Wednesday, September 30, 2026
Wednesday, September 30, 2026

ಮಕಾವ್‌ನಲ್ಲಿ ವಿದೇಶಿ ಅದ್ಭುತಗಳ ದಿಖಾವಾ ಇದೆ

ಚೀನಾದ ಜನರು ಎಲ್ಲದರ ಕಾರ್ಬನ್‌ ಕಾಪಿಯನ್ನು ತಯಾರಿಸುವಲ್ಲಿ ನಿಸ್ಸೀಮರು ಎಂದು ಕೇಳಿದ್ದೆ. ಆದರೆ ಅದನ್ನು ಕಣ್ಣಾರೆ ಕಂಡಿದ್ದು ಇಲ್ಲೇ. ಲಂಡನ್‌ನ ಬಿಗ್‌ ಬೆನ್‌ ಕ್ಲಾಕ್‌ ಟವರ್‌, ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌, ಪ್ಯಾರಿಸ್‌ನ ಐಫಿಲ್‌ ಟವರ್‌, ರೋಮ್‌ನ ಕೊಲೊಸಿಯಂ, ವೆನಿಸ್‌ನ ಐತಿಹಾಸಿಕ ವಾಸ್ತುಶಿಲ್ಪ ಹಾಗೂ ಪ್ರಸಿದ್ಧ ಬೋಟ್‌ ರೈಡ್- ಎಲ್ಲವೂ ಇಲ್ಲಿವೆ. ಮೇಲಾಗಿ ಎಲ್ಲವೂ ಅಸಲಿ ಸ್ಥಳಗಳ ತಲೆಯ ಮೇಲೆ ಹೊಡೆದಂತಿವೆ!

  • ಸಿರಿ ಮೈಸೂರು

ನಾನು ಪ್ರವಾಸ ಹೋಗುವುದು ಕೊಂಚ ಅಪರೂಪ. ಯಾವುದೇ ನಗರ, ರಾಜ್ಯ, ದೇಶಕ್ಕೆ ಹೋದರೂ, ಅದು ನೀರಿನ ಪಕ್ಕದಲ್ಲೇ ಇರುತ್ತದೆ. ನದಿ, ಸಮುದ್ರ, ಮಹಾಸಾಗರ ಹೀಗೆ ಯಾವುದಾದರೂ ಒಂದು ಜಲಮೂಲಕ್ಕೆ ಅಂಟಿಕೊಂಡ ಜಾಗಗಳಿಗೇ ಪ್ರವಾಸ ಹೋಗುತ್ತೇನೆ. ಇದಕ್ಕೆ ಇತ್ತೀಚಿನ ಒಂದು ಉದಾಹರಣೆ ಮಕಾವ್‌. ಈ ದೇಶದ ಹೆಸರು ಸಾಕಷ್ಟು ಜನರಿಗೆ ಅಪರಿಚಿತ. ಮಕಾವ್‌ ಚೀನಾದ ವಿಶೇಷ ಆಡಳಿತ ಪ್ರದೇಶ. ದೇಶ ಎನಿಸಿಕೊಳ್ಳುವಷ್ಟು ದೊಡ್ಡದಲ್ಲದಿದ್ದರೂ, ನಗರ ಎನಿಸುವಷ್ಟು ಚಿಕ್ಕದೂ ಅಲ್ಲ.

