ವಿಶ್ವದ 5 ಕಲರ್ಫುಲ್ ನಗರಗಳಿವು..
ಇಟಲಿಯ ವೇನಿಸ್‌ನ ಹತ್ತಿರದಲ್ಲಿರುವ ಒಂದು ಸಣ್ಣ, ಆದರೆ ಕಣ್ಮನ ಸೆಳೆಯುವ ಐರೋಪ್ಯ ದ್ವೀಪದ ಊರು ಬುರಾನೋ. ಈ ಊರು ತನ್ನ ಉಜ್ವಲ ಬಣ್ಣದ ಮನೆಯ ಸಾಲುಗಳು, ಹಸ್ತವಿನ್ಯಾಸದ ಲೇಸ್‌ಗಳ ತಯಾರಿಕೆ ಮತ್ತು ನಿಶ್ಶಬ್ದ ಜಲಮಾರ್ಗಗಳ ಮೂಲಕ ಪ್ರಪಂಚದ ಎಲ್ಲೆಡೆಯ ಪ್ರವಾಸಿಗರನ್ನು ಸೆಳೆಯುತ್ತಿದೆ. ನೀಲಿ, ಹಳದಿ, ಹಸಿರು ಹೀಗೆ ಎಷ್ಟು ದೂರ ಕಣ್ಣು ಹಾಯಿಸಿದ್ರೂ ಅಷ್ಟು ದೂರಕ್ಕೆ ಕಾಮನ ಬಿಲ್ಲಿನಂತೆ ಕಾಣುವ ಮನೆಗಳೇ ಪ್ರವಾಸಿಗರ ಆಕರ್ಷಣೆ.
- ಸಾಗರ್ ಚಿಕ್ಕಮಗಳೂರು
ಬಣ್ಣ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ಅದರಲ್ಲೂ ನಮ್ಮ ಕಣ್ಣಿಗೆ ಕಾಣುವಷ್ಟು ದೂರದ ಸುತ್ತಮುತ್ತಲಿನ ಸ್ಥಳಗಳು ಬಣ್ಣದಿಂದ ಕೂಡಿದ್ದರೆ ಬೇರೆ ಜಗತ್ತಿನಲ್ಲೇ ಇದ್ದ ಅನುಭವ ಬಹಳ ರೋಮಾಂಚವಾಗಿರುತ್ತದೆ. ವಿಶ್ವದಲ್ಲೇ ಕಲರ್ಫುಲ್ ನಗರಗಳ ಬಗ್ಗೆ ನಿಮಗೆ ಗೊತ್ತಾದರೆ ನಿಮ್ಮ ಮುಂದಿನ ಟ್ರಿಪ್ ಬಕೆಟ್ ಲಿಸ್ಟ್‌ನಲ್ಲಿ ಈ ಜಾಗವನ್ನು ಮರೆಯದೇ ಸೇರಿಸುತ್ತೀರಿ. ವಿಶ್ವದ 5 ಕಲರ್ಫುಲ್ ನಗರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಇದನ್ನೂ ಓದಿ: ಈ ದೇಶಗಳನ್ನು ನೀವು 1 ದಿನದಲ್ಲೇ ಸುತ್ತಬಹುದು! ಪ್ರಪಂಚದ ಅತೀ ಚಿಕ್ಕ ರಾಷ್ಟ್ರಗಳು ಯಾವುದು ಗೊತ್ತೆ? ಇಲ್ಲಿದೆ ಪಟ್ಟಿ
1 ಚೆಫ್ಚೌಯೆನ್, ಮೊರಾಕೊ
ರಿಫ್ ಪರ್ವತಗಳ ಮಡಿಲಲ್ಲಿ ನೆಲೆಸಿರುವ ಈ ಪುಟ್ಟ ನಗರ. ಪ್ರತಿ ಮೆಟ್ಟಿಲು, ಗೋಡೆ, ಕಿಟಕಿ, ಬೀದಿ ಮೂಲೆಗಳವರೆಗೆ ಆಕಾಶ ನೀಲಿಯಿಂದ ಹಿಡಿದು ಕಡಲ ಬಣ್ಣವೂ ನೀಲಿ. ಉತ್ತರ ಮೊರಾಕೊದಲ್ಲಿರುವ ಒಂದು ಮಾಯಾ ನಗರ. ನೀಲಿ ಬಣ್ಣದ ಗೋಡೆಗಳಿಂದಾಗಿ ಈ ಪಟ್ಟಣ ʼನೀಲಿ ನಗರʼ ಎಂದೇ ಪಸಿದ್ಧಿ. ಪ್ರವಾಸಿಗರಿಗೆ ಇದು ಕೇವಲ ಒಂದು ಸ್ಥಳವಲ್ಲ, ಬಣ್ಣ ಮತ್ತು ಶಾಂತಿಯ ಸಂಗಮ ಅನುಭವ.
