Tuesday, March 24, 2026
Tuesday, March 24, 2026

ಏಕಾಂಗಿ ಯಾನದಲಿ ಮೋಹಿರಾ ಅಚಾರ್ಯ

ತಮಿಳುನಾಡಿಗೆ ಹೋದರೆ ಅಲ್ಲಿ ಎಲ್ಲರೂ ತಮಿಳೇ ಮಾತನಾಡುವುದು. ಹಾಗಾಗಿ ನಾವು ಕೂಡ ಬೇಸಿಕ್ ತಮಿಳು ಕಲಿಯಲೇಬೇಕು! ಮುಂಬೈಗೆ ಹೋದರೆ ಅದೊಂದು ಬ್ಯುಸಿನೆಸ್‌ ಸ್ಟೇಟ್‌ ಹೇಗಿರುತ್ತೆ ಎನ್ನುವ ಪಾಠ ಹೇಳಿಕೊಡುತ್ತದೆ. ಒಡಿಶಾದಲ್ಲಿ ಧಾರ್ಮಿಕತೆ ಇದೆ. ಪುರಿ ಜಗನ್ನಾಥದಲ್ಲಿಯೂ ಡಿವೈನ್‌ ಎಕ್ಸ್‌ಪೀರಿಯೆನ್ಸ್‌. ಗಾಳಿಯ ವಿರುದ್ಧ ದಿಕ್ಕಿನಲ್ಲಿ ಬಾವುಟ ಹಾರುವುದು ಅಲ್ಲಿನ ವಿಶೇಷತೆ.

  • ಶಶಿಕರ ಪಾತೂರು

ಕನ್ನಡತಿಯ ಬಿಂದುವಾಗಿ ಜನಪ್ರಿಯರಾದ ಮೋಹಿರಾ ಆಚಾರ್ಯ ಪ್ರಸ್ತುತ 'ಅಂತರ್ಯಾಮಿ' ಚಿತ್ರದ ಮೂಲಕ‌ ಚಿತ್ರರಂಗ ಪ್ರವೇಶಿಸಿದ್ದಾರೆ. ಬಿಡುವಾದಾಗೆಲ್ಲ ಸೋಲೋ ಟ್ರಿಪ್ ಹೋಗುವ ಈ ಸುಂದರಿ ತಮ್ಮ ಪ್ರವಾಸಾನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕುವೆಂಪು ತವರಿಗಿದೆ ಕವಿಯಾಗಿಸುವ ಶಕ್ತಿ!

ಪ್ರವಾಸ ಅಂದರೆ ನಿಮಗೆ ಎಷ್ಟು ಇಷ್ಟ?

ಪ್ರವಾಸ ಮಾಡುವುದು ನನಗೆ ತುಂಬ ಇಷ್ಟ. ನಾನು ಹುಟ್ಟಿದ್ದೇ ಪ್ರವಾಸಿತಾಣವಾದ ಶಿವಮೊಗ್ಗದಲ್ಲಿ. ಆದರೆ ಓದಿದ್ದೆಲ್ಲ ಬೆಂಗಳೂರಲ್ಲೇ. ಎಂಟನೆಯ ತರಗತಿಯಲ್ಲಿದ್ದಾಗಲೇ ಶಾಲೆಯಿಂದ ಸಿಂಗಾಪುರಕ್ಕೆ ಪ್ರವಾಸ ಹೋಗಿದ್ದೆವು.‌ ಅದು ನನ್ನ ಮೊದಲ ಅಂತಾರಾಷ್ಟ್ರೀಯ ಪ್ರವಾಸ. ಅಲ್ಲಿನ ಥೀಮ್ ಪಾರ್ಕ್ ಯೂನಿವರ್ಸಲ್ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದೆವು. 'ಲಿಟ್ಲ್ ಇಂಡಿಯಾ'ವನ್ನು ಎಂಜಾಯ್ ಮಾಡಿದ್ದೆವು. ಅಲ್ಲಿಂದ ಮಲೇಷಿಯಾಗೂ ಹೋಗಿದ್ದೆವು. ಈಗಲೂ ಶೂಟಿಂಗ್ ಇರದಿದ್ದಾಗ ಸೋಲೋ‌ ಟ್ರಿಪ್ ಹೋಗುತ್ತಿರುತ್ತೇನೆ.

