Tuesday, November 3, 2026
Tuesday, November 3, 2026

Highway ಹಾದಿಯಲ್ಲಿ ನಿಮ್ಮ pitstop ಯಾವುದು?

ಹೈವೇ ಪ್ರಯಾಣವೆಂದರೆ ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುವುದಲ್ಲ, ಹಾದಿಯ ನಡುವೆ ಸಿಗುವ ಪುಟ್ಟ ವಿರಾಮಗಳೂ ಅದರ ಅವಿಭಾಜ್ಯ ಭಾಗ. ಎಳನೀರು, ಬಿಸಿಬಿಸಿ ಚಹಾ, ಸ್ಥಳೀಯ ಹಣ್ಣುಗಳ ಸವಿಯೊಂದಿಗೆ ಪ್ರಯಾಣಕ್ಕೆ ಹೊಸ ಹುರುಪು ನೀಡುವ ಈ ಪಿಟ್‌ಸ್ಟಾಪ್‌ಗಳ ಕಥೆಯೇ ಇಂದಿನ ಟ್ರಾವೆಲ್‌ ಡೀಪ್‌.

- ಬಡೆಕ್ಕಿಲ ಪ್ರದೀಪ್‌

ಕಳೆದ ವಾರ ದೂರ ಪ್ರಯಾಣದಲ್ಲಿ ಹಸಿವು ತಣಿಸುವ ಊಟದ ಮನೆಗಳ ಕಥೆ ನೋಡಿದೆವು. ಆದರೆ, ಈ ಬಾರಿಯ ಕಥೆ ಒಂದು ರೀತಿ ಹಾಗೇ ಇದ್ದರೂ, ಇವುಗಳ ಸ್ಟೈಲ್‌ ಸ್ವಲ್ಪ ಬೇರೆ. ಬನ್ನಿ ಒಂದು ಪಿಟ್‌ಸ್ಟಾಪ್‌ ತಗೊಂಡು ಬರೋಣ.

ಹೈವೇ ಪ್ರಯಾಣದಲ್ಲಿ ಬ್ರೇಕ್‌ ಸಿಗಬೇಕಂದ್ರೆ ಊಟಕ್ಕೋ, ತಿಂಡಿಗೋ ನಿಲ್ಲಬೇಕೆಂದಿಲ್ಲ. ಮನಸಿನ ಓಟಕ್ಕೆ ಒಂದು ಬ್ರೇಕ್‌ ಬೇಕಿದೆ ಅಂದರೆ, ಗಾಡಿಯ ಓಟಕ್ಕೆ ಬ್ರೇಕ್‌ ಬಿದ್ದೇ ಬೀಳುತ್ತದೆ. ಹಾಗೆ ನಿಲ್ಲುವ ಕಾರಣ ಒಬ್ಬೊಬ್ಬರಿಗೆ ಒಂದೊಂದು. ಆದರೆ ಮೂಲ ಉದ್ದೇಶ, ಒಂದು ಶಾರ್ಟ್‌ ಬ್ರೇಕ್‌, ಸ್ವಲ್ಪ ರಿಫ್ರೆಶ್‌ಮೆಂಟ್‌, ಮತ್ತು ಸ್ವಲ್ಪ ಮೈ-ಕೈ ರಿಲ್ಯಾಕ್ಸ್‌ ಮಾಡಿಕೊಳ್ಳುವ ಅವಕಾಶ.

ವೇಗದ ಯುಗದ ಎಕ್ಸ್‌ಪ್ರೆಸ್‌ವೇಗಳು ಸಾಗೋ ಹಾದಿಯ ಚಹರೆಯನ್ನೇ ಬದಲಾಯಿಸಿವೆ. ಅದಕ್ಕಿದ್ದ character ಅನ್ನೇ ನಿವಾಳಿಸಿ ತೆಗೆದುಬಿಟ್ಟಿವೆ. ಆದರೂ ಅಳಿದುಳಿದ ಕೆಲವೆಡೆಗಳಲ್ಲಿ ಚಿಗುರೊಡೆಯುವ ಪಿಟ್‌ಸ್ಟಾಪ್‌ಗಳು ದೂರ ಪ್ರಯಾಣಕ್ಕೆ ಒಂದು ಸಣ್ಣ ವಿರಾಮ ನೀಡುತ್ತವೆ, ಮತ್ತವು ಅನಿವಾರ್ಯವೂ ಹೌದು.
ಇದನ್ನೂ ಓದಿ: ಟ್ರಾವೆಲ್‌ ಡೀಪ್‌: ಮಾತು ಬೆಳ್ಳಿ, ಟ್ರಾವೆಲ್‌ ಬಂಗಾರ

