ಯಶ್ ಚೋಪ್ರಾ ಕಂಡ ಸ್ವರ್ಗದೊಳಗೆ ನನ್ನ ಹೆಜ್ಜೆಗಳು
ಯಶ್ ಚೋಪ್ರಾ ಸ್ವಿಟ್ಜರ್‌ಲ್ಯಾಂಡ್‌ನ್ನು ಭಾರತೀಯರ ಕನಸಾಗಿಸಿದ್ದರು. ನಾನು ಆ ಕನಸಿನೊಳಗೆ ಒಬ್ಬ ಪ್ರವಾಸಿಗನಾಗಿ ನಡೆದು ಬಂದೆ. ಕ್ಯಾಮೆರಾದಲ್ಲಿ ಕೆಲವು ದೃಶ್ಯಗಳನ್ನು ತಂದೆ; ಆದರೆ ಇಂಟರ್‌ಲೇಕನ್ ನನ್ನ ಮನಸಿನಲ್ಲಿ ಬಿಟ್ಟುಹೋದದ್ದು ಒಂದು ಸಂಪೂರ್ಣ ಕಾವ್ಯ.
- ಜಿ. ಆರ್. ಪಂಡಿತ್
ಸ್ವಿಟ್ಜರ್‌ಲ್ಯಾಂಡ್‌ನ ಹೃದಯಭಾಗದಲ್ಲಿರುವ ಇಂಟರ್‌ಲೇಕನ್ ಎಂಬ ಪುಟ್ಟ ನಗರಕ್ಕೆ ಕಾಲಿಟ್ಟು, Two Lake Bridge ಮೇಲೆ ನಿಂತಾಗ ಮೊದಲು ಕಣ್ಣಿಗೆ ಬೀಳುವುದೇ ಎರಡು ಸರೋವರಗಳ ನಡುವೆ ಪ್ರಕೃತಿಯೇ ರಚಿಸಿದಂಥ ಒಂದು ಅದ್ಭುತ ಚಿತ್ರ. ಹಿಮ, ಹಸಿರು, ಆಕಾಶ, ಸರೋವರದ ನೀರು, ಹೂಗಳ ಬಣ್ಣ– ಎಲ್ಲವೂ ಒಂದೇ ಕ್ಯಾನ್ವಾಸ್‌ನಲ್ಲಿ ಮೂಡಿಬಂದಂಥ ಅನುಭವ. ಒಂದೆಡೆ ಥೂನ್ ಸರೋವರ, ಮತ್ತೊಂದೆಡೆ ಬ್ರಿಯೆನ್ಸ್ ಸರೋವರ. ದೂರದಲ್ಲಿ ಆಕಾಶ ಮುಟ್ಟುವಂತೆ ನಿಂತಿರುವ ಐಗರ್, ಮೋಂಕ್ ಮತ್ತು ಯುಂಗ್‌ಫ್ರೋ ಪರ್ವತಶ್ರೇಣಿಗಳು. ಹಿನ್ನೆಲೆಯಲ್ಲಿ ಹಿಮಾಚ್ಛಾದಿತ ಆಲ್ಪ್ಸ್ (Alps). ಅವುಗಳ ನಡುವೆ ಹಸಿರು ಹೊದಿಕೆಯಂತೆ ಹರಡಿಕೊಂಡಿರುವ ನಗರವೇ ಇಂಟರ್‌ಲೇಕನ್. Interlaken ಎಂಬ ಹೆಸರೇ ಅದರ ಭೌಗೋಳಿಕ ಸ್ವರೂಪವನ್ನು ಹೇಳುತ್ತದೆ- ಎರಡು ಸರೋವರಗಳ ನಡುವಿನ ನಗರ. ಸರೋವರಗಳ ನೀರಿನ ಬಣ್ಣವೇ ಒಂದು ಅದ್ಭುತ. ಕೆಲವೆಡೆ ಗಾಢ ನೀಲಿ, ಇನ್ನೊಂದೆಡೆ ಹಸಿರು ಬೆರೆತ ನೀಲಿ. ಬೆಳಕು ಬದಲಾದಂತೆ ಬಣ್ಣವೂ ಬದಲಾಗುತ್ತಿತ್ತು. ಬೆಟ್ಟಗಳ ನೆರಳು ನೀರಿನ ಮೇಲೆ ಬೀಳುವಾಗ ಪ್ರಕೃತಿಯೇ ತನ್ನ ಚಿತ್ರವನ್ನು ತಾನೇ ಬರೆಯುತ್ತಿದೆಯೇನೋ ಅನಿಸುತ್ತಿತ್ತು. ಸಾಮಾನ್ಯವಾಗಿ ಛಾಯಾಗ್ರಾಹಕನ ಕಣ್ಣು ಒಂದು ಪರಿಪೂರ್ಣ ಫ್ರೇಮ್‌ಗಾಗಿ ಹುಡುಕುತ್ತಿರುತ್ತದೆ. ಆದರಿಲ್ಲಿ ಕ್ಯಾಮೆರಾ ಕಣ್ಣು ಹಾಯಿಸಿದಲ್ಲೆಲ್ಲಾ ಪರಿಪೂರ್ಣ ವರ್ಣಚಿತ್ರಗಳೇ. ಯಾವ ದೃಶ್ಯವನ್ನು ಫ್ರೇಮ್‌ನಲ್ಲಿ ತೆಗೆದುಕೊಳ್ಳಬೇಕು ಯಾವುದನ್ನು ಬಿಡಬೇಕು ಎಂಬುದೇ ತಿಳಿಯದಷ್ಟು ಸುಂದರವಾಗಿರುತ್ತದೆ.
ಇದನ್ನೂ ಓದಿ: ಸ್ವಿಟ್ಜರ್‌ಲ್ಯಾಂಡ್ ಮತ್ತು ಚಾಕೊಲೆಟ್ ಎಂಬ ಪ್ರವಾಸಿಮಿತ್ರ!

ಸಿನಿಮಾ ಮತ್ತು ಸ್ವಿಸ್
ಹಿಂದಿ ಸಿನಿಮಾಗಳಲ್ಲಿ ವರ್ಷಗಳಿಂದ ನೋಡುತ್ತಿದ್ದ ಹಿಮದ ಪರ್ವತಗಳು, ಹಸಿರು ಕಣಿವೆಗಳು, ನೀಲಿ ಸರೋವರಗಳು, ಹೂವಿನ ರಾಶಿಯ ನಡುವೆ ಮರ ಸುತ್ತಿ ಹಾಡುವ ನಾಯಕ-ನಾಯಕಿಯರು ಇವೆಲ್ಲ ನನ್ನ ಮನಸಿನಲ್ಲಿ ಒಂದು ಕಲ್ಪಿತ ಸ್ವಿಟ್ಜರ್ಲ್ಯಾಂಡನ್ನು ಕಟ್ಟಿಕೊಟ್ಟಿದ್ದವು. ವಿಶೇಷವಾಗಿ ಯಶ್ ಚೋಪ್ರಾ ಅವರ ಸಿನಿಮಾಗಳು ತೋರಿಸಿದ ಸ್ವಿಟ್ಜರ್‌ಲ್ಯಾಂಡ್ ಎಂದರೆ ನಮ್ಮ ತಲೆಮಾರಿನವರಿಗೆ ಕೇವಲ ಅದೊಂದು ದೇಶವಾಗಿ ಕಾಣುತ್ತಿರಲಿಲ್ಲ. ಬದಲಿಗೆ ಪ್ರೀತಿ, ಪ್ರಕೃತಿ ಮತ್ತು ಕನಸುಗಳ ಸಂಗಮದಂತೆ. ಆ ಕನಸಿನ ನೆಲಕ್ಕೆ ನಾನೇ ಕಾಲಿಡುವ ದಿನ ಬಂದಾಗ ಪ್ರವಾಸಿಗನ ಕುತೂಹಲಕ್ಕೆ ಮೇರೆಯೇ ಇರಲಿಲ್ಲ. ಸಿನಿಮಾದಲ್ಲಿ ಕಂಡಿದ್ದು ಪ್ರಕೃತಿಯ ಒಂದು ತುಣುಕು ಮಾತ್ರ. ವಾಸ್ತವದ ಇಂಟರ್‌ಲೇಕನ್ ಅದಕ್ಕಿಂತಲೂ ಜೀವಂತವಾಗಿತ್ತು.
