Thursday, August 6, 2026
Thursday, August 6, 2026

ಎರಡು ವಿಸ್ಮಯ ಗಡಿಯಾರಗಳು!

ಬರ್ಲಿನ್‌ ನಗರದ ಪ್ರಸಿದ್ಧ ವಿಹಾರ ತಾಣ ‘ಅಲೆಕ್ಸಾಂಡರ್ ಪ್ಲಾಟ್ಸ್’ಗೆ ಕಾಲಿಟ್ಟರೆ, ಅಲ್ಲಿನ ಹೆಗ್ಗುರುತಾಗಿ ನಿಂತಿರುವುದೇ ‘ಜಾಗತಿಕ ಗಡಿಯಾರ’. ಗಡಿಯಾರದ ಮಧ್ಯಭಾಗದಲ್ಲಿರುವ 24 ಮೂಲೆಗಳ ಬೃಹತ್ ಸಿಲಿಂಡರ್‌, ಭೂಮಿಯ 24 ಪ್ರಮುಖ ಕಾಲ ವಲಯಗಳನ್ನು ಪ್ರತಿನಿಧಿಸುತ್ತದೆ. ಈ ಸಿಲಿಂಡರ್‌ನ ಅಲ್ಯೂಮಿನಿಯಂ ಪ್ಲೇಟ್‌ಗಳ ಮೇಲೆ ಭಾರತವನ್ನೂ ಒಳಗೊಂಡಂತೆ ವಿಶ್ವದ 148 ಪ್ರಮುಖ ನಗರಗಳ ಹೆಸರುಗಳನ್ನು ಕೆತ್ತಲಾಗಿದೆ. ನಗರಗಳ ಹೆಸರುಗಳಿರುವ ಈ ಹೊರಗಿನ ಬೃಹತ್ ಸಿಲಿಂಡರ್ ಸ್ಥಿರವಾಗಿರುತ್ತದೆ!

  • ಜ್ಯೋತಿ ಪ್ರಸಾದ್

ಜರ್ಮನಿಯ ರಾಜಧಾನಿ ಬರ್ಲಿನ್ - ಇತಿಹಾಸ, ಕಲೆ ಮತ್ತು ತಂತ್ರಜ್ಞಾನದ ಅದ್ಭುತಗಳ ಸಂಗಮ. ಒಂದು ಕಾಲದಲ್ಲಿ ಪೂರ್ವ ಮತ್ತು ಪಶ್ಚಿಮ ಬರ್ಲಿನ್ ಎಂದು ವಿಭಜನೆಯಾಗಿದ್ದ ಈ ನಗರ, ತನ್ನ ಒಡಲಿನಲ್ಲಿ ಹತ್ತು ಹಲವು ಕೌತುಕಗಳನ್ನು ಬಚ್ಚಿಟ್ಟುಕೊಂಡಿದೆ. ಪ್ರಪಂಚದಾದ್ಯಂತದ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಬರ್ಲಿನ್‌ನ ಪ್ರಮುಖ ಆಕರ್ಷಣೆಗಳಲ್ಲಿ ಅಲ್ಲಿನ ಎರಡು ವಿಶಿಷ್ಟ ಗಡಿಯಾರಗಳು ಅತ್ಯಂತ ಪ್ರಮುಖವಾದವು. ಮುಳ್ಳುಗಳಿಲ್ಲದೆ, ಹರಿಯುವ ದ್ರವದ ಮೂಲಕ ಸಮಯ ತೋರುವ ಗಡಿಯಾರ ಒಂದಾದರೆ, ಇಡೀ ಜಗತ್ತಿನ ಸಮಯವನ್ನು ಏಕಕಾಲದಲ್ಲಿ ಅಂಗೈಯಲ್ಲಿಡುವ ಜಾಗತಿಕ ಗಡಿಯಾರ ಮತ್ತೊಂದು! ಪ್ರವಾಸಿಗರು ಖಂಡಿತವಾಗಿಯೂ ನೋಡಲೇಬೇಕಾದ ಆ ಎರಡು ಕೌತುಕಗಳ ಸಚಿತ್ರ ವಿವರ ಇಲ್ಲಿದೆ:

ಯುರೋಪ್‌ ಸೆಂಟರ್‌ನ ‘ದ್ರವ ಗಡಿಯಾರ’

