ಪುಟ್ಟ ದೇಶಗಳು, ದೊಡ್ಡ ಹೆಜ್ಜೆಗುರುತು
ದೇಶದ ಗಾತ್ರಕ್ಕೂ ಅದರ ಹಿರಿಮೆಗೂ ಸಂಬಂಧವಿದೆಯೇ? ನಕ್ಷೆಯಲ್ಲಿ ಹುಡುಕಲು ಕಷ್ಟವಾಗುವ ಯುರೋಪಿನ ಪುಟ್ಟ ದೇಶಗಳಲ್ಲೂ ಅಚ್ಚರಿಯ ಇತಿಹಾಸ, ವಿಶಿಷ್ಟ ಸಂಪ್ರದಾಯ ಮತ್ತು ಕುತೂಹಲಕರ ಸಂಗತಿಗಳಿವೆ. ವ್ಯಾಟಿಕನ್, ಮೊನಾಕೊ, ಲಿಕ್ಟೆನ್‌ಸ್ಟೈನ್ ದೇಶಗಳ ಪುಟ್ಟ ಗಡಿಗಳೊಳಗಿನ ದೊಡ್ಡ ಕಥೆಗಳತ್ತ ಒಂದು ಪ್ರವಾಸ!
- ವಿಜಯ್ ಕೊಪ್ಪ
ನಮ್ಮ ಬೆಂಗಳೂರಿನ ಲಾಲ್‌ಬಾಗ್ ಸುಮಾರು 240 ಎಕರೆ. ಅದರ ಅರ್ಧಕ್ಕಿಂತಲೂ ಚಿಕ್ಕ ಜಾಗದಲ್ಲಿ ಒಂದು ಸ್ವತಂತ್ರ ದೇಶ ಇದೆ ಎಂದರೆ ನಂಬುತ್ತೀರಾ? ತನ್ನದೇ ಧ್ವಜ, ಅಂಚೆ ಚೀಟಿ, ಕಾವಲುಪಡೆ ಎಲ್ಲವೂ ಇರುವ ದೇಶ!
ಯುರೋಪಿನಲ್ಲಿ ಎಷ್ಟೋ ಚಿಕ್ಕ ದೇಶಗಳಿವೆ. ಬೇರೆ ಬೇರೆ ಸಮಯದಲ್ಲಿ, ಬೇರೆ ಬೇರೆ ಕಾರಣಕ್ಕೆ ಅಂಥ ಮೂರು ದೇಶಗಳಿಗೆ ಹೋಗುವ ಅವಕಾಶ ನನಗೆ ಸಿಕ್ಕಿತು. ವ್ಯಾಟಿಕನ್, ಮೊನಾಕೊ ಮತ್ತು ಲಿಕ್ಟೆನ್‌ಸ್ಟೈನ್. ಇವುಗಳನ್ನು ಸುತ್ತಲು ಒಂದು ಮಧ್ಯಾಹ್ನ ಸಾಕು. ಆದರೆ ಅವುಗಳ ಕಥೆ ಕೇಳಲು ಕುಳಿತರೆ ಒಂದು ದಿನ ಸಾಲದು.
ಬಿಳಿ ಗೆರೆಯಾಚೆ ಇನ್ನೊಂದು ದೇಶ
ಲಾಲ್‌ಬಾಗಿನ ಅರ್ಧಕ್ಕಿಂತ ಚಿಕ್ಕ ಆ ದೇಶ ವ್ಯಾಟಿಕನ್. ಇಟಲಿ ಪ್ರವಾಸಕ್ಕೆ ಹೋಗಿದ್ದಾಗ ರೋಮ್‌ನಿಂದ ಅಲ್ಲಿಗೆ ಹೋಗಿದ್ದೆವು. ಎರಡು ದೇಶಗಳ ನಡುವೆ ಗೇಟ್ ಇಲ್ಲ, ಪಾಸ್‌ಪೋರ್ಟ್ ತಪಾಸಣೆ ಇಲ್ಲ. ಸೇಂಟ್ ಪೀಟರ್ಸ್ ಚೌಕದ ಅಂಚಿನಲ್ಲಿ ನೆಲದ ಮೇಲೆ ಒಂದು ಬಿಳಿ ಗೆರೆ ಅಷ್ಟೇ. ಇಲ್ಲಿ ಜನ ಫೊಟೋ ತೆಗೆಯುತ್ತಾ ಆ ಗೆರೆಯ ಮೇಲೆಯೇ ಓಡಾಡುತ್ತಾರೆ.
