ಕವಿಮನದ ಪ್ರವಾಸಿಯ ಹಸಿವು ತಣಿಸುವ ಡೋವ್ ಕಾಟೇಜ್ !
ಆಸ್ಕರ್ ಶಿಂಡ್ಲರ್‌ನ ಜೀವನಗಾಥೆ ಪುಸ್ತಕಗಳಲ್ಲಿವೆ, ಸಿನಿಮಾ, ಡಾಕ್ಯುಮೆಂಟರಿಗಳಲ್ಲೂ ಸಿಗುತ್ತದೆ. ಆದರೆ ಹೃದಯದ ಪ್ರತಿ ಲಬ್‍ಡಬ್‍ನಲ್ಲಿಯೂ ಮತ್ತೊಬ್ಬರಿಗಾಗಿ ಸದ್ದಾಗುವುದಿದೆಯಲ್ಲ ಅದನ್ನು ಅಕ್ಷರಶಃ ಅನುಭವಿಸಬೇಕು ಎಂದರೆ ಕ್ರಕಾವ್‍ನಲ್ಲಿರುವ ’ಶಿಂಡ್ಲರ್ ಫ್ಯಾಕ್ಟರಿ ಮ್ಯೂಸಿಯಂ’ಗೆ ಭೇಟಿ ನೀಡಲೇಬೇಕು. ಅಲ್ಲಿ ಇಂದಿನ ಎಲ್ಲಾ ಮೂಲಭೂತವಾದಕ್ಕೂ ಒಂದು ಅಂತ್ಯ ಸಿಗಬಹುದು ಎನ್ನುವ ಭರವಸೆ. ಪೋಲೆಂಡ್ ಪ್ರವಾಸವನ್ನು ಯೋಜಿಸುತ್ತಿರುವಾಗಲೇ ’ಶಿಂಡ್ಲರ್ ಫ್ಯಾಕ್ಟರಿ ಟೂರ್’ಗಾಗಿ ಟಿಕೆಟ್ ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು.
- ಅಂಜಲಿ ರಾಮಣ್ಣ
ಕೊರೋನದ ನಂತರ ಪ್ರವಾಸ ಎನ್ನುವ ಅಭ್ಯಾಸ ಮತ್ತು ಹವ್ಯಾಸವು ತನ್ನ ಚೆಹರೆ ಬದಲಿಸಿಕೊಂಡಿದೆ. ಇತಿಹಾಸವೂ ಕೂಡ ತನ್ನ ಮೂಲಸತ್ಯವನ್ನು ಅರ್ಧವಾಗಿಸಿಕೊಂಡಿದೆ ಅಥವಾ ಕಳೆದುಕೊಂಡಿದೆ. ಆದರೆ ಅಲೆದಾಟ ಕಲಿಸಿಕೊಡುವ ಮೊದಲ ಪಾಠ ಎಂದರೆ ಪಶ್ಚಾತ್ತಾಪವಿಲ್ಲದೆ ವಾಸ್ತವವನ್ನು ಒಪ್ಪಿಕೊಳ್ಳುವುದು. ಹಾಗಾಗಿ ಬದಲಾವಣೆಯೇ ಜಗದ ಮೂಲ ನಿಯಮ ಎನ್ನುವ ನಿಜಕ್ಕೆ ಜೋತು ಬೀಳಲೇಬೇಕಿದೆ. ಆದರೂ ’ಮನುಷ್ಯ ಮನಸ್ಸು’ ಮಿಡಿಯುತ್ತದೆ. ಸರಿದ ಸಮಯದಲ್ಲಿ ತುಡಿಯುತ್ತದೆ. ಹಿಂದೆ ಹೋಗುವ ಒಂದೇ ಅವಕಾಶ ಈ ಟೈಮ್ ಮಷಿನ್ ಕೊಟ್ಟರೂ ಅದನ್ನೂ ಪ್ರವಾಸ ಎಂದೇ ಎಣಿಸಿ ಸುಖಿಸುತ್ತಾನೆ ಪ್ರವಾಸಿ.
