ಸಮುದ್ರದ ನಡುವೆ ನಿಂತ ವಿವೇಕಾನಂದ ದೀಪ
ವಿವೇಕಾನಂದರು ಶಿಕಾಗೋಗೆ ಹೋಗುವ ಮುನ್ನ ಇಲ್ಲಿ ಬಂದು ಎರಡು ದಿನ ತಂಗಿದ್ದರು. ಆಗ ದೇವಿಯು ಅವರನ್ನು ಹರಸಿದಳಂತೆ. ಅಲ್ಲಿಂದ ಆಚೆಗೆ ಬಂದು, ಮಂದಿರದ ಸುತ್ತಲೂ ಪ್ರದಕ್ಷಿಣೆ ಬರುವಾಗ, ಸುತ್ತಲೂ ಸಮುದ್ರ, ಮಧ್ಯೆ ದ್ವೀಪದಂತಿರುವ ಬಂಡೆ! ದೂರದಲ್ಲಿ ತಿರುವಳ್ಳವರ್ ಪ್ರತಿಮೆ! ಕೆಳಗೆ ಬಾಗಿ ನೋಡಿದರೆ, ಬಂಡೆಗೆ ಅಪ್ಪಳಿಸುವ ಸಮುದ್ರದ ಅಲೆಗಳು ಜಯಘೋಷದಿಂದ ಆ ಯೋಗಿಯ ಚರಣಗಳನ್ನು ತೊಳೆಯಲು ಓಡೋಡಿ ಬರುವಂತೆ ಭಾಸವಾಯಿತು.
- ಶೋಭಾ ಪುರೋಹಿತ್
ʼಭಾರತ ಭೂಶಿರ ಮಂದಿರ ಸುಂದರಿʼ ಅಂತ ಉಪಾಸನೆಯಲ್ಲಿ ಆರತಿಯ ಹಾಡು ಕೇಳುವಾಗ, ಮತ್ತು ಅಂತ್ಯದಲ್ಲಿ ಸಂಸಾರದಲ್ಲಿ ಜುಗುಪ್ಸೆ ಹೊಂದಿ, ಎಲ್ಲರಿಂದ ದೂರಾಗಿ ಸ್ವಾಮಿ ವಿವೇಕಾನಂದರ ಮಂಟಪದ ಮೆಟ್ಟಿಲೇರಿ ಹೋಗುವ ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅಂದಿನಿಂದ ಒಮ್ಮೆ ಕನ್ಯಾಕುಮಾರಿಗೆ ಭೇಟಿ ಕೊಡುವ ಮನಸಿತ್ತು.
ಬೆಂಗಳೂರಿನಿಂದ ಬಾಡಿಗೆ ಟ್ಯಾಕ್ಸಿಯಲ್ಲಿ ದ. ಭಾರತದ ಪ್ರವಾಸ ಕೈಗೊಂಡೆವು. ರಾಮೇಶ್ವರಂನಿಂದ ಹೊರಟು ಕನ್ಯಾಕುಮಾರಿ ಸೇರಿದಾಗ ಆಗಲೇ ಸಂಜೆಯಾಗಿತ್ತು. ಮೊದಲೇ ಕಾಯ್ದಿರಿಸಿದ ರೂಮಿಗೆ ಹೋಗಿ ವಿಶ್ರಾಂತಿ ಪಡೆದು, ಊಟ ಮುಗಿಸಿ ಮಲಗಿದೆವು. ನೇರವಾಗಿ ಕನ್ಯಾಕುಮಾರಿಗೆ ಹೋಗಲು ಬಸ್ಸು , ಟ್ರೇನ್ ವಿಮಾನ ಎಲ್ಲ ರೀತಿಯ ಅನುಕೂಲಗಳಿವೆ. ಒಳ್ಳೆಯ ಹೊಟೇಲ್‌ಗಳಿವೆ.
