Saturday, April 25, 2026
Saturday, April 25, 2026

ವಿದ್ಯಾರ್ಥಿಗಳ ಭವಿಷ್ಯ ಬಂಗಾರವಾಗಿಸುತ್ತಿರುವ ವಿದ್ಯಾಸಂಸ್ಥೆ!

ಹಸಿರು ತುಂಬಿರುವ ಸಣ್ಣ ಗ್ರಾಮವೊಂದರಲ್ಲಿ ತಲೆ ಎತ್ತಿ ನಿಂತಿರುವ ಎಕ್ಸೆಲ್‌ ಪದವಿ ಪೂರ್ವ ಕಾಲೇಜಿನ ಕ್ಯಾಂಪಸ್‌ ಪ್ರವೇಶಿಸುವಾಗಲೇ ಹೊಸ ಪ್ರಪಂಚಕ್ಕೆ ಕಾಲಿಟ್ಟ ಅನುಭವವಾಗುತ್ತದೆ. ಅದಕ್ಕೆ ಸಣ್ಣ ಉದಾಹರಣೆ ಎಂದರೆ ಪ್ರವೇಶ ದ್ವಾರದ ಬಳಿಯೇ ಇರುವ ಪುಟ್ಟ ಗೋಶಾಲೆ. ಪ್ರಕೃತಿಯ ಮಡಿಲಲ್ಲಿ ಕಲಿತ ವಿದ್ಯೆ ಜೀವನ ನೀಡುತ್ತದೆ ಎಂಬುದು ಈ ಶಿಕ್ಷಣ ಸಂಸ್ಥೆಯ ನಂಬಿಕೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಬಹಳ ಸಮಯ ಬೇಕಾಗುವುದಿಲ್ಲ.

ಬೆಳ್ತಂಗಡಿಯ ಗುರುವಾಯನಕೆರೆಯ ಗ್ರಾಮದಲ್ಲಿರುವ ಎಕ್ಸೆಲ್ ಪದವಿ ಪೂರ್ವ ಕಾಲೇಜು, ಕರ್ನಾಟಕದ ಉದಯೋನ್ಮುಖ ಶಿಕ್ಷಣ ಸಂಸ್ಥೆಗಳಲ್ಲೊಂದು. ವಿಶೇಷವಾಗಿ ವಿಜ್ಞಾನ ವಿಭಾಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಈ ಸಂಸ್ಥೆಯು ಶೈಕ್ಷಣಿಕ ಶ್ರೇಷ್ಠತೆಯ ಮೂಲಕ ತನ್ನದೇ ಆದ ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡಿದೆ. ಸುಮಂತ್‌ ಕುಮಾರ್‌ ಜೈನ್‌ ಚೇರ್ಮನ್‌ ಆಗಿರುವ ಇನ್ಫಿನಿಟಿ ಲರ್ನಿಂಗ್ ಫೌಂಡೇಶನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಾಲೇಜು, ಮಂಡಳಿ ಮಟ್ಟದ ಶಿಕ್ಷಣ ಮತ್ತು ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳ ತರಬೇತಿಯನ್ನು ಸಮರ್ಥವಾಗಿ ಸಂಯೋಜಿಸುವ ಗುರಿಯನ್ನು ಹೊಂದಿದೆ. ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 590ಕ್ಕೂ ಅಧಿಕ ಅಂಕ ಪಡೆದ 52 ವಿದ್ಯಾರ್ಥಿಗಳು ಎಕ್ಸೆಲ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು. ಇಂಥದ್ದೊಂದು ಐತಿಹಾಸಿಕ ಸಾಧನೆ ಮಾಡಿದ ಹೆಗ್ಗಳಿಕೆ ಈ ಸಂಸ್ಥೆಗೆ ಸಲ್ಲುತ್ತದೆ.