ಈ ಬಣ್ಣದ ಹಿಂದೆ ಕಥೆಗಳಿವೆ:
1930ರ ದಶಕದಲ್ಲಿ ಈ ಬಣ್ಣವನ್ನು ಯಹೂದಿ ಪ್ರಜೆಗಳು ಪರಿಚಯಿಸಿದರೆಂದು ಹೇಳಲಾಗುತ್ತದೆ. ನೀಲಿ ಬಣ್ಣವು ಆಕಾಶ ಮತ್ತು ದೇವಾಲಯವನ್ನು ಸೂಚಿಸುತ್ತೆಂದು ಇಲ್ಲಿನ ಜನ ನಂಬುತ್ತಾರೆ. ಈ ಬಣ್ಣ ಇಲ್ಲಿಗೆ ಶೈಲಿ ಮಾತ್ರವಲ್ಲ, ಸಮುದಾಯದ ಅಸ್ತಿತ್ವ, ಸಾಂಸ್ಕೃತಿಕ ಗುರುತು ಎಂದು ಇಲ್ಲಿನ ಜನ ನಂಬುತ್ತಾರೆ. ಇನ್ನೂ ಕೆಲವರು ಈ ಬಣ್ಣ ನಸುಳಿಗಳನ್ನು ತಡೆಗಟ್ಟುತ್ತದೆ ಎಂದು ನಂಬುತ್ತಾರೆ.
ನೋಡಬೇಕಾದ ಸ್ಥಳಗಳು:
ಅಕ್ಶೂರ್ ಜಲಪಾತಗಳು, ತಲಸ್ಸೆಮ್ತಾನೆ ರಾಷ್ಟ್ರೀಯ ಉದ್ಯಾನವನ, ರಿಫ್ ಪರ್ವತಗಳಲ್ಲಿ ಬೆಟ್ಟದಲ್ಲಿ ನಡಿಗೆ, ಕಸ್ಬಾ ಕೋಟೆ, ಉತಾ ಎಲ್ ಹಮ್ಮಾಮ್ ಚೌಕವನ್ನೂ ನೋಡಬಹದು. ಕೈಯಿಂದಲೇ ತಯಾರಿಸುವ ಸ್ಮರಣಿಕೆಗಳಂತಹ ಕಲೆ ಮತ್ತು ಕರಕುಶಲ ವಸ್ತುಗಳನ್ನು ಕಣ್ತುಂಬಿಕೊಳ್ಳಬಹುದು.
ಜನಪ್ರಿಯ ತಿನಿಸುಗಳು:
ಚೆಫ್ಚೌಯೆನ್‌ನ ಬೀದಿಗಳಲ್ಲಿ ಈ ಆಹಾರಗಳನ್ನು ಸವಿಯುವುದು ಒಂದು ಸಾಂಸ್ಕೃತಿಕ ಅನುಭವವೇ ಸರಿ.
ಯಾವಾಗ ಹೋಗಬೇಕು?
