ಎಂದಿಗೂ ತೊಡಕಾಗದ ಭಾಷೆ, ಯಾವತ್ತಿಗೂ ತೊಡಕಾಗುವ ಜೀವನಶೈಲಿ !
ಬಾರ್ಸಿಲೋನಾದಲ್ಲಿ ಕಾಸಾ ಏಷ್ಯಾ (ಏಷ್ಯಾ ಹೌಸ್) ಎನ್ನುವ ಸಾರ್ವಜನಿಕ ಸಂಸ್ಥೆ ಇದೆ. ಏಷ್ಯಾದ ಬಗ್ಗೆ ವಿಶೇಷವಾಗಿ ಅಲ್ಲಿನ ಸಂಸ್ಕೃತಿ, ಪರಂಪರೆ, ಶಿಕ್ಷಣ, ಉದ್ಯೋಗಾವಕಾಶ ಮುಂತಾದವುಗಳ ಬಗ್ಗೆ ಇದು ಮಾಹಿತಿ ಕೇಂದ್ರ. ಅದರಲ್ಲೂ ಇಂಡಿಯಾ, ಜಪಾನ್, ಚೀನಾದ ಬಗ್ಗೆ ಮಾಹಿತಿ ಪಡೆಯಲು ಬರುವ ಜನರೇ ಹೆಚ್ಚು. ಅಲ್ಲಿ ರಾಮಾಯಣ, ಮಹಾಭಾರತದ ಪ್ರತಿಗಳಿವೆ. ವರದಕ್ಷಿಣೆ ಸಂಬಂಧಿಸಿದ ಕಾನೂನು ಗ್ರಂಥಗಳಿವೆ. ನಮ್ಮ ಊಟ, ವಾಸ್ತುಶಿಲ್ಪ, ಪ್ರವಾಸಿ ತಾಣಗಳ ಬಗ್ಗೆ, ಹಾಲಿವುಡ್, ಬಾಲಿವುಡ್ ಗಳ ಸಿನಿಮಾ ಸಿ.ಡಿ. ಮುಂತಾದ ಹತ್ತೆಂಟು ಮಾಹಿತಿ ಸುಲಭ ಲಭ್ಯ.
- ರಂಗಸ್ವಾಮಿ ಮೂಕನಹಳ್ಳಿ
ಬಾರ್ಸಿಲೋನಾಗೆ ಖುಷಿಯಿಂದ ಬಂದದ್ದು ಆಗಿತ್ತು. ಆದರೆ, 'ಅದು ಅಷ್ಟು ಸುಲಭವಲ್ಲ ಇಲ್ಲಿ ಬದುಕುವುದು' ಎಂದು ಹೇಳಿದ ಹಾಗೆ ಭಾಸವಾಯ್ತು. ಒಂದು, ಭಾಷೆ ಬರುತ್ತಿಲ್ಲ. 'ವಾಟರ್' ಅಂದರೆ 'ಏನು' ಅಂತ ಕೇಳುವಷ್ಟು ಇಂಗ್ಲಿಷ್ ಜ್ಞಾನವಿಲ್ಲದ ಜನತೆ! ಇವತ್ತಿಗೆ ಬಹಳಷ್ಟು ಬದಲಾವಣೆ ಆಗಿದೆ. ಇಲ್ಲಿ ಬದುಕುವುದು ಹೇಗೆ? ಒಂಟಿತನ ಎಂದರೇನು? ಎನ್ನುವುದರ ಅರಿವಾಯಿತು. ನಾನು ಕೆಲಸ ಮಾಡುತ್ತಿದ್ದ ಸಂಸ್ಥೆ ನನಗೆ ಮೂರು ಬೆಡ್ ರೂಮಿನ ಅಪಾರ್ಟ್ ಮೆಂಟ್ ನೀಡಿತ್ತು. ಆದರೇನು? ಅಲ್ಲಿರುವುದು ನಾನೊಬ್ಬನೇ! ನನಗಿನ್ನೂ ನೆನಪಿದೆ, ಮೊದಲ ದಿನ ಡನಪ್ ಮ್ಯಾಂಗೋ ಜ್ಯೂಸ್ ಮತ್ತು ಬ್ರೆಡ್ ಜೊತೆಗೆ ಒಂದಷ್ಟು ಚೀಸ್ ಸೇರಿಸಿ ತಿಂದು ಮಲಗಿದ್ದೆ. ಭಾರತೀಯ ಪದಾರ್ಥಗಳು ಎಲ್ಲಿ ಸಿಕ್ಕುತ್ತವೆ ಎಂದು ಹುಡುಕಿಕೊಳ್ಳುವುದರಲ್ಲಿ ಹತ್ತು ದಿನವಾಯ್ತು. ದುಬೈನಲ್ಲಿ ಶೇಖರವಾಗಿದ್ದ ಹತ್ತು ಎಕ್ಸ್ಟ್ರಾ ಕೇಜಿಗಳು ಸದ್ದಿಲ್ಲದೇ ಕರಗಿ ಹೋಗಿದ್ದವು.
