ಎನ್.ಆರ್. ಪುರ ಸೇತುವೆ... ಮಲೆನಾಡಿನ ಸಂಪರ್ಕ ಕ್ರಾಂತಿ
ಈ ಸೇತುವೆ ಕೇವಲ ಸಿಮೆಂಟ್ ರಸ್ತೆಯಲ್ಲ. ಇಲ್ಲಿನ ಜನರ ಜೀವನಾಡಿ. ಸುದೀರ್ಘ ಹೋರಾಟಕ್ಕೆ ಸಿಕ್ಕ ಪ್ರತಿಫಲ. ಎರಡು ಊರುಗಳನ್ನು ಸೇರಿಸುವ ಜತೆಗೆ ಮನುಷ್ಯರನ್ನೂ ಭಾವನಾತ್ಮಕವಾಗಿ ಬೆಸೆಯುತ್ತಿದೆ. ಅದೆಷ್ಟೋ ಜೀವಗಳು ಈಗ ನೆಮ್ಮದಿಯಿಂದ ಓಡಾಡುವ ಸಮಯ ಬಂದಿದೆ. ಮನೆಗೆ ಹೋಗಲು ತಡವಾಗುತ್ತದೆ ಎಂಬ ಆತಂಕದಿಂದ ದೂರವಾಗುವ ಸಮಯ ಬಂದಿದೆ. ಇದು ಚಿಕ್ಕಮಗಳೂರಿನ ಜನರ ದೈನಂದಿನ ಜೀವನವನ್ನು ಪುನರ್ ರೂಪಿಸಿದೆ. ಮಲೆನಾಡಿನ ಈ ಸುಂದರ ಪ್ರದೇಶದಲ್ಲಿ ಪ್ರಗತಿಯು ಮುಂದುವರಿಯುತ್ತಿದ್ದಂತೆ, ಇದು ಸ್ಥಳಗಳನ್ನು ಮಾತ್ರವಲ್ಲದೆ, ಜನರ ಕನಸು ಮತ್ತು ಅವಕಾಶಗಳನ್ನು ಬೆಸೆಯುವ ಪ್ರಮುಖ ಸೇತುವೆ!
ಕರ್ನಾಟಕದ ಮಲೆನಾಡಿನ ಹೃದಯಭಾಗದಲ್ಲಿರುವ ನರಸಿಂಹರಾಜಪುರ (ಎನ್.ಆರ್. ಪುರ) ಬಳಿ ಇತ್ತೀಚೆಗೆ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಪ್ರದೇಶದ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಈ ಸೇತುವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದಿನ ಅವಧಿಯಲ್ಲಿ ಈ ಸೇತುವೆಯ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಮಾಡಲಾಗಿದ್ದು, ಈಗ ಇದೇ 12ನೆಯ ತಾರೀಕಿಗೆ ಇದರ ಲೋಕಾರ್ಪಣೆ ಆಗುತ್ತಿರುವುದು ವಿಶೇಷ. ಅಂದಹಾಗೆ, ಅಲ್ಲಿನ ಜನರು ಸಿದ್ದರಾಮಯ್ಯ ಸೇತುವೆ ಎಂದು ಹೆಸರಿಡಲು ಮನವಿ ಮಾಡಿದ್ದು, ಇದಕ್ಕೆ ʼಸಿದ್ದರಾಮಯ್ಯ ಸೇತುವೆʼ ಎಂದೇ ನಾಮಕರಣ ಮಾಡುವುದಾಗಿ ತೀರ್ಮಾನಿಸಲಾಗಿದೆ. ಎಂ. ಶ್ರೀನಿವಾಸ್ ಅವರ ನೇತೃತ್ವ, ಸ್ಥಳೀಯರ ಪರಿಶ್ರಮ ಹಾಗೂ ಶಾಸಕ ಟಿ.ಡಿ ರಾಜೇಗೌಡ ಅವರ ಬೆಂಬಲದಿಂದ ಈಗ ಈ ಸೇತುವೆ ಕಾರ್ಯ ಪೂರ್ಣಗೊಂಡು ಲೋಕಾರ್ಪಣೆ ಆಗುತ್ತಿದೆ.