ಇದನ್ನೂ ಓದಿ: ಎನ್.ಆರ್. ಪುರ ಸೇತುವೆ... ಮಲೆನಾಡಿನ ಸಂಪರ್ಕ ಕ್ರಾಂತಿ

ಹಿನ್ನೆಲೆ ಮತ್ತು ವಿಕಾಸ

ಉಜಿರೆಯಲ್ಲಿ 2016 ರಲ್ಲಿ ಪ್ರಾರಂಭವಾದ 'ಎಕ್ಸೆಲ್ ಕೋಚಿಂಗ್ ಸೆಂಟರ್'ನ ವಿಸ್ತರಣೆಯಾಗಿ ಈ ಕಾಲೇಜನ್ನು ಕಲ್ಪಿಸಲಾಯಿತು. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಬಲವಾದ ಅಡಿಪಾಯವನ್ನು ಒದಗಿಸುವುದು ಇದರ ಮೂಲ ಉದ್ದೇಶವಾಗಿತ್ತು. ಸುಮಾರು 2020ರಲ್ಲಿ ಇದನ್ನು ಪೂರ್ಣ ಪ್ರಮಾಣದ ವಸತಿ ಮತ್ತು ಅರೆ-ವಸತಿ ಪದವಿ ಪೂರ್ವ ಕಾಲೇಜನ್ನಾಗಿ ಔಪಚಾರಿಕವಾಗಿ ಸ್ಥಾಪಿಸಲಾಯಿತು. ಕೋಚಿಂಗ್ ಸೆಂಟರ್‌ನಿಂದ ಪೂರ್ಣ ಪ್ರಮಾಣದ ಕಾಲೇಜಾಗಿ ಈ ಪರಿವರ್ತನೆಯು, ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ಪಿಯುಸಿ ಪಠ್ಯಕ್ರಮ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಶಿಸ್ತುಬದ್ಧವಾಗಿ ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಐದಾರು ವರ್ಷಗಳ ಹಿಂದೆ ಒಂದು ಕಟ್ಟಡದಿಂದ ಶುರುವಾಗಿ ಈಗ ಎರಡು ಕಟ್ಟಡಗಳಾಗಿವೆ. ಇನ್ನೂ ಹೆಚ್ಚಿನ ವಿಸ್ತಾರ ಮಾಡುವ ಉದ್ದೇಶ ಮತ್ತು ಅವಶ್ಯಕತೆ ಎರಡೂ ಈ ಸಂಸ್ಥೆಗಿದೆ. ಏಕೆಂದರೆ ಈಗಾಗಲೇ 5000ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

Untitled design - 2026-04-24T194113.839

ಸಂಯೋಜಿತ ಶಿಕ್ಷಣ ಮಾದರಿ

ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಒಂದು ವಿಶಿಷ್ಟ ಗುಣವೆಂದರೆ ಅದರ ಸಂಯೋಜಿತ ಶಿಕ್ಷಣ ಪದ್ಧತಿ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪಠ್ಯಕ್ರಮದೊಂದಿಗೆ, ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ NEET, JEE, CET ಮತ್ತು NDA ಗಾಗಿ ಇಲ್ಲಿ ತರಬೇತಿ ನೀಡಲಾಗುತ್ತದೆ. ಈ ದ್ವಿಮುಖ ಶಿಕ್ಷಣ ಮಾದರಿಯು ವಿದ್ಯಾರ್ಥಿಗಳು ಕೇವಲ ಬೋರ್ಡ್ ಪರೀಕ್ಷೆಗಳಲ್ಲಿ ಮಾತ್ರವಲ್ಲದೆ, ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಲ್ಲೂ ಯಶಸ್ವಿಯಾಗುವಂತೆ ಮಾಡುತ್ತದೆ. ಪರಿಕಲ್ಪನಾ ಆಧಾರಿತ ಕಲಿಕೆ, ನಿರಂತರ ಅಭ್ಯಾಸ ಮತ್ತು ಮೌಲ್ಯಮಾಪನವು ಈ ಸಂಸ್ಥೆಯ ಶೈಕ್ಷಣಿಕ ಮಾದರಿಯ ಮೂಲ ಸ್ತಂಭಗಳಾಗಿವೆ.