ಇದನ್ನೂ ಓದಿ: ಜೀವನ ಪಾಠ ಕಲಿಯಲು ಸ್ಮಶಾನ ಪ್ರವಾಸ ಮಾಡಬೇಕು!
ಅಂಥ ಕ್ಷಣಕ್ಕೆ ಮತ್ತೊಮ್ಮೆ ಹೋಗಿ ಜೀವಿಸಿ ಬರುವ ಜಾಗಗಳಲ್ಲಿ ಒಂದು ಪೋಲೆಂಡ್ ದೇಶದ ಕ್ರಕಾವ್. ಅದರಲ್ಲೂ ಅಲ್ಲಿರುವ ಆಸ್ಕರ್ ಶಿಂಡ್ಲರ್ ಫ್ಯಾಕ್ಟರಿಯಲ್ಲಿ ಒಂದು ಸುತ್ತು ಹಾಕದಿದ್ದರೆ ಮನುಷ್ಯತ್ವವೇ ಮರೆತು ಹೋಗಬಹುದೇನೋ. ಹೌದು, ಸ್ಟೀವನ್ ಸ್ಪೀಲ್‍ಬರ್ಗ್ ನಿರ್ಮಾಣದ ‘Schindler’s List’ ಸಿನಿಮಾದ ಮೂಲ ಕಥೆ ಕ್ರಕಾವ್‌ನ ಈ ಫ್ಯಾಕ್ಟರಿಯಲ್ಲಿದೆ. ದಾಖಲೆಗಳಲ್ಲಿ ಇದೊಂದು ಮ್ಯೂಸಿಯಂ. ಆದರೆ ವಾಸ್ತವದಲ್ಲಿ ಇಲ್ಲಿ ಕಾಲಿಟ್ಟೊಡನೆ ಪ್ರತಿಯೊಬ್ಬರೂ ಆಸ್ಕರ್ ಶಿಂಡ್ಲರ್ ಆಗಿಯೋ ಅಥವಾ ಸಂತ್ರಸ್ತರೋ ಅಥವಾ ದಬ್ಬಾಳಿಕೆಕೋರರೋ ಆಗಿಯೇ ತೀರುತ್ತಾರೆ. ಅಷ್ಟರ ಮಟ್ಟಿಗೆ ಇಲ್ಲಿನ ಇತಿಹಾಸ ಪ್ರವಾಸಿಯನ್ನು ಜೀವಿಸಲು ಪ್ರೇರೇಪಿಸುತ್ತದೆ. ಈಗಿನ Gen Z ತಲೆಮಾರಿಗೆ ಶಿಂಡ್ಲರ್ ಯಾರೆಂದು ಮಾಹಿತಿ ಇಲ್ಲದಿರಬಹುದು ಆದರೆ ಅವನನ್ನು ನೆನಪಿನಲ್ಲಿ ಉಳಿಸಿಕೊಟ್ಟರೆ ಖರ್ಚು ಮಾಡಿ ಹೋಗಿ ಬಂದ ಪ್ರವಾಸಕ್ಕೆ ಒಂದು ಅರ್ಥ ಬಂದೀತು.