ಇದನ್ನೂ ಓದಿ: ಸಾವಿರಾರು ಕುಟುಂಬಗಳಿಗೆ ಸರಿ ದಾರಿ ತೋರಿದ ಧರ್ಮಸ್ಥಳ ʼಸಿರಿʼ ಗ್ರಾಮೋದ್ಯೋಗ ಸಂಸ್ಥೆ
ಈ ಸೇತುವೆಯ ನಿರ್ಮಾಣವನ್ನು ಕೈಗೊಳ್ಳಲು 2017-18ನೆಯ ಸಾಲಿನಲ್ಲಿ ಸರಕಾರದಿಂದ ಆಡಳಿತಾತ್ಮಕ ಅನುಮೋದನೆಯಾಗಿರುತ್ತದೆ. 2026-27ನೆಯ ಸಾಲಿನ ಆಯವ್ಯಯದಲ್ಲಿ ಈ ಹಿಂದೆ 2025-26ನೆಯ ಸಾಲಿನಲ್ಲಿ 216 ಸೇತುವೆಗಳ ನಿರ್ಮಾಣ, 288 ಸೇತುವೆ ದುರಸ್ತಿ ಹಾಗೂ 386 ಕಾಲುಸಂಕಗಳ ನಿರ್ಮಾಣ ಕಾಮಗಾರಿಗಳನ್ನು 2000 ಕೋಟಿಗಳ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದಿಸಲಾಗಿದೆ. ಈ ಕಾರ್ಯಕ್ರಮವನ್ನು ಮುಂದುವರಿಸಿ ಸೇತುವೆಗಳ ನಿರ್ಮಾಣಕ್ಕಾಗಿ ಮುಂದಿನ ಎರಡು ವರ್ಷಗಳಲ್ಲಿ ರು. 2000 ಕೋಟಿ ಮೊತ್ತವನ್ನು ಒದಗಿಸಲಾಗುವುದೆಂದು ಘೋಷಿಸಲಾಗಿದೆ. ನಿಗಮದ ವತಿಯಿಂದ ಕಳೆದ ಮೂರು ವರ್ಷಗಳಲ್ಲಿ 15 ಬೃಹತ್ ಮತ್ತು 24 ಕಿರು ಸೇತುವೆಗಳನ್ನು ರು. 424 ಕೋಟಿ ಮೊತ್ತದಲ್ಲಿ ಪೂರ್ಣಗೊಳಿಸಲಾಗಿದೆ.

ಪಶ್ಚಿಮ ಘಟ್ಟಗಳ ದಟ್ಟ ಹಸಿರು ಮತ್ತು ತುಂಗಾ ನದಿಯಂಥ ಸದಾಕಾಲ ಹರಿಯುವ ನದಿಗಳಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ನೈಸರ್ಗಿಕ ಸೌಂದರ್ಯಕ್ಕೇನು ಕೊರತೆಯಿಲ್ಲ. ಆದರೆ, ಇಲ್ಲಿನ ಜನತೆ ದಶಕಗಳ ಕಾಲ ಕಿರಿದಾದ ರಸ್ತೆಗಳು ಮತ್ತು ತಗ್ಗು ಪ್ರದೇಶದ ಸೇತುವೆಗಳನ್ನೇ ಅವಲಂಬಿಸಿದ್ದರು. 1958ರಲ್ಲಿ ಭದ್ರಾ ಅಣೆಕಟ್ಟು ನಿರ್ಮಾಣವಾದಾಗ ಎನ್.ಆರ್. ಪುರ ಮತ್ತು ಹೊನ್ನೇಕೊಡಿಗೆ ನಡುವಿನ ಗ್ರಾಮಗಳ ನೇರ ಸಂಪರ್ಕ ಕಡಿತಗೊಂಡಿತ್ತು. ಈ ಎರಡೂ ಗ್ರಾಮಗಳನ್ನು ಸಂಪರ್ಕಿಸಲು ಸುಮಾರು 30 ಕಿ.ಮೀ ಅಧಿಕವಾಗಿ ಪ್ರಯಾಣಿಸಬೇಕಾಗಿತ್ತು. ಆದರೆ, ಈ ಹೊಸ ಸೇತುವೆಯ ನಿರ್ಮಾಣದಿಂದಾಗಿ, ಕೇವಲ 3 ರಿಂದ 4 ಕಿಮೀ ಕ್ರಮಿಸಿದರೆ, ಸದರಿ ಗ್ರಾಮಗಳಿಗೆ ಸಂಪರ್ಕ ಹೊಂದಬಹುದು.