ಉತ್ತಮ ಸಾಧನೆ ಮತ್ತು ಫಲಿತಾಂಶಗಳು

ಯಾವುದೇ ಸಾಧನೆಯನ್ನು ಒಮ್ಮೆ ಮಾಡಬಹುದು. ಆದರೆ, ನಿರಂತರವಾಗಿ ಮಾಡುವುದು ಸವಾಲಿನ ಕೆಲಸ. ಅಂಥದ್ದರಲ್ಲಿ ಪ್ರತಿ ವರ್ಷ ಈ ಸಂಸ್ಥೆಯಿಂದ ಸಾಧಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿ ವರ್ಷ ಹಲವಾರು ವಿದ್ಯಾರ್ಥಿಗಳು JEE ಮತ್ತು NEET ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಅರ್ಹತೆ ಪಡೆಯುತ್ತಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು JEE ಮೇನ್ಸ್‌ನಲ್ಲಿ 99.3 ಪರ್ಸೆಂಟೈಲ್ ಮತ್ತು NEET ನಲ್ಲಿ 692 ಅಂಕಗಳವರೆಗೂ ಸಾಧನೆ ಮಾಡಿದ್ದಾರೆ. ಈ ಅತ್ಯುತ್ತಮ ಫಲಿತಾಂಶಗಳು ಕಾಲೇಜಿನ ಕಠಿಣ ಶೈಕ್ಷಣಿಕ ತರಬೇತಿ ಮತ್ತು ಮಾರ್ಗದರ್ಶನ ವ್ಯವಸ್ಥೆಗೆ ಸಾಕ್ಷಿಯಾಗಿವೆ. ಈ ಸಾಧನೆಗಳ ಮೂಲಕ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತಿದೆ.