ಇದನ್ನೂ ಓದಿ: ಗೂಳಿ ಕಾಳಗ ಪುರಾಣ ಹೇಳುವೆ ಕೇಳಿ !
ಆಫೀಸಿಗೆ ಮೊದಲ ದಿನ: ಬೆಳಗ್ಗೆ ಎದ್ದು ಸ್ನಾನ, ಸಂಧ್ಯಾವಂದನೆ ಮುಗಿಸಿ ಚೂರು ಗಂಧ ( ಗಂಧದ ಚಕ್ಕೆ ಮತ್ತು ಸಾಣೆಕಲ್ಲು, ನರಸಿಂಹಸ್ವಾಮಿ ಫೊಟೋ ನಾನು ಹೋದಕಡೆಯೆಲ್ಲಾ ನನ್ನೊಡನೆ ಪ್ರಯಾಣ ಮಾಡಿವೆ) ಇಟ್ಟುಕೊಂಡು, ಅದರ ಮೇಲೆ ಕುಂಕುಮ ಇಟ್ಟು, ಶಿಸ್ತಾಗಿ ಆಫೀಸ್ ಸೇರಿದೆ. ನಮ್ಮ ಆಫೀಸಿನ ಅಂದಿನ ಸ್ವಾಗತಗಾರ್ತಿ ನನ್ನ ನೋಡಿದವಳು ಬಹಳ ಆತಂಕದಿಂದ ' ತೇ ಸಾಲೆ ಸಾಂಗ್ರೆ ' ( ನಿನಗೆ ರಕ್ತ ಬರುತ್ತಿದೆ ) ಎಂದು ನನ್ನ ಹಣೆಯ ಕಡೆಗೆ ಕೈ ತೋರಿಸಿದಳು. ನನಗೇನೂ ಅರ್ಥವಾಗಲಿಲ್ಲ. ಇಂಗ್ಲಿಷ್ ನಲ್ಲಿ ಏನಾಯ್ತು ಎಂದೆ. ಅವಳು ಹೇಳಿಕೇಳಿ ಕತಲಾನ್! ಸ್ಪ್ಯಾನಿಷ್ ಮಾತನಾಡುವುದು ಸೌಭಾಗ್ಯ , ಇನ್ನು ಇಂಗ್ಲಿಷ್!? ಸ್ವಲ್ಪ ಹೊತ್ತಿನಲ್ಲಿ ಇದಕ್ಕೆಲ್ಲ ಕಾರಣ ನನ್ನ ಗಂಧ ಹಾಗೂ ಕುಂಕುಮ ಎನ್ನುವುದರ ಅರಿವಾಯ್ತು. ಆವತ್ತೇ ಕೊನೆ ಮುಂದೆ ನಾನು ಅವರಂತೆ ಬೋಳು ಹಣೆಯವನಾದೆ. ಮಾರ್ಕೆಟಿಂಗ್ ಹೆಡ್ ವಾನ್ ಪಾಸ್ತೂರ್ 'ರಂಗ ನಿಮ್ಮ ದೇವರು ಕೂಡ ಈ ಚಳಿಗೆ ಬೇಗ ಏಳುವುದಿಲ್ಲ' ಎಂದು ನನ್ನ ಕಿಚಾಯಿಸಿದ್ದ.

