ವಿದೇಶದ ಹಿಮಾಲಯದಲ್ಲಿ ಜನಗಣಮನ ಕೇಳುವ ಖುಷಿ!
ಆಲ್ಪ್ಸ್ ಪರ್ವತದಲ್ಲಿ ವಿನೂತನ ಅನುಭವ ಪಡೆಯಲು ಟಿಟ್ಲಿಸ್ ಗ್ಲೇಸಿಯರ್ ಪಾರ್ಕ್ ತಕ್ಕ ಸ್ಥಳ. ಸ್ನೋ ಟ್ಯೂಬುಗಳು, ಸ್ನೋ ಸ್ನೈಲುಗಳು, ಸ್ಕೂಟರುಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತ ಹಿಮದ ಮೇಲೆ ಚಲಿಸುವುದೇ ಮೋಜು. ಗ್ಲೇಸಿಯರ್ ಗ್ರೋಟ್ಟೊ ಒಂದು ಗುಹೆ. ಕಿರಿದಾದ ರಸ್ತೆ, ಕತ್ತಲು, ನಡೆಯುತ್ತಿರುವುದು ಹಿಮದ ಮೇಲೆ. ನಿಮ್ಮ ಸುತ್ತ ಆವರಿಸಿರುವ ಗೋಡೆಯಲ್ಲ, ಅದು ಹಿಮ. ಗುಹೆಯಲ್ಲಿ ಒಂದು ಕಡೆ ಸಣ್ಣದಾದ ಯಂತ್ರವೊಂದನ್ನು ಇರಿಸಿದ್ದಾರೆ. ಅಲ್ಲಿ ಹುಡುಕಿ, ನಿಮ್ಮ ದೇಶದ ರಾಷ್ಟ್ರೀಯ ಹಾಡು ಇದ್ದರೆ, `ಪ್ಲೇ’ ಎನ್ನುವ ಗುಂಡಿ ಒತ್ತಿದರೆ ಮುಗಿಯಿತು, ಮುಂದಿನ ನಿಮಿಷಗಳಲ್ಲಿ ನಿಮ್ಮ ರಾಷ್ಟ್ರೀಯ ಹಾಡು ಬಿತ್ತರಗೊಳ್ಳುತ್ತದೆ.
- ರಂಗಸ್ವಾಮಿ ಮೂಕನಹಳ್ಳಿ
ಆಲ್ಪ್ಸ್ ಬೆಟ್ಟಗಳಲ್ಲಿ ರಾಜನೆಂದು ಪ್ರಸಿದ್ಧಿ ಪಡೆದಿರುವುದು ಮೌಂಟ್ ಟಿಟ್ಲಿಸ್. ಕೇವಲ ವಿಮಾನದ ಮೂಲಕ ಈ ಬೆಳ್ಳಿಶಿಖರವನ್ನು ಹಲವು ಬಾರಿ ಕಂಡಿದ್ದೆ. ಅದನ್ನು ಸ್ಪರ್ಶಿಸುವ, ಅದರಲ್ಲಿ ಒಂದಾಗುವ ತವಕ. ಹಿಮ ಹಾಗೂ ಕೊರೆವ ಚಳಿ ಮನಸಿನ ಉತ್ಸಾಹಕ್ಕೆ ಬ್ರೇಕ್ ಹಾಕುತ್ತಿದ್ದವು. `ನಿತ್ಯ ಸಿಗುವುದೇ ಇಂಥ ಛಾನ್ಸ್’ ಎಂದು ಮನಸು ಬ್ರೇಕನ್ನು ಸಡಿಲಿಸಿ ಸಲೀಸಾಯಿತು. `ಬೆಸ್ಟ್ ಆಫ್ ಸ್ವಿಟ್ಜರ್ ಲ್ಯಾಂಡ್ ಟೂರ್ಸ್’ ನವರು ಜೂರಿಚ್ ಬಿಟ್ಟಾಗಲೇ ನಮ್ಮ ಕಾಲಳತೆ ಮತ್ತು ಜಾಕೇಟಿನ ಅಳತೆ ಪಡೆದುಹೋಗಿದ್ದರು. ಮೌಂಟ್ ಟಿಟ್ಲಿಸ್ಸಿನಲ್ಲಿ ಚಳಿ ಬಹಳವಿರುತ್ತದೆ ಹಾಗಾಗಿ ವಿಶೇಷ ಪಾದರಕ್ಷೆ ಹಾಗೂ ಜಾಕೇಟಿನ ಅವಶ್ಯಕತೆ ಇದೆ ಎಂದರು. ರಮ್ಯ, ಬಾರ್ಸಿಲೋನಾ ಬಿಡುವ ಮುಂಚೆ ಅಂತರ್ಜಾಲದಲ್ಲಿ ಜಾಲಾಡಿ, ಇಲ್ಲಿಯ ಹವೆಯ ಪೂರ್ಣ ಮಾಹಿತಿ ಕಲೆಹಾಕಿದ್ದಳು. ನಾವು ಪೂರ್ಣ ಸಿದ್ಧರಾಗಿದ್ದೇವೆ ಅಂತ ನಮ್ಮ ಊಹೆಯಾಗಿತ್ತಷ್ಟೇ. ನಮ್ಮ ಶೂಗಳಲ್ಲೇ ಏನಾದರೂ ಮೌಂಟ್ ಟಿಟ್ಲಿಸ್ ಹತ್ತಿದ್ದರೆ, ನಮ್ಮ ಕಾಲುಗಳನ್ನು ಕೈಗಳಲ್ಲಿ ಹಿಡಿದು ಹಿಂತಿರುಗಬೇಕಾಗಿತ್ತು. ಸದ್ಯ, ನಮ್ಮ ಟೂರ್ ಆಪರೇಟರ್ ನಮಗೆ ಒಳ್ಳೆಯ ಶೂಗಳನ್ನು ಕೊಟ್ಟರು. ಲೂಸೆರ್ನಿನಿಂದ ಅರ್ಧಮುಕ್ಕಾಲು ಗಂಟೆಯ ಪ್ರಯಾಣ ಮಾಡಿದರೆ ಸಿಗುವುದೇ ಏಂಜಲ್ ಬರ್ಗ್ ಎಂಬ ಹಳ್ಳಿ. ಇಲ್ಲಿಯೇ ಮೌಂಟ್ ಟಿಟ್ಲಿಸ್ಸನ್ನು ಹತ್ತಲು ಮೂಲ ಸ್ಥಳವಿರುವುದು.
ಇದನ್ನೂ ಓದಿ: ಸ್ವಿಟ್ಜರ್‌ಲ್ಯಾಂಡ್ ಮತ್ತು ಚಾಕೊಲೆಟ್ ಎಂಬ ಪ್ರವಾಸಿಮಿತ್ರ!
ಲೂಸೆರ್ನ್ ನಗರದಿಂದ ಮೌಂಟ್ ಟಿಟ್ಲಿಸ್ ಕಾಣುತ್ತಿತ್ತು; ಇಡೀ ಬೆಟ್ಟಕ್ಕೆ ಹಿಮದ ಚಾದರ ಹೊದಿಸಿದಂತೆ. 3,020 ಮೀ ಎತ್ತರವಿರುವ ಈ ಬೆಟ್ಟವನ್ನು ಹತ್ತಲು ಮೂರು ವಿಭಿನ್ನ ಕೇಬಲ್ ಕಾರುಗಳನ್ನು ಬಳಸಬೇಕಾಗುತ್ತದೆ. ಸ್ಕೀಯಿಂಗ್ ಸ್ವರ್ಗ, ಯುರೋಪಿನ ವಿವಿಧ ದೇಶಗಳಿಂದ ಕೇವಲ ಸ್ಕೀಯಿಂಗಿಗಾಗಿಯೇ ಸಾವಿರಾರು ಪ್ರವಾಸಿಗರು ಬಂದು ಜಮಾಯಿಸಿದ್ದರು. ಅವರೆಲ್ಲ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಯಾರ ಮುಖವೂ ಕಾಣುತ್ತಿರಲಿಲ್ಲ. ದೇಹದ ಒಂದಿಂಚು ಚರ್ಮವೂ ಗಾಳಿಗೆ ಸೋಕದಂತೆ ಕವಚಧಾರಿಗಳಾಗಿದ್ದರು. ಮೊದಲಿಗೆ, ನಾಲ್ಕರಿಂದ ಆರು ಜನ ಕುಳಿತುಕೊಳ್ಳಬಹುದಾದ ಕೇಬಲ್ ಕಾರಿನಲ್ಲಿ, 20 ನಿಮಿಷಗಳ ಪ್ರಯಾಣ. ಕೇಬಲ್ ಕಾರಿನಲ್ಲಿ ಕುಳಿತು ಎತ್ತ ತಿರುಗಿದರೂ ಹಿಮದ ಗಡ್ಡೆಯೇ. ಎಷ್ಟೋ ವರ್ಷಗಳಿಂದ ದೂರದಿಂದ ಕಂಡಿದ್ದ ಹಿಮದ ರಾಶಿಯಲ್ಲಿ ಕುಣಿದಾಡುವ ಸೌಭಾಗ್ಯ ಸಿಕ್ಕಿತೆಂದು ಬಹಳವೇ ಆನಂದವಾಯಿತು.