ಮೂಲಸೌಕರ್ಯ ಮತ್ತು ವಸತಿ ಸೌಲಭ್ಯಗಳು

ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವಸತಿ ಅಗತ್ಯಗಳನ್ನು ಪೂರೈಸಲು ಕಾಲೇಜು ಸುಸಜ್ಜಿತ ಮೂಲಸೌಕರ್ಯವನ್ನು ಹೊಂದಿದೆ. ಕ್ಯಾಂಪಸ್‌ನಲ್ಲಿ ಆಧುನಿಕ ಪ್ರಯೋಗಾಲಯಗಳು, ಸಮಗ್ರ ಗ್ರಂಥಾಲಯ ಮತ್ತು ಡಿಜಿಟಲ್ ತರಗತಿ ಕೋಣೆಗಳಿವೆ. ಇದು ಸಂವಾದಾತ್ಮಕ ಕಲಿಕೆಯನ್ನು ಉತ್ತೇಜಿಸುತ್ತದೆ. ಹೆಚ್ಚುವರಿಯಾಗಿ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಇಲ್ಲಿ ಶಿಸ್ತುಬದ್ಧ ದಿನಚರಿ, ನೈರ್ಮಲ್ಯಯುತ ಆಹಾರ ಮತ್ತು ಸುರಕ್ಷಿತ ವಾತಾವರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳ ದಿನಚರಿ ಬೆಳಗ್ಗೆ 7 ರಿಂದ ಶುರುವಾದರೆ ರಾತ್ರಿ ಹನ್ನೆರಡರವರೆಗೂ ಹೋಗುತ್ತದೆ. ಹಾಗಂತ ಇಲ್ಲಿ ಯಾರ ಮೇಲೂ ಒತ್ತಡ ಹಾಕುವುದಿಲ್ಲ. ಸೂಕ್ತವಾದ ವಿರಾಮ ಸಮಯ, ಸಂಜೆ ಒಂದು ಗಂಟೆ ಆಟದ ಸಮಯ ಕೂಡ ಇರುತ್ತದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಅನ್ನ, ಚಪಾತಿ ಸಾರು, ಸಾಂಬಾರ್‌ ಊಟ, ಸಂಜೆ ಬನ್ಸ್‌, ಮ್ಯಾಗಿ, ಸಮೋಸ ಹೀಗೆ ವಿಶೇಷ ಸ್ನ್ಯಾಕ್ಸ್‌, ರಾತ್ರಿ ಊಟ ಕೂಡ ಇರುತ್ತದೆ. ವೈದ್ಯರು ಬಂದು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡುತ್ತಾರೆ, ಹೆಣ್ಣುಮಕ್ಕಳಿಗೆ ತಿಂಗಳ ರಜೆಯಂದು ಕಷ್ಟವಾದರೆ ವಿಶ್ರಾಂತಿಗೆಂದು ಪ್ರತ್ಯೇಕ ಕೋಣೆಯಿದೆ, ವಿದ್ಯಾರ್ಥಿಗಳು ಮನೆಯಿಂದ ದೂರವಿದ್ದಾರೆ ಎನ್ನುವುದನ್ನು ಅರಿತು ಮನೆಯ ವಾತಾವರಣದ ಜತೆಗೆ ಕಠಿಣ ಶಿಕ್ಷಣಕ್ರಮವನ್ನೂ ರೂಢಿಸಿಕೊಳ್ಳಲಾಗಿದೆ. ವಸತಿ ಮಾದರಿಯು ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳಿಗೆ ಏಕಾಗ್ರತೆ ಕಾಪಾಡಿಕೊಳ್ಳಲು ಮತ್ತು ಸಮಯದ ಸದುಪಯೋಗ ಪಡಿಸಿಕೊಳ್ಳಲು ನೆರವಾಗುತ್ತದೆ. ವಿಶೇಷ ಎಂದರೆ ಇಲ್ಲಿನ ಶಿಕ್ಷಕರೂ ರಾತ್ರಿಯವರೆಗೆ ಮಕ್ಕಳ ಜಿಜ್ಞಾಸೆಗಳಿಗೆ ಉತ್ತರಿಸಲು ಲಭ್ಯವಿರುತ್ತಾರೆ.

Untitled design - 2026-04-24T202337.035

ಶೈಕ್ಷಣಿಕ ಬೆಂಬಲ ವ್ಯವಸ್ಥೆ

ಕಲಿಕೆಯನ್ನು ಬಲಪಡಿಸಲು ಕಾಲೇಜು ದೈನಂದಿನ ಅಭ್ಯಾಸ ಪತ್ರಿಕೆಗಳು, ನಿಯಮಿತ ಪರೀಕ್ಷೆಗಳು ಮತ್ತು ಅನುಮಾನ ಪರಿಹಾರ ಸೆಷನ್‌ಗಳನ್ನು ನಡೆಸುತ್ತದೆ. ಇಲ್ಲಿನ ಅಧ್ಯಾಪಕರು ಪಿಯುಸಿ ಪಠ್ಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳೆರಡರಲ್ಲೂ ಅಪಾರ ಅನುಭವ ಹೊಂದಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೆ ವೈಯಕ್ತಿಕ ಗಮನಹರಿಸುವ ಮೂಲಕ ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಿ, ಅಗತ್ಯವಿರುವ ಸುಧಾರಣೆಗೆ ಮಾರ್ಗದರ್ಶನ ನೀಡಲಾಗುತ್ತದೆ. ಕೇವಲ ಅಂಕಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೂ ಎಕ್ಸೆಲ್ ಕಾಲೇಜು ಒತ್ತು ನೀಡುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಸೆಮಿನಾರ್‌ಗಳು, ಕಾರ್ಯಾಗಾರಗಳು ಮತ್ತು ವೃತ್ತಿ ಮಾರ್ಗದರ್ಶನ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ದೇಶಪ್ರೇಮ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಲು ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತದೆ. ಮುಂದಿನ ವೃತ್ತಿಜೀವನಕ್ಕೆ ಸಿದ್ಧರಾಗಲು ಪೂರಕವಾದ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗಿದೆ.