ಇದನ್ನೂ ಓದಿ: ಚೀನಾ-ಅಲಾಸ್ಕ ಪ್ರವಾಸ ಕಥನಗಳು

ಮಕಾವ್‌ಗೆ ಹೋಗುವ ಮುನ್ನ ಇದು ಏಷ್ಯಾದ ಲಾಸ್‌ ವೇಗಾಸ್‌ ಎಂದಷ್ಟೇ ಗೊತ್ತಿತ್ತು. ಇಲ್ಲಿನ ಕ್ಯಾಸಿನೊ, ನೈಟ್‌ ಲೈಫ್‌ ಅದ್ಭುತವಾಗಿದೆ ಎಂದು ಕೇಳಿದ್ದೆ. ಆದರೆ ಈ ದೇಶದ ವಿವಿಧ ಆಯಾಮಗಳು ತಿಳಿದಿದ್ದು ಅಲ್ಲಿಗೆ ಭೇಟಿನೀಡಿದ ಮೇಲೆಯೇ. ನನಗೆ ಮಕಾವ್‌ ಮೈಸೂರನ್ನು ನೆನಪಿಸಿತು. ವಿಶಾಲ ರಸ್ತೆಗಳು, ಪಾರಂಪರಿಕತೆ, ಆಸಕ್ತಿದಾಯಕ ಇತಿಹಾಸ, ವೈಶಿಷ್ಟ್ಯಗಳಿಂದ ಕೂಡಿದ ಪ್ರವಾಸಿ ತಾಣಗಳು, ಕಡಿಮೆ ಜನಸಂಖ್ಯೆ- ಇವೆಲ್ಲವೂ ಮೈಸೂರಿನಂತೆಯೇ.

ಮಕಾವ್‌ಗೆ ಪೋರ್ಚುಗೀಸರ ಇತಿಹಾಸ ಇರುವ ಕಾರಣ ಇಲ್ಲಿನ ಹಲವಾರು ಭಾಗಗಳು ಭಾರತದ ಗೋವಾವನ್ನು ಹೋಲುತ್ತವೆ. ಚರ್ಚ್‌ಗಳು, ಬಿಳಿ ಹಾಗೂ ನೀಲಿ ವಿನ್ಯಾಸದ ಟೈಲ್ಸ್‌ಗಳು, ವರ್ಣರಂಜಿತ ಸಾಂಸ್ಕೃತಿಕ ಆಚರಣೆಗಳು ಎಲ್ಲವೂ ಗೋವಾದಂತೆಯೇ. ಹಾಂಗ್‌ಕಾಂಗ್‌ ಏರ್‌ಪೋರ್ಟ್‌ನಿಂದ ಫೆರ್ರಿಯಲ್ಲಿ ನಾನು ಮಕಾವ್‌ ತಲುಪಿದ್ದೆ.

