Friday, February 13, 2026
Friday, February 13, 2026

ಪ್ರವಾಸಿಯಾಗಿ ಹೋಗಿ ರೈತರಾಗಿ ಬನ್ನಿ!

ನಾನು ಹೇಳಹೊರಟಿರುವ ವಿಷಯ ಮಾತ್ರ ಜಾಲತಾಣದಲ್ಲಿ ಸಿಗುವುದಿಲ್ಲ. ಮೊದಲ ಬಾರಿಗೆ ಪ್ರೀತಿಯಲ್ಲಿ ಬೀಳುವ ಅನುಭವದಂಥದ್ದು. ಯಾವುದೇ ಪೂರ್ವ ಮಾಹಿತಿಯಿಲ್ಲದೆ ಹೆಜ್ಜೆ ಮೇಲೊಂದು ಹೆಜ್ಜೆ ಇಡುತ್ತಾ ಅನುಭವಕ್ಕೆ ಒಳಗಾಗುವ ಸೋಜಿಗ ಒದಗಿಸಿದ್ದು ಜರ್ಮನಿ. ಫ್ರ್ಯಾಂಕ್‍ಫರ್ಟ್ ನ ಬದೆನ್ ಬದೆನ್ ಎನ್ನುವ ಕಪ್ಪುಕಾಡಿನೆಡೆಗೆ ಪಯಣಿಸುತ್ತಿದ್ದೆ. ಸಮೃದ್ಧ ಪ್ರಕೃತಿಯ ಜೊತೆಗೆ ಜನ್ಮಜನ್ಮಗಳ ಸಖ್ಯವೇನೋ ಎನ್ನುವಂತೆ ದೃಷ್ಟಿ ಗುಂಟವೂ ಹರಡಿತ್ತು ಆಸ್ಪರಾಗಸ್ (Asparagus) ಎನ್ನುವ ತರಕಾರಿ ಹೊಲ.

  • ಅಂಜಲಿ ರಾಮಣ್ಣ

ಕೃಷಿ ಮಾಡುವ ಆಸೆ ಇದೆ ಆದರೆ ನಮ್ಮದೇ ಭೂಮಿ ಇಲ್ಲ. ಕೊಂಡುಕೊಳ್ಳಲು ಹೆಚ್ಚಿನ ಆದಾಯವಿಲ್ಲ. ಪ್ರವಾಸ ಮಾಡಲು ಇಷ್ಟ, ಆದರೆ ಸಾಕಷ್ಟು ಹಣವಿಲ್ಲ. ನನ್ನ ಹಣೆಬರಹವೇ ಎಂದುಕೊಂಡು ’ಉಫ್’ ಎಂದು ನಿರಾಸೆಯ ಶ್ವಾಸ ಬಿಡುವ ಬದಲಿಗೆ ‘WWOOF’ ಅಂದುಬಿಡಿ ಎನ್ನುತ್ತಾ ಆಸೆಯ ಉಸಿರು ತುಂಬುತ್ತಿದೆ ಈ ಸಂಘಟನೆ. Worldwide Opportunities on Organic Farms ಎನ್ನುವ ಕೃಷಿಕರ ಗುಂಪೊಂದು 1971ರಿಂದ ಅದೆಷ್ಟೋ ಜನರ ದೇಶ ವಿದೇಶಗಳ ಪ್ರವಾಸವನ್ನು ಉಚಿತವಾಗಿ ಪ್ರಾಯೋಜಿಸುತ್ತಿದೆ. ಆದರೆ ಅದಕ್ಕೆ ಒಂದೇ ಒಂದು ಷರತ್ತು ಇದೆ!

ಇದನ್ನೂ ಓದಿ: ಕವಿಮನದ ಪ್ರವಾಸಿಯ ಹಸಿವು ತಣಿಸುವ ಡೋವ್ ಕಾಟೇಜ್ !

