ಅವಸರವೂ ಸಾವಧಾನದ ಬೆನ್ನೇರಿದ ದೇಶ
ನಾನು ಜಪಾನ್‌ಗೆ ಹೋಗುತ್ತಿದ್ದೇನೆ ಅಂದಾಗ ʼಹೊರದೇಶದ ಮೊದಲ ಭೇಟಿಯೇ ಜಪಾನ್ ಅಂದರೆ ತುಂಬಾ ಕಷ್ಟ. ನಂತರ ಯಾವ ದೇಶ ನೋಡಿದರೂ ಎಕ್ಸೈಟ್ ಆಗಲ್ಲʼಅಂತ ಗೆಳತಿಯೊಬ್ಬರು ಹೇಳಿದ್ದು ಏಕೆ ಅಂತ ಜಪಾನ್‌ಗೆ ಹೋದ ಕೂಡಲೇ ಅರಿವಾಗಿತ್ತು. ಊಹಿಸಲೂ ಸಾಧ್ಯವಾಗದ ಅನೇಕ ಅಂಶಗಳು ನಿಜಕ್ಕೂ ನನ್ನನ್ನು ನಿಬ್ಬೆರಗಾಗಿಸಿತ್ತು. ಮೊದಲ ಹೊರ ದೇಶದ ಭೇಟಿ ಅನ್ನುವುದು ಬಿಟ್ಟರೆ ಬೇರೆ ಯಾವ ಕುತೂಹಲಗಳೂ ನಿರೀಕ್ಷೆಗಳೂ ಇಲ್ಲದೆ, ಕುಟುಂಬದೊಡನೆ ಜಪಾನ್‌ಗೆ ಹೊರಟಿದ್ದೆ.
- ಚಂಪಾ ಶೆಟ್ಟಿ
ಜಪಾನ್‌ಗೆ ಕಾಲಿಡುತ್ತಿದ್ದ ಹಾಗೇ ಮೊದಲು ನನ್ನ ಗಮನ ಸೆಳೆದದ್ದು ಅಲ್ಲಿನ ಟಾಯ್ಲೆಟ್ ಗಳು, ಮತ್ತು ಜನಗಳ ಶಿಸ್ತು. ಜಪಾನ್ ಏರ್ ಪೋರ್ಟ್ ಇಳಿದಾಗ ಅನಿವಾರ್ಯವಾಗಿ ಟಾಯ್ಲೆಟ್‌ಗೆ ಹೋಗಬೇಕೆಂದು ಹೊರಟೆ. ಮೊದಲು ಶಾಕ್ ಆಗಿದ್ದು ಅಲ್ಲಿಯೂ ಶಿಸ್ತಾಗಿ ಕ್ಯೂನಲ್ಲಿ ನಿಂತಿದ್ದ ಜನರನ್ನು ಕಂಡು. ಒಳ ಹೋದಾಗ ಫೈವ್ ಸ್ಟಾರ್‌ನಂತಿದ್ದ ಟಾಯ್ಲೆಟ್‌ಗಳು. ಬಹುಶಃ ಏರ್ ಪೋರ್ಟ್ ಆದ್ದರಿಂದ ಹೀಗಿರಬೇಕು ಅಂದುಕೊಂಡ ನನ್ನ ಊಹೆ ಸುಳ್ಳಾಗಿತ್ತು. ಜಪಾನ್‌ನ ಯಾವುದೇ ಹೊಟೇಲ್ ಆಗಲಿ, ಮೆಟ್ರೋ ಸ್ಟೇಷನ್‌ಗಳಾಗಲಿ, ರೋಡ್‌ಗಳಲ್ಲಿದ್ದ ಪಬ್ಲಿಕ್ ಟಾಯ್ಲೆಟ್‌ಗಳೂ ಅಷ್ಟೆ ಸ್ವಚ್ಛವಾಗಿದ್ದವು. ನೀಟ್ ಆದ ಕಮೋಡ್‌ಗಳು, ವಿಶೇಷವಾಗಿ ಕೆಲವು ಕಡೆಗಳಲ್ಲಿ ಹದವಾದ ಬಿಸಿ ಇದ್ದ ಕಮೋಡ್‌ಗಳು, ಚಳಿಗೆ ಆಹಾ ಎನಿಸುತ್ತಿತ್ತು. ಅಲ್ಲಿ ಟಾಯ್ಲೆಟ್ ಬಳಸಿದ ನಂತರ ತೊಳೆಯಲು ಹ್ಯಾಂಡ್ ಶವರ್ ಇರುವುದಿಲ್ಲ, ಬದಲಿಗೆ ಎರಡು ಬಟನ್‌ಗಳು ಇರುತ್ತಿದ್ದವು. ಒಂದು ಮಹಿಳೆಯರಿಗೆ, ಮತ್ತೊಂದು ಪುರುಷರಿಗೆ ಅದನ್ನು ಒತ್ತಿದರೆ ಸಾಕು ತನ್ನಷ್ಟಕ್ಕೆ ಸರಿಯಾದ ಜಾಗಕ್ಕೆ ನೀರು ಬೀಳುವಂಥ ವ್ಯವಸ್ಥೆಯದು. ಕೇಳಲು ಮಜ ಎನಿಸಿದರೂ ಅದು ಅಲ್ಲಿನ ವಿಶೇಷ. ನಾನು ತಂಗಿದ್ದ ತಮ್ಮನ ಮನೆಯಲ್ಲೂ ಇಂಥದ್ದೇ ಟಾಯ್ಲೆಟ್ ಇತ್ತು. ಮೊದಲೇ ಮೆನೋಪಾಸ್ ನಿಂದ ಒದ್ದಾಡುತ್ತಿದ್ದ ನನಗೆ ಬಿಸಿಯಾದ ಕಮೋಡ್‌ಗಳು ಹಾಯಾದ ಅನುಭವ ನೀಡುತ್ತಿದ್ದವು.
