ಖ್ಯಾತನಾಮರು ಓಡಾಡಿದ ಮಾರ್ಗದಲ್ಲಿ ಹೆಜ್ಜೆಯಿರಿಸುವ ಪುಳಕ!
ಬಾರ್ಸಿಲೋನಾದ ಪ್ರಮುಖ ಆಕರ್ಷಣೆಗಳಲ್ಲೊಂದು ಲಾ ರಾಂಬ್ಲಾ. ನೀಟಾದ ರಸ್ತೆ, ಬೆಂಗಳೂರಿನವರಾದರೆ ಎಂ.ಜಿ.ರಸ್ತೆಗೆ ಹೋಲಿಸಬಹುದು. ಮೈಸೂರಿನವರು ಸಯ್ಯಾಜಿರಾವ್ ರಸ್ತೆಗೋ, ದೇವರಾಜ ಅರಸು ರಸ್ತೆಗೋ ಹೋಲಿಸಬಹುದು. ಜಗತ್ತಿನ ಎಲ್ಲ ಜನರನ್ನೂ ಇಲ್ಲಿ ಶೋಕೇಸ್ ಮಾಡಲಾಗಿದೆಯೋ ಎಂಬ ಭಾವನೆ ಥಟ್ಟನೆ ಮೂಡುತ್ತದೆ. ದಾರಿಹೋಕರು, ವ್ಯಾಪಾರಸ್ಥರು, ಸರ್ಕಾರಿ ನೌಕರರು, ಶ್ರೀಮಂತರು, ನಕಲಿ ಶಾಮಗಳು, ಪುಷ್ಪೋದ್ಯಮದವರು ಜೊತೆಗೆ ಪಿಕ್ ಪಾಕೆಟ್ ಮಾಡುವವರು. ರುಮೇನಿಯಾ ಮತ್ತು ಆಫ್ರಿಕಾದಿಂದ ಬಂದವರಲ್ಲಿ ಕೆಲವರು, ಇಲ್ಲಿ ಸುಲಭ ಗಳಿಕೆಗಾಗಿ ಕೈ ಚಳಕಕ್ಕೆ ಮೊರೆಹೋಗಿದ್ದಾರೆ.
- ರಂಗಸ್ವಾಮಿ ಮೂಕನಹಳ್ಳಿ
ಇಡೀ ಯುರೋಪಿನಲ್ಲೇ ಬಾರ್ಸಿಲೋನಾ ನಗರಕ್ಕೆ ವಿಚಿತ್ರ ಕಳೆಯಿದೆ. ಸಹಸ್ರಾರು ವರ್ಷಗಳ ಚರಿತ್ರೆ ಹೆಪ್ಪುಗಟ್ಟಿ ಈಗಲೂ ತನ್ನ ಮೂಲ ಬೇರುಗಳನ್ನು ಬಿಟ್ಟುಕೊಡದೆ ಹೊಸ ಜಗತ್ತಿನ ಬದಲಾವಣೆಗಳಿಗೆ ಸ್ಪಂದಿಸುತ್ತಿದೆ. ಸಾಮ್ರಾಜ್ಯಶಾಹಿ ಧೋರಣೆಗಳನ್ನು ನೆನಪಿಸಿಕೊಳ್ಳುತ್ತಲೇ ವರ್ತಮಾನಕ್ಕೆ ಜಿಗಿಯುವ ಈ ನಗರಕ್ಕೆ ಮೆಡಿಟರೇನಿಯನ್ ಸಮುದ್ರ ಮೂಕಸಾಕ್ಷಿಯಾಗಿದೆ. ಅದರ ಕಿರುನಗೆಗೆ ತೆರೆದುಕೊಂಡಿದೆ ಬಾರ್ಸಿಲೋನಾ. ಸ್ಪೇನಿನಲ್ಲಿದ್ದರೂ ಕತಲುನ್ಯ ಭಾಷೆಯನ್ನು ಬಿಟ್ಟುಕೊಡದೆ, ಆಧುನಿಕ ವಿದ್ಯಮಾನಗಳಿಗೆ ಮುಖ ಮಾಡಿರುವ ಈ ನಗರವನ್ನು ಶತಶತಮಾನಗಳ ಕಾಲ ಮುಸ್ಲಿಮರು ಆಳಿದ್ದುಂಟು. ಆ ಸಂಸ್ಕೃತಿಯನ್ನು ಸಹಿಸುತ್ತಲೇ ದಾಪುಗಾಲು ಹಾಕುತ್ತಾ ನಗರ ಬೆಳೆಯಿತು. ಸದ್ದಿಲ್ಲದೆ ಅನಾವರಣಗೊಳ್ಳುವ ಗೋಥಿಕ್ ಶೈಲಿಯ ಚರ್ಚುಗಳಿದ್ದರೂ, ಕ್ಯಾಥೊಲಿಕ್ ಪಂಥದ ಭದ್ರ ಬುನಾದಿಯ ಮೇಲೆ ಬೆಳೆದಿದ್ದರೂ ಬಾರ್ಸಿಲೋನಿಯನ್ನರು ಲಿಬರಲ್ ಮನೋಭಾವದವರು. ಎಲ್ಲೆಲ್ಲೂ ಮ್ಯೂಸಿಯಂ, ಪಾರ್ಕು, ಶಿಲ್ಪಕಲೆಯಿಂದ ಹೊಸ ರೂಪ ಪಡೆದ ಈ ನಗರದಲ್ಲಿ ಪುತ್ಥಳಿಗಳೇ ರೂಪದರ್ಶಿಗಳಾಗಿ ಕಾಣುತ್ತವೆ. ಪಾದಚಾರಿಗಳೇ ಇಲ್ಲಿ ಗೌರವಾನ್ವಿತ ನಾಗರಿಕರು ಎಂದು ತೀರ್ಮಾನಿಸಿರುವ ಈ ನಗರ, ನೂರು ಚದರ ಕಿಲೋಮೀಟರು ಹಬ್ಬಿರಬಹುದು ಅಷ್ಟೇ. ಇನ್ನು ಜನಸಂಖ್ಯೆ ಹದಿನೇಳು ಲಕ್ಷ ಮೀರಿಲ್ಲ. ಅದ್ಭುತ ವಾಸ್ತುಶಿಲ್ಪಿ ಗೌದಿಯ ಕೈಯ್ಯಲ್ಲಿ ಅರಳಿರುವ ಕಲಾಕೃತಿಗಳೆಷ್ಟೊ? ಸಗ್ರದಾ ಫೆಮಿಲಿಯ ಎಂಬ ಸ್ಮಾರಕ ವರ್ಷಕ್ಕೆ ಇಪ್ಪತ್ತು ಲಕ್ಷ ಮಂದಿ ಪ್ರವಾಸಿಗಳನ್ನು ಸೆಳೆಯುತ್ತದೆ. ವಿಚಿತ್ರವೆಂದರೆ ಭಾರತದಿಂದ ಯುರೋಪು ಪ್ರವಾಸ ಕೈಗೊಳ್ಳುವ ಬಹುತೇಕ ಪ್ರವಾಸಿಗರು ಸ್ಪೇನ್ ಹೊರತು ಉಳಿದೆಲ್ಲವನ್ನೂ ನೋಡುತ್ತಾರೆ.
ಇದನ್ನೂ ಓದಿ: ವಿದೇಶದ ಹಿಮಾಲಯದಲ್ಲಿ ಜನಗಣಮನ ಕೇಳುವ ಖುಷಿ!