ಒಂದು ಎಳನೀರು, ದೂರ ಸುಸ್ತು ನೂರು

ಒಂದೊಂದೂರಿನ ಎಳನೀರಿಗೆ ಒಂದೊಂದು ರುಚಿ. ಆದರೆ, ಅದು ತಣಿಸುವ ಬಾಯಾರಿಕೆ, ಕೊಡುವ ಎನರ್ಜಿ ನಮಗೆ ಮತ್ತೆ ಇನ್ನೂರು ಕಿಲೋಮೀಟರ್‌ ಓಡುವ ತಾಕತ್ತು ಕೊಡುತ್ತದೆ. ದಶಕಗಳ ಹಿಂದೆ ಹತ್ತೋ ಇಪ್ಪತ್ತೋ ರುಪಾಯಿಗೆ ಸಿಗುತ್ತಿದ್ದ ಎಳನೀರು ಊರು ಬಿಟ್ಟು ಹೋಗುವ ಮಂದಿಗೆ ನೂರು ರುಪಾಯಿ ಕೊಟ್ಟರೂ ಪರವಾಗಿಲ್ಲ, ಒಮ್ಮೆಲೆ ದಾಹ ತಣಿಸುತ್ತದಲ್ಲಾ ಅನ್ನುವ ಫೀಲ್‌ ಕೊಡುತ್ತದೆ.

Untitled design - 2026-10-30T124414.591


ಊರಲ್ಲೋ ಸಿಟಿಯಲ್ಲೋ 60,70ಕ್ಕೆ ಸಿಗುವ ಎಳನೀರಿಗೆ ಹತ್ತೋ ಇಪ್ಪತ್ತೋ ರುಪಾಯಿ ಜಾಸ್ತಿ ಕೊಟ್ಟರೂ ಅದು ಪರವಾಗಿಲ್ಲ ಅನಿಸಿಬಿಡುತ್ತದೆ. ದೂರದಲ್ಲಿ ಕಾಣುವ ಎಳನೀರು ಅಂಗಡಿಗೆ ಅಲ್ಲಿಂದ ನೂರು ಮೀಟರ್‌ ದೂರದಲ್ಲೇ ಬೋರ್ಡ್‌ ಇದ್ದರೆ ಸರಿ, ಇಲ್ಲಾ ಅಂದರೆ ಅದು ದಾಟಿದ ಮೇಲೆ, ನೂರು ಕಿಲೋಮೀಟರ್‌ ವೇಗದಲ್ಲಿ ಸಾಗುತ್ತಿರುವ ಕಾರನ್ನು ನಿಲ್ಲಿಸಿ, ರಿವರ್ಸ್‌ನಲ್ಲಿ ಬಂದು ಎಳನೀರು ಕುಡಿಯುವ ತಾಳ್ಮೆ ಯಾರಿಗೂ ಇರೋದಿಲ್ಲ. ಆದರೂ ಅನಿವಾರ್ಯ ಅನಿಸಿದಾಗ ಅಂಥದ್ದೂ ಮಾಡಲೇಬೇಕಾಗುತ್ತದೆ. ನಿಲ್ಲಿಸಿ, ಬೆವರು ಒರೆಸಿ, ಅಂಗಡಿಯವನ ಹತ್ತಿರ ಒಂದಿಷ್ಟು ಹರಟಿ, ಎಳನೀರು ಸವಿದಾಗ ಸ್ವರ್ಗಕ್ಕೆ ಮೂರೇ ಗೇಣು!