ಇದನ್ನೂ ಓದಿ: ಅಮಿದ ಬುದ್ಧನ ಪವಿತ್ರ ತಾಣ
ಕೆಲವು ಸ್ಥಳಗಳಿಗೆ ಹೋದಮೇಲೆ ಅಲ್ಲಿನ ಬಗ್ಗೆ ಗೂಗಲ್ ಮಾಡಿ ಸ್ವಲ್ಪ ಮಾಹಿತಿ ಪಡೆಯುವುದು ನನ್ನ ಅಭ್ಯಾಸ. ವಿಕಿಪೀಡಿಯಾ ಸ್ವಲ್ಪ ಸರಿಯಾದ ಮತ್ತು ನಂಬಲರ್ಹವಾದ ಮಾಹಿತಿ ಕೊಡುತ್ತದೆ. ಆ ಮಾಹಿತಿ ತಿಳಿದ ಮೇಲೆ ಆ ಜಾಗ ನೋಡುವ ದೃಷ್ಟಿಯೇ ಬದಲಾಗುತ್ತದೆ. ಹಾಗೆ ವ್ಯಾಟಿಕನ್ ಬಗ್ಗೆಯೂ ತಿಳಿದುಕೊಂಡೆ.

ಸುಮಾರು 800 ಜನ ವಾಸಿಸುವ ಈ ದೇಶದ ಕಾವಲುಗಾರರು ಇಟಲಿಯವರಲ್ಲ, ಸ್ವಿಟ್ಜರ್‌ಲ್ಯಾಂಡ್‌ನವರು! ಹಳದಿ, ನೀಲಿ, ಕೆಂಪು ಪಟ್ಟೆಯ ಬಟ್ಟೆ, ಕೈಯಲ್ಲಿ ಉದ್ದನೆಯ ಈಟಿ. ನೋಡಲು ನಾಟಕದ ವೇಷದಂತೆ ಕಂಡರೂ ಅದರ ಹಿಂದೆ ಐದು ಶತಮಾನದ ಕಥೆ ಇದೆ.
ಸುಮಾರು 500 ವರ್ಷಗಳ ಹಿಂದೆ, ಸಾಮ್ರಾಟ ಐದನೆಯ ಚಾರ್ಲ್ಸ್‌ನ ಸೈನ್ಯ ರೋಮ್ ಮೇಲೆ ನುಗ್ಗಿತು. ಪೋಪ್‌ರನ್ನು ಕಾಯಲು ಇದ್ದವರು 189 ಸ್ವಿಸ್ ಕಾವಲುಗಾರರು. ಅವರಲ್ಲಿ 147 ಜನ ಅಲ್ಲೇ ಪ್ರಾಣ ಕಳೆದುಕೊಂಡರು. ಉಳಿದ 42 ಜನ ಗುಪ್ತ ಮಾರ್ಗದಲ್ಲಿ ಪೋಪ್‌ರನ್ನು ಕೋಟೆಗೆ ಸುರಕ್ಷಿತವಾಗಿ ಕರೆದೊಯ್ದರು. ಆ ದಾಳಿ ನಡೆದದ್ದು 1527ರ ಮೇ 6ರಂದು. ಇಂದಿಗೂ ಹೊಸ ಕಾವಲುಗಾರರು ಪ್ರತಿ ವರ್ಷ ಅದೇ ದಿನ ಪ್ರಮಾಣವಚನ ಸ್ವೀಕರಿಸುತ್ತಾರೆ. ಮುಂದಿನ ಮೇ ತಿಂಗಳಿಗೆ ಆ ಘಟನೆಗೆ ಸರಿಯಾಗಿ 500 ವರ್ಷ.