ಆಸ್ಕರ್ ಶಿಂಡ್ಲರ್ ಒಬ್ಬ ಕಟ್ಟಾ ಜರ್ಮನ್. ಅತಿಯಾಸೆಯಿದ್ದ ವ್ಯಾಪಾರಿ. ಹಣ ಮಾಡಿಕೊಳ್ಳುವ ದಾರಿಯಾಗಿ ಹಿಟ್ಲರನ ಆಡಳಿತ ನಿರ್ವಾಹಕ ತಂಡದಲ್ಲಿ ರಹಸ್ಯ ಕಾರ್ಯಾಚರಣೆಯ ಅಧಿಕಾರಿಯಾಗಿ ಕೆಲಸಕ್ಕೆ ಸೇರಿರುತ್ತಾನೆ. ಯಹೂದಿಗಳನ್ನು ನೆಲಸಮ ಮಾಡಿಬಿಡಬೇಕು ಎನ್ನುವ ಹಠಕ್ಕೆ ಬಿದ್ದಿದ್ದ ಹಿಟ್ಲರ್ ಯಹೂದಿಗಳಿಗೆ ಸೇರಿದ್ದ ಆಸ್ತಿಪಾಸ್ತಿಗಳನ್ನು ಹರಾಜು ಹಾಕುತ್ತಿದ್ದ. ಪೋಲೆಂಡಿನ ಕ್ರಕಾವ್ ನಗರದಲ್ಲಿ ಇಟ್‍ಝಾಕ್ ಸ್ಟರ್ನ್ ಎನ್ನುವ ಯಹೂದಿಯೊಬ್ಬ ಲಾಭದಾಯಕವಾಗಿ ನಡೆಸುತ್ತಿದ್ದ ಕಾರ್ಖಾನೆಯೊಂದನ್ನು ಶಿಂಡ್ಲರ್ ಹರಾಜಿನಲ್ಲಿ ಖರೀದಿ ಮಾಡುತ್ತಾನೆ.
ನಾಝಿಗಳ ಹೆಗ್ಗುರುತಾದ ಸ್ವಸ್ತಿಕ ಚಿಹ್ನೆಯನ್ನು ಎದೆಯ ಮೇಲೆ ಧರಿಸಿಯೇ ಓಡಾಡುತ್ತಿದ್ದ ನಾಝಿ ಜನಾಂಗೀಯವಾದಿ ಶಿಂಡ್ಲರ್ ಒಮ್ಮೆ ದೂರದಲ್ಲಿ ಹಿಮಪಾತ ನೋಡುತ್ತಾನೆ. ಹತ್ತಿರ ಹೋದಾಗ ತಿಳಿಯುತ್ತದೆ ಅದು ಆಗತಾನೇ ಸುಟ್ಟ ನಾಲ್ಕು ಸಾವಿರ ಯಹೂದಿಗಳ ದೇಹದಿಂದ ಎದ್ದ ಹೊಗೆ ಎಂದು. ಮನಃಪರಿವರ್ತನೆಗೊಂಡ ಶಿಂಡ್ಲರ್ ಅಂದಿನಿಂದ ತನ್ನ ಫ್ಯಾಕ್ಟರಿಯಲ್ಲಿ ಕೇವಲ ಯಹೂದಿಯರನ್ನು ಉದ್ಯೋಗಕ್ಕೆ ನೇಮಿಸಿಕೊಂಡು ಹಿಟ್ಲರನ ಕಣ್ಣಿಂದ 1600 ಯಹೂದಿಗಳ ಪ್ರಾಣ ಉಳಿಸುತ್ತಾನೆ.
ತನ್ನ 66ನೆಯ ವಯಸ್ಸಿನಲ್ಲಿ ತೀರಿಕೊಂಡವನನ್ನು ಇಸ್ರೇಲಿನ ಜೆರುಸಲೆಮ್‌ನಲ್ಲಿ ಸಮಾಧಿ ಮಾಡಲಾಗಿದೆ. ಯಾವ ದೇಶದವರೇ ಆಗಲಿ, ಯಾವ ಧರ್ಮಕ್ಕೆ ಸೇರಿದವರೇ ಆಗಲಿ ಪ್ರಪಂಚದಾದ್ಯಂತ ಯಹೂದಿಗಳ ರಕ್ಷಣೆ ಮತ್ತು ಬೆಳವಣಿಗೆಗೆ ಕೈಜೋಡಿಸಿದವರಿಗೆ ಇಸ್ರೇಲ್ ತನ್ನ ದೇಶದ ಅತ್ಯುತ್ತಮ ಗೌರವವಾದ ’ಯಾದ್ ವಶೇಮ್ ಪುರಸ್ಕಾರ’ವನ್ನು ನೀಡುತ್ತದೆ. 1993ರಲ್ಲಿ ಆಸ್ಕರ್ ಶಿಂಡ್ಲರ್‌ಗೆ ಮರಣೋತ್ತರವಾಗಿ ಇಸ್ರೇಲ್ ಈ ಗೌರವ ನೀಡಿದೆ.