ಚಾಯ್‌ವಾಲಾಗಳ ಮಾಯಾಜಾಲ

ಅದೆಂಥದ್ದೇ ಟ್ರಿಪ್‌ ಇರಲಿ, ಒಂದತ್ತು ನಿಮಿಷ ಚಾಯ್‌ ಬ್ರೇಕ್‌ ತೆಗೆದುಕೊಂಡರೆ ಅದೇ ಮಜ. ನಿಮ್ಮ ಕಾರೇ ಆಗಲಿ, ಇಲ್ಲಾ ಬಸ್ಸೇ ಆಗಲಿ, ಅದು ನಿಂತಲ್ಲಿ ಊಟ ಮಾಡುವುದು ಒಂದೆಡೆಯಾದರೆ, ಉದ್ದದ ಪ್ರಯಾಣಕ್ಕೆ ಒಂದು ಕಪ್‌ ಚಹಾ, ಇಲ್ಲಾ ಗರಮಾಗರಮ್‌ ಕಾಫಿ ಸಿಕ್ಕರೆ ಅದುವೇ ಮಜ.
ಒಂದೂರಿನಲ್ಲೊಂದು ರೀತಿಯ ಚಹಾ, ಕೆಲವೆಡೆ ನೀವು ಬಂದ ಮೇಲೆ ಒಲೆಗೇರಿದರೆ, ಇನ್ನು ಕೆಲವೆಡೆ ಫ್ಲಾಸ್ಕ್‌ನಿಂದ ಚುಳ್ಳಂತ ಲೋಟಕ್ಕೆ ಬೀಳುವ ಚಹಾದ ಸದ್ದಿಗೆ ಅಬ್ಬಾ ಇದು ಚೆನ್ನಾಗಿದ್ದರೆ ಸಾಕು ಎನ್ನುವ ಭಾವ ಮನಸಿನಲ್ಲಿ ಮೂಡಿರುತ್ತದೆ. ಚೆನ್ನಾಗಿದ್ದರಂತೂ ಸಮಾಧಾನ, ಇಲ್ಲದಿದ್ದರೆ, ಪರವಾಗಿಲ್ಲ, ಒಂದು ಸಣ್ಣ ಎನರ್ಜಿ ಬೂಸ್ಟ್‌ ಮಾಡುತ್ತಿದೆ ಅನ್ನುವ ಭ್ರಮೆಯೊಂದಿಗೆ ಗುಟುಕರಿಸಿ ಮುಂದಕ್ಕೆ ಹೋಗುವ ಅನಿವಾರ್ಯತೆ.
ಹತ್ತು ರುಪಾಯಿಗೂ ಸಿಗುವ ಚಹಾ-ಕಾಫಿ ಹೈವೇ ಮುಟ್ಟಿದ ಕೂಡಲೇ 15-20 ಕೆಲವೊಂದೆಡೆ 25 ರುಪಾಯಿಗೂ ಸಿಕ್ಕರೂ ಅದನ್ನು ತೆಗೆದುಕೊಳ್ಳದೇ ಬೇರೆ ವಿಧಿಯಿಲ್ಲ ಅನ್ನುವುದು ಚಾಯ್‌ವಾಲಾಗಳ confidence ಇರಬೇಕು. ಯಾವುದೋ ಕೆಫೆಗೆ ಹೋಗಿ ಕಾಫಿಗೆಎ 200-300 ಕೊಟ್ಟು ಕುಡಿಯೋದಕ್ಕಿಂತ ಇದು ಎಷ್ಟೋ ಪಾಲು ಬೆಟರ್ರು ಅನ್ನುವುದೂ ನಿಜವೇ ಬಿಡಿ.
ಹಾಗೆ ನೋಡೋದಾದರೆ ಹೈವೇ ಅನ್ನುವುದು ಜೀವನದ ಜೀವನದಿಯೇ ಹೌದು. ಇಲ್ಲಿ 10 ರುಪಾಯಿಗೂ ಬೆಲೆಯಿದೆ 1000 ರುಪಾಯಿ ಖರ್ಚು ಮಾಡುವವರಿಗೂ ಸ್ಥಳವಿದೆ. ಆದರೆ, ಈ ಕಾಫಿ ಅಂಗಡಿಗಳಲ್ಲಿ ಮಾತ್ರ ಫೈವ್‌ ಸ್ಟಾರ್‌ ಹೊಟೇಲ್‌ನಲ್ಲಿ ಚಹಾ ಹೀರುವವರೂ ಬಂದು ಒಮ್ಮೆಲೆ ದಣಿವಾರಿಸಿ ರಿಫ್ರೆಶ್‌ ಆಗುವುದಕ್ಕೆ ಇದೇ ಚಹಾ ಕುಡಿಯಲು ಬ್ರೇಕ್‌ ತೆಗೆದುಕೊಳ್ಳುತ್ತಾರೆ.
ಇಲ್ಲಿನ ಅಂಗಡಿಗಳಿಗೆ ಬೆನ್ಝ್‌ ಕಾರಿರಲಿ, ಬೈಕಿರಲಿ, ಎಲ್ಲರೂ ಸಮಾನರೇ ಅನ್ನೋದನ್ನು ಸಾಲುಗಟ್ಟಿ ನಿಲ್ಲುವ ಈ ವಾಹನಗಳು ಸಾರಿ ಹೇಳುತ್ತದೆ. ಅದೇ ಶ್ರದ್ಧೆಯಿಂದ ಹೈವೇ ಸೈಡಿನ ಆ ಟೀ ಅಂಗಡಿ ಹುಡುಗ ಎಲ್ಲರಿಗೂ ಒಬ್ಬರಾದಮೇಲೊಬ್ಬರಂತೆ ಟೀ ಕೊಡೋದು ನಡೆಯುತ್ತಿರುತ್ತದೆ.