ಬಾರ್ಸಿಲೋನಾಗೆ ಬರುತ್ತಲೇ ನಾನು ಮೊದಲು ಭೇಟಿ ಕೊಟ್ಟದ್ದು ಪ್ಲಾಜಾ ಕತಲುನ್ಯ. ಈ ಚೌಕವನ್ನು ನೋಡಿದರೆ ಇಡೀ ಬಾರ್ಸಿಲೋನಾ ನಗರದ ಸೌಂದರ್ಯಕ್ಕೆ ಬರೆದ ಮುನ್ನುಡಿ ಎನ್ನುವಂತಿದೆ. ವಾರದ ಕೊನೆಯಲ್ಲೋ ಅಥವಾ ಸಮಯ ಸಿಕ್ಕಾಗಲೆಲ್ಲ ಇಲ್ಲಿಗೆ ಬರುವಾಗ ನನ್ನ ಮನಸು ಹಕ್ಕಿಯಾಗುತ್ತಿತ್ತು. ಮೊದಲು ಕಂಡಾಗ ಎಂಥ ಸೆಳೆತವಿತ್ತೋ ಈಗಲೂ ಅದೇ. ಸುಮಾರು 50,000 ಚದರ ಮೀಟರ್ ಜಾಗ ಆಕ್ರಮಿಸಿದೆ ಎಂದು ಅಂದಾಜು. ಚೈತನ್ಯ ಪುಟಿಯುವ ಜನರ ಲಗುಬಗೆಯ ಓಡಾಟ, ಪುಕ್ಕಟೆ ಮನೋರಂಜನೆ ಒಂದಲ್ಲ ಹತ್ತಾರು ರಸ್ತೆಯುದ್ದಕ್ಕೂ. ಒಂದು ಮೂಲೆಯಲ್ಲಿ ರಾಂಬ್ಲಾ(ಬಾರ್ಸಿಲೋನಾದ ಪ್ರಮುಖ ರಸ್ತೆ) ಪ್ರಾರಂಭವಾದರೆ ಸದಾ ಗಿಜಿಗುಟ್ಟುವ ಹಾರ್ಡ್ ರಾಕ್ ಕೆಫೆ ಇನ್ನೊಂದು ತುದಿಯಲ್ಲಿ.

ಮತ್ತೊಂದು ಬದಿಯಲ್ಲಿ ಎಲ್ ಕೊರ್ತೆ ಇಂಗ್ಲೆಸ್ ಎಂಬ ಡಿಪಾರ್ಟ್ ಮೆಂಟಲ್ ಸ್ಟೋರ್ ಇದೆ. ಅದು ಸೂಪರ್ ಮಾರ್ಕೆಟ್ ಅಲ್ಲ, ಅದರಪ್ಪ ಹೈಪರ್ ಮಾರ್ಕೆಟ್. ರೆಸ್ಟೋರೆಂಟುಗಳ ಸರಮಾಲೆಯೇ ಇದೆ. ಈ ಚೌಕದಲ್ಲೇ ವಿದೇಶಿಯರಿಗೆ ಮಾಹಿತಿ ನೀಡಲೆಂದು ಪ್ರವಾಸೋದ್ಯಮ ಇಲಾಖೆ ದೊಡ್ಡ ಮಾಹಿತಿ ಕೇಂದ್ರ ತೆರೆದಿದೆ. ಇಡೀ ಜಗತ್ತಿನ ಮ್ಯೂಸಿಯಂ ಇದೆಯೇನೋ ಎನ್ನುವ ವೈವಿಧ್ಯದ ಜಾಗ ಇದು. ಅಲ್ಲಿನ ನೆಲಹಾಸೇ ಚಿತ್ತಾಕರ್ಷಕ. ಎದುರಿನ ನೀರಿನ ಬುಗ್ಗೆಗಳನ್ನು ನೋಡುತ್ತ ಸಾಗುವಾಗಲೇ ಶಿಲ್ಪಗಳು ಕೈಬೀಸಿ ಕರೆಯುತ್ತವೆ. ಜೊಸೆಫ್ ಕ್ಲಾರಾ ನಿರ್ಮಿಸಿದ `ಲಾ ದಿವಿನಿದಾದ್' ಎಂಬ ಶಿಲ್ಪ, ಪಾಬ್ಲೋ ಗಾರ್ಗಲೋ ರಚಿಸಿದ `ಪಾಸ್ತರ್ ತೊಕ್ಯಾಂದೋ ಎಲ್ ಕರಮಿಲ್ಲೋ' ಯಾರ ಕಣ್ಣಿನಿಂದಲೂ ತಪ್ಪಿಸಿಕೊಳ್ಳಲಾರವು. ಇವು ನಗ್ನ ಪುರುಷ ಮತ್ತು ಸ್ತ್ರೀ ಶಿಲ್ಪಗಳು. ಈವರೆಗೆ ಐವತ್ತು ಬಾರಿಯಾದರೂ ನಾನು ಇಲ್ಲಿ ತಿರುಗಾಡಿದ್ದಿದೆ. ಪ್ರತಿಬಾರಿ ಹೆಜ್ಜೆ ಹಾಕುವಾಗಲೂ ನನಗೆ ಅದೇ ಬೆಚ್ಚನೆಯ ಅನುಭವ. ಇದೇ ರಸ್ತೆಯಲ್ಲಿ ಪಿಕಾಸೋ ಓಡಾಡಿದ್ದ, ಐನ್ ಸ್ಟೈನ್, ಜಾರ್ಜ್ ಆರ್ ವೆಲ್, ಗೇಬ್ರಿಯಲ್ ಗಾರ್ಸಿಯೋ ಮಾರ್ಕ್ವೆಜ್ ಎಂಥೆಂಥ ಖ್ಯಾತನಾಮರು ಓಡಾಡಿದ್ದಾರೆ. ನನ್ನ ಯಾವುದೋ ಒಂದು ಹೆಜ್ಜೆ ಅವರ ಹೆಜ್ಜೆಯ ಮೇಲೆ ಊರಿರಬಹುದೆ? ನೆನೆಯುವುದೇ ಒಂದು ಪುಳಕ.
ಈ ಚೌಕ ಸದಾ ಗಿಜಿಗುಡುತ್ತಿದ್ದರೂ ತಿನ್ನಲು, ಕುಡಿಯಲು ಬರವಿಲ್ಲ. ಯಾವ ಹಮ್ಮು-ಬಿಮ್ಮು ಸಂಕೋಚಗಳಿಲ್ಲದೆ ರಸ್ತೆ ಬದಿಯಲ್ಲೇ ಕೂತು ತಿನ್ನಬಹುದು. ಚೌಕದಲ್ಲೇ ಇಡೀ ನಗರದ ಸಾರಿಗೆ ಸಂಪರ್ಕ ಜಾಲವಿದೆ. ಎತ್ತ ನೋಡಿದರೂ ಚೂಪು ಕಟ್ಟಡಗಳು, ಆದರೆ ಕಲಾತ್ಮಕತೆ ಕಳೆದುಕೊಳ್ಳದ ಮೋಹಕಭಂಗಿಯ ಕಟ್ಟಡಗಳು. ಮಧ್ಯಕಾಲೀನ ಯುಗಕ್ಕೆ ಒಯ್ಯುವ ಸ್ಮಾರಕಗಳು. ಇಲ್ಲಿನ ಜನ ಪಾರಿವಾಳಗಳನ್ನು ತುಂಬ ಪ್ರೀತಿಸುತ್ತಾರೆ. ಕಟ್ಟಡಗಳ ಎತ್ತರದಲ್ಲಿ ಪಟಪಟ ರೆಕ್ಕೆ ಬಡಿಯುತ್ತಾ ಯಾವ ಸಂದೇಶವನ್ನು ಒಯ್ಯುತ್ತವೋ ಅರಿಯೆ. ಎಲ್ಲೆಂದರಲ್ಲಿ ಬೆಂಚು; ಹೆಣ್ಣು, ಗಂಡು, ಮಕ್ಕಳು, ಮುದುಕರು ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಜೀವನೋತ್ಸಾಹ ತೋರುವುದೇ ಒಂದು ರಮ್ಯ ನೋಟ. ಎಲ್ಲ ವಯಸ್ಸಿನ ಜನರಿಗೂ ಇದು ನಿತ್ಯ ಪ್ರವಾಸಿ ತಾಣ. ಬಾರ್ಸಿಲೋನಾದಲ್ಲಿ ಅತಿ ಹೆಚ್ಚು ಕ್ಯಾಮೆರಾ ಕ್ಲಿಕ್ಕಿಸುವ ಜಾಗ ಇದು. ಹತ್ತಿರದಲ್ಲೇ ಇದ್ದ ಅಂಗಡಿಯಿಂದ ನಾನೂ ಒಂದು ಪಾಪ್ ಕಾರ್ನ್ ಪೊಟ್ಟಣ ಕೊಂಡೆ. ನೂರಾರು ಕೈಗಳು ಅದೇ ಕೆಲಸ ಮಾಡುತ್ತವೆ, ಇಲ್ಲಿ ಪಾರಿವಾಳಗಳಿಗೆ ನಿತ್ಯ ಭೋಜನ. ಮೊದಮೊದಲು ಎಲ್ಲವನ್ನೂ ರುಪಾಯಿಗೆ ಪರಿವರ್ತಿಸಿ ಲೆಕ್ಕ ಹಾಕಿ ತಳಮಳ ಪಡುತ್ತಿದ್ದೆ. ಈಗ ಆ ಚಾಳಿ ನಿಲ್ಲಿಸಿದ್ದೇನೆ. ಆದರೆ ಪ್ರವಾಸಿಗರು ಬಂದಾಗ ಅವರ ಕೈ ಅಷ್ಟೇ ಉದಾರವಾಗಿ ಜೇಬಿಗೆ ಹೋಗುತ್ತದೆಂದು ನನಗನಿಸುವುದಿಲ್ಲ. ಏಕೆಂದರೆ, ರುಪಾಯಿ ಪರಿವರ್ತಿಸಿಕೊಂಡೇ ಯುರೋ ತಂದಿರುತ್ತಾರೆ. ಬಾರ್ಸಿಲೋನಾದ ಪ್ರಮುಖ ಆಕರ್ಷಣೆಗಳಲ್ಲೊಂದು ಲಾ ರಾಂಬ್ಲಾ. ನೀಟಾದ ರಸ್ತೆ, ಬೆಂಗಳೂರಿನವರಾದರೆ ಎಂ.ಜಿ.ರಸ್ತೆಗೆ ಹೋಲಿಸಬಹುದು. ಮೈಸೂರಿನವರು ಸಯ್ಯಾಜಿರಾವ್ ರಸ್ತೆಗೋ, ದೇವರಾಜ ಅರಸು ರಸ್ತೆಗೋ ಹೋಲಿಸಬಹುದು. ಜಗತ್ತಿನ ಎಲ್ಲ ಜನರನ್ನೂ ಇಲ್ಲಿ ಶೋಕೇಸ್ ಮಾಡಲಾಗಿದೆಯೋ ಎಂಬ ಭಾವನೆ ಥಟ್ಟನೆ ಮೂಡುತ್ತದೆ. ದಾರಿಹೋಕರು, ವ್ಯಾಪಾರಸ್ಥರು, ಸರ್ಕಾರಿ ನೌಕರರು, ಶ್ರೀಮಂತರು, ನಕಲಿ ಶಾಮಗಳು, ಪುಷ್ಪೋದ್ಯಮದವರು ಜೊತೆಗೆ ಪಿಕ್ ಪಾಕೆಟ್ ಮಾಡುವವರು. ರುಮೇನಿಯಾ ಮತ್ತು ಆಫ್ರಿಕಾದಿಂದ ಬಂದವರಲ್ಲಿ ಕೆಲವರು, ಇಲ್ಲಿ ಸುಲಭ ಗಳಿಕೆಗಾಗಿ ಕೈ ಚಳಕಕ್ಕೆ ಮೊರೆಹೋಗಿದ್ದಾರೆ. ಸುಮಾರು 1.2 ಕಿಲೋ ಮೀಟರು ಉದ್ದದ ರಸ್ತೆ ಅನ್ನಿ. ಇದರ ವಿಶೇಷವೆಂದರೆ ಪಾದಚಾರಿಗಳದ್ದೇ ರಾಜಮಾರ್ಗ. ಟ್ರಾಫಿಕ್ ಏನಿದ್ದರೂ ಎಡ, ಬಲ ಬದಿಯ ಸಾಧಾರಣ ಅಗಲದ ರಸ್ತೆಗಳಲ್ಲಿ. ಬಾರ್ಸಿಲೋನಾದ ಸಿಟಿ ಕೌನ್ಸಿಲ್ ಬೇಕೆಂದೇ ಈ ರಸ್ತೆಯನ್ನು ಪಾದಚಾರಿಗಳಿಗೆ ಮುಡಿಪಿಟ್ಟಿದೆ. ಜನ ನಿರ್ಭಯವಾಗಿ ಓಡಾಡುತ್ತಾರೆ.