ತಂತ್ರಜ್ಞಾನದ ಬಳಕೆ

ಡಿಜಿಟಲ್ ಯುಗಕ್ಕೆ ತಕ್ಕಂತೆ ಕಾಲೇಜು ತನ್ನದೇ ಆದ ಮೊಬೈಲ್ ಅಪ್ಲಿಕೇಶನ್ ಹಾಗೂ ಟ್ಯಾಬ್‌ ಅನ್ನು ಹೊಂದಿದೆ. ಇದರ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ನಿತ್ಯದ ಅಪ್‌ಡೇಟ್ಸ್‌, ಅಧ್ಯಯನ ಸಾಮಗ್ರಿಗಳು ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಸುಲಭವಾಗಿ ಪಡೆಯಬಹುದು. ಇದು ಶೈಕ್ಷಣಿಕ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಂತ ಇಲ್ಲಿ ಯಾರೂ ಡಿಜಿಟಲ್‌ ತಂತ್ರಜ್ಞಾನದ ಮೇಲೆ ಅವಲಂಬಿತರಾಗಿಲ್ಲ. ಇಲ್ಲಿನ ವಿದ್ಯಾರ್ಥಿಗಳು ಫೋನ್‌ ಬಳಸುವಂತಿಲ್ಲ. ಆದರೆ, ಪೋಷಕರ ಜತೆಗೆ ಮಾತನಾಡಲು ಕಾಯಿನ್‌ ಬೂತ್‌ ರೀತಿಯ ವ್ಯವಸ್ಥೆ ಮಾಡಲಾಗಿದೆ.

ಪ್ರವೇಶ ಪ್ರಕ್ರಿಯೆ

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರವೇಶವು ಸಂಪೂರ್ಣವಾಗಿ ಪ್ರತಿಭೆಯ ಆಧಾರದ ಮೇಲೆ ನಡೆಯುತ್ತದೆ. ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರಾಗಿರುತ್ತಾರೆ. ಕಠಿಣ ಶೈಕ್ಷಣಿಕ ವಾತಾವರಣಕ್ಕೆ ಒಗ್ಗಿಕೊಳ್ಳುವ ಮತ್ತು ಕಲಿಯುವ ಹಂಬಲವಿರುವ ವಿದ್ಯಾರ್ಥಿಗಳನ್ನು ಸಂಸ್ಥೆಯು ಸ್ವಾಗತಿಸುತ್ತದೆ. ಒಂದು ವೇಳೆ ಬಹಳ ಉತ್ತಮ ಅಂಕಗಳು ಬಂದಿದ್ದು, ಫೀಸ್‌ ಕಟ್ಟಲು ಅನುಕೂಲ ಇಲ್ಲದಿದ್ದರೆ ಅವರಿಗೆ ಉಚಿತ ಶಿಕ್ಷಣ ಕೂಡ ನೀಡಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜು ಸಾಂಪ್ರದಾಯಿಕ ಶಿಕ್ಷಣ ಮತ್ತು ಆಧುನಿಕ ಸ್ಪರ್ಧಾತ್ಮಕ ತರಬೇತಿಯನ್ನು ಸಮತೋಲನಗೊಳಿಸಿದ ಒಂದು ವಿಶಿಷ್ಟ ಸಂಸ್ಥೆ. ಅನುಭವಿ ಅಧ್ಯಾಪಕರು ಮತ್ತು ವಸತಿ ಸೌಲಭ್ಯಗಳಿಂದಾಗಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಇದು ನೆಚ್ಚಿನ ತಾಣವಾಗಿದೆ. ಶೈಕ್ಷಣಿಕ ಶ್ರೇಷ್ಠತೆಯೊಂದಿಗೆ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಈ ಕಾಲೇಜು ಕರ್ನಾಟಕದ ಶೈಕ್ಷಣಿಕ ಭೂಪಟದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ.