ಸುಲಭವಾದ ಸಂಚಾರ:
ಈ ಸೇತುವೆ ನಿರ್ಮಾಣವಾಗಲು ಮುಖ್ಯ ಕಾರಣ ಎಂ ಶ್ರೀನಿವಾಸ್. ಅವರು ಅದೇ ಜಾಗದಲ್ಲಿ ಹುಟ್ಟಿ ಬೆಳೆದಿದ್ದರಿಂದ ಅಲ್ಲಿನ ಕಷ್ಟಗಳನ್ನು ತಿಳಿದುಕೊಂಡಿದ್ದು, ನೇತೃತ್ವ ವಹಿಸಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಧನ ಸಹಾಯದ ಜತೆಗೆ ಎಲ್ಲ ಬೆಂಬಲವನ್ನು ಪಡೆಯಲು ಸಹಾಯ ಮಾಡಿದ್ದಾರೆ ಎನ್ನುವುದು ಅಲ್ಲಿನ ಜನರ ಹೆಮ್ಮೆಯ ಮಾತು. 38 ಕೋಟಿ ರು. ಅನುದಾನ ಈ ಸೇತುವೆ ನಿರ್ಮಾಣಕ್ಕೆ ಸಿಕ್ಕಿದೆ. ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗತ್ಯವೂ ಇದ್ದಿದ್ದಕ್ಕೆ 6 ಕೋಟಿ ರು. ಖರ್ಚು ಮಾಡಿ ಹೊಸ ರಸ್ತೆ ನಿರ್ಮಿಸಲಾಗಿದೆ. ಹಾಗೆಯೇ ನರಸಿಂಹರಾಜಪುರದ ರಸ್ತೆ ಅಗಲೀಕರಣಕ್ಕೆ 60 ಕೋಟಿ ಹಣ ಮೀಸಲಿಡಲಾಗಿದೆ. ಸುಮಾರು 15-20 ವರ್ಷಗಳ ಸುದೀರ್ಘ ಹೋರಾಟ ಇದಾಗಿತ್ತು. ಈ ಸೇತುವೆಯ ನಿರ್ಮಾಣದಿಂದಾಗಿ ಸಾರ್ವಜನಿಕರ ಮತ್ತು ರೈತರ ದೈನಂದಿನ ಪ್ರಯಾಣದ ಸಮಯ ಸುಮಾರು ಒಂದು ಗಂಟೆ ಸಮಯ ಉಳಿತಾಯವಾಗಲಿದ್ದು, ಇಂಧನದ ವೆಚ್ಚ ಉಳಿಕೆಯಾಗಲಿದೆ. ಸುತ್ತಮುತ್ತಲಿನ 7 ಗ್ರಾಮಗಳಾದ ಹೊನ್ನೇಕೊಡಿಗೆ, ಹಂಡೂರು, ಸಾಲೂರು, ಮೊರಿಮಟ್ಟ, ಕುಸುಗಳ್ಳು, ಸಾರಿಯ, ಹಂಟೋಣಿ ಗ್ರಾಮಗಳ ಜನರ ದೈನಂದಿನ ಆಸ್ಪತ್ರೆ, ಬ್ಯಾಂಕ್, ಸಹಕಾರಿ ಸಂಸ್ಥೆ, ಶಾಲೆ ಹಾಗೂ ಕಾಲೇಜುಗಳಂಥ ಮೂಲಭೂತ ಅಗತ್ಯಗಳಿಗಾಗಿ ತಾಲ್ಲೂಕು ಕೇಂದ್ರವಾದ ಎನ್.ಆರ್.ಪುರಕ್ಕೆ ಪ್ರಯಾಣಿಸುವ ಅಂತರವೂ ಕಡಿಮೆಯಾಗುತ್ತದೆ. ಸುಮಾರು 3,000ಕ್ಕೂ ಅಧಿಕ ಗ್ರಾಮಸ್ಥರಿಗೆ ಅನುಕೂಲವಾಗುವುದಲ್ಲದೇ, ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹಕಾರಿಯಾಗಿದೆ.

ಗೊತ್ತಿದೆಯೇ ಇತಿಹಾಸ?