Untitled design - 2026-03-24T105500.784

ನಿಮ್ಮ ಸೋಲೋ ಟ್ರಿಪ್ ಅನುಭವಗಳ ಬಗ್ಗೆ ಹೇಳಿ

ನಾನು ಸೋಲೋ ಟ್ರಿಪ್ ಶುರು ಮಾಡಿರುವುದು ಕಳೆದ ಮೂರು ವರ್ಷಗಳಿಂದ. ಯಾಕೆಂದರೆ ನನಗೂ ಫ್ರೆಂಡ್ಸ್ ಟೈಮ್ ಗೂ ಹೊಂದಾಣಿಕೆ ಆಗದ ಕಾರಣ ನಾನು ಸೋಲೋ‌ ಟ್ರಿಪ್ ಶುರು ಮಾಡಿದೆ. ತಮಿಳುನಾಡಿನ ಹಲವಾರು ದೇವಸ್ಥಾನಗಳಿಗೆ ಸೋಲೋ ಆಗಿಯೇ ಹೋಗಿದ್ದೇನೆ. ಚಿದಂಬರಂ ದೇವಸ್ಥಾನದ ಶಿಲ್ಪಕಲೆ ಅದ್ಭುತವಾಗಿದೆ. ಅರುಣಾಚಲೇಶ್ವರಕ್ಕೂ ಹೋಗಿದ್ದೇನೆ. ಇತ್ತೀಚೆಗೆ ಹೋಗಿರುವುದು ಮಹಾಲಿಂಗೇಶ್ವರ ದೇವಸ್ಥಾನಕ್ಕೆ. ತಿರುಪರಂಕುಂಡ್ರಮ್, ತಿರುಚಂದೂರು, ಪಳನಿ, ಸ್ವಾಮಿ ಮಲೈ, ತಿರುತನಿ, ಪಯಮುದಿರ್ಚೋಲೈ ಹೀಗೆ ಸುಬ್ರಹ್ಮಣ್ಯ ದೇವರ 6 ಕ್ಷೇತ್ರ ದರ್ಶನವನ್ನು ಒಂದೇ ಸಲ ಪೂರ್ತಿಮಾಡಿದ್ದೇನೆ.

ಸೋಲೋ‌ ಟ್ರಿಪ್ ಭಯ ತಂದ ಸಂದರ್ಭ ಇವೆಯಾ?

ಆಂಧ್ರ ಪ್ರದೇಶದ ಕಾಳಹಸ್ತಿ ದೇಗುಲಕ್ಕೆ ಕೂಡ ಸೋಲೋ ಟ್ರಿಪ್ ಹೋಗಿದ್ದೆ. ಅಲ್ಲೊಬ್ಬರು ಆಂಟಿ ಒಬ್ಬಳೇ ಓಡಾಡ್ತೀಯ? ಯಾರಾದರೂ ಎತ್ಕೊಂಡು ಹೋದರೆ ಏನು ಮಾಡ್ತೀಯ ಎಂದು ಕೇಳಿದ್ದರು. ನಾವು ಧೈರ್ಯದಿಂದ ಹೋದರೆ ಯಾರು ಏನು ತಾನೇ ಮಾಡ್ತಾರೆ? ಸಾಮಾನ್ಯವಾಗಿ ಕರ್ನಾಟಕದೊಳಗೆ ನಾನು ಎಲ್ಲೇ ಹೋದರೂ ಕನಿಷ್ಠ ಒಂದು ಕುಟುಂಬವಾದರೂ ನನ್ನನ್ನು ಗುರುತಿಸುತ್ತಾರೆ. ಹಾಗಾಗಿ ನಾನು ಎಲ್ಲಿಯೂ ಒಬ್ಬಂಟಿ ಅನಿಸುವುದಿಲ್ಲ. ಮಂತ್ರಾಲಯಕ್ಕೂ ಒಬ್ಬಳೇ ಹೋಗಿದ್ದೆ. ತುಂಗಾನದಿಯಲ್ಲಿ ಮುಳುಗಿ ಹೋಗಲು ಅಮ್ಮ ಹೇಳಿದ್ದರು. ಅಲ್ಲಿ ಪರಿಚಿತರಾದವರೇ ನಾನು ಮುಳುಗು ಹಾಕಲು ಸಹಾಯ ಮಾಡಿದ್ದರು.