ಇಪ್ಪತ್ತು ನಿಮಿಷವೆನ್ನುವುದು ಇಪ್ಪತ್ತು ಸೆಕೆಂಡಿನಂತೆ ಕಳೆದೇಹೋಯಿತು. ನಂತರ ಮತ್ತೊಂದು ಕೇಬಲ್ ಕಾರಿನಲ್ಲಿ ಕುಳಿತುಕೊಳ್ಳಲು ಸ್ಥಳವಿರಲಿಲ್ಲ, ನಿಂತೇ ಪ್ರಯಾಣಿಸಬೇಕು. ಅದನ್ನು ಮುಗಿಸಿ, ಅಂತಿಮವಾಗಿ ನಾವು ಹತ್ತಿದ್ದ ಕೇಬಲ್ ಕಾರಿಗೆ ’ರೋಟೈರ್’ ಅನ್ನುತ್ತಾರೆ. ಇದರ ವಿಶೇಷವೇನೆಂದರೆ 360 ಡಿಗ್ರಿ ಸುತ್ತುತ್ತಾ ಇದೇ ಟಿಟ್ಲಿಸ್ಸಿನ ದರ್ಶನ ಮಾಡಿಸುತ್ತದೆ. ಈ ರೀತಿ ಸುತ್ತುವ ಕೇಬಲ್ ಕಾರ್ ವಿಶ್ವದಲ್ಲೇ ಪ್ರಥಮ ಬಾರಿಗೆ ಅಳವಡಿಸಿದವರು ಸ್ವಿಟ್ಜರ್ ಲ್ಯಾಂಡಿನವರು. ರೋಟೈರಿನಲ್ಲಿ ಕಳೆದ ಆ ಹದಿನೈದು ನಿಮಿಷಗಳ ನೆನಪು ಒಂದೇ ಸಾಕು. ಸರಾಸರಿ 45 ನಿಮಿಷಗಳನ್ನು ಮೂರು ವಿಭಿನ್ನ ಕೇಬಲ್ ಕಾರುಗಳಲ್ಲಿ ಪ್ರಯಾಣಿಸಿ, ನಾವು 3020 ಮೀಟರ್ ಮೇಲೆ, ಮೌಂಟ್ ಟಿಟ್ಲಿಸ್ಸಿನ ಪ್ರಕೃತಿಯಲ್ಲಿ ಮೈಮರೆತಿದ್ದೆವು. ನಮಗೆ ತಿಳಿಯದೆ ನಾವು ಹತ್ತು ವರ್ಷ ಚಿಕ್ಕವರಾಗಿದ್ದೆವು. ವಿಶೇಷ ರೀತಿಯ ಶೂ, ಗಾಳಿ ಒಂದಿಂಚೂ ಸೋಕದಂತೆ ಕವಚಗಳನ್ನು ಧರಿಸಿದ್ದರೂ, ಚಳಿಗೆ ದೇಹ ಕಂಪಿಸುತ್ತಿತ್ತು. -16.5 ಡಿಗ್ರಿ ಸೆಲ್ಶಿಯಸ್ ನಲ್ಲಿ. ಇಂಥ ಚಳಿ ರಮ್ಯ ಕಂಡಿರಲಿಲ್ಲ. ರಷ್ಯಾದಲ್ಲಿ -30 ರಲ್ಲಿ ಬದುಕಿದ್ದ ನಾನೂ ನಡುಗುತ್ತಿದ್ದೆ.
