Tuesday, August 4, 2026
Tuesday, August 4, 2026

ಕಣ್ಣಿಗೆ ಕಾಣದ ಕಣಗಳು ಪ್ರಕೃತಿಯ ಕೊಲೆಗೆ ಕಾರಣವಾಗುತ್ತವೆ

ಸಿಂಥೆಟಿಕ್‌ ಬಟ್ಟೆಗಳಿಂದ ಹಿಡಿದು, ಪರ್ಸನಲ್‌ ಕೇರ್‌ ಪ್ರಾಡಕ್ಟ್‌ಗಳ ವರೆಗೆ ಎಲ್ಲದರಲ್ಲೂ ಸಣ್ಣ ಪ್ಲಾಸ್ಟಿಕ್‌ ಕಣಗಳಿರುವತ್ತವೆ. ಏನು, ಒಂದು ಬಟ್ಟೆ ಅಥವಾ ಪ್ರಾಡಕ್ಟ್‌ ಇಂದ ಏನು ವ್ಯತ್ಯಾಸ ಆಗಬಹುದು ಎಂಬ ಸಣ್ಣ ನಿರ್ಲಕ್ಷ್ಯವೇ ದೊಡ್ಡ ಆಪತ್ತನ್ನು ಸೃಷ್ಟಿಸುತ್ತದೆ.

ನಮ್ಮ ಕಚೇರಿಯಲ್ಲಿ ನಾವೊಂದಿಷ್ಟು ಜನ ಈಗ ಕಾಫಿ/ಟೀ ಕುಡಿಯಲು ಈಗ ನಮ್ಮದೇ ಲೋಟಗಳನ್ನು ಇಟ್ಟಿದ್ದೇವೆ. ಕಾರಣ ಇಷ್ಟೇ, ಪೇಪರ್‌ ಕಪ್‌ ಬಳಕೆ ಕಡಿಮೆ ಮಾಡಬೇಕು ಎನ್ನುವಂಥದ್ದು. ಪ್ರತಿದಿನ ಕಾಫಿ, ಟೀ ಕೊಡಲು ಒಬ್ಬರು ಅಣ್ಣ ಬರುತ್ತಾರೆ. ಎಲ್ಲರಿಗೂ ಪ್ರೀತಿಯಿಂದ ಯಾರಿಗೆ ಏನು ಬೇಕು ಎಂದು ಕಳಿ ಕೊಡುತ್ತಾರೆ. ಅದರೆ, ಅವರು ಪೇಪರ್‌ ಕಪ್‌ ಅಲ್ಲಿ ಕೊಡುತ್ತಾರೆ. ಅದು ಅವರ ತಪ್ಪೇನಲ್ಲ. ಆದರೆ, ದಿನವೂ ಅಷ್ಟು ಪೇಪರ್‌ ಕಪ್‌ ಬಳಕೆ ಆಗುತ್ತಿರುವುದು ಸ್ವಲ್ಪ ಕಿರಿಕಿರಿಯಾಯಿತು. ನಮ್ಮ ಸಹೋದ್ಯೋಗಿ ಒಬ್ಬರು ಮೊದಲು ಸ್ವಂತ ಕಾಫಿ ಕಪ್‌ ತಂದು ಇಟ್ಟರು. ಆಗ ನಮ್ಮ ತಂಡದವರಿಗೆ ಇದು ಒಳ್ಳೆಯ ಐಡಿಯಾ ಅಂತನಿಸಿ ಎಲ್ಲರೂ ಸ್ವಂತ ಕಪ್‌ ತಂದಿಟ್ಟೆವು. ಈಗ ಆ ಅಣ್ಣ ನಮ್ಮ ನಮ್ಮ ಕಪ್‌ಗೆ ಕಾಫಿ ಹಾಕಿಕೊಡುತ್ತಾರೆ. ನಾವು ಬಳಿಕ ಅದನ್ನು ತೊಳೆದು ಇಡುತ್ತೇವೆ. ಇದು ಕೇಳಲು ಬಹಳ ಸಣ್ಣ ವಿಷಯ ಅಂತನಿಸಬಹುದು. ಆದರೆ, ಇದರಿಂದ ಈ ಮೈಕ್ರೋಪ್ಲಾಸ್ಟಿಕ್‌ ಎಂಬ ಸಣ್ಣ ಕಣಗಳು ಪ್ರಕೃತಿಯನ್ನು ಕೊಲೆ ಮಾಡುವುದನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಹುದು.