ಇದನ್ನೂ ಓದಿ: ವಾರಾಣಸಿಯ ವರ್ಚುವಲ್ ದರ್ಶನ
ದಕ್ಷಿಣದಲ್ಲಿ ಸೂರ್ಯೋದಯ
ಬೆಳಗ್ಗೆ ಎದ್ದು ಸನ್‌ರೈಸ್ ಪಾಯಿಂಟಿಗೆ ಹೋಗಿ ಸಾಗರದಿಂದ ಮೇಲೇರುವ ಸೂರ್ಯೋದಯದ ದೃಶ್ಯವನ್ನು ಕಣ್ತುಂಬಿಕೊಂಡೆವು. ಕೋಣೆಗೆ ಬಂದು ಸ್ನಾನ ತಿಂಡಿ ಮುಗಿಸಿ ಕನ್ಯಾಕುಮಾರಿ ದೇವಸ್ಥಾನ ಮತ್ತು ವಿವೇಕಾನಂದ ರಾಕ್ ನೋಡಲು ಹೊರಟೆವು. ಮೊದಲು ದೇವಿ ದರ್ಶನ ಮಾಡಿಕೊಂಡು ಬರೋಣ ಅಂತ ಹೊರಟೆವು. ಈ ದೇವಿಯ ಮೂಗಿನ ಮೂಗು ಬೊಟ್ಟು ಮತ್ತು ಹಣೆಯ ತಿಲಕ ಫಳಫಳ ಹೊಳೆಯುತ್ತಿತ್ತು. ಹಿಂದೆ ದೇವಿಯ ಮೂಗಿನಲ್ಲಿದ್ದ ವಜ್ರದ ಮೂಗುತಿ ಅಪಾರ ಹೊಳಪಿನಿಂದ ಕೂಡಿದ್ದು ದೂರದಿಂದ ಬರುವ ಕಡಲ್ಗಳ್ಳರಿಗೆ, ದಾರಿ ತೋರಿಸುವ ಹಾಗಿತ್ತು. ಹಾಗಾಗಿ ಅದನ್ನು ಈಗ ಬದಲಾಯಿಸಿದ್ದಾರೆ ಅಂತ ಹೇಳುತ್ತಾರೆ. ವಿವೇಕಾನಂದ ಮಂಟಪಕ್ಕೆ ಹೋಗಲು ದೇವಸ್ಥಾನದ ಹತ್ತಿರವೇ ಇದ್ದ ಟಿಕೆಟ್ ಕೌಂಟರ್‌ಗೆ ಬಂದು ನೋಡಿದಾಗ ಉದ್ದ ಕ್ಯೂ ಇತ್ತು. ಇನ್ನೂರು ರುಪಾಯಿಯ ಸಾಲಲ್ಲಿ ಹೋದರೆ ಬೇಗ ಆಗುತ್ತದೆ ಅಂತ ಯಾರೋ ತಿಳಿಸಿದ್ದರಿಂದ, ನಾವು ಆ ಸಾಲಿನಲ್ಲಿ ನಿಂತೆವು. ಅಂಥ ವ್ಯತ್ಯಾಸವೇನೂ ಇರಲಿಲ್ಲ. ಎರಡೂ ಸಾಲುಗಳು ಸಮಾನಾಂತರವಾಗಿ ಮುಂದೆ ಸಾಗುತ್ತಿತ್ತು. ಒಳಗೆ ಹೋಗಿ ದೋಣಿ ಪ್ರಯಾಣದ ಟಿಕೆಟ್ ಪಡೆದು ಸೇತುವೆಯಂಥ ಕಾಲುದಾರಿಯಲ್ಲಿ ನಡೆದು ಬೋಟು ಹೊರಡುವ ಜಾಗಕ್ಕೆ ಬಂದೆವು.

ಕಡಲ ನಡುವೆ
ಸಮುದ್ರದಲ್ಲಿ ಸಾಲಾಗಿ ಲಂಗರು ಹಾಕಿ ನಿಲ್ಲಿಸಿದ ದೋಣಿಗಳ ನೋಟ ರಮ್ಯವಾಗಿತ್ತು. ಅಲ್ಲಿ ನಿಂತು ಈ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುವಾಗ ಮೋಟಾರ್ ಬೋಟೊಂದು ಅಲ್ಲಿಂದ ಯಾತ್ರಿಕರನ್ನು ಹೊತ್ತುಕೊಂಡು ಬಂತು. ಅವರೆಲ್ಲಾ ಇಳಿದು ಲೈಫ್ ಜಾಕೆಟ್‌ಗಳನ್ನು ಕಳಚಿಟ್ಟು ಬಂದ ಮೇಲೆ ನಮಗೆ ಅನುಮತಿ ಸಿಕ್ಕಿತು. ನಾವೂ ಒಂದೊಂದು ಜಾಕೆಟ್ ಹಾಕಿಕೊಂಡು