Friday, July 17, 2026
Friday, July 17, 2026

ತೊಡಿಕ್ಕಾನ ಮಲ್ಲಿಕಾರ್ಜುನ

ದೇವಾಲಯ ಇರುವ ಈಗಿನ ಪ್ರದೇಶವು ಮೂಲತಃ ಕಣ್ವ ಮಹರ್ಷಿಗಳ ಆಶ್ರಮವಾಗಿತ್ತು. ಅಲ್ಲಿ ಅವರು ತಮ್ಮ ಶಿಷ್ಯರಿಗೆ ವೇದ- ಪುರಾಣಗಳು ಮತ್ತು ಪವಿತ್ರ ಗ್ರಂಥಗಳನ್ನು ಕಲಿಸುತ್ತಿದ್ದರು. ಹಲವು ವರ್ಷಗಳ ನಂತರ, ಮಲ್ಲಿ ಎಂಬ ಬುಡಕಟ್ಟು ಮಹಿಳೆ ಹುಲ್ಲು ಕೊಯ್ಯುವಾಗ ಆಕಸ್ಮಿಕವಾಗಿ ಆಕೆಯ ಕತ್ತಿ ಒಂದು ಕಲ್ಲಿಗೆ ಬಡಿದು ರಕ್ತಸ್ರಾವವಾಯಿತು. ಈ ವಿಷಯವನ್ನು ಕಣ್ವ ಋಷಿಗೆ ತಿಳಿಸಿದಾಗ, ಅದು ಪವಿತ್ರ ಶಿವಲಿಂಗ ಎಂದು ಅವರು ದೈವಿಕ ದೃಷ್ಟಿಯಿಂದ ಅರಿತು ತಿಳಿಸಿದರು. ನಂತರ ಋಷಿಯು ತಮ್ಮ ಆಶ್ರಮದ ಸ್ಥಳದಲ್ಲೇ ದೇವಾಲಯವನ್ನು ಸ್ಥಾಪಿಸಿದರು.

  • ಕೆ ರಘು ಶೆಟ್ಟಿ

ಸುಳ್ಯ ತಾಲೂಕಿನಲ್ಲಿ ತೊಡಿಕ್ಕಾನ ಎಂಬ ಪುಟ್ಟ ಗ್ರಾಮವಿದೆ. ಅಲ್ಲಿನ ಮಲ್ಲಿಕಾರ್ಜುನ ದೇವಸ್ಥಾನ ಪುರಾತನವಾದುದು. ದಟ್ಟವಾದ ಕಾಡಿನ ತಪ್ಪಲಿನಲ್ಲಿ ಇರುವ ಕಾರಣಕ್ಕೆ ಈ ಸ್ಥಳಕ್ಕೆ ʻತೊಡಿಕ್ಕಾನʼ ಎಂಬ ಹೆಸರು. ಕಥೆಯೊಂದರ ಪ್ರಕಾರ ಕುಕ್ಕುಟ ಪರ್ವತ (ಕೋಲಿಕ ಮಲೆ) ಮತ್ತು ತಾಮ್ರ ಪರ್ವತಗಳ (ಚೆಂಬು ಗ್ರಾಮ) ನಡುವೆ ನೆಲೆಸಿರುವ ಸಹ್ಯಾದ್ರಿ ಪರ್ವತಗಳ ತಪ್ಪಲಿನಲ್ಲಿರುವ ಕಾರಣ ಇದಕ್ಕೆ ʼತುಡಿಕ್ಕಾನʼವೆಂದು ಕಾಲಾನಂತರದಲ್ಲಿ ʻತೊಡಿಕ್ಕಾನʼ ಎಂದಾಯಿತು ಎನ್ನಲಾಗಿದೆ.