ಈ ಭಾಗದ ಜನರಿಗೆ ಈ ಸೇತುವೆ ಯಾಕೆ ಇಷ್ಟು ಮಹತ್ವವಾದದ್ದು ಎಂದು ತಿಳಿಯಬೇಕಾದರೆ ಸಣ್ಣ ಕಥೆ ನೆನಪಿಸಿಕೊಳ್ಳಬೇಕಾಗುತ್ತದೆ. ಕರ್ನಾಟಕದ ಈ ಭಾಗದ ನದಿಗಳ ಹರಿವಿನ ಮೇಲೆ ಪ್ರಭಾವ ಬೀರಿದ ಪ್ರಮುಖ ಅಂಶವೆಂದರೆ 20ನೆಯ ಶತಮಾನದ ಮಧ್ಯಭಾಗದಲ್ಲಿ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಭದ್ರಾ ಅಣೆಕಟ್ಟು. ಇದರಿಂದ ಹಲವು ಪ್ರದೇಶಗಳು ಮುಳುಗಡೆಯಾದವು. ಅನೇಕ ಸ್ಥಳೀಯರ ಸ್ಥಳಾಂತಗೊಂಡರು. ನದಿ ತೀರದ ಕೃಷಿ ಭೂಮಿಗಳು ಆಗಾಗ ಜಲಾವೃತಗೊಳ್ಳುತ್ತಿದ್ದವು. ಅಡಿಕೆ ಮತ್ತು ಭತ್ತದಂಥ ಬೆಳೆಗಳು ಹಾನಿಯಾಗುತ್ತಿದ್ದವು. ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿತ್ತು. ಸ್ಥಳೀಯ ನಿವಾಸಿಗಳ ಹಿರಿಯ ತಲೆಮಾರಿನವರು ಈಗಲೂ ಸಹ ನೀರಿನ ಮಟ್ಟವು ಏರಿ ಮನೆಗಳನ್ನು ಮುಳುಗಿಸಿದ ವರ್ಷಗಳನ್ನು ನೆನಪಿಸಿಕೊಳ್ಳುತ್ತಾರೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿತ್ತೆಂದರೆ ಅಲ್ಲಿನ ಕೆಲವು ಪ್ರದೇಶದ ಜನರಿಗೆ ವಿವಾಹಕ್ಕೂ ತೊಡಕುಂಟಾಗುತ್ತಿತ್ತು. ಹೆಣ್ಣುಕೊಡಬೇಕಿದ್ದರೂ ಜನ ಇದನ್ನು ʼಕಾಡೂರುʼ ಎಂದು ಹೀಯಾಳಿಸುತ್ತಿದ್ದರು. ಇಲ್ಲಿಗೆ ಒಂದೇ ಬಸ್ ಸಂಪರ್ಕ ಇದ್ದಿದ್ದು. ಅದು ಕೂಡ ಯಾವಗ ಬರುತ್ತಿತ್ತು ಎಂದು ಹೇಳುವುದು ಕಷ್ಟವಾಗಿತ್ತು. ಈಗ ಇವರಿಗೆಲ್ಲ ನಿಟ್ಟುಸಿರು ಬಿಡುವ ಸಂದರ್ಭ ಬಂದಿದೆ.
ಸುದೀರ್ಘ ಹೋರಾಟ:
ಒಂದು ಹೊಸ ಸೇತುವೆ ನಿರ್ಮಾಣ ಆದಾಗ ಅದರಿಂದ ಕೇವಲ ಸಂಪರ್ಕವೊಂದೇ ಸುಲಭವಾಗುವುದಿಲ್ಲ. ಕೆಲವು ಮಾತ್ರೆಗಳಿಗೆ ಸೈಡ್ ಎಫೆಕ್ಟ್ ಇದ್ದ ಹಾಗೆ ಇದಕ್ಕೂ ಇರುತ್ತವೆ. ಆದರೆ, ಈ ಸೈಡ್ ಎಫೆಕ್ಟ್ ಒಳ್ಳೆಯದನ್ನು ಮಾಡುತ್ತವೆ. ಇಲ್ಲಿನ ಸ್ಥಳೀಯರೊಬ್ಬರು ಹೇಳುವ ಪ್ರಕಾರ ಎನ್ ಆರ್ ಪುರ ಇತಿಹಾಸದಲ್ಲಿ ಇಷ್ಟು ದೊಡ್ಡ ಸೇತುವೆ ಅಭಿವೃದ್ಧಿಯಾಗಿದ್ದು ಇದೇ ಮೊದಲು. ಇದನ್ನು ನೋಡಲು ಎಂದೇ ಜನರು ಬರುವಷ್ಟು ಅದ್ಭುತವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಭೌಗೋಳಿಕ ಪರಿಸ್ಥಿತಿಯನ್ನು ಗಮನಿಸಿದಾಗ ಈ ಸೇತುವೆಯ ಪ್ರಾಮುಖ್ಯತೆ ಇನ್ನೂ ಸ್ಪಷ್ಟವಾಗಿ ಅರ್ಥವಾಗುತ್ತದೆ. ದಟ್ಟ ಅರಣ್ಯಗಳು, ಗುಡ್ಡಗಾಡು ಮತ್ತು ಅತಿ ಹೆಚ್ಚು ಮಳೆಯಾಗುವ ಈ ಪ್ರದೇಶ! ಇಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡುವುದು ಅತ್ಯಂತ ಅಗತ್ಯವಾಗಿತ್ತು. ಸುಮಾರು ಹದಿನೈದು ವರ್ಷಗಳ ಕಾಲ ಇಲ್ಲಿ ಸೇತುವೆ ಆಗಬೇಕೆಂದು ಸ್ಥಳೀಯರು ಹೋರಾಟ ನಡೆಸಿದ್ದಾರೆ. ಅದು ಈಗ ಫಲ ಸಿಕ್ಕಂತಾಗಿದೆ. ಪ್ರಯಾಣದ ಸಮಯ ಕಡಿಮೆಯಾಗಿದ್ದು, ಸಂಚಾರವು ಹೆಚ್ಚು ಸುರಕ್ಷಿತವಾಗಿದೆ. ನಿರಂತರ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಿರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಈ ಅಭಿವೃದ್ಧಿಯು ಸ್ಥಿರತೆಯನ್ನು ತಂದುಕೊಟ್ಟಿದೆ.

ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ:
ಸೇತುವೆ ನಿರ್ಮಾಣ ಮಾಡಿದ್ದು ಗೊತ್ತಾದ ಬಳಿಕ ಅನೇಕರಿಗೆ ಈ ಹೊಸ ಸೇತುವೆ ಮೇಲೆ ಹೋಗುವುದು, ಅಲ್ಲಿ ನಿಂತು ಫೊಟೋ ತೆಗೆಸಿಕೊಳ್ಳುವುದು ಖುಷಿಯ ವಿಷಯವಾದರೆ ಇನ್ನೂ ಕೆಲವರಿಗೆ ಹೆಮ್ಮೆಯ ವಿಷಯ. ಇದಕ್ಕಾಗಿ ಇಲ್ಲಿಗೆ ಭೇಟಿ ಕೊಡುವ ಜನರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಪ್ರವಾಸೋದ್ಯಮ ಬೆಳೆಯುವುದು ಒಂದು ವಿಧಾನವಾದರೆ, ವಿಶೇಷವಾಗಿ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗಾಗಿಯೇ ಸರಕಾರ 3 ಎಕರೆ ಜಾಗವನ್ನು ಮೀಸಲಿಟ್ಟಿದೆ. ಬಸ್ತಿ ಮಠ, ದೇವಸ್ಥಾನ ಬಿಟ್ಟು ಬೇರೇನು ಇಲ್ಲಿರಲಿಲ್ಲ. ಈಗ ಸೇತುವೆ ನೋಡಲು ಸಾವಿರಾರು ಜನ ಬರುತ್ತಿದ್ದಾರೆ. ಇನ್ನು ನರಸಿಂಹರಾಜಪುರ ಮತ್ತು ಅದರ ಸುತ್ತಮುತ್ತಲಿನ ನದಿಗಳು, ಜಲಪಾತಗಳು ಮತ್ತು ಅರಣ್ಯ ಮಾರ್ಗಗಳು ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತವೆ. ಅಲ್ಲೆಲ್ಲ ಈಗ ಜನರಿಗೆ ತಲುಪುವುದು ಸುಲಭವಾಗಿದೆ. ಹೊಸ ಸೇತುವೆ ಮೇಲೆ ಸಾಗುತ್ತ ಕಾರ್ ಕಿಟಕಿ ತೆಗೆದು ಸುತ್ತಲಿನ ಪ್ರಕೃತಿಯನ್ನು ನೋಡುತ್ತಾ, ತಂಪು ಗಾಳಿಗೆ ಮುಖ ಒಡ್ಡುತ್ತಾ ಹೋಗುವಾಗ ಸಿಗುವ ಆನಂದ ಇನ್ನೆಲ್ಲೂ ಸಿಗುವುದಿಲ್ಲ!
ಹಲವು ಲಾಭಗಳು:
ಈ ಸೇತುವೆ ನಿರ್ಮಾಣ ಹೊನ್ನೇಕೊಡಿಗೆ ಪಂಚಾಯಿತಿಗೆ ಬಹಳ ಸಹಕಾರಿಯಾಗಿದೆ. ಇಲ್ಲೇ ಸಮೀಪದಲ್ಲಿ ಹಳೆಯ ಚಿಕ್ಕಮಗಳೂರು ರಸ್ತೆಯಿದೆ. ಅದು ಚಿಕ್ಕಮಗಳೂರಿಗೆ ಸೇರುತ್ತದೆ. ಅಲ್ಲಿ ತಡಸ ಸೇತುವೆಯಿತ್ತು. ಅದರಲ್ಲಿ ರಸ್ತೆ ಮತ್ತು ರೈಲ್ವೇ ಹಳಿ ಎರಡೂ ಇದ್ದಿದ್ದು ವಿಶೇಷ. ಆ ರಸ್ತೆಗಳೆಲ್ಲ ಮುಳುಗಡೆ ಆದ ಬಳಿಕ ಬದಲಿ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಆಗಿಲ್ಲ. ಸಮೀಪದ ಊರಿನವರನ್ನೆಲ್ಲಾ ಸ್ಥಳಾಂತರಿಸಲಾಯಿತು. ಉಳಿದ ಕೆಲವು ಊರುಗಳು ಪಟ್ಟಣದಿಂದ ದೂರವಿರುವದರಿಂದ ಓಡಾಡಲು ಸಮಸ್ಯೆ ಎದುರಿಸುತ್ತಿದ್ದವು. ಈಗ ಈ ಸೇತುವೆ ಆಗಿರುವುದರಿಂದ ಪಟ್ಟಣಕ್ಕೆ ಸಂಪರ್ಕ ಮಾಡುವುದು ಸುಲಭವಾಗಿದೆ.