ಇದನ್ನೂ ಓದಿ: ಚಿಕ್ಕ-ಪುಟ್ಟ ದೇಶಗಳಿಂದ ಕಲಿಯಬಹುದಾದ ಟೂರಿಸಂ ಪಾಠಗಳೇನು?

ಈ ಶತಮಾನದ ಅತ್ಯಂತ ಅಪಾಯಕಾರಿ ವಸ್ತುಗಳಲ್ಲಿ ಈ ಮೈಕ್ರೋಪ್ಲಾಸ್ಟಿಕ್‌ಗಳು ಮೊದಲನೆಯ ಸ್ಥಾನದಲ್ಲಿರುತ್ತವೆ. ಪ್ಲಾಸ್ಟಿಕ್‌ ಬಳಕೆ ಅಪಾಯಕಾರಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಅದೇ ಪ್ಲಾಸ್ಟಿಕ್‌ ತನ್ನ ರೂಪ ಬದಲಸಿ ಮೈಕ್ರೋಪ್ಲಾಸ್ಟಿಕ್‌ ಆಗಿ ಕಣ್ಣೆದುರು ಬಂದಾಗ ಅದನ್ನು ಗುರುತು ಹಿಡಯದೇ ಇದ್ದರೆ ನಾವು ಸೋಲುತ್ತೇವೆ. ಪ್ರಕೃತಿ ಸಾಯುತ್ತದೆ.

