Wednesday, August 5, 2026
Wednesday, August 5, 2026

ಓಸಾಕಾದಲ್ಲಿ ಪೇಚಾಟದ ಪ್ರಸಂಗ

ನಮ್ಮ ಹೊಟೇಲ್ ರೂಂ ಚೆಕ್- ಔಟ್ ಟೈಮ್ ಆಗಿತ್ತು. ಹೊಟೇಲ್ ಮ್ಯಾನೇಜರ್ ನಮ್ಮ ಲಗೇಜನ್ನು ಒತ್ತಾಯದಿಂದ ಹೊಟೇಲ್ ಹೊರಗೆ ತಂದಿಟ್ಟಿದ್ದರಂತೆ. ನಾವು ಸಿಲುಕಿಕೊಂಡಿರುವ ಪೇಚಿನ ಪ್ರಸಂಗವನ್ನು ತಿಳಿಸಿ ಹೇಳಿದರೂ ಹೊಟೇಲ್ ಮ್ಯಾನೇಜರ್ ಕೇಳದೇ ನಮ್ಮ ರೂಮನ್ನು ಬೇರೆಯವರಿಗೆ ಕೊಟ್ಟು ಬಿಟ್ಟಿದ್ದರಂತೆ. ಎರಡು ದೊಡ್ಡ ಸೂಟ್‌ಕೇಸ್‌ಗಳು, ಸ್ಟ್ರಾಲರ್‌ನಲ್ಲಿನ ನಮ್ಮ ಪುಟ್ಟ ಮಗು, ಕೈಯಲ್ಲಿ ಸಣ್ಣ ಬ್ಯಾಗುಗಳು ಹಿಡಿದ ನನ್ನ ಗಂಡನಿಗೆ ಏನು ಮಾಡಬೇಕೆಂದು ತೋಚದೇ ಬ್ಯಾಗುಗಳನ್ನು ಹೊಟೇಲ್ ಒಳಗೆ ಇಟ್ಟುಕೊಳ್ಳಲು ಅಂಗಲಾಚಿದರೂ ಅವರು ಇಟ್ಟುಕೊಳ್ಳಲಿಲ್ಲವಂತೆ.

  • ರೂಪಿಕಾ ವಾದಿರಾಜ್

ಈ ವರ್ಷದ ಜನವರಿಯಲ್ಲಿ ನಾನು, ನನ್ನ ಗಂಡ ವಾದಿರಾಜ್ ಹಾಗೂ ನಮ್ಮ ಎರಡು ವರ್ಷದ ಮಗು ರೇಯಾಂಶಿ ಮೊದಲ ಬಾರಿಗೆ ಜಪಾನ್ ಭೇಟಿ ನೀಡಿದ್ದೆವು. ಅದು 9 ದಿನಗಳ ಪ್ರವಾಸ. ಆರು ದಿನಗಳು ತುಂಬಾ ಹರ್ಷೋಲ್ಲಾಸದಿಂದ ಕಳೆದವು. ಏಳನೆಯ ದಿನ ನಾವು ಓಕಾಸಾ ನಗರದ ಕಿಶಿನೊಸ್ಯಾಟೊದಲ್ಲಿದ್ದ ಹೊಟೇಲ್ ಒಂದರಲ್ಲಿ ಇಳಿದುಕೊಂಡಿದ್ದೆವು. ನಾನು ರಾಮೆನ್ ಕುಕಿಂಗ್ ಕ್ಲಾಸ್‍ಗೆ ಸೇರಿ ಜಪಾನಿ ಅಡುಗೆಯನ್ನು ಕಲಿಯಲು ಪ್ರೈವೇಟ್ ಕ್ಲಾಸ್ ಒಂದನ್ನು ಬುಕ್ ಮಾಡಿಕೊಂಡೆ. ನನ್ನ ಕ್ಲಾಸ್ ಓಕಾಸಾ ನಗರದ ಡೊಟೆನ್‍ಬೊರಿಯಲ್ಲಿತ್ತು. ಅದು ತುಂಬಾ ಜನನಿಬಿಡ ಹಾಗೂ ವ್ಯಾಪಾರಿ ಸ್ಥಳ.

ಇದನ್ನೂ ಓದಿ: ರೀಲ್ಸ್‌ಗಳಾಚೆಗೂ ಒಂದು ಸುಂದರ ಪ್ರವಾಸಿ ಪ್ರಪಂಚವಿದೆ

ಕ್ಲಾಸ್‍ಗೆ ನಾನು ಮಗುವನ್ನು ಕರೆದೊಯ್ಯುವಂತಿರಲಿಲ್ಲ. ಅಂದು ನಮ್ಮ ರೂಮ್ ಚೆಕ್- ಔಟ್ ಮಾಡಿ ರಾತ್ರಿ ಟೋಕಿಯೊಗೆ ಹೋಗಬೇಕಿತ್ತು. ನನ್ನ ಗಂಡ ಮಗುವನ್ನು ನೋಡಿಕೊಂಡು ಪ್ಯಾಕಿಂಗ್ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಅದು ಬೆಳಗಿನ ಹೊತ್ತು. ನಾನು ತುಂಬಾ ಅವಸರದಲ್ಲಿದ್ದೆ. ಮುಂದಿನ ಪ್ರವಾಸದ ತಯಾರಿ ಮಾಡಿಕೊಳ್ಳಬೇಕಿತ್ತು. ನಾನು ಹೋಗಬೇಕಾದ ಸ್ಥಳಕ್ಕೆ ಮೆಟ್ರೋ ಬದಲಿಸಿ ಹೋಗಬೇಕಾದ ಅವಶ್ಯಕತೆ ಇತ್ತು. ರಗಳೆ ಬೇಡವೆಂದು ಕ್ಯಾಬ್ ಬುಕ್ ಮಾಡಿಕೊಂಡೆ. ಆದರೆ ನನ್ನ ಹತ್ತಿರ ದುಡ್ಡು ಇರಲಿಲ್ಲ. ನನ್ನ ವ್ಯಾನಿಟಿ ಬ್ಯಾಗ್‍ಗೆ 10 ಸಾವಿರ ಯೆನ್ ಹಾಕಲು ಯಜಮಾನರನ್ನು ಕೋರಿದೆ. ಅವರು ಹೂಂ ಎಂದರು. ನಾನು ಕ್ಯಾಬ್ ಏರಿ ಡೊಟೆನ್‍ಬೊರಿಗೆ ಹೊರಟೆ.

ಕ್ಯಾಬ್ ಬಾಡಿಗೆ ಎರಡೂವರೆ ಸಾವಿರ ಯೆನ್‍ಗಳಾಗಿತ್ತು. ವ್ಯಾನಿಟಿ ಬ್ಯಾಗ್ ತೆರೆದು ಡುಡ್ಡು ಕೊಡಲು ಹೋದಾಗ ಎದೆ ಡಸಕ್ಕೆಂದಿತ್ತು. ಬ್ಯಾಗ್‍ನಲ್ಲಿದ್ದುದ್ದು ಕೇವಲ ಒಂದು ಸಾವಿರ! ನನ್ನ ಯಜಮಾನರು ಹತ್ತು ಸಾವಿರದ ಬದಲು ಬ್ಯಾಗ್‍ನಲ್ಲಿ ಕೇವಲ ಒಂದು ಸಾವಿರ ಯೆನ್ ಹಾಕಿದ್ದರು. ನಾನೂ ಚೆಕ್ ಮಾಡಿಕೊಂಡಿರಲಿಲ್ಲ. ನನಗೆ ಜಪಾನಿ ಭಾಷೆ ಬರುವುದಿಲ್ಲ. ಕ್ಯಾಬ್ ಡ್ರೈವರಗೆ ಇಂಗ್ಲೀಷ್ ಬರುವುದಿಲ್ಲ. ಮೊಬೈಲ್ ಟ್ರಾನ್ಸಲೇಟರ್ ಬಳಸಿ ಅವನು ನನ್ನ ಕ್ಲಾಸ್ ಒಳಗೆ ಬರುವಂತೆ ವಿನಂತಿಸಿಕೊಂಡೆ. ಅವನು ಸ್ವಲ್ಪ ಸಿಟ್ಟಾದರೂ ಕ್ಲಾಸ್ ಒಳಗೆ ಬರಲು ಒಪ್ಪಿಕೊಂಡ. ಕುಕಿಂಗ್ ಕ್ಲಾಸ್ ಶೆಫ್‍ಗೆ ನನ್ನ ಫಜೀತಿ ಹೇಳಿಕೊಂಡೆ. ಸಮಸ್ಯೆಯನ್ನು ಅರ್ಥ ಮಾಡಿಕೊಂಡ ಅವನು ತಕ್ಷಣ ಡ್ರೈವರ್‌ಗೆ ದುಡ್ಡು ಕೊಟ್ಟು ಕಳಿಸಿದ. ನಾನು ಶೆಫ್‍ಗೆ ಕೃತಜ್ಞತೆ ಹೇಳಿದೆ.