ಬಾರ್ಸಿಲೋನಾಕ್ಕೆ ಬಂದ ಹೊಸತರಲ್ಲಿ ಸ್ಪ್ಯಾನಿಷ್ ಕಲಿಯುವ ಬಯಕೆಯಿಂದ ಒಂದು ಕೇಂದ್ರಕ್ಕೆ ಹೋದೆ. ಅದು ನಗರ ಮಧ್ಯದಲ್ಲಿಯೇ ಇದೆ. ನನ್ನಂತೆ ಕಲಿಯಲು ಆಸಕ್ತರಾಗಿ ಬಂದ ಹತ್ತು ಮಂದಿ ಇದ್ದರು. ಎಲ್ಲರೂ ಮಹಿಳೆಯರೇ. ಫ್ರಾನ್ಸ್, ಹಾಲೆಂಡ್, ಸ್ವಿಟ್ಜರ್ ಲ್ಯಾಂಡ್, ಯು.ಕೆ. - ಇಲ್ಲಿಂದ ಬಂದವರಿದ್ದರು. ಸಾಮಾನ್ಯವಾಗಿ ಟೀಚರುಗಳನ್ನು ಪ್ರೊಫೆಸರುಗಳೆಂದು ಕರೆಯುವುದೇ ವಾಡಿಕೆ. ವಿಶೇಷವೆಂದರೆ ಸ್ಪ್ಯಾನಿಷನ್ನು ಅದೇ ಭಾಷೆಯಲ್ಲಿ ಕಲಿಯಬೇಕು- ಇಂಗ್ಲಿಷಿನಲ್ಲಲ್ಲ ಅಥವಾ ಬೇರೆ ಯಾವ ಭಾಷೆಯಲ್ಲೂ ಅಲ್ಲ. ಇದೆಂಥ ಪ್ರಯೋಗ ಅನ್ನಿಸಿತು. ನಮ್ಮ ಬ್ಯಾಚಲ್ಲಿ ಇಂಗ್ಲಿಷ್ ಮಾತನಾಡುವವರೂ ಇದ್ದರು. ಸ್ನೇಹ ಬೆಳೆಸಿಕೊಳ್ಳುವುದು ಅಂಥ ಕಷ್ಟವಾಗಲಿಲ್ಲ. ನಾಲ್ಕು ಗಂಟೆ ಕಲಿಕೆ, ಮಧ್ಯ ಹದಿನೈದು ನಿಮಿಷ ವಿರಾಮ. ಒಂದು ಬಗೆಯ ರಿಲ್ಯಾಕ್ಸ್ ಮೂಡ್. ಆಗ ನನ್ನ ಜತೆಯವರೆಲ್ಲ ಮಾಡುತ್ತಿದ್ದುದು ಒಂದೇ ಕೆಲಸ - ಧಾರಾಳವಾಗಿ ಸಿಗರೇಟು ಸೇದುವುದು. ನನಗೆ ಅಲ್ಲಿ ನಿಲ್ಲಲೂ ಆಗದಷ್ಟು ವಾಕರಿಕೆ. ಆದರೆ ಮುಖ ಸಿಂಡರಿಸಿಕೊಂಡರೆ ಅದು ಅಸಭ್ಯತೆ. ನನಗೂ ಸಿಗರೇಟು ಸೇದಲು ಪ್ರೇರೇಪಿಸುತ್ತಿದ್ದರು. ವಿನಯವಾಗಿಯೇ ತಿರಸ್ಕರಿಸುತ್ತಿದ್ದೆ. ಆದರೆ ಒಬ್ಬಂಟಿ ಅನಿಸುತ್ತಿತ್ತು; ಕುರುಡರ ರಾಜ್ಯದಲ್ಲಿ ಕಣ್ಣಿದ್ದವನೇ ಎಡಬಿಡಂಗಿ ಎನ್ನುವ ಹಾಗೆ. ಸರಿ ಏನಾದರೂ ತಿನ್ನೋಣ, ಅದಕ್ಕೆ ಬರಬಹುದಲ್ಲ ಎಂದು ಛೇಡಿಸುತ್ತಿದ್ದರು. ಉಳಿದದ್ದು ಒಂದೇ ದಾರಿ, ಕಾಫಿ ಸೇವನೆ. ಆಗ ಅಲ್ಲಿ ಬರುತ್ತಿದ್ದ ಮಾತುಗಳು