ನದಿಗಳಲ್ಲಿ ತೇಲುವ ಅಥವಾ ರಸ್ತೆಬದಿಯಲ್ಲಿ ಬಿದ್ದಿರುವ ಕಣ್ಣಿಗೆ ಕಾಣುವ ಪ್ಲಾಸ್ಟಿಕ್ ಕಸದ ರಾಶಿಗಿಂತ ಅಪಾಯ ಈ ಮೈಕ್ರೋಪ್ಲಾಸ್ಟಿಕ್‌ಗಳು. ಇವು ಐದು ಮಿಲಿಮೀಟರ್‌ಗಿಂತ ಸಣ್ಣದಾಗಿರುವ ಪ್ಲಾಸ್ಟಿಕ್ ಕಣಗಳು. ಕಣ್ಣಿಗೆ ಕಾಣಿಸದಿರುವುದೇ ದೊಡ್ಡ ಅಪಾಯ. ಏಕೆಂದರೆ, ಇವು ನಮಗೆ ತಿಳಿಯದಂತೆಯೇ ಪರಿಸರ, ಫುಡ್ ಚೈನ್ ಮತ್ತು ಮನುಷ್ಯನ ದೇಹವನ್ನು ಸೇರಿಕೊಳ್ಳುತ್ತವೆ. ಮೊದಲೆಲ್ಲ ಜ್ಯೂಸ್‌ ಕುಡಿಯಲು ಪ್ಲಾಸ್ಟಿಕ್‌ ಸ್ಟ್ರಾಗಳನ್ನು ನೀಡಲಾಗುತ್ತಿತ್ತು. ಆದರೆ, ಈಗ ಪೇಪರ್‌ ಸ್ಟ್ರಾ ನೀಡಲಾಗುತ್ತದೆ. ಮೇಲ್ನೋಟಕ್ಕೆ ಇದು ಪ್ಲಾಸ್ಟಿಕ್ ಅಲ್ಲ ಪೇಪರ್ ಎಂದೆನಿಸಬಹುದು. ಆದರೆ, ಇದು ಕೂಡ ಪ್ಲಾಸ್ಟಿಕ್ ಅಂಶವನ್ನು ಹೊಂದಿರುತ್ತದೆ. ಮೈಕ್ರೋಪ್ಲಾಸ್ಟಿಕ್ ಆದ ಕಾರಣ ಇದು ಉಳಿದ ಪ್ಲಾಸ್ಟಿಕ್ಕಿಗಿಂತಲೂ ಹೆಚ್ಚು ಅಪಾಯಕಾರಿ. ಇಂಥ ಅದೆಷ್ಟೋ ಕಡೆ ಗೊತ್ತಿಲ್ಲದೆಯೇ ಮೈಕ್ರೋಪ್ಲಾಸ್ಟಿಕ್ ಪ್ರಕೃತಿಯ ಒಡಲು ಸೇರುತ್ತವೆ. ಯಾವುದೋ ಟ್ರೆಕ್ ಹೋದಾಗ ಸುಲಭವಾಗಲಿ ಎಂದು ಪೇಪರ್ ಪ್ಲೇಟ್, ಪೇಪರ್ ಕಪ್ ತೆಗೆದುಕೊಂಡು ಹೋಗಿ ಅಲ್ಲಿ ಬಿಸಾಕಿ ಬರುವುದಿದೆ. ಆದರೆ, ಅದರ ಮುಂದಿನ ಕಥೆ ಬಗ್ಗೆ ಯಾರೂ ಗಮನ ನೀಡುವುದಿಲ್ಲ. ಒಂದು ಸಣ್ಣ ಎಡವಟ್ಟು ಇಡೀ ಪ್ರವಾಸಿ ಪ್ರಪಂಚಕ್ಕೆ ಮಾರಕವಾಗಬಹುದು.

Untitled design - 2026-08-04T153347.282

ಪ್ಲಾಸ್ಟಿಕ್ ಅನ್ನು ದೀರ್ಘಕಾಲ ಬಾಳಿಕೆ ಬರಲೆಂದು ವಿನ್ಯಾಸಗೊಳಿಸಲಾಗಿತ್ತು. ಆದರೆ, ಈಗ ಅವೆಲ್ಲ ಯೂಸ್‌ ಆಂಡ್‌ ಥ್ರೋ ಮಾದರಿಯಾಗಿವೆ. ಇದರ ಪರಿಣಾಮವಾಗಿ, ಬಾಟಲಿಗಳು, ಕಾಗದದ ರ್ಯಾಪರ್ಸ್, ಸಿಂಥೆಟಿಕ್ ಬಟ್ಟೆಗಳು, ಟೈರ್‌ಗಳು ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳು ಕಾಲಾನಂತರದಲ್ಲಿ ಸಣ್ಣ ಕಣಗಳಾಗಿ ಒಡೆದು ಮಣ್ಣು, ನೀರು ಮತ್ತು ಗಾಳಿಯಲ್ಲಿ ದಶಕಗಳ ಕಾಲ ಉಳಿದುಬಿಡುತ್ತವೆ.

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ಪ್ರಕಾರ, ಪ್ರತಿವರ್ಷ ಲಕ್ಷಾಂತರ ಟನ್ ಮೈಕ್ರೋಪ್ಲಾಸ್ಟಿಕ್ ಪರಿಸರವನ್ನು ಸೇರುತ್ತಿವೆ. ಸಮುದ್ರದ ಆಳವಾದ ಕಂದಕಗಳಿಂದ ಹಿಡಿದು ಆರ್ಕ್ಟಿಕ್‌ನ ಮಂಜುಗಡ್ಡೆಗಳವರೆಗೂ ಇವುಗಳ ಪತ್ತೆಯಾಗಿದೆ.

