Thursday, April 2, 2026
Thursday, April 2, 2026

ಮಾರಿಕಾಂಬೆಯ ಜಾತ್ರೆಯಲ್ಲೆ ಮತ್ತೆ ಮಗುವಾಗಿದ್ದೆ

ಮಾರಿಕಾಂಬೆ ದೇವಿಯ ಗದ್ದುಗೆಯ ಹತ್ತಿರ ಹೋಗುತ್ತಿದ್ದಂತೆ ಮೊದಲು ಕಾಣಿಸಿದ್ದೇ ಮಾರಿಕಾಂಬೆಯ ಸುಂದರವಾದ ಬಲಗಣ್ಣು. ಅವಳ ಈ ಕಣ್ಣು ಅವೆಷ್ಟು ಹೆಂಗಳೆಯರ ಕಣ್ಣೀರನ್ನು ತನ್ನದಾಗಿಸಿಕೊಂಡಿರಬೇಡ; ನನ್ನೆಲ್ಲ ನೋವುಗಳನ್ನು ನಿನ್ನವೆಂದುಕೊಂಡು ದೂರಮಾಡು ಎನ್ನುವ ಅವೆಷ್ಟು ನಿಶ್ಶಬ್ದ ಪ್ರಾರ್ಥನೆಗಳು ಆ ಕಣ್ಣುಗಳಿಂದ ಈ ಕಣ್ಣಿಗೆ ವರ್ಗಾವಣೆಯಾಗಿವೆಯೋ! ಆಕೆ ಕೇವಲ ಶಕ್ತಿಯಷ್ಟೇ ಅಲ್ಲ; ನೊಂದವರ ಪಾಲಿನ ಸಂಗಾತಿಯೂ ಹೌದು!

  • ಅಂಜನಾ ಹೆಗಡೆ

ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ಯಾರಿಗೆ ಪ್ರೀತಿಯಿಲ್ಲ ಹೇಳಿ! ಊರನ್ನು ಬಿಟ್ಟುಬಂದರೂ ಅಲ್ಲಿ ಅನುಭವಿಸಿದ ಕಷ್ಟ-ಸುಖಗಳ ನೆನಪುಗಳು ಸದಾ ಜೀವಂತವಾಗಿರುತ್ತವೆ. ಹಬ್ಬ-ಹರಿದಿನ, ಜಾತ್ರೆ-ತೇರುಗಳ ವಿಷಯದಲ್ಲಂತೂ ನಮ್ಮೂರೇ ನಮಗೆ ಚೆಂದ. ಮತ್ತೆಮತ್ತೆ ಬಾಲ್ಯಕ್ಕೆ ಮರಳುವಂತಿದ್ದರೆ ಜಾತ್ರೆಯಲ್ಲಿ ತಿರುಗಾಡಿ ಆಟಿಕೆ, ಬಳೆ-ಕ್ಲಿಪ್ಪುಗಳನ್ನು ಖರೀದಿಸುವ ಅವಕಾಶವನ್ನು ಯಾರೂ ತಪ್ಪಿಸಿಕೊಳ್ಳುವುದಿಲ್ಲ. ಬಾಲ್ಯ ಮತ್ತೆ ಸಿಗುವುದಿಲ್ಲ. ಆದರೆ, ಬಾಲ್ಯದ ನೆನಪುಗಳನ್ನಾದರೂ ನವೀಕರಿಸಿಕೊಳ್ಳಬಹುದು. ಈ ಹಂಬಲದಲ್ಲಿ ಜಾತ್ರೆ ಸುತ್ತುವ ನನ್ನಂಥವರು ಕಡಿಮೆಯೇನಿಲ್ಲ. ಬಾಲ್ಯದ ನೆನಪುಗಳ ಜತೆಗೆ ಬದುಕು ಕಟ್ಟಿಕೊಳ್ಳುವ ಹೋರಾಟಕ್ಕೆ ಶಕ್ತಿ ತುಂಬುವ ಶಿರಸಿಯ ಅಧಿದೇವತೆ ಮಾರಿಕಾಂಬೆಯ ಜಾತ್ರೆಯೆಂದರೆ ಅದು ನನಗೆ ಬದುಕಿನ ಎಲ್ಲಾ ನೋವು-ನಲಿವುಗಳೊಂದಿಗೆ ಮುಖಾಮುಖಿಯಾಗುವ ಸುಸಂದರ್ಭ.