ಇದನ್ನೂ ಓದಿ: ನೀರಿನ ಮೇಲೆ ನಡೆಯುತಾ… ಹಿಮದ ನಡುವೆ ಆಡುತಾ…
ಶಿಸ್ತಿನ ಜಪಾನ್
ಶಿಸ್ತಿಗೆ ಮತ್ತೊಂದು ಹೆಸರೇ ಜಪಾನ್ ಎನ್ನಬಹುದು. ಅಂಗಡಿಗಳಲ್ಲಾಗಲಿ, ಬಸ್ ನಿಲ್ದಾಣ, ರೈಲು ನಿಲ್ದಾಣ ಅಥವಾ ಲಿಫ್ಟ್ ಗಳಲ್ಲಿ, ಎಲ್ಲೇ ಆಗಲಿ ಇಬ್ಬರಿಗಿಂತ ಮತ್ತೊಬ್ಬರು ಹೆಚ್ಚಾದರೂ ತಮ್ಮಷ್ಟಕ್ಕೇ ತಾವೇ ಒಬ್ಬರ ಹಿಂದೆ ಒಬ್ಬರು ನಿಂತು ಕ್ಯೂ ಮಾಡಿಬಿಡುತ್ತಾರೆ. ಹಾಗೆಯೇ ಆತಿಥ್ಯದಲ್ಲಿ ಜಪಾನಿಗರಿಗೆ ನೂರು ಅಂಕ. ನಮ್ಮನ್ನು ಅತಿಥಿಗಳೆಂದು ಭಾವಿಸುವ ಅವರು ವಯಸ್ಸಾದವರಾದರೂ ಸರಿ, ಮೊದಲು ನಮ್ಮನ್ನು ಮುಂದೆ ಹೋಗಲು ಬಿಟ್ಟು ಒಂದು ಚೆಂದದ ನಗೆ ಬೀರುತ್ತಾರೆ. ಮೆಟ್ರೋ ಸ್ಟೇಷನ್ ಗಳಲ್ಲಿ ಆಫೀಸ್ ಟೈಮ್ ಗಳಲ್ಲಿ ಸುಮಾರು ಅರ್ಧ ಕಿಲೋಮೀಟರ್ ಗಟ್ಟಲೆ ಕ್ಯೂ ಇದ್ದರೂ, ಅದೆಷ್ಟು ಸಂಯಮ. ಒಂದಿಷ್ಟೂ ನೂಕು ನುಗ್ಗಲು ಇರುತ್ತಿರಲಿಲ್ಲ. ಇನ್ನು ಮಾಲ್‌ಗಳಲ್ಲಿ , ಅಥವಾ ಸ್ಟೇಷನ್‌ಗಳಲ್ಲಿ ಎಕ್ಸಲೇಟರ್‌ಗಳನ್ನು ಬಳಸುವಾಗ ಒಂದು ರೂಲ್ ಮಾಡಿಕೊಂಡಿದ್ದಾರೆ. ನಿಧಾನವಾಗಿ ಹೋಗುವವರು ಬಲಕ್ಕೇ ನಿಲ್ಲಬೇಕು, ಎಡಭಾಗ ಏನಿದ್ದರೂ ಅವಸರ ಇರುವವರಿಗೆ ಮೀಸಲು, ಅವರು ಮೆಟ್ಟಿಲನ್ನು ಹತ್ತುತ್ತಾ ಬೇಗ ಸಾಗುತ್ತಾರೆ. ಹಾಗಾಗಿ ಎಷ್ಟೇ ಜನರಿದ್ದರೂ ಎಡಭಾಗ ಖಾಲಿ ಬಿಡಬೇಕು.

