Monday, March 23, 2026
Monday, March 23, 2026

ಮೊಘಲರು ಕಟ್ಟಿದ ಬಡವರ ತಾಜ್‌ ಮಹಲ್‌

ದಿಲ್ರಾಸ್ ಸಮಾಧಿಯು ಈ ಸ್ಮಾರಕದಲ್ಲಿ ನೆಲಮಟ್ಟದಿಂದ ಕೆಳಗಿದೆ. ಅಷ್ಟಭುಜಾಕೃತಿಯ ಅಮೃತಶಿಲೆಯ ರಚನೆ ಇದನ್ನು ಸುತ್ತುವರಿದಿದೆ. ರತ್ನಗಂಬಳಿಯ ಹಾಸಿನ ತುಂಬಾ ಪ್ರವಾಸಿಗರು ಅರ್ಪಿಸಿದ ನೋಟುಗಳು, ನಾಣ್ಯಗಳು ತುಂಬಿದ್ದವು. ಈ ಸಮಾಧಿಯನ್ನು ಮೇಲಿನಿಂದಷ್ಟೇ ವೀಕ್ಷಿಸಬಹುದು. ಇಲ್ಲಿನ ಛಾವಣಿ, ಕಿಟಕಿಗಳು, ಚೌಕಟ್ಟುಗಳಲ್ಲಿನ ಕುಸುರಿಕಲೆ ತಾಜ್ ಮಹಲಿನಲ್ಲಿ ಇರುವುದಕ್ಕಿಂತ ವಿಭಿನ್ನವಾಗಿದೆ. ನಾಜೂಕಾಗಿ ನಿರ್ಮಿಸಿದ ಜಾಲಂದ್ರಗಳು ಎಲ್ಲೆಡೆ ಇವೆ. ಬೀಬಿ ಕಾ ಮಕ್ಬಾರದ ವೇದಿಕೆಯ ಮೇಲೆ ಹತ್ತಿದರೆ, ಸ್ಮಾರಕದ ಪಶ್ಚಿಮ ದಿಕ್ಕಿನಲ್ಲಿನ ಮಸೀದಿ, ಸುತ್ತಲಿನ ಪರಿಸರದ ದೃಶ್ಯಗಳನ್ನು ಕಾಣಬಹುದು.

  • ಮಂಜುನಾಥ ಡಿ. ಎಸ್.

ಪ್ರಪಂಚದ ಏಳು ಅದ್ಭುತಗಳಲ್ಲಿ ಆಗ್ರಾದಲ್ಲಿನ ತಾಜ್ ಮಹಲ್ ಸಹ ಒಂದು. ಇದು ಅಮೃತಶಿಲೆಯಿಂದ ನಿರ್ಮಾಣವಾಗಿರುವ ಸ್ಮಾರಕ. ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದಕ್ಕಿಂತ ಚಿಕ್ಕದಾದ, ಇದರ ಪ್ರತಿಕೃತಿಯಂತೆ ಕಾಣುವ ʻಬೀಬಿ ಕಾ ಮಕ್ಬರಾʼ ಹೆಸರಿನ ಸ್ಮಾರಕವೊಂದು ಮಹಾರಾಷ್ಟ್ರದ ಔರಂಗಾಬಾದ್ (ಈಗಿನ ಛತ್ರಪತಿ ಸಂಭಾಜಿನಗರ) ನಗರದಲ್ಲಿದೆ. ದಖಾನಿ ತಾಜ್ ಎಂಬ ಹೆಸರೂ ಇದಕ್ಕಿದೆ. ಇದರ ನಿರ್ಮಾಣಕ್ಕೆ ಭಾಗಶಃ ಅಮೃತಶಿಲೆ ಮತ್ತು ಉಳಿದಂತೆ ಪ್ಲಾಸ್ಟರ್ ಬಳಸಲಾಗಿದೆ. ತಾಜ್ ಮಹಲ್‌ಗೆ ಹೋಲಿಸಿದರೆ ಇದು ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಹಾಗಾಗಿ ಇದನ್ನು ಬಡವರ ತಾಜ್ ಮಹಲ್ ಎಂದೂ ಕರೆಯುತ್ತಾರೆ.

