ಕುವೆಂಪು ತವರಿಗಿದೆ ಕವಿಯಾಗಿಸುವ ಶಕ್ತಿ!
ಇತ್ತೀಚೆಗಷ್ಟೇ ಸಕಲೇಶಪುರದ ಸೋಮವಾರಪೇಟೆ, ಶನಿವಾರ ಸಂತೆ ನಡುವಿನ ಹಿಲ್ ಸ್ಟೇಷನ್ ಒಂದರಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿಯ ಚಿತ್ರೀಕರಣದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿತ್ತು. ಶೂಟಿಂಗ್‌ಗೆಂದು ಹೋದಾಗ ತಂಡದೊಂದಿಗೆ ಇರಬೇಕಾಗುತ್ತದೆ. ಬಿಸಿಲಿರಲಿ, ಮಳೆಯಿರಲಿ, ಎಷ್ಟೇ ಕಷ್ಟವಾದರೂ ಹೊಂದಿಕೊಳ್ಳಬೇಕಾಗುತ್ತದೆ. ಆ ವೇಳೆ ಖಾಸಗಿ ಪ್ರವಾಸಗಳ ಯೋಜನೆ ಹಾಕಿಕೊಳ್ಳುವುದು ಕಷ್ಟ. ಆದರೆ ಚಿತ್ರೀಕರಣಕ್ಕಾಗಿ ಹೋಗುವ ಪ್ರವಾಸಕ್ಕಿಂತ ಖಾಸಗಿ ಪ್ರವಾಸಗಳೇ ನನಗಿಷ್ಟ.
ಕನ್ನಡ ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವ ನಟ ರಾಜೇಶ್ ಧ್ರುವ, ʻಅಗ್ನಿಸಾಕ್ಷಿʼ ಧಾರಾವಾಹಿಯ ಮೂಲಕ ಜನಪ್ರಿಯರಾಗಿ ಸದ್ಯ ʻಕಲರ್ಸ್ ಕನ್ನಡʼ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯ ಪಯಣದ ಜತೆಗೆ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಧ್ರುವ ಸದ್ಯ ಸುಕೇಶ್ ಶೆಟ್ಟಿ ನಿರ್ದೇಶನದ ಪೀಟರ್ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿ, ಸಿನಿಮಾಗಳ ನಡುವೆಯೇ ಬಿಡುವು ಮಾಡಿಕೊಂಡು ಪ್ರವಾಸ ಕೈಗೊಳ್ಳುವ ರಾಜೇಶ್ ತಮ್ಮ ಪ್ರವಾಸಿ ಜೀವನದ ಬಗ್ಗೆ ಏನಂತಾರೆ ಗೊತ್ತಾ?
ಪ್ರವಾಸ ಇಷ್ಟವಾದರೂ ಸ್ವಲ್ಪ ಕಷ್ಟ
ಟ್ರಾವೆಲ್ ಅಂದರೆ 70 ಪರ್ಸೆಂಟ್ ಇಷ್ಟ. ಉಳಿದ 30 ಪರ್ಸೆಂಟ್ ಕಷ್ಟ. ನಾನು ಟ್ರಾವೆಲ್ ಮಾಡುವುದೆಲ್ಲವೂ ನನ್ನ ಕಾರ್‌ನಲ್ಲೇ. ಅದು ನನಗೆ ಖುಷಿಕೊಡುತ್ತದೆ. ಆದರೆ ದೂರದ ಪ್ರಯಾಣದಿಂದ ಬೇಗ ದಣಿವಾಗಿಬಿಡುತ್ತದೆ. ಡ್ರೈವಿಂಗ್ ಪಾರ್ಟ್ನರ್ ಇಲ್ಲವಾದರಂತೂ ಹೋದ ಸ್ಥಳದಲ್ಲಿ ಎಂಜಾಯ್ ಮಾಡಿದರೂ, ಬರುತ್ತಲೇ ಯಾಕೆ ಬೇಕಿತ್ತು ಈ ಪ್ರವಾಸ ಅನಿಸಿಬಿಡುತ್ತದೆ. ಆ ಪ್ರವಾಸದ ದಣಿವಾರಿಸಿಕೊಳ್ಳಲು ನಂತರದ ಎರಡು ದಿನಗಳಾದರೂ ಬೇಕು. ಅದಕ್ಕೆ ಟ್ರಾವೆಲ್ ನನಗೆ ಇಷ್ಟವೂ ಹೌದು, ಕಷ್ಟವೂ ಹೌದು. ಆದರೂ ಪ್ರವಾಸಕ್ಕೆ ಹೋಗದಿರಲು ಸಾಧ್ಯವೇ ಇಲ್ಲ.