ಜಪಾನಿನ ಟ್ರಾಫಿಕ್ ರೂಲ್ಸ್ ಬಗ್ಗೆ ಹೇಳದೆ ಇರಲು ಸಾಧ್ಯವೇ ಇಲ್ಲ. ನಿಗದಿಗಿಂತ ಒಂದಿಷ್ಟೂ ವೇಗವಾಗಿ ಚಲಿಸದೆ, ಎಲ್ಲಿಯೂ ಲೈನ್ ಬ್ರೇಕ್ ಮಾಡದ ವಾಹನಗಳು, ಜನರು ಇರಲಿ, ಇಲ್ಲದಿರಲಿ ಕೆಂಪು ದೀಪಕ್ಕೆ ಅಷ್ಟೇ ಮರ್ಯಾದೆ ಕೊಟ್ಟು ನಿಲ್ಲಿಸುವ ಚಾಲಕರು, ಪಾದಚಾರಿಗಳನ್ನು ಕಂಡರೆ ಅದೆಷ್ಟೋ ದೂರದಿಂದಲೇ ನಿಲ್ಲಿಸಿ, ಅವರಿಗೆ ಹಾದು ಹೋಗಲು ಅನುಕೂಲ ಮಾಡಿಕೊಡುವ ಪದ್ಧತಿ. ಎಲ್ಲಕ್ಕಿಂತ ಹೆಚ್ಚಾಗಿ ದೊಡ್ಡ ದೊಡ್ಡ ಸಿಗ್ನಲ್‌ಗಳನ್ನು ಪುಟ್ಟ ಕೈ ಮೇಲಿತ್ತಿಕೊಂಡು ಆರಾಮವಾಗಿ ದಾಟುವ ಪುಟ್ಟ ಮಕ್ಕಳನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವೆನಿಸುತ್ತಿತ್ತು.
ಅಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ಎಷ್ಟು ಸರಾಗವಾಗಿ ಕೆಲಸ ಮಾಡುತ್ತವೆ ಅನ್ನುವುದಕ್ಕೆ ಮತ್ತೊಂದು ಉದಾಹರಣೆ ʼಶಿಬೂಯಾ ಕ್ರಾಸಿಂಗ್ʼ. ʼಹಚಿಗೂ ಡಾಗ್ʼನ ನೆನಪಿಗಾಗಿ, ಅದರ ವಿಗ್ರಹವಿರುವ ಈ ಸಿಗ್ನಲ್ನಲ್ಲಿ ಎಂಟಕ್ಕಿಂತ ಹೆಚ್ಚು ದಾರಿಗಳು ಸೇರುತ್ತವೆ. ಕೆಲವೇ ಸೆಕೆಂಡುಗಳಲ್ಲಿ ಎರಡರಿಂದ ಮೂರು ಸಾವಿರ ಜನ ಮ್ಯಾಜಿಕ್‌ನಂತೆ ಕ್ರಾಸ್ ಮಾಡುವ ಈ ಸಿಗ್ನಲ್, ಜಪಾನ್‌ನ ಜನರ ಶಿಸ್ತಿಗೆ ಸಾಕ್ಷಿಯಂತಿದೆ. ಅದನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.
ಇಡೀ ಜಪಾನ್‌ನಲ್ಲಿ ಸಾಮಾನ್ಯವಾಗಿ ಎಲ್ಲೆಡೆ ಕಣ್ಣಿಗೆ ಕಾಣುವುದು ಕಪ್ಪು, ಬಿಳಿ, ಕಂದು ಬಣ್ಣಗಳು ಮಾತ್ರ. ಟ್ಯಾಕ್ಸಿ ಡ್ರೈವರ್‌ನಿಂದ ಹಿಡಿದು ಎಲ್ಲರೂ ಹೆಚ್ಚಾಗಿ ಸೂಟ್‌ಗಳಲ್ಲೇ ಇರುತ್ತಾರೆ. ಹೆಣ್ಣು ಮಕ್ಕಳೂ ಸೇರಿದಂತೆ ಕೆಂಪು, ಹಳದಿ, ಪಿಂಕ್, ನೀಲಿಯಂಥ ಗಾಢವಾದ ಬಣ್ಣಗಳ ಬಟ್ಟೆ ಸಾಮಾನ್ಯವಾಗಿ ಯಾರೂ ತೊಡುವುದಿಲ್ಲ. ಹಾಗೆ ಬಣ್ಣ ಬಣ್ಣದ ಬಟ್ಟೆಗಳು ಕಂಡಿದ್ದು ಡಿಸ್ನಿಲ್ಯಾಂಡ್‌ನಲ್ಲಿ ಮತ್ತು ಅಂಥ ವಿರಾಮಕ್ಕೆಂದೇ ಮೀಸಲಾದ ಜಾಗಗಳಲ್ಲಿ ಮಾತ್ರ. ದಿನನಿತ್ಯ ಗಂಡಸರು ನೀಟ್ ಆಗಿ ಡ್ರೆಸ್ ಆಗಿದ್ದರೆ, ಅಂತದ್ದೇ ಫಾರ್ಮಲ್ಸ್ ತೊಟ್ಟ ಹೆಂಗಸರು, ಮೇಕಪ್ ಇಲ್ಲದೆ ಹೊರಬರುವುದೇ ಕಡಿಮೆ. ಜಪಾನ್‌ನಲ್ಲಿ ಸರಾಸರಿ ಮನುಷ್ಯನ ಆಯಸ್ಸು ಹೆಚ್ಚು ಇರುವುದರಿಂದಲೇನೋ, ಕೋಲು ಹಿಡಿದರೂ ಶಿಸ್ತಾಗಿ ಡ್ರೆಸ್ ಮಾಡಿಕೊಂಡು ತಿರುಗಾಡುವ ವಯಸ್ಸಾದವರು ಹೆಚ್ಚಾಗಿ ಕಾಣಸಿಗುತ್ತಾರೆ.