ಇದನ್ನೂ ಓದಿ: ತಿಂದು ಓಡಾಡಿ ಇದು ಇಂದೋರ್‌ ಪ್ರವಾಸ

ಧವಳ ವರ್ಣದ ಮುಖ್ಯದ್ವಾರವನ್ನು ಪ್ರವೇಶಿಸಿದರೆ ಉದ್ಯಾನದ ನಡುವೆ ಚೌಕಾಕಾರದ ವೇದಿಕೆಯ ಮೇಲೆ ಬೀಬಿ ಕಾ ಮಕ್ಬರಾವನ್ನು ಕಣ್ತುಂಬಿಕೊಳ್ಳಬಹುದು. ಉದ್ಯಾನದ ನಡುವೆ ಸಾಲು ಕಾರಂಜಿಗಳಿವೆ. ಕಾಲುಹಾದಿಯ ಇಕ್ಕೆಲೆಗಳಲ್ಲಿ ಜಾಲರಿ ಹಾಗು ಚಿಕ್ಕ ಚಿಕ್ಕ ಗುಮ್ಮಟಗಳಿಂದ ಕೂಡಿದ ಫಲಕಗಳ ತಡೆಗೋಡೆ ಮತ್ತು ಸಾಲು ಗಿಡಗಳಿವೆ. ಈ ಪಾದಚಾರಿ ಮಾರ್ಗದಲ್ಲಿ ಸಾಗಿದಂತೆ ಅಂದದ ಸ್ಮಾರಕ ಅನಾವರಣಗೊಳ್ಳುತ್ತದೆ. ಸ್ಮಾರಕ ಇರುವ ವೇದಿಕೆಯ ನಾಲ್ಕು ಮೂಲೆಗಳಲ್ಲೂ ಒಂದೊಂದು ಮಿನಾರುಗಳಿವೆ. ಉದ್ಯಾನವು ಬುರುಜು ಗೋಡೆಗಳು ಮತ್ತು ಮೂರು ಬದಿಗಳಲ್ಲಿ ತೆರೆದ ಮಂಟಪಗಳಿಂದ ಆವೃತವಾಗಿದೆ. ಮುಖ್ಯ ಗುಮ್ಮಟ ಥೇಟ್‌ ಈರುಳ್ಳಿಯನ್ನು ಹೋಲುತ್ತದೆ.

Untitled design - 2026-03-23T181605.606

ಮೊಘಲ್ ವಾಸ್ತುಶಿಲ್ಪ

ಮೊಘಲ್ ವಾಸ್ತುಶಿಲ್ಪದಲ್ಲಿ ಪ್ರಮುಖವಾಗಿ ಗೋಚರಿಸುವುದು ಗುಮ್ಮಟಗಳು. ಆಕರ್ಷಕ ಕಮಾನು, ಸಮ್ಮಿತಿ ಮತ್ತು ಅಷ್ಟಭುಜಾಕೃತಿಗಳೂ ಇರುತ್ತವೆ. ಅದರಂತೆ ಈ ಸ್ಮಾರಕವೂ ಇದೆ. ಇಲ್ಲಿನ ಉದ್ಯಾನವು ಎಂಟು ವೇದಿಕೆಗಳನ್ನು ಹೊಂದಿದೆ. ಸೂಕ್ಷವಾಗಿ ಗಮನಿಸಿದರೆ ಇಲ್ಲಿ ಇನ್ನೂ ಹಲವಾರು ಅಷ್ಟಭುಜಾಕೃತಿಗಳನ್ನು ಕಾಣಬಹುದು. ಇಲ್ಲಿನ ಸಮಾಧಿಯ ದ್ವಾರವನ್ನು ಮರದಿಂದ ಮಾಡಲಾಗಿದೆ. ಇದರ ಹೊರಭಾಗಕ್ಕೆ ಹೊದಿಸಿರುವ ಹಿತ್ತಾಳೆಯ ಹಾಳೆಯ ಮೇಲೆ ವಿವಿಧ ಬಣ್ಣಗಳ ಬಳ್ಳಿ, ಎಲೆ ಮತ್ತು ಹೂಗಳ ಉಬ್ಬುಶಿಲ್ಪಗಳಿವೆ. ಹಿಡಿಕೆಯೂ ಸುಂದರ ಚಿತ್ತಾರಗಳಿಂದ ಅಲಂಕೃತವಾಗಿದೆ. ನಾವು ಅಲ್ಲಿಗೆ ಹೋಗಿದ್ದಾಗ ಬಹುತೇಕ ವೀಕ್ಷಕರು ಇವುಗಳನ್ನು ಕುತೂಹಲದಿಂದ ನೋಡುತ್ತಿದ್ದರು. ಹಿತ್ತಾಳೆಯ ಹಾಳೆ ಅಲ್ಲಲ್ಲಿ ಕಿತ್ತುಹೋಗಿತ್ತು, ಮೊಳೆಗಳು ಹಾಗೂ ಸಣ್ಣ ಸಣ್ಣ ರಂಧ್ರಗಳಿಂದ ದ್ವಾರ ಅಂದಗೆಟ್ಟಿರುವುದನ್ನು ಕಂಡು ಬೇಸರವಾಯಿತು.