ಮಲೆನಾಡು ಪ್ರದೇಶ ಕಾಫಿ, ಅಡಿಕೆ ಮತ್ತು ಮಸಾಲೆ ಪದಾರ್ಥಗಳ ಕೃಷಿಗೆ ಪ್ರಸಿದ್ಧಿ ಹೊಂದಿರುವ ಜಾಗ. ರೈತರು ತಮ್ಮ ಬೆಳೆಗಳನ್ನು ಸಾಗಿಸಲು ಹರಸಾಹಸ ಪಡಬೇಕಾಗುತ್ತಿತ್ತು. ಹೊಸ ಸೇತುವೆಯಿಂದಾಗಿ ಬೆಳೆ ಸಾಗಾಣಿಕೆ ಸುಲಭವಾಗಿದೆ. ರೈತರಿಗೆ ಈಗ ನಷ್ಟದ ಭೀತಿ ದೂರವಾಗಿದೆ. ಕೇವಲ ಸೌಕರ್ಯದ ದೃಷ್ಟಿಯಿಂದಷ್ಟೇ ಅಲ್ಲದೆ, ಈ ಸೇತುವೆಯು ಗ್ರಾಮೀಣ ಕರ್ನಾಟಕದ ಅಭಿವೃದ್ಧಿಗೂ ಪೂರಕವಾಗಲಿದೆ. ಪಶ್ಚಿಮ ಘಟ್ಟಗಳ ಪರಿಸರಕ್ಕೆ ಯಾವುದೇ ಸಮಸ್ಯೆ ಉಂಟಾಗದಂತೆ ಮೂಲಸೌಕರ್ಯಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಈ ಸೇತುವೆ ಸಾಕ್ಷಿ! ದೀರ್ಘಕಾಲದ ಸಂಪರ್ಕ ಮತ್ತು ಸುರಕ್ಷತೆಯ ಸವಾಲುಗಳನ್ನು ಮೆಟ್ಟಿ ನಿಂತಿರುವ ಈ ಎನ್.ಆರ್. ಪುರ ಸೇತುವೆಯು ಇಡೀ ಊರಿನಲ್ಲಿ ಅರ್ಥಪೂರ್ಣ ಬದಲಾವಣೆ ತಂದಿದೆ.
--
ಈ ಸೇತುವೆ ನನ್ನ ಜೀವಮಾನದ ಸಾಧನೆ ಇದ್ದಂತೆ. ಇಲ್ಲಿನ ಕೆಲವು ಊರುಗಳು ಮುಳುಗಡೆ ಆದ ಬಳಿಕ ಹೊನ್ನೇಕೊಡಿಗೆಯವರು ಮಾತ್ರ ಇಲ್ಲಿದ್ದರು. ಅವರಿಗೆ ಪೇಟೆಗೆ ಬರುವ ದಾರಿ ಸುಲಭದ್ದಾಗಿರಲಿಲ್ಲ. ಈ ಸೇತುವೆಯಿಂದ ಅವರು ಸಲೀಸಾಗಿ ಓಡಾಡುವ ಹಾಗಾಗಿದೆ. ಇದರ ಎಲ್ಲ ಕ್ರೆಡಿಟ್ ಸಿದ್ದರಾಮಯ್ಯನವರಿಗೆ ಸಲ್ಲಬೇಕಾಗುತ್ತದೆ. ಎಡೆಹಳ್ಳಿಯಾಗಿದ್ದ ಊರಿಗೆ ನರಸಿಂಹರಾಜ ಒಡೆಯರ್ ಬಂದು ನರಸಿಂಹರಾಜರಪುರ ಎಂಬ ಹೆಸರು ಕೊಟ್ಟರು. ಹಾಗೇ 100 ವರ್ಷಗಳ ಬಳಿಕ ಬಂದ ನೀವು ಈ ಊರಿಗೆ ಏನಾದರು ಕೊಡುಗೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಳಿದ್ದಕ್ಕೆ ಪ್ರೀತಿಯಿಂದ ಒಪ್ಪಿಕೊಂಡು ಈ ಸೇತುವೆ ನಿರ್ಮಾಣಕ್ಕೆ ನಾಂದಿ ಹಾಡಿದರು. ಶಂಕು ಸ್ಥಾಪನೆ ಕೂಡ ಮಾಡಿದರು. ಈಗ ಲೋಕಾರ್ಪಣೆ ಕೂಡ ಅವರೇ ಮಾಡುತ್ತಿದ್ದಾರೆ. ಹಾಗೆಯೇ ಅಲ್ಲೊಂದು