ಇದನ್ನೂ ಓದಿ:ದಟ್ಟ ಕಾನನದ ನಟ್ಟ ನಡುವೆ ಇಹಳು ʻಕರಿಕಾನ ಪರಮೇಶ್ವರಿʼ

ಮಲ್ಲಿಕಾರ್ಜುನ ಹೆಸರಿಗೆ ಎರಡು ಕಥೆಗಳು

ತೊಡಿಕ್ಕಾನದ ಪುರಾತನ ಮಲ್ಲಿಕಾರ್ಜುನ ದೇವಾಲಯ ಪಯಸ್ವಿನಿ ನದಿಯ ತಟದಲ್ಲಿದೆ. ಕಥೆಯ ಪ್ರಕಾರ ದೇವಾಲಯ ಇರುವ ಈಗಿನ ಪ್ರದೇಶವು ಮೂಲತಃ ಕಣ್ವ ಮಹರ್ಷಿಗಳ ಆಶ್ರಮವಾಗಿತ್ತು. ಅಲ್ಲಿ ಅವರು ತಮ್ಮ ಶಿಷ್ಯರಿಗೆ ವೇದ- ಪುರಾಣಗಳು ಮತ್ತು ಪವಿತ್ರ ಗ್ರಂಥಗಳನ್ನು ಕಲಿಸುತ್ತಿದ್ದರು. ಹಲವು ವರ್ಷಗಳ ನಂತರ, ಮಲ್ಲಿ ಎಂಬ ಬುಡಕಟ್ಟು ಮಹಿಳೆ ಹುಲ್ಲು ಕೊಯ್ಯುವಾಗ ಆಕಸ್ಮಿಕವಾಗಿ ಆಕೆಯ ಕತ್ತಿ ಒಂದು ಕಲ್ಲಿಗೆ ಬಡಿದು ರಕ್ತಸ್ರಾವವಾಯಿತು. ಈ ವಿಷಯವನ್ನು ಕಣ್ವ ಋಷಿಗೆ ತಿಳಿಸಿದಾಗ, ಅದು ಪವಿತ್ರ ಶಿವಲಿಂಗ ಎಂದು ಅವರು ದೈವಿಕ ದೃಷ್ಟಿಯಿಂದ ಅರಿತು ತಿಳಿಸಿದರು. ನಂತರ ಋಷಿಯು ತಮ್ಮ ಆಶ್ರಮದ ಸ್ಥಳದಲ್ಲೇ ದೇವಾಲಯವನ್ನು ಸ್ಥಾಪಿಸಿದರು ಎನ್ನಲಾಗಿದೆ.

Untitled design (3)

ಮತ್ತೊಂದು ಕಥೆಯ ಪ್ರಕಾರ ಅರ್ಜುನ ಪಾಶುಪತಾಸ್ತ್ರವನ್ನು ಪಡೆಯಲು ದೇವರಗುಂಡಿ ಬಳಿ ಘೋರ ತಪಸ್ಸು ಮಾಡಿದನು. ಅವನನ್ನು ಪರೀಕ್ಷಿಸಲು ಶಿವ ಬೇಡನ ರೂಪದಲ್ಲಿ ಪ್ರತ್ಯಕ್ಷನಾಗಿದ್ದೂ, ಅವರಿಬ್ಬರ ನಡುವೆ ಯುದ್ಧ ನಡೆದಿದ್ದೂ ಇಲ್ಲೇ ಎನ್ನಲಾಗಿದೆ. ಯುದ್ಧದ ನಂತರ, ಶಿವನು ಅರ್ಜುನನನ್ನು ಆಶೀರ್ವದಿಸಿ ದೇವರಗುಂಡಿಯ ಬಳಿ ಅರ್ಜುನನ ಬಾಣದ ಗಾಯವನ್ನು ಹೊತ್ತ ಲಿಂಗವಾಗಿ ನೆಲೆಸಿದನು. ಎರಡು ಕಥೆಗಳಲ್ಲಿನ ಮಲ್ಲಿ ಮತ್ತು ಅರ್ಜುನರ ಎರಡು ಹೆಸರು ಸೇರಿ ಇಲ್ಲಿನ ಶಿವನ ಹೆಸರು ಮಲ್ಲಿಕಾರ್ಜುನ ಎಂದಾಯಿತು ಎನ್ನಲಾಗಿದೆ.

1799ರಲ್ಲಿ ಈ ಪ್ರದೇಶ ಕೊಡಗಿನ ರಾಜರ ಆಡಳಿತಕ್ಕೆ ಒಳಪಟ್ಟಿತು. ಕೊಡಗಿನ ರಾಜರಾಗಿದ್ದ ಲಿಂಗರಾಜ ಎಂಬುವವರು ದೇವಾಲಯಕ್ಕೆ ದಾನವಾಗಿ ಕೊಟ್ಟ ಕೆಲವು ಪಾತ್ರೆಗಳನ್ನು ಇಂದಿಗೂ ಕಾಣಬಹುದು. ಅದರಲ್ಲಿ ಲಿಂಗರಾಜ ಎಂದು ಬರೆದಿದ್ದನ್ನು ಸ್ಥಳೀಯರು ಗುರುತಿಸಿದ್ದಾರೆ.

