ಚಾರಣವೆಂದರೆ ಕೇವಲ ಕುಮಾರಪರ್ವತವಾಗದಿರಲಿ
ನಮ್ಮ ರಾಜ್ಯದಲ್ಲಿ ಸಾಕಷ್ಟು ಟ್ರೆಕ್ಕಿಂಗ್ ತಾಣಗಳು ಒಂದಲ್ಲಾ ಒಂದು ಕಾರಣಗಳಿಗೆ ಮುಚ್ಚಲ್ಪಟ್ಟಿರುತ್ತವೆ ಅಥವಾ ನಿರ್ಬಂಧಿಸಲ್ಪಟ್ಟಿರುತ್ತವೆ. ಚಾರಣಿಗರಿಗೆ ಮಳೆಗಾಲದ ಹೊರತಾಗಿ ಇನ್ನೆಲ್ಲ ತಿಂಗಳುಗಳಲ್ಲೂ ಟ್ರೆಕ್ಕಿಂಗಿಗೆ ಅವಕಾಶ ಇರಬೇಕು. ಅದಕ್ಕೆ ಸೂಕ್ತವಾದ ಮೂಲಭೂತ ಸೌಕರ್ಯ ಮತ್ತು ಭದ್ರತೆ ಒದಗಿಸಬೇಕು. ಇತರ ಟ್ರೆಕ್ಕಿಂಗ್ ಸ್ಪಾಟ್ ಗಳನ್ನು ಆಕರ್ಷಣೀಯವಾಗಿಸುವ ನಿಟ್ಟಿನಲ್ಲಿ ಹೊಸತನ ತುಂಬಬೇಕು ಮತ್ತು ಪ್ರೊಮೋಷನ್ ನಡೆಸಬೇಕು.
ಕರ್ನಾಟಕದ ಪಾಲಿಗೆ ಕುಮಾರ ಪರ್ವತ ಎಂಬುದು ಹಿಮಾಲಯದಷ್ಟೇ ಕಠಿಣ ಮತ್ತು ರೋಚಕ ಟ್ರೆಕ್ಕಿಂಗ್ ತಾಣ ಎಂಬುದರಲ್ಲಿ ಅನುಮಾನವಿಲ್ಲ. ಅತ್ಯಂತ ಎತ್ತರ ಹಾಗೂ ಸಾಹಸಮಯ ಟ್ರೆಕ್ಕಿಂಗ್ ರೂಟ್ ಎಂದೇ ಕುಮಾರ ಪರ್ವತ ಹೆಸರಾಗಿದೆ. ಈ ತಿಂಗಳ ಆರಂಭದಲ್ಲಿ ಹೊರಬಿದ್ದಿರುವ ಅಂಕಿ ಅಂಶಗಳು ಬಹಳ ಆಸಕ್ತಿಕರವಾಗಿವೆ. ಇಂದಿನ ಪ್ರವಾಸಿಗರು ಕಷ್ಟದ ಟ್ರೆಕ್ಕಿಂಗ್ ಸವಾಲುಗಳನ್ನು ಇಷ್ಟಪಡುತ್ತಿದ್ದಾರೆ ಎಂಬುದನ್ನು ಅಂಕಿಅಂಶಗಳು ಸೂಚಿಸುತ್ತಿವೆ. ಹೌದು. ಕಳೆದ ಮೂರು ವರ್ಷಗಳಲ್ಲಿ ಕುಮಾರಪರ್ವತ ಟ್ರೆಕ್ ಮಾಡುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ.