ಹೌದು, ಆಸ್ಕರ್ ಶಿಂಡ್ಲರ್‌ನ ಜೀವನಗಾಥೆ ಪುಸ್ತಕಗಳಲ್ಲಿವೆ, ಸಿನಿಮಾ, ಡಾಕ್ಯುಮೆಂಟರಿಗಳಲ್ಲೂ ಸಿಗುತ್ತದೆ. ಆದರೆ ಹೃದಯದ ಪ್ರತಿ ಲಬ್‍ಡಬ್‍ನಲ್ಲಿಯೂ ಮತ್ತೊಬ್ಬರಿಗಾಗಿ ಸದ್ದಾಗುವುದಿದೆಯಲ್ಲ ಅದನ್ನು ಅಕ್ಷರಶಃ ಅನುಭವಿಸಬೇಕು ಎಂದರೆ ಕ್ರಕಾವ್‍ನಲ್ಲಿರುವ ’ಶಿಂಡ್ಲರ್ ಫ್ಯಾಕ್ಟರಿ ಮ್ಯೂಸಿಯಂ’ಗೆ ಭೇಟಿ ನೀಡಲೇಬೇಕು. ಅಲ್ಲಿ ಇಂದಿನ ಎಲ್ಲಾ ಮೂಲಭೂತವಾದಕ್ಕೂ ಒಂದು ಅಂತ್ಯ ಸಿಗಬಹುದು ಎನ್ನುವ ಭರವಸೆ. ಪೋಲೆಂಡ್ ಪ್ರವಾಸವನ್ನು ಯೋಜಿಸುತ್ತಿರುವಾಗಲೇ ’ಶಿಂಡ್ಲರ್ ಫ್ಯಾಕ್ಟರಿ ಟೂರ್’ಗಾಗಿ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು.

“Behold her, single in the field, yon solitary Highland Lass! Reaping and singing by herself; Stop here, or gently pass! Alone she cuts and binds the grain, And sings a melancholy strain;” 80-90ರ ದಶಕದಲ್ಲಿ ಶಾಲೆ ಕಲಿತ ಪ್ರತಿ ಕನ್ನಡಿಗನೂ ವಿಲಿಯಂ ವರ್ಡ್ಸ್ ವರ್ಥ್ ವಿರಚಿತ Solitary Reaper ಪದ್ಯದ ಈ ಸಾಲುಗಳನ್ನು ಓದಿರುವುದು ಮಾತ್ರವಲ್ಲ ಆಂತರ್ಯಕ್ಕೂ ಹಾಕಿಕೊಂಡಿರುತ್ತಾನೆ. ಈ ಸಾಲುಗಳು ಮೂರ್ತರೂಪ ಪಡೆದಿರುವ ಜಾಗ ’ಡೊವ್ ಕಾಟೇಜ್’. ವಾಯವ್ಯ ಇಂಗ್ಲೆಂಡಿನಲ್ಲಿರುವ ಲೇಕ್ ಡಿಸ್ತ್ರಿಕ್ಟ್ ಕಾಶ್ಮೀರದ ಅವಳಿ ಸಹೋದರಿಯೇನೋ ಎನಿಸುವಂಥ ಸ್ವರ್ಗ. ಬಡತನವನ್ನು ಅತ್ಯಾಪ್ತವಾಗಿ ಆವಾಹಿಸಿಕೊಂಡು ಭೂಮಿಯ ಸೊಗಡನ್ನು ಉಸಿರಾಗಿಸಿಕೊಂಡು ಶ್ರೀಮಂತ ಕವನಗಳನ್ನು ರಚಿಸಿದ ವಿಲಿಯಂ ವರ್ಡ್ಸ್ ವರ್ಥ್ ಉತ್ಕಟವಾಗಿ ಬದುಕಿದ ಮನೆ ’ಡೊವ್ ಕಾಟೇಜ್’. ಹೆಂಡತಿ ಮಕ್ಕಳು ಎಲ್ಲರೊಡನೆಯೂ ಕಿಲಕಿಲಗುಟ್ಟಿದ್ದ ಮನೆ ಒಂದೊಮ್ಮೆ ಖಾಲಿಯಾದಾಗ ತನ್ನ ದೇಹದ ಮತ್ತೊಂದು ಅಂಗವೇ ಎನಿಸಿದ್ದ ತನ್ನ ತಂಗಿ ಡೊರೋತಿಯೊಂದಿಗೆ ಕೊನೆಯವರೆಗೂ ವಾಸವಿದ್ದ ಮನೆ ಇದು. ಅಲ್ಲಿನ ನ್ಯಾಷನಲ್ ಟ್ರಸ್ಟ್‌ನವರು ಈಗ ಇದರ ಉಸ್ತುವಾರಿ ವಹಿಸಿದ್ದಾರೆ.