ಫಜೀತಿ ಪ್ರಸಂಗ

ನನ್ನ ಗಂಡನಿಗೆ ಫೋನ್ ಮಾಡಿ ಸಮಸ್ಯೆಯನ್ನು ತಿಳಿಸಿದೆ. ತಕ್ಷಣ ಕುಕಿಂಗ್ ಕ್ಲಾಸ್ ಶೆಫ್ ಅಕೌಂಟ್‌ಗೆ ದುಡ್ಡು ವರ್ಗಾಯಿಸಲು ತಿಳಿಸಿ ಈ ವಿಷಯವನ್ನು ಆತನಿಗೆ ತಿಳಿಸಿದೆ. ಆದರೆ ಆನ್‌ಲೈನ್‌ನಲ್ಲಿ ದುಡ್ಡು ಪಡೆಯಲು ಈ ಶೆಫ್ ಸುತಾರಾಂ ಒಪ್ಪಲಿಲ್ಲ. ನನಗೆ ಕ್ಯಾಶ್ ಬೇಕು ಎಂದು ಪಟ್ಟು ಹಿಡಿದ. ಮತ್ತೆ ನಾನು ಗಂಡ ವಾದಿರಾಜ್‍ಗೆ ಫೋನ್ ಮಾಡಿ ಖುದ್ದಾಗಿ ನಾನಿದ್ದಲ್ಲಿಗೆ ಬರಲು ತಿಳಿಸಿದೆ. ಆದರೆ ಅಲ್ಲಿ ಮತ್ತೊಂದು ಯಡವಟ್ಟಾಗಿತ್ತು. ನಮ್ಮ ಹೊಟೇಲ್ ರೂಂ ಚೆಕ್- ಔಟ್ ಟೈಮ್ ಆಗಿತ್ತು. ಹೊಟೇಲ್ ಮ್ಯಾನೇಜರ್ ನಮ್ಮ ಲಗೇಜನ್ನು ಒತ್ತಾಯದಿಂದ ಹೊಟೇಲ್ ಹೊರಗೆ ತಂದಿಟ್ಟಿದ್ದರಂತೆ. ನಾವು ಸಿಲುಕಿಕೊಂಡಿರುವ ಪೇಚಿನ ಪ್ರಸಂಗವನ್ನು ತಿಳಿಸಿ ಹೇಳಿದರೂ ಹೊಟೇಲ್ ಮ್ಯಾನೇಜರ್ ಕೇಳದೇ ನಮ್ಮ ರೂಮನ್ನು ಬೇರೆಯವರಿಗೆ ಕೊಟ್ಟು ಬಿಟ್ಟಿದ್ದರಂತೆ. ಎರಡು ದೊಡ್ಡ ಸೂಟ್‌ಕೇಸ್‌ಗಳು, ಸ್ಟ್ರಾಲರ್‌ನಲ್ಲಿನ ನಮ್ಮ ಪುಟ್ಟ ಮಗು, ಕೈಯಲ್ಲಿ ಸಣ್ಣ ಬ್ಯಾಗುಗಳು ಹಿಡಿದ ನನ್ನ ಗಂಡನಿಗೆ ಏನು ಮಾಡಬೇಕೆಂದು ತೋಚದೇ ಬ್ಯಾಗುಗಳನ್ನು ಹೊಟೇಲ್ ಒಳಗೆ ಇಟ್ಟುಕೊಳ್ಳಲು ಅಂಗಲಾಚಿದರೂ ಅವರು ಇಟ್ಟುಕೊಳ್ಳಲಿಲ್ಲವಂತೆ. ರಸ್ತೆಯಲ್ಲಿ ಅವರಿವರನ್ನು ವಿಚಾರಿಸಿದಾಗ ನಿಮ್ಮ ಲಗೇಜನ್ನು