ಗೌದಿಯ ನಾಡು, ಕತಲಾನಾರ ಹೆಮ್ಮೆಯ ಗೂಡು !
ಸಗಾರ್ದ ಫೆಮಿಲಿಯು ಗೌದಿಯ ಅದ್ಭುತ ನಿರ್ಮಾಣ. ಇದು ಪ್ರಾರಂಭವಾದದ್ದು 1882ರಲ್ಲಿ. ವಿಚಿತ್ರವೆಂದರೆ ಆ ಕಟ್ಟಡದ ಕೆಲಸ ನಡೆಯುತ್ತಲೇ ಇದೆ. ಇದೊಂದು ಜಾಗತಿಕ ದಾಖಲೆ. ಅದು ಅಪೂರ್ಣವಾಗಿರಬಹುದು, ಆದರೆ ಸಂದರ್ಶಕರಿಗೇನೂ ಕೊರತೆಯಿಲ್ಲ. ವರ್ಷಕ್ಕೆ ಇಪ್ಪತ್ತು ಲಕ್ಷ ಮಂದಿ ಈ ಸ್ಮಾರಕಕ್ಕೆ ಭೇಟಿ ನೀಡಿ ಗೌದಿಯ ಕಲಾತ್ಮಕತೆಯನ್ನು ಎದೆಯೊಳಗೆ ತುಂಬಿಕೊಳ್ಳುತ್ತಾರೆ. ಅದು ಇನ್ನೂ ಪೂರ್ಣಗೊಂಡಿಲ್ಲ ಎಂಬುದೇ ಪ್ರವಾಸಿಗರಿಗೊಂದು ಆಕರ್ಷಣೆ.
- ರಂಗಸ್ವಾಮಿ ಮೂಕನಹಳ್ಳಿ
ಸಗಾರ್ದ ಫೆಮಿಲಿಯ ಎಂದರೆ ಪವಿತ್ರ ಕುಟುಂಬ ಎಂಬರ್ಥ. ಇದು ಆಂತೋನಿ ಗೌದಿಯ ಉತ್ಕೃಷ್ಟ ಶಿಲ್ಪಕಲೆಯ ಕಟ್ಟಡ. ನಿತ್ಯ ಸಹಸ್ರ ಸಹಸ್ರ ಕ್ಯಾಮರಾಗಳು ಇದನ್ನು ಕ್ಲಿಕ್ಕಿಸುತ್ತವೆ. ಗೌದಿಯ ಶಿಲ್ಪಕಲೆಗೆ ಸಾಟಿಯಿಲ್ಲವೆಂದೇ ಸ್ಪ್ಯಾನಿಷರು ಬಗೆದರೆ ಅದೇನೂ ಜಂಭದ ಮಾತಲ್ಲ. ವಾಸ್ತುಶಿಲ್ಪದ ಬಗ್ಗೆ ಓ ನಾಮ ತಿಳಿಯದವರೂ ಭೇಷ್ ಭೇಷ್ ಎಂದು ಸ್ವಗತವಾಡುವ ಅದ್ಭುತ ಕಲಾರಚನೆ ಇದು. ವಾಸ್ತುಶಿಲ್ಪ, ಕಾವ್ಯ, ಧರ್ಮ, ಸಸ್ಯಾಲಂಕಾರ, ಖಗೋಳವಿಜ್ಞಾನ ಎಲ್ಲದರ ನಡುವೆ ಸಾಮರಸ್ಯ ಸಾಧಿಸಿದ ಅದ್ಭುತ ವಾಸ್ತುಶಿಲ್ಪಿ ಈತ. ಸಗಾರ್ದದ ನಿಜವಾದ ಶಿಲ್ಪಕಲಾ ವೈಶಿಷ್ಟ್ಯವೇನು? ಕ್ರಿಸ್ತನ ಜನನ ಮತ್ತು ಬಾಲ್ಯವನ್ನು ಮೋಹಕವಾಗಿ ನಿರೂಪಿಸಿರುವ ಒಳಾಂಗಣ ಶಿಲ್ಪಗಳಿವೆ. ಗುಲಾಬಿ ಪಕಳೆಯ ರಚನೆಯ ಭವ್ಯ ಕಿಟಕಿಗಳಿವೆ. ಘಂಟಾಗೋಪುರಕ್ಕೆ ಒಯ್ಯುವ ನಾನೂರು ಪಾವಟಿಗೆಗಳು ಇರುವ ಸುರುಳಿ ಇದೆ. ಒಂದೊಂದು ಗೋಪುರಕ್ಕೂ ಚಿತ್ತಾಕರ್ಷಕ ಮೋಸಾಯಿಕ್ ಬಳಸಲಾಗಿದೆ. ಹನ್ನೆರಡರ ಪೈಕಿ ಎಂಟು ಗೋಪುರಗಳು ಗೌದಿಯ ಕಾಲದಲ್ಲೇ ನಿರ್ಮಿತವಾದವು. ಉಳಿದವನ್ನು ಹಂತಹಂತವಾಗಿ ಸೇರಿಸಲಾಗಿದೆ. ನಿಸರ್ಗದಿಂದ ಪಡೆದ ಧಾತುಗಳೇ ಈ ವಾಸ್ತುಶಿಲ್ಪದ ಜೀವಾಳ. ಭೂಮಿಯಿಂದ ಥಟ್ಟನೆ ಎದ್ದುಬಂದಂತೆ, ಸ್ವರ್ಗವೇ ಕಣ್ಣಮುಂದೆ ತೆರೆದಂತೆ ಈ ರಚನೆ ಮೂರ್ತಗೊಳ್ಳಬೇಕೆನ್ನುವುದು ಅವನ ಆಂತರ್ಯವಾಗಿತ್ತು. ಚರ್ಚಿನ ಹನ್ನೆರಡು ಗೋಪುರಗಳು ಏಸುವಿನ ಹನ್ನೆರಡು ದೂತರನ್ನು ಪ್ರತಿನಿಧಿಸುತ್ತವೆ. ಗೋಪುರದ ತುದಿ ಮದೋನ ಪ್ರತೀಕ. ನಾಲ್ಕು ಸುರುಳಿ ಮೆಟ್ಟಲುಗಳು ನಾಲ್ಕು ಸುವಾರ್ತಾ ಬೋಧಕರ ಪ್ರತೀಕವಾಗಿ ಮೂಡಿಬಂದಿವೆ. ಈ ಭವ್ಯ ಕಲಾಕೃತಿಯನ್ನು ನಿರ್ಮಿಸುವಲ್ಲಿ ತನ್ನೆಲ್ಲಾ ಸಂಪನ್ಮೂಲವನ್ನೂ ಬರಿದು ಮಾಡಿಕೊಂಡ ಗೌದಿ, ಮನೆಮನೆಗೆ ಹೋಗಿ ದೇಣಿಗೆ ಎತ್ತಿದನಂತೆ! ಚರ್ಚಿನ ಮುಂಭಾಗವೇ ಕಣ್ಣಿಗೆ ಕಟ್ಟುವ ಹಾಗೆ ಕಲಾಕೃತಿಯಾಗಿ ಮೈದಳೆದಿದೆ. ನವಗೋಥಿಕ್ ಮತ್ತು ಮೂರಿಶ್ ಶೈಲಿಯಿಂದ ಪ್ರಭಾವಿತನಾದ ಗೌದಿ, ಕಣ್ಣು ಸೆಳೆಯುವ ಬಣ್ಣಗಳನ್ನು ಬಳಸುವುದರಲ್ಲಿ ಪ್ರಖ್ಯಾತ. ಸರಳ ವಸ್ತುಗಳು; ಎಂದರೆ ಶಿಲೆ, ಮರ ಮತ್ತು ಇಟ್ಟಿಗೆಗಳನ್ನು, ಮೆದುಕಬ್ಬಿಣ, ಸೆರಾಮಿಕ್ ಮುಂತಾದವನ್ನು ಬಳಸಿ ಅವನು ನಿರ್ಮಿಸಿರುವ ವಾಸ್ತುಶಿಲ್ಪಗಳು ಇಂದಿಗೂ ಬಾರ್ಸಿಲೋನಾದ ಪ್ರತೀಕವೆನ್ನುವಷ್ಟು ಭವ್ಯವಾಗಿವೆ.