ಭಾಷಾಭಿಮಾನ
ಎಲ್ಲಕ್ಕಿಂತ ಬಹು ಮುಖ್ಯವಾಗಿ, ವಯಕ್ತಿಕವಾಗಿ ತುಂಬಾ ಖುಷಿ ಕೊಟ್ಟ ಸಂಗತಿಯೆಂದರೆ, ಜಪಾನಿಗರ ʼಮಾತೃ ಭಾಷಾ ಪ್ರೇಮʼ. ಎಲ್ಲಾ ಕಡೆಯೂ ಜಪಾನ್ ಭಾಷೆಯೇ ಮೊದಲು. ಅನಿವಾರ್ಯ ಎಂದ ಕಡೆ ಮಾತ್ರ ಕೆಲವೊಬ್ಬರು ಇಂಗ್ಲೀಷ್ ಮಾತನಾಡುತ್ತಾರೆ, ಎನ್ನುವುದು ಬಿಟ್ಟರೆ ಕೇವಲ ಇಂಗ್ಲೀಷ್ ಎಲ್ಲಿಯೂ ನಡೆಯುವುದಿಲ್ಲ. ಮತ್ತು ಅವರು ʼನೋ ಏಯಿಗೋʼ (ಇಂಗ್ಲಿಷ್ ಬರುವುದಿಲ್ಲ) ಅಂತ ರಾಜಾರೋಷವಾಗಿ ಕೈ ಆಡಿಸುತ್ತಾ ಬಹಳ ಗತ್ತಿನಲ್ಲೇ ಹೇಳುವುದು ಕಂಡರೆ ಅವರ ಬಗ್ಗೆ ಹೆಮ್ಮೆ ಎನಿಸುತ್ತದೆ. ಇಂಗ್ಲೀಷ್ ಬರದಿದ್ದರೆ ಅವಮಾನವೆಂಬಂತೆ ಕಾಣುವಂಥ ಭಾರತೀಯರು, ಅವರನ್ನು ನೋಡಿ ನಾಚಬೇಕು. ಹಾಗಂತ ಬೇರೆ ಭಾಷೆಯವರನ್ನು ಕೀಳಾಗಿ ಕಾಣುವುದಿಲ್ಲ. ಅನಿವಾರ್ಯ ಇದ್ದವರು ಒಂದು ಟ್ರಾನ್ಸ್ಲೇಷನ್ ಮಷಿನ್ ಇಟ್ಟುಕೊಂಡು ಪ್ರವಾಸಿಗರಿಗೆ ಸಹಕರಿಸುತ್ತಾರೆ. ತಮ್ಮ ಭಾಷೆ ಮೊದಲು ಎನ್ನುವುದನ್ನು ಸ್ವಾಭಿಮಾನದಿಂದ ಪ್ರತಿಪಾದಿಸುತ್ತಾರೆ. ಕಳ್ಳತನ, ದರೋಡೆ, ಎಲ್ಲಾ ಅಲ್ಲಿ ತೀರಾ ಅಪರೂಪ. ಪೊಲೀಸ್‌ಗಳಿಗೆ ಕೆಲಸವೇ ಕಡಿಮೆ. ಅದಕ್ಕೆ ಸಾಕ್ಷಿಯಾದ ಒಂದು ಘಟನೆ ನಡೆಯಿತು. ನನ್ನ ಮಗಳು ಬಸ್‌ನಲ್ಲೇ ಮರೆತು ಬಂದಿದ್ದ ಪರ್ಸ್ ಬಗ್ಗೆ ಬಸ್ ಡಿಪೋನಲ್ಲಿ ಹೋಗಿ ತಿಳಿಸಿದಾಗ ಯಾವ ಬಸ್? ಸಮಯ ಎಷ್ಟು ಎಲ್ಲಾ ತಿಳಿದುಕೊಂಡು ಮರುದಿನವೇ ಪರ್ಸ್ ಹಿಂದೆಕೊಟ್ಟ ಅಲ್ಲಿನ ಬಸ್ ಡಿಪಾರ್ಟ್ಮೆಂಟ್ ನ ಕಾರ್ಯವೈಖರಿಯ ಬಗ್ಗೆ ಎಷ್ಟು ಹೇಳಿದರೂ ಸಾಲದು.