ಇದನ್ನೂ ಓದಿ: ಮುಂಬಯಿನಲ್ಲಿ ಭಾರತದ ಮೊದಲ ಮ್ಯೂಸಿಕಲ್ ರಸ್ತೆಗೆ ಚಾಲನೆ
ಕಳೆದ ವರ್ಷ ಕುಮಾರಪರ್ವತ ಏರಿದವರ ಸಂಖ್ಯೆ 18,552. ಈ ಮೊದಲು, ವರ್ಷಕ್ಕ ಗರಿಷ್ಠ 12 ಸಾವಿರದಷ್ಟು ಮಂದಿ ಮಾತ್ರ ಕುಮಾರಪರ್ವತ ಏರುತ್ತಿದ್ದರು. ಅದೀಗ ಒಂದೂವರೆಪಟ್ಟು ಏರಿದೆ. ಪರ್ವತದ ಜನಪ್ರಿಯತೆ ನೋಡುತ್ತಿದ್ದರೆ ಇಪ್ಪತ್ತೈದು ಸಾವಿರ ಮುಟ್ಟುವ ಸಾಧ್ಯತೆಯೂ ಇದೆ. ಇದು ಸಂತೋಷದ ವಿಚಾರವೇ. ಆದರೆ ಟ್ರೆಕ್ಕರ್ ಗಳು ಈ ಬೆಳವಣಿಗೆಯಿಂದ ಬೇಸರಗೊಂಡಿದ್ದಾರೆ. ಟ್ರೆಕ್ಕಿಂಗಿಗೆ ಹೋಗ್ತಿದ್ದೇವೋ ಅಥವಾ ಯಾವುದಾದರೂ ಜಾತ್ರೆಗೆ ಹೋಗ್ತಿದ್ದೇವೋ ಎಂಬಂತಾಗಿದೆ ಎಂದು ಗೊಣಗುತ್ತಿದ್ದಾರೆ. ಈ ರೀತಿ ಜನಜಾತ್ರೆಯಾದರೆ, ಟ್ರೆಕ್ಕಿಂಗಿನ ಸ್ವಾದ ಹಾಳಾಗುವುದರ ಜತೆಗೆ, ಪರಿಸರಕ್ಕೂ ಹಾನಿ, ವನ್ಯಜೀವಿಗಳ ಮೇಲೂ ಪರಿಣಾಮವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತದ್ದಾರೆ. ಎರಡು ಮಾರ್ಗಗಳಲ್ಲಿ ಟ್ರೆಕ್ಕಿಂಗ್ ಸಾಧ್ಯವಿರುವ ಕುಮಾರ ಪರ್ವತ ತನ್ನ ಪಾವಿತ್ರ್ಯ ಕಾಪಾಡಿಕೊಳ್ಳಬೇಕೆಂದರೆ ಜನಜಾತ್ರೆಗೆ ಕಡಿವಾಣ ಹಾಕಬೇಕು ಎಂಬುದು ಟ್ರೆಕ್ಕರ್ ಗಳ ಅಭಿಪ್ರಾಯ. ಹಾಗಂತ ಜನರನ್ನ ನಿರ್ಬಂಧಿಸುವುದು ಅಸಾಧ್ಯ.
ವೀಕೆಂಡ್ ಅಲ್ಲದೇ ವೀಕ್ ಡೇ ಗಳಲ್ಲ ಬನ್ನಿ ಎಂದೂ ತಾಕೀತು ಮಾಡಲಾಗುವುದಿಲ್ಲ. ಈ ಸಮಸ್ಯೆಗೆ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಕೂತು ಪರಿಹಾರ ಕಂಡುಕೊಳ್ಳಬೇಕಿದೆ. ಅರಣ್ಯ ಇಲಾಖೆ ಇದೀಗ ಈ ಟ್ರೆಕ್ ಒಂದೇ ದಿನದಲ್ಲಿ ಮುಗಿಸಿ ವಾಪಸ್ ಬರಬೇಕು. ರಾತ್ರಿ ಉಳಿಯುವಂತಿಲ್ಲ ಎಂಬ ನಿಯಮ ಮಾಡಿದೆ. ಟ್ರೆಕ್ಕಿಂಗ್ ಶುಲ್ಕವನ್ನೂ ನಿಗದಿಪಡಿಸಿದೆ. ಮದ್ಯಪಾನ/ಧೂಮಪಾನ, ಪ್ಲಾಸ್ಟಿಕ್ ಇವುಗಳ ಮೇಲೆ ನಿಷೇಧವನ್ನೂ ಹೇರಿದೆ. ಒಂದಷ್ಟು ಸಂರಕ್ಷಣಾ ಕ್ರಮ ಮತ್ತು ಭದ್ರತಾ ಕ್ರಮಗಳನ್ನೂ ಜಾರಿಗೊಳಿಸಿದೆ. ಆದರೂ ಕುಮಾರಪರ್ವತಕ್ಕೆ ಹೋಗುವವರ ಸಂಖ್ಯೆ ಏರುತ್ತಲೇ ಇದೆ. ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವಿಕೆ, ಧೂಮಪಾನ ಮತ್ತು ಮದ್ಯಪಾನ ಅವ್ಯಾಹತವಾಗಿ ಸಾಗುತ್ತಲೇ ಇದೆ.