ಯುನೈಟೆಡ್ ಕಿಂಗ್‍ಡಮ್‍ನ ಸಸೆಕ್ಸ್ ದೇಶದಲ್ಲಿ Sue Coppard ಎನ್ನುವಾಕೆ ತನ್ನದೇ ತುಂಡು ಭೂಮಿಯಲ್ಲಿ ಸಾವಯವ ಮಾದರಿಯಿಂದ ತನ್ನ ಕುಟುಂಬಕ್ಕೆ ಆಗುವಷ್ಟು ಬೆಳೆ ತೆಗೆದು ನೆಮ್ಮದಿಯಿಂದ ಇದ್ದಳು. 1960ರಿಂದ ಯುರೋಪಿನಲ್ಲಿ ಹವಾಮಾನ ವೈಪರೀತ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಚಳವಳಿಗಳು ಜೋರಾದವು. ಅದರಿಂದ ಪ್ರಭಾವಿತಗೊಂಡ Sue Coppard ತನ್ನ ಸಮುದಾಯದಲ್ಲಿ ಸಾವಯವ ಕೃಷಿ, ಸುಸ್ಥಿರತೆ ಮತ್ತು ಸಾರ್ವಜನಿಕರ ಒಳಗೊಳ್ಳುವಿಕೆಯ ಭಾವವನ್ನು ಜಾಗೃತಗೊಳಿಸುವಂಥ ಏನಾದರೂ ಯೋಜನೆಯನ್ನು ಹಾಕಿಕೊಂಡು ಕಾರ್ಯರೂಪಕ್ಕೆ ತರಬೇಕು ಎಂದುಕೊಳ್ಳುತ್ತಾಳೆ. ಆಗ ಹುಟ್ಟಿದ ಐಡಿಯಾನೇ ’ವಾರಾಂತ್ಯದಲ್ಲಿ ಕೃಷಿ’! ವಾರವಿಡೀ ಬೇರೆಬೇರೆ ಕ್ಷೇತ್ರದಲ್ಲಿ ದುಡಿಯುವವರು ವಾರಾಂತ್ಯಗಳಲ್ಲಿ ಕೃಷಿ ಭೂಮಿ ಹೊಂದಿರುವರ ಬಳಿ ಹೋಗಿ ಕೆಲಸ ಮಾಡುವುದು, ಕೃಷಿಕರಿಗೆ ಸಹಾಯ ಮಾಡುವುದು ಎನ್ನುವ ಈ ಉದ್ದೇಶ ವೇಗವಾಗಿ ಒಂದು ಸಂಘಟನೆಯಾಗಿ ಬೆಳೆಯಿತು. Localನಿಂದ Global ಮಟ್ಟಕ್ಕೆ ಯಾಕೆ ಈ ಯೋಜನೆಯನ್ನು ಏರಿಸಬಾರದು ಎನ್ನುವ ಮಾತುಕತೆಗಳು ಬಂದಾಗ ಶುರುವಾಗಿದ್ದೇ WWOOF. ಆರಂಭದಲ್ಲಿ ಸುತ್ತಮುತ್ತಲಿನ ಐದಾರು ದೇಶಗಳಿಂದ ವ್ಯವಸಾಯ ಆಸಕ್ತರು ಒಟ್ಟುಗೂಡಿ ಹಮ್ಮಿಕೊಳ್ಳುತ್ತಿದ್ದ ಚಟುವಟಿಕೆಗಳು ಇಂದು 130 ದೇಶಗಳಲ್ಲಿ ಹರಡಿಕೊಂಡಿದೆ.

Untitled design (40)

WWOOF ಜಾಲತಾಣದಲ್ಲಿ ತಮ್ಮ ಹೆಸರನ್ನು ಮತ್ತು ತಾವು ಭೇಟಿ ಮಾಡಲು ಇಚ್ಛಿಸುವ ದೇಶವನ್ನು ಆಯ್ಕೆ ಮಾಡಿಕೊಂಡು ನೋಂದಾಯಿಸಿಕೊಂಡರೆ ಸಾಕು, ಆ ದೇಶಗಳಲ್ಲಿ ಇಂಥ ಅವಕಾಶವನ್ನು ಒದಗಿಸುತ್ತಿರುವ ಕೃಷಿಕರ ಪಟ್ಟಿಯೊಂದು ತೆರೆದುಕೊಳ್ಳುತ್ತದೆ. ಅವರೊಡನೆ ಮುಂದಿನ ಸಂವಹನ ನಡೆಸಿ ನಮ್ಮ ಪ್ರಯಾಣವನ್ನು ಖಾತರಿ ಪಡಿಸಿಕೊಳ್ಳಬಹುದು. ನಮ್ಮ ಆತಿಥೇಯರು ನಾವು ಅವರಲ್ಲಿ ಉಳಿದುಕೊಳ್ಳುವ ಸಮಯದ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುತ್ತಾರೆ ಮಾತ್ರವಲ್ಲ ನಾವು ಮಾಡಿಕೊಡುವ ಕೆಲಸಕ್ಕೆ ಕೂಲಿಯನ್ನೂ ಕೊಡುತ್ತಾರೆ.