ವಿಲಿಯಂ ಬದುಕಿದ್ದಾಗ ಹೇಗೆ ಇತ್ತೋ ಹಾಗೆಯೇ ಈ ಕಾಟೇಜ್ ಅನ್ನು ಜತನದಿಂದ ಕಾಪಾಡಲಾಗುತ್ತಿದೆ. ಹಳೆಯದನ್ನು ಆಸ್ತಿಯೆಂದು ಗತಿಸಿಹೋದದ್ದನ್ನು ತಮ್ಮ ಹೆಗ್ಗುರುತು ಎಂದು ಕಾಪಾಡಿಕೊಳ್ಳುವ ಯುರೋಪಿಯನ್ನರ ಗುಣವು ಅಧ್ಯಯನಕ್ಕೆ ಅರ್ಹ. ಗೋಡೆ, ಮಂಚ, ಕಡೆಗೆ ಪಾತ್ರೆಗಳನ್ನೂ ಹಾಗೆಯೇ ಉಳಿಸಿಕೊಳ್ಳಲಾಗಿದೆ. 1650ನೆಯ ಇಸವಿಯಲ್ಲಿ ನಿರ್ಮಾಣವಾದ ಪುಟ್ಟದಾದ ಈ ಬೆಚ್ಚಗಿನ ಚಿಕ್ಕ ಮನೆಯನ್ನು ಯಥಾಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಮತ್ತು ಒಳಹೊಕ್ಕವರಿಗೆ ಯಾವುದೋ ಕಿನ್ನರಲೋಕಕ್ಕೆ ಬಂದಿರುವಂಥ ಮಧುರಾನುಭೂತಿ ಹುಟ್ಟುವ ಹಾಗೆ ಕಟ್ಟಿಕೊಡುವುದು ಅಗಾಧವಾದ ವಿಷಯವೇ. ಸಾಮಾನ್ಯ ಪ್ರವಾಸಿಗರು ಈ ಜಾಗಕ್ಕೆ ಅಷ್ಟಾಗಿ ಹೋಗುವುದಿಲ್ಲ. ಸಾಹಿತ್ಯವನ್ನು ಅಧ್ಯಯನ ಮಾಡುವವರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ಬರುತ್ತಾರೆ ಅಷ್ಟೆ. ಹಾಗಾಗಿ ಇಲ್ಲಿನ ಪ್ರಶಾಂತತೆ ನಮ್ಮನ್ನು ವಿಲಿಯಂ ವರ್ಡ್ಸ್‌ವರ್ಥ್ ಜತೆಗೆ ಮುಖಾಮುಖಿಯಾಗಿಸುವಲ್ಲಿ ಸೋಲುವುದಿಲ್ಲ. ಡೊವ್ ಕಾಟೇಜಿನಿಂದ ಹೊರ ಬಂದಾಗ ನಮ್ಮನ್ನು ಆವರಿಸಿಕೊಳ್ಳುವ ನಿರಾಳತೆಯನ್ನು ಅಳೆಯುವುದಕ್ಕಾಗಿಯಾದರೂ ಒಮ್ಮೆ ಅಲ್ಲಿಗೆ ಹೋಗಬೇಕು.