ಆಲ್ಪ್ಸ್ ಪರ್ವತದಲ್ಲಿ ವಿನೂತನ ಅನುಭವ ಪಡೆಯಲು ಟಿಟ್ಲಿಸ್ ಗ್ಲೇಸಿಯರ್ ಪಾರ್ಕ್ ತಕ್ಕ ಸ್ಥಳ. ಸ್ನೋ ಟ್ಯೂಬುಗಳು, ಸ್ನೋ ಸ್ನೈಲುಗಳು, ಸ್ಕೂಟರುಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತ ಹಿಮದ ಮೇಲೆ ಚಲಿಸುವುದೇ ಮೋಜು. ಕೇವಲ ಮೇ ತಿಂಗಳಿಂದ ಅಕ್ಟೋಬರಿನವರೆಗೆ ಮಾತ್ರ ಈ ಪಾರ್ಕಿಗೆ ಪ್ರವೇಶ. ಬೇಜಾರಾಗಲಿಲ್ಲ ಕಾರಣ ಗ್ಲೇಸಿಯರ್ ಗ್ರೋಟ್ಟೊ, ಐಸ್ ಪ್ಲೇಯರುಗಳಲ್ಲಿ ನಮ್ಮ ದೇಹ, ಮನಸ್ಸು ನಲಿದಾಡಿದವು. ಗ್ಲೇಸಿಯರ್ ಗ್ರೋಟ್ಟೊ ಒಂದು ಗುಹೆ. ಕಿರಿದಾದ ರಸ್ತೆ, ಕತ್ತಲು, ನಡೆಯುತ್ತಿರುವುದು ಹಿಮದ ಮೇಲೆ. ನಿಮ್ಮ ಸುತ್ತ ಆವರಿಸಿರುವ ಗೋಡೆಯಲ್ಲ, ಅದು ಹಿಮ. ನಿಮ್ಮ ನೆತ್ತಿಯ ಮೇಲಿನ ಸೂರು ಕೂಡ ಹಿಮವೇ. ಊಹಿಸಿಕೊಳ್ಳಿ ಅಕ್ಷರಶಃ ನೀವು ಹಿಮದ ಹೊಟ್ಟೆ ಹೊಕ್ಕಿದ್ದೀರಿ. ಅದೊಂದು ಅನನ್ಯ ಅನುಭವ. ಇಪ್ಪತ್ತು ಮೀಟರ್ ಆಳ ಹಾಗೂ ಸರಿಸುಮಾರು 150 ಮೀ. ಉದ್ದವಿರುವ ಒಂದು ಕೊಳವೆಯಂಥ ಗುಹೆ. ವಿಶೇಷವೆಂದರೆ ಹತ್ತಾರು ದೇಶದ ರಾಷ್ಟ್ರೀಯ ಹಾಡನ್ನು ಇಲ್ಲಿ ಕೇಳಬಹುದು. ಗುಹೆಯಲ್ಲಿ ಒಂದು ಕಡೆ ಸಣ್ಣದಾದ ಯಂತ್ರವೊಂದನ್ನು ಇರಿಸಿದ್ದಾರೆ. ಅಲ್ಲಿ ಹುಡುಕಿ, ನಿಮ್ಮ ದೇಶದ ರಾಷ್ಟ್ರೀಯ ಹಾಡು ಇದ್ದರೆ, `ಪ್ಲೇ’ ಎನ್ನುವ ಗುಂಡಿ ಒತ್ತಿದರೆ ಮುಗಿಯಿತು, ಮುಂದಿನ ನಿಮಿಷಗಳಲ್ಲಿ ನಿಮ್ಮ ರಾಷ್ಟ್ರೀಯ ಹಾಡು ಬಿತ್ತರಗೊಳ್ಳುತ್ತದೆ. ರಮ್ಯ ‘ಜನಗಣಮನ’ ಬಾಲಮುರಳಿ ಕೃಷ್ಣ ಹಾಗೂ ಲತಾ ಮಂಗೇಶ್ಕರ ಅವರಿಂದ ಹಾಡಿಸಿದಳು. ಗ್ಲೇಸಿಯರ್ ಗ್ರೋಟ್ಟೊನಿಂದ ಹೊರಬಂದೆವು. ಚಳಿಯಿಂದ ಮುಕ್ಕಾಲು ಪಾಲು ತಿಂದಿದ್ದ ತಿಂಡಿ ಭಸ್ಮವಾಗಿತ್ತು. ಟಿಟ್ಲಿಸ್ ನೆತ್ತಿಯ ಮೇಲೆ ಉಂಟು ಹೊಟೇಲ್. ಸರಿ ಕಾಫಿ, ಕರಿದ ಆಲೂಗೆಡ್ಡೆಯ ತುಂಡುಗಳನ್ನು ತೆಗೆದುಕೊಂಡೆವು. ನಂತರ ಶುರುವಾಯಿತು ಹುಡುಕಾಟ ನಮ್ಮ ಗೈಡಿಗಾಗಿ. ಏಕೆಂದರೆ ಆಕೆಯಿಂದ ಐಸ್ಪ್ಲೇಯರಿಗೆ ಹೋಗಲು ಟಿಕೆಟ್ ಪಡೆಯವುದು ಬಾಕಿಯಿತ್ತು. ದಕ್ಷಿಣ ಅಮೆರಿಕದ ದಂಪತಿ ಪ್ರವಾಸಿಗರೊಬ್ಬರು ಕಂಡರು. ಅವರು ನಮ್ಮ ಜತೆಯಲ್ಲೇ ಬಂದ ಸಹ ಪ್ರವಾಸಿಗರು. ನಮ್ಮ ಗೈಡ್ ಬಗ್ಗೆ ಅವರ ಬಳಿ ಕೇಳಿದಾಗ ಎರಡನೆಯ ಮಳಿಗೆಯಲ್ಲಿ ಊಟ ಮಾಡುತ್ತಿದ್ದಾಳೆ ಅಂದರು. ಐದು ಮಳಿಗೆಯ ಕಟ್ಟಡದಲ್ಲಿ ನಾನು ಐದನೆಯ ಮಳಿಗೆಯಲ್ಲಿದ್ದೆ. ನಮ್ಮ ಗೈಡನ್ನು ಸಂಧಿಸಿ, ಟಿಕೆಟ್ ಪಡೆದು ಐಸ್ ಪ್ಲೇಯರ್ ಕಡೆಗೆ ಓಡಿದೆವು.

ನಿಮಗೆ ನಿಜಕ್ಕೂ ಮೌಂಟ್ ಟಿಟ್ಲಿಸ್ಸಿನ ಶಿಖರಾಗ್ರದಲ್ಲಿ ಹಿಮದೊಂದಿಗೆ ಬೆರೆತುಹೋಗುವ ಆಸೆ ಇದ್ದರೆ, ರಕ್ತ ಮಾಂಸವನ್ನು ಭೇದಿಸಿ ಕೊರೆವ ಗಾಳಿ, ಚಳಿಯನ್ನು ತಡೆಯುವ ಶಕ್ತಿಯಿದ್ದರೆ, ನಡುರಸ್ತೆಯಲ್ಲಿ ಒಂಟಿ ಎಂಬ ಭಯವಾಗದಿದ್ದರೆ, ಮುಖ್ಯವಾಗಿ ಎತ್ತರ ನಿಮಗೆ ತಲೆ ಸುತ್ತು ತರುವುದಿಲ್ಲ ಎಂಬ ಧೈರ್ಯವಿದ್ದರೆ ಐಸ್ಪ್ಲೈಯರ್ ಹತ್ತಿ. ಇಷ್ಟೆಲ್ಲಾ ಇಲ್ಲದಿದ್ದರೂ ಹತ್ತಿ! `ರಿಸ್ಕ್’ ತೆಗೆದುಕೊಳ್ಳುವುದರಲ್ಲೂ ಒಂದು ಬಗೆಯ ಆನಂದ; ಜೀವಕ್ಕೆ ಮುಳುವಾಗಬಾರದು ಅಷ್ಟೇ. ಇಬ್ಬರು ಅಥವಾ ನಾಲ್ಕು ಜನ ಕೂರಬಹುದಾದ ಒಂದು ರೀತಿಯ ಕುರ್ಚಿ, ನೀವು ಕುಳಿತಾಕ್ಷಣ ನಿಮ್ಮ ದೇಹವನ್ನು ಬಂಧಿಸಿ, ನಿಮ್ಮ ಕಾಲುಗಳ ಮಧ್ಯೆ ಕ್ಲಿಕ್ ಎಂದು ಲಾಕ್ ಆಗುತ್ತದೆ ಸುರಕ್ಷತೆಗಾಗಿ. ಹತ್ತು ನಿಮಿಷಗಳಲ್ಲಿ ನಿಮ್ಮನ್ನು ಬೆಟ್ಟದ ಇನ್ನೊಂದು ಅಂಚಿಗೆ ಕರೆದು ತಂದುಬಿಡುತ್ತದೆ. ನಿಮಗೆ ದಣಿವಾಗುವಷ್ಟು ನಲಿದಾಡಿ, ಮರುಯಾತ್ರೆ ನಿಮ್ಮನು ಎಲ್ಲಿಂದ ಹೊರಟಿರೋ ಅಲ್ಲಿಗೆ ತಂದುಬಿಡುತ್ತದೆ. ನಮ್ಮ ಹಣೆಯ ಕೆಳಭಾಗ, ಮೂಗು, ಬಾಯಿಯನ್ನು ಮಾತ್ರ ಮುಚ್ಚಿರಲಿಲ್ಲ. ಪ್ರಯಾಣದ ನಂತರ, ತೆರೆದ ಆ ಭಾಗಗಳು ಬೆಂಕಿಯಿಂದ ಸುಟ್ಟಂಥ ಅನುಭವವಾಗುತ್ತಿತ್ತು. ನನಗೆ ಒಂದೆರಡು ದಿನದಲ್ಲಿ ಸೀಳಿದ ಚರ್ಮ ಸರಿ ಹೋಯಿತು. ಆದರೆ ರಮ್ಯಳಿಗೆ ಒಂದು ವಾರದವರೆಗೂ ಕ್ರೀಂ ಹಚ್ಚುವಂತಾಯಿತು.