ಮೈಕ್ರೋಪ್ಲಾಸ್ಟಿಕ್ ಮಾಲಿನ್ಯದ ಅತ್ಯಂತ ಆತಂಕಕಾರಿ ವಿಷಯವೆಂದರೆ, ನಾವು ಪ್ರತಿದಿನ ನಮಗೆ ತಿಳಿಯದಂತೆ ಈ ಕಣಗಳನ್ನು ಬಳಸುತ್ತಿದ್ದೇವೆ ಮತ್ತು ಸೇವಿಸುತ್ತಿದ್ದೇವೆ. ಸಿಂಥೆಟಿಕ್‌ ಬಟ್ಟೆಗಳಿಂದ ಹಿಡಿದು, ಪರ್ಸನಲ್‌ ಕೇರ್‌ ಪ್ರಾಡಕ್ಟ್‌ಗಳ ವರೆಗೆ ಎಲ್ಲದರಲ್ಲೂ ಸಣ್ಣ ಪ್ಲಾಸ್ಟಿಕ್‌ ಕಣಗಳಿರುವತ್ತವೆ. ಏನು, ಒಂದು ಬಟ್ಟೆ ಅಥವಾ ಪ್ರಾಡಕ್ಟ್‌ ಇಂದ ಏನು ವ್ಯತ್ಯಾಸ ಆಗಬಹುದು ಎಂಬ ಸಣ್ಣ ನಿರ್ಲಕ್ಷ್ಯವೇ ದೊಡ್ಡ ಆಪತ್ತನ್ನು ಸೃಷ್ಟಿಸುತ್ತದೆ. ಏಕೆಂದರೆ ಒಬ್ಬರಿಗೆ ಅದು ಒಂದು ಬಟ್ಟೆ ಅಥವಾ ಒಂದು ಪ್ರಾಡಕ್ಟ್‌. ಆದರೆ, ಮಾರುಕಟ್ಟೆಯಲ್ಲಿ ಅಂಥ ಎಷ್ಟು ಪ್ರಾಡಕ್ಟ್‌ ಇವೆ, ಎಷ್ಟು ಜ್ಯೂಸ್‌ ಅಂಗಡಿಗಳಲ್ಲಿ ಪೇಪರ್‌ ಸ್ಟ್ರಾಗಳಿವೆ ಎಂದು ಸುಮ್ಮನೇ ಆಲೋಚನೆ ಮಾಡಿದರೆ ಸಾಕು, ಅಂದಾಜು ಕೂಡ ಸಿಗದ ಲೆಕ್ಕ ಬೆಚ್ಚಿಬೀಳಿಸುತ್ತದೆ. ಒಂದುವೇಳೆ, ಭಯ ಆಗಲಿಲ್ಲ ಎಂದರೆ ಈ ವರ್ಷದ ʼಕಲ್ಲು ಹೃದಯʼ ಪ್ರಶಸ್ತಿಯನ್ನು ಪಡೆಯಲು ನೀವು ಅರ್ಹರು ಎಂದರ್ಥ. ಪ್ಯಾಕ್ ಮಾಡಿದ ಆಹಾರ, ಬಾಟಲಿ ನೀರು, ಡಿಸ್ಪೋಸಬಲ್ ಟೀ ಬ್ಯಾಗ್‌ಗಳು ಮತ್ತು ಬಿಸಿ ಮಾಡಿದ ಪ್ಲಾಸ್ಟಿಕ್ ಪಾತ್ರೆಗಳು ಸಹ ನಾವು ತಿನ್ನುವ ಆಹಾರ ಮತ್ತು ಕುಡಿಯುವ ನೀರಿಗೆ ಸಣ್ಣ ಪ್ಲಾಸ್ಟಿಕ್ ಕಣಗಳನ್ನು ಉಡುಗೊರೆಯಾಗಿ ನೀಡುತ್ತವೆ. ವಾಹನಗಳ ಟೈರ್‌ಗಳು, ಪೇಂಟ್‌ಗಳು ಮತ್ತು ಕೈಗಾರಿಕಾ ಧೂಳು ನಿರಂತರವಾಗಿ ವಾತಾವರಣಕ್ಕೆ ಪ್ಲಾಸ್ಟಿಕ್ ಕಣಗಳನ್ನು ಬಿಡುತ್ತಿರುತ್ತವೆ.