ದಂಗುಬಡಿಸುತ್ತಿದ್ದವು. ಯಾವ ಬ್ರಾಂಡ್ ವೈನು ಈಚೆಗೆ ಹೆಸರುವಾಸಿ, ಡಿಸ್ಕೋದಲ್ಲಿ ಯಾವ ಕ್ಲಬ್ ಮುಂದಿದೆ? ತಾಜಾ ಮಾಂಸ ಎಲ್ಲಿ ಸಿಗುತ್ತದೆ? ಬೇರೆಡೆಗಿಂತ ಸಿಗರೇಟ್ ಎಲ್ಲಿ ಚೀಪಾಗಿದೆ? ಯಾವ ಪಾರ್ಟಿಗೆ ಯಾವ ದಿನ ಬುಕ್ ಆಗಿದೆ? ಹೀಗೆ... ನಾನು ನಕ್ಕು ಸುಮ್ಮನಾಗುತ್ತಿದ್ದೆ. ಕೊನೆಗೆ ನನ್ನ ಗೋತ್ರ, ಪ್ರವರ ಎಲ್ಲ ಹೇಳಬೇಕಾಯಿತು. ನೋಡಿ, ನಾನು ಪಕ್ಕಾ ಸಸ್ಯಾಹಾರಿ, ವೈನ್ ಕುಡಿಯುವುದು ನಮ್ಮ ಸಂಸ್ಕೃತಿಯಲ್ಲ, ಸಿಗರೇಟು ಸೇದುವುದಂತೂ ಆಗದ ಮಾತು.
ಮುಂದಿನ ದಿನಗಳಲ್ಲಿ ಸ್ಪ್ಯಾನಿಷ್ ತರಗತಿಯ ಒಂದು ಭಾಗವಾಗಿ ಅಡುಗೆಯ ಬಗ್ಗೆ ಒಂದು ಅಧ್ಯಾಯ. ಹೇಳಿಕೊಡಲು ನಮ್ಮ ಫ್ರೊಪೆಸರ್ ಮುಂದಾದರು. ಒಬ್ಬೊಬ್ಬರನ್ನೂ ಆಕೆ ಕೇಳಿದ್ದು 'ಸಾಗರದ ಯಾವ ಜೀವಿಯ ಅಡುಗೆ ನಿಮಗೆ ಇಷ್ಟ' ಎಂದು. ಅಲ್ಲೂ ನನ್ನ ಉತ್ತರ ಶೂನ್ಯ. 'ಸರಿ, ನೀನು ಸೇವಿಸುವ ಮದ್ಯದ ಬ್ರಾಂಡನ್ನಾದರೂ ಹೇಳು' ಎಂದರು. ಅಲ್ಲೂ ನನ್ನ ಮುಗುಳ್ನಗೆಯೇ ಉತ್ತರ. 'ಎಷ್ಟು ದಿನದಿಂದ ನೀನು ಡಯಟ್ ಮಾಡುತ್ತೀದ್ದೀಯಾ?' 'ಮೇಲಿನ ಪ್ರಶ್ನೆಗೆ ಉತ್ತರ ಬಯಸುವಿರಾದರೆ ಹುಟ್ಟಿದಂದಿನಿಂದ' ಅಂದೆ. 'ಅದು ಡಯಟ್ ಅಲ್ಲ, ಬದುಕಿನ ಒಂದು ಬಗೆ' ಎಂದೆ. ಅಲ್ಲಿಗೆ ಸಿಲಬಸ್ ನಿಂತುಹೋಯಿತು. 'ಸರಿ, ಭಾರತೀಯ ಆಹಾರ ಪದ್ಧತಿಯ ಬಗ್ಗೆ ಹೇಳು' ಎಂದು ಅದೇ ಉತ್ಸಾಹದಲ್ಲಿ ಕೇಳಿದಾಗ 'ಉಪ್ಪಿಟ್ಟಿನಿಂದ ಹಿಡಿದು ವಡೆಯವರೆಗೂ' ಒದರಿದೆ. ಹೀಗೂ ಉಂಟೆ? ಎಂದು ಸೋಜಿಗ ಪಟ್ಟದ್ದು ಟೀಚರ್ ಅಷ್ಟೇ ಅಲ್ಲ, ನನ್ನ ಜೊತೆಗಿದ್ದ ಇಡೀ ತಂಡ.

