು ಪ್ರಯತ್ನಿಸಬೇಕು. ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅಗತ್ಯ ಸೌಲಭ್ಯ ಹಾಗೂ ಪೂರಕ ವಾತಾವರಣ ನಿರ್ಮಿಸಿದರೆ, ಈ ಮಕ್ಕಳು ಕೂಡ ಎಲ್ಲರಂತೆ ಪ್ರವಾಸದ ಆನಂದವನ್ನು ಸವಿಯಲು ಸಾಧ್ಯವಾಗುತ್ತದೆ.

Untitled design - 2026-04-17T115329.648

ಸಾಮಾನ್ಯ ಪ್ರವಾಸಗಳಿಗೆ ಪ್ಲಾನ್‌ನ ಅಗತ್ಯವಿರುತ್ತದೆ. ಆಟಿಸಂ ಪ್ರವಾಸಕ್ಕೆ ವಿಶೇಷ ಪ್ಲಾನ್‌ನ ಅಗತ್ಯವಿದೆಯೇ?

ಆಟಿಸಂ ಇರುವ ಮಕ್ಕಳ ಪ್ರವಾಸದ ಯೋಜನೆ ವಿಶೇಷವಾಗಿರಬೇಕು. ಹೆಚ್ಚಿನ ಗದ್ದಲವಿಲ್ಲದ, ಜನದಟ್ಟಣೆ ಕಡಿಮೆ ಇರುವ ಮತ್ತು ಶಾಂತಿಯುತ ತಾಣಗಳನ್ನು ಆರಿಸಿಕೊಳ್ಳುವುದು ಉತ್ತಮ. ಅವರ ದಿನಚರಿ ತೀರಾ ವ್ಯತ್ಯಾಸವಾಗದಂತೆ ಆಹಾರ ಮತ್ತು ವಿಶ್ರಾಂತಿಯ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಪ್ರವಾಸದ ಆಯೋಜಕರಿಗೆ ಮೊದಲೇ ಮಾಹಿತಿ ನೀಡಿ, ಅಗತ್ಯ ಸೌಲಭ್ಯ ಹಾಗೂ ಪೂರಕ ವಾತಾವರಣವನ್ನು ಖಚಿತಪಡಿಸಿಕೊಳ್ಳಬೇಕು. ತುರ್ತು ಸಂದರ್ಭಗಳಿಗಾಗಿ ವೈದ್ಯಕೀಯ ಔಷಧಿಗಳನ್ನು ಜತೆಯಲ್ಲಿಟ್ಟುಕೊಳ್ಳುವುದು ಸುರಕ್ಷತೆಯ ದೃಷ್ಟಿಯಿಂದ ಅತಿ ಮುಖ್ಯ. ಮಕ್ಕಳನ್ನು ಹಂತ ಹಂತವಾಗಿ ಹೊಸ ಪರಿಸರಕ್ಕೆ ಹೊಂದಿಕೊಳ್ಳುವಂತೆ ಪ್ರೋತ್ಸಾಹಿಸಬೇಕು; ಏಕೆಂದರೆ ಸರಿಯಾದ ಮಾರ್ಗದರ್ಶನ ನೀಡಿದರೆ ಅವರೂ ಕಲಿಯಬಲ್ಲರು. ಇಂಥ ಮುನ್ನೆಚ್ಚರಿಕೆ ಮತ್ತು ಪೋಷಕರು ಹಾಗೂ ವ್ಯವಸ್ಥೆಯ ಸಹಕಾರವಿದ್ದರೆ, ಈ ವಿಭಿನ್ನ ಸಾಮರ್ಥ್ಯದ ಮಕ್ಕಳೂ ಪ್ರವಾಸದ ಸಂಭ್ರಮವನ್ನು ಸವಿಯಲು ಸಾಧ್ಯವಾಗುತ್ತದೆ.

ಆಟಿಸಂ ಸಮಸ್ಯೆಗೆ ವೈದ್ಯಕೀಯ ಚಿಕಿತ್ಸೆ ಅಥವಾ ಮಾನಸಿಕ ನೆರವಿನ ಪರಿಹಾರ ಇದೆಯೇ?

ಆಟಿಸಂ ಎಂಬುದು ಗುಣಪಡಿಸಬೇಕಾದ ರೋಗವಲ್ಲ, ಅದೊಂದು ಮೆದುಳಿನ ಬೆಳವಣಿಗೆಯ ವಿಶೇಷತೆ. ಇದನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲದಿದ್ದರೂ, ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ತರಬೇತಿ ನೀಡುವುದು ಅಗತ್ಯ. ಮಾನಸಿಕ ಸಮಾಲೋಚನೆ, ಮಾತಿನ ಕೌಶಲ್ಯ ಮತ್ತು ನಡವಳಿಕೆಯ ತರಗತಿಗಳ ಮೂಲಕ ಮಕ್ಕಳನ್ನು ಸಾಮಾನ್ಯರಂತೆ ಸ್ವಾವಲಂಬಿಗಳನ್ನಾಗಿ ಬದಲಾಯಿಸಬಹುದು. ಆಟಿಸಂ ಜತೆಗೆ ಬರುವ ಇತರ ದೈಹಿಕ ಅಥವಾ ನರಸಂಬಂಧಿ ಸಮಸ್ಯೆಗಳಿಗೆ ಮಾತ್ರ ವೈದ್ಯಕೀಯ ಚಿಕಿತ್ಸೆ ಲಭ್ಯವಿದೆ. ನೆನಪಿಡಿ, ಇವರು ಕಾಯಿಲೆ ಇರುವವರಲ್ಲ, ಬದಲಾಗಿ ವಿಶೇಷ ಸಾಮರ್ಥ್ಯವುಳ್ಳವರು. ಸಮಾಜದ ಸಹಕಾರದಿಂದ ಇವರೂ ಉತ್ತಮ ಜೀವನ ನಡೆಸಬಲ್ಲರು.