ಮೈಕ್ರೋಪ್ಲಾಸ್ಟಿಕ್‌ನಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ಗಮನಿಸಿದರೆ ಭಯವಾಗುತ್ತದೆ. ಸಮುದ್ರಗಳು ಪ್ಲಾಸ್ಟಿಕ್ ಮಾಲಿನ್ಯದ ಅತಿ ದೊಡ್ಡ ತೊಟ್ಟಿಗಳಾಗಿ ಮಾರ್ಪಟ್ಟಿವೆ, ಅಲ್ಲಿ ಸಮುದ್ರ ಜೀವಿಗಳಿಗೆ ಮೈಕ್ರೋಪ್ಲಾಸ್ಟಿಕ್ ಆಹಾರವಾಗಿದೆ. ಭಾರತದಲ್ಲಿ ನಡೆದಿರುವ ಸಂಶೋಧನೆಗಳು ನದಿಗಳು, ಕೆರೆಗಳು, ಅಂತರ್ಜಲ ಮತ್ತು ನಾವು ತಿನ್ನುವ ಉಪ್ಪು ಹಾಗೂ ಸೀಫುಡ್‌ನಲ್ಲೂ ಮೈಕ್ರೋಪ್ಲಾಸ್ಟಿಕ್ ಇರುವುದನ್ನು ಪತ್ತೆಹಚ್ಚಿವೆ. ಪ್ರಾಣಿಗಳು ಈ ಮಾಲಿನ್ಯದ ಮೊದಲ ಬಲಿಪಶುಗಳು. ಕಸದಲ್ಲಿರುವ ದೊಡ್ಡ ಪ್ಲಾಸ್ಟಿಕ್ ವಸ್ತುಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಪ್ರಾಣಿಗಳೂ ಇವೆ, ಈ ಪ್ಲಾಸ್ಟಿಕ್ ನಂತರ ಮೈಕ್ರೋಪ್ಲಾಸ್ಟಿಕ್ ಆಗಿ ಬದಲಾಗುತ್ತದೆ. ದುರಂತವೆಂದರೆ ವನ್ಯಜೀವಿಗಳಿಗೆ ಆಹಾರ ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ.

Untitled design - 2026-08-04T153411.648

ಇವೆಲ್ಲ ಪರಿಸರದ ಮೇಲಾಗುತ್ತಿರುವ ಪರಿಣಾಮಗಳು, ಮನುಷ್ಯರು ಸೇಫ್ ಆಗಿದ್ದಾರೆ ಎಂಬ ತಪ್ಪುಕಲ್ಪನೆಗೆ ಜಾರಬಾರದು. ಏಕೆಂದರೆ ಇದು ನೇರವಾಗಿ ನಮ್ಮ ಆರೋಗ್ಯಕ್ಕೂ ಸಂಬಂಧಿಸಿದೆ. ವಿಜ್ಞಾನಿಗಳು ಈಗಾಗಲೇ ಮನುಷ್ಯನ ರಕ್ತ, ಶ್ವಾಸಕೋಶ, ಪ್ಲಾಸೆಂಟಾ ಮತ್ತು ಇತರ ಅಂಗಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವುದನ್ನು ಪತ್ತೆಹಚ್ಚಿದ್ದಾರೆ.

ಸಮಸ್ಯೆ ಎಂದರೆ ಭಾರತವು ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವನ್ನು ಎದುರಿಸುವಲ್ಲಿ ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿದೆ. ಕಡಿಮೆ ಬೆಲೆ ಮತ್ತು ಸೌಕರ್ಯಕ್ಕಾಗಿ ಸಿಂಗಲ್-ಯೂಸ್ ಪ್ಲಾಸ್ಟಿಕ್‌ಗಳು ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿವೆ. ಗಂಗಾ ಮತ್ತು ಯಮುನೆಯಂಥ ನದಿಗಳು ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮುದ್ರಕ್ಕೆ ಕೊಂಡೊಯ್ಯುತ್ತಿವೆ. ಎಲ್ಲೆಂದರಲ್ಲಿ ಕಸ ಹಾಕುವುದು, ಕಸವನ್ನು ಬಹಿರಂಗವಾಗಿ ಸುಡುವುದು ಮತ್ತು ಕಸವನ್ನು ಸರಿಯಾಗಿ ವಿಂಗಡಿಸದಿರುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿದೆ. ಅದೇ ಸಮಯದಲ್ಲಿ, ಸಾರ್ವಜನಿಕರಲ್ಲಿ ಮೈಕ್ರೋಪ್ಲಾಸ್ಟಿಕ್ ಬಗ್ಗೆ ಇರುವ ಅರಿವು ತುಂಬಾ ಕಡಿಮೆ. ಪ್ಲಾಸ್ಟಿಕ್ ಮಾಲಿನ್ಯ ಎಂದರೆ ಕೇವಲ ಕಣ್ಣಿಗೆ ಕಾಣುವ ಕಸ ಎಂದು ಮಾತ್ರ ಇನ್ನು ಹಲವರು ಭಾವಿಸಿದ್ದಾರೆ, ಆದರೆ ಕಣ್ಣಿಗೆ ಕಾಣದ ಈ ಸೂಕ್ಷ್ಮ ಮಾಲಿನ್ಯದ ಬಗ್ಗೆ ತಿಳಿದಿಲ್ಲ.

ಆದರೆ, ಭಾರತಕ್ಕೆ ಇದನ್ನು ತಡೆಯಲು ಮತ್ತು ಸುಧಾರಣೆ ತರಲು ಉತ್ತಮ ಅವಕಾಶಗಳೂ ಇವೆ. ದೇಶದಲ್ಲಿ ಈಗಾಗಲೇ ಕೆಲವು ಸಿಂಗಲ್-ಯೂಸ್ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಆದಾಗ್ಯೂ, ಕೇವಲ ನಿಯಮಗಳಿಂದಲೇ ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ. ಇದಕ್ಕೆ ಜನರ ನಡವಳಿಕೆ ಮತ್ತು ವ್ಯವಸ್ಥೆಯಲ್ಲಿ ಬದಲಾವಣೆ ಬರಬೇಕು. ನಮ್ಮ ಸಣ್ಣ ಸಣ್ಣ ಬದಲಾವಣೆಗಳು ದೊಡ್ಡ ಪರಿಣಾಮ ಬೀರಬಹುದು ಅಂತನಿಸುತ್ತದೆ. ಜ್ಯೂಸ್‌ ಕುಡಿಯುವಾಗ ಸ್ಟ್ರಾ ಬೇಡ ಅಂತ ಹೇಳಿದರೆ ಸಾಕು, ಒಂದು ಸ್ಟ್ರಾ ಉಳಿಸಬಹುದು. ಹಾಗೇ ಒಂದು ಗುಂಪು ಬೇಡ ಎಂದರೆ ಎಷ್ಟೊಂದು ಸ್ಟ್ರಾ ಉಳಿಸಬಹುದು. ಅಥವಾ ಅಂಗಡಿಯವರೇ ಬೇಕಾದವರಿಗೆ ಮಾತ್ರ ಕೇಳಿ ಸ್ಟ್ರಾ ನೀಡುವುದನ್ನು ರೂಢಿಸಿಕೊಳ್ಳಬಹುದು. ಬಟ್ಟೆ ಬ್ಯಾಗ್‌ಗಳು, ಪೇಪರ್ ಪ್ಯಾಕೇಜಿಂಗ್, ಬಿದಿರಿನ ಉತ್ಪನ್ನಗಳು ಮತ್ತು ಕಾಂಪೋಸ್ಟಬಲ್ ವಸ್ತುಗಳಂಥ ಪರಿಸರಸ್ನೇಹಿ ಪರ್ಯಾಯಗಳ ಕಡೆಗೆ ಮುಖ ಮಾಡಬಹುದು.