ಅಲ್ಲಿಂದ ಒಂದಷ್ಟೇ ದೂರದಲ್ಲಿ ’ರೈಡಲ್ ಮೌಂಟ್’ ಎನ್ನುವ ನಾಲ್ಕು ಕೋಣೆಯ ಮನೆಯೊಂದಿದೆ. ಅದೀಗ ವಿಲಿಯಂ ಬದುಕು ಮತ್ತು ಸಾಹಿತ್ಯದ ಪರಿಚಯ ಕೊಡುವ ಮ್ಯೂಸಿಯಂ ಆಗಿದೆ. ಬರೋಬ್ಬರಿ 224 ವರ್ಷಗಳ ಹಿಂದೆ ಕಟ್ಟಲಾಗಿರುವ ಈ ಕಟ್ಟಡದ ಒಳಗೆ ಮೌನದ ಸದ್ದನ್ನು ಆಲಿಸುವ ಅವಕಾಶ ಬೇಕಾದರೆ ನಮ್ಮ ಪ್ರವಾಸಕ್ಕೆ ಹೋಗಬೇಕಾದ ಜಾಗಗಳ ಪಟ್ಟಿಯಲ್ಲಿ ’ರೈಡಲ್ ಮೌಂಟ್’ ಮತ್ತು ’ಡೊವ್ ಕಾಟೇಜ್’ ಭೇಟಿಗೆ ಆದ್ಯತೆ ಇರಲೇ ಬೇಕು. ವಿಲಿಯಂ ವರ್ಡ್ಸ್‌ವರ್ಥ್ ಪ್ರವಾಸವನ್ನು ಬಹಳವೇ ಇಷ್ಟಪಡುತ್ತಿದ್ದವ. ಆತನ ಎಲ್ಲಾ ಪದ್ಯ, ಬರಹಗಳು ಅವನ ಸುತ್ತಾಟದ ಬಗೆಗಿನ ಪ್ರೀತಿ ಮತ್ತು ಅದರಿಂದ ಆತ ಕಲಿತ ಪಾಠಗಳನ್ನು ಒಳಾರ್ಥದಲ್ಲಿ ಕಟ್ಟಿಕೊಡುತ್ತವೆ. ’ರೈಡಲ್ ಮೌಂಟ್’ ಸುತ್ತಿ ಬರುವ ಕೊನೆಯಲ್ಲಿ ಪಕ್ಷಿಯ ಗರಿಯಿಂದ ಮಾಡಲಾದ ಪೆನ್ ಮತ್ತು ಕಪ್ಪು ಶಾಯಿ ಇಡಲಾಗಿದೆ. ಅಲ್ಲೇ ಇರುವ ಕಾಗದದ ಮೇಲೆ ನಮಗೆ ಅನಿಸಿದ್ದನ್ನು ಬರೆದು ಅಲ್ಲಿಯೇ ಇಟ್ಟು ಬರಬಹುದು. ವ್ಲಾಗಿಂಗ್‍ಗಳ ಹಾವಳಿಯಲ್ಲಿ ಅಲ್ಲಿನ ನೀರವತೆ ಮರೆಯಾಗುವ ಮೊದಲೇ ಹೋಗಬೇಕಾಗಿದೆ ಇಲ್ಲಿಗೆ. "One impulse from a vernal wood; May teach you more of man, Of moral evil and of good, Than all the sages can." ಎನ್ನುವ ವರ್ಡ್ಸ್‌ವರ್ಥ್ ಮಾತುಗಳ ಸತ್ಯಾನ್ವೇಷಣೆಯಂತಾಗಲಿ ಪ್ರವಾಸ.