ಏಪ್ರಿಲ್-ಮೇ ಅಥವಾ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಹವಾಮಾನ ತಂಪಾಗಿದ್ದು, ವೀಕ್ಷಣೆಗೆ ಸುಲಭವಾಗಿರುತ್ತದೆ. ಚೆಫ್ಚೌಯೆನ್ ಪುಟ್ಟ ನಗರವಾದರೂ, ಅದರ ಶಾಂತತೆಯನ್ನು ಅನುಭವಿಸಲು ಅದೇ ಕನಿಷ್ಟ 2-3 ದಿನಗಳು ಮೀಸಲಿಡಿ.
2 ಬುರಾನೋ, ಇಟಲಿ
ಇಟಲಿಯ ವೇನಿಸ್‌ನ ಹತ್ತಿರದಲ್ಲಿರುವ ಒಂದು ಸಣ್ಣ, ಆದರೆ ಕಣ್ಮನ ಸೆಳೆಯುವ ಐರೋಪ್ಯ ದ್ವೀಪದ ಊರು. ಈ ಊರು ತನ್ನ ಉಜ್ವಲ ಬಣ್ಣದ ಮನೆಯ ಸಾಲುಗಳು, ಹಸ್ತವಿನ್ಯಾಸದ ಲೇಸ್‌ಗಳ ತಯಾರಿಕೆ ಮತ್ತು ನಿಶ್ಶಬ್ದ ಜಲಮಾರ್ಗಗಳ ಮೂಲಕ ಪ್ರಪಂಚದ ಎಲ್ಲೆಡೆಯ ಪ್ರವಾಸಿಗರನ್ನು ಸೆಳೆಯುತ್ತಿದೆ. ನೀಲಿ, ಹಳದಿ, ಹಸಿರು ಹೀಗೆ ಎಷ್ಟು ದೂರ ಕಣ್ಣು ಹಾಯಿಸಿದ್ರೂ ಅಷ್ಟು ದೂರಕ್ಕೆ ಕಾಮನ ಬಿಲ್ಲಿನಂತೆ ಕಾಣುವ ಈ ಮನೆಗಳೇ ಪ್ರವಾಸಿಗರ ಆಕರ್ಷಣೆ.
ಬಣ್ಣದ ಹಿಂದಿನ ಕಥೆ:
ತಮ್ಮ ಮನೆಗಳನ್ನು ದೂರದಿಂದಲೂ ಗುರುತಿಸಲು ಬಣ್ಣಗಳನ್ನು ಬಳಸಿದ್ದರು ಎನ್ನಲಾಗುತ್ತದೆ. ಆದ್ರೆ ಇಂದು, ಈ ಬಣ್ಣಗಳ ವಿನ್ಯಾಸ ನಗರದ ಸಂಸ್ಕೃತಿಯ ಭಾಗವಾಗಿ ಉಳಿದಿದೆ. ಒಬ್ಬರು ಹೊಸ ಮನೆಗೆ ಬಣ್ಣ ಹಾಕಬೇಕಾದರೂ, ಸರಕಾರದಿಂದ ಅನುಮತಿ ಪಡೆಯಬೇಕು. ನಿರ್ದಿಷ್ಟ ಬಣ್ಣಗಳಿಗೆ ಮಾತ್ರ ಅನುಮತಿ ಇದೆ.

ಬುರಾನೋ ಲೇಸ್:
ಬುರಾನೋ ತನ್ನ ಹಸ್ತಚಾಲಿತ ಲೇಸ್ ನಿರ್ಮಾಣಕ್ಕಾಗಿ ಪ್ರಸಿದ್ಧ. ಶತಮಾನಗಳಿಂದಲೂ ಮಹಿಳೆಯರು ಸೂಜಿಯಿಂದ ಹೆಣೆದ ಈ ಲೇಸ್‌ಗಳು ಐರೋಪ್ಯ ಅರಮನೆಗಳವರೆಗೆ ತನ್ನ ಹೆಸರನ್ನು ಹರಡಿವೆ. ಮಾತ್ರವಲ್ಲ ವಿಶ್ವದಾದ್ಯಂತ ಈ ಲೇಸ್ ತುಂಬಾ ಫೇಮಸ್.