ಬಾರ್ಸಿಲೋನಾದಲ್ಲಿ ಕಾಸಾ ಏಷ್ಯಾ (ಏಷ್ಯಾ ಹೌಸ್) ಎನ್ನುವ ಸಾರ್ವಜನಿಕ ಸಂಸ್ಥೆ ಇದೆ. ಏಷ್ಯಾದ ಬಗ್ಗೆ ವಿಶೇಷವಾಗಿ ಅಲ್ಲಿನ ಸಂಸ್ಕೃತಿ, ಪರಂಪರೆ, ಶಿಕ್ಷಣ, ಉದ್ಯೋಗಾವಕಾಶ ಮುಂತಾದವುಗಳ ಬಗ್ಗೆ ಇದು ಮಾಹಿತಿ ಕೇಂದ್ರ. ಅದರಲ್ಲೂ ಇಂಡಿಯಾ, ಜಪಾನ್, ಚೀನಾದ ಬಗ್ಗೆ ಮಾಹಿತಿ ಪಡೆಯಲು ಬರುವ ಜನರೇ ಹೆಚ್ಚು. ಅಲ್ಲಿ ರಾಮಾಯಣ, ಮಹಾಭಾರತದ ಪ್ರತಿಗಳಿವೆ. ವರದಕ್ಷಿಣೆ ಸಂಬಂಧಿಸಿದ ಕಾನೂನು ಗ್ರಂಥಗಳಿವೆ. ನಮ್ಮ ಊಟ, ವಾಸ್ತುಶಿಲ್ಪ, ಪ್ರವಾಸಿ ತಾಣಗಳ ಬಗ್ಗೆ, ಹಾಲಿವುಡ್, ಬಾಲಿವುಡ್ ಗಳ ಸಿನಿಮಾ ಸಿ.ಡಿ. ಮುಂತಾದ ಹತ್ತೆಂಟು ಮಾಹಿತಿ ಸುಲಭ ಲಭ್ಯ. ನಾನು ಬಾರ್ಸಿಲೋನಾಕ್ಕೆ ಬಂದ ಹೊಸತರಲ್ಲಿ ಸ್ಪ್ಯಾನಿಷ್ ಸಂಸ್ಕೃತಿಗೆ ನಾನು ಹೊಸಬ. ಸಮಯ ಸಿಕ್ಕಾಗಲೆಲ್ಲ ಇಲ್ಲಿಗೆ ಬಂದು ಈ ಗ್ರಂಥಾಲಯದಲ್ಲಿ ಹಲವು ಆಸಕ್ತಿದಾಯಕ ಕೃತಿಗಳನ್ನು ಓದಿದ್ದೇನೆ. ಅಬ್ದುಲ್ ಕಲಾಂ ಅವರ ವಿಷನ್ 2020, ಖುಷ್ವಂತ್ ಸಿಂಗರ ಕೃತಿಗಳನ್ನು ನಾನು ಓದಿದ್ದೇ ಇಲ್ಲಿ. ಪುಸ್ತಕಗಳನ್ನು ಓದಬಹುದು, ಕೊಂಡೊಯ್ಯಬಹುದು, ನವೀಕರಿಸಬಹುದು. ಬಿಡಿಗಾಸನ್ನೂ ಚಾರ್ಜ್ ಮಾಡುವುದಿಲ್ಲ. ಜಪಾನ್ ಮತ್ತು ಚೀನಾ ಭಾಷೆಗಳನ್ನು ಕಲಿಯಲು ಅವಕಾಶ ಉಂಟು. ಅಲ್ಲಿಯ ಜನರಿಗೆ ಭಾರತೀಯ ಅಡುಗೆ ತುಂಬಾ ಇಷ್ಟ ಮೆಣಸಿನಕಾಯಿ, ಸಕ್ಕರೆ, ಉಪ್ಪು ಕಡಿಮೆ ಇದ್ದರಾಯಿತು ನಮ್ಮ ಅಡುಗೆಗಾಗಿ ಬಾಯಿ ಚಪ್ಪರಿಸುತ್ತಾರೆ. ಭಾರತದ ಬಗ್ಗೆ ಯಾವುದೇ ವಿಚಾರ ಗೋಷ್ಠಿಗಳಾದರೂ ದೊಡ್ಡ ಪ್ರಮಾಣದಲ್ಲಿ ಸೇರುತ್ತಾರೆ.