ದೇವರನಾಡಿನಲ್ಲಿ ಎರಡು ದಿನಗಳ ಸುತ್ತಾಟ
ಇತ್ತೀಚೆಗಷ್ಟೇ ದೇವರನಾಡು ಕೇರಳದ ವಯನಾಡು ಹಾಗೂ ಕೋಝಿಕೋಡ್‌ನ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದೆ. ಸ್ನೇಹಿತರ ಜತೆ ಹೋಗಿದ್ದ ಎರಡು ದಿನಗಳ ಪ್ರಯಾಣವಾಗಿತ್ತು. ಮೊದಲ ದಿನದ ಸಂಜೆಯ ಸಮಯವನ್ನು ಕೋಝಿಕೋಡ್‌ನ ಬೀಚ್ ನಲ್ಲಿ ಕಳೆದು, ಬರುವಾಗ ವಯನಾಡಿನ ತಣ್ಣನೆಯ ವಾತಾವರಣದಲ್ಲಿ ಮುಂಜಾನೆಯ ಹೊಂಬಿಸಿಲನ್ನು ಅನುಭವಿಸಿದ್ದೆ. ನನ್ನ ಪ್ರಕಾರ ಬೇಸಗೆಯ ಸುಡು ಬಿಸಿಲಲ್ಲಿ ಬೀಚ್‌ಗೆ ಹೋಗದಿರುವುದೇ ಒಳ್ಳೆಯದು. ಟ್ಯಾನ್ ಆದರೆ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದು ಕಷ್ಟವಾಗುತ್ತದೆ. ನನಗೆ ಎಂಜಾಯ್‌ಮೆಂಟ್ ಜತೆಗೆ ಕಂಫರ್ಟ್ ಫೀಲ್ ಇರಲೇಬೇಕು.
ಪ್ರವಾಸದಲ್ಲೂ ಹೋಮ್ಲಿ ಫೀಲ್

ನನ್ನ ಟ್ರಾವೆಲ್ ಬ್ಯಾಗ್ ಮೀಡಿಯಂ ಆಗಿರುತ್ತದೆ. ಎರಡು ಜತೆ ಬಟ್ಟೆ ಬೇಕಾದಲ್ಲಿ ಐದು ಜತೆ ಬಟ್ಟೆಯನ್ನು ಪ್ಯಾಕ್ ಮಾಡಿರುತ್ತೇನೆ. ನನಗಲ್ಲದೇ ಹೋದರೂ ಇತರರಿಗಾಗಿ, ಇಲ್ಲವೇ ಪ್ಲಾನ್ ಬದಲಾದರೆ ಎಂಬ ಮುನ್ನೆಚ್ಚರಿಕೆಯಿಂದಲೇ ಬ್ಯಾಗ್ ಸಿದ್ಧಗೊಳಿಸಿರುತ್ತೇನೆ. ಇದಿಷ್ಟೇ ಅಲ್ಲದೆ ನನ್ನ ಟವೆಲ್, ಬೆಡ್‌ಶೀಟ್ ಎಲ್ಲವನ್ನೂ ಪ್ರವಾಸದ ವೇಳೆ ಜತೆಗಿರಿಸಿಕೊಂಡಿರುತ್ತೇನೆ. ಇದರಿಂದ ನನಗೆ ಹೋಮ್ಲಿ ಫೀಲ್ ಸಿಕ್ಕಂತಾಗುತ್ತದೆ.