ಪಶ್ಚಿಮ ಬರ್ಲಿನ್‌ನ ಗಿಜಿಗುಡುವ ವಾಣಿಜ್ಯ ಪ್ರದೇಶದಲ್ಲಿರುವ ‘ಯುರೋಪ್‌ ಸೆಂಟರ್’ ಶಾಪಿಂಗ್ ಮಾಲ್ ಪ್ರವೇಶಿಸುತ್ತಿದ್ದಂತೆ ಪ್ರವಾಸಿಗರ ಗಮನ ಸೆಳೆಯುವುದು ಅಲ್ಲಿನ ಬೃಹತ್ ದ್ರವ ಗಡಿಯಾರ. ಏಕೆಂದರೆ ದ್ರವವೇ ಇಲ್ಲಿ ಸಮಯದ ಮುಳ್ಳು!

ಇದನ್ನೂ ಓದಿ: ಓಸಾಕಾದಲ್ಲಿ ಪೇಚಾಟದ ಪ್ರಸಂಗ

ಫ್ರೆಂಚ್ ಕಲಾವಿದ ಹಾಗೂ ಭೌತವಿಜ್ಞಾನಿ ಬರ್ನಾರ್ಡ್ ಗಿಟನ್ ಅವರು ವಿನ್ಯಾಸಗೊಳಿಸಿದ ಈ ಗಡಿಯಾರ 1982 ರಲ್ಲಿ ಲೋಕಾರ್ಪಣೆಯಾಯಿತು. 43 ಅಡಿ ಎತ್ತರವಿರುವ ಈ ಬೃಹತ್ ರಚನೆಯು ಮಾಲ್‌ನ ಮೂರು ಮಹಡಿಗಳಷ್ಟು ವ್ಯಾಪಿಸಿದೆ. ಈ ಗಡಿಯಾರದಲ್ಲಿ ಸಮಯ ತೋರಿಸಲು ಯಾವುದೇ ಸಾಂಪ್ರದಾಯಿಕ ಮುಳ್ಳುಗಳಾಗಲಿ ಅಥವಾ ಡಿಜಿಟಲ್ ಅಂಕಿಗಳಾಗಲಿ ಇಲ್ಲ! ಬದಲಾಗಿ, ಗಾಜಿನ ಕೊಳವೆಗಳು ಮತ್ತು ಗೋಳಗಳಲ್ಲಿ ಹರಿಯುವ ತಿಳಿ ಹಸಿರು ಬಣ್ಣದ ದ್ರವವೇ ಇಲ್ಲಿ ಸಮಯವನ್ನು ನಿರ್ಣಯಿಸುತ್ತದೆ. ಇದರ ಕೆಳಭಾಗದಲ್ಲಿ ನಿರಂತರವಾಗಿ ತೂಗಾಡುವ ಬೃಹತ್ ಪೆಂಡ್ಯುಲಮ್ ಇಡೀ ವ್ಯವಸ್ಥೆಯ ದ್ರವದ ಹರಿವನ್ನು ನಿಯಂತ್ರಿಸುತ್ತದೆ.

Untitled design - 2026-08-06T124731.647

ಈ ವಿಶೇಷ ಗಡಿಯಾರದಲ್ಲಿ ಸಮಯ ನೋಡುವುದು ಪ್ರವಾಸಿಗರಿಗೆ ಒಂದು ಮೋಜಿನ ಅನುಭವ. ಗಡಿಯಾರದ ಎಡಭಾಗದಲ್ಲಿ ಸಾಲಾಗಿರುವ 30 ಸಣ್ಣ ಗಾಜಿನ ಗೋಳಗಳು ನಿಮಿಷಗಳನ್ನು ಸೂಚಿಸುತ್ತವೆ. ಬಲಭಾಗದಲ್ಲಿರುವ 12 ದೊಡ್ಡ ಗಾಜಿನ ಗೋಳಗಳು ಗಂಟೆಗಳನ್ನು ಪ್ರತಿನಿಧಿಸುತ್ತವೆ.

ಈ ದ್ರವ ಗಡಿಯಾರದ ಕೌತುಕ ಅಡಗಿರುವುದೇ ಅದರ ಎಡ ಮತ್ತು ಬಲ ಬದಿಗಳ ನಡುವಿನ ತಾಂತ್ರಿಕ ಸಮನ್ವಯತೆಯಲ್ಲಿ. ಎಡಭಾಗದಲ್ಲಿರುವ ಸಣ್ಣ ಗಾಜಿನ ಗೋಳಗಳು ಪ್ರತಿ ಎರಡು ನಿಮಿಷಕ್ಕೆ ಒಂದರಂತೆ ತುಂಬುತ್ತಾ ಸಾಗುತ್ತವೆ. ಹೀಗೆ ನಿಖರವಾಗಿ 60 ನಿಮಿಷಗಳು ತುಂಬಿದಾಗ, ಅಂದರೆ ಎಡಭಾಗದ ಎಲ್ಲಾ 30 ಸಣ್ಣ ಗೋಳಗಳು ದ್ರವದಿಂದ ಸಂಪೂರ್ಣವಾಗಿ ಭರ್ತಿಯಾದ ತಕ್ಷಣ, ಅಲ್ಲಿ ವಿಜ್ಞಾನದ ಚಮತ್ಕಾರವೊಂದು ನಡೆಯುತ್ತದೆ. ಭೌತವಿಜ್ಞಾನದ ‘ಸೈಫನ್ ತತ್ತ್ವದ ಅನುಸಾರ, ಎಡಭಾಗದಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ ದ್ರವದ ಒತ್ತಡವು ಒಂದು ಹನಿ ಕೂಡ ಹೊರಚೆಲ್ಲದಂತೆ ಸ್ವಯಂಚಾಲಿತವಾಗಿ ಬಲಭಾಗದ ಒಂದೇ ಒಂದು ದೊಡ್ಡ ಗೋಳಕ್ಕೆ ವರ್ಗಾವಣೆಯಾಗುತ್ತದೆ. ಅಂದರೆ, ಎಡಭಾಗದ 60 ನಿಮಿಷಗಳ ದ್ರವವು ಖಾಲಿಯಾಗಿ ಬಲಭಾಗದ 1 ಗಂಟೆಯ ದೊಡ್ಡ ಗೋಳವನ್ನು ತುಂಬಿಸುತ್ತದೆ!

ಇದೇ ಪ್ರಕ್ರಿಯೆ ಪ್ರತಿ ಗಂಟೆಗೂ ಮರುಕಳಿಸುತ್ತದೆ. ಅತ್ಯಂತ ರೋಮಾಂಚಕ ಕ್ಷಣ ಬರುವುದು ಮಧ್ಯಾಹ್ನ 12 ಮತ್ತು ಮಧ್ಯರಾತ್ರಿ 12 ಗಂಟೆಗೆ! ಆ ನಿರ್ದಿಷ್ಟ ಸಮಯದಲ್ಲಿ ಇಡೀ ವ್ಯವಸ್ಥೆಯಲ್ಲಿ ತುಂಬಿರುವ ದ್ರವವೆಲ್ಲವೂ ಒಮ್ಮೆಲೇ ಖಾಲಿಯಾಗಿ ಕೆಳಗಿನ ಜಲಾನಯನಕ್ಕೆ ಧುಮುಕುತ್ತದೆ. ಗಡಿಯಾರ ಮತ್ತೆ ಶೂನ್ಯದಿಂದ ತುಂಬಲು ಆರಂಭಿಸುವ ಈ ದೃಶ್ಯವನ್ನು ಕ್ಯಾಮೆರಾ/ಕಣ್ಣಿನಲ್ಲಿ ಸೆರೆಹಿಡಿಯಲೆಂದೇ ಪ್ರವಾಸಿಗರು ಇಲ್ಲಿ ಗಂಟಗಟ್ಟಲೆ ಕಾಯುತ್ತಾರೆ. ಕಣ್ಣಿಗೆ ಕಲೆಯಂತೆ ಕಾಣುವ ಈ ವ್ಯವಸ್ಥೆಯ ಹಿಂದೆ ಭೌತವಿಜ್ಞಾನದ ಅತ್ಯಂತ ನಿಖರವಾದ ‘ಹೈಡ್ರೋಲಿಕ್ಸ್ ‘ಲೆಕ್ಕಾಚಾರ ಅಡಗಿದೆ ಎಂಬುದು ಪ್ರವಾಸಿಗರ ವಿಸ್ಮಯವನ್ನು ಇಮ್ಮಡಿಗೊಳಿಸುತ್ತದೆ.