ಕುಳಿತೆವು. ಸುತ್ತಲೂ ನೀರು, ಅನತಿ ದೂರದಲ್ಲಿ ಕಾಣುವ ದೊಡ್ಡ ಬಂಡೆಯ ಮೇಲೆ ವಿವೇಕಾನಂದ ಮಂಟಪ! ಕನಸು ನನಸಾದ ಸಂಭ್ರಮದಿಂದ ಮನ ನವಿಲಂತೆ ನರ್ತಿಸಿತು. ಅಷ್ಟು ದಿನಗಳಿಂದ ಬಯಸಿದ ಸ್ಥಳಕ್ಕೆ ಇನ್ನೇನು ಕೆಲ ನಿಮಿಷಗಳಲ್ಲಿ ಸೇರುತ್ತೇವೆ ಎಂಬ ಸಂತಸದಲ್ಲಿರುವಾಗ, ಲಂಗರು ಸಡಿಲಿಸಿ ನಾವಿಕರು ಬೋಟಿಗೆ ಚಾಲನೆ ನೀಡಿದರು. ಬಂಡೆ ತಲುಪಲು ಕೇವಲ 10-12 ನಿಮಿಷಗಳ ಯಾನ ಇರಬಹುದು. ವಿವೇಕಾನಂದರು ಈಜಿಕೊಂಡೇ ಬಂಡೆ ತಲುಪಿದ್ದರು ಅಂತ ಕೇಳಿದ ನೆನಪು. ಸುತ್ತಲೂ ನೋಡಿ ಆನಂದಿಸುತ್ತಾ ಸಮುದ್ರ ಯಾನದ ಮಜ ಸವಿಯುತ್ತಾ, ಫೊಟೋ, ವಿಡಿಯೋ ಮಾಡುವಾಗ, ಎದುರಿನಿಂದ ಮತ್ತೊಂದು ಬೋಟು ಜನರನ್ನು ಹೊತ್ತು ಬರುತ್ತಿತ್ತು. ನೋಡ ನೋಡುತ್ತ ಬಂಡೆ ಸಿಕ್ಕೇ ಬಿಟ್ಟಿತು. ಒಬ್ಬೊಬ್ಬರಾಗಿ ಇಳಿಯುವಾಗ, ಲಂಗರು ಹಾಕಿದ್ದರೂ, ಬೋಟು ಉಯ್ಯಾಲೆ ಆಡುತ್ತಾ, ಆಯ ತಪ್ಪಿ ಬೀಳುವಂತಾಯಿತು. ಮೇಲೆ ಹೋದಾಗ ವೀಕ್ಷಣೆಗೆ ಬೇರೆ ಟಿಕೆಟ್ ಪಡೆಯಬೇಕು.
ವಿವೇಕಾನಂದರ ಜಾಗ
ಒಂದೊಂದೇ ಮೆಟ್ಟಿಲೇರುತ್ತಾ ಹೋದಾಗ ಅಲ್ಲಿ ಬಲಭಾಗದಲ್ಲಿ ಚಿಕ್ಕ ದೇಗುಲವಿದೆ. ಇದನ್ನು ಶ್ರೀಪಾದ ಮಂಟಪ ಅಂತ ಕರೆಯುತ್ತಾರೆ. ಕನ್ಯಾಕುಮಾರಿಯು ಶಿವನನ್ನು ಕುರಿತು ತಪಸ್ಸು ಮಾಡಿದ ಸ್ಥಳ ಇದು. ಅಲ್ಲಿರುವ ಕಲ್ಲಿನ ಮೇಲಿರುವುದು ಆ ದೇವಿಯ ಹೆಜ್ಜೆ ಗುರುತು ಎಂದು ಹೇಳುತ್ತಾರೆ. ಅದರ ಎದುರಿಗಿರುವುದು ಸ್ವಾಮಿ ವಿವೇಕಾನಂದರ ಮಂಟಪ. ಮಂಟಪಕ್ಕೆ ಹೋಗಲು ಒಂದಷ್ಟು ಮೆಟ್ಟಿಲುಗಳಿವೆ. ಮಂದಿರದ ಒಳಗೆ ಎತ್ತರದ ಮಂಟಪದ ಮಧ್ಯೆ, ವಿಶ್ವಕ್ಕೆಲ್ಲ ಹಿಂದೂ ಧರ್ಮದ ಮಹತ್ವ ಸಾರಿದ ವಿವೇಕಾನಂದರ ಧೀರೋದಾತ್ತ ನಿಲುವಿನ ಚಿನ್ನದ ಲೇಪನದ ಮೂರ್ತಿ ಕಂಡು, ಮನಸು ಆದರ ಅಭಿಮಾನದಿಂದ ತುಂಬಿ ಬಂತು. ಇಂಥ ಅಪ್ರತಿಮ ದೇಶ ಪ್ರೇಮಿಗೆ ದೇವರು ದೀರ್ಘಾಯಸ್ಸು ಕೊಡಲಿಲ್ಲವಲ್ಲಾ ಅಂತ ತುಂಬಾ ಖೇದವಾಯಿತು.