ಸ್ಥಳೀಯ ತಿನಿಸು:
ಸೆಫೂಡ್ ಪಾಸ್ತಾ, ಸರ್ಡಿನ್ ಇನ್ ಸಾರ್, ಬಿಸೋಲಾ ಕೇಕ್
ಪ್ರವಾಸಿಗರಿಗೆ ಟಿಪ್ಸ್:
ಬೇಸ್ಟ್ ಟೈಮ್: ಏಪ್ರಿಲ್ ಜೂನ್ ಅಥವಾ ಸೆಪ್ಟೆಂಬರ್‌ನಲ್ಲಿ ಹಗುರವಾದ ಹವಾಮಾನ.
ಹೋಗುವುದು ಹೇಗೆ?: ವೇನಿಸ್‌ನಿಂದ ಹಡಗಿನ ಮೂಲಕ 45 ನಿಮಿಷಗಳಲ್ಲಿ ತಲುಪಬಹುದು.

3 ಜೋಧ್ಪುರ, ಭಾರತ
ರಾಜಸ್ಥಾನ ರಾಜ್ಯದ ಹೃದಯಭಾಗದಲ್ಲಿರುವ ಒಂದು ವಿಶಿಷ್ಟ ನಗರ ಜೋಧ್ಪುರ. ತನ್ನ ವೈಶಿಷ್ಟ್ಯಪೂರ್ಣ ನೀಲಿ ಮನೆಗಳಿಂದಾಗಿ ಬ್ಲೂ ಸಿಟಿ ಎಂಬ ಹೆಸರನ್ನು ಗಳಿಸಿಕೊಂಡಿದೆ. ಮೆಹೆರ್‌ಗಢ್ ಕೋಟೆಯಿಂದ ಮೇಲಿಂದ ನೋಡಿದರೆ, ಜೋಧ್ಪುರದ ಹಳೆಯ ನಗರ ನೀಲಿ ಬಣ್ಣದಿಂದ ಕಣ್ಮನ ಸೆಳೆಯುತ್ತದೆ. ಈ ನೀಲಿ ಮನೆಗಳು ಕೆಲವೊಮ್ಮೆ ಬ್ರಾಹ್ಮಣರು ತಮ್ಮ ಮನೆ ಗುರುತಿಸುವುದಕ್ಕಾಗಿ ಮಾಡಿದ್ರೆ, ಇನ್ನು ಕೆಲವರು ಈ ಬಣ್ಣವು ಚಳಿಯನ್ನು ತಡೆಯುತ್ತದೆ ಮತ್ತು ಹಾರಣುಗಳನ್ನು ದೂರವಿಡುತ್ತದೆ ಎಂಬುದಾಗಿ ನಂಬುತ್ತಾರೆ.
ಸ್ಥಳೀಯ ತಿನಿಸು: ದಾಲ್ ಬಾಫ್ಲಿ, ಕಚೋರಿ ಮತ್ತು ಮಿರ್ಚಿ ಬಡಾ, ಮವಾ ಕಚೋರಿ, ಮಖಾನಿಯಾ ಲಸ್ಸಿ
ನೋಡಬೇಕಾದ ಸ್ಥಳಗಳು:
ಮೆಹ್ರಾನ್‌ಗಡ್ ಕೋಟೆ: ಇದು ನಗರದ ಪ್ರಮುಖ ಹೆಗ್ಗುರುತಾಗಿದ್ದು, ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಇದು ದೊಡ್ಡ ಮತ್ತು ಭವ್ಯವಾದ ಕೋಟೆಯಾಗಿದೆ.