ಅಲೆಕ್ಸಾಂಡರ್ ಪ್ಲಾಟ್ಸ್‌ನ ‘ಜಾಗತಿಕ ಗಡಿಯಾರ’

ಬರ್ಲಿನ್‌ ನಗರದ ಪ್ರಸಿದ್ಧ ವಿಹಾರ ತಾಣ ‘ಅಲೆಕ್ಸಾಂಡರ್ ಪ್ಲಾಟ್ಸ್’ಗೆ ಕಾಲಿಟ್ಟರೆ, ಅಲ್ಲಿನ ಹೆಗ್ಗುರುತಾಗಿ ನಿಂತಿರುವುದೇ ‘ಜಾಗತಿಕ ಗಡಿಯಾರ’ ಅಥವಾ ʻಗ್ಲೋಬಲ್ ಕ್ಲಾಕ್ʼ. ಅಂದಿನ ಪೂರ್ವ ಜರ್ಮನಿ ಸರಕಾರವು ಇದನ್ನು 1969ರ ಸೆಪ್ಟೆಂಬರ್ 30 ರಂದು ಸ್ಥಾಪಿಸಿತು. ಹೆಸರಾಂತ ವಿನ್ಯಾಸಕ ಎರಿಕ್ ಜಾನ್ ಅವರ ಕಲ್ಪನೆಯಲ್ಲಿ ಮೂಡಿದ ಈ ಗಡಿಯಾರ ಅಂದಿನ ಆಧುನಿಕ ವಾಸ್ತುಶಿಲ್ಪಕ್ಕೆ ಹಿಡಿದ ಕೈಗನ್ನಡಿ. ಈ ‘ಜಾಗತಿಕ ಗಡಿಯಾರ’ವು ಇಂಜಿನಿಯರಿಂಗ್ ಮತ್ತು ಕಲೆಯ ಅದ್ಭುತ ಸಂಗಮ. ಸುಮಾರು 10 ಮೀಟರ್ ಎತ್ತರ ಹಾಗೂ 16 ಟನ್ ತೂಕದ ಈ ಬೃಹತ್ ಲೋಹದ ಗೋಪುರವು ನಿಂತಿರುವ ನೆಲದ ಮೇಲೆ, ವಿವಿಧ ಬಣ್ಣದ ಕಲ್ಲು ಮತ್ತು ಮಾರ್ಬಲ್ ತುಣುಕುಗಳನ್ನು ಜೋಡಿಸಿ ಕಲಾತ್ಮಕವಾದ ‘ದಿಕ್ಸೂಚಿ ನಕ್ಷತ್ರ’ದ (Wind Rose Mosaic) ವಿನ್ಯಾಸವನ್ನು ಬಿಡಿಸಲಾಗಿದೆ. ಜಗತ್ತಿನ ಪ್ರಮುಖ ದಿಕ್ಕುಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವ ಈ ನೆಲದ ವಿನ್ಯಾಸವು, ಗಡಿಯಾರವನ್ನು ವೀಕ್ಷಿಸುವ ಪ್ರವಾಸಿಗರಿಗೆ ವಿಶ್ವದ ಭೌಗೋಳಿಕ ಕಲ್ಪನೆಯನ್ನು ನೀಡುತ್ತದೆ.

148 ನಗರಗಳ ಕಾಲಮಾನದ ವಿಸ್ಮಯ

ಗಡಿಯಾರದ ಮಧ್ಯಭಾಗದಲ್ಲಿರುವ 24 ಮೂಲೆಗಳ ಬೃಹತ್ ಸಿಲಿಂಡರ್‌, ಭೂಮಿಯ 24 ಪ್ರಮುಖ ಕಾಲ ವಲಯಗಳನ್ನು ಪ್ರತಿನಿಧಿಸುತ್ತದೆ. ಈ ಸಿಲಿಂಡರ್‌ನ ಅಲ್ಯೂಮಿನಿಯಂ ಪ್ಲೇಟ್‌ಗಳ ಮೇಲೆ ಭಾರತವನ್ನೂ ಒಳಗೊಂಡಂತೆ ವಿಶ್ವದ 148 ಪ್ರಮುಖ ನಗರಗಳ ಹೆಸರುಗಳನ್ನು ಕೆತ್ತಲಾಗಿದೆ. (ಉದಾಹರಣೆಗೆ: ನ್ಯೂಯಾರ್ಕ್, ಲಂಡನ್, ಟೋಕಿಯೋ, ನವದೆಹಲಿ ಇತ್ಯಾದಿ). ನಗರಗಳ ಹೆಸರುಗಳಿರುವ ಈ ಹೊರಗಿನ ಬೃಹತ್ ಸಿಲಿಂಡರ್ ಚಲಿಸುವುದಿಲ್ಲ, ಅದು ಸ್ಥಿರವಾಗಿರುತ್ತದೆ! ಆದರೆ, ಗಡಿಯಾರದ ಒಳಗಿರುವ ಗಂಟೆಯ ಚಕ್ರವು ನಿರಂತರವಾಗಿ ತಿರುಗುತ್ತಾ, ಆಯಾ ಕಾಲ ವಲಯಕ್ಕೆ ತಕ್ಕಂತೆ ಜಗತ್ತಿನ ವಿವಿಧ ಮೂಲೆಗಳಲ್ಲಿ ಈಗ ಎಷ್ಟು ಸಮಯ ಎಂದು ನಿಖರವಾಗಿ ತೋರಿಸುತ್ತದೆ. ಈ ಬೃಹತ್ ಜಾಗತಿಕ ಗಡಿಯಾರವು ನಿರಂತರವಾಗಿ ಚಲಿಸಲು ಅಡಗಿರುವ ಆ ತಾಂತ್ರಿಕ ರಹಸ್ಯವೇನು ಎಂಬುದನ್ನು ನೀವು ಅಲ್ಲಿಗೆ ಭೇಟಿ ನೀಡಿಯೇ ಕಂಡುಕೊಳ್ಳಬೇಕು!