ಇಂಟರ್‌ಲೇಕನ್ ಪ್ರವಾಸದಲ್ಲಿ ನಮಗೆ ಅಂದರೆ ಭಾರತೀಯರಿಗೆ ಅತ್ಯಂತ ವಿಶೇಷವೆನಿಸುವ ಸ್ಥಳವೆಂದರೆ ಅದು ʼಕುರಸಾಲ್ ಗಾರ್ಡನ್ʼ. ಹಸಿರು ಮತ್ತು ಹೂವುಗಳಿಂದ ಅಲಂಕರಿಸಲ್ಪಟ್ಟ ಈ ಸುಂದರ ಉದ್ಯಾನದಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ಯಶ್ ಚೋಪ್ರಾ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಅವರ ಪ್ರತಿಮೆಯ ಪಕ್ಕದಲ್ಲಿ ನಿಂತು ಫೊಟೋ ತೆಗೆಸಿಕೊಳ್ಳುವಾಗ ನನ್ನ ಮನಸು ವರ್ತಮಾನದಲ್ಲಿರಲಿಲ್ಲ. ಅದು ಹಲವು ವರ್ಷಗಳ ಹಿಂದಕ್ಕೆ ಹೋಗಿತ್ತು. (ಹಿಂದಿ ಸಿನಿಮಾಗಳಲ್ಲಿ ಪದೇ ಪದೆ ಕೇಳಿಸಿಕೊಳ್ಳುವ ʼಬೀಸ್ ಸಾಲ್ ಪೆಹಲೆʼ ಎಂಬ ಡೈಲಾಗ್‌ನಂತೆ). ಚಾಂದಿನಿ, ದಿಲ್ ತೊ ಪಾಗಲ್ ಹೈ, ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೇ, ಡರ್ ಸಿನಿಮಾಗಳ ಹಾಡಿನ ದೃಶ್ಯಗಳು, ಬಿಳಿ ಹಿಮದ ಮೇಲೆ ಹಾರಾಡುವ ಬಣ್ಣ ಬಣ್ಣದ ಸೀರೆಗಳು, ಹಿಮ ಕಿರೀಟ ಧರಿಸಿದ ಪರ್ವತಗಳ ಹಿನ್ನೆಲೆಯಲ್ಲಿ, ಹಸಿರು ಹುಲ್ಲುಗಾವಲಿನಲ್ಲಿ ಪ್ರೇಮದ ಹಾಡುಗಳು..ಯಶ್ ಚೋಪ್ರಾ ತಮ್ಮ ಸಿನಿಮಾಗಳ ಮೂಲಕ ಸ್ವಿಟ್ಜರ್‌ಲ್ಯಾಂಡ್‌ನ ಪ್ರಕೃತಿಯನ್ನು ಭಾರತೀಯ ಪ್ರೇಕ್ಷಕರ ಕಲ್ಪನೆಯ ಭಾಗವನ್ನಾಗಿ ಮಾಡಿದ್ದರು. ಅವರು ಸ್ವಿಸ್ ನಿಸರ್ಗಕ್ಕೆ ಪ್ರೇಮಕಾವ್ಯದ ರೂಪ ನೀಡಿದ್ದರು. ಅವು ಕೇವಲ ಹಿನ್ನೆಲೆಯಾಗದೇ ಕಥೆಯ ಭಾವನೆಯ ಭಾಗವಾಗಿ ಬಿಟ್ಟಿದ್ದವು.