macau

ಸೈಟ್‌ಸೀಯಿಂಗ್‌ನಲ್ಲಿ ಕಂಡ ಮಕಾವ್‌ ಚಿತ್ರಣ

ಮಕಾವ್‌ನ ಸೈಟ್‌ಸೀಯಿಂಗ್‌ನಲ್ಲಿ ನೋಡಿದ ಹಲವು ಅದ್ಭುತ ಪ್ರವಾಸಿ ತಾಣಗಳ ಪೈಕಿ ಪ್ರಮುಖವಾದುದು ಸೆಂಟ್‌ ಪಾಲ್ಸ್‌ ಚರ್ಚ್‌ನ ಪಳೆಯುಳಿಕೆ. ಇಲ್ಲಿ ಒಂದು ದೊಡ್ಡ ಫಸಾಡ್‌/ಕಮಾನು ಮಾತ್ರ ಉಳಿದಿದೆ. ಹದಿನೇಳನೆಯ ಶತಮಾನಕ್ಕೆ ಸೇರಿದ ಈ ಚರ್ಚ್‌ ಅಗ್ನಿ ದುರಂತದಿಂದ ಹೆಚ್ಚೂಕಮ್ಮಿ ಸಂಪೂರ್ಣ ನಾಶವಾಗಿತ್ತು. ಅದರ ಪಳೆಯುಳಿಕೆ ಈಗ ವರ್ಲ್ಡ್‌ ಹೆರಿಟೇಜ್‌ ಸೈಟ್‌ಗಳ ಪಟ್ಟಿಗೆ ಸೇರಿದೆ. 2005ರಲ್ಲಿ ಹಿಸ್ಟೋರಿಕ್‌ ಸೆಂಟರ್‌ ಆಫ್‌ ಮಕಾವ್‌ ಅನ್ನು ಯುನೆಸ್ಕೋ ವರ್ಲ್ಡ್‌ ಹೆರಿಟೇಜ್‌ ಸೈಟ್‌ ಎಂದು ಘೋಷಿಸಿದ್ದು, ಇದರಲ್ಲಿ ಸೆಂಟ್‌ ಪಾಲ್ಸ್‌ ಚರ್ಚ್‌, ಇತರ ಐತಿಹಾಸಿಕ ಚರ್ಚ್‌ಗಳು ಹಾಗೂ ಉದ್ಯಾನವನಗಳು, ಸೆನಾಡೋ ಸ್ಕ್ವೇರ್‌, ಆ ಮಾ ದೇವಸ್ಥಾನ ಸೇರಿದಂತೆ ಇನ್ನೂ ಹಲವು ಪ್ರೇಕ್ಷಣೀಯ ಸ್ಥಳಗಳು ಸೇರಿವೆ. ಇವುಗಳಲ್ಲಿ ಹಲವನ್ನು ಸೈಟ್‌ಸೀಯಿಂಗ್‌ ವೇಳೆ ಕಣ್ತುಂಬಿಕೊಂಡೆ. ಬೆಂಕಿಯಿಂದ ನಾಶವಾದ ಇಲ್ಲಿನ ಚರ್ಚ್‌ನ ಪಳೆಯುಳಿಕೆ ನೋಡಿದಾಗ ಮೈಸೂರು ಅರಮನೆ ಸುಟ್ಟು ಸುಟ್ಟು ಮತ್ತೆ ನಿರ್ಮಾಣವಾದ ಇತಿಹಾಸ ನೆನಪಾಯಿತು. ಇಲ್ಲಿ ಎಗ್‌ ಟಾರ್ಟ್‌ ಎಂಬುದು ವಿಶೇಷ ಮತ್ತು ಐತಿಹಾಸಿಕ ಖಾದ್ಯ. ಇಲ್ಲಿನ ಗೈಡ್‌ ಅದರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ರಾತ್ರಿ ಇಡೀ ನಗರದ ದೊಡ್ಡ ಕಟ್ಟಡಗಳು, ಕ್ಯಾಸಿನೋಗಳು ದೇದಿಪ್ಯಮಾನವಾಗಿ ಕಂಗೊಳಿಸುತ್ತಿದ್ದವು. ಈ ನಗರದಲ್ಲಿ ಕತ್ತಲೆ ಆಗುವುದಿಲ್ಲವೇನೋ ಎನಿಸಿದ್ದು ಸುಳ್ಳಲ್ಲ.

ಇದನ್ನೂ ಓದಿ: ಸ್ಪೇನ್‌ನ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ದುರ್ಘಟನೆ