ತಲಕಾವೇರಿ ಮಡಿಲಲ್ಲಿ ಪೀಟರ್ ಚಿತ್ರೀಕರಣ
ನನ್ನ ಮೊದಲ ಸಿನಿಮಾ ಬಾಲಾಜಿ ಫೊಟೋ ಸ್ಟುಡಿಯೋದ ಚಿತ್ರೀಕರಣವನ್ನು ನನ್ನೂರು ಶಿರಸಿಯ ಆಸುಪಾಸಿನಲ್ಲೇ ಮಾಡಲಾಗಿತ್ತು. ಸದ್ಯ ನಾನು ಅಭಿನಯಿಸಿರುವ ಪೀಟರ್ ಸಿನಿಮಾ ತಲಕಾವೇರಿ ಸಮೀಪದ ಭಾಗಮಂಡಲದಲ್ಲಿ ಚಿತ್ರೀಕರಣಗೊಂಡಿದೆ. ತಲಕಾವೇರಿ ಊರಿನ ಬಗೆಗೆ ನಮ್ಮ ರಾಜ್ಯದ ಜನರಿಗೆ ಅಷ್ಟಾಗಿ ಮಾಹಿತಿಯಿಲ್ಲ. ಅದೊಂದು ಸುಂದರವಾದ ಊರು. ಅಲ್ಲಿನ ಅದ್ಭುತವಾದ ಸೌಂದರ್ಯವನ್ನು ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಕಾವೇರಿ ಹರಿದು ಬರುವ ಸ್ಥಳ, ದೇವಾಲಯಗಳ ತವರು. ಅಲ್ಲಿನ ಬೆಟ್ಟವೇರಿದರೆ ಸುತ್ತಲೂ 360 ಡಿಗ್ರಿ ಪ್ರದೇಶವನ್ನು ಕಾಣಬಹುದು. ಆ ಹಿತವಾದ ಪರಿಸರದ ಕಾರಣದಿಂದಲೇ ಪೀಟರ್ ಸಿನಿಮಾದ ಚಿತ್ರೀಕರಣ ನನಗೆ ಹೆಕ್ಟಿಕ್ ಅನಿಸಲೇ ಇಲ್ಲ. ಬಿಡುವು ಮಾಡಿಕೊಂಡು ಮತ್ತೊಮ್ಮೆ ಆ ಜಾಗಕ್ಕೆ ಭೇಟಿ ನೀಡಬೇಕು ಎನಿಸಿದೆ.
ನನ್ನೂರೇ ನನಗೆ ಮೇಲು

ಎಲ್ಲೇ ಹೋಗಲಿ, ಏನೇ ಮಾಡಲಿ ಮಲೆನಾಡಿನ ಹೆಬ್ಬಾಗಿಲೆನಿಸಿಕೊಂಡಿರುವ ನನ್ನೂರು ಶಿರಸಿಯಲ್ಲಿ ಸಿಗುವ ಸುಖ ನೆಮ್ಮದಿ ಬೇರೆಲ್ಲೂ ಸಿಗುವುದೇ ಇಲ್ಲ. ಅದರಲ್ಲೂ ಮಳೆಗಾಲದಲ್ಲಿ ಶಿರಸಿ ಭೇಟಿ ನೀಡಿದರೆ ಗಣೇಶ್ ಫಾಲ್ಸ್, ಸೋಂದಾ, ಬೆಣ್ಣೆಹೊಳೆ ಫಾಲ್ಸ್ ಹೀಗೆ ಸುಮಾರು 30-40 ಫಾಲ್ಸ್‌ಗಳು ಭೋರ್ಗರೆಯುತ್ತಿರುತ್ತವೆ. ಪರಂಪರೆಯನ್ನು ಸಾರುವ ಭೀಮನಗುಡ್ಡ, ಬನವಾಸಿಯಂಥ ಜಾಗಗಳು, ಯಾಣದಂಥ ವಿಶೇಷ ಪರಿಸರವೇ ನನ್ನೂರಿನ ಹಿರಿಮೆ.