ಗಿಡ ನೆಡುವುದು, ಬಿತ್ತನೆ ಮಾಡುವುದು, ಕಟಾವು ಮಾಡುವುದು, ಒಕ್ಕಣೆ ಹಾಕುವುದು, ಪಾತಿ ಕಾಲುವೆಗಳನ್ನು ಮಾಡಿ ನೀರು ಹರಿಸುವುದು, ಕೋಳಿ, ಮೊಲ, ಕುರಿಗಳ ಸಾಕಾಣಿಕೆ, ತುಪ್ಪಳ ಕತ್ತರಿಸಿ ಕೊಡುವುದು, ಹಾಲು ಕರೆಯುವುದು, ಉತ್ಪನ್ನಗಳನ್ನು ಮಾರಾಟ ಮಾಡುವುದು, ರೈತ ಮಾರುಕಟ್ಟೆಯಲ್ಲಿ ಸಹಕರಿಸುವುದು, ಕೊಟ್ಟಿಗೆಗಳನ್ನು ನಿರ್ವಹಿಸುವುದು, ಕೋಳಿ ಫಾರಂ‍ಗಳನ್ನು ಶುಚಿಗೊಳಿಸಿಕೊಡುವುದು, ಮಾಂಸ ಸಂಸ್ಕರಿಸಿಕೊಡುವುದು ಹೀಗೆ ಯಾವುದೇ “ರೈತ ಕೆಲಸ”ದಲ್ಲಿ ಭಾಗಿಯಾಗಬಹುದು. ಗಂಟೆಗೆ ಇಷ್ಟು ಎಂದು ಮೊದಲೇ ನಿಗದಿಯಾಗಿರುವ ಶುಲ್ಕವನ್ನು ಸಹಾಯಕರಿಗೆ ಕೊಡುತ್ತಾರೆ.

Untitled design (38)

ಇಷ್ಟೇನಾ ಎನ್ನುವ ಪ್ರಶ್ನೆ ಮೂಡುವ ಮೊದಲೇ ಇನ್ನೂ ಇದೆ ಇನ್ನೂ ಇದೆ ಎನ್ನುತ್ತದೆ WWOOF. ಆಸಕ್ತಿ ಇರುವವರಿಗೆ ದೇಶವಿದೇಶಗಳ ಕೃಷಿಗಳ ಬಗ್ಗೆ ಮಾಹಿತಿ ನೀಡುವುದು, ಹವಾಮಾನಕ್ಕೆ ತಕ್ಕಂತೆ ಬೆಳೆಗಳ ಆಯ್ಕೆಗಳ ಬಗ್ಗೆ ತರಬೇತಿ ಕೊಡುವುದು, ಸಾಂಪ್ರದಾಯಿಕ ಪದ್ಧತಿ ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಬಗ್ಗೆ ವಿಷಯ ವಿನಿಮಯಕ್ಕೆ ಆಸ್ಪದ ಕೊಡುವುದು, ಪಶು ವೈದ್ಯಕೀಯದ ಬಗ್ಗೆ ಪಾಠಗಳನ್ನು ಹಂಚಿಕೊಳ್ಳುವುದು ಇಂಥ ಹಲವಾರು ಕೊಡುಕೊಳ್ಳುವಿಕೆಗೆ ಜೊತೆಗಾರರಾಗುತ್ತಾರೆ ನಮ್ಮ ಆತಿಥೇಯರು. ಮನೋರಂಜನೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮತ್ತು ಪ್ರಾದೇಶಿಕ ಆಹಾರದ ಆಸ್ವಾದನೆ ಎಲ್ಲಕ್ಕೂ ನಮ್ಮೊಡನೆ ಇರುತ್ತಾರೆ ನಾವು ಆಯ್ದುಕೊಂಡ ಕೃಷಿಕರು. ಸಾವಯವ ಕೃಷಿಯೊಡನೆ ಬದುಕನ್ನು ಬೆಸೆದುಕೊಳ್ಳುದಕ್ಕೆ, ರೈತರೊಡನೆ ಸಂಪರ್ಕ ಸಾಧಿಸುವುದಕ್ಕೆ ಮತ್ತು ಪ್ರವಾಸಕ್ಕೆ ವಿಭಿನ್ನ ಆಯಾಮ ಕಂಡುಕೊಳ್ಳುವುದಕ್ಕೆ WWOOF ಒಂದು ಅದ್ಭುತ ಜಾಗತಿಕ ವೇದಿಕೆ. ಹೊಸ ಪರಂಪರೆಯೊಂದಕ್ಕೆ ತೆರೆದುಕೊಳ್ಳಲು ನಮಗೂ ಒಂದು ಕ್ವಾಲಿಫಿಕೇಷನ್ ಬೇಕಲ್ಲ ಎಂದುಕೊಂಡರೆ ಹೌದು ಜಗತ್ತು ನೀಡುವ ಎಲ್ಲಾ ಸಾಧ್ಯತೆಗಳಿಗೂ ತೆರೆದುಕೊಳ್ಳುವ ಮನಸ್ಸು ಮತ್ತು ಅದಕ್ಕೆ ಹೊಂದಿಕೊಳ್ಳುವ ದೈಹಿಕ ಸಾಮರ್ಥ್ಯ ಇಷ್ಟಿದ್ದರೆ ಸಾಕು ಉಫ್ ಎಂಬ ಗೊಣಗಾಟದಿಂದ ದೂರಾಗಿ WWOOFಗೆ ಹತ್ತಿರವಾಗಲು.