ಕ್ಯಾಸಿನೋ ಇರುವ ದೇಶ, ಪ್ರಜೆಗಳಿಗೆ ಪ್ರವೇಶವಿಲ್ಲ!
ಮೊನಾಕೊಗೆ ಹೋಗಿದ್ದು ಸ್ನೇಹಿತರೊಬ್ಬರ ಜತೆ. ಫ್ರಾನ್ಸ್‌ನ ನೀಸ್‌ನಲ್ಲಿ ಸಮ್ಮೇಳನಕ್ಕೆ ಹೋಗಿದ್ದೆವು. ಸಿಕ್ಕ ಬಿಡುವಿನಲ್ಲಿ ಕಾನ್ ನೋಡಿ, ಅಲ್ಲಿಂದ ನೇರ ರೈಲು ಹಿಡಿದು ‘ಮೊನಾಕೊ ಮಾಂಟೆ ಕಾರ್ಲೋ’ ನಿಲ್ದಾಣದಲ್ಲಿ ಇಳಿದೆವು. ಸುರಂಗದೊಳಗಿರುವ ಈ ನಿಲ್ದಾಣದ ಒಂದು ಭಾಗ ಮೊನಾಕೊದಲ್ಲಿದ್ದರೆ, ಇನ್ನೊಂದು ಭಾಗ ಫ್ರಾನ್ಸ್‌ನ ಬೋಸೊಲೈ ಊರಿನಲ್ಲಿದೆ! ರೈಲಿನಿಂದ ಇಳಿದಾಗ ಯಾವ ದೇಶದಲ್ಲಿ ಕಾಲಿಟ್ಟೆವು ಎಂದು ಹೇಳುವುದೇ ಕಷ್ಟ. ದೇಶ ಬದಲಾದರೂ ಟಿಕೆಟ್ ಬದಲಾಗುವುದಿಲ್ಲ.
ಇಡೀ ದೇಶ ಸುಮಾರು ಎರಡು ಚದರ ಕಿಲೋಮೀಟರ್. ಅಂದರೆ ಸುಮಾರು ಎರಡು ಲಾಲ್‌ಬಾಗ್‌ಗಳಷ್ಟು. ಸ್ವಂತ ವಿಮಾನ ನಿಲ್ದಾಣವೂ ಇಲ್ಲ. ಈ ದೇಶದ ಹುಟ್ಟೇ ಸಿನಿಮಾ ಕಥೆಯಂತಿದೆ. ಹದಿಮೂರನೆಯ ಶತಮಾನದಲ್ಲಿ ಫ್ರಾನ್ಸೆಸ್ಕೊ ಗ್ರಿಮಾಲ್ಡಿ ಸನ್ಯಾಸಿಯ ವೇಷದಲ್ಲಿ ಬಂದು ಕೋಟೆಯ ಬಾಗಿಲು ತಟ್ಟಿದ. ಬಾಗಿಲು ತೆರೆದಾಗ ಸಂಗಡಿಗರ ಜತೆ ಒಳನುಗ್ಗಿ ಕೋಟೆಯನ್ನೇ ವಶಪಡಿಸಿಕೊಂಡ. ಇಂದಿಗೂ ಮೊನಾಕೊದ ರಾಜಮುದ್ರೆಯಲ್ಲಿ ಕತ್ತಿ ಹಿಡಿದ ಇಬ್ಬರು ಸನ್ಯಾಸಿಗಳಿದ್ದಾರೆ.

ಜಗತ್ಪ್ರಸಿದ್ಧ ಮಾಂಟೆ ಕಾರ್ಲೋ ಕ್ಯಾಸಿನೋದಲ್ಲಿ ಜಗತ್ತಿನ ಶ್ರೀಮಂತರು ಆಡುತ್ತಾರೆ. ಆದರೆ, ಮೊನಾಕೊದ ಸ್ವಂತ ಪ್ರಜೆಗಳಿಗೆ ಆ ಜೂಜಿನ ಕೋಣೆಗೆ ಪ್ರವೇಶವಿಲ್ಲ! ಜಗತ್ತಿನ ಹಣದಿಂದ ದೇಶ ನಡೆಯಲಿ, ತಮ್ಮ ಜನರ ಹಣ ಸುರಕ್ಷಿತವಾಗಿರಲಿ ಎನ್ನುವ ಜಾಣತನ.