ಇದನ್ನೂ ಓದಿ: ಖ್ಯಾತನಾಮರು ಓಡಾಡಿದ ಮಾರ್ಗದಲ್ಲಿ ಹೆಜ್ಜೆಯಿರಿಸುವ ಪುಳಕ!
ಸಗಾರ್ದ ಫೆಮಿಲಿಯು ಗೌದಿಯ ಅದ್ಭುತ ನಿರ್ಮಾಣ. ಇದು ಪ್ರಾರಂಭವಾದದ್ದು 1882ರಲ್ಲಿ. ವಿಚಿತ್ರವೆಂದರೆ ಆ ಕಟ್ಟಡದ ಕೆಲಸ ನಡೆಯುತ್ತಲೇ ಇದೆ. ಇದೊಂದು ಜಾಗತಿಕ ದಾಖಲೆ. ಅದು ಅಪೂರ್ಣವಾಗಿರಬಹುದು, ಆದರೆ ಸಂದರ್ಶಕರಿಗೇನೂ ಕೊರತೆಯಿಲ್ಲ. ವರ್ಷಕ್ಕೆ ಇಪ್ಪತ್ತು ಲಕ್ಷ ಮಂದಿ ಈ ಸ್ಮಾರಕಕ್ಕೆ ಭೇಟಿ ನೀಡಿ ಗೌದಿಯ ಕಲಾತ್ಮಕತೆಯನ್ನು ಎದೆಯೊಳಗೆ ತುಂಬಿಕೊಳ್ಳುತ್ತಾರೆ. ಅದು ಇನ್ನೂ ಪೂರ್ಣಗೊಂಡಿಲ್ಲ ಎಂಬುದೇ ಪ್ರವಾಸಿಗರಿಗೊಂದು ಆಕರ್ಷಣೆ. ಅಲ್ಲೇ ಗೌದಿಯ ಸಮಾಧಿ ಇದೆ. ಈ ಮಹಾ ವಾಸ್ತುಶಿಲ್ಪಿಯ ಬದುಕನ್ನು ಬಿಂಬಿಸುವ ಮಾಹಿತಿ ಲಭ್ಯ. ಬಾರ್ಸಿಲೋನಾದ ಭವ್ಯ ವಿಹಂಗಮ ನೋಟ ಬಯಸಿದರೆ ಚರ್ಚಿನ ಗೋಪುರದ ಮೇಲೇರಬಹುದು.
ಗೌದಿ ಮತ್ತು ಬಾರ್ಸಿಲೋನಾದ ಹೆಸರು ಒಂದಕ್ಕೊಂದು ಹಾಸುಹೊಕ್ಕಾಗಿವೆ ಎನ್ನುವಷ್ಟು ಅವನ ವಾಸ್ತುಶಿಲ್ಪ ಇಲ್ಲಿ ಪ್ರಸಿದ್ಧ. ಅಂಥ ಇನ್ನೊಂದು ಕಲಾಕೃತಿ "ಕಾಸಾ ಮಿಲ". ಈಚೆಗೆ ಅದು ಲಾ ಪೆದ್ರೆದಾ ಎಂದೇ ಖ್ಯಾತ. ಹೀಗೆಂದರೆ ಕಲ್ಲುಗಣಿ ಎಂದರ್ಥ. ಕಳಪೆ ಎಂಬುದು ಇದಕ್ಕಿರುವ ಇನ್ನೊಂದು ಹೆಸರು. ಸ್ಪ್ಯಾನಿಷರಿಗೆ ಈ ಕಟ್ಟಡ ಇಷ್ಟವಾಗಲಿಲ್ಲವೆಂದು ಈ ಹೆಸರು. ಆದರೆ ಇದೀಗ ಅದು ಪ್ರವಾಸಿ ತಾಣಗಳ ಮುಖ್ಯ ಆಕರ್ಷಣೆಗಳಲ್ಲೊಂದು. ಇಟ್ಟಿಗೆ ಮತ್ತು ಬಣ್ಣ ಬಣ್ಣದ ಹೆಂಚುಗಳನ್ನು ಬಳಸಿ ಗೌದಿ ಅದ್ಭುತ ಕಟ್ಟಡ ನಿರ್ಮಿಸಿದ್ದಾನೆ. ಭವ್ಯ ವಾಸಗೃಹ, ಸಾಮಾನ್ಯ ಜನರು ಇದನ್ನು ಕಟ್ಟಡ ಎನ್ನುವುದಕ್ಕಿಂತ ವಾಸ್ತುಶಿಲ್ಪದ ಮೂರ್ತರೂಪ ಎಂದೇ ಕರೆಯುತ್ತಾರೆ. 1906-10ರ ನಡುವೆ ಇದರ ನಿರ್ಮಾಣ. ಬಾಲ್ಕನಿಯ ತುಂಬ ಮೆದುಕಬ್ಬಿಣ ಬಳಸಿದ್ದಾನೆ. ಕಟ್ಟಡದ ಮುಂಭಾಗವು ವಕ್ರರೇಖೆಯಂತೆ ಜ್ಯಾಮಿತಿಬದ್ಧವಾಗಿ ರೂಪುಗೊಂಡಿದೆ. ಈ ಕಟ್ಟಡ ಆ ದಿನಗಳಲ್ಲೇ ಚರ್ಚೆಗೆ ಗ್ರಾಸವಾಗಿ ಗೌದಿ ದುಂದುವೆಚ್ಚಗಾರ ಎನ್ನುವ ಅಪಕೀರ್ತಿಗೆ ಪಾತ್ರವಾದದ್ದೂ ಉಂಟು. ಈ ಐಷಾರಾಮಿ ಕಟ್ಟಡಕ್ಕೆ ಖ್ಯಾತ ಉದ್ಯಮಿ ಪೀರೆಮಿಲ ಮತ್ತು ಆತನ ಪತ್ನಿ ಧಾರಾಳವಾಗಿ ಹಣಕೊಟ್ಟರು. ಏಕೋ ಏನೋ ಮುಂದೆ ಅಲಕ್ಷ್ಯಕ್ಕೆ ಒಳಗಾಗಿ ನೆಲಕಚ್ಚುವ ಭಯ ಹುಟ್ಟಿಸಿತ್ತು. 1984ರಲ್ಲಿ ಯುನೆಸ್ಕೋ ಅದನ್ನು ವಿಶ್ವ ಪರಂಪರಾ ತಾಣವೆಂದು ಘೋಷಿಸಿ ಪುನರುಜ್ಜೀವನ ಮಾಡಿತು. `ಕಾಶ ದಿ ಕತುಲುನ್ಯ' ಎಂಬ ವಾಣಿಜ್ಯ ಬ್ಯಾಂಕು ಇಡೀ ಕಟ್ಟಡವನ್ನು ಕೊಂಡು, ಹತ್ತು ವರ್ಷ ರಿಪೇರಿ ಮಾಡಿ, 1996ರಿಂದ ಸಾರ್ವಜನಿಕರಿಗಾಗಿ ತೆರೆಯಿತು. ಶ್ರೀಮಂತ ವೈಭವ ಇಲ್ಲಿನ ಪ್ರತಿ ವಿನ್ಯಾಸದಲ್ಲೂ ಎದ್ದು ಕಾಣುತ್ತದೆ. ಏಕೆಂದರೆ ಇದನ್ನು ನಿರ್ಮಿಸಿದ್ದು ಶ್ರೀಮಂತರಿಗೆಂದೇ.