ಕಾಪಿ ಮಾಡೋದರಲ್ಲಿ ಇವರು ನಿಸ್ಸೀಮರು

ಚೀನಾದ ಜನರು ಎಲ್ಲದರ ಕಾರ್ಬನ್‌ ಕಾಪಿಯನ್ನು ತಯಾರಿಸುವಲ್ಲಿ ನಿಸ್ಸೀಮರು ಎಂದು ಕೇಳಿದ್ದೆ. ಆದರೆ ಅದನ್ನು ಕಣ್ಣಾರೆ ಕಂಡಿದ್ದು ಇಲ್ಲೇ. ಲಂಡನ್‌ನ ಬಿಗ್‌ ಬೆನ್‌ ಕ್ಲಾಕ್‌ ಟವರ್‌, ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌, ಪ್ಯಾರಿಸ್‌ನ ಐಫಿಲ್‌ ಟವರ್‌, ರೋಮ್‌ನ ಕೊಲೊಸಿಯಂ, ವೆನಿಸ್‌ನ ಐತಿಹಾಸಿಕ ವಾಸ್ತುಶಿಲ್ಪ ಹಾಗೂ ಪ್ರಸಿದ್ಧ ಬೋಟ್‌ ರೈಡ್- ಎಲ್ಲವೂ ಇಲ್ಲಿವೆ. ಮೇಲಾಗಿ ಎಲ್ಲವೂ ಅಸಲಿ ಸ್ಥಳಗಳ ತಲೆಯ ಮೇಲೆ ಹೊಡೆದಂತಿವೆ! ಇವುಗಳನ್ನು ನೋಡುವಾಗ ಒಂದು ಪುಟ್ಟ ದೇಶದಲ್ಲಿ ಅದೆಷ್ಟು ದೇಶಗಳು ಇವೆಯಪ್ಪಾ ಎಂದು ಯಾರಾದರೂ ನಿಬ್ಬೆರಗಾಗುತ್ತಾರೆ. ಇಲ್ಲಿನ ಸಿಟಿ ಆಫ್‌ ಡ್ರೀಮ್ಸ್‌ ಎಂಬ ಸ್ಥಳದಲ್ಲಿ ನಡೆಯುವ ಒಂದೂವರೆ ಗಂಟೆ ಅವಧಿಯ ಡ್ಯಾನ್ಸಿಂಗ್‌ ವಾಟರ್‌ ಶೋ ಕೂಡ ಇಲ್ಲಿನ ಪ್ರಮುಖ ಆಕರ್ಷಣೆ. ಆದರೆ ಕೊನೆಯ ಕ್ಷಣದ ಮಾಹಿತಿಯ ಕೊರತೆಯಿಂದಾಗಿ ನಮಗೆ ಆ ಶೋ ನೋಡಲು ಸಾಧ್ಯವಾಗಲೇ ಇಲ್ಲ. ಅದರ ಬದಲು ರೋಮ್‌ನ ಕೊಲೊಸಿಯಂ ಪ್ರತಿರೂಪದ ಬಳಿ ಓಡಾಡುತ್ತಾ, ಸಂಜೆಯಲ್ಲಿ ನದಿ ತೀರದಲ್ಲಿ ಝಗಮಗಿಸುವ ಕಟ್ಟಡಗಳನ್ನು ಕಣ್ತುಂಬಿಕೊಳ್ಳುತ್ತಾ, ಮಾಲ್‌ಗಳಲ್ಲಿ ಸುತ್ತಾಡಿ ಸಮಯ ಕಳೆದದ್ದಾಯಿತು.

macau

ಹಲವು ವರ್ಷಗಳ ಆಸೆ ಈ ಬಂಜೀ ಜಂಪ್‌

ಪ್ರಮುಖ ಪ್ರವಾಸಿ ಆಕರ್ಷಣೆಯಾದ ಮಕಾವ್‌ ಟವರ್‌ನಿಂದ ಬರೋಬ್ಬರಿ 764 ಅಡಿ ಎತ್ತರದಿಂದ ಬಂಜೀ ಜಂಪ್‌ ಮಾಡುವ ಮೂಲಕ ನನ್ನ ಬಹುವರ್ಷಗಳ ಆಸೆಯನ್ನೂ ನೆರವೇರಿಸಿಕೊಂಡೆ. ಇದು ಇಡೀ ಪ್ರಪಂಚದ ಅತಿ ಎತ್ತರದ ಅರ್ಬನ್ ಬಂಜೀ ಜಂಪ್. ಅಷ್ಟು ಮೇಲಿನಿಂದ ನೋಡುವಾಗ ಇಡೀ ಪ್ರಪಂಚ ಸುಂದರವಾಗಿ ಕಂಡಿತು. ಆ 20 ಸೆಕೆಂಡ್‌ಗಳು ಬದುಕಿನುದ್ದಕ್ಕೂ ನೆನಪಿರುತ್ತವೆ!