ಫ್ರೆಂಡ್ಸ್ ಜತೆ ಯಾವೆಲ್ಲ ಪ್ರವಾಸಿ ತಾಣ ಸಂದರ್ಶಿಸಿದ್ದೀರಿ?

ತುಂಬ ಕಡೆಗೆ ಹೋಗಿದ್ದೇವೆ. ಮನಾಲಿಗೆ ಹೋಗಬೇಕಾದರೆ ದೆಹಲಿ ತನಕ ವಿಮಾನದಲ್ಲಿ ಹೋಗಿದ್ದೆವು. ಅಲ್ಲಿಂದ ರಸ್ತೆ ಮೂಲಕವೇ ಮನಾಲಿ ತಲುಪಿದೆವು. ನಾನು ಪ್ರವಾಸದ ಮೂಲಕ‌‌ ಅಲ್ಲಿನ‌ ಪರಿಸರವನ್ನು ಮಾತ್ರ ಎಂಜಾಯ್ ಮಾಡುವುದಲ್ಲ. ಅಲ್ಲಿನ ಜನಗಳ ಅಭಿರುಚಿಗಳ ವೈವಿಧ್ಯವನ್ನೂ ಅರಿಯಲು ಪ್ರಯತ್ನಿಸುತ್ತೇನೆ. ಅದೇ ರೀತಿ ಒಂದೊಂದು ಊರು ಬದಲಾಗುತ್ತಿದ್ದಂತೆ ಅಲ್ಲಿನ ಆಹಾರ ಕೂಡ ಬದಲಾಗುವುದನ್ನು ನೋಡಬಹುದಾಗಿದೆ.

ನೀವು ಹೋದಂಥ ಪ್ರದೇಶದಲ್ಲಿ ಮನಸೆಳೆದ ಆಹಾರಗಳು ಯಾವುವು?

ಚಂಡೀಗಢ ಹೋದಾಗ ಡಾಬಾದಲ್ಲಿ ಆಹಾರ ಸೇವಿಸಿದ್ದೇನೆ. ಕರ್ನಾಟಕದಲ್ಲಿ ಒಂದೊಂದು ಊರು ದಾಟಿದ ಹಾಗೆ, ಒಬ್ಬೊಬ್ಬರು ಒಂದೊಂದು ರೀತಿ ವಗ್ಗರಣೆ ಹಾಕುವುದನ್ನು ಗಮನಿಸಿದ್ದೇನೆ. ಉಡುಪಿ, ಗುಲ್ಬರ್ಗಾ, ಬೆಂಗಳೂರು, ಭದ್ರಾವತಿ ಇಲ್ಲೆಲ್ಲ ಸಾಂಬಾರ್‌ಗೆ ಹಾಕುವ ವಗ್ಗರಣೆ ಒಂದೊಂದು ರೀತಿಯಲ್ಲಿರುತ್ತದೆ. ನಾನು ಕೂಡಾ ಅಲ್ಲಿನ ಶೈಲಿ ತಿಳಿದುಕೊಂಡು ಅಡುಗೆ ಕಲಿತುಕೊಂಡಿದ್ದೇನೆ.

Untitled design - 2026-03-24T105512.952

ಪ್ರವಾಸದ ವೇಳೆ ನಡೆದ ಮರೆಯಲಾರದ ಘಟನೆಗಳೇನಾದರೂ ಇವೆಯೇ?

