ಜವಾರಿ ಜನರತ್ತ ಊಟೋಪಚಾರ ಪ್ರವಾಸ
ಊಟದ ವಿಷಯಕ್ಕೆ ಬಂದರೆ, ಪಕ್ಕಾ ಜವಾರಿ ಮೃಷ್ಟಾನ್ನ ಭೋಜನ. ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಬದನೆಕಾಯಿ ಪಲ್ಯ, ಮೊಸರು, ಶೇಂಗಾ/ ಅಗಸಿ ಚಟ್ನಿ, ಉಳ್ಳಾಗಡ್ಡಿ, ಸೊಪ್ಪು, ಕಾಳು ಎಲ್ಲವನ್ನೂ ನೆನಪಿಡುತ್ತೀರಿ. ವಿಜಯಪುರ, ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಹೀಗೆ ನಮ್ಮ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳದ್ದೂ ಇದೇ ಬೊಂಬಾಟ್ ಜವಾರಿ ಊಟ.
- ಶಿವನಗೌಡ ಕಿಲಬನೂರ
ವಿಜಯಪುರ, ಪಕ್ಕಾ ಜವಾರಿ ಭಾಷೆ, ಸಂಸ್ಕೃತಿ, ಊಟೋಪಚಾರದಿಂದ ಗುರುತಿಸಿಕೊಂಡಿದೆ. ಆದಿಲ್ ಶಾಹಿಗಳ ಆಳ್ವಿಕೆಗೆ ಒಳಪಟ್ಟಿತ್ತು. ಗೋಲ್ ಗುಂಬಜ್ ಸೇರಿ ಹೆಜ್ಜೆ ಹೆಜ್ಜೆಗೂ ಗುಮ್ಮಟಗಳೇ ಹೊದಿಕೆಯಾಗಿರುವ ಈ ಜಿಲ್ಲೆ ಪ್ರವಾಸದ ಜತೆಗೆ ಕೃಷಿ, ಸಂಸ್ಕೃತಿ, ಆಚರಣೆ ಎಲ್ಲದರಲ್ಲೂ ತನ್ನದೊಂದು ವಿಶೇಷತೆಯನ್ನು ಕಾಪಾಡಿಕೊಂಡು ಬಂದಿದೆ.
ಇದನ್ನೂ ಓದಿ: ಗುಹೆಯೊಳಗೆ ನರಸಿಂಹನ ಗುಡಿ
ಪಂಚನದಿಗಳ ನಾಡು
ವಿಜಯಪುರ ಪಂಚನದಿಗಳು ಹರಿಯುವ ನಾಡು. ಇಲ್ಲಿ ಕೃಷ್ಣ, ಮಲಪ್ರಭಾ, ಘಟಪ್ರಭಾ, ಭೀಮಾ ಮತ್ತು ಡೋಣಿ ನದಿಗಳು ಹರಿಯುತ್ತವೆ. ಕೃಷ್ಣ ನದಿ ಅವುಗಳಲ್ಲಿ ಪ್ರಮುಖ ನದಿ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 200 ಕಿಮೀ ಉದ್ದವಾಗಿ ಹರಿಯುತ್ತದೆ. ಆಲಮಟ್ಟಿ ಜಲಾಶಯದ ಮೂಲಕ ಬಹುಪಾಲು ಕೃಷಿ ಭೂಮಿಗೆ ನೀರು ಪೂರೈಸುತ್ತಿದೆ. ಭೀಮಾ ನದಿ 32 ಕಿಮೀ ಉದ್ದವಾಗಿ ಹರಿದಿದ್ದು, ಮಹಾರಾಷ್ಟ್ರ ಮತ್ತು ವಿಜಯಪುರದ ನಡುವಿನ ನೈಸರ್ಗಿಕ ಗಡಿಯಾಗಿದೆ. ಸುಮಾರು 160 ಕಿಮೀ ಉದ್ದವಾಗಿ ಹರಿಯುವ, ಜಿಲ್ಲೆಯ ಮಧ್ಯ ಭಾಗವನ್ನು ಪ್ರವೇಶಿಸುವ ಡೋಣಿ ನದಿ ಕೆಲವೊಮ್ಮೆ ಪ್ರವಾಹವನ್ನು ಸೃಷ್ಟಿಸುತ್ತದೆ. ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ಕ್ರಮವಾಗಿ 60 ಮತ್ತು 30 ಕಿಮೀ. ಉದ್ದಕ್ಕೂ ಜಿಲ್ಲೆಯಲ್ಲಿ ಹರಿದಾಡುತ್ತವೆ.