ಸ್ಪೇನಿನಲ್ಲಿ ಮೂವತ್ತೇಳು ವಿಶ್ವ ಪರಂಪರಾ ತಾಣಗಳಿವೆ. ಈ ಪೈಕಿ ಎರಡು ಬಾರ್ಸಿಲೋನಾದಲ್ಲೇ ಇವೆ. ಈ ನಗರದ ಪ್ರಮುಖ ಉದ್ಯಾನವನದಲ್ಲಿ `ಪಾರ್ಕಗ್ಯುಯೆಲ್' ಕೂಡ ಒಂದು. ಇದೂ ಕೂಡ ಗೌದಿಯ ಸೃಜನಶೀಲ ಪರಿಕಲ್ಪನೆಯ ಸಾಕ್ಷಾತ್ಕಾರ. 1890ರಲ್ಲಿ ಕೌಂಟ್ ಗಿಲ್ ಬಾರ್ಸಿಲೋನಾವನ್ನು ಉದ್ಯಾನ ನಗರವನ್ನಾಗಿ ಅಭಿವೃದ್ಧಿಪಡಿಸಲು ಬಯಸಿದ. ಇಟ್ಯಾಲಿಯನ್ ಶೈಲಿಯ ಕಟ್ಟಡಗಳಿಂದ ಉದ್ಯಾನವನ ಕಂಗೊಳಿಸಬೇಕೆಂದು ಅವನ ಮನೋಭಿಲಾಷೆ. ಆದರೆ ಗೌದಿಯ ಪರಿಕಲ್ಪನೆ ಈ ಉದ್ಯಾನವನವನ್ನು ಇನ್ನೂ ಎತ್ತರಕ್ಕೇರಿಸಿತು. ಸೆರಾಮಿಕ್ಕಿನಿಂದ ಮಾಡಿದ ಪ್ರಾಣಿಗಳ ಪುತ್ಥಳಿ, ಪಾರ್ಕಿನ ಕಲಾತ್ಮಕ ಪ್ರವೇಶದ್ವಾರ, ಜಗತ್ತಿನ ಅತಿ ಉದ್ದನೆಯ ವಿವಿಧ ವಿನ್ಯಾಸದ ಕಲ್ಲುಬೆಂಚು ಇಲ್ಲಿನ ಪ್ರಮುಖ ಆಕರ್ಷಣೆಗಳು. ಗೌದಿ ಇಪ್ಪತ್ತು ವರ್ಷಗಳ ಕಾಲ ತನ್ನ ಕಚೇರಿಯನ್ನು ಇಲ್ಲಿ ನಡೆಸುತ್ತಿದ್ದ. ಇಲ್ಲಿನ ನೂರು ಕಂಬಗಳ ಕೊಠಡಿ, ಗೌದಿಯ ಶುದ್ಧ ಕಲೆಗೆ ಸಾಕ್ಷಿಯಾಗಿ ನಿಂತಿದೆ. ಮನಸ್ಸಿಗೆ ಹೊಳದಿದ್ದನ್ನೆಲ್ಲ ಕಲೆಯಾಗಿ ಕಲ್ಪಿಸುವ ಜಾಣ್ಮೆ ಅವನದ್ದು. ಸಗಾರ್ದ ಫೆಮಿಲಿಯಾಕ್ಕೆ ಟಿಕೆಟ್ ಪಡೆದರೆ ಇಲ್ಲಿನ ಪ್ರವೇಶಕ್ಕೂ ರಿಯಾಯತಿ ಉಂಟು. ಈ ಉದ್ಯಾನವನವೊಂದನ್ನು ಸುತ್ತಲೇ ಕನಿಷ್ಠ ಒಂದು ದಿನವಾದರೂ ಬೇಕು. `ಆರ್ಕ್ ದಿ ತ್ರಿನೋಫ್' ಎನ್ನುವುದು ಮತ್ತೊಂದು ಭವ್ಯ, ಸ್ವಾಗತ ಕಟ್ಟಡ. 1888ರಲ್ಲಿ `ಯೂನಿವರ್ಸಲ್ ಎಕ್ಸ್ಪೊದಸಿಷನ್' ಕಾರ್ಯಕ್ರಮದ ಅಂಗವಾಗಿ `ಪಾರ್ಕ್ ದಿ ಲಾ ಸಿಯಥಾದೆಲ್ಲ' ಪ್ರವೇಶದ್ವಾರವಾಗಿ ಇದನ್ನು ನಿರ್ಮಿಸಲಾಯಿತು. ಇದು ನಮ್ಮ ಇಂಡಿಯಾ ಗೇಟನ್ನು ನೆನಪಿಸುತ್ತದೆ. ಒಳಹೋದರೆ ಪುಟ್ಟ ಸರೋವರ, ಚಿಮ್ಮುವ ಕಾರಂಜಿಗಳು, ಜಲಪಾತ, ಪುಟ್ಟ ಕಾಡು, ಸುತ್ತ ಸ್ಥಳೀಯ ಅಪರೂಪದ ಸಸ್ಯಗಳು, ನಕ್ಷತ್ರಾಕಾರದ ಮಿಲಿಟರಿ ಕೋಟೆ ಕಾಣುತ್ತವೆ. ಈ ಕೋಟೆ ಮುಂದೆ ಅತಿಕ್ರಮಣಕಾರರ ವಶವಾಯಿತು. ಆ ಹೋರಾಟದಲ್ಲಿ ಸ್ಪ್ಯಾನಿಷರು ಸೋತರು ಎಂದೇ ಈಗಲೂ ಅದನ್ನು ಸೋಲಿನ ಸಂಕೇತವೆಂದೇ ಭಾವಿಸುತ್ತಾರೆ. ನೆಪೋಲಿಯನ್ನನ ಆಡಳಿತದ ಕಾಲದಲ್ಲಿ ಅದು ಕಾರಾಗೃಹವಾಗಿ ಮಾರ್ಪಟ್ಟಿತು. 1878ರಲ್ಲಿ ಜನರಲ್ ಪ್ರಿಮ್ ಎಂಬಾತ ಈ ಕೋಟೆಯನ್ನು ಹಾಳುಗೆಡವಿದ. ಅಲ್ಲಿ ಅವನ ಪ್ರತಿಮೆ ಬಂತು. ಈಗ ಆ ಜಾಗ ವಸ್ತುಪ್ರದರ್ಶನಕ್ಕಾಗಿ ಬಳಕೆಯಾಗುತ್ತಿದೆ. ವೈವಿಧ್ಯಮಯ ಕಟ್ಟಡಗಳು ಎದ್ದಿವೆ. ತರುಣ ಗೌದಿಯ ಕೊಡುಗೆಯೂ ಇದರಲ್ಲಿದೆ. ಇಲ್ಲಿನ ತೋಟ ಮತ್ತು ಸುಂದರ ಕಾರಂಜಿ ಅವನ ಕಲ್ಪನೆ. ಇದನ್ನು ನೋಡಿದಾಗಲೆಲ್ಲ ನನಗೆ ಲಾಲ್ ಬಾಗ್ ನೆನಪಾಗುತ್ತದೆ. ನಗರದ ಏಕತಾನತೆಯನ್ನು ಕಳೆಯಲು ಇಂಥ ಹತ್ತಾರು ಪಾರ್ಕುಗಳು ಬಾರ್ಸಿಲೋನದಲ್ಲಿವೆ. ಈ ಉದ್ಯಾನವನದ ಮತ್ತೊಂದು ಆಕರ್ಷಣೆ ಬೃಹತ್ ದೇಹಿಯಾದ ಆಫ್ರಿಕದ ಆನೆಯ ಕಲಾಕೃತಿ. ನಾವೆಷ್ಟು ಕುಬ್ಜರು ಎನ್ನುವದನ್ನು ಇಲ್ಲಿ ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಳಬಹುದು.
ಸ್ಪೇನಿನ ಯಾವ ಭಾಗಕ್ಕೆ ಹೋಗಲಿ, ತಮ್ಮ ದೇಸೀ ಪರಂಪರೆರನ್ನು ಉಳಿಸಿಕೊಳ್ಳುವ ಪ್ರಯತ್ನ ಮ್ಯೂಸಿಯಂಗಳಲ್ಲಿ ಎದ್ದು ಕಾಣುತ್ತದೆ. ಪಿಕಾಸೋ ಮ್ಯೂಸಿಯಂ ಅಂತಹ ಆಕರ್ಷಣೆಗಳಲ್ಲೊಂದು. ವಿಶೇಷವೆಂದರೆ ಪಿಕಾಸೋ ತರುಣನಾಗಿದ್ದಾಗ ರಚಿಸಿದ ಕಲಾಕೃತಿಗಳಿಂದ ತೊಡಗಿ ಕೊನೆಯ ಕುಂಚದವರೆಗೂ ಕಲಾಕೃತಿಗಳನ್ನು ಅನುಕ್ರಮವಾಗಿ ಜೋಡಿಸಲಾಗಿದೆ.