ಇದನ್ನೂ ಓದಿ: ರೇಣುಕಾ ದೇವಿ ನೆಲೆಸಿರುವ ರಮಣೀಯ ಕ್ಷೇತ್ರ-ಚಂದ್ರಗುತ್ತಿ

ನಮ್ಮಲ್ಲಂತೂ ಜಾತ್ರೆಯ ದಿನಾಂಕ ಘೋಷಣೆಯಾದ ದಿನದಿಂದಲೇ ಜಾತ್ರೆಯ ಸಡಗರ ಆರಂಭವಾಗುತ್ತದೆ. ಕೇವಲ ಶಿರಸಿಯಷ್ಟೇ ಅಲ್ಲದೆ ಆಸುಪಾಸಿನ ತಾಲೂಕು, ಜಿಲ್ಲೆಯವರೂ ಈ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಆ ಸಮಯದಲ್ಲಿ ಯಾರೇ ಮೆಸೇಜ್‌, ಕಾಲ್‌ ಮಾಡಿದರೂ ಕೇಳುವ ಮೊದಲ ಪ್ರಶ್ನೆ ಜಾತ್ರೆಗೆ ಸಂಬಂಧಪಟ್ಟಿದ್ದೇ ಆಗಿರುತ್ತದೆ.

New Project (19)

ನಾವು ಶಿರಸಿಗೆ ಹೋಗುವ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಜಾತ್ರೆಯ ಫೊಟೋ-ವಿಡಿಯೋಗಳು ಹರಿದಾಡುತ್ತಿದ್ದವು. ಹಾಗಾಗಿ ಈ ವರ್ಷದ ಜಾತ್ರೆಯ ಜನದಟ್ಟಣೆಯ ಕಲ್ಪನೆ ನಮಗಿತ್ತು. ದೇವಿಯ ದರ್ಶನಕ್ಕೆ ಹಿಡಿಯಬಹುದಾದ ಸಮಯದ ಅಂದಾಜು ಮಾಡಿಕೊಂಡೇ ಜಾತ್ರೆಯ ಆವರಣ ಪ್ರವೇಶಿಸಿದೆವು. ನೂರಾರು ಜನರ ನಡುವೆಯೇ ದೇವಿಯ ದರ್ಶನವಾಯಿತು. ಗಂಡು-ಹೆಣ್ಣು-ಮಕ್ಕಳು-ವೃದ್ಧರು ಸೇರಿ ವಿವಿಧ ಮನಸ್ಥಿತಿಯ ಜನರು ಅಲ್ಲಿರುತ್ತಾರೆ.

ಗದ್ದುಗೆಯ ಹತ್ತಿರ ಹೋಗುತ್ತಿದ್ದಂತೆ ಮೊದಲು ಕಾಣಿಸಿದ್ದೇ ಮಾರಿಕಾಂಬೆಯ ಸುಂದರವಾದ ಬಲಗಣ್ಣು. ಅವಳ ಈ ಕಣ್ಣು ಅವೆಷ್ಟು ಹೆಂಗಳೆಯರ ಕಣ್ಣೀರನ್ನು ತನ್ನದಾಗಿಸಿಕೊಂಡಿರಬೇಡ; ನನ್ನೆಲ್ಲ ನೋವುಗಳನ್ನು ನಿನ್ನವೆಂದುಕೊಂಡು ದೂರಮಾಡು ಎನ್ನುವ ಅವೆಷ್ಟು ನಿಶ್ಶಬ್ದ ಪ್ರಾರ್ಥನೆಗಳು ಆ ಕಣ್ಣುಗಳಿಂದ ಈ ಕಣ್ಣಿಗೆ ವರ್ಗಾವಣೆಯಾಗಿವೆಯೋ! ಆಕೆ ಕೇವಲ ಶಕ್ತಿಯಷ್ಟೇ ಅಲ್ಲ; ಸಂಗಾತಿಯೂ ಹೌದು!