ಬೆಳೆಯಲು ಜಾಗವಿಲ್ಲದ ಈ ದೇಶ ಸಮುದ್ರದಿಂದಲೇ ನೆಲ ಪಡೆಯುತ್ತಿದೆ. ಇತ್ತೀಚೆಗೆ 2024ರಲ್ಲಿ ಸಹ ಸಮುದ್ರ ಮುಚ್ಚಿ ಆರು ಹೆಕ್ಟೇರ್ ಹೊಸ ನೆಲ ಸೇರಿಸಿತಂತೆ. ನಮ್ಮ ಮಲೆನಾಡಿನ ಒಂದು ಮಧ್ಯಮ ಗಾತ್ರದ ಅಡಿಕೆ ತೋಟದಷ್ಟು. ನಮ್ಮಲ್ಲಿ ಒಂದು ಗುಂಟೆಗಾಗಿ ಕೋರ್ಟು ಮೆಟ್ಟಿಲೇರುತ್ತೇವೆ. ಅಲ್ಲಿ ದೇಶವೇ ಸಮುದ್ರದ ಜತೆ ಜಾಗಕ್ಕಾಗಿ ಮಾತುಕತೆ ನಡೆಸುತ್ತಿದೆ!
80 ಮಂದಿ ಹೋದರು, 81 ಮಂದಿ ಬಂದರು!
ಲಿಕ್ಟೆನ್‌ಸ್ಟೈನ್‌ಗೆ ಹೋಗಿದ್ದು ಬೇರೆಯೇ ಉದ್ದೇಶಕ್ಕೆ. ಸ್ನೇಹಿತರೊಬ್ಬರ ಜತೆ ಆಸ್ಟ್ರಿಯಾ, ಸ್ಲೊವೇನಿಯಾ, ಮ್ಯೂನಿಕ್ ಕಡೆ ಆ ಪ್ರದೇಶವನ್ನೂ ಅಲ್ಲಿನ ವ್ಯಾಪಾರದ ಅವಕಾಶಗಳನ್ನೂ ಅರಿಯಲು ಸುತ್ತುತ್ತಿದ್ದೆವು. ಆ ಪ್ರಯಾಣದ ಒಂದು ನಿಲ್ದಾಣ ಲಿಕ್ಟೆನ್‌ಸ್ಟೈನ್. ಅಲ್ಲಿ ಒಬ್ಬ ಪರಿಚಿತರ ಮನೆಗೆ ಭೇಟಿ ನೀಡಿ ಹಲವು ವಿಚಾರಗಳ ಬಗ್ಗೆ ಮಾತನಾಡಿದೆವು. ಅವರು ಮೂಲತಃ ಭಾರತೀಯರಾದರೂ, ಅಲ್ಲಿ ಸುಮಾರು ಒಂದು ದಶಕದಿಂದ ವಾಸಿಸುತ್ತಿದ್ದಾರೆ. ಮಾತಿನ ನಡುವೆ ಅವರು ಲಿಕ್ಟೆನ್‌ಸ್ಟೈನ್ ಬಗ್ಗೆ ಕೆಲವು ಕುತೂಹಲಕರ ಮಾಹಿತಿಗಳನ್ನೂ ಸೇರಿಸಿದರು!