ತಾಜ್‌ ಮಹಲನ್ನೇ ಮೀರಿಸುವ ಕುಸುರಿ ಕಲೆ

ದಿಲ್ರಾಸ್ ಸಮಾಧಿಯು ಈ ಸ್ಮಾರಕದಲ್ಲಿ ನೆಲಮಟ್ಟದಿಂದ ಕೆಳಗಿದೆ. ಅಷ್ಟಭುಜಾಕೃತಿಯ ಅಮೃತಶಿಲೆಯ ರಚನೆ ಇದನ್ನು ಸುತ್ತುವರಿದಿದೆ. ರತ್ನಗಂಬಳಿಯ ಹಾಸಿನ ತುಂಬಾ ಪ್ರವಾಸಿಗರು ಅರ್ಪಿಸಿದ ನೋಟುಗಳು, ನಾಣ್ಯಗಳು ತುಂಬಿದ್ದವು. ಈ ಸಮಾಧಿಯನ್ನು ಮೇಲಿನಿಂದಷ್ಟೇ ವೀಕ್ಷಿಸಬಹುದು. ಇಲ್ಲಿನ ಛಾವಣಿ, ಕಿಟಕಿಗಳು, ಚೌಕಟ್ಟುಗಳಲ್ಲಿನ ಕುಸುರಿಕಲೆ ತಾಜ್ ಮಹಲಿನಲ್ಲಿ ಇರುವುದಕ್ಕಿಂತ ವಿಭಿನ್ನವಾಗಿದೆ. ನಾಜೂಕಾಗಿ ನಿರ್ಮಿಸಿದ ಜಾಲಂದ್ರಗಳು ಎಲ್ಲೆಡೆ ಇವೆ. ಬೀಬಿ ಕಾ ಮಕ್ಬಾರದ ವೇದಿಕೆಯ ಮೇಲೆ ಹತ್ತಿದರೆ, ಸ್ಮಾರಕದ ಪಶ್ಚಿಮ ದಿಕ್ಕಿನಲ್ಲಿನ ಮಸೀದಿ, ಸುತ್ತಲಿನ ಪರಿಸರದ ದೃಶ್ಯಗಳನ್ನು ಕಾಣಬಹುದು.

ಇತಿಹಾಸ

ದಿಲ್ರಾಸ್ ಬಾನು ಬೇಗಂ, ಈಕೆ ಪರ್ಷಿಯಾದ ಹೆಸರಾಂತ ಸಫಾವಿದ್ ವಂಶದ ರಾಜಕುಮಾರಿ. 1637ರಲ್ಲಿ ಔರಂಗಜೇಬನನ್ನು ವರಿಸಿದಳು. ಐದು ಮಕ್ಕಳ ತಾಯಿಯಾದ ದಿಲ್ರಾಸ್ ಬಾನು ಬೇಗಂ ಕೊನೆಯ ಮಗುವಿನ ಜನನದ ನಂತರ ಕೆಲವು ವಾರಗಳಲ್ಲೇ (1657ರಲ್ಲಿ) ನಿಧನಳಾದಳು. ಆಕೆಯ ನೆನಪಿಗಾಗಿ ಔರಂಗಜೇಬನು ದಿಲ್ರಾಸ್‌ನ ಸಮಾಧಿಯನ್ನು ಕಟ್ಟಿಸಿದನು. ಇದಕ್ಕೆ ಬೀಬಿ ಕಾ ಮಕ್ಬರಾ ಎಂದು ಹೆಸರಿಸಿಟ್ಟನು. ಇಲ್ಲಿ ದಿಲ್ರಾಸ್‌ಗೆ ಮರಣೋತ್ತರ ರಬಿಯಾ-ಉದ್-ದೌರಾನಿ ಎಂಬ ಬಿರುದು ನೀಡಿ ಸಮಾಧಿ ಮಾಡಲಾಗಿದೆ. ಮುಖ್ಯದ್ವಾರದ ಮೇಲಿನ ಶಾಸನದಿಂದ ಅತಾ ಉಲ್ಲ ಇದರ ವಾಸ್ತುಶಿಲ್ಪಿ ಮತ್ತು ಹನ್ಸ್ಪತ್ ರಾಯ್ ಇದರ ಎಂಜಿನಿಯರ್ ಎಂದು ತಿಳಿದುಬರುತ್ತದೆ.

Untitled design - 2026-03-23T181554.771

ನೆನಪಿಡಿ

ಸ್ಮಾರಕಕ್ಕೆ ಬೆಳಗಿನ ಎಂಟರಿಂದ ಸಂಜೆ ಎಂಟರವರೆಗೆ ವೀಕ್ಷಣೆಗೆ ಅವಕಾಶ ಇರುತ್ತದೆ.

ಪ್ರವೇಶ ದರ : ಭಾರತೀಯರಿಗೆ 25 ರುಪಾಯಿ ಮತ್ತು ವಿದೇಶಿಯರಿಗೆ 300 ರುಪಾಯಿಗಳು.

ದಾರಿ ಹೇಗೆ?

ಬೆಂಗಳೂರಿನಿಂದ ಛತ್ರಪತಿ ಸಂಭಾಜಿ ನಗರಕ್ಕೆ (ಔರಂಗಾಬಾದ್‌ಗ) ನೇರ ವಿಮಾನ ಸೌಲಭ್ಯವಿದೆ. ಅಲ್ಲಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲೇ ಈ ಸ್ಮಾರಕ ಸಮಾಧಿ ಇದೆ. ಛತ್ರಪತಿ ಸಂಭಾಜಿ ನಗರ ರೈಲು ನಿಲ್ದಾಣ ಹತ್ತಿರದ ರೈಲು ನಿಲ್ದಾಣ. ಸ್ಥಳೀಯ ಸಂಚಾರಕ್ಕೆ ಆಟೋ ಅಥವಾ ಕ್ಯಾಬ್‌ ಬಳಸಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