Untitled design - 2026-04-24T194106.356

ನಮ್ಮ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ನೀಡುವ ಶಿಕ್ಷಣದ ಕ್ರಮ ಕಠಿಣ ಅನಿಸಬಹುದು. ಆದರೆ, ಮಕ್ಕಳಿಗೆ ಅಗತ್ಯವಿರುವ ವಿದ್ಯಾಭ್ಯಾಸ, ಜನರಲ್‌ ನಾಲೆಜ್‌, ಸಂಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಸ್ಕೃತಿಗಳ ಅರಿವು ಕೂಡ ಇಲ್ಲಿ ಮೂಡಿಸಲಾಗುತ್ತದೆ. ಶಿಕ್ಷಣ ಎಂಬ ಮರದ ಬೇರು ಕಹಿಯಾಗಿಯೇ ಇರುತ್ತದೆ. ಆದರೆ, ಅದು ನೀಡುವ ಫಲ ಯಾವತ್ತೂ ಸಿಹಿಯಾಗಿರುತ್ತದೆ. ಮನೆಯಲ್ಲಿ ನೋಡಿಕೊಳ್ಳುವಷ್ಟೇ ಕಾಳಜಿಯಲ್ಲಿ ಇಲ್ಲಿನ ಮಕ್ಕಳನ್ನು ಆರೈಕೆ ಮಾಡಲಾಗುತ್ತದೆ.

- ಸುಮಂತ್‌ ಕುಮಾರ್‌ ಜೈನ್‌

ಚೇರ್ಮನ್‌, ಎಕ್ಸೆಲ್‌ ಶಿಕ್ಷಣ ಸಂಸ್ಥೆ

ಸಾಂಪ್ರದಾಯಿಕ ಗುರು-ಶಿಷ್ಯ ಪರಂಪರೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಎಷ್ಟು ಬೇಕೋ ಅಷ್ಟು ಡಿಜಿಟಲ್‌ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಾ ಶಿಕ್ಷಣ ನೀಡುತ್ತಿರುವ ಕಾರಣಕ್ಕೆ ಸತತವಾಗಿ ಯಶಸ್ಸು ಕಾಣಲು ಸಾಧ್ಯವಾಗುತ್ತಿದೆ. ಇಲ್ಲಿ ಶಿಕ್ಷಣ ಎಂದರೆ ಕೇವಲ ಪಾಠ ಮಾಡುವುದಷ್ಟೇ ಅಲ್ಲ, ವಿದ್ಯಾರ್ಥಿಗಳ ಜತೆಗೆ ಉತ್ತಮ ಸಂಬಂಧ ಕೂಡ ಇಟ್ಟುಕೊಂಡಿದ್ದೇವೆ. ಕಾಲೇಜಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸುಸಜ್ಜಿತ ವ್ಯವಸ್ಥೆಗಳು ಇಲ್ಲಿವೆ. ನಿತ್ಯದ ದಿನಚರಿಯನ್ನು ಇಲ್ಲಿ ಕಟ್ಟುನಿಟ್ಟಾಗಿ ಅನುಸರಿಸುವುದರಿಂದ ಮಕ್ಕಳಲ್ಲಿ ಶಿಸ್ತನ್ನು ರೂಢಿಸಿಕೊಳ್ಳಲು ಅನುಕೂಲವಾಗುತ್ತದೆ. ಈ ಎಲ್ಲ ಕಾರಣಗಳಿಂದ ಎಕ್ಸೆಲ್‌ ಈಗಲೂ ಹೊಸ ಸಾಧನೆ ಮಾಡಲು ಸಾಧ್ಯವಾಗುತ್ತಿದೆ. ಹೀಗಾಗಿ ಉಳಿದ ಶಿಕ್ಷಣ ಸಂಸ್ಥೆಗಳಿಗಿಂತಲೂ ವಿಭಿನ್ನವಾಗಿ ಎಕ್ಸೆಲ್‌ ನಿಲ್ಲುತ್ತದೆ.