ಒಬ್ಬರಿಗೆ ಸ್ಟ್ರಾಂಗ್‌ ಕಾಫಿ, ಇನ್ನೊಬ್ಬರಿಗೆ ಸಕ್ಕರೆ ಇಲ್ಲದ ಚಹಾ ಅಥವಾ ಕಾಫಿ, ಇನ್ನೊಬ್ಬರಿಗೆ ಹಾಲು ಹಾಕದ ಚಹಾ! ಒಬ್ಬೊಬ್ಬರದು ಒಂದೊಂದು ಟೇಸ್ಟು. ಇನ್ನು ಒಂದೊಂದೂರಿನಲ್ಲಿ ಒಂದೊಂದು ರೀತಿಯ ಚಹಾ, ಅಥವಾ ಕಾಫಿ, ಕೆಲವು ಕಡೆ ಕಟ್ಟಂಚಾಯ್‌ ಫೇಮಸ್‌ ಆದರೆ, ತಮಿಳುನಾಡಿನ ವಿಶಿಷ್ಟ ಡಬ್ಬಾದೊಳಗಿನ ಚಹಾ ದೂರದಲ್ಲೆ ನಮ್ಮನ್ನು ಆಹ್ವಾನಿಸುತ್ತಿರುತ್ತದೆ.
ಈಗ ಹೈವೇ ಉದ್ದಕ್ಕೂ ಈ ರೀತಿಯ ಅಂಗಡಿಗಳಿಲ್ಲ. ಆದರೆ ಎಲ್ಲೋ ಒಂದೆಡೆ ಟೋಲ್‌ ಬಂತೆಂದರೆ ಅದರ ಪಕ್ಕದಲ್ಲೇ ಈ ರೀತಿಯ ಟೀ ಅಂಗಡಿಗಳು ತಲೆಯೆತ್ತಿ ನಿಲ್ಲುತ್ತವೆ. ಒಂದು ಓಪನ್‌ ಆದರೆ ಸಾಕು, ಮತ್ತೊಂದು ಅದರ ಪಕ್ಕ, ಹಾಗೇ ಒಂದಾದಮೇಲೊಂದರ ಸಾಲು ಬೆಳೆದು ನಿಲ್ಲುತ್ತದೆ.
ನೀವು ಟೀ ಕುಡಿಯುತ್ತೀರೋ, ಕಾಫಿ ಕುಡಿಯುತ್ತೀರೋ, ಅಥವಾ ಒಂದು ಎಳನೀರಿಗಾಗಿ ನಿಮ್ಮ ಬ್ರೇಕ್‌ ಮೀಸಲೋ, ಅಥವಾ ಕೆಲವೊಂದೆಡೆ ಅದೇನೋ ತರಕಾರಿ ಇತ್ಯಾದಿಯೋ, ಇಲ್ಲಾ ಅಲ್ಲೇ ಹತ್ತಿರದಲ್ಲಿ ಬೆಳೆದ ಹಣ್ಣೋ, ನಿಮ್ಮನ್ನು ರಾಶಿ ರಾಶಿಯಾಗಿ ಸ್ವಾಗತಿಸಲು ತಯಾರಾಗಿ ನಿಂತಿರುತ್ತದೆ.
ಆ ಊರಿನ ಕಸೂತಿ, ಕರಕುಶಲ ವಸ್ತುಗಳಿರಲಿ, ಆ ಊರಿನ ಹೂವು ಹಣ್ಣುಗರಿಲಿ, ಅದರ ತುಣುಕುಗಳು ಈ ಹೈವೇ ಬದಿಯ ಪುಟ್ಟ ಅಂಗಡಿಗಳಲ್ಲಿ ಕಾಣಸಿಗುತ್ತವೆ. ಟೋಲ್‌ ಬೂತ್‌ಗಳ ಹತ್ತಿರ ಹೂವಿನ ಮಾಲೆಯೋ, ಹಣ್ಣೋ ಮಾರುತ್ತಿರುವ ಹೆಣ್ಣುಮಗಳು ಆ ಊರಿನ ಕೊಂಡಿಯಾಗಿ ಸಿಗುವುದಷ್ಟೇ ಅಲ್ಲ, ತನ್ನ ಬದುಕನ್ನು ಕಟ್ಟುವ ದಾರಿಯನ್ನೂ ಕಂಡುಕೊಂಡಿರುತ್ತಾಳೆ.
ಅದೇನೇ ಇರಲಿ. ಹೈವೇ ಪಯಣ ಮಾತ್ರ ನಿರಂತರ ಮುಂದುವರೆಯುತ್ತದೆ. ಮುಂದೊಂದು ಬ್ರೇಕ್‌ಗೆ ಕಾಯುತ್ತಾ!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?