Sue Coppord ಇಂದಿಗೂ ಸಹಜ ಕೃಷಿಯಲ್ಲಿ ತನ್ನ ಕೈಲಾದ ಮಟ್ಟಿಗೆ ತೊಡಗಿಸಿಕೊಂಡು Wiltshireನಲ್ಲಿ ಆರಾಮವಾಗಿದ್ದಾರೆ. ಇಲ್ಲಿ ನಮ್ಮ ದೇಶದಲ್ಲಿ ಅಥವಾ ಕರ್ನಾಟಕ ರಾಜ್ಯದಲ್ಲಿಯೇ ಯಾರಾದರೂ ತಾವು ಪ್ರವಾಸದಿಂದ ಕಲಿತದ್ದನ್ನು ಇತರರಿಗೆ ದೇಣಿಗೆಯಾಗಿ ನೀಡಬೇಕು ಎಂದು ಇಚ್ಛಿಸಿದರೆ ಇಂಥದ್ದೇ ಸಂಘಟನೆಯನ್ನು ಆರಂಭಿಸಬಹುದು ಅದಕ್ಕೂ ಮೊದಲು ಭಾರತದ 19 ರಾಜ್ಯಗಳಲ್ಲಿ WWOOF ಜತೆಗೆ ಕೆಲಸ ಮಾಡುತ್ತಿರುವ 240 ಜನರಲ್ಲಿ ಕೆಲವರನ್ನಾದರೂ ಸಂಪರ್ಕಿಸಿ ಮಾರ್ಗದರ್ಶನ ಪಡೆಯಬಹುದು. ಅವರ ಸ್ಥಳಗಳನ್ನು ಭೇಟಿ ಮಾಡಿ ದೇಸೀ ಪ್ರವಾಸದ ಸೊಗಡನ್ನು ಹೀರಬಹುದು. ಇದಕ್ಕೆ ಬೇಕಾದ ಎಲ್ಲಾ ವಿವರಗಳೂ WWOOF ವೆಬ್‍ಸೈಟ್‍ನಲ್ಲಿವೆ.

Untitled design (37)