ಕ್ರಿಸ್ ಮಸ್ ಹಬ್ಬ ಬಂದರೆ ಇಡೀ ನಗರವೇ ರೂಪಾಂತರಗೊಂಡಂತೆ ಕಾಣುತ್ತದೆ. ಸಾಂತಾ, ಲೂಸಿಯಾ ಮಾರುಕಟ್ಟೆ, ಪ್ಲಾಜಾ ದಿ ಲಾ ಕೆಥಡ್ರಲ್ ಮಾರುಕಟ್ಟೆ ಇವೆಲ್ಲ ಭರ್ಜರಿ ಐಟಂಗಳನ್ನು ಬಿಕರಿಗಿಡುತ್ತವೆ. ಎಲ್ಲೆಲ್ಲೂ ರಂಗೋರಂಗು. ಬಳೆ, ಉಂಗುರ, ಲ್ಯಾಂಪು, ಬಗೆಬಗೆಯ ಬಟ್ಟೆ, ಉಡುಗೊರೆಯ ಎಲ್ಲ ಸಾಮಾನುಗಳೂ ಮಳಿಗೆಗಳನ್ನು ಬಿಟ್ಟು ಮಾರುಕಟ್ಟೆಯಲ್ಲಿ ಬಂದು ಮಂದಹಾಸ ಬೀರುತ್ತವೆ. ಡಿಸೆಂಬರ್ 24ರಂದೇ ಸಡಗರ ಶುರುವಾಗುತ್ತದೆ. ಅದರಲ್ಲೂ ಕ್ಯಾತಲಾನ್ ಮನೆಗಳೆಂದರೆ ಅಲ್ಲಿ ಕ್ರಿಸ್ ಮಸ್ ಆಚರಣೆಯೂ ಸ್ವಲ್ಪ ಭಿನ್ನವೇ. ಸಾಂತಾಕ್ಲಾಸ್ ಕಾಣಿಸಿಕೊಂಡು ತನ್ನ ಮಾಯಾ ಜೋಳಿಗೆಯಿಂದ ಬಗೆಬಗೆಯ ಉಡುಗೊರೆಯನ್ನು ಮಕ್ಕಳಿಗೆ ಕೊಡುವ ಮೊದಲು ಕಾಗಾ ತಿಯೋ ಎಂಬ ಪಾತ್ರಕ್ಕೆ ಇಲ್ಲಿ ಪ್ರಾಶಸ್ತ್ಯ. ದೊಡ್ಡ ದುಂಡನೆಯ ಮರದ ಕೆತ್ತನೆ ಅದು. ಕ್ರಿಸ್ ಮಸ್ ಗೆ ಮೊದಲು ಈತ ಕಾಡು ಹೊಕ್ಕು ಗಡದ್ದಾಗಿ ತಿಂದು ಡುಮ್ಮ್ ಡುಮ್ಮಾಗಿ ಬರುತ್ತಾನೆ ಎಂಬ ಪ್ರತೀತಿ ಇಲ್ಲಿ. ಸಾಮಾನ್ಯವಾಗಿ ಈ ದಿನಗಳಲ್ಲಿ ಕುಟುಂಬಗಳು ಮನೆಯಿಂದ ಹೊರಗೆ ಕಳೆಯುವುದೇ ಹೆಚ್ಚು. ಇತ್ತ ಮನೆಗಳಲ್ಲಿ ವಯಸ್ಕರು ಕಾಗಾ ತಿಯೋನನ್ನು ಗುಪ್ತವಾದ ಸ್ಥಳದಲ್ಲಿರಿಸಿ ಮಕ್ಕಳಿಗೆ ಕುತೂಹಲ ಹುಟ್ಟಿಸಿ ಹುಡುಕಲು ಹೇಳುತ್ತಾರೆ. ಕಾಡಿನಿಂದ ಮರಳಿ ಬಂದಿಲ್ಲವೆಂದೇ ಸಾಧಿಸುತ್ತಾರೆ. ಬಚ್ಚಿಟ್ಟ ಕಾಗಾ ತಿಯೋನನ್ನು ಮಕ್ಕಳು ಹುಡುಕಿದರೆ ಅದರ ಗುಡಾಣ ಹೊಟ್ಟೆಯಿಂದ ಹೊರಬರುತ್ತವೆ ಬಗೆಬಗೆಯ ಕ್ರಿಸ್ ಮಸ್ ಕೊಡುಗೆಗಳು. ಹೀಗೆ ಸತಾಯಿಸುವುದೇ ಕ್ರಿಸ್ ಮಸ್ ಸಂಭ್ರಮದ ಒಂದು ಪಾಲು.