ರೆಸಾರ್ಟ್ ಮಾಡಲು ಜಿಲ್ಲಾ ಕಮಿಷನರ್ ಮೀನಾ ಅವರಿಗೆ ಕೇಳಿದಾಗ 3 ಎಕರೆ ಜಾಗ ಕೂಡ ನೀಡಿದರು. ಅಮ್ಯೂಸ್ಮೆಂಟ್ ಪಾರ್ಕ್, ಥೀಮ್ ಪಾರ್ಕ್, ವಾಟರ್ ಪಾರ್ಕ್ ಮಾಡುವ ಆಸೆಯಿದೆ. ಇಲ್ಲಿ ಈಗಾಗಲೇ ಅಂಗಡಿಗಳು ಶುರುವಾಗಿವೆ. ಇದೊಂದು ದೊಡ್ಡ ಪ್ರವಾಸಿ ತಾಣವಾಗುತ್ತದೆ ಎಂದು ಅನೇಕರು ಹೇಳುವುದನ್ನು ಕೇಳಿದಾಗ ಖುಷಿಯಾಗುತ್ತದೆ. ಮುಂದೆ ಇಲ್ಲೊಂದು ಚೆಕ್ ಡ್ಯಾಮ್ ಕಟ್ಟಬೇಕಿದೆ. ಹಾಗೆಯೇ ಇದನ್ನು ಟೂರಿಸಂ ಸ್ಪಾಟ್ ಮಾಡೇ ಮಾಡುತ್ತೇನೆ. ಇವೆಲ್ಲವೂ ಹುಟ್ಟೂರಿನ ಋಣ ತೀರಿಸುವ ಪ್ರಯತ್ನ ಅಷ್ಟೇ! ಈ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿಶ್ವೇಶ್ವರ ಭಟ್ ಅವರ ಸಲಹೆಗಳು ಸಾಕಷ್ಟಿವೆ. ನಮ್ಮ ನರಸಿಂಹರಾಜಪುರಕ್ಕೆ ಸಿದ್ದರಾಮಯ್ಯ ಬಿಟ್ಟು ಬೇರೆ ಯಾವ ಮುಖ್ಯಮಂತ್ರಿ ಇದುವರೆಗೂ ಬಂದೇ ಇಲ್ಲ.
- ಎಂ. ಶ್ರೀನಿವಾಸ
ಎನ್ ಆರ್ ಪುರ ಮತ್ತು ಹೊನ್ನೇಕೊಡಿಗೆ ಸಂಪರ್ಕ ಮಾಡುವಂಥ ರಸ್ತೆಯಿದು. ಮುಳುಗಡೆ ಆದ ನಂತರ ಹಳ್ಳಿಯ ಜನರು ಸುಮಾರು ದೂರ ಪ್ರಯಾಣ ಮಾಡಿ ಎನ್ ಆರ್ ಪುರಕ್ಕೆ ಬರಬೇಕಿತ್ತು. ಈ ಸೇತುವೆಯಿಂದ ಅವರು ಈಗ 10-15 ನಿಮಿಷದಲ್ಲಿ ಪೇಟೆಯನ್ನು ತಲುಪಬಹುದು. ಇದೊಂದು ಐತಿಹಾಸಿಕ ಕಾರ್ಯ. ಮೈಸೂರಿನ ಒಡೆಯರ್ ನರಸಿಂಹರಾಜಪುರ ಎಂದು ನಾಮಕರಣ ಮಾಡಿದ ನೂರು ವರ್ಷಗಳ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರಿಗೆ ಇಲ್ಲೊಂದು ಸೇತುವೆ ಆಗಬೇಕು ಎಂದು ಶ್ರೀನಿವಾಸ ಅವರು ಮನವಿ ಮಾಡಿದರು. ಅದಕ್ಕೆ ಮುಖ್ಯಮಂತ್ರಿಗಳು ಸುಮಾರು 34 ಕೋಟಿ ರು. ವಿಶೇಷ ಅನುದಾನ ನೀಡಿದರು. ಹೀಗಾಗಿ ಆ ಸೇತುವೆಗೆ ಅವರ ಹೆಸರನ್ನೇ ಇಡಲು ತೀರ್ಮಾನಿಸಲಾಗಿದೆ. ಸಿದ್ದರಾಮಯ್ಯನವರೇ ಬಂದು ಉದ್ಘಾಟನೆ ಕೂಡ ಮಾಡುತ್ತಿರುವುದು ಖುಷಿಯ ವಿಷಯ.