ಮೌಂಟ್ ಟಿಟ್ಲಿಸ್ ಶಿಖರದ ನೆತ್ತಿಯ ಮೇಲೆ ಕನ್ನಡಿಗರ ಸಂಖ್ಯೆ ಬಹಳವೇ ಇತ್ತು. ನಾಲ್ಕಾರು ತರುಣ-ತರುಣಿಯರ ಗುಂಪು, ಹಿಮ ಎರಚಾಡುತ್ತ ಕನ್ನಡದಲ್ಲಿ ಹುಸಿ ಕಿತ್ತಾಟದಲ್ಲಿ ತೊಡಗಿದ್ದು ನೋಡಲು-ಕೇಳಲು ಚೆನ್ನಾಗಿತ್ತು. ಎಂಟು-ಹತ್ತು ಹುಡುಗರ ಗುಂಪು ಕೂಡ ಸಿಕ್ಕಿತು. ಎಲ್ಲಾ ಜರ್ಮನಿಯಿಂದ ಬಂದವರು. ದಾಮೋದರ ಎಂಬ ಹುಡುಗನನ್ನು ಮಾತನಾಡಿಸಿದ್ದರಿಂದ ಇದು ತಿಳಿಯಿತು. ಅನೇಕ ಕನ್ನಡದ ಜೋಡಿಹಕ್ಕಿಗಳು ಕನ್ನಡದಲ್ಲಿ ಸಂಭಾಷಿಸುತ್ತ ವಿಹರಿಸುತ್ತಿದ್ದರು. `ಭಾಳ ದೂರ ಇಲ್ರಿ ಅಪ್ಪಾ, ಹತ್ರಾನೆ ಅದಾ’ ಧಾರವಾಡದ ಕನ್ನಡದ ಕಂಪು ಕೂಡ ಮೌಂಟ್ ಟಿಟ್ಲಿಸ್ಸಿನ ಮಂಜಿನಲ್ಲಿ ಸೇರಿ ತನ್ನದೇ ಆದ ಹೊಸ ಭಾಷೆ ಬರೆಯುತ್ತಿತ್ತು, ಹತ್ತಿರದಲ್ಲಿ ಕುಣಿದಾಡುತ್ತಿದ್ದ ಕನ್ನಡಿತಿಯೊಬ್ಬಳನ್ನು ನಮ್ಮ ಫೊಟೊ ತೆಗೆಯಲು ವಿನಂತಿಸಿದೆ. `ಕನ್ನಡಿಗರಾ, ಹಾಗಾದ್ರೆ ತೆಗೆಯುತ್ತೇನೆ’ ಅಂದು ನಕ್ಕು ನಮ್ಮ ಫೊಟೊ ತೆಗೆದಳು. ನಮ್ಮ ಪ್ರಯಾಣ ಜ್ಯೂರಿಚ್ ಕಡೆಗೆ ಸಾಗಿತ್ತು. ದಾರಿ ಸವೆಸಲು ನಮ್ಮ ಗೈಡ್ ತನ್ನ ದೇಶದ ಬಗೆಗಿನ ಕೆಲವು ಅಚ್ಚರಿ ಪಡಿಸುವಂಥ ವಿಷಯಗಳನ್ನು ನಮಗೆ ಅರುಹಿದಳು. ಕೆಲವಂತೂ ಈಗಲೂ ಆ ದೇಶದ ಬಗ್ಗೆ ಕರುಬುವಂತೆ ಮಾಡಿವೆ. ಮನದಲ್ಲೇ ಅದುಮಿಟ್ಟುಕೊಂಡೆ; ಒಡಲನ್ನು ಸುಡದಿರಲಿ ಎಂದು.