ಬಾರ್ಸಿಲೋನಾ ಸಪಾಟು ನೆಲವಲ್ಲ. ಏರಿಳಿತದ ಲಕ್ಷಣ ನಗರಕ್ಕೆ ವಿಶಿಷ್ಟ ಕಳೆಕೊಟ್ಟಿದೆ. ಈಶಾನ್ಯ ಭಾರತದಲ್ಲಿದ್ದವರಿಗೆ ಶಿಲ್ಲಾಂಗ್ ನೆನಪಿಗೆ ತರಬಹುದು. ಬೆಂಗಳೂರಿನವರಿಗೆ, ಮಹಾಲಕ್ಷ್ಮೀ ಬಡಾವಣೆಯೋ, ನಾಗರಭಾವಿಯೋ ನೆನಪಿಗೆ ಬರಬಹುದು. ಮೌಂಟ್ ಜ್ಯೂಯಿಕ್ ಎಂಬುದು ಪ್ರಸಿದ್ಧ ಗುಡ್ಡ. ಯಹೂದಿಗಳ ಪುರಾತನ ಸ್ಮಶಾನದಿಂದಾಗಿ ಈ ಗುಡ್ಡ ಹೆಸರಿಗೆ ಬಂದಿತು. ಈಗ ಅದೂ ಕೂಡ ಪ್ರವಾಸಿ ನಕ್ಷೆಯಲ್ಲಿ ಸ್ಥಾನ ಗಿಟ್ಟಿಸಿದೆ. 1929ರಲ್ಲಿ ವರ್ಲ್ಡ್ ಫೇರ್ ನಡೆದಾಗ ಈ ಜಾಗ ಮತ್ತಷ್ಟು ಪ್ರಸಿದ್ಧಿ ಪಡೆಯಿತು. 1992ರ ಒಲಪಿಂಕ್ಸ್ ಈ ಜಾಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟಿತು. ಈಗಲೂ ಆ ಹಳೆಯ ವೈಭವವನ್ನು ಕಣ್ಣ ಮುಂದೆ ನಿಲ್ಲಿಸುವ ಒಲಂಪಿಕ್ ಜ್ಯೋತಿ ಬೆಳಗಿಸಿದ ಸ್ತಂಭವಿದೆ, ಅತಿಥಿಗಳಿಗೆಂದೇ ನಿರ್ಮಿಸಿದ ಸ್ಪ್ಯಾನಿಷ್ ಹಳ್ಳಿಗಳ ಸಮೂಹವಿದೆ. ಇವು ಸ್ಪ್ಯಾನಿಷರ ಕಟ್ಟಡಗಳ ಅಭಿರುಚಿಯ ಸಂಕೇತವಾಗಿ ನಿಂತಿವೆ. ಇಲ್ಲೇ ಕಲಾವಿದ ಮಿರೋ ರಚಿಸಿದ ಸ್ತ್ರೀ ಮತ್ತು ಹಕ್ಕಿ ಎಂಬ ಕಾಮದ ಸಂಕೇತದ ಭವ್ಯ ಕಲಾಕೃತಿ ಇದೆ. ಇಡೀ ಬೆಟ್ಟದ ತುಂಬ ಶೃಂಗಾರಗೊಂಡಂತೆ ಕಾರಂಜಿಗಳ ಲಾಸ್ಯವಿದೆ. ಭಾನುವಾರ ಬಂತೆಂದರೆ ಈ ಗುಡ್ಡದ ತುಂಬ ಪ್ರವಾಸಿಗಳ ದಂಡು. ಒಲಂಪಿಕ್ ಸ್ಟೇಡಿಯಂ ಮತ್ತು ಈಜುಕೊಳವಿರುವುದು ಬೆಟ್ಟದ ಪಾದದಲ್ಲಿ. ಬಾರ್ಸಿಲೋನಾದ ಸ್ಪ್ಯಾನಿಷ್ ಚಾಳಿಯನ್ನು ನೆನಪಿಸುವ, ಆದರೆ ಈಗ ಕೇವಲ ಸ್ಮಾರಕದಂತಿರುವ ಬುಲ್ ರಿಂಗ್ ಕೂಡ ಇಲ್ಲಿದೆ.