- ಪ್ರಜ್ವಲ್‌ ಕಜೆ, ಪ್ರಾಂಶುಪಾಲರು

ಈ ಬಾರಿ ಪಿಯುಸಿ ಎಕ್ಸಾಂ ಅಲ್ಲಿ 595 ಅಂಕ ಪಡೆದಿದ್ದೇನೆ. ಜೆಇಇ ಮೇನ್‌ ಅಲ್ಲಿ 99.3 ಪರ್ಸಂಟೇಜ್‌ ಪಡೆದಿದ್ದೇನೆ. ಇದರ ಶ್ರೇಯಸ್ಸು ನನ್ನ ಪೋಷಕರು ಹಾಗೂ ಎಕ್ಸೆಲ್‌ ಕಾಲೇಜಿಗೆ ಸಲ್ಲುತ್ತದೆ. ಇಲ್ಲಿನ ಮ್ಯಾನೇಜ್‌ಮೆಂಟ್‌, ಶಿಕ್ಷಕರು ನನಗೆ ಬಹಳ ಬೆಂಬಲ ನೀಡಿದ್ದಾರೆ. ಯಾವುದೇ ಸಂದರ್ಭದಲ್ಲಿ ನನಗೆ ಯಾವುದೇ ವಿಷಯ ಅರ್ಥ ಆಗಿಲ್ಲ ಎಂದರೆ ಪ್ರೀತಿಯಿಂದ ಹೇಳಿಕೊಡುತ್ತಿದ್ದರು. ಪ್ರತಿ ವಾರ ಡೌಟ್‌ ಕ್ಲಾರಿಫಿಕೇಶನ್‌ ಸೆಶನ್‌ ಇರುತ್ತಿತ್ತು. ಚೇರ್‌ಮನ್‌, ಪ್ರಿನ್ಸಿಪಾಲ್‌ ನನಗೆ ಪ್ರೋತ್ಸಾಹ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.

- ಅಕ್ಷಯ್‌ ಎ, ವಿದ್ಯಾರ್ಥಿ (ಸ್ಟೇಟ್‌ 4ನೇ ರ್ಯಾಂಕ್‌)

ಈ ಕಾಲೇಜಿನಲ್ಲಿ ಉತ್ತಮ ಫ್ಯಾಕಲ್ಟಿಗಳಿದ್ದಾರೆ. ಸಂಜೆ ಎಲ್ಲ ತರಗತಿ ಮುಗಿದ ಮೇಲೆ ವಿಶೇಷವಾಗಿ ಡೌಟ್ಸ್‌ ಬಗೆಹರಿಸಲೆಂದೇ ನಮ್ಮ ಜತೆಗೆ ಕುಳಿತು ಆತ್ಮೀಯವಾಗಿ ವಿವರಿಸುತ್ತಾರೆ. ದಿನಕ್ಕೆ ನಾಲ್ಕು ಬಾರಿ ಪೌಷ್ಟಿಕ ಆಹಾರ ಸಿಗುತ್ತದೆ. ಯಾವುದೇ ವ್ಯವಸ್ಥೆಗೆ ಕೊರತೆ ಆಗದಂತೆ ಇಲ್ಲಿನ ಸಿಬ್ಬಂದಿ ಕಾಳಜಿವಹಿಸುತ್ತಾರೆ. ಮಾನಸಿಕವಾಗಿ ಕುಗ್ಗಿದರೆ ಪ್ರೋತ್ಸಾಹ ನೀಡಲು ಸೈಕಾಲಜಿಸ್ಟ್‌ ಕೂಡ ಬಂದು ಹೋಗುತ್ತಾರೆ. ಎಲ್ಲ ರೀತಿಯಿಂದಲೂ ʼಎಕ್ಸೆಲ್‌ʼ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಅನುಕೂಲ ವಾತಾವರಣ ಸೃಷ್ಟಿ ಮಾಡಿದೆ.

- ವಿದ್ಯಾರ್ಥಿನಿ

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..