ಕೃಷಿ ಪ್ರಧಾನ ಜಿಲ್ಲೆ
ವಿಜಯಪುರ ನದಿ ಮೂಲಗಳೊಂದಿಗೆ ಸಂಪದ್ಭರಿತವಾಗಿದೆ. ಹಾಗಾಗಿ ಇಲ್ಲಿ ಕೃಷಿಯದ್ದೇ ಮುಂಚೂಣಿ. ತನ್ನ ಒಟ್ಟು ಭೂ ವ್ಯಾಪ್ತಿಯ ಸುಮಾರು 74% ಭೂಮಿಯನ್ನು ಕೃಷಿಗೆ ಮೀಸಲಿಟ್ಟಿದೆ. ಮಳೆ ಆಶ್ರಿತ ಒಣ ಬೇಸಾಯ ಭೂಮಿ ಇದ್ದರೂ ಅದರೊಟ್ಟಿಗೆ ನೀರಾವರಿ ವ್ಯವಸ್ಥೆಯನ್ನು ರೈತಾಪಿ ವರ್ಗ ಅಳವಡಿಸಿಕೊಂಡಿದೆ. ಬಹುತೇಕ ಕಪ್ಪು ಮಣ್ಣಿನ ಭೂಮಿ. ಅಲ್ಲಲ್ಲಿ ಕೆಂಪು ಮಣ್ಣಿನ ಭೂಮಿಯೂ ಇದೆ. ಇಲ್ಲಿ ಜೋಳ, ಗೋಧಿ, ಈರುಳ್ಳಿ, ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ ಪ್ರಮುಖ ಬೆಳೆಗಳು. ನೀರಾವರಿಯಲ್ಲಿ ಕಬ್ಬು, ದ್ರಾಕ್ಷಿ, ಪೇರು, ಹೂ, ತರಕಾರಿಯಂಥ ವ್ಯವಹಾರಿಕ ಬೆಳೆಗಳನ್ನೂ ಬೆಳೆಯಲಾಗುತ್ತಿದೆ.
ಊಟ ಮತ್ತು ಉಪಚಾರ
ವಿಜಯಪುರ ಜನರ ಮಾತು ಒರಟಾದರೂ ಮನಸು ಬೆಣ್ಣೆಯಂಥದ್ದು. ಈ ಜಿಲ್ಲೆಯ ಹಳ್ಳಿಗಳ ಸೊಗಡು ನಿಮಗೆ ತಾಕಲೇಬೇಕು. ಈ ಜಿಲ್ಲೆಯಲ್ಲಿ ಬಹುತೇಕ ಹಳ್ಳಿಗಳು ವಾಡೆಗಳನ್ನು ಜೀವಂತ ಇರಿಸಿಕೊಂಡಿವೆ. ʻವಾಡೆʼ ಮನೆ ಎಂದರೆ ಗೋಡೆ, ಚಾವಣಿ, ದನದ ಕೊಟ್ಟಿಗೆ, ಅಂಗಳ, ಎಲ್ಲವೂ ದೊಡ್ಡದಾಗಿಯೇ ಇರುವಂಥ ಮನೆಗಳು.
ಊಟದ ವಿಷಯಕ್ಕೆ ಬಂದರೆ, ಪಕ್ಕಾ ಜವಾರಿ ಮೃಷ್ಟಾನ್ನ ಭೋಜನ. ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಬದನೆಕಾಯಿ ಪಲ್ಯ, ಮೊಸರು, ಶೇಂಗಾ/ ಅಗಸಿ ಚಟ್ನಿ, ಉಳ್ಳಾಗಡ್ಡಿ, ಸೊಪ್ಪು, ಕಾಳು ಎಲ್ಲವನ್ನೂ ನೆನಪಿಡುತ್ತೀರಿ. ವಿಜಯಪುರ, ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಹೀಗೆ ನಮ್ಮ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳದ್ದೂ ಇದೇ ಬೊಂಬಾಟ್ ಜವಾರಿ ಊಟ.

ಪ್ರವಾಸಿ ತಾಣಗಳು
ಸಿದ್ದೇಶ್ವರ ದೇವಸ್ಥಾನ, ಶಿವಗಿರಿ ಜ್ಞಾನಯೋಗಾಶ್ರಮ, ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಅನೇಕ ಮಹಲ್ ಗಳು, ಗುಮ್ಮಟಗಳು ಇಲ್ಲಿಯ ಐತಿಹಾಸಿಕ ಗುರುತುಗಳು. ಆಲಮಟ್ಟಿ, ಬಬಲೇಶ್ವರ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಇಂಡಿ ಮುಂತಾದ ತಾಲೂಕು ವ್ಯಾಪ್ತಿಯಲ್ಲೂ ಅನೇಕ ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ.
ಇಲ್ಲಿನ ಉಡುಗೆ- ತೊಡುಗೆ, ಹಬ್ಬ- ಹರಿದಿನಗಳು, ಆಚಾರ- ವಿಚಾರಗಳು, ಬದುಕು- ಬರಹ ಎಲ್ಲವೂ ಜವಾರಿಯೇ. ಸಹೋದರತ್ವ, ಭ್ರಾತೃತ್ವ, ಹೊಂದಾಣಿಕೆ, ನಂಬಿಕೆ ಇಲ್ಲಿ ಪಾರದರ್ಶಕವಾಗಿರುತ್ತದೆ. ಹಾಗಾಗಿ ಇತ್ತ ಬಂದಾಗ ಒಂದು ರೌಂಡ್ ತಿರುಗಿ ಬಿಡಿ. ಊಟ ಮಾತ್ರ ಮರೆಯಬೇಡಿ.
ದಾರಿ ಹೇಗೆ?
ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರ ತಲುಪಿ ಅಲ್ಲಿಂದ ಬಸ್ಸು, ಸ್ವಂತ ವಾಹನಗಳ ಮೂಲಕ ವಿಜಯಪುರ ಪ್ರವಾಸ ಕೈಗೊಳ್ಳಬಹುದು.