ಕೇರಳದಂತೆ ಕರ್ನಾಟಕದ ಮಟ್ಟಿಗೆ ಆಟಿಸಂ ಟೂರಿಸಂ ಅನ್ನು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದು?

ಕರ್ನಾಟಕದಲ್ಲಿ ಕೇರಳದ ಮಾದರಿಯಲ್ಲೇ ಆಟಿಸಂ ಟೂರಿಸಂ ಅಭಿವೃದ್ಧಿಪಡಿಸುವುದು ಪೋಷಕರಿಗೆ ಆಶಾದಾಯಕ ಸುದ್ದಿಯಾಗಿದೆ. ನಮ್ಮ ಪ್ರವಾಸೋದ್ಯಮ ವ್ಯವಸ್ಥೆಯು ಇಂಥ ಸೂಕ್ಷ್ಮತೆಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಆರಂಭದಲ್ಲಿ ಎಲ್ಲೆಡೆ ವಿಸ್ತರಿಸುವ ಬದಲು, ಆಯ್ದ ಒಂದೆರಡು ಪ್ರವಾಸಿ ತಾಣಗಳನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಆಟಿಸಂ ಸ್ನೇಹಿಯಾಗಿ ರೂಪಿಸಬಹುದು. ಅನುಭವಿ ಪೋಷಕರ ಸಲಹೆಗಳನ್ನು ಪಡೆದು ಪ್ರವಾಸದ ವಿನ್ಯಾಸ ರೂಪಿಸುವುದು ಹೆಚ್ಚು ಪರಿಣಾಮಕಾರಿ. ಪ್ರಯಾಣದ ಅವಧಿ ಸೀಮಿತವಾಗಿರಬೇಕು ಮತ್ತು ಮಕ್ಕಳಿಗೆ ಇಷ್ಟವಾಗುವಂಥ ಸಣ್ಣ ಸಣ್ಣ ಚಟುವಟಿಕೆಗಳ ವಾತಾವರಣ ಅಲ್ಲಿರಬೇಕು. ಈ ಪ್ರಾಯೋಗಿಕ ಹಂತ ಯಶಸ್ವಿಯಾದ ನಂತರ, ಹೆಚ್ಚಿನ ಸೌಲಭ್ಯಗಳೊಂದಿಗೆ ಇದನ್ನು ರಾಜ್ಯಾದ್ಯಂತ ವಿಸ್ತರಿಸಬಹುದು. ಇದರಿಂದ ವಿಶೇಷ ಸಾಮರ್ಥ್ಯದ ಮಕ್ಕಳಿಗೂ ಸಮಾಜದಲ್ಲಿ ಸಮಾನವಾದ ಪ್ರವಾಸದ ಹಕ್ಕು ಲಭಿಸಿದಂತಾಗುತ್ತದೆ.

ಪ್ರವಾಸದಲ್ಲಿ ಗೈಡ್ ಅಥವಾ ಪೋಷಕರ ಸಹಾಯ ಬೇಕೇ ಬೇಕೆ? ಅವರು ಒಬ್ಬಂಟಿಯಾಗಿ ಪ್ರವಾಸ ಮಾಡಲು ಸಾಧ್ಯವಿಲ್ಲವೇ?

ಆಟಿಸಂ ಇರುವ ಮಕ್ಕಳಿಗೆ ಪ್ರವಾಸದಲ್ಲಿ ಮಾರ್ಗದರ್ಶಕರು ಅಥವಾ ಪೋಷಕರು ಇರಲೇಬೇಕೆಂಬ ನಿಯಮವಿಲ್ಲ; ಇದು ಅವರ ಅಗತ್ಯ ಮತ್ತು ಆಟಿಸಂ ಯಾವ ಹಂತದಲ್ಲಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅನೇಕರು ಒಬ್ಬಂಟಿಯಾಗಿಯೂ ಯಶಸ್ವಿಯಾಗಿ ಪ್ರವಾಸ ಮಾಡುತ್ತಾರೆ. ಆದರೆ ಎಲ್ಲರ ಸಾಮರ್ಥ್ಯ ಒಂದೇ ಇರುವುದಿಲ್ಲ. ಅವರಿಗೆ ಮುಖ್ಯವಾಗಿ ಬೇಕಾಗಿರುವುದು ಅವರ ಸಂವೇದನೆಗಳಿಗೆ ಸ್ಪಂದಿಸುವ ಪೂರಕ ವಾತಾವರಣ ಮತ್ತು ತೃಪ್ತಿ ನೀಡುವಂಥ ನಿರ್ದಿಷ್ಟ ಚೌಕಟ್ಟಿನ ಜಾಗ. ಅಂಥ ಪೂರಕ ವ್ಯವಸ್ಥೆ ಲಭ್ಯವಿದ್ದಾಗ, ಅವರು ಸ್ವತಂತ್ರವಾಗಿ ಪ್ರವಾಸದ ಅನುಭವ ಪಡೆಯಲು ಖಂಡಿತ ಸಾಧ್ಯವಿದೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!