ಉಮೈದ್ ಭವನ್ ಅರಮನೆ: ಇದು ಈಗ ಒಂದು ಹೋಟೆಲ್ ಮತ್ತು ವಸ್ತು ಸಂಗ್ರಹಾಲಯವಾಗಿದೆ. ಇದು ರಾಜಸ್ಥಾನದ ಅತಿ ದೊಡ್ಡ ಅರಮನೆಗಳಲ್ಲಿ ಒಂದಾಗಿದೆ.
ಕೈಲಾನಾ ಸರೋವರ: ಇದು ಪ್ರಶಾಂತ ಮತ್ತು ಸುಂದರವಾದ ಸರೋವರವಾಗಿದ್ದು, ನೀವು ದೋಣಿ ವಿಹಾರವನ್ನು ಆನಂದಿಸಬಹುದು.
ಜಸ್ವಂತ್ ಥಾಡಾ: ಇದು ರಾಜಸ್ಥಾನದ ಸಾಂಪ್ರದಾಯಿಕ ವಾಸ್ತುಶಿಲ್ಪದ ಸ್ಮಾರಕವಾಗಿದೆ. ಇದನ್ನು ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾಗಿದೆ.
ಘಂಟಾ ಘರ್: ಇದು ಜೋಧ್‌ಪುರದ ಹೃದಯಭಾಗದಲ್ಲಿರುವ ಪ್ರಸಿದ್ಧ ಗಡಿಯಾರ ಗೋಪುರವಾಗಿದೆ.
ರಾಜಸ್ಥಾನಿ ಭೋಜನ:
ನೀವು ಜೋಧ್‌ಪುರದಲ್ಲಿ ಸ್ಥಳೀಯ ಭೋಜನವನ್ನು ಸವಿಯಬಹುದು. ಇಲ್ಲಿನ ಮಸಾಲೆಯುಕ್ತ ಆಹಾರ ಮತ್ತು ಸಿಹಿತಿಂಡಿಗಳು ಪ್ರಸಿದ್ಧವಾಗಿವೆ.
4 ಅಮೋರ್ಗೋಸ್, ಗ್ರೀಸ್
ಇದು ಸೈಕ್ಲಾಡಸ್ ದ್ವೀಪಗುಚ್ಛದ ಒಂದು ಶಾಂತ, ಕಡಿಮೆ ಪ್ರವಾಸಿಗರು ಭೇಟಿ ನೀಡುವ ದೈತ್ಯ ಸಮುದ್ರದ ತೀರದ ದ್ವೀಪ. ಇಲ್ಲಿನ ನೀಲಿ-ಬಿಳಿ ಬಣ್ಣದ ಮನೆಗಳು, ಬಂಡೆ ತುದಿಗಳ ಮೇಲೆ ನಿಂತಿರುವ ಮಠಗಳು ಆತ್ಮಶಾಂತಿಯ ತಾಣದಂತೆ ಗೋಚರಿಸುತ್ತದೆ.
ಪ್ರಮುಖ ಆಕರ್ಷಣೆಗಳು:
ಹೋಜೋಮಿಟಿಸಾ ಮಠ: ಬಂಡೆಯ ಎದೆಯ ಮೇಲೆ ಕಟ್ಟಿರುವ ಈ 11ನೇ ಶತಮಾನದ ಮಠವು ಸಮುದ್ರದಿಂದ ಕೇವಲ 300 ಅಡಿ ಎತ್ತರದಲ್ಲಿದೆ.
ಚೋರಾ: ದ್ವೀಪದ ಪ್ರಧಾನ ಹಳ್ಳಿ, ಬಿಳಿ ಮನೆಗಳು, ಹಳೆಯ ಗಡಿಯಾರಗಳು, ಜಾಸ್ಮಿನ್ ಹೂವುಗಳಿಂದ ತುಂಬಿದ ಬೀದಿಗಳು.