ದೇಗುಲಗಳ ದರ್ಶನ
ಧಾರ್ಮಿಕ ಕ್ಷೇತ್ರಗಳ ಪ್ರವಾಸ ಮಾಡುವುದೆಂದರೆ ನನಗೆ ಬಹಳ ಇಷ್ಟ. ಅನೇಕ ಸಲ ಪ್ರವಾಸಕ್ಕೆಂದು ಹೋಗಿ ಅಲ್ಲಿ ಸುತ್ತಮುತ್ತಲಿನ ದೇವಾಲಯಗಳಿಗೆ ಭೇಟಿ ನೀಡಿರುವುದೂ ಇದೆ. ಸಾಗರಕ್ಕೆ ಹೋದರೆ ವರದಹಳ್ಳಿ, ಸಿಗಂದೂರಿಗೆ ಹೋಗುತ್ತೇನೆ. ಕುಂದಾಪುರಕ್ಕೆ ಹೋದರೆ ಮಾರನಕಟ್ಟೆ, ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯುತ್ತೇನೆ.
ಕುವೆಂಪು ಮನೆ, ಮನಗಳ ನಡುವೆ
ಕುಪ್ಪಳ್ಳಿ ಒಂದು ಅದ್ಭುತ ಜಾಗ. ಅಂಥ ಜಾಗದಲ್ಲಿ ಮನೆ ಕಟ್ಟುವುದಕ್ಕೆ, ಉಳಿದುಕೊಳ್ಳುವ ಅವಕಾಶ ಸಿಕ್ಕಿದರೆ ಮೊದಲು ಹೋಗುತ್ತೇನೆ. ಅಲ್ಲಿನ ಪ್ರಕೃತಿಗೆ ಮನಸೋಲದವರೇ ಇಲ್ಲ. ಕಟುಕನಾದವನನ್ನೂ ಕವಿಯಾಗಿಸುವ ಶಕ್ತಿ ಆ ಪರಿಸರಕ್ಕಿದೆ. ಕುವೆಂಪು, ಪೂರ್ಣಚಂದ್ರ ತೇಜಸ್ವಿಯವರು ಸಾಹಿತ್ಯದಲ್ಲಿ, ಬರವಣಿಗೆಯಲ್ಲಿ ತೊಡಗಿಸಿಕೊಂಡ ಆ ಜಾಗದಲ್ಲಿ ಕುಳಿತಾಗ ನಾನೂ ಕವಿ, ಸಾಹಿತಿಯೆಂಬ ಅನುಭವವಾಗಿತ್ತು. ಈಗ ಕುಪ್ಪಳ್ಳಿ ಮ್ಯೂಸಿಯಂ ಆಗಿದ್ದರೂ ಜೀವಂತಿಕೆಯಿದೆಯೆಂಬ ಭಾವ ಮೂಡಿಸುತ್ತದೆ. ಅಲ್ಲಿಗೆ ಯಾವಾಗ ಹೋದರೂ ಹೊಸತನವಿರುತ್ತದೆ.
ಗುರು ರಾಯರ ದರುಶನ
ನಾನು ರಾಯರ ಭಕ್ತ. ಸಾಧ್ಯವಾದಾಗಲೆಲ್ಲಾ ಮಂತ್ರಾಲಯಕ್ಕೆ ಹೋಗಿಬರುತ್ತಿರುತ್ತೇನೆ. ಅಲ್ಲಿ ಕಳೆಯುವ ಪ್ರತಿ ಘಳಿಗೆಯಲ್ಲೂ ರಾಯರು ಜತೆಗೇ ಇದ್ದಾರೆಂಬಂತೆ ಅನುಭವವಾಗುತ್ತದೆ.
ಸೋಲೋ ಟ್ರಾವೆಲ್ ಕಷ್ಟ

ನಾನು ಸೋಲೋ ಟ್ರಾವೆಲರ್ ಅಲ್ಲ. ಅನಿವಾರ್ಯವಾಗಿ ಒಬ್ಬನೇ ಪ್ರಯಾಣಿಸಬೇಕಾಗುವುದು ಹೊರತು ಪಡಿಸಿ ನಾನು ಟ್ರಾವೆಲ್ ಪಾರ್ಟ್ನರ್ಸ್ ಜತಗೇ ಪ್ರಯಾಣ ಮಾಡುವವನು. ಅದರಲ್ಲೂ ನನ್ನ ಸಹ ಕಲಾವಿದೆ, ನನ್ನ ಆಪ್ತ ಗೆಳತಿ ರಾಧಿಕಾ ಹಾಗೂ ಬಾಲ್ಯ ಕಾಲದಿಂದಲೂ ಗೆಳೆಯನಾಗಿರುವ ಶರತ್‌ನೊಂದಿಗೆ ಪ್ರಯಾಣಿಸುವುದೇ ಹೆಚ್ಚು.