ಗೌರವ ನೀಡಿದ ತಾಣ
ಇಂಟರ್‌ಲೇಕನ್ ನಗರವೂ ಅವರ ಕೊಡುಗೆಯನ್ನು ಮರೆಯಲಿಲ್ಲ. 2011ರಲ್ಲಿ ಯಶ್ ಚೋಪ್ರಾ ಅವರನ್ನು ಇಂಟರ್‌ಲೇಕನ್ ನ Honorary Citizen/Ambassador ಆಗಿ ಗೌರವಿಸಲಾಗಿತ್ತು. 2016 ರಲ್ಲಿ ಕುರಸಾಲ್ ಪ್ರದೇಶದಲ್ಲಿ ಚಿತ್ರ ನಿರ್ದೇಶನದ ಪ್ರಸಿದ್ದ ಭಂಗಿಯಲ್ಲಿರುವ ಅವರ 350 ಕಿಲೋಗ್ರಾಂ ತೂಕದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಒಬ್ಬ ಭಾರತೀಯ ನಿರ್ದೇಶಕ ತನ್ನ ಕ್ಯಾಮೆರಾ ಮೂಲಕ ಒಂದು ದೇಶದ ಸೌಂದರ್ಯವನ್ನು ಕೋಟ್ಯಂತರ ಜನರಿಗೆ ಪರಿಚಯಿಸಿದ. ಅದರ ಗೌರವಾರ್ಥವಾಗಿ ಆ ದೇಶ ತನ್ನ ನೆಲದಲ್ಲಿ ಆ ನಿರ್ದೇಶಕನ ಪ್ರತಿಮೆಯನ್ನೇ ನಿಲ್ಲಿಸಿತು. ಸಿನಿಮಾ ಮತ್ತು ಪ್ರವಾಸೋದ್ಯಮದ ಸಂಬಂಧಕ್ಕೆ ಇದಕ್ಕಿಂತ ಮಿಗಿಲಾದ ಉದಾಹರಣೆ ಇರಲಿಕ್ಕಿಲ್ಲ.
ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಭಾರತೀಯ ಸಿನಿಮಾಗಳ ಚಿತ್ರೀಕರಣ ಯಶ್ ಚೋಪ್ರಾರಿಂದಲೇ ಆರಂಭವಾಗಿರಲಿಲ್ಲ. 1964ರ ಸಂಗಮ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಚಿತ್ರವೆಂದು ಸ್ವಿಸ್ ಇನ್ಫೊ ದಾಖಲಿಸುತ್ತದೆ. ನಂತರ An Evening in Paris ಸೇರಿದಂತೆ ಹಲವು ಚಿತ್ರಗಳು ಸ್ವಿಸ್ ಭೂದೃಶ್ಯವನ್ನು ಭಾರತೀಯ ಪ್ರೇಕ್ಷಕರಿಗೆ ಪರಿಚಯಿಸಿದವು. ಆದರೆ, 1995ರ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ನಂತರ ಸ್ವಿಟ್ಜರ್‌ಲ್ಯಾಂಡ್ ಭಾರತೀಯರ ಪ್ರವಾಸದ ಕಲ್ಪನೆಯಲ್ಲಿ ಇನ್ನಷ್ಟು ಗಟ್ಟಿಯಾಗಿ ನೆಲೆಯೂರಿತು.