ಲಾ ರಾಂಬ್ಲಾ ಒಂದು ಬಗೆಯ ಓಪನ್ ಥಿಯೇಟರ್ ಅನ್ನಬಹುದು. ಇಲ್ಲೊಂದು ಆಕರ್ಷಣೆ ಉಂಟು, ಬೀದಿ ಕಲಾವಿದರು ಬಹು ಹೊತ್ತು ಗರ ಬಡಿದವರಂತೆ ನಿಂತಲ್ಲೇ ನಿಂತಿರುತ್ತಾರೆ. ಮುಟ್ಟಿದಾಗಲೇ ಗೊತ್ತು ಪುತ್ಥಳಿಯಲ್ಲವೆಂದು. ನಾಣ್ಯ ಚಿಮ್ಮಿದಾಗಲೇ ಅಲುಗಾಡುವುದು. ಫೊಟೋ ತೆಗೆಯಲು ಹೊರಟರೆ ಮುಖ ಮುಚ್ಚಿಕೊಳ್ಳುತ್ತಾರೆ. ಕಾಸು ಕೊಟ್ಟಾಗಲಷ್ಟೇ ಪೋಸ್! ಆದರೆ ನಮ್ಮಲ್ಲಿನ ಭಿಕ್ಷುಕರಂತೆ ಅವರಲ್ಲ. ಅವರಿಗೆ ಯಾವ ಪ್ರತಿಭೆ ಇರಲಿ, ಅದನ್ನು ಕಿಂಚಿತ್ತು ಪ್ರದರ್ಶಿಸಿಯೇ ಬೇಡುತ್ತಾರೆ. ಅವರ ವೇಷ ಭೂಷಣಗಳನ್ನು ನಂಬಲಾರಿರಿ. ಅಮೃತಶಿಲಾ ವಿಗ್ರಹದಂತೆ ಅದೇ ಭಂಗಿಯಲ್ಲಿ ನಿಲ್ಲುವವರುಂಟು. ದೇವತೆಯ ಥರ, ಸ್ಪೇನಿನ ರಾಣಿಯ ವೇಷ ಧರಿಸಿದವರು, ಗುಹಾ ಮಾನವರಂತೆ ನಿಂತವರು. ಸ್ಪೇನಿನ ಅತ್ಯಂತ ಖ್ಯಾತಿಯ ಫುಟ್ಬಾಲ್ ಆಟಗಾರ ರೊನಾಲ್ಡಿನೋ ವೇಷವನ್ನು ಒಬ್ಬ ಬೀದಿ ಕಲಾವಿದ ಹಾಕಿದ್ದ; ಬಹುಶಃ ಇವನ ಸಂಭಾವನೆಯೇ ಅವನಿಗಿಂತ ಹೆಚ್ಚೇನೋ ಎಂದು ಕುಚೋದ್ಯವಾಡುವವರೂ ಉಂಟು. ಇಲ್ಲಿ ಪೊಲೀಸ್ ಪಡೆಗೇನೂ ಕೊರತೆಯಿಲ್ಲ. ಆದರೆ ಜೇಬುಗಳ್ಳರನ್ನು ಹತ್ತಿಕ್ಕಲು ಈ ಕುಶಲಮತಿಗಳಿಗೂ ಸಾಧ್ಯವಾಗಿಲ್ಲ. ಗಿಜಿಗುಟ್ಟುವ ರಸ್ತೆ, ಜನರನ್ನು ಭೇದಿಸಿಕೊಂಡು ಹೊರಬರುವ ಹೊತ್ತಿಗೆ ಜೇಬಿಗೇ ಸಂಚಕಾರ.