ಸ್ವಿಟ್ಜರ್‌ಲ್ಯಾಂಡ್ ಮತ್ತು ಆಸ್ಟ್ರಿಯಾದ ನಡುವೆ, ಆಲ್ಪ್ಸ್ ಮಡಿಲಲ್ಲಿರುವ ಈ ದೇಶ ಸುಮಾರು 160 ಚದರ ಕಿಲೋಮೀಟರ್. ಜನಸಂಖ್ಯೆ ಸುಮಾರು 40 ಸಾವಿರ. ಇಲ್ಲಿನ ಸೈನ್ಯದ ಕಥೆ ಕೇಳಿದರೆ ನಗು ಬರುತ್ತದೆ. 1866ರ ಯುದ್ಧಕ್ಕೆ ಲಿಕ್ಟೆನ್‌ಸ್ಟೈನ್ 80 ಸೈನಿಕರನ್ನು ಕಳುಹಿಸಿತು. ವಾಪಸ್ ಬಂದಾಗ ಎಣಿಸಿದರೆ 81 ಜನ! ದಾರಿಯಲ್ಲಿ ಒಬ್ಬ ಸ್ನೇಹಿತ ಜತೆಯಾದ ಎಂಬುದು ಅಲ್ಲಿನ ಜನಪ್ರಿಯ ಕಥೆ. ಎರಡು ವರ್ಷಗಳ ನಂತರ ಸೈನ್ಯ ದುಬಾರಿ ಎಂದು ಅದನ್ನೇ ವಿಸರ್ಜಿಸಿತು.
ಸೈನ್ಯವಿಲ್ಲದ ಈ ದೇಶದೊಳಗೆ ಒಮ್ಮೆ ಸೈನ್ಯ ನುಗ್ಗಿದ್ದೂ ಉಂಟು. 2007ರಲ್ಲಿ ತರಬೇತಿಗೆ ಹೊರಟ 170 ಸ್ವಿಸ್ ಸೈನಿಕರು ಮಳೆಯಲ್ಲಿ ದಾರಿ ತಪ್ಪಿ ಸುಮಾರು ಒಂದೂವರೆ ಕಿಲೋಮೀಟರ್ ಒಳಗೆ ಬಂದುಬಿಟ್ಟರು. ಸ್ವಿಸ್ ಸರಕಾರ ತಿಳಿಸಿದಾಗಲೇ ಲಿಕ್ಟೆನ್‌ಸ್ಟೈನ್‌ಗೆ ಗೊತ್ತಾಗಿದ್ದು! ʼಇದು ಹಿಂದೆಯೂ ಆಗಿದೆʼ ಎಂದು ಅಲ್ಲಿನ ವಕ್ತಾರರು ನಕ್ಕರಂತೆ. ಬೇರೆ ಗಡಿಯಲ್ಲಾಗಿದ್ದರೆ ಅದು ಮೊದಲ ಪುಟದ ಸುದ್ದಿ. ಇಲ್ಲಿ ತಮಾಷೆಯ ಕಥೆ. ನೆರೆಹೊರೆಯ ಮೇಲೆ ನಂಬಿಕೆ ಇದ್ದಾಗ ಗಡಿಗೆ ಬೇಲಿಯೂ ಬೇಕಿಲ್ಲ.
ವ್ಯಾಪಾರದ ವಿಷಯಕ್ಕೆ ಬಂದರೆ ಈ ಪುಟ್ಟ ದೇಶದ ಒಂದು ಸಂಗತಿ ಅಚ್ಚರಿ ಹುಟ್ಟಿಸುತ್ತದೆ. ಜಗತ್ತಿನ ಕೃತಕ ಹಲ್ಲುಗಳಲ್ಲಿ ಸುಮಾರು ಐದನೆಯ ಒಂದು ಭಾಗ ಇಲ್ಲಿನ ಒಂದು ಕಂಪೆನಿಯಲ್ಲೇ ತಯಾರಾಗುತ್ತವೆಯಂತೆ. ನಮ್ಮಲ್ಲಿ ಯಾರಾದರೂ ಹಿರಿಯರು ಹೊಸ ಹಲ್ಲು ಹಾಕಿಸಿಕೊಂಡು ನಕ್ಕರೆ, ಆ ನಗುವಿನ ಹಿಂದೆ ಈ ಪುಟ್ಟ ದೇಶ ಇರಬಹುದು!