ಇದನ್ನೂ ಓದಿ: ದೋಣಿ ಸಾಗಲಿ, ಮುಂದೆ ಹೋಗಲಿ ದೂರ ತೀರವ ಸೇರಲಿ…

ಆಹಾರ ಮತ್ತು ಭಾಷೆಗಾಗಿ ಪರದಾಟ

ಚೀನಾದ ಉಳಿದೆಲ್ಲಾ ಭಾಗಗಳಂತೆ ಮಕಾವ್‌ನಲ್ಲೂ ಇಂಗ್ಲಿಷ್‌ ಮಾತನಾಡುವವರು ಸಿಗುವುದು ತೀರಾ ವಿರಳ. ಯಾರನ್ನು ಮಾತನಾಡಿಸಿದರೂ ʼನೋ ಇಂಗ್ಲಿಷ್‌ʼ ಎನ್ನುತ್ತಿದ್ದರು. ಟ್ಯಾಕ್ಸಿ ಡ್ರೈವರ್‌ಗೆ, ಅಂಗಡಿಯವರಿಗೆ ಗೂಗಲ್‌ ಟ್ರಾನ್ಸ್‌ಲೇಟರ್‌ನಲ್ಲಿ ಇಂಗ್ಲಿಷ್‌ ಟೈಪ್‌ಮಾಡಿ ಅದನ್ನು ಚೈನೀಸ್‌ಗೆ ಅನುವಾದಿಸಿ ವಾಯ್ಸ್‌ ಪ್ಲೇ ಮಾಡುವ ಮೂಲಕ ಮಾತನಾಡಿಸುವಷ್ಟರಲ್ಲಿ ಸುಸ್ತಾಗಿಬಿಡುತ್ತಿತ್ತು. ಬೇರೆ ವಿಧಿಯಿಲ್ಲವಲ್ಲ! ಇನ್ನು ಆಹಾರದ ಪರಿಸ್ಥಿತಿಯಂತೂ ಅಧೋಗತಿ. ಇಲ್ಲಿ ಬೌದ್ಧರ ಸಂಖ್ಯೆ ಹೆಚ್ಚಿದ್ದರೂ ಬಹುಶಃ ಅವರಲ್ಲಿ ಯಾರೂ ಹೊರಗಿನ ಆಹಾರವನ್ನು ಅವಲಂಬಿಸಿಲ್ಲ. ಹೊರಗಿನಿಂದ ಬರುವ ಸಸ್ಯಾಹಾರಿಗಳಿಗೆ ಇಲ್ಲಿ ಫಜೀತಿ ಕಟ್ಟಿಟ್ಟ ಬುತ್ತಿ. ನಾನಂತೂ ಮೊಟ್ಟೆಯನ್ನೂ ತಿನ್ನದ ಕಾರಣ ಇಲ್ಲಿ ಹಣ್ಣು, ತರಕಾರಿ, ಬ್ರೆಡ್‌, ಜ್ಯಾಂ, ಬೆಣ್ಣೆಯ ಮೊರೆ ಹೋಗಿದ್ದೆ. ಒಂದು ದಿನ ಹೊಟೇಲ್‌ನಲ್ಲಿ ನಮ್ಮ ಭಾರತೀಯ ಶೆಫ್‌ ಒಬ್ಬರು ಪ್ರೀತಿಯಿಂದ ದೋಸೆ, ಚಟ್ನಿ ಕೊಟ್ಟಿದ್ದು ಬಿಟ್ಟರೆ ಇಲ್ಲಿಂದ ಕೊಂಡುಹೋಗಿದ್ದ ಎಂಟಿಆರ್‌ ರೆಡಿ ಟು ಈಟ್‌ ಪ್ಯಾಕೆಟ್‌ಗಳೇ ಸಂಗಾತಿಗಳಾಗಿದ್ದವು. ಕೊನೆಗೂ ಕೊನೆಯ ದಿನ ಸಿಕ್ಕ ವುಡ್‌ಲ್ಯಾಂಡ್ಸ್‌ ಎಂಬ ಶುದ್ಧ ಸಸ್ಯಾಹಾರಿ ಹೊಟೇಲ್‌ ಹಾಗೂ ಅಲ್ಲಿನವರು ಮಾತನಾಡಿದ ಕನ್ನಡ ನಮ್ಮ ಜೀವ ಉಳಿಸಿತು. ಪಾನಿಪೂರಿ, ಟೊಮ್ಯಾಟೋ ಬಾತ್‌, ಮೊಸರನ್ನ ಹಾಗೂ ಫಿಲ್ಟರ್‌ ಕಾಫಿ ಸವಿದ ನಂತರ ಬಳಲಿದ್ದ ಜೀವಕ್ಕೆ ಚೈತನ್ಯ ಬಂತು. ಮಾಂಸಾಹಾರಿಗಳಿಗೆ ಇಲ್ಲಿನ ಖಾದ್ಯಗಳು ಬಹಳವೇ ರುಚಿಸಬಹುದು.