ನೆನಪಿರುವ ಫ್ರೇಮ್
ನಾನು ಇಂಟರ್‌ಲೇಕನ್‌ನ ಬೀದಿಗಳಲ್ಲಿ ನಡೆಯುತ್ತಿದ್ದಾಗ ಈ ಸಿನಿಮಾಗಳ ನೆನಪುಗಳು ಒಂದೊಂದಾಗಿ ಕಣ್ಣ ಮುಂದೆ ಬರುತ್ತಿದ್ದವು. ಒಂದು ಕಡೆ ನಿಜ ಜೀವನ, ಮತ್ತೊಂದು ಕಡೆ ಬೆಳ್ಳಿತೆರೆಯ ನೆನಪು, ಎರಡೂ ಒಂದೇ ಜಾಗದಲ್ಲಿ ಬೆರೆತಿದ್ದವು. ಆ ಚಿತ್ರಗಳನ್ನು ನೆನಪಿಸಿಕೊಂಡು ಇಂಟರ್‌ಲೇಕನ್ನ ಬೀದಿಗಳಲ್ಲಿ ನಡೆದಾಗ ವಿಚಿತ್ರ ಅನುಭವ. ಒಂದು ಕಾಲದಲ್ಲಿ ಟಿವಿ ಪರದೆಯ ಮೇಲೆ ಕಂಡ ದೃಶ್ಯದೊಳಗೆ ನಾನೇ ನಡೆದುಕೊಂಡು ಹೋಗುತ್ತಿರುವಂತೆ. ಅಲ್ಲಿ ನಾಯಕನಿಲ್ಲ. ನಾಯಕಿಯಿಲ್ಲ. ಹಾಡಿಲ್ಲ. ಆದರೆ ಪರ್ವತಗಳಿವೆ. ಅದೇ ಗಾಳಿ ಇದೆ. ಅದೇ ಹಸಿರು ಇದೆ. ಅದೇ ಆಕಾಶವಿದೆ.
ಇಂಟರ್‌ಲೇಕನ್‌ನ ಸೌಂದರ್ಯವನ್ನು ನೆಲಮಟ್ಟದಿಂದ ನೋಡಿದರೆ ಒಂದು ರೀತಿ. ಆದರೆ ಮೇಲಿನಿಂದ ನೋಡಿದಾಗ ಅದು ಸಂಪೂರ್ಣ ಬೇರೆ ಜಗತ್ತು. ಅದಕ್ಕಾಗಿ ನಾನು ಹಾರ್ಡರ್ ಕುಲ್ಮ್ ಕಡೆ ಹೊರಟೆ. ಇಂಟರ್‌ಲೇಕನ್‌ನ ಸ್ಥಳೀಯ ಪರ್ವತವಾದ ಹಾರ್ಡರ್ ಕುಲ್ಮ್ ಸಮುದ್ರಮಟ್ಟದಿಂದ 1,322 ಮೀಟರ್ ಎತ್ತರದಲ್ಲಿದೆ. ನೂರು ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಫನಿಕ್ಯುಲರ್ ರೈಲು ಸುಮಾರು ಹತ್ತು ನಿಮಿಷಗಳಲ್ಲಿ ಮೇಲಕ್ಕೆ ಕರೆದೊಯ್ಯುತ್ತದೆ. ರೈಲು ಮೇಲಕ್ಕೆ ಏರುತ್ತಿದ್ದಂತೆ ದೃಶ್ಯವೂ ಬದಲಾಗುತ್ತಾ ಹೋಯಿತು. ಕೆಳಗೆ ಇಂಟರ್‌ಲೇಕನ್ ಸಣ್ಣದಾಗುತ್ತಿತ್ತು. ಸರೋವರಗಳು ವಿಶಾಲವಾಗುತ್ತಾ ಹೋದವು. ಪರ್ವತಗಳು ಇನ್ನಷ್ಟು