ಹೊಸ ವರ್ಷ ಬಂತೆಂದರೆ ಇಡೀ ಮಾರುಕಟ್ಟೆಯೇ ಸಿಂಗರಿಸಿಕೊಂಡು ಬಾರುಗಳಲ್ಲೂ ಜಾಗವಿಲ್ಲದಂತಾಗುತ್ತದೆ. ಹನ್ನೆರಡು ದ್ರಾಕ್ಷಿ ಹಣ್ಣು ತಿಂದು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಹಿಂದೆ ದೊಡ್ಡ ಪ್ರಮಾಣದ ದ್ರಾಕ್ಷಿ ಬೆಳೆದು ಮಾರುಕಟ್ಟೆಯೇ ಏರುಪೇರಾಗಿ ಭಾರಿ ನಷ್ಟವನ್ನು ಈ ಭಾಗ ಅನುಭವಿಸಿತಂತೆ. ಅದನ್ನು ತಪ್ಪಿಸಲು ಇದನ್ನು ಸಂಪ್ರದಾಯವೆಂಬಂತೆ ಆಚರಿಸಲಾಗುತ್ತಿದೆ. ಹೊಸ ವರ್ಷದ ಮೊದಲ ಸೂರ್ಯ ದರ್ಶನವಾಗುತ್ತಲೇ ಚುರೋಸ್ ಎಂಬ ಕುರುಕು ತಿಂಡಿಯನ್ನು ತಿನ್ನುತ್ತಾರೆ. ಇದು ನಮ್ಮ ಕೋಡುಬಳೆ, ಚಕ್ಕುಲಿ ಇದ್ದ ಹಾಗೆ.
ನನಗೆ ಭಾಷೆ ಅಷ್ಟೊಂದು ತೊಡಕಾಗಿ ಪರಿಣಮಿಸಿಲ್ಲ. ವಿಶೇಷವಾಗಿ ಅಂಗಡಿ, ಮುಂಗಟ್ಟುಗಳಿಗೆ ಹೋದರೆ ತಳ್ಳುವ ಗಾಡಿಯಲ್ಲಿ ಬೇಕಾದ ಸಾಮಾನನ್ನು ಇಟ್ಟು ಬಿಲ್ಲಿನ ಕೌಂಟರಿಗೆ ಬಂದರಾಯಿತು, ಚೌಕಾಸಿ ಇಲ್ಲ, ನಮೂದಿಸಿದಷ್ಟು ಬಿಲ್ಲು ತೆತ್ತು ಹೊರಬರಬಹುದು. ಫಜೀತಿಯಾಗುವುದು ರೆಸ್ಟೋರೆಂಟುಗಳಲ್ಲಿ. ನೀವು ಕಟ್ಟಾ ಸಸ್ಯಾಹಾರಿಯಾಗಿದ್ದರೆ ಪರಿಪಾಟಲು ಇನ್ನೂ ಹೆಚ್ಚು. ಏಕೆಂದರೆ ಹೊಟೇಲ್ ವೇಟರಿಗೆ ಖುಷಿಯಾಗಿ `ಸ್ಟ್ರಿಕ್ಟ್ಲಿ ವೆಜಿಟೆರಿಯನ್' ಎಂದು ಆರ್ಡರ್ ಕೊಟ್ಟು ಅದೇ ಖುಷಿಯಲ್ಲಿ ಕಾಯಬಹುದು. ಆತ ಕೂಡ ನೀವು ಹೇಳಿದ್ದನ್ನೇ ತರುತ್ತಾನೆ. ಅದರಲ್ಲಿ ಮೊಟ್ಟೆ ಮತ್ತು ಮೀನು ಇರುತ್ತವೆ ಅಷ್ಟೇ. ಈ ಭಾಗದಲ್ಲಿ ಈ ಎರಡೂ ಐಟಂಗಳು ವೆಜಿಟೇರಿಯನ್ ಪಟ್ಟಿಯಲ್ಲಿ ಸೇರಿಬಿಟ್ಟಿವೆ.