ಪ್ರವಾಸಿ ತಾಣಗಳ ಅಭಿವೃದ್ಧಿಯಾಗಲಿ
ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಯಾಗಲೇಬೇಕು. ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ಆಡಳಿತ ಮಂಡಳಿಯೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಆದರೆ ಸರಕಾರದಿಂದ ಯಾವ ಸಹಾಯವೂ ಸಿಗಲಿಲ್ಲ. ಆದರೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಮಂತ್ರಾಲಯ ಸೇರಿದಂತೆ ಅನೇಕ ದೇವಾಲಯಗಳ ಅಭಿವೃದ್ಧಿಯತ್ತ ಸರಕಾರ ಗಮನಹರಿಸಿದ್ದು ಇದು ಪ್ರವಾಸೋದ್ಯಮದ ಗೆಲುವು.
ಸಿಗಂದೂರಿಗೆ ಲಾಂಚ್ ಬೇಕಿತ್ತು
ಕೆರಾಡಿ ನಟ ರಿಷಬ್ ಶೆಟ್ಟಿಯವರ ಊರು. ಇಲ್ಲಿ ಕಾಂತಾರದ ಕೆಲವು ಭಾಗಗಳ ಚಿತ್ರೀಕರಣವಾಗಿದೆ. ಅಲ್ಲಿಂದ ಕಮಲಶಿಲೆ, ಕೊಲ್ಲೂರು ಮಾರನಕಟ್ಟೆಗೂ ಹೋಗಬಹುದು. ಆದರೆ ಆ ಜಾಗ ಕಾಡಿನ ಮಾರ್ಗ, ಕಲ್ಲಿನ ದಾರಿ. ಹಾಗೆಂದು ಅದರ ಅಭಿವೃದ್ಧಿಗೆ ಮುಂದಾದರೆ ಆ ಜಾಗದ ನೈಸರ್ಗಿಕ ಅಂದ ಕಳೆದುಹೋಗುತ್ತದೆ ಎನ್ನುವುದು ನನ್ನ ಅನಿಸಿಕೆ. ಅದರಂತೆಯೇ ಸಿಗಂದೂರಿಗೆ ಮೊದಲೆಲ್ಲಾ ಲಾಂಚ್ನಲ್ಲಿಯೇ ಹೋಗುತ್ತಿದ್ದೆವು. ಅದರ ಮಜವೇ ಬೇರೆಯಿತ್ತು. ಅಭಿವೃದ್ಧಿ ಅನಿವಾರ್ಯವಾಗಿ ಮೇಲ್ಸೇತುವೆ ನಿರ್ಮಾಣ ಮಾಡಿದರೂ ಲಾಂಚ್ ಅನುಭವ ಮಿಸ್ ಮಾಡಿಕೊಳ್ಳುತ್ತೇನೆ.
ವಿದೇಶದಲ್ಲಿ ಶೂಟಿಂಗ್ - ಪ್ರವಾಸ
ಅತಿ ಶೀಘ್ರದಲ್ಲೇ ವಿದೇಶಿ ಪ್ರಯಾಣ ಮಾಡಬೇಕು ಅಂದುಕೊಂಡಿದ್ದೇನೆ. ಈಗಾಗಲೇ ಪಾಸ್‌ಪೋರ್ಟ್ ಕೈಸೇರಿದೆ. ಆದರೆ ಅದರಲ್ಲಿ ಇನ್ನೂ ಯಾವುದೇ ಸೀಲ್ ಬಿದ್ದಿಲ್ಲವಷ್ಟೇ. ಬಕೆಟ್ ಲಿಸ್ಟ್‌ನಲ್ಲಿ ಸ್ವಿಟ್ಜರ್‌ಲ್ಯಾಂಡ್, ಲಂಡನ್ ಸೇರಿದಂತೆ ಅನೇಕ ಹೆಸರುಗಳಿವೆ. ಆದರೆ ಅಲ್ಲಿಗೆ ಶೂಟಿಂಗ್‌ಗಾಗಿಯೇ ಹೋಗುವ ಆಸೆ ನನಗೆ.