ದೇವರಗುಂಡಿ

ಮಲ್ಲಿಕಾರ್ಜುನ ದೇವಾಲಯದಿಂದ ಸುಮಾರು 2 ಕಿಮೀ ಪರ್ವತದ ದಾರಿಯಲ್ಲಿ ಸಾಗಿದರೆ ದೇವರಗುಂಡಿ ಎಂಬ ಸುಂದರ ಜಲಪಾತವನ್ನು ಕಾಣಬಹುದು. ಮಲ್ಲಿಕಾರ್ಜುನ ದೇವಾಲಯಕ್ಕೂ ಈ ಗುಂಡಿಗೂ ಸಂಬಂಧವಿದೆ. ಇಂದಿಗೂ ವಿಶೇಷ ದಿನಗಳಲ್ಲಿ ಇಲ್ಲಿಂದ ತರುವ ನೀರಿನಿಂದ ಮಲ್ಲಿಕಾರ್ಜುನ ಸ್ವಾಮಿ ಅಭಿಷೇಕ ನಡೆಯುತ್ತದೆ. ಕಥೆಯೊಂದರ ಪ್ರಕಾರ ಮಲ್ಲಿಕಾರ್ಜುನ ಸ್ವಾಮಿ ಮತ್ಸ್ಯವಾಹನನಾಗಿ ದೇವರಗುಂಡಿಯಿಂದ ಪಯಸ್ವಿನಿ ನದಿಯ ಮೂಲಕ ಇಲ್ಲಿಗೆ ಬಂದು ನೆಲೆಸಿದನು ಎನ್ನಲಾಗಿದೆ.

Untitled design (2)

ಪಯಸ್ವಿನಿಯಲ್ಲಿ ದೈವರೂಪಿ ಮತ್ಸ್ಯ

ದೇವಾಲಯದ ಹತ್ತಿರ ಪಯಸ್ವಿನಿ ನದಿ ಹರಿಯುತ್ತಿದೆ. ಅಲ್ಲಿ ಒಂದು ಸಣ್ಣ ಅಣೆಕಟ್ಟನ್ನು ನಿರ್ಮಿಸಿ ಮಹಾಶಿರ್ ಜಾತಿಯ ಮೀನುಗಳನ್ನು ಸಾಕಿದ್ದಾರೆ. ಅವು ಮತ್ಸ್ಯ ಅವತಾರದ ವಿಷ್ಣುವಿನ ಸ್ವರೂಪ ಎಂಬುದು ಭಕ್ತರ ನಂಬಿಕೆ. ಚರ್ಮರೋಗ ನಿವಾರಣೆಗಾಗಿ ಇಲ್ಲಿಗೆ ಬಂದು ಪ್ರಾರ್ಥಿಸಿದರೆ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ನಂಬಿಕೆಯೂ ಜನರಲ್ಲಿದೆ. ಹರಕೆ ರೂಪದಲ್ಲಿ ತೊರೆಯಲ್ಲಿನ ಮೀನುಗಳಿಗೆ ಅಕ್ಕಿ ಹಾಗೂ ಹೊದಲು ಹಾಕುವುದು ವಾಡಿಕೆ. ಸರ್ವ ಧರ್ಮಗಳ ಜನರೂ ಇಲ್ಲಿಗೆ ಭೇಟಿ ನೀಡುತ್ತಾರೆ. ತೊಡಿಕ್ಕಾನ ದೇವಸ್ಥಾನದಲ್ಲಿ ಬೆಳಗ್ಗಿನ ಪೂಜೆಯ ಬಳಿಕ ಮೊದಲ ಅನ್ನ ಪ್ರಸಾದವನ್ನು ಈ ಮೀನುಗಳಿಗೆ ಹಾಕುವ ಸಂಪ್ರದಾಯವಿದೆ. ಈ ಮೀನುಗಳನ್ನು ಹಿಡಿಯುವುದು ಮತ್ತು ಕೊಲ್ಲುವುದು ನಿಷಿದ್ಧವಾಗಿದೆ.