ಪ್ರವಾಸೋದ್ಯಮದ ದೃಷ್ಟಿಯಿಂದ ನೋಡಿದರೆ ಜನರನ್ನು ಬರದಂತೆ ತಡೆಯುವುದು ಸೂಕ್ತ ಯೋಚನೆ ಅಲ್ಲ. ಆದರೆ ವನ್ಯಜೀವಿಗಳ ಮತ್ತು ಪರಿಸರದ ದೃಷ್ಟಿಯಿಂದ ನೋಡಿದಾಗ ಸೂಕ್ತ ಅನಿಸುತ್ತದೆ. ಇವೆರಡನ್ನೂ ಬ್ಯಾಲೆನ್ಸ್ ಮಾಡಲು ಕೆಲವು ಮಾರ್ಗಗಳನ್ನು ಅನುಸರಿಸಬಹುದು. ಪ್ರವೇಶ ಶುಲ್ಕ ಹೆಚ್ಚಳ ಮಾಡಿದಲ್ಲಿ ಕ್ವಾಲಿಟಿ ಪ್ರವಾಸಿಗರು ಮಾತ್ರ ಬರುವಂತಾಗಬಹುದು. ಮದ್ಯಪಾನ ಧೂಮಪಾನ ಹಾಗೂ ಪ್ಲಾಸ್ಟಿಕ್ ನಿಷೇಧ ಎಂಬುದು ಕೇವಲ ಪೇಪರ್ ಮೇಲೆ ಮಾತ್ರಕ್ಕೆ ಸೀಮಿತಗೊಳಿಸುವ ಬದಲು ಹೆಚ್ಚು ಸಿಬ್ಬಂದಿಯನ್ನು ನೇಮಿಸಿ ದಂಡ ಅಥವಾ ಕಠಿಣ ಶಿಕ್ಷೆಯ ಭಯ ಹುಟ್ಟಿಸಬೇಕು. ದಿನಕ್ಕೆ ಇಂತಿಷ್ಟೇ ಸಂಖ್ಯೆಯ ಚಾರಣಿಗರು ಎಂಬ ನಿಯಮ ಜಾರಿಮಾಡುವುದೂ ಉತ್ತಮ ನಿರ್ಧಾರವೇ. ಆದರೆ ಇದಕ್ಕೆ ಪರ್ಯಾಯವಾಗಿ ಏನು ಮಾಡಬಹುದು? ರಾಜ್ಯದ ಇನ್ನಿತರ ಟ್ರೆಕ್ಕಿಂಗ್ ತಾಣಗಳನ್ನು ಕುಮಾರಪರ್ವತದಷ್ಟೇ ಜನಪ್ರಿಯಗೊಳಿಸುವುದು ಹಾಗೂ ಅವುಗಳನ್ನು ಪ್ರವಾಸಿಗರಿಗೆ ಹೆಚ್ಚು ಅವಧಿಗೆ ಓಪನ್ ಇಡುವುದು.
ನಮ್ಮ ರಾಜ್ಯದಲ್ಲಿ ಸಾಕಷ್ಟು ಟ್ರೆಕ್ಕಿಂಗ್ ತಾಣಗಳು ಒಂದಲ್ಲಾ ಒಂದು ಕಾರಣಗಳಿಗೆ ಮುಚ್ಚಲ್ಪಟ್ಟಿರುತ್ತವೆ ಅಥವಾ ನಿರ್ಬಂಧಿಸಲ್ಪಟ್ಟಿರುತ್ತವೆ. ಚಾರಣಿಗರಿಗೆ ಮಳೆಗಾಲದ ಹೊರತಾಗಿ ಇನ್ನೆಲ್ಲ ತಿಂಗಳುಗಳಲ್ಲೂ ಟ್ರೆಕ್ಕಿಂಗಿಗೆ ಅವಕಾಶ ಇರಬೇಕು. ಅದಕ್ಕೆ ಸೂಕ್ತವಾದ ಮೂಲಭೂತ ಸೌಕರ್ಯ ಮತ್ತು ಭದ್ರತೆ ಒದಗಿಸಬೇಕು. ಇತರ ಟ್ರೆಕ್ಕಿಂಗ್ ಸ್ಪಾಟ್ ಗಳನ್ನು ಆಕರ್ಷಣೀಯವಾಗಿಸುವ ನಿಟ್ಟಿನಲ್ಲಿ ಹೊಸತನ ತುಂಬಬೇಕು ಮತ್ತು ಪ್ರೊಮೋಷನ್ ನಡೆಸಬೇಕು. ಎಲ್ಲ ಚಾರಣಿಗರಿಗೂ ಕುಮಾರಪರ್ವತ ಮಾತ್ರವೇ ಆಕರ್ಷಣೀಯವಾಗಿರುವುದು ಹಾಗೂ ಇತರ ಚಾರಣ ಕ್ಷೇತ್ರಗಳು ಒಂದಲ್ಲಾ ಒಂದು ರೀತಿಯ ನಿರ್ಬಂಧ ಅಥವಾ ಅವ್ಯವಸ್ಥೆಯ ಗೂಡಾಗಿರುವುದೂ ಕುಮಾರಪರ್ವತದ ಜನದಟ್ಟಣೆಗೆ ಕಾರಣವಾಗುತ್ತಿದೆ. ಪ್ರವಾಸಿಗರೂ ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಚಾರಣಕ್ಷೇತ್ರಗಳಿವೆ, ಕಡಿಮೆ ಅನ್ವೇಷಿಸಲ್ಪಟ್ಟ ಚಾರಣಹಾದಿಗಳಿವೆ ಎಂಬುದನ್ನ ಮನಗಾಣಬೇಕು. ಒಂದು ಪ್ರವಾಸಿತಾಣ ಅತಿಹೆಚ್ಚು ಜನದಟ್ಟಣೆ ಕಾಣುವುದು ಮತ್ತೊಂದು ತಾಣ ಖಾಲಿಹೊಡೆಯುವುದು ಉತ್ತಮ ಪ್ರವಾಸೋದ್ಯಮದ ಲಕ್ಷಣವಲ್ಲ.