macau

ಐತಿಹಾಸಿಕ ಹಾಗೂ ವಿಶಾಲ ರಸ್ತೆಗಳು, ಕಟ್ಟಡಗಳು, ಮಾನವನಿರ್ಮಿತ ವಿಶೇಷ ಆಕರ್ಷಣೆಗಳು, ಝಗಮಗಿಸುವ ರಾತ್ರಿಗಳು, ವಿಶೇಷ ತಿನಿಸುಗಳು, ಮುಂದಾಲೋಚನೆಯಿಂದ ಕೂಡಿದ ಸುಸಜ್ಜಿತ ಮೂಲಸೌಕರ್ಯಗಳು, ರಸ್ತೆಯಲ್ಲಿ ಜನರ ಶಿಸ್ತು, ಪ್ರವಾಸಿಗರ ಬಗ್ಗೆ ಜನರಿಗಿದ್ದ ಆತ್ಮೀಯತೆ, ಇಲ್ಲಿನ ನದಿತೀರದಲ್ಲಿ ಸಿಕ್ಕ ನಿರ್ಲಿಪ್ತತೆ, ಶತಮಾನದ ಕಥೆಗಳನ್ನು ಹೇಳುವ ಸಣ್ಣಪುಟ್ಟ ಗಲ್ಲಿಗಳು ಸೇರಿದಂತೆ ಮಕಾವ್‌ ಬಗೆಗಿನ ಇನ್ನೂ ಅದೆಷ್ಟೋ ಸಂಗತಿಗಳು ಈ ಪುಟ್ಟ ಪ್ರವಾಸ ಮುಗಿಸುವ ಹೊತ್ತಿಗೆ ನೆನಪಿನ ಬುತ್ತಿಯಲ್ಲಿ ಬಂಧಿಯಾಗಿದ್ದವು. ಇಂಗ್ಲಿಷ್ ಬರದೆಯೂ ಇಡೀ ಪ್ರಪಂಚ ತಿರುಗಿ ನೋಡುವಂತೆ ಬದುಕುತ್ತಿದ್ದಾರೆ ಇಲ್ಲಿನವರು. ಏಕೆಂದರೆ ಇಂಗ್ಲಿಷ್ ಭಾಷೆಯಷ್ಟೇ. ಅದು ಬುದ್ಧಿವಂತಿಕೆಯ ಮಾನದಂಡವಲ್ಲ. ನನ್ನ ಪಾಲಿಗೆ ಅವಕಾಶ ಸಿಕ್ಕರೆ ಅರೆಕ್ಷಣವೂ ಯೋಚಿಸದೆ ಮತ್ತೆ ಹೊರಟೇಬಿಡುತ್ತೇನೆ ಎನ್ನುವಂಥ ಜಾಗ ಮಕಾವ್.‌

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...