ರಸ್ತೆಯಲ್ಲೇ ಬಿಟ್ಟು ಹೋಗಿ ಇಲ್ಲಿ ಕಳ್ಳತನವಾಗುವುದಿಲ್ಲ ಎಂದು ಸಲಹೆ ನೀಡಿದರಂತೆ. ಕೊನೆಗೆ ದೇವರ ಮೇಲೆ ಭಾರ ಹಾಕಿ ಬ್ಯಾಗುಗಳನ್ನು ರಸ್ತೆಯಲ್ಲಿಯೇ ಬಿಟ್ಟು ಮಗುವನ್ನು ಕರೆದುಕೊಂಡು ಎರಡು ಮೆಟ್ರೋ ಬದಲಾಯಿಸಿ ಯಜಮಾನರು ನಾನಿದ್ದಲ್ಲಿಗೆ ಬಂದರು. ಶೆಫ್‌ಗೆ ಹಣ ನೀಡಿ ಮರಳಿ ಎರಡು ಮೆಟ್ರೊ ಬದಲಾಯಿಸಿ ನಮ್ಮ ಬ್ಯಾಗ್ ಇರುವ ಕಡೆ ಬಂದೆವು. ನಮ್ಮ ಪುಣ್ಯಕ್ಕೆ ನಮ್ಮ ಬ್ಯಾಗುಗಳು ಸುರಕ್ಷಿತವಾಗಿದ್ದವು! ಆದರೆ ನಾವು ಮರುದಿನ ತಲುಪಬೇಕಾಗಿದ್ದ ಟೊಕಿಯೊ ನಗರದ ಹೊಟೇಲ್ ಮೈಸ್ಟೇದಲ್ಲಿ ಮಾಡಿಕೊಂಡಿದ್ದ ರಿಸರ್ವೇಶನ್ ನಮ್ಮ ತಪ್ಪಿನಿಂದಾಗಿ ಕ್ಯಾನ್ಸಲ್ ಆಗಿತ್ತು. ದುಪ್ಪಟ್ಟು ಹಣ ಕೊಟ್ಟು ಬೇರೆ ಕಡೆ ಬುಕಿಂಗ್ ಮಾಡಿಕೊಂಡೆವು.

ಇದೊಂದು ತೊಂದರೆ ಎದುರಿಸಿದರೂ ನಮ್ಮ ಜಪಾನ್ ಪ್ರವಾಸ ತುಂಬಾ ಹೊಸ ಅನುಭವಗಳನ್ನು ಹೊತ್ತು ತಂದಿತ್ತು. ನಾವು ಯಾವುದೇ ಪ್ಯಾಕೇಜಿನಲ್ಲಿ ಹೋಗಿರಲಿಲ್ಲ. ಅನುಭವದ ಕೊರತೆಯಿಂದಾಗಿ ಸಮಸ್ಯೆ ಎದುರಿಸಬೇಕಾಯಿತು. ನನ್ನ ಮಗಳು ರೇಯಾ ಇಂದಿಗೂ ಜಪಾನ್ ಜಪಾನ್ ಎಂದು ನೆನಪಿಸಿಕೊಳ್ಳುತ್ತಾಳೆ. ಜಪಾನಿನ ಪೇಚಿನ ಪ್ರಸಂಗವು ಇಂದು ನಗೆ ತರಿಸುತ್ತದೆಯಾದರೂ ಆಗ ಗಾಬರಿಗೊಳಿಸಿತ್ತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...