ಅಗಿಯಾ ಅನ್ನಾ ಕಡಲತೀರ: ಇಲ್ಲಿಯೇ ಜನಪ್ರಿಯ 1988 ರ ‘ದಿ ಬಿಗ್ ಬ್ಲೂ' ಸಿನಿಮಾ ಚಿತ್ರೀಕರಿಸಲಾಯಿತು.
ಹೋಗುವುದು ಹೇಗೆ?
ಎಥೆನ್ಸ್ ಅಥವಾ ನಕ್ಸೋಸ್‌ನಿಂದ ನೌಕೆ ಮಾರ್ಗ ಮೂಲಕ ತಲುಪಬಹುದು. ಮೇ ಸೆಪ್ಟೆಂಬರ್ ನಡುವೆ ಹವಾಮಾನ ತಂಪಾಗಿದ್ದು, ಕಡಲತೀರ ಪ್ರಿಯರಿಗೆ ಒಳ್ಳೆಯ ಅನುಭವ.

5 ಕೋಪನ್ ಹ್ಯಾಗನ್, ಡೆನ್ಮಾರ್ಕ್
ಇದು ಯುರೋಪಿನ ಅತೀ ಶುದ್ಧ, ನವೀನ ಹಾಗೂ ಉತ್ತಮವಾಗಿ ರೂಪುಗೊಂಡ ರಾಜಧಾನಿಗಳಲ್ಲಿ ಒಂದು. ಬಣ್ಣದ ಕಟ್ಟಡಗಳು, ನೀರಿನ ಕಾಲುವೆಗಳು, ಪುರಾತನ ಅರಮನೆಗಳು, ಮತ್ತು ಆಧುನಿಕ ವಿನ್ಯಾಸದ ಮಧ್ಯೆ ನೆಲೆಯಾಗಿರುವ ಈ ನಗರ, ಯಾತ್ರೀಕರಿಗೆ ಆನಂದದ ಮೌಲ್ಯವಾದ ಅನುಭವ ನೀಡುತ್ತದೆ.
ಪ್ರಮುಖ ಆಕರ್ಷಣೆಗಳು:
ನ್ಯಾವ್‌ಹನ್: ನೀರಿನ ಕಾಲುವೆಯ ಪಕ್ಕದ ಬಣ್ಣ ಬಣ್ಣದ ಹಳೆಯ ಮನೆಗಳು, ಕಾಫಿ ಅಂಗಡಿಗಳು ಮತ್ತು ಬೋಟುಗಳು. ಫೋಟೋ ಪ್ರಿಯರಿಗೆ ಸ್ವರ್ಗ.
ಅಮಾಲಿಯೆನ್‌ಬೋರ್ಗ್ ಅರಮನೆ: ಡೆನ್ಮಾರ್ಕ್ ರಾಜವಂಶದ ನಿವಾಸ. ಪ್ರತಿ ಮಧ್ಯಾಹ್ನ ಗಾರ್ಡ್ ಪಥ ಸಂಚಲನವನ್ನು ನೋಡುವ ಅವಕಾಶ.
ಲಿಟಲ್ ಮರ್ಮೇಡ್ ಪ್ರತಿಮೆ: ಹ್ಯಾನ್ಸ್ ಕ್ರಿಸ್ಟಿಯನ್ ಆಂಡರ್ಸನ್ ಅವರ ಪ್ರಸಿದ್ಧ ಕತೆ ಆಧಾರಿತ ಪ್ರೀತಿ ಮತ್ತು ತ್ಯಾಗದ ಪ್ರತಿಮೆ.
ರೋಸೆನ್‌ಬೋರ್ಗ್ ಕೋಟೆ: ಐತಿಹಾಸಿಕ ರಾಜತಂತ್ರ, ಗದ್ದೆಗಳೊಳಗಿನ ಅರಮನೆ, ಹಾಗೂ ರಾಜಮುತ್ತುಗಳ ಸಂಗ್ರಹಾಲಯ.