ಒಮ್ಮೆ ಕಾರವಾರದಿಂದ ಬೆಂಗಳೂರಿಗೆ ಬರಬೇಕಾದರೆ ರಾತ್ರಿ ಕಾರು ಲಾಕ್ ಮಾಡಿ, ಲೈಟ್ ಆನ್ ಮಾಡಿ ಮಲಗಿದ್ವಿ. ಬೆಳಿಗ್ಗೆ ಏಳಬೇಕಾದರೆ ಬ್ಯಾಟರಿ ಪೂರ್ತಿ ಖಾಲಿಯಾಗಿತ್ತು.‌ ಹತ್ತಿರ ಮೆಕಾನಿಕ್ ಶಾಪ್ ಕೂಡ ಇರಲಿಲ್ಲ. ಅದೇ ರೀತಿ ಯಾಣಕ್ಕೆ ಹೋದಾಗ ಅಲ್ಲಿ ಇದ್ದ ಜಿಗಣೆಗಳು ರಕ್ತ ಹೀರಿದ್ದು ಕೂಡ ಮರೆಯಲಾಗದು! ತುಂಬಾ ಕಷ್ಟಪಟ್ಟು ಟ್ರೆಕ್ಕಿಂಗ್‌ ಮಾಡಿ ಒಳಗೆ ನೋಡುವಂಥ ಸ್ಥಳಗಳು ಅವು. ಶಿಮ್ಲಾದಲ್ಲಿ ರಾತ್ರಿ 8 ಗಂಟೆಯಿಂದ‌ ಬೆಳಗಿನ ತನಕ ರಸ್ತೆಯೆಲ್ಲಾ ಮಂಜುಗಡ್ಡೆ ತುಂಬಿ ಪ್ರಯಾಣವೇ ನಿಂತು‌ಹೋಗಿತ್ತು. ಎಲ್ಲೋರಾ, ಅಜಂತಾ ಗುಹೆಗಳ ಪ್ರವಾಸ ಅವುಗಳ ಅದ್ಭುತ ಕಲಾವಂತಿಕೆಯಿಂದ ಮರೆಯಲಾಗದ ಪ್ರವಾಸವಾಗಿ ಉಳಿದುಕೊಂಡಿವೆ.

ಪ್ರವಾಸಗಳಿಂದ ನೀವು ಕಲಿತುಕೊಂಡಿದ್ದೇನು?

ತಮಿಳುನಾಡಿಗೆ ಹೋದರೆ ಅಲ್ಲಿ ಎಲ್ಲರೂ ತಮಿಳೇ ಮಾತನಾಡುವುದು. ಹಾಗಾಗಿ ನಾವು ಕೂಡ ಬೇಸಿಕ್ ತಮಿಳು ಕಲಿಯಲೇಬೇಕು! ಮುಂಬೈಗೆ ಹೋದರೆ ಅದೊಂದು ಬ್ಯುಸಿನೆಸ್‌ ಸ್ಟೇಟ್‌ ಹೇಗಿರುತ್ತೆ ಎನ್ನುವ ಪಾಠ ಹೇಳಿಕೊಡುತ್ತದೆ. ಒಡಿಶಾದಲ್ಲಿ ಧಾರ್ಮಿಕತೆ ಇದೆ. ಪುರಿ ಜಗನ್ನಾಥದಲ್ಲಿಯೂ ಡಿವೈನ್‌ ಎಕ್ಸ್‌ಪೀರಿಯೆನ್ಸ್‌. ಗಾಳಿಯ ವಿರುದ್ಧ ದಿಕ್ಕಿನಲ್ಲಿ ಬಾವುಟ ಹಾರುವುದು ಅಲ್ಲಿನ ವಿಶೇಷತೆ. ಸೂರ್ಯ ದೇವಸ್ಥಾನ ಕೂಡಾ ನೋಡಿದ್ದು ಅಲ್ಲೇ. ಮೊಘಲರ ಕೊಡುಗೆಗಳನ್ನು ಕುತುಬ್‌ ಮಿನಾರ್‌, ತಾಜ್‌ಮಹಲ್‌ ತಿಳಿಸುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್