ನಾನ್ ʼವೆಜ್ʼ
ಮೊದಲ ದಿನ ಮನೆಯಲ್ಲಿ ತಿಂಡಿ ತಿಂದು ದೂರದ ಒಂದು ಹಿಲ್ ಸ್ಟೇಷನ್ ಗೆ ಹೋಗಿದ್ದೆವು. ಮಧ್ಯಾಹ್ನ ಊಟದ ಹೊತ್ತು. ವೈಟರ್ ನನ್ನು ಕರೆದು ಪಾಸ್ತ ಆರ್ಡರ್ ಮಾಡಿ, ನನ್ನ ತಮ್ಮ ಹೇಳಿಕೊಟ್ಟ ಜಪಾನ್ ಭಾಷೆಯಲ್ಲಿ ʼನೋ ಟೊಮ್ಯಾಗೋʼ (ಮೊಟ್ಟೆ ಬೇಡ), ನೋ ಚಿಕನ್ ಅಂತ ಹೇಳಿದ್ದೆವು. ಓಕೆ ಎಂದ ಅವನು ಬಿಳಿಯ ಬಣ್ಣದ ಪಾಸ್ತ ತಂದಿಟ್ಟಿದ್ದನು. ನನಗೆ ಏಕೋ ತಿನ್ನಲು ಧೈರ್ಯ ಬಾರದೆ ಬೇಡವೆಂದೆ. ತಿನ್ನಲು ಬಾಯಿಗಿಟ್ಟ ನನ್ನ ಮಗಳು, ಭಯದಿಂದ ʼಪಪ್ಪಾ ಪಪ್ಪಾ ಕಣ್ಣುʼ ಅಂದಾಗ, ಅದಾಗಲೇ ಒಂದು ಸ್ಪೂನ್ ತಿಂದಾಗಿದ್ದ ನನ್ನ ಗಂಡ ನೋಡಿದರೆ, ಪಿಳಿ ಪಿಳಿ ಕಣ್ಣುಗಳಿದ್ದ ಚಿಕ್ಕ ಚಿಕ್ಕ ಹಸಿ ಮೀನುಗಳನ್ನು ಹಾಕಿದ್ದರು. ನಾವು ಬರೀ ಮೊಟ್ಟೆ, ಚಿಕನ್ ಬೇಡ ಎಂದಿದ್ದೆವು, ಮೀನು ಬೇಡ ಎಂದು ಹೇಳಿರಲಿಲ್ಲವಲ್ಲ. ಅವರಿಗೆ, ವೆಜ್, ನಾನ್ ವೆಜ್‌ಗಳ ಕಾನ್ಸೆಪ್ಟೇ ಗೊತ್ತಿರಲಿಲ್ಲ. ಹೆಚ್ಚಾಗಿ ಎಲ್ಲವೂ ಹಸಿ ಹಸಿಯಾಗೇ ಬಳುಸುವ ಅಲ್ಲಿ ನಾನ್ ವೆಜ್ ತಿನ್ನುವ ನನ್ನ ಮನೆಯವರಿಗೇ ಊಟ ಕಷ್ಟವೆನಿಸಿತ್ತು.ಇನ್ನೂ ನನ್ನಂತಹ ಸಸ್ಯಹಾರಿಗಳಿಗೆ ಹೊಟೆಲ್ ಗಳಲ್ಲಿ ಊಟ ಕಷ್ಟವೇ. ಮರುದಿನದಿಂದ ಬೆಳಗ್ಗೆ ಬೇಗ ತಿಂಡಿ ತಿಂದು, ಮಧ್ಯಾಹ್ನಕ್ಕೆ ಡಬ್ಬಿ ಕಟ್ಟಿಕೊಂಡು, ರಾತ್ರಿ ಎಷ್ಟು ಹೊತ್ತಾದರೂ ಮನೆಗೆ ಬಂದು ಊಟ ಮಾಡುವ ಅಭ್ಯಾಸ ಮಾಡಿಕೊಂಡೆವು. ಒಂದು ಆರೆಂಜ್ ಜ್ಯೂಸು ಐನೂರು ರುಪಾಯಿ, ಒಂದು ಕಾಫಿ ಮುನ್ನೂರು ರುಪಾಯಿ, ಹತ್ತು ಹಸಿಮೆಣಸಿನಕಾಯಿ ಇನ್ನೂರೈವತ್ತು ರುಪಾಯಿ, ಒಂದು ತೆಂಗಿನಕಾಯಿ ನಾನೂರು ರೂಪಾಯಿ ಹೊರಡುವಾಗ ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ದುಬಾರಿ ಎನಿಸಿದ್ದ ಕಾಫಿ ಅಲ್ಲಿಂದ ವಾಪಸ್ ಬರುವಾಗ ತುಂಬಾ ಕಡಿಮೆ ಎನಿಸಿತ್ತು. ಹೀಗೆ ಬುತ್ತಿ ಕಟ್ಟಿಕೊಂಡು ತಿರುಗಾಡಿದ ಜಪಾನ್ ನಿಜಕ್ಕೂ ಒಂದು ಅದ್ಭುತ ಲೋಕವನ್ನೇ ಕಾಣಿಸಿತ್ತು.
