ಉತ್ತರಾಖಂಡದಲ್ಲಿ ಸಾಹಸ ಪ್ರವಾಸೋದ್ಯಮಕ್ಕೆ ಉತ್ತೇಜನ
ರಾಜ್ಯ ಸರಕಾರದ ಈ ನಿರ್ಧಾರದಿಂದ ಭಾರತೀಯ ಪರ್ವತಾರೋಹಿಗಳಿಗೆ ಶಿಬಿರ ಶುಲ್ಕ, ಪರಿಸರ ಶುಲ್ಕ ಮತ್ತು ಇತರ ಅನುಮತಿ ಶುಲ್ಕಗಳನ್ನು ಪಾವತಿಸುವ ಅಗತ್ಯವಿರುವುದಿಲ್ಲ. ವಿದೇಶಿ ಪರ್ವತಾರೋಹಿಗಳು ಮಾತ್ರ ಭಾರತೀಯ ಪರ್ವತಾರೋಹಣ ಫೌಂಡೇಶನ್ (Indian Mountaineering Foundation – IMF) ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ರಾಜ್ಯ ಮಟ್ಟದಲ್ಲಿ ವಿಧಿಸಲಾಗುತ್ತಿದ್ದ ಹೆಚ್ಚುವರಿ ಶುಲ್ಕಗಳನ್ನು ರದ್ದುಗೊಳಿಸಲಾಗಿದೆ.
ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಉತ್ತರಾಖಂಡ ಸರಕಾರವು ರಾಜ್ಯದ ಗರ್ವಾಲ್ ಮತ್ತು ಕುಮಾವೂನ್ ಪ್ರದೇಶಗಳಲ್ಲಿನ 83 ಪ್ರಮುಖ ಹಿಮಾಲಯ ಶಿಖರಗಳನ್ನು ಪರ್ವತಾರೋಹಿಗಳಿಗೆ ತೆರೆಯಲು ನಿರ್ಧರಿಸಿದೆ. ಇದರೊಂದಿಗೆ ಭಾರತೀಯ ಪರ್ವತಾರೋಹಿಗಳಿಗೆ ವಿಧಿಸಲಾಗುತ್ತಿದ್ದ ಎಕ್ಸ್‌ಪಿಡಿಷನ್ ಶುಲ್ಕಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ.
ರಾಜ್ಯ ಸರಕಾರದ ಈ ನಿರ್ಧಾರದಿಂದ ಭಾರತೀಯ ಪರ್ವತಾರೋಹಿಗಳಿಗೆ ಶಿಬಿರ ಶುಲ್ಕ, ಪರಿಸರ ಶುಲ್ಕ ಮತ್ತು ಇತರ ಅನುಮತಿ ಶುಲ್ಕಗಳನ್ನು ಪಾವತಿಸುವ ಅಗತ್ಯವಿರುವುದಿಲ್ಲ. ವಿದೇಶಿ ಪರ್ವತಾರೋಹಿಗಳು ಮಾತ್ರ ಭಾರತೀಯ ಪರ್ವತಾರೋಹಣ ಫೌಂಡೇಶನ್ (Indian Mountaineering Foundation – IMF) ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ರಾಜ್ಯ ಮಟ್ಟದಲ್ಲಿ ವಿಧಿಸಲಾಗುತ್ತಿದ್ದ ಹೆಚ್ಚುವರಿ ಶುಲ್ಕಗಳನ್ನು ರದ್ದುಗೊಳಿಸಲಾಗಿದೆ.

ಪರ್ವತಾರೋಹಣಕ್ಕೆ ಸಂಬಂಧಿಸಿದ ಎಲ್ಲಾ ಅನುಮತಿಗಳನ್ನು ಈಗ ‘ಉತ್ತರಾಖಂಡ ಮೌಂಟೇನಿಯರಿಂಗ್ ಪರ್ಮಿಷನ್ ಸಿಸ್ಟಮ್’ (UKMPS) ಎಂಬ ಆನ್‌ಲೈನ್ ಪೋರ್ಟಲ್ ಮೂಲಕ ಪಡೆಯಬಹುದಾಗಿದೆ. ಇದರಿಂದ ಅನುಮತಿ ಪ್ರಕ್ರಿಯೆ ಹೆಚ್ಚು ಪಾರದರ್ಶಕ ಹಾಗೂ ಸುಲಭವಾಗಲಿದೆ ಎಂದು ಸರಕಾರ ತಿಳಿಸಿದೆ.
ಈ ಪಟ್ಟಿಯಲ್ಲಿ ಕಾಮೇಟ್, ನಂದಾ ದೇವಿ ಈಸ್ಟ್, ತೃಷುಲ್, ಶಿವ್ಲಿಂಗ್, ಚೌಖಂಬಾ ಸಮೂಹ, ಚಾಂಗಾಬಾಂಗ್ ಮತ್ತು ಪಂಚಾಚುಳಿ ಸೇರಿದಂತೆ ಹಲವು ಪ್ರಸಿದ್ಧ ಶಿಖರಗಳು ಸೇರಿವೆ.
ಕೋವಿಡ್ ನಂತರ ಕುಸಿತ ಕಂಡಿದ್ದ ಸಾಹಸ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸುವುದು, ಯುವ ಪರ್ವತಾರೋಹಿಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು ಹಾಗೂ ಪರ್ವತ ಪ್ರದೇಶಗಳಲ್ಲಿನ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ.
ರಾಜ್ಯ ಸರಕಾರದ ಈ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಉತ್ತರಾಖಂಡವು ದೇಶೀಯ ಮತ್ತು ಅಂತಾರಾಷ್ಟ್ರೀಯ ಪರ್ವತಾರೋಹಿಗಳ ಪ್ರಮುಖ ಕೇಂದ್ರವಾಗಿ ಬೆಳೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.