ಇತ್ತೀಚೆಗೆ ತಾಜಾ ತಿಂಡಿ ಹೊಟೇಲ್‌ಗೆ ಹೋದಾಗ ಅಲ್ಲಿ ಪಾರ್ಸೆಲ್‌ ನೀಡುವ ವ್ಯವಸ್ಥೆಯೇ ಇಲ್ಲ ಎನ್ನುವುದು ಗೊತ್ತಾಯಿತು. ಒಂದು ವೇಳೆ ಯಾರಿಗಾದರೂ ಪಾರ್ಸೆಲ್‌ ಬೇಕಾದರೆ ಅವರು ಮನೆಯಿಂದ ಡಬ್ಬಿ ತಂದರೆ ಅದಕ್ಕೆ ಹಾಕಿ ಕೊಡುತ್ತಾರೆ. ಇಂಥ ಅಭ್ಯಾಸಗಳು ಹೆಚ್ಚಾದರೆ ಎಷ್ಟು ಚಂದ! ಇನ್ನೊಂದು ಸಣ್ಣ ಉದಾಹರಣೆ ನೀಡಬೇಕೆಂದರೆ ಇಂಡಿಯಾ ಹೈಕ್ಸ್‌ನಂಥ ಹಲವು ಟ್ರೆಕ್ಕಿಂಗ್ ಆರ್ಗನೈಸ್ ಮಾಡುವ ಸಂಸ್ಥೆಗಳಲ್ಲಿ ಚಾರಣಗರಿಗೆ ತಮ್ಮದೇ ಸ್ವಂತ ಸ್ಟೀಲ್ ಡಬ್ಬಿ, ಬಾಟಲಿ, ಚಮಚ ತರಲು ಸೂಚನೆ ನೀಡಲಾಗುತ್ತದೆ.

ಜನರು ತಮ್ಮದೇ ಆದ ಮರುಬಳಕೆ ಮಾಡಬಹುದಾದ ಪಾತ್ರೆಗಳನ್ನು ಕೊಂಡೊಯ್ಯುವ ಮೂಲಕ, ಅನಗತ್ಯ ಪ್ಯಾಕೇಜಿಂಗ್ ಅನ್ನು ತಪ್ಪಿಸುವ ಮೂಲಕ, ಹತ್ತಿಯಂಥ ನೈಸರ್ಗಿಕ ಬಟ್ಟೆಗಳನ್ನು ಆರಿಸಿಕೊಳ್ಳುವ ಮೂಲಕ ಮತ್ತು ಡಿಸ್ಪೋಸಬಲ್ ಉತ್ಪನ್ನಗಳನ್ನು ಸೀಮಿತಗೊಳಿಸುವ ಮೂಲಕ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಸ್ಟೀಲ್ ಪಾತ್ರೆಗಳು, ಬಟ್ಟೆಯ ಶಾಪಿಂಗ್ ಬ್ಯಾಗ್‌ಗಳು, ಎಲೆಗಳ ತಟ್ಟೆಗಳು ಮತ್ತು ಸಾಮಗ್ರಿಗಳನ್ನು ಮರುಪೂರಣ (ರಿಫಿಲ್) ಮಾಡುವ ಪದ್ಧತಿಗಳಂಥ ಸಾಂಪ್ರದಾಯಿಕ ಭಾರತೀಯ ಪದ್ಧತಿಗಳು ಈಗಾಗಲೇ ನಮಗೆ ಉತ್ತಮ ಪರ್ಯಾಯಗಳನ್ನು ಒದಗಿಸಿವೆ. ಈ ಹಳೆಯ ಅಭ್ಯಾಸಗಳನ್ನು ಪುನರುಜ್ಜೀವನಗೊಳಿಸುವುದರ ಬಗ್ಗೆ ಹೆಚ್ಚು ಗಮನ ನೀಡಬೇಕು. ಪರಿಸರದ ಮೇಲೆ ಆಗುವ ಕೊಲೆ ಪ್ರಯತ್ನವನ್ನು ತಡೆಯಬಹುದು.