ಹತ್ತಿರವಾದವು. ಮೇಲಕ್ಕೆ ತಲುಪಿದ ಮೇಲೆ ಟು ಲೇಕ್ಸ್ ಬ್ರಿಜ್ ಮೇಲೆ ನಿಂತಾಗ ಎದುರಾದ ದೃಶ್ಯವನ್ನು ನೋಡಿದಾಗ ಕೆಲ ಕ್ಷಣ ಮಾತೇ ಬರಲಿಲ್ಲ. ಎಡಭಾಗದಲ್ಲಿ ಗಾಢ ನೀಲಿ ಬಣ್ಣದ ಲೇಕ್ ಬ್ರಿನ್ಜ್. ಬಲಭಾಗದಲ್ಲಿ ಹಸಿರು ಮಿಶ್ರಿತ ನೀಲಿ ಲೇಕ್ ಥುನ್. ಮಧ್ಯದಲ್ಲಿ ಹಸಿರು ಇಂಟರ್‌ಲೇಕನ್. ದೂರದಲ್ಲಿ Eiger, Mönch ಮತ್ತು Jungfrau. ಆ ದೃಶ್ಯ, ಛಾಯಾಗ್ರಾಹಕನಿಗೆ ಕನಸಿನ ಫ್ರೇಮ್. ಕ್ಯಾಮೆರಾವನ್ನು ಕೈಗೆತ್ತಿಕೊಂಡೆ. ಆದರೆ ಶಟರ್ ಒತ್ತುವ ಮುನ್ನ ಕೆಲವು ಕ್ಷಣ ಸುಮ್ಮನೆ ನಿಂತೆ. ಕೆಲವು ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಬಹುದು. ಕೆಲವು ದೃಶ್ಯಗಳನ್ನು ಮನಸಿನಲ್ಲಿಯೂ ಉಳಿಸಿಕೊಂಡೆ.
ಧಾವಂತವಿಲ್ಲದ ಬದುಕು
ಇಂಟರ್‌ಲೇಕನ್‌ನ ಇನ್ನೊಂದು ಆಕರ್ಷಣೆ ಅದರ ನಿಧಾನವಾದ ಬದುಕಿನ ಲಯ. ನಮ್ಮ ನಗರಗಳಲ್ಲಿ ವಾಹನಗಳ ಸದ್ದು, ಹಾರ್ನ್, ಧಾವಂತ. ಇಲ್ಲಿ ಪರ್ವತಗಳ ನಡುವೆ ನಡೆಯುವಾಗ ಗಾಳಿಯ ಸದ್ದೇ ಹೆಚ್ಚು ಕೇಳಿಸುತ್ತದೆ. ಹುಲ್ಲುಗಾವಲುಗಳ ಮೇಲೆ ಹೂಗಳು, ಮರಗಳ ನಡುವೆ ದಾರಿಗಳು. ದೂರದಲ್ಲಿ ಹಿಮ. ಆಕಾಶದಲ್ಲಿ ತೇಲುವ ಪ್ಯಾರಾಗ್ಲೈಡರ್‌ಗಳು, ಸರೋವರದ ಮೇಲೆ ತೇಲುವ ದೋಣಿಗಳು. ಪ್ರಕೃತಿ ಇಲ್ಲಿ ಪ್ರವಾಸಿಗನಿಗೆ ಕೇವಲ ನೋಡುವ ವಸ್ತುವಲ್ಲ, ಅನುಭವಿಸುವ ವಾತಾವರಣ. ಇಂಟರ್‌ಲೇಕನ್ ಪ್ರದೇಶವು ಪರ್ವತ, ಸರೋವರ, ಹೈಕಿಂಗ್, ದೋಣಿ ವಿಹಾರ ಮತ್ತು ಸಾಹಸ ಕ್ರೀಡೆಗಳಿಗೆ ಪ್ರಸಿದ್ಧವಾಗಿದೆ.