ವಿವೇಕಾನಂದರು ಶಿಕಾಗೋಗೆ ಹೋಗುವ ಮುನ್ನ ಇಲ್ಲಿ ಬಂದು ಎರಡು ದಿನ ತಂಗಿದ್ದರು. ಆಗ ದೇವಿಯು ಅವರನ್ನು ಹರಸಿದಳಂತೆ. ಅಲ್ಲಿಂದ ಆಚೆಗೆ ಬಂದು, ಮಂದಿರದ ಸುತ್ತಲೂ ಪ್ರದಕ್ಷಿಣೆ ಬರುವಾಗ, ಸುತ್ತಲೂ ಸಮುದ್ರ, ಮಧ್ಯೆ ದ್ವೀಪದಂತಿರುವ ಬಂಡೆ! ದೂರದಲ್ಲಿ ತಿರುವಳ್ಳವರ್ ಪ್ರತಿಮೆ! ಕೆಳಗೆ ಬಾಗಿ ನೋಡಿದರೆ, ಬಂಡೆಗೆ ಅಪ್ಪಳಿಸುವ ಸಮುದ್ರದ ಅಲೆಗಳು ಜಯಘೋಷದಿಂದ ಆ ಯೋಗಿಯ ಚರಣಗಳನ್ನು ತೊಳೆಯಲು ಓಡೋಡಿ ಬರುವಂತೆ ಭಾಸವಾಯಿತು.

ಧ್ಯಾನಮಂದಿರ
ಅಲ್ಲಿಂದ ಒಂದು ಹಂತ ಕೆಳಗೆ ಇಳಿದು ಧ್ಯಾನ ಮಂದಿರದಲ್ಲಿ ಇತರ ಯಾತ್ರಿಕರಂತೆ, ಸ್ವಲ್ಪ ಕಾಲ ಮೌನವಾಗಿ ಕುಳಿತು ಹೊರಗೆ ಬಂದೆವು. ಎಷ್ಟು ನೋಡಿದರೂ ಮನ ತಣಿಯದ ಈ ಸ್ಥಳವನ್ನು ಬಿಟ್ಟು ಹೊರಡಲು ಮನಸೇ ಇರಲಿಲ್ಲ. ಸೆಕ್ಯೂರಿಟಿ ವಿಷಲ್ ಹೊಡೆದು ಎಲ್ಲರನ್ನೂ ಕರೆಯುತ್ತಿದ್ದ. ಪುನಃ ಬೋಟಿನಲ್ಲಿ ಪ್ರಯಾಣಿಸಿ ಆಚೆ ದಡ ಸೇರಿದೆವು. ಅಲ್ಲಿಂದ ಹೊರಟು, ಸಂಗಮ ಅಂದರೆ, ಬಂಗಾಳ ಕೊಲ್ಲಿ- ಅರಬ್ಬೀ ಸಮುದ್ರ, ಹಿಂದೂಮಹಾಸಾಗರ, ಸೇರುವ ಸ್ಥಳಕ್ಕೆ ಬಂದೆವು. ಸ್ವಲ್ಪ ಹೊತ್ತು ನೀರಿನಲ್ಲಿ ಆಟವಾಡಿ, ಸೂರ್ಯಾಸ್ತ ನೋಡಲು ಹೊರಟೆವು. ವ್ಯೂ ಪಾಯಿಂಟ್ ಎಂಬ ಐದು ಮಹಡಿಗಳ ಕಟ್ಟಡ ಏರಿ ಟೆರೇಸಿಗೆ ಹೋದೆವು. ಆದರೆ ಬೆಳಗಿನಿಂದ ಮೋಡ ತುಂಬಿದ ವಾತಾವರಣವೇ ಇದ್ದು, ಸೂರ್ಯಾಸ್ತದ ದೃಶ್ಯ ನೋಡಲಾಗಲಿಲ್ಲ. ಆಗಲೇ ಕತ್ತಲೆ ಆಗಿ, ವಿದ್ಯುದ್ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ಊರು, ಕೆಳಗೆ ಅಬ್ಬರಿಸುವ ಸಮುದ್ರ, ದೂರದಲ್ಲಿ, ʼಇನ್ನೊಮ್ಮೆ ನೋಡಿಬಿಡು, ಮತ್ತೆ ಬರುವ ಯೋಗ ಇದೆಯೋ, ಇಲ್ಲವೋ!ʼ ಎಂದು ಹೇಳುವಂತೆ, ಸಮುದ್ರದ ಮಧ್ಯದಲ್ಲಿ ದೀಪದ ಬೆಳಕಿನಲ್ಲಿ ರಾರಾಜಿಸುವ ವಿವೇಕಾನಂದ ರಾಕ್, ಎಲ್ಲವನ್ನೂ ಮೊಬೈಲ್‌ನಲ್ಲಿ ಸೆರೆ ಹಿಡಿದು, ಕೆಳಗಿಳಿದು ಹೊರಟೆವು.
ದಾರಿ ಹೇಗೆ?
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಟ್ರೇನ್ ಅಥವಾ ಕಾರ್‌ನಲ್ಲಿ ಹೋಗಬಹುದು. ಅಲ್ಲಿಂದ ಸಮುದ್ರದ ಮಧ್ಯದಲ್ಲಿರುವ ವಿವೇಕಾನಂದ ರಾಕ್ ನೋಡಲು ಹೋಗಬಹುದು.