- ಟಿ.ಡಿ, ರಾಜೇಗೌಡ, ಶಾಸಕರು, ಶೃಂಗೇರಿ ವಿಧಾನಸಭಾ ಕ್ಷೇತ್ರ
1958 ರಲ್ಲಿ ಭದ್ರಾ ಅಣೆಕಟ್ಟು ನಿರ್ಮಾಣವಾದಾಗ ನರಸಿಂಹರಾಜಪುರ ಹಾಗೂ ಹೊನ್ನೆಕೊಡಿಗೆ ನಡುವಿನ ಗ್ರಾಮಗಳ ನೇರ ಸಂಪರ್ಕ ಕಡಿತಗೊಂಡಿತ್ತು. ಎರಡೂ ಗ್ರಾಮಗಳನ್ನು ಸಂಪರ್ಕಿಸಲು ಸುಮಾರು 30 ಕಿ.ಮೀ. ಅಧಿಕವಾಗಿ ಪ್ರಯಾಣಿಸಬೇಕಾಗಿತ್ತು. ಈ ಹೊಸ ಸೇತುವೆ ನಿರ್ಮಾಣದಿಂದ ಕೇವಲ 3 ರಿಂದ 4 ಕ್ರಮಿಸಿದರೆ ಸದರಿ ಗ್ರಾಮಗಳಿಗೆ ಸಂಪರ್ಕ ಹೊಂದಬಹುದಾಗಿದೆ. ಸದರಿ ಸೇತುವೆಯ ನಿರ್ಮಾಣದಿಂದ ಸುತ್ತಮುತ್ತಲಿನ ಸುಮಾರು 3000 ಜನಸಂಖ್ಯೆಗೆ ಅನುಕೂಲವಾಗುವುದಲ್ಲದೇ , ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹಕಾರಿಯಾಗಿದೆ. ಸದರಿ ಹಾಂದೂರು - ನರಸಿಂಹರಾಜಪುರ ಸೇತುವೆ ಕಾಮಗಾರಿ ಕೈಗೊಳ್ಳಲು 2017-18 ನೇ ಸಾಲಿನಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತಾದರೂ ಹಲವಾರು ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿತ್ತು. ಪ್ರಸ್ತುತ ಸ್ಥಳೀಯ ಎಲ್ಲಾ ಜನಪ್ರತಿನಿಧಿಗಳು ಹಾಗೂ ನಮ್ಮ ಸರ್ಕಾರದ ಸಹಕಾರದೊಂದಿಗೆ ಸತತ ಪ್ರಯತ್ನಗಳಿಂದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಕಾಮಗಾರಿಗೆ ಅನುಮೋದನೆ ನೀಡಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಂದಲೇ ಕಾಮಗಾರಿ ಉದ್ಘಾಟನೆ ಮಾಡಿ ಲೋಕಾರ್ಪಣೆ ಮಾಡುತ್ತಿರುವುದು ವಿಶೇಷವಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಕಾಮಗಾರಿ ಯಶಸ್ವಿಯಾಗಿ ನಿರ್ಮಾಣ ಮಾಡಿದ್ದು ಸಂತಸ ತಂದಿದೆ.
- ಎಚ್.ಸಿ. ಬಾಲಕೃಷ್ಣ, ಚೇರ್ ಮನ್ ಕೆ ಆರ್ ಡಿ ಸಿ ಎಲ್
ಸೇತುವೆಯ ವಿವರ:
ಗುತ್ತಿಗೆ ಮೊತ್ತ: 34.86 ಕೋಟಿ ರು.
ಸೇತುವೆ ಉದ್ದ: 504.00 ಮೀ (1.20 ಕಿ.ಮೀ. ಸಂಪರ್ಕ ರಸ್ತೆ)
ಸೇತುವೆಯ ಅಗಲ: 8.5ಮೀ (14 x 36ಮೀ)
ಪ್ರಾರಂಭ ದಿನಾಂಕ: 19-03-2018
ಪೂರ್ಣಗೊಂಡ ದಿನಾಂಕ : 30-01-2026.
ಕಾನ್ಟೆಕ್ ಸಿಂಡಿಕೇಟ್ ಪ್ರೈವೇಟ್ ಲಿಮಿಟೆಡ್
ವಿಳಾಸ:
ಹಿಲುವಳ್ಳಿ, ಎನ್. ಆರ್. ಪುರ, ಕರ್ನಾಟಕ 577134