ಯಶ್ ಚೋಪ್ರಾ ಅವರ ಕ್ಯಾಮೆರಾ, ಪ್ರೀತಿಯನ್ನು ಹುಡುಕಿತು. ಅದೇ ಸ್ಥಳದಲ್ಲಿ ನನ್ನ ಕ್ಯಾಮೆರಾ ಪ್ರಕೃತಿಯನ್ನು ಹುಡುಕಿತು. ಅವರು ಹಿಮದ ನಡುವೆ ಪ್ರೇಮಕಥೆಯನ್ನು ಕಂಡರು. ನಾನು ಹಿಮದ ನಡುವೆ ಪ್ರಕೃತಿಯ ಮಹಾಕಾವ್ಯವನ್ನು ಕಂಡೆ.
ಇಂಟರ್‌ಲೇಕನ್‌ನಿಂದ ಹೊರಡುವ ಸಮಯ ಬಂತು. ಮತ್ತೊಮ್ಮೆ ಹಿಂದಿರುಗಿ ನೋಡಿದೆ. ಹಸಿರು ಹುಲ್ಲುಗಾವಲುಗಳ ಮೇಲೆ ಬೆಳಕು ನಿಧಾನವಾಗಿ ಬದಲಾಗುತ್ತಿತ್ತು. ದೂರದ ಪರ್ವತಗಳ ಮೇಲೆ ಮೋಡಗಳು ತೇಲುತ್ತಿದ್ದವು. ಸರೋವರದ ನೀರು ತನ್ನದೇ ಮೌನದಲ್ಲಿ ಮಿನುಗುತ್ತಿತ್ತು. ಸ್ವಲ್ಪ ದೂರದಲ್ಲಿದ್ದ ಯಶ್ ಚೋಪ್ರಾ ಅವರ ಪ್ರತಿಮೆ ಮತ್ತೆ ನೆನಪಾಯಿತು. ಕೈಯಲ್ಲಿ ಕ್ಯಾಮೆರಾ ಹಿಡಿದು ನಿಂತಿರುವ ಆ ಕಂಚಿನ ಮನುಷ್ಯ. ಅವರ ಕ್ಯಾಮೆರಾ ಒಂದು ಕಾಲದಲ್ಲಿ ಕಂಡ ದೃಶ್ಯಗಳನ್ನೇ ನಾನು ನನ್ನ ಕ್ಯಾಮೆರಾದಲ್ಲಿ ಹುಡುಕುತ್ತಿದ್ದೆ. ಆ ಕ್ಷಣದಲ್ಲಿ ಅನಿಸಿದ್ದು- ಪ್ರವಾಸವೆಂದರೆ ಹೊಸ ಸ್ಥಳವನ್ನು ನೋಡುವುದಷ್ಟೇ ಅಲ್ಲ, ನಮ್ಮೊಳಗೆ ಬಹಳ ಕಾಲದಿಂದ ಬದುಕಿರುವ ಒಂದು ಚಿತ್ರಕ್ಕೆ ವಾಸ್ತವದ ರೂಪ ಕೊಡುವುದೂ ಹೌದು. ಇಂಟರ್‌ಲೇಕನ್ ನನಗೆ ಅಂಥ ಒಂದು ಚಿತ್ರವಾಗಿತ್ತು. ಸಿನಿಮಾದ ಪರದೆಯ ಮೇಲೆ ಮೊದಲು ಕಂಡ ಚಿತ್ರ. ಪುಸ್ತಕಗಳಲ್ಲಿ ಓದಿದ ಚಿತ್ರ. ಇತರರ ಪ್ರವಾಸಕಥೆಗಳಲ್ಲಿ ಕಲ್ಪಿಸಿಕೊಂಡ ಚಿತ್ರ. ಕೊನೆಗೆ, ನನ್ನ ಕಣ್ಣ ಮುಂದೆ ನಿಂತ ನೈಜ ಚಿತ್ರ ಮತ್ತು ನನ್ನ ಕ್ಯಾಮೆರಾದಲ್ಲಿ ಉಳಿದ ಚಿತ್ರ.
ಲೇಖಕರು: ಹವ್ಯಾಸಿ ಬರಹಗಾರರು