ಅಪಾರ್ಟ್ಮೆಂಟ್ ನ 26 ನೇ ಮಹಡಿಯ ಕಿಟಕಿಯಿಂದ ನೋಡಿದರೆ, ಹಾರಾಡುವ ವಿಮಾನಗಳು, ನೀರಲ್ಲಿ ತೇಲುವ ಹಡಗುಗಳು, ಐದಾರು ರೀತಿಯ ರೈಲು ಮಾರ್ಗಗಳು, ಮೇಲಿಂದ ನೋಡುವಾಗ ಪುಟ್ಟ ಆಟದ ಸಾಮಾನುಗಳಂತೆ ಲಯಬದ್ದವಾಗಿ ಚಲಿಸುವ ವಾಹನಗಳು, ಎಲ್ಲಾ ಬಗೆಯ ಸಾರಿಗೆಯನ್ನೂ ಒಟ್ಟಾಗಿ ಕಾಣಬಹುದಾಗಿತ್ತು. ಕಾಫಿ ಹೀರುತ್ತಾ ಅವುಗಳನ್ನು ನೋಡುತ್ತಾ ಕುಳಿತರೆ, ಬೇರೊಂದು ಲೋಕವೇ ಸೃಷ್ಠಿಯಾಗುತ್ತಿತ್ತು.. ಇನ್ನೊಂದು ಬದಿಯ ಕಿಟಕಿಯಲ್ಲಿ ಟೋಕಿಯೋ ಟವರ್ ಕಾಣುತ್ತಿತ್ತು. ಹತ್ತಿರದಲ್ಲಿಯೇ ಇದ್ದ ಟೋಕಿಯೋ ಟವರ್ ಗೆ ನಡೆದುಕೊಂಡೇ ಆಗಾಗ ಭೇಟಿ ನೀಡುತ್ತಾ, ಮಾರ್ಗ ಮಧ್ಯ ಸಿಗುವ ʼಶಿಬು ಕೊಯೆನ್ʼ ಎಂಬಾ ಪಾರ್ಕ್ ಹಾಗೂ ಒಂದು ಶೈನ್ ಅಂದರೆ, ಅವರ ದೇವಾಲಯವನ್ನು ನೋಡುತ್ತಿದ್ದೆವು.. ಉಳಿದ ಇಪ್ಪತ್ಮೂರು ದಿನದಲ್ಲಿ ಭಾರತದಿಂದಲೇ ಮಾಡಿಸಿಕೊಂಡು ತಂದಿದ್ದ ರೈಲು ಪಾಸ್ (ಪ್ರವಾಸಿಗರಿಗೆ ಕಡಿಮೆ ದರದಲ್ಲಿ ಕೊಡುವ ಪಾಸ್) ಹಿಡಿದು ಒಂದು ದಿನವೂ ಬಿಡದೆ ಜಪಾನ್ ಸುತ್ತಾಡಿದೆವು.
ಕಾರ್ಟೂನ್ ನಗರಿ
ಬಣ್ಣ ಬಣ್ಣದ ವೇಷತೊಟ್ಟ, ನಾವು ಕಾರ್ಟೂನ್ ಗಳಲ್ಲಿ ಕಂಡ ಪಾತ್ರದಾರಿಗಳೆಲ್ಲಾ ಕಣ್ಣ ಮುಂದೆ ಬಂದ ಡಿಸ್ನಿ ವರ್ಲ್ಡ್ ಎಂಬ ಮಾಯಾಲೋಕ,ಅಕ್ಷರಶಃ ಮಾಯಾಲೋಕಕ್ಕೇ ಕರದೊಯ್ದರೆ, ಮೂರು ಗಂಟೆಗಳಲ್ಲಿ ಸಾವಿರ ಕಿಲೋಮೀಟರ್ ವೇಗದಲ್ಲಿ ಓಡುವ ಬುಲೆಟ್ ಟ್ರೈನ್‌ನಲ್ಲಿ ಕುಳಿತು ಹೋಗಿದ್ದ ʼಹಿರೋಷಿಮಾʼ ಮತ್ತು ಅಲ್ಲಿದ್ದ ಮ್ಯೂಸಿಯಮ್ ನೋಡಿ, ಬಾಂಬ್ ಪ್ರಕರಣಗಳು ಕಣ್ಣಮುಂದೆಯೇ ಬಂದು ನಮ್ಮನ್ನು ಕ್ಷಣಕಾಲ ಅಲುಗಾಡಿಸಿತ್ತು. ಹಿರೋಷಿಮಾದಿಂದ ಹಡಗಿನಲ್ಲಿ ಕ್ರಾಸ್ ಮಾಡಿ ಹೋಗಿದ್ದ ʼಮಿಯಾಜ಼ಿಮಾʼ ಎಂಬ ಪುಟ್ಟ ದ್ವೀಪ , ಅಲ್ಲಿ ನಮ್ಮ ಮಧ್ಯೆಯೇ ಓಡಾಡಿಕೊಂಡಿದ್ದ ಜಿಂಕೆಗಳು ಪ್ರೀತಿ ಉಕ್ಕಿಸುವಂತಿದ್ದರೆ. ದಾರಿಗಳಲ್ಲಿ ನೇತಾಡುತ್ತಿದ್ದ ಆಕ್ಟೊಪಸ್ ನ ತಿಂಡಿಗಳು ಭಯ ಹುಟ್ಟಿಸುತ್ತಿದ್ದವು. ನಡುಗುವ ಚಳಿಯಲ್ಲಿ ಎರಡು ದಿನ ಕಳೆದ ದ್ವೀಪ ಎಂದೋ ನೋಡಿದ್ದ ಯಾವುದೋ ಸಿನಿಮಾದ ಒಳಗೆ ಒಮ್ಮೆ ಹೋಗಿ ಬಂದಂತ ಅನುಭವ ನೀಡಿತ್ತು. ಅಂಥದ್ದೇ ಹೇಳಲೇ ಬೇಕಾದ ಮತ್ತೊಂದು ವಿಶೇಷ ಅನುಭವವೆಂದರೆ ʼಆನ್ ಸೆನ್ʼ ಎನ್ನುವ ಬಿಸಿನೀರಿನ ಬುಗ್ಗೆಗಳ ವಾಟರ್ ಪಾರ್ಕ್‌ನ ಬಗ್ಗೆ. ಅಲ್ಲಿಗೆ ತಲುಪಿದಾಗ ಮೊದಲು ಪೂರಾ ಮೈ ಮುಚ್ಚುವ ಜಪಾನಿಗರ ಉಡುಗೆಗಳನ್ನು ತೊಟ್ಟು, ಪೋಸ್ ಕೊಡುತ್ತಾ ಫೋಟೋಸ್ ತೆಗೆಸಿಕೊಂಡು, ಇನ್ನೇನು ಒಳಗೆ ಹೋಗಬೇಕೆನ್ನುವಾಗ ಗಾಬರಿಯಾಗಿತ್ತು. ಒಳಗೆ ಹೋಗಬೇಕೆಂದರೆ ಎಲ್ಲರೂ ಬಟ್ಟೆಗಳನ್ನು ಕಳಚಿಯೇ ಹೋಗಬೇಕು. ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕ ಕೊಳಗಳಿವೆ.