ಈ ಪ್ರದೇಶದಲ್ಲಿ ಕಣ್ವ ಮಹರ್ಷಿಗಳು ಒಂದು ಮಹತ್ವಪೂರ್ಣ ಯಜ್ಞ ಮಾಡುತಿದ್ದರು. ಅದರ ಅಧ್ಯಕ್ಷತೆ ವಹಿಸಲು ಕಣ್ವರು ಬ್ರಹ್ಮನನ್ನು ಆಹ್ವಾನಿಸಿದರು. ಆ ಯಾಗ ಪೂರ್ತಿಯಾಗುವ ಮೊದಲೇ ಬ್ರಹ್ಮ ಯಾಗ ಮಂಟಪದಿಂದ ತೆರಳಬೇಕಾಯಿತು. ಆದ್ದರಿಂದ ಆ ಯಾಗ ಪೂರ್ತಿಯಾಗಲಿಲ್ಲ ಎನ್ನಲಾಗಿದ್ದು, ಫಲಶೃತಿಯಾಗಿ ಇಂದಿಗೂ ಆ ಯಾಗವನ್ನು ಮುಂದುವರಿಸಲಾಗುತ್ತಿದೆ. ಇದು ಇಲ್ಲಿ ನಡೆಯುತ್ತಿರುವ ಯಾಗದ ಕುರಿತು ಭಕ್ತರ ನಂಬಿಕೆ. ದೇವಸ್ಥಾನದ ಸುತ್ತುಪೌಳಿಯಲ್ಲಿ ಯಜ್ಞಕುಂಡವಿದೆ. ಅಲ್ಲಿ ಬ್ರಹ್ಮನಿಗೆ ಪೂಜೆಗಳು ನೆರವೇರುತ್ತವೆ.

ಮುಖ್ಯ ದೇವರು

ಶ್ರೀ ಮಲ್ಲಿಕಾರ್ಜುನ: ಕಿರಾತಾರ್ಜುನಿಯ ಯುದ್ಧದ ದೈವಿಕ ಗಾಯವನ್ನು ಹೊತ್ತಿರುವ ಲಿಂಗರೂಪದಲ್ಲಿನ ಮಲ್ಲಿಕಾರ್ಜುನ.

ಇತರ ದೇವತೆಗಳು

ವನಶಾಸ್ತ್ರ ಲಿಂಗ: ಮೂಲ ಅರಣ್ಯ ದೇವತೆ

ಗಣಪತಿ: ಲಿಂಗ ರೂಪದಲ್ಲಿರುವ ಸಹಾಯಕ ದೇವತೆ

ಪಾಷಾಣ ಮೂರ್ತಿ: ದೇವಾಲಯದ ರಕ್ಷಕ ದೇವತೆ

ವಿಷ್ಣು: ದೇವರಗುಂಡಿಯಲ್ಲಿ ನೆಲೆಸಿರುವ ಮತ್ಸ್ಯ (ಮಿನಿ)

ಕಣ್ವರ ಶಾಶ್ವತ ಅಗ್ನಿ: ಕಣ್ವ ಋಷಿ ಸ್ಥಾಪಿಸಿದ ಯಜ್ಞ ಕುಂಡ

ಚತುರ್ಮುಖ ಬ್ರಹ್ಮ: ಯಜ್ಞ ಕುಂಡದಲ್ಲಿ ಸ್ಥಾಪಿಸಲಾದ ನಾಲ್ಕು ಮುಖದ ಬ್ರಹ್ಮನ ವಿಗ್ರಹ

ಅಕ್ಷಯ ಅಗ್ನಿ: ಶ್ರೀಕೃಷ್ಣನು ಆಶೀರ್ವದಿಸಿದ ಮತ್ತು ಶಾಶ್ವತವಾದ ಬೆಂಕಿ

ದಾರಿ ಹೇಗೆ?

ಮೈಸೂರಿಂದ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಂತೋಡು ಎಂಬ ಗ್ರಾಮವಿದೆ. ಅಲ್ಲಿಂದ ಎಡಕ್ಕೆ 6.5 ಕಿಮೀ ದೂರದಲ್ಲಿ ತೊಡಿಕಾನ ಮಲ್ಲಿಕಾರ್ಜುನ ಸ್ವಾಮಿ ಮಂದಿರವಿದ್ದು, ಸ್ಥಳೀಯ ವಾಹನಗಳ ಮೂಲಕ ತಲುಪಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