Untitled design - 2026-08-06T124742.594

ಗಡಿಯಾರದ ಮೇಲ್ಭಾಗದಲ್ಲಿ ಸೌರಮಂಡಲದ ಮಾದರಿಯನ್ನು ಹೋಲುವ ಉಕ್ಕಿನ ಉಂಗುರಗಳು ಮತ್ತು ಗ್ರಹಗಳ ಮಾದರಿಯ ಗೋಳಗಳಿದ್ದು, ಇವು ಪ್ರತಿ ನಿಮಿಷಕ್ಕೊಮ್ಮೆ ಕಲಾತ್ಮಕವಾಗಿ ಸುತ್ತುತ್ತವೆ. ಈ ಇಡೀ ಗಡಿಯಾರದ ಚಾಲನೆಗೆ ಜರ್ಮನಿಯ ಪ್ರಸಿದ್ಧ 'ಟ್ರಾಬಂಟ್' ಕಾರಿನ ಗೇರ್‌ಬಾಕ್ಸ್ ಮೋಟಾರ್ ಬಳಸಲಾಗುತ್ತಂತೆ! 1997ರಲ್ಲಿ ಇದನ್ನು ಸಂಪೂರ್ಣವಾಗಿ ಆಧುನೀಕರಿಸಲಾಗಿದೆ. ಈ ಗಡಿಯಾರವಿರುವ ಸುಂದರ ‘ಅಲೆಕ್ಸಾಂಡರ್ ಪ್ಲಾಟ್ಸ್’ ಬರ್ಲಿನ್‌ನ ಜನರಿಗೆ ಹಾಗೂ ಪ್ರವಾಸಿಗರಿಗೆ ಅತ್ಯಂತ ಪ್ರೀತಿಯ ‘ಮೀಟಿಂಗ್ ಪಾಯಿಂಟ್’ ಆಗಿದೆ. ನಿಮ್ಮ ಮುಂದಿನ ಬರ್ಲಿನ್ ಪ್ರವಾಸದ ಲಿಸ್ಟ್‌ನಲ್ಲಿ ಈ 'ಟೈಮ್ ಟ್ರಾವೆಲ್' ತಾಣಗಳಿರಲಿ!

ಸಲಹೆ ಸೂಚನೆ:

‘ಯುರೋಪ್‌ ಸೆಂಟರ್‌ʼನ ದ್ರವ ಗಡಿಯಾರದ ಸೌಂದರ್ಯವನ್ನು ಸವಿಯಲು ಮಾಲ್‌ನ ಒಳಗಿನ ಕೆಫೆಯೊಂದರಲ್ಲಿ ಕುಳಿತು ಸಮಯ ಕಳೆಯಬಹುದು.

ಅಲೆಕ್ಸಾಂಡರ್ ಪ್ಲಾಟ್ಸ್‌ನ ಮುಕ್ತ ಚೌಕದಲ್ಲಿ, ಜಾಗತಿಕ ಗಡಿಯಾರದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಬರ್ಲಿನ್ ಪ್ರವಾಸದ ಅತ್ಯಮೂಲ್ಯ ನೆನಪಾಗಿ ಉಳಿಯುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...