ಇಂಥ ಬ್ಯುಸಿ ರಸ್ತೆಗಳಲ್ಲಿ ಇನ್ನೊಂದು ಬಗೆಯ ಕಲಾವಿದರೂ ತಮ್ಮ ಕೈ ಚಳಕ ತೋರಿಸುತ್ತಾರೆ. ಅವರು ನಿಜವಾದ ಪೇಂಟರುಗಳು - ಕಲಾಕೃತಿ ರಚನೆಕಾರರು. ನಿಮ್ಮನ್ನು ಒಮ್ಮೆ ದಿಟ್ಟಿಸಿ ನಿಮಿಷಾರ್ಧದಲ್ಲಿ ನಿಮ್ಮ ಚಹರೆಯನ್ನು ಕುಂಚಿಸುತ್ತಾರೆ. ಇಂಥವರು ರಸ್ತೆಯಲ್ಲಿ ಧಾರಾಳವಾಗಿ ಅಲ್ಲಲ್ಲೇ ಎದುರಾಗುತ್ತಾರೆ, ನೂರಾರು ಮಂದಿ ಎಂದರೂ ಸರಿಯೇ. ಡಜನ್ನುಗಟ್ಟಲೇ ರೆಸ್ಟೋರೆಂಟುಗಳು ಇಲ್ಲುಂಟು. ರಸ್ತೆಯ ಜನಪ್ರಿಯತೆಯಿಂದಲೋ, ಅಧಿಕ ಸಂಖ್ಯೆಯ ಯಾತ್ರಿಕರ ಭೇಟಿಯಿಂದಲೋ ಅಂತೂ, ಈ ಭಾಗ ನಮ್ಮ ಎಂಜಿ ರಸ್ತೆ ಮೀರಿಸುವಷ್ಟು ದುಬಾರಿ. ವಿಶೇಷವೆಂದರೆ ಅನೇಕ ಅಂಗಡಿಗಳ ಮಾಲೀಕರು ನಮ್ಮ ಸಿಂಧಿಗಳೇ! ಸ್ವಲ್ಪ ಚಾಣಾಕ್ಷರಾಗಿದ್ದು, ನೀವು ಎರಡು ಶಬ್ದ ಹಿಂದಿಯಲ್ಲಿ ಉಚ್ಚರಿಸಿದರೂ ಸಾಕು, ರೇಟ್ ಇಳಿಸಬಹುದು. ಪಾಕಿಸ್ತಾನ, ಬಾಂಗ್ಲಾದಿಂದ ಬಂದಿರುವ ಬಹಳಷ್ಟು ಮಂದಿ ಇಲ್ಲಿ ನೆಲೆಸಿದ್ದಾರೆ. ಇಂಥ ಕಡೆ ಹಿಂದಿ ನಿಜವಾಗಲೂ `ಚಲ್ತಾ ಹೈ'. ದೂರ ದೂರ ಹೋದಷ್ಟೂ ಭಾರತದ ಯಾವ ಭಾಷಿಕರೇ ಆಗಲಿ ಹತ್ತಿರ ಹತ್ತಿರವಾಗುತ್ತಾರೆ. ಅಲ್ಲಲ್ಲೇ ಹಕ್ಕಿಗಳನ್ನು ಮಾರುವ ಪೆಟ್ ಅಂಗಡಿಗಳುಂಟು. ಇವನ್ನು ’ಕೀಯಾಸ್ಕ್’ ಎನ್ನುತ್ತಾರೆ. ಎಷ್ಟೋ ದಿನಗಳಿಂದ ಪರಿಚಿತರೇನೋ ಎಂದು ಭಾವನೆ ಬರಿಸುವ ಕಾಡುಹರಟೆ ಹೊಡೆಯುವ ವ್ಯಾಪಾರಿಗಳೂ ಉಂಟು. ತಾಜಾಹಣ್ಣು, ತರಕಾರಿ, ಮೀನು ಮಾರುಕಟ್ಟೆಗಳ ವ್ಯಾಪಾರದ ಗುಟ್ಟೂ ಇದೇ.