ಅಲ್ಲಿ ಹೋಗಿ ತೊಟ್ಟದ್ದನ್ನೆಲ್ಲಾ ಕಳಚಿ, ನಮ್ಮ ಹಾಗೆ ನಾಚಿಕೊಳ್ಳುವವರಿಗೆ ಮಾತ್ರ ಅವರೇ ಕೊಡುವ ತುಂಡು ಬಟ್ಟೆ ಹಿಡಿದು ,ವಿಷ್ಣುವರ್ಧನ್ ಹಾಡು (ತುಂಡು ಬಟ್ಟೆ ಸಾಕು ನನ್ನ ಮಾನಮುಚ್ಚೋಕೆ) ನೆನಪಿಸಿಕೊಳ್ಳುತ್ತಾ, ಮುಂದೆ ಮುಚ್ಚಲೋ ಹಿಂದೆ ಮುಚ್ಚಲೋ ಎಂದು ಒದ್ದಾಡುತ್ತಿದ್ದರೆ, ಅಲ್ಲಿಯ ಹೆಣ್ಣು ಮಕ್ಕಳು ಸಣ್ಣಮಕ್ಕಳಂತೆ ಒಂದಿಷ್ಟೂ ಅಳುಕಿಲ್ಲದೆ ಓಡಾಡುತ್ತಿದ್ದುದನ್ನು ಕಂಡು ನಾವೆಲ್ಲಾ ನಾಚಿಕೆಯಿಂದ ದರ್ಯೋಧನನಂತೆ ನೀರಿನ ಕೊಳದಲ್ಲೇ ಅಡಗಿ ಕುಳಿತಿದ್ದೆವು. ಆದರೂ ʼಆನ್ ಸೆನ್ʼ ಕೊಳಕ್ಕೆ ಹೋಗಲು ಗಟ್ಟಿ ಗುಂಡಿಗೆ ಬೇಕಪ್ಪಾ.
ನಾಟಕದ ಎಂ ಎ ಮಾಡುವಾಗ ಎರಡನೇ ಸೆಮಿಸ್ಟರ್ ನಲ್ಲಿ ಓದಿದ್ದ ಜಪಾನ್ ನ ನಾಟಕ ಪ್ರಕಾರಗಳಲ್ಲಿ ಒಂದಾದ ʼಕಬೂಕಿʼಗೆ ತಪ್ಪದೆ ಹೋಗಿ ನೋಡಿದ್ದು ಡ್ರೀಂ ಕಮ್ ಟ್ರೂ ಆಗಿತ್ತು. ಸುಧೀಂದ್ರ ಶರ್ಮ ಸರ್ ಪಾಠ ಮಾಡಿದ್ದ ʼಹನಾಮಿಚಿʼ, ʼಪೈನ್ ಟ್ರೀʼ ಮುಂತಾದ, ಓದಿದ್ದು, ಕೇಳಿದ್ದೆಲ್ಲವನ್ನೂ ಕಣ್ಣ ಮುಂದೆ ನೋಡುತ್ತಾ, ನನ್ನ ಗಂಡನಿಗೆ ಪಾಠ ಮಾಡಲು ಶುರುಮಾಡಿದ್ದೆ. ದೊಡ್ಡದೊಂದು ಫಿಷ್ ಅಕ್ವೇರಿಯಮ್ ನಲ್ಲಿ ನಲಿದಾಡುವ ಡಾಲ್ಫಿನ್ ಗಳು, ಅವುಗಳನ್ನು ಆಡಿಸುವ ಹುಡುಗಿಯರು.ಅಬ್ಬಾ ಎಂಥ ಪರಿಣಿತರು. ಆ ಬೆರಗುಗಳನ್ನು ನೋಡುವಾಗ ನಿಜವೇ ಎಂದು ಕೈ ಚಿವುಟಿಕೊಂಡಿದ್ದೆ.