New Project (18)

ದೇವಿಯ ದರ್ಶನ ಮುಗಿಸಿ ಹೊರಗೆ ನಡೆದು ತಲುಪಿದ್ದು ಬಳೆ ಅಂಗಡಿಯ ಸಾಲುಗಳಿಗೆ. ಬಂಗಾರದ ಬಣ್ಣದ ಬಳೆಗಳನ್ನು ಕೈಯಲ್ಲಿ ಹಿಡಿದು, ಎಷ್ಟು ಸುಂದರವಾಗಿದೆಯಲ್ಲ ಈ ಬಣ್ಣ ಎಂದು ಯೋಚಿಸುತ್ತಿರುವಾಗಲೇ ಇಬ್ಬರು ಪ್ರಾಯದ ಹೆಣ್ಣುಮಕ್ಕಳ ಮಾತುಕತೆ ಕಿವಿಗೆ ಬಿತ್ತು. ಸಾರಾಂಶ ಇಷ್ಟೇ, ಅವರಲ್ಲಿ ಒಬ್ಬಳು ಸ್ವಲ್ಪ ದಿನಗಳ ಹಿಂದಷ್ಟೇ ಇದೇ ಡಿಸೈನಿನ ಬಳೆಗಳಿಗೆ ಡಜನ್ನಿಗೆ ಐವತ್ತು ರುಪಾಯಿ ಜಾಸ್ತಿ ಕೊಟ್ಟು ಅಂಗಡಿಯಲ್ಲಿ ಖರೀದಿಸಿದ್ದಳಂತೆ. ಅವಳ ದುಃಖ ಕೊಂಚ ಹಂಚಿಕೊಳ್ಳೋಣವೆಂದು ನಾನು ʻಅಯ್ಯೋ ಹೌದಾ? ಅಂಗಡಿಯಲ್ಲೇ ಜಾಸ್ತಿ ರೇಟಾ?ʼ ಎಂದೆ. ಅವಳ ಮುಖ ಮತ್ತಷ್ಟು ಸಣ್ಣದಾಗಿ ʻಏನ್ ಮಾಡೋದು? ಹದಿನಾರು ಕಲರ್ಸ್, ಎಲ್ಲ ಒಂದೊಂದು ಡಜನ್ ತಗೊಂಡಿದ್ದೆʼ ಅಂದಳು. ಅವಳ ದುಃಖ ಕಡಿಮೆ ಮಾಡಲಿಕ್ಕೆ ಹೋಗಿ ಜಾಸ್ತಿ ಮಾಡಿದಂತಾಯಿತು. ಅವಳ ಆ ಖರೀದಿ ಜಾತ್ರೆಯವರೆಗೂ ಕೊಂಚ ಮುಂದೂಡಿದ್ದರೆ ಅದೇ ದುಡ್ಡಿನಲ್ಲಿ ಜಾತ್ರೆಪೇಟೆಯ ಎಷ್ಟು ಡಜನ್ ಬಳೆಗಳನ್ನು ಖರೀದಿಸಬಹುದಿತ್ತು ಎಂದು ಮನಸಲ್ಲೇ ಲೆಕ್ಕ ಹಾಕುತ್ತ ಹೊರಗೆ ಬಂದೆ. ನನ್ನ ಕೈಯಲ್ಲಿ ಹತ್ತು ಡಜನ್ ಬಳೆಗಳ ಬಾಕ್ಸ್ ಇತ್ತು; ಚಿಕ್ಕವಳಿದ್ದಾಗ ಅಪ್ಪ ಕೊಡಿಸುತ್ತಿದ್ದ ಜಾತ್ರೆಯ ಸ್ಪೆಷಲ್ ಸ್ವೀಟ್ 'ಬೆಂಡು' ಕೂಡ!

ಇದನ್ನೂ ಓದಿ: ಸ್ಯಾನಿಟರಿ ಪ್ಯಾಡ್ ಅರ್ಪಿಸಿದರೆ ಪ್ರೀತಳಾಗುತ್ತಾಳೆ ಭೋಪಾಲ್‌ನ ಈ ದೇವಿ..

ದಾರಿ ಹೇಗೆ?

ಮಾರಿಕಾಂಬಾ ದೇವಿಯ ದೇವಾಲಯವು ಶಿರಸಿಯ ಹೃದಯ ಭಾಗದಲ್ಲಿದೆ. ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣ. ಇದು ಶಿರಸಿಯಿಂದ 110 ಕಿಮೀ ದೂರದಲ್ಲಿದೆ. ತಾಳಗುಪ್ಪ, ಕುಮಟ, ಹಾವೇರಿ ರೈಲು ನಿಲ್ದಾಣಗಳು ಹತ್ತಿರದ ರೈಲು ನಿಲ್ದಾಣಗಳು. ರಾಜ್ಯದ ವಿವಿಧೆಡೆಯಿಂದ ಶಿರಸಿಗೆ ನೇರ ಬಸ್ ವ್ಯವಸ್ಥೆಯೂ ಇದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..