ಆದರೆ ಈಗ ನಾನು ಹೇಳಹೊರಟಿರುವ ವಿಷಯ ಮಾತ್ರ ಜಾಲತಾಣದಲ್ಲಿ ಸಿಗುವುದಿಲ್ಲ. ಮೊದಲ ಬಾರಿಗೆ ಪ್ರೀತಿಯಲ್ಲಿ ಬೀಳುವ ಅನುಭವದಂಥದ್ದು. ಯಾವುದೇ ಪೂರ್ವ ಮಾಹಿತಿಯಿಲ್ಲದೆ ಹೆಜ್ಜೆ ಮೇಲೊಂದು ಹೆಜ್ಜೆ ಇಡುತ್ತಾ ಅನುಭವಕ್ಕೆ ಒಳಗಾಗುವ ಸೋಜಿಗ ಒದಗಿಸಿದ್ದು ಜರ್ಮನಿ. ಫ್ರ್ಯಾಂಕ್‍ಫರ್ಟ್‍ನಿಂದ ಬದೆನ್ ಬದೆನ್ ಎನ್ನುವ ಕಪ್ಪುಕಾಡಿನೆಡೆಗೆ ಪಯಣಿಸುತ್ತಿದ್ದೆ. ಸಮೃದ್ಧ ಪ್ರಕೃತಿಯ ಜೊತೆಗೆ ಜನ್ಮಜನ್ಮಗಳ ಸಖ್ಯವೇನೋ ಎನ್ನುವಂತೆ ದೃಷ್ಟಿ ಗುಂಟವೂ ಹರಡಿತ್ತು ~ಆಸ್ಪರಾಗಸ್ ( Asparagus ) ಎನ್ನುವ ತರಕಾರಿ ಹೊಲ. ಆ ತರಕಾರಿಯ ಪರಿಚಯವಾಗಿದ್ದೇ ಮೊದಲ ಬಾರಿಗೆ. ಹಾಗಾಗಿ ಕುತೂಹಲದಿಂದ ಕಾರಿನಿಂದ ಇಳಿದು ಬೇಲಿಯ ಒತ್ತಿನಲ್ಲಿ ನಡೆಯುತ್ತಿದ್ದೆ. ಹತ್ತಿರದಲ್ಲಿಯೇ ಹಿಂದಿ ಭಾಷೆಯ ಮಾತುಗಳು ಕಿವಿಗೆ ಬಿತ್ತು. ಅಲ್ಲಿ ಪರಿಚಯ ಆದದ್ದು ತ್ರಿಪುರ ರಾಜ್ಯದಿಂದ WWOOF ಯೋಜನೆಯಲ್ಲಿ ಅಲ್ಲಿಗೆ ಬಂದಿದ್ದ ಗ್ರೀಟ್ ಮತ್ತು ಹರಿಯಾಣ ರಾಜ್ಯದ ರೂಹಿ. ಅಲ್ಲಿಯವರೆಗೂ ಇಂಥ ಕೃಷಿ ಪ್ರವಾಸವೊಂದು ಶೈಕ್ಷಣಿಕ ಸಂಸ್ಥೆಗಳ ಹೊರತಾಗಿಯೂ ಸಾರ್ವಜನಿಕರಿಗೆ ಇಷ್ಟು ಸುಲಭವಾಗಿ ಲಭ್ಯವಿದೆ ಎನ್ನುವ ವಿಷಯವೇ ತಿಳಿದಿರಲಿಲ್ಲ. ಒಮ್ಮೊಮ್ಮೆ ಎರಡು ದೇಶಗಳ ಸರ್ಕಾರಗಳು ಕೃಷಿ ಶಿಕ್ಷಣ ವಿನಿಮಯ ಕಾರ್ಯಕ್ರಮಗಳಲ್ಲಿ ಆಸಕ್ತ ಸಾರ್ವಜನಿಕರನ್ನು ರೇಡಿಯೋ ಪ್ರಚಾರದ ಮೂಲಕ ಆಯ್ಕೆ ಮಾಡಿ ಕಳುಹಿಸಿಕೊಡುತ್ತಿದ್ದದ್ದು ತಿಳಿದಿತ್ತು. ನಂತರ ರಾಜಕಾರಣಿಗಳು ಅಧಿಕಾರಗಳ ಜೊತೆ ಇಂಥ ಪ್ರವಾಸ ಮಾಡುತ್ತಿದ್ದರು. ಆದರೆ ಈಗ ಪ್ರವಾಸ ಮತ್ತು ಕೃಷಿ ಎರಡರಲ್ಲೂ ಆಸಕ್ತಿ ಇದ್ದು ಅರ್ಥಿಕವಾಗಿ ಮಧ್ಯಮವರ್ಗಕ್ಕೆ ಸೇರಿದ ಸಾಮಾನ್ಯರಿಗೂ WWOOF ( Worldwide Opportunities on Organic Farming) ಸಂಘಟನೆ ಹಾದಿ ಹೊಂದಿಸಿಕೊಡುತ್ತದೆ ಎನ್ನುವುದು ’ಊಫ್’ ಎಂದು ಖುಷಿಯುಸಿರು ಬಿಡುವ ವಿಷಯ. ಮುಂದಿನ ಪ್ರವಾಸ WWOOFಕರವಾಗಿರಲಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?