ತಲೆಕೆಳಗಾದ ಬುದ್ಧ
ಹೆಸರು ನೆನಪಿಲ್ಲದ ಎರಡು ಮೂರು ಹಿಲ್ ಸ್ಟೇಷನ್ ಗಳಿಗೆ ನಡುಗುವ ಚಳಿಯಲ್ಲಿ ಹೋಗಿದ್ದು ಅದ್ಭುತವಾದ ಅನುಭವ ನೀಡಿದ್ದವು. ಇನ್ನು ಜಪಾನ್ ಗೆ ಹೋಗಿ ಹಳೆಯ ರಾಜಧಾನಿ "ಕ್ಯೋತೋ" ನೋಡದಿದ್ದರೆ ಹೇಗೆ? ಹಲವಾರು ಕಥೆ ಹೇಳುವ "ಕ್ಯೋತೋ" ನಗರ ಏನೋ, ಹಿಂದೆ ಒಂದಷ್ಟು ಮೆರೆದು ಅಧಿಕಾರ ಕಳೆದುಕೊಂಡ ರಾಜನಂತೆ ಕಾಣುತ್ತಿತ್ತು. ಜಪಾನ್‌ಗೆ ಹೋಗಿ ಮಿಸ್ ಮಾಡದೆ ನೋಡಲೇಬೇಕಾದ ಜಾಗವೆಂದರೆ, ತಲೆಕೆಳಗೆ ಮಾಡಿ ಸೌಮ್ಯನಾಗಿ ಕುಳಿತಿರುವ ʼಕಾಮಾಕುರʼದ ಬುದ್ಧ.
ನಾವು ಹೊರಟ ಆ ಸಮಯ ʼಚೆರ್ರಿ ಬ್ಲಾಸಮ್ʼ ಸಮಯವಾದ್ದರಿಂದ ಇಡೀ ಟೋಕಿಯೋ ನಗರವೇ ನಮಗೆ, ಬಣ್ಣ ಬಣ್ಣದ ಹೂಗಳಿಂದ ಸ್ವಾಗತ ಕೋರುತ್ತಿರುವಂತಿತ್ತು. ಜಪಾನಿಗರ ಶಿಸ್ತು ಎಷ್ಟೆಂದರೆ ಗಿಡಮರಗಳನ್ನೂ ಕೂಡಾ, ಹೇಗೆಂದರೆ ಹಾಗೆ ಬೆಳೆಯಲು ಬಿಡುವುದಿಲ್ಲ. ಹಾಗಾಗಿ ಕ್ರಮವಾಗಿ ಕತ್ತರಿಸಿ ವಿವಿಧ ಆಕಾರಗಳಲ್ಲಿ ಬೆಳೆದ ಮರಗಳು, ನಾವು ಮಕ್ಕಳಿದ್ದಾಗ ಆಟ ಅಡುವಂತಿದ್ದ , ಜಪಾನಿಗರ ಹಾಗೇ ಇದ್ದ ಅವರ ಪುಟ್ಟ ಪುಟ್ಟ ಮನೆಗಳು, ಏರು ತಗ್ಗುಗಳಿಂದ ಕೂಡಿದ ರಸ್ತೆಗಳು. ತಾವಾಯಿತು ತಮ್ಮ ಜೀವನವಾಯಿತು ಎಂಬಂತೆ ತಮ್ಮದೇ ಲೋಕದಲ್ಲಿ ಓಡಾಡುವ ಸ್ಥಳೀಯರು. ವಿವಿಧ ತಳಿಯ ನಾಯಿಗಳು ಹಾಗೂ ಅವು ಗಲೀಜು ಮಾಡಿದರೆ ತೆಗೆದುಕೊಂಡು ಹೋಗಲು ಗ್ಲೌಸ್ ಮತ್ತು ವಾಟರ್ ಸ್ಪ್ರೇ ಗಳನ್ನು ಹೊತ್ತ ನಾಯಿಗಳ ವಾರಸುದಾರರು.ಎಲ್ಲವೂ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿವೆ.
ಬೆಳಗ್ಗೆ ಸೂಟು ಬೂಟು ಹಾಕಿಕೊಂಡು ಸರ ಸರ ಎಂದು ರೈಲು, ಬಸ್ಸು ಹತ್ತಿ, ಇಳಿದು, ಬ್ಯಾಗ್ ಗಳನ್ನು ಹಿಡಿದು ನಡೆದುಕೊಂಡು ಕೆಲಸಕ್ಕೆ ಹೋಗುವ ಜಪಾನಿಗರನ್ನು ಕಂಡಾಗ ಕುವೆಂಪು ಅವರ ಸಾಲುಗಳು ನೆನಪಾಗುತ್ತದೆ.ʼಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆʼ.
ಲೇಖಕರು: ಚಲನಚಿತ್ರ ನಿರ್ದೇಶಕಿ