ಬಾರ್ಸಿಲೋನಾದಲ್ಲಿ ಧಾರಾಳವಾಗಿ ಕಾಫಿ ಬಾರ್, ರೆಸ್ಟೋರೆಂಟುಗಳುಂಟು. ಆದರೂ ಮನೆ ಊಟದ ರುಚಿ ಎಲ್ಲಿ ಬರಬೇಕು? ನನಗೆ ಈ ಆಯ್ಕೆ ಇತ್ತು. ನೂರಕ್ಕೆ ನೂರು ಪಾಲು ಸಸ್ಯಹಾರಿಗಳಾದವರಿಗೆ ಇಲ್ಲಂತೂ ಭಾರಿ ಫಜೀತಿ. ಇಲ್ಲಿ ಬೊಕಾತ್ತಾ ಎಂಬ ತಿನಿಸು ಜನಪ್ರಿಯ. ಚೀಸ್ ಬಳಿದ ಸ್ಯಾಂಡ್ ವಿಚ್. ಮಾಂಸಾಹಾರಿಗಳಾದರೆ ಅದರೊಳಗೆ `ಮೀಟ್' ತುಂಡುಗಳಿರುತ್ತದೆ. ಉಪ್ಪಿಟ್ಟು, ವಡೆ, ರೊಟ್ಟಿ ಸಂಸ್ಕೃತಿಯ ನನಗೆ ಚೀಸನ್ನು ಪ್ರೀತಿಸುವುದು ಹೇಗೆ ಸಾಧ್ಯ? ಏನೋ ವಾಕರಿಕೆ. ಪಾಕಿಸ್ತಾನೀಯರು ಬ್ರೌಸಿಂಗ್ ಸೆಂಟರ್ ಜೊತೆಗೆ ಹೊಟೇಲ್ ಉದ್ಯಮದಲ್ಲೂ ಇದ್ದಾರೆ. ಅದರಲ್ಲಿ ದೊರೆಯುವ ನಾರ್ತ್ ಇಂಡಿಯನ್ ಊಟ ದೇವರಿಗೇ ತಪ್ಪಿದರೆ ಇಂಡಿಯಾದ ಪ್ರವಾಸಿಗರಿಗೇ ಪ್ರೀತಿ! ಒಮ್ಮೊಮ್ಮೆ ಬದಲಾವಣೆಗೆಂದು ಹೊರಗಡೆ ಊಟ ಮಾಡುವುದುಂಟು. ಈ ಕೆಲಸವನ್ನು ಬೆಂಗಳೂರಲ್ಲಿದ್ದರೂ ಮಾಡುತ್ತಿದ್ದೆ. ಆದರೆ ಇಲ್ಲಿ ಏನು ತಿನ್ನಬೇಕೆನ್ನುವುದೇ ಸಮಸ್ಯೆ. ಊಟಕ್ಕೆ ಆರ್ಡರ್ ಕೊಡುವಾಗಲೂ ಮೂರು ಹಂತಗಳು. ಮೊದಲು ಸಲಾಡ್ ಮತ್ತು ಸೂಪ್, ಅನಂತರ ಮಾಂಸ ಅಥವಾ ಮೇನ್ ಕೋರ್ಸ್ ,ಐಸ್ ಕ್ರೀಮ್ ಕೊನೆಯದು, ಡೆಸರ್ಟ್ ಎನ್ನುವುದಕ್ಕೆ ಇಲ್ಲಿ ಪೋಸ್ತ್ರೆ ಎನ್ನುತ್ತೇವೆ. ಹಣ್ಣು, ಜ್ಯೂಸ್, ಐಸ್ ಕ್ರೀಮ್ ಇತ್ಯಾದಿ. ಆದರೆ ಡ್ರಿಂಕ್ಸಿಗೆ ಆರ್ಡರ್ ಮಾಡುವಾಗ ನನ್ನಂಥವರಿಗೆ ಇರಿಸುಮುರಿಸು. ಮದ್ಯ ಸೇವಿಸದವರಿಗೆ ಬೇರೆ ಆಯ್ಕೆ ಏನಿದೆ? ಮಿನರಲ್ ವಾಟರ್; ನಿಜ ಹೇಳಬೇಕೆಂದರೆ, ಇದಕ್ಕಿಂತಲೂ ಬಿಯರ್ ಇಲ್ಲಿ ಅಗ್ಗ!