ಸ್ವಿಸ್ಸಿನಲ್ಲಿ ಆಯಾ ವಯೋಮಾನಕ್ಕೆ ತಕ್ಕಂತೆ ಮಿಲಿಟರಿ ತರಬೇತಿ ಕಡ್ಡಾಯ. 21ರ ಹರೆಯದಿಂದ 50ರ ಮಧ್ಯ ವಯಸ್ಸಿನವರವರೆಗೆ ಬೇರೆ ಬೇರೆ ತರಬೇತಿ ಇರುತ್ತದೆ. ಸ್ವಿಸ್ ಸರ್ಕಾರ ತನ್ನ ದೇಶದ ಸಮಸ್ತ ಜನರನ್ನು ಕೇವಲ 12 ಗಂಟೆಗಳ ಅವಧಿಯಲ್ಲಿ ಯುದ್ಧಕ್ಕೆ ಸಿದ್ಧಮಾಡುವ ಶಕ್ತಿ ಹೊಂದಿರುವುದಾಗಿ ಇಡೀ ಜಗತ್ತಿಗೆ ಹೇಳುತ್ತಿದೆ. ಅದು ಕೇವಲ ಬಡಾಯಿ ಅಲ್ಲ, ಮೊದಲನೆಯ ಜಾಗತಿಕ ಯುದ್ಧದ ಸಮಯದಲ್ಲಿ ಫ್ರಾನ್ಸ್ ಹಾಗೂ ಜರ್ಮನಿ, ಸ್ವಿಟ್ಜರ್ ಲ್ಯಾಂಡನ್ನು ಆಕ್ರಮಿಸಲು ಹವಣಿಸುತ್ತಿದ್ದವು. ಎರಡನೆಯ ಜಾಗತಿಕ ಯುದ್ಧದಲ್ಲಿ ಹಿಟ್ಲರ್ ಸ್ವಿಟ್ಜರ್ ಲ್ಯಾಂಡಿನಲ್ಲಿ ಹೇರಳವಾಗಿ ಶೇಖರವಾಗಿದ್ದ ಬಂಗಾರವನ್ನು ದೋಚಲು ಹಾಗೂ ತನ್ನ ಸೈನ್ಯವನ್ನು ಮೆಡಿಟರೇನಿಯನ್ ಕಡೆ ಸಾಗಿಸಲು ಸ್ವಿಟ್ಜರ್ ಲ್ಯಾಂಡನ್ನು ಕಾಲು ದಾರಿಯಂತೆ ಬಳಸಲು (ಹಾದು ಹೋಗಲು) ಬಯಸಿದ. ಸ್ವಿಟ್ಜರ್ ಲ್ಯಾಂಡಿನ ಪೂರ್ಣ ಸನ್ನದ್ಧ, ಸಶಸ್ತ್ರ ನಾಗರಿಕರನ್ನು ಕಂಡು ತನ್ನ ಬೇಳೆ ಇವರ ಮುಂದೆ ಬೇಯದೆಂದು ಬಾಯಿ ಮುಚ್ಚಬೇಕಾಯಿತು. ಮೊದಲನೆಯ ಹಾಗೂ ಎರಡನೆಯ ಜಾಗತಿಕ ಯುದ್ಧದಲ್ಲಿ ಇಡೀ ವಿಶ್ವವೇ ಒಂದಲ್ಲ ಒಂದು ರೀತಿಯಲ್ಲಿ ಅಶಾಂತಿಯಲ್ಲಿ ಮುಳುಗಿದ್ದರೆ, ಸ್ವಿಟ್ಜರ್ ಲ್ಯಾಂಡ್ ಮಾತ್ರ ಸುರಕ್ಷಿತ ಹಾಗೂ ಶಾಂತಿಯಿಂದ ಜೀವನ ನಡೆಸಿತ್ತು.