ಪುಟ್ಟ ದೇಶದ ದೊಡ್ಡ ಕಥೆ
ದೊಡ್ಡ ಸಾಮ್ರಾಜ್ಯಗಳೇ ಅಳಿದುಹೋದ ಯುರೋಪಿನಲ್ಲಿ ಈ ಪುಟ್ಟ ದೇಶಗಳು ಶತಮಾನಗಳಿಂದ ಹೇಗೆ ಉಳಿದುಕೊಂಡವು? ವ್ಯಾಟಿಕನ್ ನಿಂತಿರುವುದು ನಂಬಿಕೆಯ ಮೇಲೆ. ಮೊನಾಕೊ ನಿಂತಿರುವುದು ಜಾಣತನದ ಮೇಲೆ. ಲಿಕ್ಟೆನ್‌ಸ್ಟೈನ್ ನಿಂತಿರುವುದು ನೆರೆಹೊರೆಯ ವಿಶ್ವಾಸದ ಮೇಲೆ.
ಯುರೋಪಿನಲ್ಲಿ ಇಂಥ ಪುಟ್ಟ ದೇಶಗಳು ಇನ್ನೂ ಇವೆ. ಇಟಲಿಯ ಒಳಗೇ ಇರುವ ಸ್ಯಾನ್ ಮರಿನೋ, ಫ್ರಾನ್ಸ್ ಮತ್ತು ಸ್ಪೇನ್ ನಡುವಿನ ಆಂಡೋರಾ, ಮೆಡಿಟರೇನಿಯನ್ ಸಮುದ್ರದ ಮಾಲ್ಟಾ, ಮೂರು ದೊಡ್ಡ ದೇಶಗಳ ನಡುವೆ ಕುಳಿತ ಲಕ್ಸೆಂಬರ್ಗ್. ಯುರೋಪಿನ ಹೊರಗೆ ನಮ್ಮ ಪಕ್ಕದ ಮಾಲ್ಡೀವ್ಸ್, ಸಿಂಗಾಪುರ, ಪೆಸಿಫಿಕ್ ಸಾಗರದ ಹಲವು ದ್ವೀಪ ರಾಷ್ಟ್ರಗಳು. ಪ್ರತಿಯೊಂದಕ್ಕೂ ತನ್ನದೇ ಕಥೆ. ಪುಟ್ಟ ದೇಶ ಎಂದರೆ ದುರ್ಬಲ ದೇಶ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ, ಇವುಗಳಲ್ಲಿ ಹಲವು ಜಗತ್ತಿನ ಅತ್ಯಂತ ಸ್ಥಿರ ದೇಶಗಳು. ಲಕ್ಸೆಂಬರ್ಗ್, ಲಿಕ್ಟೆನ್‌ಸ್ಟೈನ್, ಮೊನಾಕೊ, ಸಿಂಗಾಪುರ ತಲಾ ಆದಾಯದಲ್ಲಿ ಜಗತ್ತಿನ ಮುಂಚೂಣಿಯಲ್ಲಿವೆ. ಕೆಲವು ವಿಷಯಗಳಲ್ಲಿ ದೊಡ್ಡ ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ಮುಂದಿವೆ.
ನಾವು ದೇಶದ ಶಕ್ತಿಯನ್ನು ಗಾತ್ರ, ಜನಸಂಖ್ಯೆ, ಸೈನ್ಯದಿಂದ ಅಳೆಯುತ್ತೇವೆ. ಆ ಲೆಕ್ಕದಲ್ಲಿ ಈ ದೇಶಗಳಿಗೆ ಜಾಗವೇ ಇಲ್ಲ. ನಕ್ಷೆಯಲ್ಲಿ ಇವುಗಳನ್ನು ಹುಡುಕಲು ಭೂತಗನ್ನಡಿ ಬೇಕಾಗಬಹುದು. ಆದರೆ ಅವುಗಳ ಕಥೆಗಳು ಭೂತಗನ್ನಡಿ ಇಲ್ಲದೆಯೇ ದೊಡ್ಡದಾಗಿ ಕಾಣುತ್ತವೆ. ದೇಶ ಪುಟ್ಟದು, ಕಥೆ ದೊಡ್ಡದು!