Untitled design - 2026-08-04T153404.345

ಭಾರತದಲ್ಲಿ ಇತ್ತೀಚೆಗೆ ಪ್ರಾರಂಭಿಸಲಾದ 'ಪ್ಲಾಸ್ಟಿಕ್ ಮಾಲಿನ್ಯ ಸಾಕ್ಷರತಾ ಕಿಟ್' (Plastic Pollution Literacy Kit), ನೀತಿ ಸುಧಾರಣೆಗಳ ಜತೆಗೆ ಜನರ ನಡವಳಿಕೆಯಲ್ಲೂ ಬದಲಾವಣೆ ಬರಬೇಕು. ಶಾಲೆಗಳು, ಕಾಲೇಜುಗಳು, ಮಾಧ್ಯಮ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳು ಈ ಕಣ್ಣಿಗೆ ಕಾಣದ ಪ್ಲಾಸ್ಟಿಕ್ ಮಾಲಿನ್ಯ ಮತ್ತು ಜವಾಬ್ದಾರಿಯುತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು.

ಪ್ಲಾಸ್ಟಿಕ್ ಆಧುನಿಕ ಜೀವನದ ಪ್ರತಿಯೊಂದು ಭಾಗದಲ್ಲೂ ಎಷ್ಟು ಆಳವಾಗಿ ನುಸುಳಿದೆ ಎಂದರೆ ಜನರು ತಮಗೆ ತಿಳಿಯದಂತೆಯೇ ಮಾಲಿನ್ಯವನ್ನು ಸೇವಿಸುತ್ತಿದ್ದಾರೆ. ಮಾಲಿನ್ಯಕ್ಕೆ ಕಾರಣ ಕೂಡ ಆಗುತ್ತಿದ್ದಾರೆ. ಒಂದು ವೇಳೆ ಇದೇ ರೀತಿ ಮುಂದುವರಿದರೆ ಪರಿಸರ ಎನ್ನುವುಂಥದ್ದೇ ಪ್ರವಾಸೋದ್ಯಮದಲ್ಲಿ ಇರುವುದಿಲ್ಲ. ಪ್ರಕೃತಿಯ ಕೊಲೆ ಅಪಾದನೆಯ ಕುರಿತು ವಿಚಾರಣೆ ನಡೆದರೆ ನಾವೆಲ್ಲರೂ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ.

ಈ ಸವಾಲು ತುಂಬಾ ದೊಡ್ಡದಾಗಿದೆ ನಿಜ, ಆದರೆ ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದಲ್ಲ. ಈಗಲೇ ಸುಸ್ಥಿರ ಆಯ್ಕೆಗಳನ್ನು ಅಳವಡಿಸಿಕೊಂಡರೆ, ಭಾರತ ಮತ್ತು ಇಡೀ ಜಗತ್ತು ಈ ಕಣ್ಣಿಗೆ ಕಾಣದ ಮೈಕ್ರೋಪ್ಲಾಸ್ಟಿಕ್ ಎಂಬ ವಿಷ ಪ್ರಕೃತಿಯನ್ನು ಹಾಳು ಮಾಡದಂತೆ ತಡೆಯಬಹುದು.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?